ಕಡುವಾಸ್ತವಕ್ಕೆ ನಮ್ಮನ್ನು ಒಡ್ಡಿದ ಶಿವಾನಂದ ತಗಡೂರು…

ಚಲಂ ಹಾಡ್ಲಹಳ್ಳಿ
ಕೆಲಸ ಮಾಡುವ ಹುಮ್ಮಸ್ಸಿದ್ದರೆ ಇರುವ ಸಾಧ್ಯತೆಗಳನ್ನು ಹೇಗೆ ಉಪಯೋಗಿಸಿಕೊಂಡು ಜನೋಪಯೋಗಿ ಕೆಲಸ ಮಾಡಬಹುದು ಎಂಬುದಕ್ಕೆ ಶಿವಾನಂದ ತಗಡೂರು ಅವರು ಸಾಕ್ಷಿ.
ನಿನ್ನೆ ಅವರ ಕೆಲಸಗಳ ಚಿಕ್ಕ ಪರಿಚಯ ಮಾಡಿಕೊಡುವ “ಕೋವಿಡ್ ಕಥೆಗಳು” ಪುಸ್ತಕ ಕೈ ಸೇರಿತು. ಕೋವಿಡ್ ಮೊದಲ ಅಲೆಯಲ್ಲಿ ಹಾಗು ನಂತರದ ದಿನಗಳಲ್ಲಿ ಪತ್ರಕರ್ತರ ಸ್ಥಿತಿ ಏನಾಗಿತ್ತು ಎಂಬುದರ ಸ್ಪಷ್ಟ ಚಿತ್ರಣ ಸಿಗಬೇಕೆಂದರೆ ಈ ಪುಸ್ತಕ ಖಂಡಿತ ಓದಬೇಕು.
ಸಣ್ಣಪುಟ್ಟ ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ದೊಡ್ಡ ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ಗ್ರಾಮೀಣ ಭಾಗದ, ನಗರ ಭಾಗದ ಹೀಗೆ ಯಾವ ವಿಭಾಗ ಕೂಡ ಇಲ್ಲದೇ ಒಂದೇ ಕೆಟಗರಿಗೆ ಸೇರಿದ ದೊಡ್ಡ ಪತ್ರಕರ್ತ ಸಮುದಾಯ ನಮಗೆ ಪರಿಚಿತವಾಗುತ್ತದೆ.
ಪತ್ರಕರ್ತರು ಎಂದರೆ ವಸೂಲಿ ಮಾಡಿಕೊಂಡು ಬಂಗಲೆ, ಆಸ್ತಿ ಮಾಡಿಕೊಂಡು ಎ ಸಿ ರೂಮಲ್ಲಿ ಬಿಂದಾಸಾಗಿ ಜೀವನ ನಡೆಸುವವರು ಎಂಬ ಮುಖ ಹೇಗೆ ಸತ್ಯವೋ ಒಂದು ಹೊತ್ತಿನ ಊಟಕ್ಕೂ ಪರದಾಡುವ ನೆಲಮಟ್ಟದ ಪತ್ರಕರ್ತರು ಇದ್ದಾರೆ ಎಂಬುದು ಕೂಡ ಅಷ್ಟೇ ಸತ್ಯ. ಈ ಎರಡನೇ ಸತ್ಯ ನಮಗೆ ಅರಿವಾಗಬೇಕೆಂದರೆ ಈ ಕೋವಿಡ್ ಕತೆಗಳನ್ನು ಓದಬೇಕು.

ಇಂದಿಗೂ ಪತ್ರಿಕೋದ್ಯಮದ ಮಾನ ಉಳಿಸುವಲ್ಲಿ ಅಂತಹಾ ಬಡಪತ್ರಕರ್ತರ ಕೊಡುಗೆ ದೊಡ್ಡದು. ಜನಸಾಮಾನ್ಯರ ಕೈಗೆ ಸಿಕ್ಕು ಕಷ್ಟಸುಖ ಕೇಳುವವರು ಕೂಡ ಇವರೇ. ಇಂತಹಾ ಪತ್ರಕರ್ತರು ಕೊರೋನಾ ಸಮಯದಲ್ಲಿ ಹೇಗೆ ಆರ್ಥಿಕ ಹಾಗು ಆರೋಗ್ಯದ ಸಮಸ್ಯೆ ಎದುರಿಸಿದರು ಎಂಬುದನ್ನು ಓದುತ್ತಾ ಹೋದಂತೆ ಸಂಕಟವಾಗುತ್ತದೆ.
ವ್ಯವಸ್ಥೆಯನ್ನು ದಿಟ್ಟವಾಗಿ ಎದುರಿಸಿ ಮಾತನಾಡುತ್ತೇವೆ ಎಂದು ಜೇಬಿನಿಂದ ಪೆನ್ನು ತೆಗೆಯುವ ಪತ್ರಕರ್ತ ಎಷ್ಟು ಅಸಹಾಯಕ ಸ್ಥಿತಿಯಲ್ಲಿದ್ದಾನೆ ಎಂಬುದನ್ನು ಈ ವಾಸ್ತವ ಕತೆಗಳು ಹೇಳುತ್ತಾ ಹೋಗುತ್ತವೆ.
ಶಿವಾನಂದ ತಗಡೂರು ಕರ್ನಾಟಕ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾದ್ಯಕ್ಷರು. ಹಾಸನದ ಜ್ಞಾನದೀಪ, ಜನಮಿತ್ರ ಮುಂತಾದ ಪತ್ರಿಕೆಗಳ ಮೂಲಕ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದವರು. ಬಾಗೂರು ನವಿಲೆ ಹೋರಾಟ ಸೇರಿದಂತೆ ಹಲವಾರು ಜನಮುಖಿ ಹೋರಾಟದ ಮಂಚೂಣಿಯಲ್ಲಿ ಇದ್ದವರು.
ರಂಗಸಿರಿ ಎಂಬ ರಂಗತಂಡದ ಬೆನ್ನುಲುಬಾಗಿ ರಂಗಜಾಗೃತಿಗೆ ಕಟಿಬದ್ದರಾದವರು. ಇವರು ಏನೇ ಕೆಲಸಕ್ಕೆ ಕೈ ಹಾಕಿದರೂ ಅದಕ್ಕೊಂದು ತಾತ್ವಿಕ ಕೊನೆ ಎಂಬುದು ಕಂಡೇ ಕಾಣುತ್ತದೆ. ಅಂತಹುದೊಂದು ಭರವಸೆ ಶಿವಾನಂದ ತಗಡೂರು.
ಅವರ ಶಕ್ತಿ ಪೂರ್ಣ ಸದ್ವಿನಿಯೋಗ ಆಗಿದ್ದು ಈ ಕೋರೋನಾ ಸಮಯದಲ್ಲಿ ಎನ್ನಬಹುದು. ಸರ್ಕಾರದಿಂದ ಐದತ್ತು ಸಾವಿರ ಜನರಿಗೆ ತಲುಪಬೇಕು ಎಂದರೆ ಎಷ್ಟು ಕಷ್ಟ ಎಂಬುದು ಅರಿವಿದ್ದವರಿಗೆ ಕೊರೋನಾ ಸೋಂಕಿಗೆ ಒಳಗಾಗಿ, ಅಪಘಾತ ಮುಂತಾದ ಅವಘಡಗಳಿಗೆ ಸಿಕ್ಕಿ ಅಸುನೀಗಿದ ಪತ್ರಕರ್ತರಿಗೆ ಐದು ಲಕ್ಷದ ತನಕ ಸರ್ಕಾರದ ವತಿಯಿಂದ ಹಣ ಕೊಡಿಸುವುದು ಎಂದರೆ ಸುಲಭದ ಮಾತಲ್ಲ. ಅದಕ್ಕೆ ಏನೇನು ಹೋರಾಟ ಮಾಡಬೇಕಾಯಿತು ಎಂಬುದನ್ನು ಪುಸ್ತಕದ ಮೊದಲಿಗೆ “ಒಂದು ದೊಡ್ಡ ಟರ್ನಿಂಗ್ ಪಾಯಿಂಟ್” ಎಂಬ ಅಧ್ಯಾಯದಲ್ಲಿ ಹೇಳಿದ್ದಾರೆ.
“ಆಪತ್ಬಾಂದವ” ಎಂಬ ಯೋಜನೆ ಹಾಕಿಕೊಂಡು ಪತ್ರಕರ್ತರಿಂದಲೇ ತಿಂಗಳಿಗೆ 25 ಸಾವಿರ ಹೊಂದಿಸಿಕೊಂಡು ಪರದಾಡಿದ್ದು. ಆಸ್ಪತ್ರೆಗಳು ಲಕ್ಷಲಕ್ಷ ಅಂತ ಬಾಯಿಬಡಿದುಕೊಳ್ಳುವಾಗ ಇನ್ನೂ ನೂರು, ಸಾವಿರಗಳಲ್ಲೇ ಜೀವನ ನಡೆಸುತ್ತಿದ್ದ ಈ ಪತ್ರಕರ್ತರ ಜೀವನಕ್ಕೆ ಅವರ ಜೀವಕ್ಕೆ ಬೆಲೆಯೇ ಇಲ್ಲದಂತಾದ ಸ್ಥಿತಿಯನ್ನು ಮನಮುಟ್ಟುವಂತೆ ಹೇಳಿದ್ದಾರೆ.

ಇಲ್ಲಿ ನನಗೆ ಹತ್ತಿರದ ಗೆಳೆಯನಾಗಿದ್ದ ಪವನ್ ಹೆತ್ತೂರು ಸೇರಿದಂತೆ ಹಲವರ ಜೀವನದ ಕಡೆಗಾಲದ ಕತೆಗಳಿವೆ. ಓದಿ, ಪತ್ರಿಕೋದ್ಯಮ ಅಂದರೆ ಕೇವಲ ದೊಡ್ಡವರ ಕತೆಗಳಷ್ಟೇ ಅಲ್ಲ ಎಂಬುದು ತಿಳಿಯುತ್ತಲೇ ನೆಲಮಟ್ಟದ ಪತ್ರಕರ್ತರ ಬಗ್ಗೆ ಕನಿಷ್ಠ ಸಹಾನುಭೂತಿ ಆದರೂ ಮೂಡುತ್ತದೆ.
ಇಷ್ಟೆಲ್ಲಾ ಆದ ಮೇಲೆ ಮತ್ತೊಮ್ಮೆ ಅಚ್ಚರಿ ಹಾಗು ಗೌರವ ಮೂಡುವುದು ಶಿವಾನಂದ ತಗಡೂರು ಅವರ ಬಗ್ಗೆ.
ಇಡೀ ರಾಜ್ಯವನ್ನು ಕಾಲಿಗೆ ಚಕ್ರ ಕಟ್ಟಿಕೊಂಡವರ ಹಾಗೆ ತಿರುಗಿ ಸಣ್ಣಪುಟ್ಟ ಪತ್ರಿಕೆಗಳ, ಅದರ ಕೆಲಸಗಾರರ ಅಹವಾಲಿಗೆ ಸ್ಪಂದಿಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಕುಳಿತು ಒಂದು ಬೆಡ್ ಕೊಡಿಸುವುದು ಕಷ್ಟವಾದ ನನಗೆ ಶಿವಾನಂದ ಅವರನ್ನು ನೋಡಬೇಕಾದ ಕ್ರಮ ಬೇರೆಯದೆ ಇರಬೇಕು. ಆದರೆ ಅವರ ಮೆದುಮಾತು ಹಾಗು ಸಜ್ಜನ ನಡವಳಿಕೆಯನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚು. ಆದರೆ ಹಾಗೆ ದುರುಪಯೋಗ ಆಗದಂತೆ ಎಚ್ಚರ ವಹಿಸುವುದು ಕೂಡ ಶಿವಾನಂದ ತಗಡೂರು ಅವರಿಗೆ ಗೊತ್ತಿದೆ.
ಇಂತಹಾ ಒಂದು ಪುಸ್ತಕ ಖಂಡಿತ ಅವಶ್ಯಕತೆ ಇತ್ತು. ಇಂತಹುದೇ ಪುಸ್ತಕಗಳ ಮೂಲಕ ಗಮನ ಸೆಳೆಯುವ ಜಿ ಎನ್ ಮೋಹನ್ ಅವರ ಬಹುರೂಪಿ ಪ್ರಕಾಶನ ಈ ಕೋವಿಡ್ ಕತೆಗಳನ್ನು ಪ್ರಕಟಿಸಿ ತನ್ನ ಸಾಮಾಜಿಕ ಕೆಲಸ ಮುಂದುವರೆಸಿದೆ.
ಅಚ್ಚುಕಟ್ಟಾದ ಪುಸ್ತಕದೊಳಗೆ ಮನಕಲಕುವ ಕಟು ಅಲ್ಲಲ್ಲ, ಕಡುವಾಸ್ತವದ ಸಂಗತಿಗಳು ನಮ್ಮನ್ನು ಬಹಳ ಕಾಲ ಕಾಡುತ್ತವೆ.
ಪುಸ್ತಕ : ಶಿವಾನಂದ ತಗಡೂರು ಹೇಳಿದ ‘ಕೋವಿಡ್ ಕಥೆಗಳು’
ಲೇಖಕರು: ಶಿವಾನಂದ ತಗಡೂರು
ಬೆಲೆ : 175 ರೂ
ಪ್ರಕಾಶನ: ‘ಬಹುರೂಪಿ’ ಪ್ರಕಾಶನ






0 Comments