ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೆಕಾಫ್ ಓದುವುದು ಅಂದರೆ ದೇವರು ನನಗಾಗಿ ಹಾಡುತ್ತಿರುವಂತೆ…

anton-2

-ಅಂತರ್ಮುಖಿ

‘ಚೆಕಾಫ್ ನ ಕಥೆಗಳನ್ನು ಓದುವುದು ಅಂದರೆ ದೇವರು ನನಗಾಗಿ ಹಾಡುತ್ತಿರುವಂತೆ.’ ಈ ಮಾತು ಹೇಳಿದ್ದು ಎಡುರಾ ವೆಲ್ಟಿ ಎಂಬ ಅಮೆರಿಕನ್ ಲೇಖಕಿ. ಚೆಕಾಫ್ ಸತ್ತು ಎಂಟು ದಶಕಗಳ ನಂತರ ವ್ಯಕ್ತವಾದ ಅಭಿಪ್ರಾಯವಿದು. 1987ರಲ್ಲಿ ಪ್ರಸಿದ್ಧಿಯಲ್ಲಿದ್ದ ಕಥೆಗಾರರನ್ನು kelalaagittu. ನಿಮ್ಮ ಮೇಲೆ ಪ್ರಭಾವ ಬೀರುವ ಕಥೆಗಾರ ಯಾರು? 25 ಕಥೆಗಾರರಲ್ಲಿ 10 ಮಂದಿ ಚೆಕಾಫ್ ಎಂದಿದ್ದರು.

ಚೆಕಾಫ್ ಕಥೆ ಹೇಳುತ್ತಿದ್ದುದೇ ಹಾಗೆ. ಅವನ ಕಥೆಗಳಲ್ಲಿ ಬಚ್ಚಿಟ್ಟಿದ್ದು ಬಹಳ , ಹೇಳಿದ್ದು ಸ್ವಲ್ಪ. ಆ ಬಚ್ಚಿಟ್ಟು ಹೇಳುವ ಕಲೆ ಚೆಕಾಫ್ ನಿಗೆ ಮಾತ್ರ ಇತ್ತು ಎನ್ನುವುದೇ ಈ ಕಥೆಗಾರರ ಅಭಿಪ್ರಾಯ. ನಗೆ, ವ್ಯಂಗ್ಯ, ಮರೆಯಲ್ಲಿ ಬಚ್ಚಿಟ್ಟು ಹೇಳುತ್ತಲೇ ಬಿಚ್ಚಿಟ್ಟ ಅಸಂಖ್ಯ ಸಂಗತಿಗಳು ಇವತ್ತೂ ಚೆಕಾಫ್ನನ್ನು ‘ಆಧುನಿಕ ಸಣ್ಣಕಥೆಗಳ ಜನಕ’ ಎಂದು ಗೌರವಿಸುವಂತೆ ಮಾಡಿವೆ.

ರಷ್ಯನ್ ಕುಟುಂಬವೊಂದರಲ್ಲಿ ಜನಿಸಿದ (1860, ಜನವರಿ 26) ಚೆಕಾಫ್ಗೆ ಕಥೆಯ ಗೀಳು ಹತ್ತಿದ್ದು ತಾಯಿಯಿಂದ. ಆಕೆಯ ತಂದೆ ಬಟ್ಟೆ ವ್ಯಾಪಾರಿ. ಆತ ರಷ್ಯಾದ ಮೂಲೆ ಮೂಲೆ ತಿರುಗಿ ಬಂದಿದ್ದ. ಆತ ಹೇಳಿದ ಅನುಭವಗಳನ್ನೆಲ್ಲಾ ತಾಯಿ ಚೆಕಾಫ್ಗೆ ರೋಚಕ ಕಥೆಗಳನ್ನಾಗಿ ನಿರೂಪಿಸುತ್ತಿದ್ದಳು. ಈ ಕಥೆಗಳೇ ಚೆಕಾಫ್ ಒಳಗೊಬ್ಬ ಕಥೆಗಾರನನ್ನು ಹುಟ್ಟಿಸಿದ್ದು. ಆದರೆ ಬದುಕು ಹೀಗೇ ಇರಬೇಕಲ್ಲ. ಚೆಕಾಫ್ 17ನೇ ವಯಸ್ಸಿನಲ್ಲಿದ್ದಾಗ ಅಪ್ಪ ದಿವಾಳಿಯಾದ. ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಜೈಲುಪಾಲಾಗುವ ಭಯದಿಂದ ಚೆಕಾಫ್ನ ತಂದೆ ಕುಟುಂಬದೊಂದಿಗೆ ಮಾಸ್ಕೋಗೆ ಬಂದ. ಅಲ್ಲೇ ಅವರು ಹೊಸ ಬದುಕು ಕಂಡುಕೊಳ್ಳುವ ಯತ್ನ ಆರಂಭಿಸಿದರು.

ಚೆಕಾಫ್ಗೆ ಇಬ್ಬರು ಅಣ್ಣಂದಿರು- ಅಲೆಕ್ಸಾಂಡರ್ ಮತ್ತು ನಿಕೋಯಾಲ್. ಇಬ್ಬರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಮನೆಯಲ್ಲಿ ಬಡತನ. ಚೆಕಾಫ್ ತನ್ನ ಓದಿಗೆ ತಾನೇ ದುಡಿದು ತರಬೇಕಾಯಿತು. ಇದೇ ಅವನು ಬರವಣಿಗೆಗೆ ನಾಂದಿ ಹಾಡಿದ ಘಟ್ಟ.

ಪತ್ರಿಕೆಗಳಿಗೆ ಚೆಕಾಫ್ ಹಾಸ್ಯ ಬರಹಗಳನ್ನು ಬರೆಯಲು ಆರಂಭಿಸಿದ. ಜತೆಗೆ ಮನೆ ಪಾಠ ಮಾಡುವುದಕ್ಕೂ ಹೋಗುತ್ತಿದ್ದ. ಅವನ ಸಂಪಾದನೆಯನ್ನೇ ಕುಟುಂಬ ಅವಲಂಬಿಸುವ ಪರಿಸ್ಥಿತಿ ತಲುಪಿಬಿಟ್ಟಿತ್ತು. ಓಸ್ಕೋಲ್ಕಿ ಎಂಬ ಅಂದಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಗೆ ಕೆಲಸ ಮಾಡಲಾರಂಭಿಸಿದ. ಆ ಕಾಲದ ರಷ್ಯನ್ ಕುಟುಂಬಗಳು, ರಷ್ಯನ್ ಜೀವನ ಶೈಲಿ ಮುಂತಾದವುಗಳ ಬಗ್ಗೆ ‘ಅಂಟೋಷಾ ಚಿಂಕೊಂಟೆ’ ಎಂಬ ಹೆಸರಿನಲ್ಲಿ ಬರೆದ.

ಆ ಕಾಲಕ್ಕೆ ಚೆಕಾಫ್ನ ಹಾಸ್ಯಪ್ರಜ್ಞೆ ಅದ್ಭುತವಾಗಿತ್ತು. ಅವನ ಬರವಣಿಗೆಯನ್ನು ಜನ ಆನಂದಿಸುತ್ತಿದ್ದರು. ಅವನ ಬಿಡಿ ಬರಹಗಳೂ ಜನರ ಪ್ರೀತಿ ಗಳಿಸಿದವು. ಈ ಪ್ರೀತಿ ಚೆಕಾಫ್ಗೆ ಬದುಕು ಕಟ್ಟಿಕೊಡುತ್ತಿತ್ತು. ಪತ್ರಿಕಾ ಕಚೇರಿಗಳಿಂದ ಬರುವ ಸಂಭಾವನೆಯನ್ನೇ ಅವನ ಕುಟುಂಬ ಅವಲಂಬಿಸಿತ್ತು. ಆ ಚೂರುಪಾರು ಸಂಪಾದನೆಯಲ್ಲೇ ಚೆಕಾಫ್ 1884ರಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ. ಬದುಕಿನ ಕೆಟ್ಟ ಮಗ್ಗುಲನ್ನು ನೋಡಿದ್ದ ಆತ ತಾನು ಕಲಿತ ವೈದ್ಯಕೀಯವನ್ನು ಜನರ ಸೇವೆಮಾಡುವುದಕ್ಕೆ ಮೀಸಲಿಟ್ಟ. ಬಡವರಿಗೆ ಹಣ ಕೇಳದೆ ಶುಶ್ರೂಷೆ ಮಾಡಿದ.

anton-21880ರಲ್ಲಿ ಚೆಕಾಫ್ ನ ಮೊದಲ ಕಥೆ ಪ್ರಕಟವಾಯಿತು. ಅದೇನೂ ಹೆಚ್ಚು ಓದುಗರನ್ನು ಆಕರ್ಷಿಸಲಿಲ್ಲ. ಅವನ ಇತರ ಹಾಸ್ಯ ಬರಹಗಳಂತೆ ಓದಿಸಿಕೊಂಡಿತು. ಆದರೆ ಚೆಕಾಫ್ಗೆದೊಡ್ಡ ತಿರುವು ಕೊಟ್ಟಿದ್ದು ಸಾಹಿತಿ ಗ್ರಿಗೋರೋವಿಚ್. 1886ನೇ ಇಸವಿ. ಆವತ್ತಿಗೆ ಮಿಟ್ರಿ ಗ್ರಿಗೊರೋವಿಚ್ ಪ್ರಸಿದ್ಧ ಲೇಖಕ. ಆಟ ಚೆಕಾಫ್ ಗೆ ಒಂದು ಪತ್ರ ಬರೆದ . ‘ದಿ ಹಂಟ್ಸ್ ಮನ್ ‘ ಎಂಬ ಕಥೆಯನ್ನು ಓದಿದ್ದ ಗ್ರಿಗೋರೋವಿಚ್ ‘ನಿನ್ನೊಳಗೆ ಅದ್ಭುತ ಪ್ರತಿಭೆಯಿದೆ. ಹೊಸ ತಲೆಮಾರಿನ ಬರಹಗಾರರಲ್ಲಿ ನೀನು ಮುಂಚೂಣಿಯಲ್ಲಿ ನಿಲ್ಲಬಲ್ಲೆ’ ಎಂದು ಹರಸಿದ. ಅದೇ ಪತ್ರದಲ್ಲಿ ಬರವಣಿಗೆ ಬಗ್ಗೆ ಒಂದಿಷ್ಟು ಸೂಚನೆಗಳನ್ನೂ ಕೊಟ್ಟಿದ್ದ.

ಚೆಕಾಫ್ನೇ ಹೇಳಿಕೊಂಡಂತೆ ಇದು ಆತನಿಗೆ ಅಪ್ಪಳಿಸಿದ ‘ಸಿಡಿಲು.’ ಚೆಕಾಫ್ ಹಣಕ್ಕಾಗಿ ಬರವಣಿಗೆ ಆರಂಭಿಸಿದ್ದ. ತನ್ನ ಬರವಣಿಗೆಯ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ಚೆಕಾಫ್ ಪ್ರಾಮಾಣಿಕವಾಗಿ ಹೀಗೆ ತಪ್ಪೊಪ್ಪಿಕೊಂಡ: ‘ನಾನು ಕಥೆಗಳನ್ನು ಒಬ್ಬ ವರದಿಗಾರ ಸುದ್ದಿ ಮಾಡುವ ಹಾಗೆ ಯಾಂತ್ರಿಕವಾಗಿ, ಅರೆ ಪ್ರಜ್ಞೆಯಲ್ಲಿ, ನನ್ನ ಬಗ್ಗೆ ಹಾಗೂ ಓದುಗರ ಬಗ್ಗೆ ಯೋಚಿಸದೆ ಬರೆದಿದ್ದೇನೆ.’

1887ರಲ್ಲಿ ಪ್ರತಿಷ್ಠಿತ ಪುಷ್ಕಿನ್ ಪ್ರಶಸ್ತಿ ಚೆಕಾಫ್ಗೆ ಲಭಿಸಿತು. ಆಗ ಚೆಕಾಫ್ಗೆ 27 ವರ್ಷ. ಗ್ರಿಗೋರೋವಿಚ್ ಮಾತಿನಂತೆ ತನ್ನ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಆತ ಆ ವರ್ಷ ಪ್ರಕಟಿಸಿದ ‘ಅಟ್ ಡಸ್ಕ್’ ಕಥೆಗಳ ಸಂಕಲನ ಈ ಪ್ರಶಸ್ತಿ ತಂದುಕೊಟ್ಟಿತ್ತು. ಅತ್ಯಂತ ಸಾಹಿತ್ಯಕ ಮೌಲ್ಯವಿರುವ ಕೃತಿ ಎಂದೂ ಪ್ರಶಂಸೆಗೆ ಪಾತ್ರವಾಯಿತು. ಆದರೆ ಈ ಹೊತ್ತಿಗಾಗಲೇ ಚೆಕಾಫ್ ಬಳಲಿದ್ದ. ಕ್ಷಯರೋಗ ಅವನನ್ನು ಹಣ್ಣು ಮಾಡಿತ್ತು. ಇದೇ ಹೊತ್ತಿಗೆ ಆತ ಬರೆದಿದ್ದ ‘ದಿ ವುಡ್ ಡೆಮನ್’ ನಾಟಕ ರಂಗದ ಮೇಲೆ ಸೋಲು ಕಂಡಿತು. ಅನಾರೋಗ್ಯ ಹಾಗೂ ನಾಟಕದ ಸೋಲು ಅವನನ್ನು ಕೆಲ ಕಾಲ ಬರವಣಿಗೆಯಿಂದ ವಿಮುಖಗೊಳಿಸಿತು.

ಇದೊಂದು ಅಪರೂಪದ ಅವಧಿ. ಚೆಕಾಫ್ ಇಂತಹ ಬೇಸರದ ದಿನಗಳನ್ನು ಕಳೆಯಲು ಆರಿಸಿಕೊಂಡಿದ್ದು ಪ್ರವಾಸ. ಸಖಾಲಿನ್ ಎಂಬ ದ್ವೀಪಕ್ಕೆ ಹೋದ. ಅಲ್ಲಿ ಚೆಕಾಫ್ ಒಳಗಿದ್ದ ವೈದ್ಯ ಜಾಗೃತನಾದ. ಆ ದ್ವೀಪದಲ್ಲಿ ಸಾವಿರಾರು ಖೈದಿಗಳನ್ನು ಬಂಧಿಸಿಡಲಾಗಿತ್ತು. ಚೆಕಾಫ್  ಅಲ್ಲಿದ್ದಷ್ಟೂ ದಿನ ಆ ಕೈದಿಗಳ ಬಗ್ಗೆ ಅಧ್ಯಯನ ನಡೆಸಿದ. ತಾನು ಕಂಡಿದ್ದನ್ನೆಲ್ಲಾ ತನ್ನ ತಂಗಿಗೆ ಬರೆದ ಪತ್ರಗಳಲ್ಲಿ ವಿವರಿಸಿದ. ಮನುಷ್ಯನ ನೈತಿಕ ಪತನದ ಪರಮಾವಧಿ ಅಂತೇನಾದರೂ ಇದ್ದರೆ ಅದು ಇಲ್ಲಿ ಕಣ್ಣಿಗೆ ಕಾಣುತ್ತದೆ’ ಎಂದು ಬರೆದಿದ್ದ.

1893-94ರ ಅವಧಿಯಲ್ಲಿ ಚೆಕಾಫ್ ಆ ದ್ವೀಪದಲ್ಲಿ ನೋಡಿದ್ದನ್ನೆಲ್ಲಾ ‘ದಿ ಐಲ್ಯಾಂಡ್ ಆಪ್ ಸಖಾಲಿನ್’ ಹೆಸರಿನ ಕೃತಿಯಲ್ಲಿ ಪ್ರಕಟಿಸಿದ. ಆತನ ‘ದಿ ಮರ್ಡರ್’ ಕಥೆಯಲ್ಲೂ ಈ ದ್ವೀಪ ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಮರಳಿದ ಮೇಲೆ ಚೆಕಾಫ್ ಒಂದು ಎಸ್ಟೇಟ್ ಖರೀದಿಸಿದ. ತನ್ನದೇ ನಾಟಕದಲ್ಲಿ ನಟಿಸುತ್ತಿದ್ದ ನಟಿ ಒಲ್ಗಾ ನಿಪ್ಪಾರ್ ಎಂಬಾಕೆಯನ್ನು ಮದುವೆಯಾದ. ಆದರೆ ಆಕೆಯೊಂದಿಗೆ ಬಹಳ ದಿನ ದಾಂಪತ್ಯ ನಡೆಸುವ ಭಾಗ್ಯ ಅವನಿಗಿರಲಿಲ್ಲ. 1904ರಲ್ಲಿ ತೀವ್ರ ಅನಾರೋಗ್ಯದಿಂದ ಬಳಲಿ ಚೆಕಾಫ್ ಸಾರಸ್ವತ ಲೋಕವನ್ನೂ, ಇಹಲೋಕವನ್ನೂ ತೊರೆದು ಹೋದ.

anton-2ರಷ್ಯಾದಲ್ಲಿ ಟಾಲ್ಸ್ಟಾಯ್ ಬಿಟ್ಟರೆ ಆ ಹೊತ್ತಿಗೆ ಮತ್ತೊಂದು ಸಾಹಿತಿಯ ಹೆಸರು ಥಟ್ಟನೆ ನಾಲಗೆಗೆ ಬರುತ್ತಿದ್ದುದು ಚೆಕಾಫ್ ಒಬ್ಬನದೇ. ವೈದ್ಯನೊಳಗೊಬ್ಬ ಕಥೆಗಾರ, ಕಥೆಗಾರನೊಳಗೊಬ್ಬ ವೈದ್ಯನಾಗಿದ್ದ ಚೆಕಾಫ್. ಹಾಗಾಗಿಯೇ ಅವನ ಕಥೆಗಳಲ್ಲಿ ಬೇರೆಯದೇ ಆಯಾಮವೊಂದು ಕಾಣಸಿಗುತ್ತದೆ. ಆತನೊಬ್ಬ ವೈದ್ಯನಾಗಿದ್ದರಿಂದ ಸಮಾಜದ ಆರೋಗ್ಯ, ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಚಿತ್ರಿಸಲು ಸಾಧ್ಯವಾಯಿತು ಎಂಬ ಅಭಿಪ್ರಾಯವಿದೆ. ಚೆಕಾಫ್ ಹೀಗೊಂದು ಮಾತು ಹೇಳಿದ್ದಾನೆ- ‘ಒಂದು ಪಾತ್ರದ ಆತ್ಮಕ್ಕೆ ಅಂಟಿದ ರೋಗವನ್ನು ನಾನು ವೈದ್ಯನಾಗಿಯೇ ವಿವರಿಸಿದ್ದೇನೆ.’ ಅವನ ಈ ಮಾತಿಗೆ ಪುರಾವೆ ಒದಗಿಸುತ್ತವೆ ಅವನ 60 ಕಥೆಗಳಲ್ಲಿ ಬರುವ ವೈದ್ಯಲೋಕದ ಉಲ್ಲೇಖ, ವೈದ್ಯಕೀಯ ಸಂಗತಿಗಳು, ಪಾತ್ರಗಳು ಮತ್ತು ಸನ್ನಿವೇಶಗಳು ಸಾಹಿತ್ಯವೇ ತನ್ನ ಜೀವನವೆಂದು ಅದಕ್ಕೇ ಸಂಪೂರ್ಣ ಬದುಕನ್ನು ಮೀಸಲಿಟ್ಟಿದ್ದರೂ ಕಲಿತ ವೈದ್ಯ ವಿದ್ಯೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಚೆಕಾಫ್.

ಅದಕ್ಕೇ ಆತ ‘ವೈದ್ಯ ವೃತ್ತಿ ಕಾನೂನಿನ ಪ್ರಕಾರ ನನ್ನ ಪತ್ನಿ. ಆದರೆ ಸಾಹಿತ್ಯ ನನ್ನ ಅರ್ಧಾಂಗಿ’ ಎಂದು ಹೇಳಿದ್ದ. ಅವನ ಕಥೆಗಳ ಪ್ರತೀ ಸಾಲಿನಲ್ಲಿ ಕಾಣಸಿಗುವ ರಷ್ಯಾ ಇನ್ನಾವ ರಷ್ಯನ್ ಸಾಹಿತಿಯ ಬರಹಗಳಲ್ಲೂ ಸಿಗುವುದಿಲ್ಲ ಎಂಬುದು ಸಾರಸ್ವತ ಲೋಕದ ಅಭಿಮತ.

ಚೆಕಾಫ್ನ ಕಥೆಗಳು ಎಷ್ಟೇ ಹೇಳಿದರೂ, ಏನೇ ಹೇಳಿದರೂ ಅವುಗಳ ಬಗ್ಗೆ ತಕರಾರು ಎತ್ತುವವರಿದ್ದಾರೆ. ಆತ ಬರೆದಿದ್ದು ಕಥೆಗಳೇ ಅಲ್ಲ ಎನ್ನುವವರೂ ಇದ್ದಾರೆ. ಹಣಕ್ಕಾಗಿ ವಸ್ತು, ವಿಷಯ ಏನನ್ನೂ ಯೋಚಿಸದೆ ತೋಚಿದ್ದನ್ನು ಗೀಚಿದ ಕಥೆಗಳಿವು ಎಂದು ಅವರು ವಿಮರ್ಶೆ ಮಾಡುತ್ತಾರೆ.

ಅರ್ನೆಸ್ಟ್ ಹೆಮಿಂಗ್ವೆ ‘ಚೆಕಾಫ್ ಬರೆದಿದ್ದು ಕೇವಲ ಆರೇ ಒಳ್ಳೆಯ ಕಥೆಗಳು. ಅವನೊಬ್ಬ ಅಮೆಚೂರ್ ಲೇಖಕ’ ಎನ್ನುತ್ತಾನೆ. ರಷ್ಯಾದ ಮತ್ತೊಬ್ಬ ಪ್ರಸಿದ್ಧ ಸಾಹಿತಿ ವ್ಲಾದಿಮೀರ್ ನೊಬೊಕೋಫ್ (ಲೋಲಿಟಾ ಖ್ಯಾತಿಯ ಸಾಹಿತಿ) ‘ಚೆಕಾಫ್ ಕಥೆಗಳಲ್ಲಿ ಸಿದ್ಧ ಗುಣವಾಚಕಗಳು, ವಿಶೇಷಣಗಳೇ ಇವೆ. ಪ್ರತಿ ಕಥೆಯಲ್ಲೂ ಅವು ಮತ್ತೆ ಮತ್ತೆ ಬಳಕೆಯಾಗುತ್ತವೆ’ ಎಂದು ದೂರಿದ್ದ. ಹೀಗೆ ದೂರಿದ್ದ ಸಾಹಿತಿಗಳೇ ‘ದಿ ಲೇಡಿ ವಿತ್ ಲ್ಯಾಪ್ ಡಾಗ್’, ‘ದಿ ಮರ್ಡರ್’, ‘ದಿ ಕಾಮನ್ ರೀಡರ್ ಮುಂತಾದ ಕಥೆಗಳನ್ನು ಅತ್ಯುತ್ತಮವಾದ ಕಥೆಗಳು ಎಂದು ಪ್ರಶಂಸಿಸಿದ್ದರು.

ಇವೆಲ್ಲಾ ಏನೇ ಇರಲಿ, ಸರಳವಾಗಿ ಕಥೆ ಹೇಳುವ ಚೆಕಾಫ್ ಇವತ್ತಿಗೂ ಇಷ್ಟವಾಗುತ್ತಾನೆ. ದಿ ಬೆಟ್ ಆಗಲೀ, ಚಮೆಲಿಯನ್ ಆಗಲಿ ಓದಿದ ನಮಗೆ ಸಿಗುವ ಅನುಭವವೇ ಭಿನ್ನ. ಬದುಕಿನ ಸತ್ಯವನ್ನು ಸರಳವಾಗಿ ಹೇಳುವ, ವ್ಯವಸ್ಥೆಯ ಇನ್ನೊಂದು ಮುಖವನ್ನು ಬಿಚ್ಚಿಡುವ ಚೆಕಾಫ್ ಕಥೆಗಳು ಆ ಕಥೆಗೆ ಬೇಕಾದ ಸ್ವರೂಪವನ್ನೇ ಹೊಂದಿವೆ ಅನ್ನುವ ಹಾಗಿವೆ. ಅವು ಓದಿಸಿಕೊಳ್ಳುತ್ತವೆ. ಅವನ್ನು ಓದಿಯೇ ಅನುಭವಿಸಬೇಕಷ್ಟೆ.

‍ಲೇಖಕರು avadhi

15 July, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading