ಚಿದಂಬರ ನರೇಂದ್ರ
ಇದು ಬಿಲ್ಹಣನ “Caurapancasika” ದ ಕನ್ನಡೀಕರಣದ ಪ್ರಯತ್ನ. ನನಗೆ ಇಂಗ್ಲೀಷ್ ಅನುವಾದವೇ ಮೂಲ. ಮೂಲತಃ ಬಿಲ್ಹಣ ಕಾಶ್ಮೀರಿ ಕವಿ, ವಿಕ್ರಮಾಂಕದೇವ ಚರಿತ ರಚಿಸಿದವ. ಬಿಲ್ಹಣ, ರಾಜನ ಹರೆಯದ ಮಗಳಿಗೆ ಸಾಹಿತ್ಯದ ಸೂಕ್ಷ್ಮಗಳನ್ನು ಪಾಠ ಮಾಡಲು ನಿಯುಕ್ತನಾಗುತ್ತಾನೆ. ರಾಜನ ಮಗಳ ಜೊತೆ ಅವನ ಸಂಬಂಧ ಬೆಳೆಯುತ್ತದೆ. ಇದು ರಾಜನಿಗೆ ಗೊತ್ತಾಗಿ, ರಾಜ, ಬಿಲ್ಹಣನಿಗೆ ಮರಣದಂಡನೆ ವಿಧಿಸುತ್ತಾನೆ. ಶಿಕ್ಷೆಗೊಳಗಾಗುವ ಮುನ್ನ ಬಿಲ್ಹಣ ತನ್ನ ಪ್ರೀತಿಯ ರಾಜಕುಮಾರಿಯ ನೆನಪಲ್ಲಿ ಐವತ್ತು ಸುಂದರ ಪದ್ಯಗಳನ್ನು ರಚಿಸುತ್ತಾನೆ. ಈ ಪದ್ಯಗಳ ಚೆಲುವಿಗೆ ಮನಸೋತ ಕಾಳೀ ದೇವಿ, ರಾಜನ ಮನಒಲಿಸಿ ಬಿಲ್ಹಣನನ್ನು ಶಿಕ್ಷೆಯಿಂದ ಪಾರು ಮಾಡುತ್ತಾಳಂತೆ.
ಇದು ಒಂದು ರುದ್ರ ಶೃಂಗಾರ ಕಾವ್ಯದ ಅನುವಾದವಾದ್ದರಿಂದ, ಇಲ್ಲಿನ ಭಾಷೆಯನ್ನು ನೀವು ಮನ್ನಿಸುವಿರಿ ಎಂದು ಭಾವಿಸುತ್ತೇನೆ.
(1)

ಇಂದಿಗೂ,
ನನ್ನ ಕಾಡುತ್ತಿದ್ದಾಳೆ.
ಚಂಪಕ ಹೂಗಳ ಮಾಲೆಗೊಂದು
ಕಳೆ ಬಂದಿದೆ ಅವಳ ಎದೆ ಮೇಲೆ.
ಪ್ರಫುಲ್ಲಿತವಾದ ಕಮಲ ಮುಖ,
ಸೊಂಟದ ಮೇಲಿನ ತೆಳ್ಳನೆ ನೆರಿಗೆ,
ಪ್ರೀತಿಗಾಗಿ ತುಡಿಯುತ್ತಿರುವ ಅಂಗಾಂಗಗಳು,
ನಿದ್ದೆಯಿಂದೇಳುವಾಗಿನ ಅವಳ ಜಾದೂ
ನನ್ನಂಥ ಸಂಯಮಿಯನ್ನೂ
ಬೇಜವಾಬ್ದಾರನನ್ನಾಗಿಸಿದೆ.
(2)
ಇಂದಿಗೂ,
ಆಕೆ ಮತ್ತೊಮ್ಮೆ ಎದುರಾದರೆ,
ಆ ಹುಣ್ಣಿಮೆಯರಳಿದ ಮುಖ,
ಫಲವತ್ತಾದ ಹೊಚ್ಚ ಹೊಸ ಹರೆಯ,
ತುಂಬಿದೆದೆ, ಉನ್ಮಾದ,
ಪ್ರೀತಿ ಚುಚ್ಚಿ ಚುಚ್ಚಿ
ಕಿಚ್ಚು ಹೊತ್ತಿಸಿರುವ ದೇಹ.
ಅವಳ ಈ ಕಷ್ಟ
ನನ್ನಿಂದ ನೋಡಲಾಗುವುದಿಲ್ಲ.
ಶಾಂತಿಗಾಗಿ ನಾನು
ಏನೆಲ್ಲ ಮಾಡಲೂ ಸಿದ್ಧ.
(3)
ಇಂದಿಗೂ,
ಆಕೆ ಮತ್ತೆ ಎದುರಾದರೆ,
ಆ ತಾವರೆಯ ನೋಟದವಳು,
ತನ್ನೆದೆಯ ಭಾರದಿಂದಲೇ ಬಳಲಿದವಳು,
ಅಪ್ಪಚ್ಚಿ ಮಾಡುತ್ತೇನೆ ಅವಳನ್ನ
ನನ್ನ ತೋಳುಗಳಲ್ಲಿ,
ಶತಮಾನಗಳ ಬಾಯಾರಿಕೆ ಇಂಗುವಂತೆ
ಕುಡಿಯುತ್ತೇನೆ ಅವಳ ತುಟಿಗಳನ್ನ
ಅತೃಪ್ತ ದುಂಬಿಯೊಂದು
ಹೀರುವಂತೆ ಕಮಲವನ್ನ.
(4)

ಇಂದಿಗೂ
ನೆನಪಿದೆ ನನಗೆ,
ಪ್ರೇಮದಲಿ ಜರ್ಜರಿತವಾದ
ಅವಳ ನಾಜೂಕು ಮೈಕಟ್ಟು,
ಪಶ್ಚಾತಾಪದ ಭಾವ ಮುಚ್ಚಿಹಾಕುವಂತೆ
ಹರಡಿಕೊಂಡಿವೆ ಅವಳ ಮುಂಗುರುಳು
ಬಿಳುಚಿದ ಮುಖದ ಮೇಲೆಲ್ಲ.
ಕುತ್ತಿಗೆಯ ನರಗಳಂತೆ
ಗಟ್ಟಿಯಾಗಿ ತಬ್ಬಿಕೊಂಡಿವೆ ನನ್ನ
ಆಕೆಯ ಸುಕೋಮಲ ತೋಳಗಳು.
ಎಲ್ಲ ನೆನಪಿದೆ ನನಗೆ.
(5)
ಇಂದಿಗೂ
ನೆನಪಿದೆ ನನಗೆ,
ಪ್ರೇಮದ ಜಾಗರಣೆಯಲ್ಲಿ
ಮೈದುಂಬಿ ಕುಣಿದಾಡಿದ ಅವಳ
ತೀಕ್ಷ್ಣ ಕಣ್ಣಾಲಿಗಳು,
ಹುಚ್ಚು ಹಾಸಿಗೆಯಲ್ಲಿ ಆಕೆ
ಕಾಡು ಕೋಳಿಯಂತೆ ಸೆಣಸಿದ ಪರಿ,
ಸೂರ್ಯ ಹುಟ್ಟುವ ಮುಂಚೆಯೇ
ನಾಚಿ ಕೆಂಪೇರಿದ ಅವಳ ಮುಖ.
ಎಲ್ಲ ನೆನಪಿದೆ ನನಗೆ.
(6)
ಇಂದಿಗೂ,
ಆಕೆಯೇನಾದರೂ
ಮತ್ತೊಮ್ಮೆ ಕಂಡರೆ,
ಆ ಬಟ್ಟಲಗಣ್ಣಿನ ಚೆಲುವೆ,
ಅಗಲಿಕೆಯಿಂದ ಉರಿಯುತ್ತಿರುವವಳು,
ಗಟ್ಟಿಯಾಗಿ ಕಟ್ಟಿಹಾಕಿಬಿಡುತ್ತೇನೆ
ಆಕೆಯ ಪ್ರತಿಯೊಂದು ಅವಯವಗಳನ್ನ,
ನನ್ನ ಪ್ರತಿ ಅಂಗಾಂಗಗಳಿಂದ.
ಕಣ್ಣು ಮುಚ್ಚಿ, ನಿಶ್ಚಲನಾಗಿ,
ಅಮೇಲೆ ಬಿಟ್ಟರೆ ಕೇಳಿ.
(7)
ಇಂದಿಗೂ
ನೆನಪಿದೆ ನನಗೆ,
ಪ್ರೇಮದ ನಮ್ಮ ಕಾಡು ಕುಣಿತದಲ್ಲಿ
ಆಕೆ ಸೂತ್ರ ನಿಭಾಯಿಸಿದ ಪರಿ,
ಉನ್ಮಾದದಿಂದ ಕಂಪಿಸುತ್ತಿರುವ ಅವಳ ದೇಹ
ತುಂಬು ಮೊಲೆಗಳ ಭಾರಕ್ಕೆ ಬಾಗಿರುವ ನಡು,
ಘನ ಜಘನ,
ಹಾರಡುತ್ತಿರುವ ಕೂದಲಿನ ಜೊತೆ
ತಾಳ ಹಾಕುತ್ತಿರುವ ಉಸಿರಾಟ.
ಎಲ್ಲ ನೆನಪಿದೆ ನನಗೆ.
(8)

ಇಂದಿಗೂ
ನೆನಪಿದೆ ನನಗೆ,
ಹಾಸಿಗೆಯಲ್ಲಿ ಗಂಧ-ಕಸ್ತೂರಿಗಳ ಸುಗಂಧ
ಹರಡುತ್ತ ಆಕೆ ಮಲಗಿರುವ ಠೀವಿ.
ಗುಟುಕು ನೀಡುತ್ತ ಸುಖಿಸುತ್ತಿರುವ
ಜೋಡಿ ಹಕ್ಕಿಗಳಂತೆ ಕಾಡುತ್ತಿರುವ
ಅವಳ ಕಣ್ ರೆಪ್ಪೆಗಳು.
ಎಲ್ಲ ನೆನಪಿದೆ ನನಗೆ.
(9)
ಇಂದಿಗೂ
ನೆನಪಿದೆ ನನಗೆ,
ಪ್ರೀತಿಯಲ್ಲಿ ನಾನು ಅಮಾಯಕನಂತೆ
ನೆಕ್ಕಿದ ಆ ಮಧು ಲೇಪಿತ ತುಟಿಗಳು,
ನಾಜೂಕು ಮೈಕಟ್ಟು,
ಆ ತೀಕ್ಷ್ಣ ಲಂಪಟ ಕಣ್ಣುಗಳು,
ಕೇಸರಿ-ಕಸ್ತೂರಿಗಳಿಂದ ತೀಡಿದ ಬಂಗಾರದ ದೇಹ,
ಕರ್ಪೂರ ಬೆರೆತ ತಾಂಬೂಲದಿಂದ
ಸುಗಂಧಿತವಾದ ಆ ಮಾದಕ ಬಾಯಿ,
ಎಲ್ಲ ನೆನಪಿದೆ ನನಗೆ.
(10)
ಇಂದಿಗೂ
ನೆನಪಿದೆ ನನಗೆ,
ಪ್ರೀತಿಯ ಕೊನೆಯಲ್ಲಿ
ಬೆವರ ಹನಿಗಳಿಂದ ರಂಗಾಗಿರುವ
ನನ್ನ ನಲ್ಲೆಯ ದೇಹ,
ಪ್ರೀತಿ ತುಂಬಿ ತುಳುಕುತ್ತಿರುವ ಕಣ್ಣುಗಳು,
ರಾಹುವಿನಿಂದ ಬಿಡಿಸಿಕೊಂಡಿರುವ ಚಂದ್ರನ ಮುಖ
ಎಲ್ಲ ನೆನಪಿದೆ ನನಗೆ.
(11)
ಇಂದಿಗೂ
ನೆನಪಿದೆ ಆ ರಾತ್ರಿ,
” ಆಂಕ್ಷೀ ! ” ನನ್ನ ಭಾರಿ ಸೀನಿಗೆ
ಬೆಚ್ಚಿ ಎದ್ದು ಕುಳಿತ ರಾಜಕುಮಾರಿ.
ಅವಳಿಗೆ ಎಷ್ಟು ಸಿಟ್ಟು ಬಂದಿತ್ತೆಂದರೆ
” ದೇವ! ಕಾಪಾಡು ಈ ಜೀವ ”
ಎಂದು ಹರಸಲೂ ಎಂಥದೋ ಬಿಗುಮಾನ.
ನಾನೂ ಗಮನಿಸುತ್ತಿದ್ದೆ
ಸುಮ್ಮನೆ ಹೋಗಿ
ಕಿವಿಗೆ ಶುಭ ರತ್ನದ ಹರಳು ಧರಿಸಿದಳು.
So cute.
(12)
ಇಂದಿಗೂ
ನೆನಪಿದೆ ನನಗೆ,
ನನ್ನ ನಲ್ಲೆಯ ಮುಖ.
ಗಂಡಿನಂತೆ ಆಕೆ ಮೇಲಿಂದ
ಆವರಿಸಿಕೊಳ್ಳುತ್ತಿದ್ದಾಗ,
ಗಲ್ಲ ಮುಟ್ಟಿಹೊಗುತ್ತಿದ್ದ
ಬಂಗಾರದ ಆ ಕಿವಿಯೋಲೆಗಳು.
ಲಯಬದ್ಧವಾಗಿ ಆಕೆ ಜೀಕುತ್ತಿದ್ದ
ಪರಿಗೆ, ಬೆರಗಾಗಿ, ಮುತ್ತಿನಂತೆ
ಸಾಲುಗಟ್ಟಿ ನಿಂತ ಆ ಬೆವರಹನಿಗಳು.
ಎಲ್ಲ ನೆನಪಿದೆ ನನಗೆ.
(13)
ಇಂದಿಗೂ
ನೆನಪಿದೆ ನನಗೆ,
ಅವಳು ಸ್ವೇಚ್ಛೆಯಿಂದ ಬಾಗಿದ ನೋಟ,
ತೃಪ್ತಿಯಿಂದ ಆಕೆ ತನ್ನ ಮೈ ಮುರಿದ ಚಿತ್ರ,
ಬಟ್ಟೆ ಜಾರುತ್ತಿದ್ದಂತೆಯೇ ಕಂಡ
ಆ ಭಾರೀ ಮೊಲೆಗಳ ತಿರುವು,
ಅವಳ ತುಟಿಗಳ ಮೇಲೆ
ನನ್ನ ಹಲ್ಲುಗಳ ಸಹಿ,
ಎಲ್ಲ ನೆನಪಿದೆ ನನಗೆ.
(14)
ಇಂದಿಗೂ
ನೆನಪಿದೆ ನನಗೆ,
ಎಳೆಯ ಅಶೋಕದೆಲೆಯ ನೆನಪಿಸುವ
ಅವಳ ಮದರಂಗಿ ಹಚ್ಚಿದ ಕೈ,
ಮೊಲೆ ತೊಟ್ಟುಗಳಿಗೆ ಮುತ್ತಿಕ್ಕುತ್ತಿರುವ
ಮುತ್ತಿನ ಮಣಿ ಮಾಲೆ.
ಬಿಳುಚಿದ ಗಲ್ಲಗಳ ಹಿಂದೆ
ಅಡಗಿಕೊಂಡಿರುವ ಸಂತೃಪ್ತ ನಗೆ,
ಅವಳ ಮಾದಕ ಕಾಡು ಕೋಳಿಯ ಪಟ್ಟು,
ಎಲ್ಲ ನೆನಪಿದೆ ನನಗೆ.
(15)
ಇಂದಿಗೂ
ನೆನಪಿದೆ ನನಗೆ,
ಅವಳ ಗಂಧಮಯ ದೇಹದ
ಮೇಲಿನ ನನ್ನ ಉಗುರಿನ ಗುರುತುಗಳು.
ಅವಳು ಉದ್ದಿಪ್ತಳಾದಾಗ
ನಾನು ಸೆಳೆದ, ಬಂಗಾರದಂಚಿನ
ಆ ಎದೆಯ ಮೇಲಿನ ಬಟ್ಟೆ.
ಯಾವ ಪ್ರತಿರೋಧವಿಲ್ಲದೇ ಆಕೆ ಬಿಟ್ಟು ಕೊಟ್ಟಿದ್ದು,
ನಾನು ನಾಚಿಕೆಯಿಂದ ನೀರಾಗಿದ್ದು.
ಎಲ್ಲ ನೆನಪಿದೆ ನನಗೆ.
(16)
ಇಂದಿಗೂ
ನೆನಪಿದೆ ನನಗೆ
ಕಾಡಿಗೆ ತಿದ್ದಿದ ಕಾತುರದ ಕಣ್ಣುಗಳು
ಹೆರಳಲ್ಲಿ ಹೂವಿನ ಘಮ
ಕಾಮಿ ಹಲ್ಲುಗಳ ಚಂದ ಮೆರೆಸುತ್ತಿರುವ
ತಂಬುಲದ ತುಟಿಗಳು
ತೋಳುಗಳಲ್ಲಿ ನಳ ನಳಿಸುತ್ತಿರುವ
ಬಂಗಾರದ ಬಾಜೂ ಬಂಧ.
ಎಲ್ಲ ನೆನಪಿದೆ ನನಗೆ.
(17)
ಇಂದಿಗೂ
ನೆನಪಿದೆ ನನಗೆ
ಆ ಸಡಿಲ ಹೆರಳಿನ ಬಂಧ,
ಬಾಡಿಹೋದ ಹೂವಿನ ಮಾಲೆ,
ಜೇನ್ತುಟಿಯ ನಗುವಿನ ರುಚಿ,
ತುಂಬಿದೆದೆಯ ತಾಕುತ್ತಿರುವ ಮುತ್ತಿನ ಹಾರ,
ಕಾತರಿಸುತ್ತಿರುವ ಕಣ್ಣಿನ ನೋಟ,
ಎಲ್ಲ ನೆನಪಿದೆ ನನಗೆ.
(18)
ಇಂದಿಗೂ
ಅಕೆಯ ಬಗ್ಗೆಯೇ ಯೋಚಿಸುತ್ತೇನೆ.
ಅಂತಃಪುರದ ರತ್ನಖಚಿತ ದೀಪಗಳು
ಕತ್ತಲನ್ನು ಕರಗಿಸಿದ್ದೇ ಬಂತು,
ಅವಳನ್ನು ಕದ್ದು ದಿಟ್ಟಿಸಲು
ಹೊಂಚು ಹಾಕಿ ಹಾಜರಾದೆ.
ಭಯ ಮತ್ತು ನಾಚಿಕೆಯಿಂದ
ಆಕೆಯ ಕಣ್ಣುಗಳು ಮಿಂಚತೊಡಗಿದವು.
(19)

ಇಂದಿಗೂ
ಅವಳ ನೆನಪಿದೆ ನನಗೆ
ಜಿಂಕೆಗಣ್ಣಿನ ಗಾಜಿನ ಬೊಂಬೆ,
ವಿರಹದುರಿಗೆ ಕಾದು ಕೆಂಪಾಗಿ
ನನ್ನಿಂದ ಆರಲು ಸಿದ್ಧಳಾಗಿರುವ ಕುಸುಮಬಾಲೆ.
ಕಾಡು ಕೋಳಿಯ ಕದನದ ಭರಾಟೆ,
ನನ್ನ ದೇಹದ ಮೇಲೆಲ್ಲ,
ಅವಳು ಕೆತ್ತಿದ
ಬೆಲೆಬಾಳುವ ಆಭರಣಗಳು.
(20)
ಇಂದಿಗೂ
ನೆನಪಿದೆ ನನಗೆ
ಅವಳ ಕಿರು ನಗೆ
ಮೊಲೆಗಳ ಭಾರಕ್ಕೆ ಬಾಗಿದ ನಡು
ಮುತ್ತುಗಳ ಸಂಕೋಲೆಯಲ್ಲಿ ನಳನಳಿಸುತ್ತಿರುವ ಹರೆಯ
ಉತ್ಕಟತೆಯ ತುದಿಯಲ್ಲಿ ಪ್ರೀತಿ ಹಾರಿಸಿದ ಯೌವ್ವನದ ಪತಾಕೆ.
(21)
ಇಂದಿಗೂ
ನೆನಪಿದೆ ನನಗೆ
ಪ್ರೀತಿಯಲ್ಲಿ ಆಕೆ ನರಳಿ ಉಸುರಿದ ಮಾತುಗಳ
ವಿವರಿಸಲು ಸೋತ ನೂರಾರು ಉಪಮೆ ಅಲಂಕಾರಗಳು,
ನಶೆಯಲ್ಲಿ ತೊದಲಿದ ಅವಳ ಗೊಂದಲದ ದನಿ
ಸಂಕೋಚದ ಸಿಹಿ ಮಾತುಗಳು
ಎಲ್ಲ ನೆನಪಿದೆ ನನಗೆ.
(22)
ಇಂದಿಗೂ
ನೆನಪಿದೆ ನನಗೆ,
ಸುರತದ ಮತ್ತಿನಲ್ಲಿ ಭಾರವಾಗಿರುವ ಅವಳ ಕಣ್ ರೆಪ್ಪೆಗಳು
ತೂರಾಡುತ್ತಿರುವ ಅವಳ ನಾಜೂಕು ದೇಹ
ಜರಿ ಪೀತಾಂಬರ, ಬೆನ್ನ ಮುಚ್ಚಿಹಾಕಿರುವ ಅವಳ ಘನ ಕೇಶರಾಶಿ
ಆಕೆ, ಕೇದಿಗೆ ವನದ ಕಾಡುಕೋಳಿ
ಮುಂದಿನ ಜನ್ಮವಷ್ಟೇ ಅಲ್ಲ, ಕಾಲ ಸ್ಥಬ್ಧವಾಗುವವರೆಗೂ
ಅವಳ ನೆನಪು ನನ್ನ ಕಾಡುತ್ತಲೇ ಇರುತ್ತದೆ.
(23)
ಇಂದಿಗೂ
ನನ್ನ ಧ್ಯಾನಿಸುವ ಅವಳ ಒದ್ದೆ ಕಣ್ಣುಗಳು
ದಿನದ ಕೊನೆಗೆ ಎದುರಾಗಿ
ತನ್ನ ಹೆಮ್ಮೆಯ ಮೊಲೆಗಳ ರುಚಿಯ
ಸವಿಯಲು ಆಹ್ವಾನ ನೀಡಿದರೆ
ನಾನು ರಾಜ್ಯದ ದೊರೆಗಳೂ, ಸ್ವರ್ಗದ ಒಡೆಯರೂ
ಅನುಭವಿಸಬಹುದಾದ ಎಲ್ಲ ಸುಖಗಳನ್ನು
ಕಾಲಕಸ ಮಾಡಿಬಿಡುತ್ತೇನೆ.
(25)
ಇಂದಿಗೂ,
ಅವಳನ್ನ ಮರೆಯಲಾಗುತ್ತಿಲ್ಲ.
ಪ್ರೀತಿ, ಹಟ ಹಿಡಿದು
ಹಿಂಸೆ ಮಿತಿ ಮೀರಿದಾಗಲೆಲ್ಲ,
ಹಸಿ ಬಟ್ಟೆಯಂತೆ ಸುತ್ತಿಕೊಳ್ಳುತ್ತಿದ್ದಳು ನನ್ನ.
ಆದರೆ ಇಂದು ಅವಳ ಬಗ್ಗೆ ಕರುಣೆ ಉಕ್ಕುತ್ತಿದೆ
ಪ್ರಿಯಕರನ ಆಸರೆಯಿಲ್ಲದೆ,
ಬದುಕನ್ನೇ ಒಂದು ದೊಡ್ಡ ತಮಾಷೆ ಮಾಡಿಕೊಂಡಿದ್ದಾಳೆ.
(26)
ಇಂದಿಗೂ
ನೆನಪಿದೆ ನನಗೆ,
ಆಕೆ ಚೆಲುವೆಯರಲ್ಲೇ ಅದ್ವಿತೀಯಳು
ಉತ್ಕಟತೆಯ ಭರಿಸಲು ಹೇಳಿ ಮಾಡಿಸಿದ ಪಾತ್ರೆ
ರಾಜನ ಮಗಳು ಒಂದೇ ಸವನೇ ಬೇಡುತ್ತಿದ್ದಾಳೆ
“ಈ ವಿರಹದ ಉರಿ ನನ್ನ ಸಾಯಿಸುತ್ತಿದೆ,
ಪಾರು ಮಾಡಿ, ಪಾರು ಮಾಡಿ ”
(27)
ಇಂದಿಗೂ,
ಸಾವು ಇನ್ನೇನು ಹತ್ತಿರದಲ್ಲಿದೆ
ಎಂಬುದು ಖಚಿತವಾದ ಮೇಲೆ
ನನ್ನ ಧ್ಯಾನ, ದೇವರಿಂದ ದೂರವಾಗಿ
ಅಚ್ಚರಿಯಿಂದ ಆಕೆಯೆಡೆ ಹರಿಯುತ್ತಿದೆ.
ಏನು ಮಾಡಲಿ ನಾನು?
ನನಗೇ ಬರೀ ಆಕೆಯದೇ ಗೀಳು
“ಆಕೆಯೇ ನನ್ನ ಪ್ರೇಮ,
ಆಕೆಯ ಸರ್ವಸ್ವ.
ಆಕೆ ನನ್ನವಳು ಮಾತ್ರ.”
(28)

ಇಂದಿಗೂ
ನೆನಪಿದೆ ನನಗೆ,
ರಾಜ, ನನ್ನ ಹೆಸರಿಗೆ ಮರಣ ಶಾಸನ ಬರೆದದ್ದು
ಅವಳಿಗೆ ಗೊತ್ತಾದ ದಿನ,
ಬೆದರಿದ ಜಿಂಕೆಯಂಥ ಅವಳ ಕಣ್ಣುಗಳು
ನೋವಿನಿಂದ ಒಡೆದ ಅವಳ ಸಣ್ಣ ದನಿ
ಕಣ್ಣುಗಳಿಂದ ಒಂದೇಸವನೇ ಹರಿಯುತ್ತಿದ್ದ ಕಣ್ಣೀರು
ಸಂಕಟದಿಂದ ಪೇಲವವಾಗಿದ್ದ ಅವಳ ಮುಖ
ಎಲ್ಲ ನೆನಪಿದೆ ನನಗೆ.
(29)
ಇಂದಿಗೂ,
ನನ್ನ ಕಣ್ಣುಗಳ ಎಷ್ಟೇ ಕೆಣಕಿದರೂ ಅವಳಿಗೆ ಪ್ರತಿಸ್ಪರ್ಧಿಯಾಗುವಂಥ
ಒಂದೇ ಒಂದು ಮುಖವೂ ಕಾಣುತ್ತಿಲ್ಲ
ಅದರ ಕಾಂತಿಯೇ ಅಷ್ಟು ಪ್ರಖರ,
ಕಣ್ಣುಕುಕ್ಕಿಸುವಂಥದು
ಚಂದ್ರನನ್ನಷ್ಟೇ ಅಲ್ಲ ಪ್ರೀತಿಯನ್ನೂ
ನಿವಾಳಿಸಿ ಎಸೆಯಬೇಕು ಅವಳ ಮುಂದೆ.
(30)
ಇಂದಿಗೂ
ನೆನಪಿದೆ ನನಗೆ,
ಅವಳ ಸಣ್ಣ ಸಣ್ಣ ಅಗಲಿಕೆಯಲ್ಲೂ ದೇಹ ವಿಷವಾಗುತ್ತಿತ್ತು
ಮತ್ತೆ ಕೂಡಿದಾಗ ಅಮೃತ, ಕಟ್ಟೆ ಒಡೆದು ಹರಿಯುತ್ತಿತ್ತು
ನನ್ನ ಬದುಕಿನ ಚುಕ್ಕಾಣಿ,
ನನ್ನ ಪ್ರೀತಿಯ ಗಾಯಗಳ ಸಂಜೀವಿನಿ
ಸುಂದರ ಹುಡುಗಿಯ ಶ್ರೀಮಂತ ಕೇಶರಾಶಿ.
(31)
ಇಂದಿಗೂ,
ನನಗೆ ಹೆದರಿಕೆಯಾಗುತ್ತದೆ,
ನನ್ನಿಂದಾಗಿ ಅವಳು ಅನುಭವಿಸಿದ್ದನ್ನ ನೆನೆಸಿಕೊಂಡರೆ.
ಆದರೂ ಸಾವಿನ ಗುತ್ತಿಗೆದಾರರ ಕಠಿಣ,
ಕ್ರೂರ ಕೈಗಳು ನನ್ನ,
ಅವಳ ಕೋಣೆಯಿಂದ
ಎಳೆದು ಕರೆದೊಯ್ದವು.
(32)
ಇಂದಿಗೂ,
ನನ್ನ ಎದೆ,
ಹಗಲು ರಾತ್ರಿ ಅವಳಿಗಾಗಿ ಚಡಪಡಿಸುತ್ತದೆ
ಅವಳ ಪೂರ್ಣ ಚಂದಿರನಂಥ ಮುಖ ನೋಡುವ ಭಾಗ್ಯ
ಇನ್ನೂ ನನಗಿಲ್ಲ
ಅವಳ ಉಪ್ಪು ದೇಹದ ರುಚಿಯ ಮುಂದೆ
ರಾತ್ರಿ ಅರಳುವ ಮಲ್ಲಿಗೆಯ ಮಧುವೂ
ಸಪ್ಪೆಯೆನಿಸುತ್ತದೆ.
(33)
ಇಂದಿಗೂ,
ನನ್ನ ನೊಂದ ಮನಸ್ಸು ಆಕೆಗಾಗಿ
ಸಾಗರ ಬೀಳುತ್ತದೆ.
ಶಾಪಗ್ರಸ್ತ ಹುಡುಗಿ,
ನನ್ನ ಬದುಕಿನ ಒಂದೇ ಒಂದು ಸೆಲೆ,
ಯಾರೂ ಮುಡಿಯದ ಹೊಚ್ಚ ಹೊಸ ಹೂವು
ಇನ್ನೊಂದು ಜನ್ಮದಲ್ಲೂ ಆಕೆ
ನನ್ನ ವಿಧಿಯಾಗಿ ಕಾಡಲಿ.
(34)
ಇಂದಿಗೂ
ನೆನಪಿದೆ ನನಗೆ,
ಅವಳ ತುಟಿ ಜೇನು ಕದಿಯಲು
ಉನ್ಮತ್ತ ದುಂಬಿಯೊಂದು
ಅಕೆಯ ಗಲ್ಲದ ಸುತ್ತ
ಠಳಾಯಿಸುವುದು,
ಕೈ ಬೆರಳುಗಳಿಂದ ಆಕೆ
ತಪ್ಪಿಸಿಕೊಳ್ಳುವುದು,
ಆಗ ರಿಂಗಣಿಸುತ್ತಿದ್ದ
ಬಳೆಗಳ ಸದ್ದು.
ಎಲ್ಲ ನೆನಪಿದೆ ನನಗೆ.
(35)
ಇಂದಿಗೂ
ನೆನಪಿದೆ ನನಗೆ,
ಆಕೆ ಹಿಗ್ಗಿ ಹೀರೆಕಾಯಿಯಾದದ್ದು.
ಅವಳ ತುಟಿಗಳನ್ನು ಉನ್ಮತ್ತನಂತೆ ಕುಡಿದ
ನಶೆಯಲ್ಲಿ ನನ್ನ ಉಗುರಿನ ಗುರುತು
ಅವಳ ಮೊಲೆಗಳ ಮೇಲೆ ಮೂಡಿದ್ದು,
ಆ ಗುರುತನ್ನ ಆಕೆ ಒಮ್ಮೆ ದಿಟ್ಟಿಸಿ,
ತೃಪ್ತಿಯ ನಗೆ ಬೀರಿ,
ನೆನಪಲ್ಲಿ ಜೋಪಾನ ಮಾಡಿಕೊಂಡದ್ದು
ಎಲ್ಲ ನೆನಪಿದೆ ನನಗೆ.
(36)
ಇಂದಿಗೂ
ನೆನಪಿದೆ ನನಗೆ,
ನಾನು ಅವಸರದಿಂದ ಹೊರಟಾಗ
ಸಿಟ್ಟಿನಿಂದ ಕೆಂಪೇರಿದ್ದ ಅವಳ ಮುಖ,
ನಿರ್ಭಿಢೆಯಿಂದ ಆಕೆ ತಾಳ್ಮೆಗೆಟ್ಟದ್ದು,
ಖಿನ್ನಳಾಗಿ ಮುಖವೊಡ್ಡಿದ್ದು,
ನಾನು ಸಂಕೋಚವಿಲ್ಲದೇ ಚುಂಬಿಸಿದ್ದು,
ಆಕೆ ರೋಷದಿಂದ ಕಣ್ಣೀರಿಟ್ಟಿದ್ದು
ನಾನು ಅವಳ ಕಾಲ ನಡುವೆ ಅತ್ತಿದ್ದು,
ನಾನು ನಿನ್ನ ಗುಲಾಮ ಗೆಳತಿ,
ಪ್ರೀತಿಸು ಪ್ರೀತಿಸು ಎಂದು
ಆರ್ತನಾಗಿದ್ದು.
ಎಲ್ಲ ನೆನಪಿದೆ ನನಗೆ.
(37)
ಇಂದಿಗೂ
ನನ್ನ ಸೋಮಾರಿ ಮನಸ್ಸಿಗೆ
ಅವಳ ಒಡನಾಟದ್ದೇ ಧ್ಯಾನ.
ಅಂದದ ಅಂಗಾಂಗಗಳ ಅಪ್ಪುಗೆ,
ಕೇಕೆ, ಕುಣಿತ, ಕೇಳಿ
ಅನುಭವಿಸಿ
ಜೀವ ಹೊತ್ತಿಸಿಕೊಂಡ ಸುಂದರ ಕೋಣೆಗಳಲ್ಲಿ
ನನ್ನ ಉಳಿದ ಕೆಲ ದಿನಗಳ ಕಳೆಯುವ ಆಸೆ.
(38)
ಇಂದಿಗೂ
ಗೊತ್ತಿಲ್ಲ ನನಗೆ,
ಅವಳು ಶಿವ ಸಖಿಯೋ,
ಅಥವಾ ಭೂಮಿಗೆ ಬಂದ ಶಾಪಗ್ರಸ್ಥ ಗಂಧರ್ವ ಕನ್ಯೆಯೋ,
ಇಲ್ಲಾ, ವಿಷ್ಣುವಿನರಗಿಣಿ ಮಹಾಲಕ್ಶ್ಖ್ಮಿಯೋ.
ಬ್ರಹ್ಮನೇನಾದರೂ ಈ ಜಗದ ಹಾದಿ ತಪ್ಪಿಸಲು
ಇವಳನ್ನು ಸೃಷ್ಟಿಸಿದನೆ?
ಇಲ್ಲಾ,
ಅವನಿಗೇನಾದರೂ ಪರಿಪೂರ್ಣ ಕನ್ಯೆಯ
ಯೌವ್ವನವ ನೋಡುವ ಮನಸಾಯಿತೆ?
(39)
ಇಂದಿಗೂ,
ಜಗತ್ತಿನಲ್ಲಿ ಯಾರಾದರೂ
ಚಿತ್ರಿಸಬಲ್ಲರೇ ಅವಳನ್ನ ?
ನನಗಾಗಿ ಮಾತ್ರ ತೆರೆದುಕೊಳ್ಳುವ
ಸೃಷ್ಟಿಯ ಈ ಚಮತ್ಕಾರವನ್ನ?
ಸವಾಲಿಗೆ ಸಿದ್ಧರಾಗಿರುವ ಕಲಾವಿದರೇ,
ಮೊದಲು ಹೋಗಿ,
ಅನುಭವಿಸಿ ಬನ್ನಿ,
ಸರಿಸಾಟಿಯಾದ ಪವಾಡವನ್ನ.
ಆಮೇಲೆ ಶುರು ಮಾಡುವಿರಂತೆ.
(40)
ಇಂದಿಗೂ ನೆನಪಿದೆ ನನಗೆ,
ಕಾಡಿಗೆ ತಿದ್ದಿದ ಅವಳ ಕಣ್ಣುಗಳು
ಕಾದ ಬಾಯಿಯ ಕಾವು
ಸಲ್ಲಾಪದ ರುಚಿ ಹೊತ್ತಿಸಿಕೊಂಡಿರುವ ಕಿವಿಗಳು
ಎದೆಯ ಭಾರಕ್ಕೆ ನರಳುತ್ತಿರುವ ಕಿರು ನಡು
ಇಂಥ ಸೌಂದರ್ಯ ವ್ಯರ್ಥವಾದರೆ
ಯಾರು ಹೊಣೆ ಹೇಳಿ?
(41)
ಇಂದಿಗೂ,
ಬೆಳ್ಳಗಿನ ಶರತ್ಕಾಲದ ಚಂದ್ರನಂತೆ ಹೊಳೆಯುತ್ತಿರುವ
ರುಚಿಕಟ್ಟಾದ ಅವಳ ಸುಗಂಧಿತ ಮುಖ,
ಶುದ್ಧ ಮನಸ್ಸಿನ ಸಂತನ ಅಂತರಂಗದಲ್ಲೂ
ತರಂಗಗಳನ್ನೇಳಿಸಬಹುದು.
ನನಗೇನಾದರೂ ಅದು ಸಿಕ್ಕರೆ,
ಹುಚ್ಚನಂತೆ ಹೀರುತ್ತೇನೆ
ಇಲ್ಲವಾದರೆ ಅದು
ಉಕ್ಕಿ ಪೋಲಾಗಿಬಿಡುತ್ತದೆ.
(42)
ಇಂದೀಗೂ,
ಪ್ರಾಣ ಕೊಟ್ಟಾದರೂ ಮರಳಿ ಪಡೆಯುತ್ತೇನೆ,
ಕಾಮ ಕರುಣಿಸಿದ
ಉತ್ಕಟ ಜೀವದ್ರವ್ಯದಲ್ಲಿ ತೊಯ್ದು ಪವಿತ್ರವಾದ,
ಕಮಲ ಪರಾಗದ ಸುಗಂಧ ಪ್ರೀತಿಯ.
(43)
ಇಂದಿಗೂ,
ಒಂದಕ್ಕಿಂತ ಒಂದು ಪರಿಪಕ್ವ
ಸೌಂದರ್ಯಗಳಿಂದ ತುಂಬಿ ತುಳುಕುತ್ತಿರುವ
ಈ ಶ್ರೀಮಂತ ಜಗತ್ತಿನಲ್ಲಿ,
ನನ್ನೆದೆಗೀಗ ಖಾತ್ರಿಯಾಗಿದೆ,
ಇವಳ ವೈಯ್ಯಾರದ ಮುಂದೆ
ಬೇರೆ ಯಾವುದೂ ಸರಿಸಾಟಿಯಿಲ್ಲ ಎಂದು.
(44)
ಇಂದಿಗೂ,
ನನ್ನಂತರಂಗದ ನದಿಯಲ್ಲಿ ಆಕೆ ಎಬ್ಬಿಸುತ್ತಿರುವ
ಅಲೆಗಳ ಮೇಲೆ ನಿಧಾನವಾಗಿ ತೆವಳುತ್ತಿದೆ ಮನಸ್ಸು
ಅವಳ ಮೈ ಜ್ವರದಿಂದ ಬಳಲುತ್ತಿದೆಯಂತೆ
ಕದಂಬ ಹೂಗಳ ಸ್ಪರ್ಶ ಅವಳನ್ನು ಸುಡುತ್ತಿದೆಯಂತೆ.
(45)
ಇಂದಿಗೂ
ಅವಳ ಬಳಲಿದ ಕಣ್ಗಳ ಲಂಪಟ ನೋಟ
ನನಗೆ ಮರೆಯಲಾಗುತ್ತಿಲ್ಲ.
ರಾಜನ ಮಗಳು,
ಸ್ವರ್ಗದ ಶೋಭೆಗಾಗೇ ಹುಟ್ಟಿದವಳಂತಿದೆ.
ಶಾಪಗ್ರಸ್ತ ಅಪ್ಸರೆಯರ ಕೂಸು
ಮಾಯಕಾರ್ತಿ,
ಗಂಧರ್ವ ಕನ್ಯೆ ಅಥವಾ ಸರ್ಪದ ಆತ್ಮ.
(46)
ಇಂದಿಗೂ,
ಮರೆಯಲಾಗುತ್ತಿಲ್ಲ
ಆಕೆ ನಿದ್ದೆಯಿಂದ ಎಚ್ಚರವಾಗುತ್ತಿದ್ದ ಪರಿ
ಅವಳ ದೇಹದ ಅದ್ವಿತೀಯ ತಿರುವುಗಳು
ಜೇನು ತುಂಬಿ ಬಿರಿಯುತ್ತಿರುವ ಕುಂಭದಂಥ ಮೊಲೆಗಳು
ದಟ್ಟ ಬಣ್ಣಗಳ ಆಭರಣಗಳಿಂದ
ಅಲಂಕೃತವಾಗಿರುತ್ತಿದ್ದ ಅವಳ ದೇಹ
ಎಲ್ಲ ನೆನಪಿದೆ ನನಗೆ.
(47)
ಇಂದಿಗೂ
ನೆನಪಿದೆ ನನಗೆ,
ಅವಳ ಉತ್ಸಾಹರಹಿತ ದೇಹ
ತಿಕ್ಕಿದ ಬಂಗಾರದಂತೆ ಥಳ ಥಳ ಹೊಳೆಯತೊಡಗಿದ್ದು,
ನಾಚಿಕೆಯ ಮಾತು ಕೇಳಿ ಆಕೆ
ಬಳಲಿದವಳಂತೆ ನಾಟಕ ಮಾಡಿದ್ದು,
ನಮ್ಮ ಅಂಗಾಂಗಗಳ ಸ್ಪರ್ಷ, ಚುಂಬನ
ಆಕೆಯ ಲಂಪಟಳನ್ನಾಗಿಸಿದ್ದು,
ಕಾಡಿನಲ್ಲೊಂದು ಸಂಜೀವಿನಿ ಸಿಕ್ಕಂತಾಗಿ
ಒಮ್ಮೆಲೇ ಮಂಕು ಹರಿದು ಹೋಗಿದ್ದು,
ಎಲ್ಲ ನೆನಪಿದೆ ನನಗೆ.
(48)
ಇಂದಿಗೂ
ನೆನಪಿದೆ ನನಗೆ,
ನನ್ನ ಪ್ರೇಮದಾಕ್ರಮಣವನ್ನು,
ಆಕೆ ಬರಿಗೈಯಿಂದಲೆ ಎದುರಿಸಿದ್ದು,
ಹಲ್ಲೂರಿದ ತುಟಿಗಳಿಂದೊಸರುತ್ತಿರುವ ರಕ್ತ,
ಅಂಗಾಗಗಳ ಮೇಲಿನ ಉಗುರಿನ ಹಲ್ಲೆಯಿಂದ
ವಿಚಲಿತಳಾಗದೆ
ಬರೀ ಏರಿಳಿತಗಳ ಶಿಸ್ತಿನಿಂದಲೇ
ನನ್ನ ಸೋಲಿಸಿದ್ದು,
ಈ ದ್ವಂದ್ವಯುದ್ಧದಲ್ಲಿ
ಅಕೆಯ ಸರ್ವಾಧಿಕಾರಿ ವ್ಯಕ್ತಿತ್ವ
ನನ್ನನ್ನು ಮಂತ್ರ ಮುಗ್ಧನನ್ನಾಗಿಸಿದೆ.
(49)
ಇಂದಿಗೂ,
ಹೇಗೆ ಸಹಿಸಲಿ ನಾನು?
ಆಕೆ ಕೊಟ್ಟ ಉಡುಗೊರೆಗಳು ಇನ್ನಿಲ್ಲ.
ಇದಕ್ಕೊಂದೇ ಪರಿಹಾರ
ನಾನೇ ಇಲ್ಲವಾಗಬೇಕು.
ಓ ದೇವರೆ ! ಬೇಗ ಮುಗಿಸು
ದಯವಿಟ್ಟು.
(50)
ಇಂದಿಗೂ
ಶಿವ, ಕಾಳ ಕಾರ್ಕೋಟಕವನ್ನು ಬೇಡ ಅನ್ನುವುದಿಲ್ಲ,
ಕೂರ್ಮ, ಭೂಮಿಯ ಭಾರವನ್ನು ಹೊತ್ತುಕೊಂಡೇ ಇದ್ದಾನೆ,
ಸಾಗರ, ಒಳಗೆ ಕುದಿಯುತ್ತಿರುವ ಅಗ್ನಿಯನ್ನು ಸಹಿಸಿಕೊಂಡಿದ್ದಾನೆ,
ನಂಬಿಗಸ್ತರು ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ.







WOW!!!