ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಣ್ಣಿದಾಂಡು…

-ರೇಣುಕಾ ಕೋಡಗುಂಟಿ

ಅದೊ೦ದು ಚಿಕ್ಕ ಗ್ರಾಮ, ಹೆಚ್ಚೆಂದರೆ ಒಂದು ನೂರು ಮನೆಗಳು ಮಾತ್ರ ಇರುವಂತಹ ಊರು ಅದಾಗಿತ್ತು. ಗ್ರಾಮದ ಎಡ ಭಾಗಕ್ಕೆ ಹಳ್ಳ ಹರಿಯುತ್ತಿತ್ತು. ಊರಿನ ಜನರೆಲ್ಲರು ಬಟ್ಟೆ ತೊಳೆಯಲು, ದನಕರಗಳನ್ನ ತೊಳೆಯಲು ಇಲ್ಲಿಗೇ ಬರುತ್ತಿದ್ದರು. ಬಹಳ ವಿಶಾಲವಾಗಿ ಹರಿಯುತ್ತಿದ್ದ ಹಳ್ಳದ ಮಧ್ಯ ಭಾಗದಲ್ಲಿ ಒಂದಿಷ್ಟು ಜಾಗ ಮರಳಿನಿಂದ ತುಂಬಿಕೊ೦ಡಿತ್ತು. ಜನರು ಆ ಜಾಗದಲ್ಲಿ ವರತಿಯನ್ನು ತೋಡಿ ಅದರೊಳಗಿನ ನೀರನ್ನು ಕುಡಿಯಲೆಂದು ತೆಗೆದುಕೊಂಡು ಹೋಗುತ್ತಿದ್ದರು. ಹಳ್ಳದ ವರತಿಯ ನೀರು ಅದೆಷ್ಟು ಶುದ್ಧ ಮತ್ತು ಸಿಹಿಯಾಗಿ ಇರುತ್ತಿತ್ತೆಂದರೆ, ಆ ನೀರನ್ನು ಕುಡಿದರೆ ಅಮೃತವನ್ನೆ ಕುಡಿದಂತೆ ಇರುತ್ತಿತ್ತು. ಊರ ಜನರೆಲ್ಲರು ಬಿಂದಿಗೆಗಳನ್ನು ತಂದು ಅದರಲ್ಲಿ ಈ ಹಳ್ಳದ ವರತಿಯ ನೀರನ್ನು ತುಂಬಿಕೊ೦ಡು ಹೋಗುತ್ತಿದ್ದರು. ಒಬ್ಬೊಬ್ಬರು ಒಂದೊ೦ದು ತರದ ಬಿಂದಿಗೆಗಳನ್ನು ತರುತ್ತಿದ್ದರು. ಮಣ್ಣಿನ ಬಿಂದಿಗೆ, ಹಿತ್ತಾಳಿ ಬಿಂದಿಗೆ, ತಾಮ್ರದ ಬಿಂದಿಗೆ, ಪ್ಲಾಸ್ಟಿಕ್ ಬಿಂದಿಗೆ ಹೀಗೆ ಬಗೆ ಬಗೆಯ ಬಿಂದಿಗೆಗಳನ್ನು ಹಿಡಿದುಕೊಂಡು, ನೀರನ್ನು ಒಯ್ಯಲು ಹಳ್ಳಕ್ಕ ಬರುತ್ತಿದ್ದರು.

ಹಳ್ಳದಲ್ಲಿ ವರ್ಷ ಪೂರ್ತಿ ನೀರು ಹರಿಯುತ್ತಲೆ ಇರುತ್ತಿತ್ತು. ಇಡೀ ಗ್ರಾಮಕ್ಕೆ ಹಳ್ಳವು ಎಲ್ಲದಕ್ಕೂ ಆಸರೆ ಆಗಿತ್ತು. ಮಕ್ಕಳೂ ಕೂಡ ಆಗಾಗ ಹಳ್ಳಕ್ಕೆ ಹೋಗಿ ಆಟವಾಡುವುದು, ಈಜುವುದು, ಮೀನುಗಳನ್ನು ಹಿಡಿಯುವುದು ಮಾಡುತ್ತಿದ್ದರು. ಹಳ್ಳದ ಎರಡೂ ಬದಿಯಲ್ಲಿ ಮರಗಳು ತುಂಬಿಕೊ೦ಡಿದ್ದವು. ಆ ಹಳ್ಳಿಯು ಮನೆಗಳಿಗಿಂತಲೂ, ಮರಗಳಿಂದ ಅಂದರೆ ಹಸಿರಿನಿಂದ ತುಂಬಿಕೊ೦ಡಿತ್ತು. ದೂರದಲ್ಲಿ ನಿಂತು ಈ ಗ್ರಾಮವನ್ನು ನೋಡಿದರೆ, ಗ್ರಾಮವು ಹಸಿರು ಸೀರೆಯನ್ನು ಉಟ್ಟು ನಿಂತ೦ತೆ ಕಂಗೊಳಿಸುತ್ತಿತ್ತು.

ಈ ಗ್ರಾಮದಲ್ಲಿ ಇರುವುದು ಒಂದೇ ಒಂದು ಶಾಲೆ ಎಂದರೆ ಅದು ಹಳ್ಳದ ಬದಿಯಲ್ಲಿ ಇರುವ ಶಾಲೆ. ಶಾಲೆಗೆಂದು ಪ್ರತ್ಯೇಕವಾದ ಕಟ್ಟಡ ಇರಲಿಲ್ಲ ಹಾಗಾಗಿ ಹಳ್ಳದ ಬದಿಯಲ್ಲಿ ಇರುವ ಹನುಮಂತ ದೇವರ ಗುಡಿಯಲ್ಲೆ ಶಾಲೆಯನ್ನು ನಡೆಸಲಾಗುತ್ತಿತ್ತು. ಆ ಗ್ರಾಮದ ಮಕ್ಕಳೆಲ್ಲರು ಅದೇ ಶಾಲೆಗೆ ಹೋಗುತ್ತಿದ್ದರು. ಶಾಲೆಯು ಹಳ್ಳದ ಬದಿಯಲ್ಲಿಯೇ ಇದ್ದುದರಿಂದ ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಕೆಲವು ಮಕ್ಕಳು ಹಳ್ಳಕ್ಕೆ ಓಡಿ ಹೋಗಿ ಆಟವಾಡಿ ಬರುತ್ತಿದ್ದರು. ಆ ಶಾಲೆಯಲ್ಲಿ ಮಂಜ, ಕುಮಾರ, ಸದಾಶಿವ, ನಾರಾಯಣ ಎಂಬ ನಾಲ್ಕು ಜನ ಸ್ನೇಹಿತರಿದ್ದರು. ಇವರು ಯಾವಾಗಲೂ ಜೊತೆಯಲ್ಲೆ ಇರುತ್ತಿದ್ದರು. ಆಟ, ಊಟ, ಪಾಠ ಎಲ್ಲದಕ್ಕೂ ನಾಲ್ಕೂ ಜನ ಜೊತೆಯಲ್ಲಿಯೆ ಇರುತ್ತಿದ್ದರು. ಒಂದು ದಿನ ಮಂಜ ತನ್ನ ಪಾಟಿಚೀಲದಲ್ಲಿ ಚಿಣ್ಣಿದಾಂಡನ್ನು ಇಟ್ಟುಕೊಂಡು ಶಾಲೆಗೆ ಬಂದಿದ್ದನು. ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಅದನ್ನು ಆಡಲು ಮೈದಾನಕ್ಕೆ ತಂದನು.

ಮಂಜನ ಕೈಯಲ್ಲಿನ ಚಿಣ್ಣಿದಾಂಡನ್ನು ನೋಡಿ ಸದಾಶಿವ “ಅಯ್ಯೊ ಚಿಣ್ಣಿದಾಂಡನ್ನ ಶಾಲೆಗೆ ಯಾಕೆ ತಂದಿದ್ದಿಯಾ, ಮಾಸ್ತರ‍್ರು ನೋಡಿದರೆ ಬೈತಾರೆ” ಎನ್ನುತ್ತಾ ಮಂಜನ ಮುಖವನ್ನು ನೋಡಿದನು. ಅದಕ್ಕೆ ಮಂಜ “ಏನೂ ಆಗಲ್ಲ, ಯಾಕೆ ಹೆದರಿಸ್ತಿಯಾ, ಸುಮ್ಮನೆ ಇರು.” ಎನ್ನುತ್ತಾ ದೂರದಲ್ಲಿ ನಿಂತಿದ್ದ ಕುಮಾರ ಮತ್ತು ನಾರಾಯಣನನ್ನು ಕೈ ಮಾಡಿ ಕರೆದನು. ಅವರಿಬ್ಬರು ಮಂಜನತ್ತ ಓಡಿ ಬಂದರು. ತನ್ನ ಕೈಯಲ್ಲಿರುವ ಚಿಣ್ಣಿದಾಂಡನ್ನು ಅವರಿಗೆ ತೋರಿಸಿ “ನೋಡಿಲ್ಲಿ ನನ್ನ ಕೈಯಲ್ಲಿ ಏನಿದೆ” ಎನ್ನುತ್ತಾ ಖುಷಿಯಿಂದ ತನ್ನ ಕೈಯಲ್ಲಿನ ಚಿಣ್ಣಿದಾಂಡನ್ನು ಅವರ ಮುಂದೆ ಹಿಡಿದನು. ಅದನ್ನು ನೋಡುತ್ತಿದ್ದಂತೆ “ಮಂಜ, ಶಾಲೆಯಲ್ಲಿ ಇದನ್ನೆಲ್ಲ ಆಡಬಾರದು ಕಣೊ, ಯಾರಿಗಾದ್ರು ಚಿಣಿ ಬಡಿದರೆ, ಮಾಸ್ತಾರರಿಂದ ನಾವೆಲ್ಲ ಒದೆ ತಿನ್ನಬೇಕಾಗುತ್ತದೆ” ಎಂದನು ನಾರಾಯಣ. ಅದಕ್ಕೆ ಮಂಜನು “ಮಾಸ್ತರ‍್ರು ಈ ಕಡೆ ಬರೊದಿಲ್ಲ, ಅವರಿಗೆ ಗೋತ್ತಾಗೋದಿಲ್ಲ, ಬನ್ನಿ ಬನ್ನಿ ಬೇಗ ಆಡೋಣ ಎನ್ನುತ್ತ,,, ಚಿಣಿದಾಂಡು ಆಡಲು ಗೇಣುದ್ದದ ಕುಣಿಯನ್ನು ತೋಡಲು ಮುಂದಾದನು. ಮಂಜನ ಮಾತಿಗೆ ಒಪ್ಪಿ ನಾರಾಯಣ, ಕುಮಾರ, ಸದಾಶಿವ ಮೂವರು ಮಂಜನೊ೦ದಿಗೆ ಜೊತೆಯಾದರು. ಚಿಣ್ಣಿದಾಂಡು ಆಡಲು ಬಹಳ ಉತ್ಸುಕನಾಗಿದ್ದ ಮಂಜನು, ‘ನಾನೆ ಮೊದಲು ಆಡುತ್ತೇನೆ, ಎನ್ನುತ್ತಾ ಆಡಲು ಮುಂದಾದನು. ಮಂಜನು ಆಡಲು ಮುಂದಾದ ತಕ್ಷಣ ಉಳಿದ ಮೂವರು ಏನೂ ಮರು ಮಾತನಾಡದೆ ಚಿಣಿದಾಂಡು ಆಡಲು ಜೊತೆಯಾದರು. ಚಿಣಿದಾಂಡನ್ನು ಆಡುವುದರಲ್ಲಿ ನಿಪುಣನಾಗಿದ್ದ ಮಂಜನು ತನ್ನ ಕೈಯಲ್ಲಿದ್ದ ದಂಡದಿ೦ದ, ಚಿಣಿಯನ್ನು ಜೋರಾಗಿ ಚಿಮ್ಮಿದನು. ಚಿಣಿ ದೂರಕ್ಕೆ ಹಾರಿ ಹೋಗಿ ಬಿದ್ದಿತು. ಚಿಣಿಯನ್ನು ಹಾರಿಸಿದ ಮಂಜ ಕುಣಿಯುತ್ತಾ ಚಿಣಿ ಬಿದ್ದಿರುವ ಜಾಗಕ್ಕೆ ಓಡಿ ಹೋದನು. ನಾರಾಯಣ, ಸದಾಶಿವ, ಕುಮಾರ ಅವರೂ ಕೂಡ ಓಡಿ ಬಂದು, ಚಿಣಿಯಿಂದ ಕೊಂಚ ದೂರದಲ್ಲಿ ನಿಂತರು. ಮಂಜನ್ನು ತನ್ನ ಮೂರು ಜನ ಸ್ನೇಹಿತರನ್ನು ನೋಡುತ್ತಾ “ಈಗ ನೋಡ್ತಾ ಇರಿ, ಒಂದೇ ಹೊಡೆತಕ್ಕೆ ಹೇಗೆ ಹಾರಿಸುತ್ತೇನೆಂದು,” ಎನ್ನುತ್ತಾ ಹುಬ್ಬು ಹಾರಿಸಿದನು. ಅದೇ ಹುರುಪಿನಲ್ಲಿ ಚಿಣಿಯ ಒಂದು ತುದಿಯನ್ನು ಬಡಿದು, ಮೇಲಕ್ಕೆ ಹಾರಿಸಿ, ಜೋರಾಗಿ ಹೊಡೆದುಬಿಟ್ಟನು. ಮಂಜ ಹೊಡೆದ ಚಿಣಿ ಎತ್ತ ಹೋಯಿತೆಂದು, ಚಿಣಿಯ ಹಿಂದೆಯೇ ಕಣ್ಣನ್ನು ಹರಿಸಿದ್ದ ಮೂರು ಜನರು ಇದ್ದಕ್ಕಿದ್ದಂತೆ ಗಾಬರಿ ಆದರು.

ಶಾಲೆಯು ಪಕ್ಕದಲ್ಲಿದ್ದ ಹಳ್ಳದಿಂದ ಹಿತ್ತಾಳೆಯ ಕೊಡಪಾನದಲ್ಲಿ ನೀರನ್ನು ತುಂಬಿಕೊ೦ಡು ತಲೆಯ ಮೇಲೆ ಹೊತ್ತು ಹೋಗುತ್ತಿದ್ದ ಗಿರಿಜಮ್ಮಳ ಕೊಡಪಾನ ಕ್ಷಣಾರ್ಧದಲ್ಲಿ ನೆಲಕ್ಕೆ ಬಿದ್ದುಬಿಟ್ಟಿತ್ತು.
ಮಂಜ ಹೊಡೆದ ಚಿಣಿ, ಕೊಡಪಾನ ಹಿಡಿದ ಬಲಗೈಗೆ ಬಂದು ಜೋರಾಗಿ ಬಿದ್ದಾಗ, ಗಿರಿಜಮ್ಮಳ ಕೊಡಪಾನ ನೆಲವನ್ನು ಸೇರಿಬಿಟ್ಟಿತು. ಗಿರಿಜಮ್ಮ ನೋವಾದ ಕೈಯನ್ನು ಜಾಡಿಸುತ್ತಾ ಏನಾಯಿತೆಂದು ಅತ್ತ ಇತ್ತ ಕಣ್ಣಾಡಿಸಿದಾಗ ಹತ್ತಿರದಲ್ಲೆ ಬಿದ್ದಿದ್ದ ಚಿಣಿ ಕಣ್ಣಿಗೆ ಬಿದ್ದಿತು. ಕಾರಣ ಇದೆ ಎಂದು ತಿಳಿಯುವುದು ತಡವಾಗಲಿಲ್ಲ. “ಏ ಯಾವಾನೊ ಅವನು ಚಿಣಿ ಹೊಡೆದೋನು” ಅಂತ ಜೋರಾಗಿ ಕೂಗಿದಳು. ಈ ನಾಲ್ಕು ಜನ ಸ್ನೇಹಿತರಿಗು ಏನು ಮಾಡಬೇಕೆಂದು ತಿಳಿಯದೆ ಗರ ಬಡಿದವರಂತೆ ನಿಂತುಬಿಟ್ಟರು. ಗಿರಿಜಮ್ಮ ವಟಗುಟ್ಟುತ್ತ ತನ್ನ ಕೊಡಪಾನದತ್ತ ನೋಡಿದಾಗ, ಅದು ನೆಲಕ್ಕೆ ಬಿದ್ದು ನರಳತೊಡಗಿತ್ತು. ನೆಲಕ್ಕೆ ಬಿದ್ದ ರಭಸಕ್ಕೆ ಕೊಡಪಾನದ ತಳ, ಬಾಯಿ ತೆರೆದುಕೊಂಡುಬಿಟ್ಟಿತ್ತು. ಕೊಡಪಾನದಲ್ಲಿದ್ದ ನೀರೆಲ್ಲ ಭೂಮಿ ತಾಯಿಯ ಮಡಿಲು ಸೇರಿತ್ತು. ಆ ಕೊಡಪಾನ, ಗಿರಿಜಮ್ಮನಿಗೆ ಆಕೆಯ ಮದುವೆಯಲ್ಲಿ ತವರು ಮನೆಯವರು ಕೊಟ್ಟದ್ದಾಗಿತ್ತು. ಅದರ ಮೇಲೆ ಗಿರಿಜಮ್ಮನಿಗೆ ಬಹಳ ಪ್ರೀತಿ ಇತ್ತು. ಅದು ತಳ ಸವೆದು ಹೋಗಿ, ನೀರು ಸೋರುವಂತಾದರು. ಅದನ್ನು ಬದಲಾಯಿಸದೆ, ಅದಕ್ಕೆ ಮುವ್ವತ್ತು ಬಾರಿ, ರಿಪೇರಿ ಮಾಡಿಸಿ ಇಟ್ಟುಕೊಂಡಿದ್ದಳು.

ಪ್ರತಿದಿನ ಹಳ್ಳದ ನೀರನ್ನು ತರಲು ಅದನ್ನೇ ಬಳಸುತ್ತಿದ್ದಳು. ತನ್ನ ಜೀವದಂತಿರುವ ಆ ಕೊಡಪಾನದ ಗತಿಯನ್ನು ಕಂಡು ಗಿರಿಜಮ್ಮನಿಗೆ ಸಿಟ್ಟು ಬಂದಿತು. ಆ ಕೊಡಪಾವನ್ನು ಕೈಯಲ್ಲಿ ಹಿಡಿದುಕೊಂಡು, “ಯಾವಾನೊ ಅವನು ನನ್ನ ಕೊಡಪಾನವನ್ನ ಮುರಿದು ಹಾಕಿದೋನು, ಮುವ್ವತ್ತು ವರ್ಷದಿಂದ ಕಾಳಜಿಯಿಂದ ಕಾಪಾಡಿಕೊಂಡು ಬಂದಿರೊ, ನನ್ನ ಕೊಡಪಾನ ಹಾಳಾಗಿಬಿಡ್ತಲ್ಲಾ” ಎನ್ನುತ್ತ ಈ ನಾಲ್ಕುಜನರತ್ತ ಧಾವಿಸಿದಳು. ಇವರಿಗೆ ಭಯ ಶುರುವಾಯಿತು. ಚಿಣಿಯನ್ನು ಹೊಡೆದ ಮಂಜ ಭಯದಿಂದ ಗಡ ಗಡ ನಡುಗತೊಡಗಿದ. ಆ ಭಯದಲ್ಲಿ ಏನು ಮಾಡಬೇಕೆಂದು ತಿಳಿಯದೆ ಮಂಜ ನಿಂತಲ್ಲೆ ಉಚ್ಚೆ ಮಾಡಿಕೊಂಡುಬಿಟ್ಟನು. ಮಂಜ ಚಿಣಿಯನ್ನು ಹಾರಿಸಿದ್ದ, ದಂಡ ಮಾತ್ರ ಅವನ ಕೈಯಲ್ಲೆ ಇತ್ತು. ಆಗ ಕುಮಾರ ಬುದ್ದಿವಂತಿಕೆಯಿ೦ದ ಗಿರಿಜಮ್ಮನಿಗೆ ಗೊತ್ತಾಗದಂತೆ ಮಂಜನ ಕೈಯಲ್ಲಿನ ದಂಡವನ್ನು ಮೆಲ್ಲಗೆ ತೆಗೆದುಕೊಂಡು, ತನ್ನ ಅಂಗಿಯಲ್ಲಿ ಮುಚ್ಚಿಟ್ಟುಕೊಂಡನು. ಕುಮಾರ ಬಹಳ ತೆಳ್ಳಗೆ ಇದ್ದ, ಅವನು ಯಾವ ಅಂಗಿ ಹಾಕಿದರೂ ಅದು ಅವನಿಗೆ ಸಡಿಲವಾಗಿರುತ್ತಿತ್ತು. ಅದನ್ನೆ ಬಳಸಿಕೊಂಡ ಕುಮಾರ, ತನ್ನ ಸ್ನೇಹಿತನನ್ನು ಪಾರು ಮಾಡುವ ಪ್ರಯತ್ನದಿಂದ ದಂಡವನ್ನು ತನ್ನ ಅಂಗಿಯ ಒಳಗೆ ಸೇರಿಸಿಕೊಂಡು ಕಂಕುಳಿನಲ್ಲಿ ಬಿಗಿಯಾಗಿ ಹಿಡಿದುಕೊಂಡುಬಿಟ್ಟನು.

ಗಿರಿಜಮ್ಮ ಇವರ ಹತ್ತಿರಕ್ಕೆ ಬಂದು “ಏಯ್ ಈ ಚಿಣಿ ಹೊಡೆದೊನು ಯಾರು?, ಎಂದು ಗದರಿಸಿದಳು, ಆಗ ಪ್ಲಾನ್ ಫಿಕ್ಸ್ ಮಾಡಿಕೊಂಡಿದ್ದ ಕುಮಾರ, “ಚಿಣಿ ಹೊಡೆದೋರು ನಾವಲ್ಲ, ನಾವು ಶಾಲೆಗೆ ಬಂದಿದ್ದೇವೆ. ಶಾಲೆಗೆ ಚಿಣಿ ಕೋಲು ತಂದರೆ, ನಮ್ಮ ಮಾಸ್ತರ‍್ರು ಬೈತಾರೆ. ಇದುವರೆಗು ಇಲ್ಲಿ ಚಿಣಿ ಆಡ್ತಿದ್ದೋರು, ಬೇರೆಯವರು, ನಮ್ಮ ಶಾಲೆಯವರು ಅಲ್ಲ, ನಿಮ್ಮ ಕೊಡ ಬಿದ್ದ ತಕ್ಷಣ ಓಡಿ ಹೋದ್ರು ಎಂದು ಬುದ್ದಿವಂತಿಕೆಯಿ೦ದ ನುಡಿದುಬಿಟ್ಟ. ಅಷ್ಟರಲ್ಲಿ ಶಾಲೆಯ ಆಟದ ಸಮಯ ಮುಗಿಯಿತು, ಶಾಲೆಯ ಗಂಟೆ ಸದ್ದಾಯಿತು. ಶಾಲೆಯ ಆ ಗಂಟೆಯ ಸದ್ದು ಇವರನ್ನು ಹುಲಿ ಬಾಯಿಯಿಂದ ರಕ್ಷಿಸಿದಂತೆ ಆಯಿತು. ಗಂಟೆಯ ಸದ್ದು ಕೇಳುತ್ತಿದ್ದಂತೆ ಗರ ಬಡೆದವನಂತೆ ನಿಂತಿದ್ದ ಮಂಜನನ್ನು ಎಳೆದುಕೊಂಡು ನಾಲ್ಕು ಜನರು ಶಾಲೆಯ ಒಳಕ್ಕೆ ಓಡಿದರು. ಇತ್ತ ಗಿರಿಜಮ್ಮ ಬಾಯಿಗೆ ಬಂದ೦ತೆ ಬಯ್ಯುತ್ತ, ಬೇರೆ ದಾರಿ ಇಲ್ಲದೆ ತಳ ಹೊಡೆದ ಕೊಡಪಾನವನ್ನು ಹಿಡಿದುಕೊಂಡು ಮನೆಗೆ ಮರಳಿದಳು.

‍ಲೇಖಕರು Admin

2 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading