ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೀಮನಹಳ್ಳಿ ರಮೇಶಬಾಬು, ’ಹಸ್ತಬಲಿ’ ಮತ್ತು ಒಂದು ಕಥೆ

ಚೀಮನಹಳ್ಳಿ ರಮೇಶಬಾಬು

ಹುಟ್ಟಿದ್ದು 10-7-1974, ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಚೀಮನಹಳ್ಳಿಯಲ್ಲಿ. ಹೆಬ್ಬರಿ, ಬೂರಗಮಾಕಲಹಳ್ಳಿ, ಚಿಂತಾಮಣಿ ಮತ್ತು ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. ‘ಪ್ರಶ್ನೆ ಮತ್ತು ದೇವರು’ ಹಾಗೂ ‘ಎರಡು ಲೋಟಗಳು’ ಪ್ರಕಟಿತ ಕವನಸಂಕಲನಗಳು. ಪ್ರಜಾವಾಣಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಗಳಲ್ಲಿ ಬಹುಮಾನ. ‘ಪ್ರಶ್ನೆ ಮತ್ತು ದೇವರು’ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಅರಳು ಸಾಹಿತ್ಯ ಪ್ರಶಸ್ತಿ’ ಹಾಗೂ ಮಂಡ್ಯದ ಯುವ ಬಳಗದ ‘ಕೆಎಸ್ನ ಕಾವ್ಯ ಪ್ರಶಸ್ತಿ’ಗಳು ಸಂದಿವೆ. ಸದ್ಯ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅವರ ಹೊಸ ಪುಸ್ತಕ ಇಲ್ಲಿದೆ :

ಕಥಾ ಸಂಕಲನದ ಒಂದು ಕಥೆ ಅವಧಿ ಓದುಗರಿಗಾಗಿ

ಕಾಂಕ್ರೀಟ್ ಹುಳ

ಯಾಕೋ ನಟರಾಜ್ ಸರ್ ಇತ್ತೀಚೆಗೆ ಬಹಳವೆ ಕಾಡಲು ಶುರುಮಾಡಿದ್ದಾರೆ. ಮರೆಯಲು ಎಷ್ಟೇ ಪ್ರಯತ್ನಿಸಿದರು ಮೊನ್ನೆ ಸಂಭವಿಸಿದ ಸುನಾಮಿ ಅಲೆಯಂತೆ ಬೃಹದಾಕಾರವಾಗಿ ಎದ್ದು ತನ್ನೆಲ್ಲಾ ಶಕ್ತಿ ಸಾಮಥ್ರ್ಯದಿಂದ ನನಗೆ ಅಪ್ಪಳಿಸುತ್ತಲೇ ಇದ್ದಾರೆ. ಎಪ್ಪತ್ತರ ಹರೆಯದ ಆ ಮುದುಕನ ಮುಂದೆ ಮೂವತ್ತರ ಯುವಕನ ನೈತಿಕ ಬಲ ಕುಗ್ಗಿದ ಹಾಗಾಗಿ ತಲೆ ತಗ್ಗಿಸಿ ಶೂನ್ಯದಲ್ಲಿ ದೃಷ್ಟಿ ನೆಟ್ಟು ಶೂನ್ಯವಾಗುತ್ತೇನೆ. ಅಬ್ಬಾ…! ಮೊನ್ನೆ ಅದೆಂಥಾ ಕನಸು! ನನ್ನ ಅಸ್ತಿತ್ವದ ಬೇರುಗಳನ್ನೇ ಕಿತ್ತು ಬುಡಮೇಲು ಮಾಡಿತ್ತಲ್ಲ. ಆ ಕನಸಿನಲ್ಲಿ ನಟರಾಜ ಸರ್ ನನ್ನ ಹೃದಯವನ್ನು ಅಗೆದು ಅಲ್ಲಿದ್ದ ಸಿಮೆಂಟು-ಜಲ್ಲಿಯಿಂದ ಮಾಡಿದ ಕಾಂಕ್ರೀಟನ್ನು ತನ್ನ ಎರಡು ಕೈಗಳಿಂದ ಎತ್ತಿಎತ್ತಿ ಹೊರಗೆ ರಾಶಿ ಹಾಕಿ ಜಗಜ್ಜಾಹೀರು ಮಾಡಿದ್ದರಲ್ಲ. ಅದೇನು ಅವಸರ ಆವೇಶವಿತ್ತು ಅವರಲ್ಲಿ. ಬೊಗಸೆ ಬೊಗಸೆ ಕಾಂಕ್ರೀಟ್ ಬೆಟ್ಟದ ರೂಪ ತಾಳಿದ್ದರೂ ಒಂದಿಷ್ಟೂ ದಣಿವರಿಯದವನಂತೆ ಮತ್ತಷ್ಟು ವ್ಯಗ್ರನಾಗಿ ನನ್ನ ಹೃದಯ ತಳಕ್ಕೆ ತನ್ನ ಬೊಗಸೆಯನ್ನು ಮತ್ತೆ ಮತ್ತೆ ತೂರಿಸಿ ಮೊಗೆಯುತ್ತಲೆ ಇದ್ದ… ಕೊನೆಯನ್ನೇ ಕಾಣದ ಕನಸು… ಆತ ಮೊಗೆಯುತ್ತಲೆ ಇದ್ದ… ಮೊಗೆದಷ್ಟೂ ನೀರ ಸೆಲೆಯಂತೆ ನಿರಂತರ ಖಾಲಿಯಾಗದ ಕಾಂಕ್ರೀಟು. ಈ ಕನಸು ನನ್ನ ಮನಸ್ಸಿನ ನೆರಳಿನಂತೆ ಹಿಂದೆ ಬಿದ್ದಿದೆ.

ಈ ನಟರಾಜ್ ಸರ್ ನನಗೆ ಸಂಬಂಧಿಕರೂ ಅಲ್ಲ. ಅಷ್ಟೊಂದು ಆಪ್ತರೂ ಅಲ್ಲ. ಅವರ ನನ್ನ ನಡುವಿನ ಒಡನಾಟ ಅಷ್ಟೊಂದು ದೀರ್ಘವಾದುದೇನೂ ಅಲ್ಲ. ಅವರನ್ನು ಭೇಟಿಯಾಗಿದ್ದೂ ಒಂದು ಆಕಸ್ಮಿಕವೆ. ಅಂದು ಸಂಜೆ ನನ್ನ ಮಾವನ ಮಗಳ ಮದುವೆಗೆಂದು ಹೊರಟಿದ್ದೆ. ಆ ಸಂಜೆಗೆ ಆರತಕ್ಷತೆ ಇಟ್ಟುಕೊಂಡಿದ್ದರು. ಎಂದಿನಂತೆ ನಾನು ಕೆಲಸ ಮುಗಿಸಿಕೊಂಡು ಬಸ್ ಹತ್ತಿ ಸುಮಾರು ಗಂಟೆ ಆರೂವರೆಯಷ್ಟರಲ್ಲಿ ಬಿಇಎಲ್ ವೃತ್ತದ ಬಳಿ ಇಳಿದೆ. ಮದುವೆ ಇದ್ದದ್ದು ಅಲ್ಲೇ ಹತ್ತಿರದ ಛತ್ರವೊಂದರಲ್ಲಿ. ನಾನು ಇಳಿಯುವುದಕ್ಕೂ ಮಳೆರಾಯ ತನ್ನ ಆರ್ಭಟವನ್ನು ಶುರುಮಾಡುವುದಕ್ಕೂ ಸರಿಯಾಗಿ ತಾಳೆಯಾಗಿತ್ತು. ಇಳಿದವನೆ ಆತುರಾತುರವಾಗಿ ಅಲ್ಲೆ ಇದ್ದ ತಂಗುದಾಣಕ್ಕೆ ನುಗ್ಗಿದೆ. ಮಳೆ ಆಗತಾನೆ ಶುರುವಾಗಿದ್ದರಿಂದ ಅಲ್ಲಿ ಅಷ್ಟೊಂದು ಜನ ಸೇರಿರಲಿಲ್ಲ. ಅಲ್ಲಿ ತಂಗುದಾಣದ ಆಸನದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತೆ. ನಂತರ ಜನರು ಒಬ್ಬೊಬ್ಬರಾಗಿ ಸೇರತೊಡಗಿ ತಂಗುದಾಣ ತುಂಬಿಹೋಯಿತು.

ಎಲ್ಲರೂ ತಮ್ಮ ಕರವಸ್ತ್ರಗಳಿಂದ ತಲೆಗೂದಲಿನ ತೇವವನ್ನು ಒರೆಸಿಕೊಳ್ಳತ್ತಿದ್ದರು. ಮಳೆ ಮತ್ತಷ್ಟು ಆರ್ಭಟಿಸಲಾರಂಭಿಸಿತು. ಗುಡುಗು ಸಿಡಿಲು ಪೈಪೋಟಿಗೆ ಬಿದ್ದಂತೆ ಒಂದರ ಹಿಂದೆ ಮತ್ತೊಂದರಂತೆ ಅಪ್ಪಳಿಸುತ್ತಲೇ ಇದ್ದವು. ಆ ವೃತ್ತದ ನಡುವಿಗಿದ್ದ ಎತ್ತರದ ದೀಪಸ್ತಂಬದ ತುದಿಗಿದ್ದ ದೀಪಗಳ ಗೊಂಚಲು ಮಸುಕು ಮಸುಕಾಗಿ ನನ್ನ ಚಿಕ್ಕಂದಿನ ದಿನಗಳಲ್ಲಿ ಹಳ್ಳಿಯಲ್ಲಿ ನಮ್ಮ ಮನೆಯಲ್ಲಿ ಬಳಸುತ್ತಿದ್ದ ಚಿಮಣಿ ದೀಪ ನಮ್ಮದೇ ಭಾಷೆಯಲ್ಲಿ ಬುಡ್ಡಿದೀಪ ನೆನಪಿಗೆ ಬಂತು. ನೆನಪು ಆ ದಿನಗಳಿಗೆ ಇನ್ನೇನು ಜಾರುತ್ತಲಿದೆ ಎನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ವ್ಯಕ್ತಿ ನನ್ನನ್ನು ಎಚ್ಚರಿಸಿದ. ಎಲ್ಲಿ ಹೋಗಬೇಕು? ಅತಿ ವಿನಯದಿಂದಲೇ ಪ್ರಶ್ನಿಸಿದ ಆ ವ್ಯಕ್ತಿಯನ್ನೊಮ್ಮೆ ದಿಟ್ಟಿಸಿದೆ. ಸುಮಾರು ಎಪ್ಪತ್ತರ ಆಸುಪಾಸಿನ ವ್ಯಕ್ತಿ. ಸಂಪೂರ್ಣ ನೆರೆತ ಕೂದಲು. ಅರ್ಧ ಬೋಳು ತಲೆ. ಸುಕ್ಕುಗಟ್ಟಿದ ಆತನ ಚರ್ಮ ನಿಖರವಾಗಿ ವಯಸ್ಸು ಮತ್ತು ಜೀವನಾನುಭವವನ್ನು ಹೇಳುವಂತಿತ್ತು. ಆತನ ಕಣ್ಣುಗಳು ಒಂದು ರೀತಿಯ ಖಿನ್ನತೆಯನ್ನೋ, ನೋವನ್ನೋ ಅಥವಾ ಮತ್ತಿನ್ನೇನನ್ನೋ ಹೇಳುವಂತಿದ್ದವು. ಮತ್ತೊಮ್ಮೆ ನೀವು ಎಲ್ಲಿ ಹೋಗಬೇಕು ಎಂದು ಕೇಳಿದ. ಆತ ಬಳಸಿದ ಬಹುವಚನದಿಂದ ನನಗೆ ಇರುಸು ಮುರುಸಾಯಿತು. ನಾನು ಯಾತಕ್ಕಾಗಿ ಬಂದೆ ಎಲ್ಲಿ ಹೋಗಬೇಕೆಂಬುದರ ಬಗ್ಗೆ ವಿವರಿಸಿದೆ.

ಆ ಛತ್ರ ಬಹಳ ದೂರವೇನಿಲ್ಲ. ಐದಾರು ನಿಮಿಷಗಳ ನಡಿಗೆ ಸಾಕು. ಮಳೆ ನಿಲ್ಲಲಿ ಮಳೆಯಲ್ಲಿ ನೆಂದರೆ ಆರೋಗ್ಯ ಹದಗೆಡುತ್ತದೆ ಎಂದ. ನನ್ನ ಆರೋಗ್ಯದ ಬಗ್ಗೆ ಇವನಿಗೆಂತಹ ಕಾಳಜಿ. ಇನ್ನೂ ಸರಿಯಾಗಿ ಪರಿಚಯವೂ ಆಗಿಲ್ಲ ಎಂದುಕೊಳ್ಳುವಷ್ಟರಲ್ಲೇ ನನ್ನ ಪರಿಚಯ ಕೇಳಿದ. ನನ್ನ ಪರಿಚಯವಾದ ನಂತರ ನಾನು ಕೇಳದೆ ಇದ್ದರೂ ಆತನೇ ತನ್ನ ಪರಿಚಯವನ್ನು ವಿವರವಾಗಿ ಹೇಳಿಕೊಂಡ.

ಹೆಸರು ನಟರಾಜ್. ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಮೈಗಂಟಿದ ಮಧುಮೇಹ. ಮಗ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್. ಏನು ಕಾರಣವೋ ಮಗ ಸೊಸೆಯ ಜೊತೆ ಸರಿಬರದೆ ಮಗಳ ಮನೆಯಲ್ಲಿ ವಾಸವಾಗಿದ್ದಾನೆ. ಅಲ್ಲೂ ಪರಕೀಯಭಾವ ಕಾಡಿದೆ. ಅನಾಥ ಪ್ರಜ್ಞೆ ಹಿಂಡಿಹಿಪ್ಪೆ ಮಾಡಿದೆ. ತನಗೆ ಅಂತ ಬಿಟ್ಟುಕೊಟ್ಟ ಒಂದು ಕೊಠಡಿಯಲ್ಲಿ ದಿನವೆಲ್ಲಾ ದೂಡಬೇಕು. ಬೇಸರವೆನಿಸಿದಾಗ ಅಲ್ಲಿ ಇಲ್ಲಿ ಅಡ್ಡಾಡುವುದು ಇಲ್ಲವೆ ದೀಪ ಆರಿಸಿ ಮುಸುಗೆಳೆದು ಮಲಗುವುದು. ಮಗಳ ಮನೆಗೆ ಬರುವುದಕ್ಕೂ ಮೊದಲು ಕಿರಿಯ ಸ್ನೇಹಿತನೊಬ್ಬನ ರೂಮಿನಲ್ಲಿ ನಾಲ್ಕೈದು ತಿಂಗಳು ವಾಸವಾಗಿದ್ದುದುಂಟು. ಸಂಬಂಧಿಕರಲ್ಲಿ ಹಗುರ ಆಗ್ತೀವಿ ಅನ್ನೋ ಕಾರಣದಿಂದಲೋ ಏನೋ ಮಗಳೆ ಬಂದು ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದದ್ದು. ಊಟ ಮಾಡಿ… ಕಾಫಿ ತಗೊಳ್ಳಿ… ಇಷ್ಟೆ ಮಾತು. ಮಗನಂತೂ ಹೇಗಿದ್ದೀರ ಎಂದು ಬಂದು ನೋಡಿದ್ದೇ ಇಲ್ಲ.

ಅವನಿಗೆ ತಂದೆ ಇರಲಿ ತಂಗಿಯನ್ನು ನೋಡಬೇಕು ಅಂತ ಅನಿಸಿದ್ದೂ ಇಲ್ಲ. ಇಷ್ಟು ವಿವರ ನನಗೆ ನೀಡುವಷ್ಟರಲ್ಲಿ ಮಳೆ ನಿಂತಿತ್ತು. ಹೊರಡಲು ಮೇಲೆದ್ದಾಗ ಆತನೂ ಜೊತೆಯಲ್ಲಿ ಬರುವೆನೆಂದು ಎದ್ದ. ನಾನು ಬೇಡವೆಂದರೂ ಛತ್ರದವರೆಗೂ ನನ್ನ ಜೊತೆ ಬಂದ. ಅಲ್ಲಿ ನನ್ನ ಫೋನ್ ನಂಬರ್ ಹಾಗೂ ವಿಳಾಸ ಪಡೆದುಕೊಂಡು ಮತ್ತೊಂದು ಸಲ ಸಿಗುವುದಾಗಿ ಹೇಳಿ ಮತ್ತೆ ವಾಪಸ್ ಹೊರಟ. ಬೀದಿ ದೀಪಗಳಡಿಯಲ್ಲಿ ಆ ಮುದಿದೇಹ ಪುಟ್ಟ ಮಗುವಿನ ರೀತಿ ನಿಧಾನ ಹೆಜ್ಜೆ ಹಾಕುತ್ತಾ ಸಾಗುವುದು ಯಾಕೋ ಒಂದು ರೀತಿ ಇಷ್ಟವಾಗಿ ತುಸು ಸಮಯ ಆತನ ಕೆಡಯೇ ದೃಷ್ಟಿನೆಟ್ಟು ನಿಂತೆ. ಬಹುತೇಕ ಆತ ಮತ್ತೆ ಸರ್ಕಲ್ ತುದಿಯನ್ನು ಸೇರುವ ತನಕ.

ಒಂದು ವಾರದ ನಂತರ ಒಂದು ದಿನ ಆತ ನನ್ನ ಆಫೀಸಿಗೆ ಫೋನ್ ಮಾಡಿದ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಬಹುತೇಕ ಆತನನ್ನು ಮರೆತಿದ್ದೆ. ಫೋನಿನಲ್ಲಿ ಮತ್ತೊಮ್ಮೆ ತನ್ನ ಪರಿಚಯವನ್ನು ನೆನಪಿಸಿದ. ಬರುವ ಭಾನುವಾರ ನನ್ನ ಮನೆಗೆ ಬರುವುದಾಗಿ ತಿಳಿಸಿದ. ಮನೆ ಹುಡುಕಲು ಕಷ್ಟವಾಗಬಹುದೆಂದೆನಿಸಿ ಯಶವಂತಪುರ ಬಸ್ ನಿಲ್ದಾಣದ ಬಳಿ ಇರಿ, ಅಲ್ಲಿಗೆ ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದೆ. ಸರಿ ಎಂದವನೆ ಫೋನ್ ಇಟ್ಟ. ಇದೆಂತಹ ಮನುಷ್ಯ ನನ್ನ ಬೆನ್ನಿಗಂಟಿಕೊಂಡನಲ್ಲಾ ಎಂದೆನಿಸಿದರೂ ನೋವುಂಡ ಜೀವ ಎಂಬ ಕನಿಕರ ಭಾವದ ಎಳೆಯೊಂದು ಮನಸ್ಸಿನಲ್ಲಿ ಹುಟ್ಟಿ ಮತ್ತೆ ಸುಮ್ಮನಾದೆ. ಅಂದು ಭಾನುವಾರ ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿ ಬಹಳಷ್ಟು ಯೋಚನೆ ಮಾಡಿ ತಲೆಕೆಡಿಸಿಕೊಂಡೆ. ಹೊಸದಾಗಿ ಬಿಡುಗಡೆಯಾಗಿದ್ದ ಸಿನಿಮಾ ನೋಡಲೆಂದು ಸ್ನೇಹಿತನೊಬ್ಬ ಬರಹೇಳಿದ್ದ. ಮನಸ್ಸು ಆ ಕಡೆಯೇ ಸೆಳೆಯುತ್ತಿತ್ತು. ನನ್ನ ಸ್ನೇಹಿತನ ಸ್ನೇಹಿತನೊಬ್ಬ ಆ ಚಿತ್ರಕ್ಕೆ ಸಹಾಯಕ ನಿದರ್ೇಶಕನಾಗಿ ಕೆಲಸ ನಿರ್ವಹಿಸಿದ್ದ. ಹಾಗಾಗಿ ಆತ ಬಹಳವೇ ಒತ್ತಾಯ ಮಾಡಿದ್ದ. ಎರಡೂ ವಿಷಯಗಳನ್ನು ನನ್ನ ಮನಸ್ಸಿನ ತಕ್ಕಡಿಯಲ್ಲಿ ತೂಗು ಹಾಕಿದೆ. ಯಾಕೋ ಮೊದಲನೆಯದೆ ಸರಿಯೆನಿಸಿ ನಟರಾಜ್ ಸರ್ರನ್ನು ಕರೆದುಕೊಂಡು ಬರಲು ಹೊರಟೆ.

ಅಲ್ಲಿ ಆತ ನನಗಾಗಿ ಕಾಯುತ್ತಿದ್ದ. ಅರ್ಧಗಂಟೆ ಮೊದಲೇ ಬಂದು ಕಾಯುತ್ತಿದ್ದನಂತೆ. ಕಾಫಿ ಕುಡಿಯೋಣವೆ ಎಂದು ಕೇಳಿದ. ಬೇಡ ಮನೆಗೆ ಹೋಗೋಣ ಬನ್ನಿ ಎಂದು ಆತನ ಬೆನ್ನ ಹಿಂದೆ ನನ್ನ ಬಲಗೈ ಹಾಕಿ ಬಸ್ ಬಳಿಗೆ ಕರೆದುಕೊಂಡು ಬಂದೆ. ಒಳಗೆ ಕುಳಿತಿರಿ ಒಂದು ನಿಮಿಷ ಬಂದೆ ಎಂದು ಹೇಳಿ ಅಲ್ಲೇ ಇದ್ದ ಪಬ್ಲಿಕ್ ಟಾಯ್ಲೆಟಿಗೆ ನುಗ್ಗಿ ಮೂತ್ರ ವಿಸರ್ಜನೆ ಮಾಡಿ ಬಸ್ ಬಳಿ ಬಂದೆ. ಆತ ಇನ್ನೂ ಬಸ್ ಹತ್ತಿರಲಿಲ್ಲ. ನಡೆಯಿರಿ ಎಂದು ಅವರನ್ನೂ ಬಸ್ ಹತ್ತಿಸಿ ನಾನು ಒಳಹೊಕ್ಕೆ. ಭಾನುವಾರವಾಗಿದ್ದರಿಂದಲೋ ಏನೋ ಬಸ್ ಖಾಲಿಯಿತ್ತು. ಇಬ್ಬರೂ ಒಂದು ಕಡೆ ಆಸೀನರಾದೆವು. ನಿರ್ವಾಹಕ ನಮ್ಮ ಬಳಿಬರಲು ಆತ ಟಿಕೇಟು ಕೊಳ್ಳಲು ದುಡ್ಡನ್ನು ಹೊರತೆಗೆದ: ನಾನು ನನ್ನ ಬಳಿ ಪಾಸ್ ಇದೆ ಎಂದೆ. ಆತ ದುಡ್ಡನ್ನು ಮತ್ತೆ ಜೇಬಿಗಿಳಿಸಿ ನನ್ನದೂ ಪಾಸ್ ಎಂದು ನಿರ್ವಾಹಕನಿಗೆ ತಿಳಿಸಿದ. ಈ ನಗರದಲ್ಲಿ ಪಾಸ್ ಇದ್ರೆ ಬಹಳ ಅನುಕೂಲ ನೋಡಿ ಅಂತ ಮಾತು ತೆಗೆದ. ತನಗೆ ಬೇಸರವೆನಿಸಿದಾಗಲೆಲ್ಲಾ ಸುಮ್ಮನೆ ಬಸ್ಗಳಲ್ಲಿ ಅಡ್ಡಾಡುತ್ತೇನೆ ಎಂದು ಹೇಳಿದ. ನಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ವಿಚಾರಿಸಿದ. ಬ್ಯಾಚುಲರ್ ಲೈಫೇ ಚೆನ್ನ ಬಿಡ್ರಿ ಎಂದು ಹೇಳಿದ. ಇಬ್ಬರು ಬ್ಯಾಚುಲರ್ಸ್ಗೆ ಅಷ್ಟೊಂದು ದೊಡ್ಡ ಬಾಡಿಗೆ ಮನೆಯ ಅಗತ್ಯವಿತ್ತೆ ಎಂದು ಕೇಳಿದ. ನಾನು ಸುಮ್ಮನೆ ಹೂಂಗುಟ್ಟಿದೆ.

ಈಗಿನ ಪೀಳಿಗೆಯೆ ವಿಚಿತ್ರಾಪ್ಪ. ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ನಾನ್ ಸ್ಟಿಕ್ ಸ್ವಭಾವದವರು. ಈಗ ಇರೋ ಸಿದ್ಧಾಂತ ನಾಳೆಗೆ ಇರುವುದಿಲ್ಲ. ಬಹಳ ಬೇಗ ಬದಲಾಗಿ ಬಿಡ್ತಾರೆ ಅಂದ. ಆತನ ಮಾತಿನ ಮರ್ಮ ನನಗೆ ಅರ್ಥವಾಯ್ತು. ಸುಮ್ಮನೆ ತಲೆಯಾಡಿಸುತ್ತಾ ಇದ್ದೆ. ಅಷ್ಟರಲ್ಲಿ ನಮ್ಮ ಸ್ಟಾಪ್ ಬಂತು. ಅಲ್ಲಿ ಇಳಿದು ನೇರ ನಮ್ಮ ಮನೆ ಕಡೆ ಹೆಜ್ಜೆ ಹಾಕಿದೆವು. ಕೆಲವು ಲ್ಯಾಂಡ್ ಮಾಕರ್್ಗಳನ್ನು ಆತನಿಗೆ ಹೇಳಿದೆ: ಮುಂದಿನಸಲ ಬರುವುದಾದರೆ ಅನುಕೂಲವಾಗಲಿ ಎಂದು. ಆತ ಮತ್ತೊಮ್ಮೆ ಹಿಂದೆ ತಿರುಗಿ ನೋಡಿದ ಓ…. ಹೀಗೋ ಎಂದು ಉದ್ಗರಿಸಿ ನನ್ನ ಜೊತೆ ಹೆಜ್ಜೆ ಹಾಕಿದ. ನೋಡಿ ಇದರಲ್ಲಿ ನಾಲ್ಕನೆ ಅಂತಸ್ತಿನಲ್ಲಿರುವುದೆ ನಾವು ವಾಸವಿರುವ ಮನೆ ಎಂದು ಹೇಳಿದೆ. ಅದಕ್ಕೆ ಆತ ಓ… ತಿರುಪತಿ ಬೆಟ್ಟ ಅನ್ನಿ. ಮುಂದಿನ ಸಲ ತಿರುಪತಿ ತಿಮ್ಮಪ್ಪನನ್ನು ನೋಡಬೇಕೆಂದೆನಿಸಿದಾಗ ನೇರ ನಿಮ್ಮಮನೆಗೆ ಬಂದ್ಬಿಡ್ತೀನಿ ಎಂದು ಜೋಕು ಹೊಡೆದು ನಕ್ಕ. ಆತನ ಹಾಸ್ಯ ಪ್ರಜ್ಞೆಗೆ ನನಗೂ ನಗುಬಂದು ಮನಸಾರೆ ನಕ್ಕೆ. ನಾಲ್ಕನೆ ಅಂತಸ್ತು ಬರುವಷ್ಟರಲ್ಲಿ ಆತ ಏದುಸಿರು ಬಿಡುತ್ತಿದ್ದ.

ಸ್ನೇಹಿತ ಮನೆಯಲ್ಲಿರಲಿಲ್ಲ. ಹೊರಗೆ ಬೀಗ ಹಾಕಿತ್ತು. ನಾನು ಬೆಳಗ್ಗೆ ಹೊರಡುವಾಗ ಅವನು ಊರಿಗೆ ಹೊರಡಲು ಸಿದ್ಧಗೊಳ್ಳುತ್ತಿದ್ದ. ಬೀಗ ತೆಗೆದು ಆತನನ್ನು ಒಳಗೆ ಕರೆದು ಕೂರಲು ಹೇಳಿ ಕಾಫಿ ಮಾಡಲು ಅಡುಗೆ ಮನೆಗೆ ಅಡಿ ಇಟ್ಟೆ. ಆತನೂ ನನ್ನ ಹಿಂದೆ ಬಂದ. ಮನೆ ದೊಡ್ಡದಾಗಿಯೇ ಇದೆ ಎಂದ. ಒಂದು ಸಲ ಮನೆ ಪೂರ ನೋಡುವುದಾಗಿ ಹೇಳಿ ಅಡುಗೆ ಮನೆಯಿಂದ ಮತ್ತೆ ಹೊರಗಡಿಯಿಟ್ಟ. ನಾನು ಕಾಫಿ ಮಾಡಿಕೊಂಡು ಬರುವಷ್ಟರಲ್ಲಿ ಆತ ನಾನು ಸಂಗ್ರಹಿಸಿದ್ದ ಪುಸ್ತಕಗಳ ಕಪಾಟನ್ನು ನೋಡುತ್ತಿದ್ದ. ಸರ್ ಕಾಫಿ ತೆಗೆದುಕೊಳ್ಳಿ ಎಂದು ಆತನ ಕೈಗಿತ್ತೆ. ಆತ ಕಾಫಿ ಹೀರುತ್ತಾ ನೀವು ಸಾಹೀತಿನಾ ಎಂದು ಕೇಳಿದ. ಅದಕ್ಕೆ ನಾನೂ ಸಾಹಿತಿಯೇನೂ ಅಲ್ಲ ಆಗಾಗ ಕವನ ಬರೀತಾ ಇರ್ತೀನಿ, ಅಪರೂಪಕ್ಕೊಮ್ಮೆ ಕತೆ ಬರೀತಿನಿ ಎಂದು ಉತ್ತರಿಸುತ್ತಿದ್ದಂತೆಯೇ ಆತ ತನಗೆ ಈ ಕಲ್ಪನೆ ಕನಸು ಇವೆಲ್ಲಾ ಆಗಲ್ಲ. ತಾನೊಬ್ಬ ಪಕ್ಕಾ ಪ್ರ್ಯಾಕ್ಟಿಕಲ್ ಮನುಷ್ಯ ಎಂದ. ಈ ಪುಸ್ತಕಗಳು ಮನುಷ್ಯನನ್ನು ಸೋಂಬೇರಿಯನ್ನಾಗಿ ಮಾಡುತ್ತವಂತೆ. ಯಾವುದೋ ಒಬ್ಬ ಮನುಷ್ಯನ ಬವಣೆಯನ್ನು ಯೋಚನೆಗಳನ್ನು ಮತ್ತೊಬ್ಬ ಓದಿ ಅದರಿಂದಾಗುವ ಲಾಭವಾದರು ಏನು.

ಅದೇ ಸಮಯವನ್ನು ಬೇರೆ ಕೆಲಸದಲ್ಲಿ ತೊಡಗಿಸಿದರೆ ಮನಸ್ಸಿಗೆ ನೆಮ್ಮದೀನು ಸಿಗುತ್ತೆ, ಜೀವನಾನುಭವನೂ ಸಿಗುತ್ತೆ. ನಿಜವಾಗಿಯೂ ಸುಳ್ಳುಗಳು ಇವತ್ತಿಗೂ ಜೀವಂತವಾಗಿರೋದು ಈ ಗ್ರಂಥಗಳಿಂದ. ಹೀಗೆ ಆತನ ವಿಚಾರಲಹರಿ ಸಾಗುತ್ತಲೇ ಇತ್ತು. ವಿಚಿತ್ರ ಮನುಷ್ಯ ಎನಿಸಿತು. ಆತನ ಮಾತನ್ನು ತುಂಡರಿಸಿ ವೈಯಕ್ತಿಕ ಜೀವನದ ಬಗ್ಗೆ ಕೇಳಿದೆ. ಭಾವುಕನಾದ: ಕಣ್ಣಂಚಿಗೆ ನೀರು ಬಂತೇನೊ ಎನ್ನುವಷ್ಟರಮಟ್ಟಿಗೆ. ಮತ್ತೆ ಮಗನನ್ನು ಒಂದಷ್ಟು ಬೈದ. ಮಗಳನ್ನೂ ಬೈದ. ಈ ನಗರದಲ್ಲಿರೋರೆಲ್ಲಾ ಕಾಂಕ್ರೀಟ್ ಹುಳಗಳು ಎಂದು ಶಪಿಸಿದ. ‘ಕಾಂಕ್ರೀಟ್ ಹುಳಗಳು’ ಎಂತ ಅದ್ಭತವಾದ ಕಲ್ಪನೆ. ಕಲ್ಪನೆಗಳನ್ನು ದ್ವೇಷಿಸುವವನಲ್ಲೂ ಇಂತಹ ಕಲ್ಪನೆಯೇ? ಮನಸು ಮಾಡಿದ್ದರೆ ತಾನು ನಂಬಿದ ಸಿದ್ಧಾಂತವನ್ನು ಬಿಟ್ಟು ಹೊರಬಂದಿದ್ದರೆ ತನೆಲ್ಲಾ ಜೀವನಾನುಭವವನ್ನು ಧಾರೆ ಎರೆದಿದ್ದರೆ ಆತನೂ ಉತ್ತಮ ಸಾಹಿತಿಯಾಗುತ್ತಿದ್ದನೇನೋ? ಆದರೆ ಜಿಗುಟು ಮನುಷ್ಯ. ತನ್ನದೇ ರೀತಿ ಸರಿ ಎನ್ನುವ ಸ್ವಭಾವದವ. ಮಕ್ಕಳಿಗೂ ಆತನಿಗೂ ವಿರಸ ಉಂಟಾಗಲು, ಅಂತರ ಹೆಚ್ಚಲು ಕಾರಣವೇನೆಂಬುದು ನನ್ನ ಕಣ್ಣಿಗೆ ಸ್ಪಷ್ಟವಾಗತೊಡಗಿತು. ಆತ ಮತ್ತೆ ಮುಂದುವರೆಸಿದ. ‘ಇವರಿಗೆ ಸಂಬಂಧಗಳು ಮುಖ್ಯ ಆಗೋಲ್ಲ, ಮಾನವೀಯತೆ ಮುಖ್ಯ ಆಗೋಲ್ಲ, ಅಂತಃಕರಣದ ಮೂಲವೇ ಇವರಲ್ಲಿಲ್ಲ. ಮಕ್ಕಳನ್ನು ಬೇಬಿಕೇರ್ಗೆ ಕಳಿಸ್ತಾರೆ, ಹೆತ್ತವರನ್ನು ವೃದ್ಧಾಶ್ರಮಕ್ಕೆ. ಇವರು ಕ್ಲಬ್ಬು, ಬಾರು, ಪಾರ್ಟಿ ಅಂತ ಸುತ್ತಾಡ್ತಾರೆ. ಒಂದು ಕುಟುಂಬದ ವಾತಾವರಣ ಎಲ್ಲಿದೆ ಹೇಳಿ? ಮಣ್ಣು ಹುಳಕ್ಕೆ ಜೀವ ಇರುತ್ತೆ, ಸಗಣಿ ಹುಳಕ್ಕೂ ಜೀವ ಇರುತ್ತೆ. ಅವುಗಳ ಕಾರ್ಯಕ್ಕೆ ಸಾರ್ಥಕತೆ ದಕ್ಕುತ್ತದೆ. ಆದ್ರೆ ಈ ಕಾಂಕ್ರೀಟ್ ಹುಳಗಳು ಇವೆಯಲ್ಲಾ ಇವಕ್ಕೆ ಜೀವವೇ ಇಲ್ಲ. ಇವುಗಳ ಕೆಲಸ ಏನಿದ್ರೂ ಬರೀ ಗೋಡೆ ಕಟ್ಟೋದು…’ ಇಷ್ಟು ಹೇಳಿ ಕಣ್ಣಂಚಿಗೆ ಬಂದ ನೀರನ್ನು ಕರವಸ್ತ್ರದಿಂದ ಒರೆಸಿಕೊಂಡ.

ಈ ಮನುಷ್ಯ ನನಗಿಂತಲೂ ಚೆನ್ನಾಗಿ ಯೋಚನೆ ಮಾಡುತ್ತಾನಲ್ಲ ಅಂದುಕೊಳ್ಳುವಷ್ಟರಲ್ಲೇ ‘ಅದಕ್ಕೆ ರಮೇಶ ಒಂದು ನಿರ್ಧಾರಕ್ಕೆ ಬಂದಿದ್ದೀನಿ… ಅವರ ಮನೆಯಲ್ಲಿ ಇರುವುದೇ ಬೇಡಾಂತ’ ಎಂದು ಮಾತು ನಿಲ್ಲಿಸಿದ. ಅರೆ ಈ ಮನುಷ್ಯ ಮತ್ತೆಲ್ಲಿ ಹೋಗುತ್ತಾನೆ. ಒಬ್ಬನೇ ಈ ಇಳಿವಯಸ್ಸಿನಲ್ಲಿ ಹೇಗೆ ಜೀವನ ಸಾಗಿಸುತ್ತಾನೆ ಎಂಬ ಯೋಚನೆಯಾಗುತ್ತಲೇ ಆತನನ್ನು ಕೇಳಿದೆ. ಅದಕ್ಕೆ ಆತನ ಉತ್ತರ ಕೇಳಿ ನಿಜವಾಗಿಯೂ ನಾನು ದಂಗಾದೆ. ನನ್ನ ಮನೆಗೆ ಬರುತ್ತಾನಂತೆ. ಇದೆಲ್ಲಿಯ ಕರ್ಮ, ದಾರಿಯಲ್ಲಿ ಹೋಗೋ ಮಾರಿಯನ್ನು ಮನೇಲಿ ಇಟ್ಟುಕೊಂಡ ಹಾಗಾಗುವುದಂತೂ ಖಂಡಿತ. ಆತನ ಮಾತಿಗೆ ಮತ್ತಷ್ಟನ್ನೂ ಸೇರಿಸಿದ್ದ. ಒಳ್ಳೆಯ ಅಡುಗೆ ಭಟ್ಟನಂತೆ, ತನ್ನ ಕೆಲಸಾನ ತಾನೇ ಮಾಡಿಕೊಳ್ಳುತ್ತಾನಂತೆ. ಒಂದಷ್ಟು ಪೆನ್ಷನ್ ಬರುತ್ತದಂತೆ, ಆತನ ಖುಷಿಗೆ ನಾವೇನೂ ತಲೆಕೆಡಿಸಿಕೊಳ್ಳಬೇಕಾಗಿಲ್ಲವಂತೆ. ಮತ್ತೂ ಒಂದಷ್ಟು ಏನೇನೋ ಹೇಳಿದ. ಯಾಕೋ ನನಗೆ ಸುತಾರಾಂ ಆತನ ಮಾತು ಹಿಡಿಸಲಿಲ್ಲ. ನಾಳೆ ಇಲ್ಲಿಗೆ ಬಂದು ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ನೋಡಿಕೊಳ್ಳುವವರು? ಜವಾಬ್ದಾರಿ ಯಾರದು? ಸುಮ್ಮನೆ ನಮಗೆ ನಾವೇ ತೊಂದರೆಗೆ ಜಾರಿದ ಹಾಗಾಗುತ್ತೆ.

ನನ್ನ ಸ್ವಾರ್ಥಪರ ಯೋಚನೆ ಖಡಾಖಂಡಿತವಾಗಿ ಬೇಡ ಎಂದಿತ್ತು. ಇನ್ನೊಬ್ಬರ ಸಂಕಷ್ಟವನ್ನು ಬಗೆಹರಿಸೋ… ಇನ್ನೊಬ್ಬರನ್ನು ಉದ್ಧಾರ ಮಾಡೋ ಮಾತು ಬಿಟ್ಟುಬಿಡು ಎಂದಿತ್ತು. ಆದರೂ ನೇರವಾಗಿ ಬೇಡ ಎನ್ನಲು ಮುಜಗರವಾಗಿ ನನ್ನ ಸ್ನೇಹಿತನನ್ನೂ ಕೇಳಬೇಕಾಗುತ್ತೆ. ಆತ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ ಎಂದೆ. ನಿಮ್ಮ ಸ್ನೇಹಿತನ ಅಭಿಪ್ರಾಯ ಕೇಳಿರಿ ಎರಡು ದಿನ ಬಿಟ್ಟು ಫೋನ್ ಮಾಡುತ್ತೇನೆ. ಬಹುಶಃ ಆತ ಒಪ್ಪಬಹುದು ಎಂದು ಹೇಳಿ ಹೊರಡಲನುವಾದ. ಊಟ ಮಾಡಿಕೊಂಡು ಹೋಗಬಹುದಲ್ಲ ಎಂದು ಒತ್ತಾಯಿಸಿದೆ. ಆತನಿಗೆ ದಿನಾ ಮೂರು ಹೊತ್ತು ತಿಂದು ಅರಗಿಸಿಕೊಳ್ಳುವಷ್ಟು ಶಕ್ತಿ ಈಗಿಲ್ಲವಂತೆ. ಹಾಗಾಗಿ ನನ್ನ ಒತ್ತಾಯವನ್ನು ತಿರಸ್ಕರಿಸಿ ಹೊರಡಲನುವಾದ. ನಾನು ಬಸ್ ನಿಲ್ದಾಣದವರೆಗೂ ಜೊತೆಯಲ್ಲಿ ಹೋಗಿ ಬಸ್ ಹತ್ತಿಸಿ ಬಂದೆ. ಬರುವಾಗ ಎರಡು ದಿವಸ ಬಿಟ್ಟು ಫೋನ್ ಮಾಡುತ್ತೇನೆ ವಿಚಾರಿಸಿರಿ ಎಂದು ಮತ್ತೊಮ್ಮೆ ಜ್ಞಾಪಿಸಿದ.

ಇದಾದ ನಂತರ ಆ ವಿಷಯವನ್ನು ನನ್ನ ಸ್ನೇಹಿತನ ಬಳಿ ಪ್ರಸ್ತಾಪಿಸಲೇ ಇಲ್ಲ. ನನ್ನ ಬಳಿ ಉತ್ತರ ಸಿದ್ಧವಾಗಿತ್ತು. ಎರಡು ದಿವಸಗಳ ನಂತರ ಹೇಳಿದಂತೆ ಆತನ ಫೋನ್ ಬಂತು. ನಿಮ್ಮ ಸ್ನೇಹಿತರು ಏನು ಹೇಳುತ್ತಾರೆ ಎಂದು ಕೇಳಿದ. ಅದಕ್ಕೆ ಕ್ಷಮಿಸಿ ಸಾರ್ ಅವನಿಗೆ ಇಷ್ಟ ಇಲ್ಲ. ನೀವು ಬರುವುದಾದರೆ ಅವನು ಮನೆ ಬಿಟ್ಟು ಹೋಗುತ್ತಾನಂತೆ… ಸರ್ ನಿಮಗೊಂದು ಅಡ್ವೈಸ್. ನೀವ್ಯಾಕೆ ವೃದ್ಧಾಶ್ರಮಕ್ಕೆ ಸೇರಿಕೊಳ್ಳಬಾರದು ಎಂದು ಕೇಳಿದೆ. ಸ್ವಲ್ಪ ಹೊತ್ತು ಸುಮ್ಮನಿದ್ದು ಆತ ಮೆಲುದನಿಯಲ್ಲಿ ಹೋಗಲಿ ಬಿಡಿ ನನ್ನಿಂದ ಅವರಿಗ್ಯಾಕೆ ತೊಂದರೆ… ಎಂದು ಹೇಳಿ ಫೋನ್ ಇಟ್ಟು ಬಿಟ್ಟ. ಅದಾದ ಮೇಲೆ ಮತ್ತೆಂದೂ ನನಗೆ ಸಿಗಲಿಲ್ಲ. ಫೋನಾಯಿಸಲೂ ಇಲ್ಲ. ಮಗಳ ಮನೆಯ ಫೋನ್ ನಂಬರ್ ನನಗೆ ಕೊಟ್ಟಿದ್ದ. ನಾನು ಫೋನ್ ಮಾಡುವ ರಿಸ್ಕನ್ನು ತೆಗೆದುಕೊಳ್ಳಬಯಸಲಿಲ್ಲ.

ಇದಾಗಿ ಸುಮಾರು ಒಂದೂವರೆ ವರ್ಷದ ಮೇಲಾಗಿದೆ. ಈಗ ನಟರಾಜ್ ಸರ್ ನನ್ನನ್ನು ಕಾಡತೊಡಗಿದ್ದಾರೆ. ಕನಸಿನಲ್ಲಿ ಪದೇ ಪದೇ ಬರತೊಡಗಿದ್ದಾರೆ. ಎಲ್ಲೋ ಮೂಲೆಯಲ್ಲಿ ಒಂದು ರೀತಿಯ ಪಾಪಪ್ರಜ್ಞೆ ಚುಚ್ಚಲು ಶುರುವಾಗಿದೆ. ಆತನ ಜೊತೆ ಮಾತನಾಡಬೇಕೇನಿಸುತ್ತದೆ. ಆದರೆ ಒಂದು ರೀತಿಯ ಅಳುಕು. ಇರುವ ವಿಷಯವನ್ನು ಆಪ್ತ ಸ್ನೇಹಿತನೊಬ್ಬನಿಗೆ ತಿಳಿಸಿದೆ. ಅವನ ಸಲಹೆಯಂತೆ ಧೈರ್ಯಮಾಡಿ ಅವರು ಕೊಟ್ಟಿದ್ದ ನಂಬರಿಗೆ ಫೋನ್ ಮಾಡಿದೆ. ಆ ಕಡೆಯಿಂದ ಯಾರೋ ಹೆಂಗಸರು ಫೋನ್ ತೆಗೆದುಕೊಂಡರು. ನಟರಾಜ್ ಸರ್ ಇದಾರ ಎಂದು ಕೇಳಿದೆ. ಆ ಕಡೆಯಿಂದ ಅವರು ಸತ್ತು ಆಗಲೇ ಹತ್ತಿರತ್ತಿರ ಒಂದೂವರೆ ವರ್ಷವಾಯಿತು ಎಂಬ ಉತ್ತರ ಬಂತು. ಅಷ್ಟೆ ಲೈನ್ ಕಟ್ ಮಾಡಿ ನಿಧಾನವಾಗಿ ನನ್ನ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ನಾಲ್ಕನೆ ಅಂತಸ್ತಿಗೆ ಏರುವಷ್ಟರಲ್ಲಿ ನನಗೆ ಮೊದಲ ಬಾರಿಗೆ ಏದುಸಿರು ಬಂತು. ಸಾವರಿಸಿಕೊಂಡು ಬೀಗ ತೆಗೆದು ಬಾಗಿಲು ತಳ್ಳಿ ಒಳಬಂದು ಮತ್ತೆ ಬಾಗಿಲು ಮುಚ್ಚಿ ಒಳಗಿನಿಂದ ಚಿಲಕ ಹಾಕಿ ಸರ್ ಈ ಕಾಂಕ್ರೀಟ್ ಹುಳವನ್ನು ಸಾಧ್ಯವಾದರೆ ಕ್ಷಮಿಸಿಬಿಡಿ ಎಂದು ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡೆ.

 

‍ಲೇಖಕರು avadhi

17 May, 2013

2 Comments

  1. ಹನುಮಂತ ಹಾಲಿಗೇರಿ

    ಗೆಳೆಯ ಚೀಮನಹಳ್ಳಿ ರಮೇಶ್ ಅವರ ಹಸ್ತಬಲಿ ಕಥಾಸಂಕಲನದ 12 ಕಥೆಗಳನ್ನು ಪ್ರಕಟವಾಗುವ ಮುನ್ನವೇ ಓದಿದ ಖುಷಿ ನನ್ನದು. ರಮೇಶ್ ಎಲ್ಲ ಕಥೆಗಳನ್ನು ನನಗೆ ಮೇಯ್ಲ್ ಮಾಡಿ ಅವುಗಳ ಬಗ್ಗೆ ನಿಮಗೆ ತಿಳಿದಿದ್ದನ್ನು ಬರಿರಿ ಹನುಮಂತ ಎಂದಿದ್ದರು. ನಾನು ಸಂಕೋಚದಿಂದಲೆ ಬರೆದು ಕಳಿಸಿದ್ದೆ. ಅದನ್ನ ಅವರು ಮುನ್ನುಡಿಯಾಗಿ ಬಳಸಕೊಳ್ಳುತ್ತೇನೆ ಎಂದಾಗ ಬೇಡವೇ ಬೇಡ. ಬೇಕಾದರೆ ಒಂದು ಪತ್ರದಂತೆ ಬಳಸಿಕೊಳ್ಳಿ. ಯಾರಾದರೂ ದೊಡ್ಡವರ ಹತ್ತಿರ ಬರೆಸಿಕೊಳ್ಳಿ ಎಂದಿದ್ದೆ. ಅದಕ್ಕವರು ಇಲ್ಲ ನನಗೆ ನನ್ನ ವಾರಿಗೆಯ ಹುಡುಗರೆ ಆಗಬೇಕು ಎಂದು ನನ್ನ ಬರಹವನ್ನು ಮುನ್ನಡಿಯಾಗಿಯೇ ಬಳಸಿಕೊಂಡಿದ್ದಾರೆ. ಇಲ್ಲಿನ ಕಾಂಕ್ರೀಟ ಹುಳ ಕಥೆಯಂತೆಯೇ ಇಲ್ಲಿನ ಎಲ್ಲ ಕಥೆಗಳು ಮನುಷ್ಯನ ಒಳಗೊಂದು ಹೊರಗೊಂದು ಸ್ವಭಾವಗಳನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿವೆ.

  2. d s ramaswamy

    congrats Ramesh,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading