ಮೂಲ ತೆಲುಗಿನಲ್ಲಿ ವಾಸಮೂರ್ತಿ ಬರೆದ, ಕನ್ನಡಕ್ಕೆ ವಿಸ್ತರಿಸಿದ ಪುಸ್ತಕ ಎಂ ಆರ್ ಗುರು ಪ್ರಸಾದ್ ಅವರ ‘ತುಂಟ ಗೋಪಿಯ ಅದ್ಭುತ ಯಾತ್ರೆ’
ಈ ಪುಸ್ತಕವನ್ನು ‘ಅಮೂಲ್ಯ ಪುಸ್ತಕ’ ಪ್ರಕಟಿಸಿದೆ.
ಈ ಪುಸ್ತಕದ ಕುರಿತು ತಮ್ಮಣ್ಣ ಬೀಗಾರ ಅವರ ಒಂದು ನೋಟ ಇಲ್ಲಿದೆ.
-ತಮ್ಮಣ್ಣ ಬೀಗಾರ
ಇದೊಂದು ತುಂಟ ಬಾಲಕ ಗೋಪಿಯ ಸುತ್ತ ಹರಡಿಕೊಂಡ ಕಥೆ. ಗೆಳೆಯರಿಗೆ ಚಿವುಟುವುದು, ಪುಸ್ತಕ ಅಡಗಿಸುವುದು, ಜಗಳ ಆಗುವಂತೆ ಮಾಡಿ ಮಜಾ ನೋಡುವುದು, ಮನೆಯಲ್ಲಿ ಬೆಕ್ಕಿನ ಬಾಲಕ್ಕೆ ಡಬ್ಬಿ ಕಟ್ಟುವುದು ಹೀಗೆ ಕೀಟಲೆಯಲೆ ಮಾಡುವುದೇ ಅವನ ಮೂಲ ಗುಣವಾಗಿತ್ತು. ಶಾಲೆಯಲ್ಲಿಯೂ ಶಿಕ್ಷೆಗೆ ಒಳಗಾಗುತ್ತಿದ್ದ. ಆಟವಾಡುವುದರಲ್ಲೂ ಗೋಪಿ ನಿಯಮ ಪಾಲಿಸುತ್ತಿರಲಿಲ್ಲ. ಗೆಲುವು ಯಾವಾಗಲೂ ಅವನದೇ ಆಗಬೇಕು ಇಲ್ಲದಿದ್ದರೆ ಜಗಳ ಹೊಡೆದಾಟ. ಇಂತಹ ಹುಡುಗನಿಗೆ ತಿರುವೊಂದು ಉಂಟಾಗುತ್ತದೆ.
ಗೋಪಿ ಚಿಟ್ಟೆ ಹಿಡಿದು ಅದಕ್ಕೆ ದಾರ ಕಟ್ಟಲು ಹೋದಾಗ ಚಿಟ್ಟೆ “ಬೇಡ ಬೇಡ ಎಂದು ಹೇಳುತ್ತಾ ನನ್ನಷ್ಟು ಚಿಕ್ಕವನಾದರೆ ನನ್ನ ಸಂಕಟ ನಿನಗೆ ಗೊತ್ತಾಗುತ್ತಿತ್ತು” ಅಂದಿತು ಮತ್ತು ನನ್ನಂತೆ ನಿನ್ನನ್ನು ಚಿಕ್ಕದಾಗಿಸುವೆ ಎಂದು ಹೇಳಿ ಅವನನ್ನು ಕೀಟದಷ್ಟು ಚಿಕ್ಕ ಮನುಷ್ಯನನ್ನಾಗಿಸಿತು. ನಂತರ ಅವನ ಗಾಬರಿ ಸಂಕಟ ಎಲ್ಲ ಶುರುವಾಗುತ್ತದೆ.
ಮಕ್ಕಳು ಉಪದೇಶಕ್ಕಿಂತ ಪರಿಸರ ಪ್ರಭಾವ ಹಾಗೂ ಲೋಕಾನುಭವಗಳ ಮೂಲಕ ಪಕ್ವವಾಗುವುದೇ ಹೆಚ್ಚು. ಪ್ರಾಣಿ ಸಸ್ಯ ಜಗತ್ತಿನೊಂದಿಗೆ ಅವನ ಒಡನಾಟ ಮಗುತನದ ಸಹಜ ನೋಟದಲ್ಲೇ ಅರಳಿ ಎಲ್ಲರಿಗೂ ಇಷ್ಟವಾಗುವಂತಿದೆ.
ಕಥೆಯಲ್ಲಿ ಗೋಪಿ ಹೇಗೆಲ್ಲಾ ಅನುಭವಗಳನ್ನು ಅನುಭವಿಸಿದ, ಅದು ಹೇಗೆ ಅವನಲ್ಲಿ ತಾನಾಗಿ ಅರಿವು ಉಂಟುಮಾಡಿತು ಎನ್ನುವುದನ್ನು ಪುಸ್ತಕ ಓದಿಯೇ ಖಷಿಪಡಬೇಕು. ತೆಲುಗಿನಲ್ಲಿ ವಾಸಮೂರ್ತಿ ಬರೆದ ಈ ಪುಸ್ತಕ 1958 ರಲ್ಲೇ ಪ್ರಕಟವಾಗಿ ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಿತವಾಗಿತ್ತು. ಈಗ ಇದನ್ನು ಕನ್ನಡಕ್ಕೆ ವಿಸ್ತರಿಸಿದವರು ಎಂ. ಆರ್. ಗುರು ಪ್ರಸಾದ್. ಪ್ರಕಟಿಸಿದವರು ಅಮೂಲ್ಯ ಪುಸ್ತಕ ಬೆಂಗಳೂರು.






0 Comments