ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿರಸ್ಮರಣೆಯೊಂದೇ ಸಾಲದು..

ಯಮುನಾ ಗಾಂವ್ಕರ್ 

ಎದೆ ಝಲ್ಲೆನಿಸುವ ಗುಂಡಿನ ಧ್ವನಿ
ಹುಡುಕುತ್ತಿತ್ತು ಕನಸುಗಾರರ ಹಟ್ಟಿ…
ನ್ಯಾಯಾಸ್ಥಾನ-ವಧಾಸ್ಥಾನ ಒಂದಾದ ಗಳಿಗೆ
ಕೂಡುದೊಡ್ಡಿಗಳ ಜೈಲುಸಂಧಿಯಿಂದ
-ಕಣ್ತಪ್ಪಿಸಿ ಹೊರಬಿದ್ದ ಕಿರಣ ನೀವೇ…

ಕುಣಿಕೆಯ ಖಾಲಿ ಜಾಗ ಕಂಡಾಗೆಲ್ಲ
ದೇವರು, ಜಮೀನ್ದಾರ, ಕೋರ್ಟು ಹೇಗೆ ಮರೆಯಲಿ?
ನಿಮ್ಮ ಮುನ್ನುಡಿಯೇ
ಕಯ್ಯೂರ ಉತ್ತುಂಗ ಮೌನ.. ಸಿಡಿಲು
ಸಹಸ್ರ ಕವಿತೆಗಳ ನಿರರ್ಗಳ ಸಾಲುಸಾಲು
ನೆನಪಿನ ಮೆರವಣಿಗೆಯೇ ನೀವು ….

ಗಲ್ಲಿನುರುಳ ಗಂಟು ಬಿಡಿಸಿದ
ಭಗತ್ ಸಿಂಗ್ ಸಂತತಿಯ ಹೊಳಪು
ಕಣ್ಣ-ಕೋರರನರಸುತ್ತ… ಚಿರುಕುಂಡ, ಅಬೂಬಕ್ಕರ್, ಅಪ್ಪು
ಘೋಷಣೆಗಳ ಗುಂಗು ಪೊಡವರ ಕುಞ್ಞಂಬು
ತೇಜಸ್ವಿನಿ-ಚಂದ್ರಗಿರಿಯರ ಸಮಾಗಮದಂತೆ
ಹಗಲ ಬೆಳಕು-ಬೆಳ್ದಿಂಗಳ ಬೆಳಕು ಸಂಧಿಸಿದಂತೆ

ಕಯ್ಯೂರ ವೀರಗಾಥಾ ನಾಯಕರಿವರು
ನಾಯಕ ನಟರಲ್ಲ; ಮಗದೊಮ್ಮೆ ನಟಿಸಲು
ದುರಂತ ನಾಯಕರಲ್ಲ; ದುಡ್ಡಿದ್ದವರ ದುರಂತ ಪ್ರತೀಕ!

ತುತ್ತು ಬಾಯ್ಗಿಕ್ಕುವ ಮುನ್ನ ದೀಪವಾರಿಸುವ ಗೇಣಿ-ಜನ್ಮಿ
-ಗಳ ಕುಣಿಕೆ ಹರಿದ ಗುಡಿಸಿಲ ಧ್ವನಿ ಆ ಮಾಸ್ತರ್
ಕಲಿಸಿದ್ದು… ಬೆತ್ತ ಬಾರುಕೋಲಿಗೆ ಉತ್ತರ
‘ಇಂಕ್ವಿಲಾಬ್ ಜಿಂದಾಬಾದ್’

ಚಳುವಳಿಯ ಕಾವು ಕಾದಿಟ್ಟ ಕುಡಿಗಳು ನಾಲ್ಕಲ್ಲ ನೀವು
ಆರದ ಕಿಡಿಗಳು ನಿಮಗಿಲ್ಲ ಸೋಲು!
ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದಾಗ ಉಚ್ಛರಿಸಿದ್ದು
ಇಂದಿಗೂ ರಿಂಗಣಿಸುತ್ತಿದೆ… ಸಂಗಾತಿ
ಕಾಲ ಉರುಳಿ ಉರುಳಾಗುವ ಹೊತ್ತು ಈಗಲೂ ಸನ್ನಿಹಿತವೇ…..

ನಿಮ್ಮ ಚಿತ್ರಕಾವ್ಯಿಸಲಾಗದಷ್ಟು ಕಣ್ಣೀರು ಸೋತಿದೆ ..ಸಂಗಾತಿ
ನನ್ನೊಳೆಂದೂ ಬತ್ತದ ತೇಜಸ್ಸಿನ ಅಂತರ್ಜಲ ಸೃಷ್ಟಿ ನೀವೇ…
ನಿಮ್ಮ ಸ್ಮರಣೆಯೊಂದೇ ಸಾಲದು. …

‍ಲೇಖಕರು avadhi

29 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading