ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುನಾವಣೆ ಸಮಯದಲ್ಲಿ ಲಂಕೇಶ್ ನೆನಪು

ನಮ್ಮೆಲ್ಲರ ಪ್ರೀತಿಯ ಬಸವರಾಜು ಲಂಕೇಶರ ಒಡನಾಡಿ. ‘ಲಂಕೇಶ್ ಪತ್ರಿಕೆ’ಯನ್ನು ನೇಪಥ್ಯದಿಂದ ಕಂಡವನು. ಲಂಕೇಶರ ಹಾಗೂ ಪತ್ರಿಕೆ ಎರಡರ ಬದುಕಿನ ಸಮೀಪದರ್ಶಿ. ‘ಅಗ್ನಿ’ಪತ್ರಿಕೆಯ ಸಂಪಾದಕರಾಗಿದ್ದು, ಈಗ ‘ವಿಕ್ರಾಂತ ಕರ್ನಾಟಕ’ ವಾರಪತ್ರಿಕೆಯ ಮುಖ್ಯಸ್ಥರಲ್ಲೊಬ್ಬರು.   

 

`ಕಡಿಮೆ ಕಳ್ಳರನ್ನ ಬೆಂಬಲಿಸಿ, ಆರಿಸಿ…

ಬಸವರಾಜು

8001052szbs1ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಬಗ್ಗೆ ಇಟ್ಟಿರುವ ನಂಬಿಕೆ ಪರಂಪರಾಗತವಾದುದು. ಅದು ಅಷ್ಟು ಸುಲಭವಾಗಿ ಸಡಿಲವಾಗುವಂಥದ್ದಲ್ಲ. ಆ ಕಾರಣಕ್ಕಾಗಿಯೇ ಸುದ್ದಿ ಮಾಧ್ಯಮಗಳು ಉಳಿದಿರುವುದು ಮತ್ತು ಆ ಕ್ಷೇತ್ರ ಇನ್ನೂ ಹೆಚ್ಚೆಚ್ಚು ವಿಸ್ತಾರಗೊಳ್ಳುತ್ತಿರುವುದು.

ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಮೇಲೆ ಇಟ್ಟಿರುವ ಆ ನಂಬಿಕೆ ಇವತ್ತಿನ ಜಾಗತೀಕರಣದ ಯುಗದಲ್ಲೂ ಹಾಗೇ ಇದೆ. ಆದರೆ ಸುದ್ದಿ ಮಾಧ್ಯಮಗಳು ಜನಸಾಮಾನ್ಯರ ನಂಬಿಕೆಗೆ ಬದ್ಧವಾಗಿವೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ನೈತಿಕತೆ, ಪ್ರಾಮಾಣಿಕತೆ ಮರೆಯಾಗುತ್ತ, ಮೌಲ್ಯಾಧಾರಿತ ಪತ್ರಿಕೋದ್ಯಮ ಪಕ್ಕಕ್ಕೆ ಸರಿಯುತ್ತ ಇರುವುದು. ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರು `ಹೌ ಟು ಸೆಲ್ ಮೈ ರೈಟಿಂಗ್‘ ಎಂಬ ಗ್ಲೋಬಲ್ ತತ್ವಕ್ಕೆ ಕಟ್ಟುಬಿದ್ದವರು. ಪತ್ರಿಕೋದ್ಯಮವನ್ನು ಮಾರುಕಟ್ಟೆಯ ಸರಕಿನ ಮಟ್ಟಕ್ಕಿಳಿಸಿದವರು. ಇಲ್ಲಿ ತತ್ವ, ಬದ್ಧತೆಗಿಂತ ಮುಖ್ಯವಾಗಿ ಲಾಭಕೋರ ಮನಸ್ಸು ವಿಜೃಂಭಿಸುತ್ತಿದೆ. ಸ್ವಾರ್ಥಕ್ಕೆ ಮೌಲ್ಯ ಮಾರಾಟವಾಗುತ್ತಿದೆ.
ಹಾಗಾಗಿ ಮಾಧ್ಯಮಗಳೂ ಬದಲಾಗಿವೆ, ಜನರೂ ಬದಲಾಗುತ್ತಿದ್ದಾರೆ. ಬದಲಾದ ಸಂದರ್ಭಕ್ಕನುಗುಣವಾಗಿ ಜನ ಇಂದು ಸುದ್ದಿಮಾಧ್ಯಮಗಳನ್ನು ನಂಬುತ್ತಿಲ್ಲ; ನಂಬುವಂತಹ ಸುದ್ದಿಗಳನ್ನು ಅವರೂ ಕೊಡುತ್ತಿಲ್ಲ. ಆದರೂ ಜನ ಪೇಪರ್ ಗಳನ್ನು ಓದುತ್ತಾರೆ, ಸುದ್ದಿವಾಹಿನಿಗಳನ್ನು ನೋಡುತ್ತಾರೆ. ಅಷ್ಟೇ ಬೇಗ ಮರೆಯುತ್ತಾರೆ.
lankesh2ಜನರ ಮರೆಯುವ ಗುಣ, ಕುಲಗೆಟ್ಟಿರುವ ವ್ಯವಸ್ಥೆ ಮತ್ತು ಇವತ್ತಿನ ಸುದ್ದಿ ಇವತ್ತಿಗೇ ಸಾಯುತ್ತಿರುವ ಸಂದರ್ಭ ಮಾಧ್ಯಮದ ಮಂದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಪತ್ರಕರ್ತರು ಯಾರ ಬಗ್ಗೆ ಏನನ್ನು ಬೇಕಾದರೂ ಬರೆಯಬಲ್ಲ `ಬುದ್ಧಿವಂತ‘ರಾಗಿದ್ದಾರೆ. ಪತ್ರಿಕೋದ್ಯಮ ದಂಧೆಯಾಗಿದೆ. ಮಾರುಕಟ್ಟೆಯಲ್ಲಿ ಪತ್ರಿಕೆಯೂ ಬಿಕರಿಯಾಗುತ್ತಿದೆ, ಪತ್ರಕರ್ತನೂ ಬಿಕರಿಯಾಗುತ್ತಿದ್ದಾನೆ.
ಇದು ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಅದೇಕೋ ಇದೇ ಸಂದರ್ಭದಲ್ಲಿ ಎಲೆಕ್ಷನ್ ಎಂದಾಕ್ಷಣ ಅಲರ್ಟ್ ಆಗುತ್ತಿದ್ದ ಲಂಕೇಶರೂ ನೆನಪಾಗುತ್ತಿದ್ದಾರೆ…
ಚುನಾವಣೆಯ ಸಂದರ್ಭದಲ್ಲಿ ಲಂಕೇಶರು ಈ ದೇಶದ ಆಗುಹೋಗುಗಳನ್ನು ನಿರ್ಧರಿಸುವ ಮಹತ್ತರ ಹೊಣೆಗಾರಿಕೆ ತಮ್ಮ ಭುಜದ ಮೇಲೆ ಬಿದ್ದಿದೆಯೇನೋ ಎನ್ನುವಂತೆ ಭ್ರಮಿಸುತ್ತಿದ್ದರು. ತಮ್ಮ ಚಿಲ್ಲರೆ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಯುದ್ಧಕ್ಕೆ ಸಜ್ಜಾಗಿ ನಿಂತ ಯೋಧನಂತೆ ಚಡಪಡಿಸುತ್ತಿದ್ದರು. ತಮ್ಮ ಸುತ್ತ, ಬಳಸಿ ಬಿಸಾಕಿದ ಬ್ಯಾಟರಿಯಂತೆ ಬಿದ್ದಿರುತ್ತಿದ್ದ ವರದಿಗಾರರ ಬುಡಕ್ಕೆ ಬಿಸಿ ತಾಗಿಸಿ ಚಾರ್ಜ್ ಮಾಡುತ್ತಿದ್ದರು. ನೂರು ಕ್ಯಾಂಡಲ್ ಬಲ್ಬ್ ಥರ ಟ್ವೆಂಟಿಫೋರ್ ಅವರ್ಸು ಉರಿಯುತ್ತಿರಬೇಕು…
ಜನರ ಧ್ವನಿಯಾದ, ಜನರನ್ನು ಜಾಗೃತರನ್ನಾಗಿಸಿದ, ಜನಾಭಿಪ್ರಾಯವನ್ನು ರೂಪಿಸಿದ, ಸರ್ಕಾರಗಳನ್ನು ಬದಲಿಸಿದ ಕೀರ್ತಿ ಲಂಕೇಶರ ಪತ್ರಿಕೆಗೆ ಸಲ್ಲಲೇಬೇಕು. ಕೀರ್ತಿ ಶನಿ ಲಂಕೇಶರ ಹೆಗಲೇರಿದ್ದು, ಇಳಿದಿದ್ದು- ಎಲ್ಲಾ ಓದುಗರಿಂದಲೇ. ಲಂಕೇಶರ ಶಕ್ತಿ ಓದುಗರೇ. ಅವರು ಹೆದರುತ್ತಿದ್ದುದೂ ಓದುಗರಿಗೇ. ಯಾಕೆಂದರೆ ಪತ್ರಿಕೆಯ ಪ್ರಸಾರದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡಿದ್ದರು. ಅವೆರಡೂ ಮೇಸ್ಟ್ರಿಗೆ ಪಾಠ ಕಲಿಸಿದ್ದವು.
ಚುನಾವಣಾ ಸಮಯದಲ್ಲಿ ಲಂಕೇಶರಿಗೆ ಹೊಸ ಹುರುಪು ಮೈ ಮನಗಳನ್ನು ಆವರಿಸಿಕೊಳ್ಳುತ್ತಿತ್ತು. ಅದಕ್ಕೆ ಕಾರಣ, ಜವಾಬ್ದಾರಿ ಜಾಸ್ತಿಯಾಗುತ್ತಿದ್ದುದು ಮತ್ತು ಪತ್ರಿಕೆಯ ಸರ್ಕ್ಯುಲೇಶ ಹೆಚ್ಚಾಗುತ್ತಿದ್ದುದು. ಆ ಸಂದರ್ಭದಲ್ಲಿ ಪತ್ರಿಕೆಯ ಕಚೇರಿ ಸಾಹಿತಿಗಳು, ಕಲಾವಿದರು ಮತ್ತು ವರದಿಗಾರರಿಂದ ಗಿಜಿಗುಡುತ್ತಿತ್ತು. ಪ್ರತಿದಿನ `ಕೂತು ಮಾತನಾಡುವ‘ ಸೆಶನ್ galu ಇದ್ದೇ ಇರುತ್ತಿದ್ದವು. ಆರಂಭದಲ್ಲಿ ಬೌದ್ಧಿಕ ಕಸರತ್ತಿನ ತರ್ಕಬದ್ಧ , ಚರ್ಚೆ ಮತ್ತೇರುತ್ತಿದ್ದಂತೆ ಅಭ್ಯರ್ಥಿ ಗಳನ್ನು ಅಮಲಿನಲ್ಲಿಯೇ ಸೋಲಿಸುವ-ಗೆಲ್ಲಿಸುವ ಹುಂಬತನ, ಕೊನೆಗೆ ಚಿಲ್ಲರೆ ಜಗಳದಲ್ಲಿ ಪರ್ಯವಸಾನ… ಇದು ಮಾಮೂಲಾಗಿತ್ತು. ಆದರೆ ಈ ಜಗಳಗಳು ಕೂಡ ವರದಿಗಾರರ ವೃತ್ತಿಬದುಕಿಗೆ ಸಾಣೆಯಂತೆ ಸಹಕಾರಿಯಾಗುತ್ತಿದ್ದುದು `ಪತ್ರಿಕೆ‘ಯ ವೈಶಿಷ್ಟ್ಯ.
ಚುನಾವಣಾ ಕಾಲದಲ್ಲಿ ಲಂಕೇಶರು ಬೆಂಗಳೂರಿನ ಮುಖ್ಯ ವರದಿಗಾರರ ಜೊತೆಗೆ ಜಿಲ್ಲಾ ವರದಿಗಾರರನ್ನು ಕರೆದು ಮೀಟಿಂಗ್ ಮಾಡುತ್ತಿದ್ದರು. ಆ ಜಿಲ್ಲೆಗಳ ರಾಜಕೀಯ ವಿದ್ಯಮಾನ, ಪಕ್ಷಗಳು, ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಮಾತುಕತೆಯಲ್ಲಿಯೇ ವರದಿಗಾರರು ತೆಗೆದುಕೊಳ್ಳಬೇಕಾದ ಪರ-ವಿರೋಧದ ನಿಲುವು ಸ್ಪಷ್ಟವಾಗುತ್ತಿತ್ತು. ಈ ಪರ-ವಿರೋಧ ಅಂದರೆ ಏನು? ಲಂಕೇಶರು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋಧವಿದ್ದು, ಬಿಜೆಪಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಅದನ್ನು ಅಧಿಕಾರದ ಹತ್ತಿರಕ್ಕೂ ತರಬಾರದೆಂಬುದು ಅವರ ನಿಲುವಾಗಿತ್ತು. ವರದಿಗಾರರ ವರದಿಗಳಲ್ಲಿ ಅದು ಪ್ರತಿಫಲಿಸುತ್ತಿತ್ತು.
ರಾಜಕಾರಣಿಗಳಲ್ಲಿ ಒಳ್ಳೆಯವರು-ಕೆಟ್ಟವರು ಅಂದರೆ ಯಾರು, ಅದನ್ನು ಅಳೆಯುವ ಮಾನದಂಡವಾದರೂ ಏನು ಎಂದು ವರದಿಗಾರರು ತಲೆಕೆಡಿಸಿಕೊಂಡರೆ, ಲಂಕೇಶರು, `ಎಲೆಕ್ಷನ್ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರೆ, ಹಾಗಂತ ಬರದ್ರೆ ನಾವ್ ಅನ್ಪಾಪ್ಯುಳರ್ ಆಗ್ತಿವಿ, ಸಿನಿಕರ ಸಾಲಿಗೆ ಸೇರ್ತಿವಿ, ಅದು ನಮ್ಮ ರೀಡರ್ಸ್ಗೆ ದಾರಿ ತಪ್ಸಿ, ಮೋಸ ಮಾಡ್ದಂಗಾಗ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್ನಾದ್ರು ಒಬ್ಬನನ್ನು ಆರಿಸಲೇಬೇಕು, ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು‘ ಎನ್ನುತ್ತಿದ್ದರು.
ಹಾಗೆಯೇ ಚುನಾವಣಾ ಸಮೀಕ್ಷೆಗಳನ್ನು ಮಾಡುವಾಗ ವರದಿಗಾರ ಹೇಗಿರಬೇಕು ಎಂಬುದನ್ನೂ ಹೇಳುತ್ತಿದ್ದರು. ಕ್ಷೇತ್ರದ ಸರ್ವೆ ಮಾಡುವ ವರದಿಗಾರರಿಗೆ ಪ್ರಯಾಣ ಭತ್ಯೆ, ಜೊತೆಗೆ ಕುಡಿತದ ಭತ್ಯೆಯೂ ಇರುತ್ತಿತ್ತು. ಇತರ ಜಿಲ್ಲೆಗಳಿಗೆ ಕಾರು ಮಾಡಿ ಕಳುಹಿಸಿದಾಗಲೂ ಕುಡಿತಕ್ಕೆ ಎಕ್ಸ್ಟ್ರಾ ಎಂದು ಕೊಡುತ್ತಿದ್ದರು. ನಾವೇನಾದ್ರು ಪ್ರಶ್ನಾರ್ಥಕವಾಗಿ ಅವರ ಮುಖ ನೋಡಿದರೆ, `ನೀನ್ ಕುಡೀತಿಯಾ ಅಂತ ಗೊತ್ತು. ಈ ಎಲೆಕ್ಷನ್ ಟೈಮಲ್ಲಿ ನಿನ್ಗೆ ಕುಡಿಸಕ್ಕಂತನೆ ಜನ ಇರ್ತರೆ ಅಂತ್ಲೂ ಗೊತ್ತು, ನೀನು ಹೆಚ್ಗೆ ಅಂದ್ರೆ ಎಷ್ಟು ಕುಡೀಬಹುದು, ನೂರಿನ್ನೂರೂಪಾಯ್ದು, ಅದಕ್ಕೆ ನಿನ್ನ ರಿಪೋರ್ಟರ್ ಮಾರ್ಕಂಡು, ನಮ್ ರೀಡರ್ಸ್ಗೆ ಮೋಸ ಮಾಡದ್ ನಂಗಿಷ್ಟಿವಿಲ್ಲ, ಓದುಗರು ಕೊಟ್ಟಿರೋ ದುಡ್ಡಲ್ಲಿ ಕುಡ್ದು ವಸ್ತುನಿಷ್ಠ ವರದಿ ಬರಿ…‘ ಎನ್ನುತ್ತಿದ್ದರು.
ರೂಢಿಗತ ಸುದ್ದಿ ಮಾಧ್ಯಮಗಳಿಗೂ, ಲಂಕೇಶರಿಗೂ ಇದ್ದ ಫರಕ್ಕು ಇಷ್ಟೆ.

‍ಲೇಖಕರು avadhi

10 April, 2009

4 Comments

  1. keshav

    ಲಂಕೇಶ್ ನಮ್ಮನ್ನೆಲ್ಲ ತಮ್ಮ ಪತ್ರಿಕೆಯಿಂದ ಹೇಗೆ ರೂಪಿಸಿದರು ಎನ್ನುವುದು ಲಂಕೇಶ್ ಇಲ್ಲದ “ಲಂಕೇಶ್ ಪತ್ರಿಕೆ” ನೋಡಿದರೆ ಗೊತಾಗುತ್ತದೆ. ಕೊನೆಕೊನೆಯಲ್ಲಿ ಕಾಂಗ್ರೆಸ್ಸಿನ ಮೋಹದಲ್ಲಿ ಬರೆದಿರುವುದನ್ನು ಬಿಟ್ಟರೆ, “ಲಂಕೇಶ್ ಪತ್ರಿಕೆ” ನಮ್ಮ ರಾಜ್ಕೀಯ ಪ್ರಜ್ಞೆಯನ್ನು ಬೆಳೆಸಿದ ಪರಿ ಇನ್ನಾವ ಸಾಮಾಜಿಕ ಪುಸ್ತಕಗಳಿಂದಲೂ, ಅಂದೋಲನದಿಂದಲೂ ಬರಲಿಲ್ಲ. ಕೆಲವೊಮ್ಮೆ ತುಂಬ ಅಬ್ಬರವಿದ್ದರೂ ಚುನಾವಣೆ ಸಮಯದಲ್ಲಿ ಅದು ಬೇಕಾಗಿತ್ತು. ಅವರನ್ನು ಅನುಕರಿಸಲು ಹೋಗಿ ಪತ್ರಿಕೆಮಾಡಿ ಲಾಭಗಳಿಸಿದರೇ ವಿನಃ ಲಂಕೇಶ್ ತರಹ ಹಟಮಾರಿಯಾಗಿ ಜಿದ್ದಿನಲ್ಲಿ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾಗಲಿಲ್ಲ.
    – ಕೇಶವ

  2. ಚಂದಿನ

    ಲಂಕೇಶ್ ಹಾಗು ತೇಜಸ್ವಿಯವರ ಬಗ್ಗೆ ಎಷ್ಟು ಓದಿದರೂ, ಎಷ್ಟು ತಿಳಿದು ಕೊಂಡರೂ ಕಡಿಮೆ ಅನ್ನಿಸುತ್ತೆ. ಅವರ ಬಗ್ಗೆ ಇನ್ನಷ್ಟು, ಮತ್ತಷ್ಟು, ಮಗದಷ್ಟು ಓದುವ, ತಿಳಿಯುವ ಕಾತುರ, ಕುತೂಹಲ ಹೆಚ್ಚಾಗುತ್ತಿರುತ್ತದೆ….
    ಎಂದಿಗೂ ಅವರು ನಮ್ಮ ಮನದಲ್ಲಿ ಜೀವಂತವಾಗಿ ಕದಡಿ, ಕಾಡಿ, ಎಚ್ಚರಿಸುತ್ತಿರುತ್ತಾರೆ ಹಾಗೇ ಪ್ರೋ.ಎಂ.ಡಿ.ಎನ್ ಕೂಡ.
    – ಚಂದಿನ

  3. Nagesh K N

    ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು
    ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು‘
    Most of us are feeling terribly unconfortable
    to get a clear view about certain issues.
    What ever may be the issue.. Election, budget,
    water issue, mining.. anything like that.
    The strength and clarity of prof mdn, lankesh,
    thejaswi can be better understood in their
    obsence.
    Basanna did it in this article…

  4. LOKESH MOSALE

    15 paiseya cardnalli yecharikeya pathra nenapige banthu “ninu devegowdanige thuthuri vuduthideya ” yecharavirrali yennuva lankeshra saalugale …..indigu pramaanikanaagiralu patavaagide basu ninna barahakke lankesh ra election sanchike nenapisidakke thanks….LOKESH MOSALE

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading