-ಜಯರಾಮಾಚಾರಿ
ಸದಾ ಬೇರೆಯವರ ಸಂಸಾರದ ಬಗ್ಗೆ ಕುತೂಹಲ ಇಟ್ಟುಕೊಳ್ಳುವ ಮಾಧ್ಯಮದ ಮುಂದೆ ಅವನು ತನ್ನ ಸಂಸಾರದ ತೂತುಗಳನ್ನು ತಿಪ್ಪೆ ಸಾರುತ್ತಿದ್ದ. ಲೈವ್ ಪ್ರೊಗ್ರಾಮ್. ಎಡಕ್ಕೆ ಚಿಕ್ಕವನಿದ್ದ ಬಲಕ್ಕೆ ದೊಡ್ಡವನಿದ್ದ. ಅತ್ತ ಕಡೆ ಚಿನ್ನಿಯ ಧ್ವನಿ ‘ಹು ಹೇಳು…’ ಅವಳ ಧ್ವನಿ ಕೇಳಿದ ಕೂಡಲೇ ಅವನು ಮಕ್ಕಳಿಗೆ ಸಿಗ್ನಲ್ ಕೊಟ್ಟ ‘ಅಮ್ಮ… ಅಮ್ಮ…’ ಮಕ್ಳು ಶುರು ಹಚ್ಚಿಕೊಂಡವು ‘ಅಮ್ಮಾ ಬಾ ಮಾ ಅಮ್ಮಾ ಬಾ ಮಾ’. ಅವನು ಇದಕ್ಕೆ ಕಾದವನಂತೆ ಶುರು ಹಚ್ಚಿಕೊಂಡ ‘ಚಿನ್ನಿ…ಬಂದ್ಬುಡು ಚಿನ್ನಿ…ನಿನ್ನ ರಾಣಿ ತಾರಾ ನೋಡ್ಕೋತೀನಿ’
ಮೆಸೇಜು ಬಂತು. ‘ಚಿನ್ನಿ’.
ಟಿವಿಯಲ್ಲಿ ಯಾರದೋ ಚಿನ್ನಿಯ ಕತೆ ಕೇಳುತ್ತ ಕೂತ ಮಿಲಿಂದನಿಗೆ ತನ್ನ ‘ಚಿನ್ನಿ’ ಮೆಸೇಜು ನೋಡಿ ಖುಷಿಯಾಗಿ ಮೆಸೇಜು ತೆಗೆಯೋಣ ಅನ್ನುವಷ್ಟರಲ್ಲಿ ಹೆಂಡತಿ ಪಕ್ಕ ಬಂದು ನಿಂತಿದ್ದಳು. ಮೆಸೇಜು ತೆರೆಯಲು ಹೋದವನು ಹೆಂಡತಿಯ ನೆರಳಿಗೆ ಬೆಚ್ಚಿ ನೋಡಿದ. ಅಮ್ಮನ ಮನೆಗೆ ಹೋಗಲು ರೆಡಿಯಾಗಿ ನಿಂತ ಹೆಂಡತಿ ‘ದೋಸೆ ಮಾಡಿವ್ನಿರಿ ಚಟ್ನಿ ಹಾಕೊಂಡ್ ತಿನ್ನಿ, ಮುಂಜಾನೆ ಬರ್ತೀನಿ’ ಎಂದು ಅಮ್ಮನ ಮನೆಗೆ ಹೊರಟು ನಿಂತಿದ್ದಳು. ‘ಹ್ಮ್ಮ್…ಹುಷಾರು…’ ಎಂದಷ್ಟೇ ಹೇಳಿ ಅಡುಗೆ ಮನೆಗೆ ನುಗ್ಗಿದ.
ಹೆಂಡತಿ ಬಾಗಿಲು ಮುಚ್ಚಿದ,
ಚಪ್ಪಲಿ ಮೆಟ್ಟಿಕೊಂಡ,
ಆಟೋ ಸದ್ದು,
ಒಟಿಪಿ ಹೇಳಿದ್ದು,
ಆಟೋ ಹೊರಟ ಸದ್ದಿಗೆ ಖುಶಿಯಾಗಿ ಮೊಬೈಲ್ ತೆಗೆದು ಚಿನ್ನಿಗೆ ಮೆಸೇಜು ಮಾಡಿದ ‘ಚಿನ್ನಿ ಬಂದ್ಬುಡು ಚಿನ್ನಿ…’
—
ಚಿನ್ನಿ ಮನೆಗೆ ಬರಲು ಇನ್ನೂ ಒಂದು ಗಂಟೆಯಾದರೂ ಬೇಕು ಅಷ್ಟೊತ್ತಿಗೆ ಮುಖಕ್ಕೆ ನೀರು ಎರಚಿಕೊಂಡು ಬ್ರಶ್ ಮಾಡಿ ದೋಸೆ ಚಪ್ಪರಿಸಿದ. ಶೇವ್ ಮಾಡಬೇಕು ಎಂದುಕೊಂಡವನಿಗೆ ‘ಶೇವ್ ಮಾಡಬೇಡ ನಿನ್ ಮೀಸೆ ಗಡ್ಡ ಚುಚ್ಚುದ್ರೆ ಒಂದ್ ತರ ಕಿಕ್’ ಎಂದಿದ್ದಳು ಚಿನ್ನಿ. ನೆನಪಾಯಿತು.
ಮೆಸೇಜ್.
ರಪ್ ಎಂದು ತೆಗೆದು ನೋಡಿದ. ವೈಫಿ ಮೆಸೇಜು. ‘ತಿಂದ್ಯಾ?’. ‘ತಿಂದೆ’. ‘ರೀಚ್ ಆದೆ ನಾನು’.’ಸರಿ’.’ಲವ್ ಯೂ’.’ಲವ್ ಯೂ ಟೂ’.
ಮನೇಲಿದ್ರೆ ಲವ್ವು ಪವ್ವು ಇಲ್ಲ ಹೊರಡಗೆ ಇದ್ರೆ ಲವ್ವು ಮಿಸ್ ಯೂ ಎಂತದು ಇಲ್ಲ, ಹೊರಗಡೆ ಹೋದಾಗ ಡೌಟ್ ಈ ನನ್ಮಗ ಯಾವಾಗಲೂ ಮೊಬೈಲಿಗೆ ಅಂಟಿಕೊಂಡು ಇರ್ತಾನೆ, ಮೆಸೇಜು ಬಂದ್ರೆ ನಗ್ತಾ ಕುಟ್ಟಿ ಬಿಸಾಕ್ತಾನೆ, ರಾತ್ರಿ ಮಲಗೋದು ಲೇಟು, ಕಾಲ್ ಮಾಡುದ್ರೆ ಬ್ಯುಸಿ. ಅವಳ ಎಲ್ಲ ಅನುಮಾನಕ್ಕೂ ನಿಜವೇನೋ ಎಂಬಂತೆ ಗುಪ್ತ್ ಗುಪ್ತ್ ಆಗಿದ್ದ ಮಿಲಿಂದ್. ತಾನು ಹೊರಗಡೆ ಬಂದಾಗ ಎಲ್ಲಿ ಮರೆತುಬಿಡ್ತಾನೋ ಎನ್ನುವುದಕ್ಕಿಂತ ನನ್ನ ಕಣ್ಣು ಅವನ ಮೇಲಿದೆ ಏನು ನೆನಪಿರಲಿ ಎಂದು ಮೆಸೇಜು ಮಾಡಿ ಹಿಂಸೆ ಇಕ್ಕುತ್ತಾಳೆ ಮಿಲಿಂದನ ವೈಫಿ ಪವಿತ್ರ.
ಮನೆಯಿಂದ ಹೊರಗಡೆ ಬಂದರೆ ಅವಳಿಗೂ ಸ್ವಲ್ಪ ನೆಮ್ಮದಿ. ಹಳೆ ಹುಡುಗ ‘ರಾಜೇಶ್ವರಿ ಸ್ಕೂಲ್’ ಎಂದು ಇನ್ನೂ ಹುಡುಗಿ ಹೆಸರಲ್ಲಿ ಟಚ್ ಅಲ್ಲಿದ್ದಾನೆ. ಅವಳು ಹೊರಗಡೆ ಬಂದಾಗ ಎಲ್ಲೋ ಆರ್ಕೈವ್ ಅಲ್ಲಿ ನರಳಾಡುತ್ತಿರುವ ಅವನ ಮೆಸೇಜುಗಳಿಗೆ ಹುಸಿ ಜೀವದ ಭರವಸೆ ತುಂಬಿ ಮತ್ತೆ ಮನೆಗೆ ಹೋಗುವಾಗ ಆರ್ಕೈವ್ ಎಂಬ ಜೀವ ಸಮಾಧಿಗೆ ಅವನ ಮೆಸೇಜು ಮಲಗಿಸಿ ಸುಮ್ಮನಾಗಿಬಿಡುತ್ತಾಳೆ. ಮೂರನೇ ಸಲ ಸಿಗಾಕಿಕೊಂಡ್ರೆ ಮಿಲಿಂದ್ ಗತಿ ಕಾಣಿಸ್ತಾನೆ ಅವಳಿಗೂ ಗೊತ್ತು.
—
‘ಮೇಡಂ ಇವಳೇನೂ ಸಾಮಾನ್ಯ ಅಲ್ಲ. ಈ ಮುಂಚೆ ಇವಳಿಗೆ ನಿಶಾಂತ್ ಅಂತ ಒಬ್ಬ ಇದ್ದ ಆಮೇಲೆ ಪ್ರಶಾಂತ್ ಅಂತ ಒಬ್ಬ ಇದ್ದ ಆಮೇಲೆ ಸುಶಾಂತ್ ಒಬ್ಬ ಇದ್ದ. ನಾನೇನೂ ಕಮ್ಮಿ ಮಾಡಿದ್ದೆ ಮೇಡಂ ರಾಣಿ ತರ ನೋಡ್ಕಂಡೆ. ಬಿಟ್ ಹೋದ್ಲು ಮೇಡಂ. ಬರಾಕ್ ಹೇಳಿ ಮೇಡಂ’ ಟಿವಿಯಲ್ಲಿ ಇನ್ನೂ ‘ಚಿನ್ನಿ ಬಂದ್ಬುಡು ಚಿನ್ನಿ’ ಎಪಿಸೋಡು ಓಡುತ್ತಿತ್ತು. ಇಡೀ ದಿನವೆಲ್ಲ ಓಡುಸ್ತಾ ಇದ್ದಾರೆ. ಜರ್ನಲಿಸಂ ಈ ಮಟ್ಟಿಗೆ ಬಂದು ನಿಂತುಬಿಟ್ಟಿದೆ.
‘ಅಲಾ ನೀವು ಅವರು ಮದ್ವೆ ಇದ್ದಾಗ ಲವ್ ಮಾಡಿ ಓಡುಸ್ಕೊಂಡ್ ಬಂದ್ರಿ, ಈಗ ಅವರು ನಿಮ್ಮನ್ನ ಬಿಟ್ಟು ಇನ್ನೊಬ್ರು ಜೊತೆ ಓಡಿ ಹೋಗಿದ್ದಾಳೆ, ನೆಕ್ಸ್ಟ್ ಏನ್ ಮಾಡ್ತೀರಾ?’ ಆಂಕರ್ ಪ್ರಶ್ನೆ.
ಚಿನ್ನಿ ಗಂಡನಿಗೆ ಏನು ಹೇಳೋದು ಗೊತ್ತಾಗ್ತಿಲ್ಲ.
—
‘ಮನೆ ಬಿಟ್ಟೆ’ ಚಿನ್ನಿಯ ಮೆಸೇಜು.
ಇನ್ನೊಂದು ಗಂಟೆಗೆ ಚಿನ್ನಿ ಮನೆಗೆ ಬರ್ತಾಳೆ. ಬಂದ ಕೂಡಲೇ ಮನೆಗೂ ಅವಳ ಬಾಯಿಗೂ ಲಾಕ್ ಮಾಡೋ ಕಲ್ಪನೆಯಲ್ಲಿ ಮಿಲಿಂದ್ ಟಿ.ವಿ ಆಫ್ ಮಾಡಿದ.
ಆರ್ಕೈವ್ ತೆಗೆದ ಪವಿತ್ರಾಳಿಗೆ ‘ರಾಜೇಶ್ವರಿ ಸ್ಕೂಲ್’ ಕಳಿಸಿದ ಅಕ್ಷೋಹ ಮೆಸೇಜುಗಳು. ದಿನಕ್ಕೆ ಮೂರು ಮಾತ್ರೆ ಎನ್ನುವ ತರ ಗುಡ್ ಮಾರ್ನಿಂಗ್, ಅಫ್ಟರ್ನೂನ್, ಗುಡ್ ನೈಟ್, ಡಿಪಿ ಚೆನ್ನಾಗಿದೆ, ಊಟ ಆಯ್ತಾ, ನಾಸ್ತಾ ಆಯ್ತಾ, ಮಿಸ್ ಯೂ, ಯಾವಾಗ ಸಿಗೋಣ. ಅಮ್ಮನ ಮನೆಯಲ್ಲಿ ಟಿವಿ ನೋಡುತ್ತಾ ಎಲ್ಲ ಮೆಸೇಜು ನೋಡಿದವಳಿಗೆ ಕೊನೆಯಲ್ಲಿ ಅವನು ಕಳಿಸಿರುವ ಮೆಸೇಜು ನೋಡಿ ಸಿಟ್ಟೇ ಬಂದುಬಿಡ್ತು.
‘ಒಂದ್ ರಿಪ್ಲೈ ಮಾಡಕ್ ಆಗೋಲ್ವಾ, ಅವಾಗೆಲ್ಲ ನನ್ ಜೊತೆ ಸುತ್ತಾಡ್ಕೊಂಡ್ ಇವಾಗ ಮದ್ವೆ ಆಗಿರೋನ್ಗೆ ಕಾಗೆ ಹಾರಿಸ್ತಾ ಇದ್ದೆ. ಇವಾಗ ನನಗೆ ಮೆಸೇಜ್ ಮಾಡಕ್ ಏನು? ಹೋಗ್ಲಿ ಅವ್ನ ಜೊತೆ ಆದ್ರೂ ಚೆನ್ನಾಗಿ ಇದ್ದೀಯ ಇಲ್ಲ ಮತ್ತೆ ಅವನಿಗೂ ಮೋಸ ಮಾಡ್ಕೊಂಡ್..’
ಎಲಾ ಇವ್ನ. ಛೂಥ್ಯಾ ನನ್ಮಗ. ಸಿಕ್ಕುದ್ರೆ ಮಾತ್ರ ಖುಷಿ. ಸಿಗದೇ ಇದ್ರೆ ಈ ತರ ತೇಜೋವಧೆ.
ಅದೇ ಸಮಯಕ್ಕೆ ಟಿವಿಯಲ್ಲಿ ಚಿನ್ನಿ ಕತೆ ನಡೆಯುತ್ತಿತ್ತು. ಚಿನ್ನಿ ಲೈವ್ ಬಂದಿದ್ದಳು. ‘ಗೊತ್ತಿಲ್ಲ ಮೇಡಂ ನನ್ನ ಯಾರು ಚೆನ್ನಾಗಿ ನೋಡ್ಕೊತಾರೊ ಅವರ ಜೊತೇನೆ ಇರೋದು ಅಷ್ಟೇ, ನಾಳೆ ದಿನ ಇವ್ನು ನನ್ನ ಚೆನ್ನಾಗಿ ನೋಡ್ಕೊಳ್ದೆ ಹೋದ್ರೆ ಇನ್ನೊಬ್ಬ ಅಷ್ಟೇ. ನನ್ ಲೈಫ್ ಚೆನ್ನಾಗಿ ಇರ್ಬೇಕು ಮೇಡಂ. ನಾನು ಲವ್ ಮಾಡ್ತಿಲ್ಲ ಅನ್ನೋದ್ ಬದ್ಲು ಅವ್ನು ನನ್ನ ಲವ್ ಮಾಡ್ತಾ ಇದ್ದಾನ ಕೇಳಿ. ಲವ್ವು ತಗೋಳೋದಲ್ಲ ಮೇಡಂ ಕೊಡೋದು’ ಐದನೇ ಲವ್ವರಿಗೆ ಲೈವ್ ಅಲ್ಲಿ ಉಪದೇಶ ನೀಡುತ್ತಿದ್ದಳು ಚಿನ್ನಿ ಅದು ಜೆನ್ ಲೆವೆಲ್ ಗೆ.
‘ಲವ್ವು ತಗೋಳೋದಲ್ಲ ಕೊಡೋದು’ ಕ್ಯಾಚ್ ಆಯ್ತು ಪವಿತ್ರಾಳಿಗೆ. ಅದನ್ನೇ ಟೈಪ್ ಮಾಡಿ ‘ರಾಜೇಶ್ವರಿ ಸ್ಕೂಲ್’ ಗೆ ಕಳಿಸಿ ನಂಬರ್ ಡಿಲೀಟ್ ಮಾಡಿ ಬ್ಲಾಕ್ ಮಾಡಿಬಿಟ್ಟಳು. ಮಿಲಿಂದ್ ನೆನಪಾಯ್ತು ಹಳೆ ಲವ್ ಮ್ಯಾಟ್ರು ಸಿಗಕೊಂಡ್ರು ಅವನು ನೋಡ್ಕೊಂಡ್ ರೀತಿ ನೆನಪಾಗಿ ಲವ್ ಉಕ್ತು.
‘ಲವ್ ಯೂ’ ಎಂದು ಮೆಸೇಜು ಕಳಿಸಿದಳು.
—
ಚಿನ್ನಿ ಮನೆ ಮುಂದೆ ಗಾಡಿ ನಿಲ್ಲಿಸಿ. ‘ಬಂದೆ’ ಎಂದು ಮೆಸೇಜು ಹಾಕಿದಳು. ಮೊದಲ ಸಲ ಬಂದಿರೋ ಕಾರಣ ಚಿನ್ನಿಗೆ ಭಯ ಗಾಬ್ರಿ. ಮಿಲಿಂದ್ ಗೆ ಅವಳನ್ನ ಬಾಚಿ ತಬ್ಬಿ ಲೂಟಿ ಮಾಡೋ ರಾಬರಿ ಸ್ಕೆಚ್. ಕಿಟಕಿಯಿಂದ ನೋಡಿದ. ಅಕ್ಕಪಕ್ಕ ಯಾರೂ ಇಲ್ಲ ಬಾಗ್ಲು ತೆಗೆದು ‘ಬಾ ಒಳಗೆ’ ಮೆಸೇಜು ಹಾಕಿ ಸೋಫಾ ಮೇಲೆ ಕೂತ.
ಚಿನ್ನಿ ಮುಖದ ಫುಲ್ ಸ್ಕ್ರಾಫ್ ಹಾಕಿದ್ದಳು. ಒಳಗೆ ಬರುವ ಧಾವಂತದಲ್ಲಿ ಎಡವಿದಳು ಹೆಬ್ಬೆಟ್ಟಿನಿಂದ ರಕ್ತ ಬಂತು. ಕುಂಟಿಕೊಂಡು ಮನೆ ಒಳಗೆ ಬಂದಳು. ಅವಳು ಬಂದ ಕೂಡಲೇ ಮಿಲಿಂದ್ ಹೋಗಿ ತಬ್ಬಿಕೊಂಡ. ಅವಳ ಕಣ್ಣಲ್ಲಿ ಕಣ್ಣೀರು. ಹೆಬ್ಬೆಟ್ಟು ಕಿತ್ತು ರಕ್ತ ಬಂದಿರೋದು ಅವನಿಗೇನು ಗೊತ್ತು, ಮೊದಲ ಸಲ ನೋಡ್ತಾ ಇರೋದಕ್ಕೆ ಚಿನ್ನಿಗೆ ಅಳುವೇ ಬಂದಿತ್ತಲ್ಲ ಎಂದು ಎಮೋಷನಲ್ ಆಗಿ ಲಿಪ್ ಲಾಕ್ ಮಾಡಲು ಹೋದರೆ ಚಿನ್ನಿ ದೂಡಿದಳು.
‘ಫಕ್’ ಎಂದು ಸ್ಕ್ರಾಫ್ ತೆಗೆದಳು.
ಹೆಬ್ಬೆಟ್ಟು ಮುಟ್ಟಿಕೊಂಡಳು.
‘ಬ್ಯಾಂಡೇಜ್ ಇದ್ದೀಯ’ ಕೇಳಿದಳು.
‘ನೀರು ಕೊಡಿ’ ಕೇಳಿದಳು.
‘ಸ್ವಲ್ಪ ಫ್ಯಾನ್ ಹಾಕ್ತೀರಾ’ ಕೇಳಿದಳು.
‘ಹೊರಗೆ ಏನು ಬಿಸಿಲು’.
ಟಿವಿಯಲ್ಲಿ ಚಿನ್ನಿ ಕತೆ ನಡೆಯುತ್ತಲೇ ಇತ್ತು. ಜೋರು ವಾಗ್ಯುದ್ಧ. ‘ಕಟ್ಕಂಡ್ ಇರೋ ಹೆಂಡ್ತೀನ ಚೆನ್ನಾಗಿ ನೋಡ್ಕಳಕ್ಕೆ ಏನ್ ರೋಗ’ ಚಿನ್ನಿಯಿಂದ ಚಿನ್ನಿ ಕತೆಗೆ ಹೊಸ ಪರ್ಸ್ಪೆಕ್ಟಿವ್ ಹೇಳೋದೇನೋ ಹೇಳಿ ಮಿಲಿಂದ್ ಹೆಂಡ್ತಿ ನೆನಪಾಗಿ ನಾಲಗೆ ಕಚ್ಚಿಕೊಂಡಳು.
ಕಾಮದ ರಾಕೆಟ್ ಉಡಾಯಿಸಲು ಟೈಮರ್ ಇಟ್ಟುಕೊಂಡು ಕಾಯುತ್ತಿದ್ದ ಮಿಲಿಂದ್ ಅವಳು ಫಕ್ ಎಂದು ದೂಡಿದಾಗ ಪೆಚ್ಚು ನಕ್ಕಿದ್ದ. ಹೆಬ್ಬೆಟ್ ಕಿತ್ತು ಹೋದದ್ದು ನೋಡಿ ಏನೋ ಅನಿಷ್ಟ ಸೂಚನೆ ಅನಿಸ್ತು. ಬ್ಯಾಂಡೇಜಿಗೆ ಮನೆಯೆಲ್ಲ ತಡಕಾಡಿದ. ನೀರು ಅವಳಿಗೆ ಬಾಟಲಿಯಲ್ಲಿ ಕೊಡೋದೋ ಲೋಟದಲ್ಲಿ ಕೊಡೋದೋ ಫ್ರಿಜ್ ವಾಟರ್ ಕೊಡೋದೋ ಗೊತ್ತಾಗದೆ ಅಂಡು ಸುಟ್ಟ ಬೆಕ್ಕಿನಂತೆ ಒದ್ದಾಡಿದ.
ತನಗಿರುವ ಕಾಮಾಸಕ್ತಿ ಅವಳಿಗಿಲ್ಲ ಅನಿಸಲು ಶುರುವಾಯ್ತು. ಅವಳು ಬಂದ ಕೂಡಲೇ ಮಾಡಬೇಕಾದ ಹಾರ್ನಿ ಚೆಕ್ ಲಿಸ್ಟ್ ನೇಣು ಹಾಕಿಕೊಂಡು ಸತ್ತವು. ಅವಳು ನನ್ನ ತರ ವೇಯ್ಟ್ ಮಾಡಿಲ್ಲ ಅನಿಸಲು ಶುರುವಾಯ್ತು. ಅದೇ ಸಮಯಕ್ಕೆ ‘ಕಟ್ಕಂಡ್ ಇರೋ ಹೆಂಡ್ತೀನ ಚೆನ್ನಾಗಿ ನೋಡ್ಕಳಕ್ಕೆ ಏನ್ ರೋಗ’ ಮಾತು ಕೇಳಿ ರಾಕೆಟ್ ಉಡಾವಣೆ ಆಗೋಲ್ಲ ಎಂದು ಗೊತ್ತಾಯ್ತು. ಹೆಂಡ್ತಿ ನೆನಪಾದ್ಲು. ಅವಳ ದೋಸೆ ನೆನಪಾಯಿತು. ಪಾಪಪ್ರಜ್ಞೆಯೊ ಬೇಜಾರೋ ದುಕ್ಕವೋ ಆಸೆಯ ಭಂಗವೊ ಒಟ್ಟಿನಲ್ಲಿ ಏನೋ ಒಂದು ವಕ್ಕರಿಸಿಕೊಂಡು ಸುಮ್ಮನೆ ಕೂತ.
—
‘ಲವ್ ಯೂ ಟೂ’ ಮಿಲಿಂದ್ ಮೆಸೇಜು ನೋಡಿ ಪವಿತ್ರಾಳಿಗೆ ಖುಷಿಯೇ ಆಯಿತು. ‘ಈ ಗೂಬೆ ನನ್ಮಗನಿಗೆ ತೋರ್ಸೋ ಪ್ರೀತಿ ಮಿಲಿಂದ್ ಗೆ ತೋರುಸ್ದ್ರೆ ಇನ್ನೂ ಚೆನ್ನಾಗಿ ನೋಡ್ಕೋತಾನೆ’ ಎಂದುಕೊಂಡು ನೊಂದುಕೊಂಡಳು. ಪವಿತ್ರಳ ಅಕ್ಕ ರುಕ್ಮಿಣಿ ಕೆನ್ನೆ ಊದಿಸಿಕೊಂಡು ಈಚೆ ಬಂದು ‘ಚೆನ್ನಾಗಿದ್ಯಾ?’ ಎಂದಳು. ಗುಳಿ ಬೀಳುತ್ತಿದ್ದ ಅವಳ ಕೆನ್ನೆಗಳು ಪೂರಿಯಂತೆ ಊದಿದ್ದು ನೋಡಿ ‘ಏನಾಯ್ತಕ್ಕ?’ ಎಂದಳು. ರಾತ್ರಿ ಅನುಮಾನ ಬಂದು ರುಕ್ಮಿಣಿಯ ಗಂಡ ಸರಿಯಾಗಿ ಬಾರಿಸಿದ್ದನ್ನು ಹೇಳಿದಳು. ‘ನಡೀ ಪೊಲೀಸ್ ಕಂಪ್ಲೇಂಟ್ ಕೊಡೋಣ’ ಪವಿತ್ರ ಸಿಟ್ಟಿಗೆದ್ದಳು. ‘ಅವನ್ದು ಏನು ತಪ್ಪಿಲ್ಲ. ನಂದೀಶ ಮೆಸೇಜು ಮಾಡಿದ್ದೂ ನೋಡ್ಬಿಟ್ಟ’ ನಂದೀಶ ರುಕ್ಮಿಣಿಯ ಎಕ್ಸ್.
‘ಲವ್ವು ತಗೋಳೋದಲ್ಲ ಕೊಡೋದು’ ಎಂದು ಅಕ್ಕನಿಗೆ ಡೈಲಾಗ್ ಹೊಡೆದು ‘ಸರಿ ನಾನು ಹೊರಡ್ತೀನಿ’ ಎಂದಳು. ನಾಳೆ ಬೆಳಗ್ಗೆ ಮನೆಗೆ ಹೋದರಾಯ್ತು ಎಂದು ಬಂದವಳಿಗೆ ಯಾಕೋ ಅಲ್ಲಿರಲಾಗದೆ ಮನೆಗೆ ಹೊರಟಳು.
—
ಮೊಳೆ ಹೊಡೆಯಕ್ ಓನರ್ ಬಿಡದೆ ಅಡೆಸಿವ್ ಹುಕ್ಕಿಗೆ ಸಿಕ್ಕಿಗೆ ಸಿಗಿಸಿದ್ದ ಗಡಿಯಾರ ಕೊನೆಗೂ ಭಾರ ತಾಳಲಾರದೆ ನೆಲಕ್ಕೆ ಬಿತ್ತು.
ಹೆಬ್ಬೆಟ್ಟು ರಕ್ತ.
ಕಟ್ಕಂಡ್ ಇರೋ ಹೆಂಡ್ತೀನ ಚೆನ್ನಾಗಿ ನೋಡ್ಕಳಕ್ಕೆ ಏನ್ ರೋಗ.
ಬೀದಿಗೆ ಬಂದ ಚಿನ್ನಿಯ ಕತೆ.
ಸುಧಾರಿಸಿಕೊಂಡ ಕಾಮಾಸಕ್ತಿ.
ಕೊನೆಗೆ ಬಿದ್ದ ಗಡಿಯಾರ.
ಯಾಕೋ ಟೈಮ್ ಸರಿಯಿಲ್ಲ ಅನಿಸ್ತು. ಆದ್ರೆ ಚಿನ್ನಿಗೆ ಹೇಗೆ ಹೇಳೋದು. ಒಂದು ವಾರದಿಂದ ಫುಲ್ ಮನವೊಲಿಸಿ. ಫೋರ್ಸ್ ಮಾಡಿ ಹಾಕಿದ ಸ್ಕೆಚ್ ಈಗ ಹೋಗು ಅನ್ನಕ್ ಆಗುತ್ತಾ ಆಗುತ್ತೆ ಅಂದ್ರೂ ಹೇಗೆ ಹೋಗು ಅನ್ನೋದು.
‘ವಾಷ್ ರೂಮ್ ಎಲ್ಲಿದೆ’ ಚಿನ್ನಿಯ ಪ್ರಶ್ನೆ. ಮಿಲಿಂದ್ ಗಾಬರಿಯಾದ. ‘ನನಗೆ ನಾಚ್ಕೆ ಆದ್ರೆ ವಾಷ್ ರೂಮಿಗೆ ಹೋಗಿ ಕರೀತೀನಿ ಶವರ್ ಇಂದ ಶುರು ಮಾಡೋಣ’ ಫ್ಯಾಂಟಸಿ ತೆವಲುಗಳನ್ನು ಹಂಚಿಕೊಂಡಿದ್ದಳು. ಕೈ ತೋರಿಸಿದ ವಾಷ್ ರೂಮ್ ಕಡೆ. ಅಕಸ್ಮಾತ್ ಚಿನ್ನಿಗೆ ಈಗ ಮೂಡ್ ಬಂದ್ರೆ ಎಂದು ಖುಷಿಯೂ ಆದ್ರೆ ಇಷ್ಟೆಲ್ಲಾ ಕೆಡುಕು ಸೂಚನೆ, ಈಗೋ ಹಾರ್ಟ್ ಮಾಡಿದ ಡೈಲಾಗ್ ಕೇಳಿಯೂ ಹೇಗೆ ಮುಂದುವರೆಯೋದು ಗೊತ್ತಾಗದೆ ಟೆನ್ಶನ್ ಅಲ್ಲಿ ಕೂತ.
ಒಂದೊಂದು ಸೆಕೆಂಡ್ ಒಂದೊಂದು ಗಂಟೆಯಾದಂತೆ ಚಡಪಡಿಸಿದ.
ವಾಷ್ ರೂಮಿಂದ ಈಚೆ ಬಂದ ಚಿನ್ನಿ. ಮುಖ ಬಾಡಿಸಿಕೊಂಡು. ‘ಟೆನ್ಶನ್ನಿಗೆ ಆಗೋಗಿದ್ದೀನಿ, ಸಾರಿ ಇವತ್ತು ಆಗೋಲ್ಲ’. ಹಾಫ್ ಮರ್ಡರಿಗೆ ಜೈಲಿಗೆ ಹೋಗಿ ಬಿಡುಗಡೆ ಆದ ಅನುಭವ. ನಿರಾಳತೆ.
‘ಇಟ್ಸ್ ಓಕೆ’ ತಬ್ಬಿಕೊಂಡ. ಕಾಮಾಸಕ್ತಿ ಇರಲಿಲ್ಲ. ‘ಥ್ಯಾಂಕ್ ಯೂ’ ಎನ್ನುವ ಭಾವದಲ್ಲಿ ತಬ್ಬಿಕೊಂಡ.
ಅದೇ ಸಮಯಕ್ಕೆ ಪವಿತ್ರಳ ಮೆಸೇಜು
‘ಮನೆಗೆ ಬರ್ತಾ ಇದ್ದೀನಿ’
ಮಿಲಿಂದ್ ಮೆಸೇಜು ಚಿನ್ನಿಗೆ ತೋರ್ಸಿ ‘ಟೈಮ್ ಸರಿಯಿಲ್ಲ’ ಎಂದ. ಅವಳಿಗರ್ಥವಾಯ್ತು ‘ಇಟ್ಸ್ ಓಕೆ. ಕೀಪ್ ಯುವರ್ ಫೈರ್. ನೆಕ್ಸ್ಟ್ ಮಾಡೋಣ’ ಎಂದು ಕಣ್ಣು ಹೊಡೆದು ಹೊರಟಳು.
—
ಮೆಸೇಜು ಮಾಡದೇ ಹಾಗೆಯೆ ಮನೆಗೆ ಹೋಗಿ ಮಿಲಿಂದ್ ನನ್ನ ತಬ್ಬಿ ಮುದ್ದಾಡಿ ‘ಸರ್ ಪ್ರೈಸ್’ ಕೊಡಬೇಕು ಎನ್ನುವ ಥಾಟ್ ಪವಿತ್ರಾಳಿಗೆ ಬಂದರೂ ನಾನು ಅಮ್ಮನ ಮನೆಗೆ ಬಂದಿರೋದು ನೋಡಿಕೊಂಡು ಅವನೇ ಯವಳನ್ನದರೂ ಕರೆಸಿಕೊಂಡು ಮುದ್ದಾಡುತ್ತಿದ್ದರೆ ಎನ್ನುವ ಭಯವಾಗಿ ಯಾವುದಕ್ಕೂ ಒಂದು ಸಿಗ್ನಲ್ ಕೊಡೋಣ ಎಂದು ಮೆಸೇಜು ಮಾಡಿದ್ದಳು.
‘ಮನೆಗೆ ಬರ್ತಾ ಇದ್ದೀನಿ’
ಎರಡೇ ಸೆಕೆಂಡಿಗೆ ಮೆಸೇಜು ಬಂತು
‘ಚಿನ್ನಿ ಬಂದ್ಬುಡು ಚಿನ್ನಿ’






0 Comments