ಚಲಂ
ಅಷ್ಟೇನೂ ಮೆತ್ತಗಿಲ್ಲದ ಸೋಫಾದ ಮೇಲೆ ಮಲಗಿದವನಂತೆ ಕುಳಿತಿದ್ದೆ. ಎಲ್ಲೇ ಆದರೂ ಅದೇ ರೀತಿ ಕುಳಿತುಕೊಳ್ಳುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಅದು ಸರಿಯಾಗಿ ಕೂರುವ ಭಂಗಿಯಲ್ಲ ಅಂತ ಹಲವರು ಹೇಳಿದ್ದರು. ಅದಕ್ಕೂ ಮುನ್ನ ನನಗೂ ಅದು ತಿಳಿದಿತ್ತು. ತುಂಬಾ ಹೊತ್ತಿನ ಮೌನದ ಬಳಿಕ ಕೇಳಿದೆ.
ಯಾವ ಕೆಲಸವಾದ್ರೂ ಸರಿ, ಮೊದಲು ನಿನ್ನ ಸೀರಿಯಸ್ನೆಸ್ ಬಗ್ಗೆ ಹೇಳು.
ನನಗೆ ಈಗಲಾದರೂ ನೆಟ್ಟಗೆ ಕೂರಬೇಕೆನಿಸಿತು. ಹಾಗೆ ಮಾಡಿದರೆ ನಾನು ನಿನ್ನನ್ನು ಗಂಭೀರವಾಗಿ ತೆಗೆದುಕೊಂಡಿರುವುದು ತಿಳಿಯುತ್ತದೆ ಅಂತ ಹಾಗೇ ಮಿಸುಕಾಡಿದೆ. ಆ ಮಿಸುಕಾಟವೂ ನಿನಗೆ ತಿಳಿಯದಿರಲಿ ಅಂತ ಎಚ್ಚರಿಕೆ ವಹಿಸುವಷ್ಟರಲ್ಲಿ ನೀನು ಸುಮ್ಮನಾಗಿಬಿಟ್ಟೆ. ಹೀಗೆ ಕೇಳಬಾರದಿತ್ತೇನೋ ಎಂಬಂತೆ.
ನಾನೀಗ ಏನಾದರೂ ಹೇಳಬೇಕಿತ್ತು. ನಿನಗೆ ಸಮಾಧಾನವಾಗುವಂತೆ. ನನಗೆ ಉತ್ತರ ಸಿಗುವಂತೆ. ಹೊರಗಿನ ವಾಹನಗಳ ಸದ್ದನ್ನು ಕೇಳಿಸಿಕೊಳ್ಳದಂತೆ, ಮತ್ತೆ ನಮ್ಮ ನಡುವೆ ಸ್ಥಾಪಿತವಾಗಲಿರುವ ಮೌನವನ್ನು ಮುರಿಯುವಂತೆ ನಾನು ಮಾತನಾಡಬೇಕಿತ್ತು.
ನಾನೀಗ ಸೀರಿಯಸ್ ಆಗಿದ್ದೇನೆ, ನನಗೆ ಮದುವೆಯಾಗಿದೆ ಅಂತ ಹೇಳಬೇಕೆನಿಸಿತು. ಅದನ್ನು ಹೇಳುವ ಮೊದಲೇ ನೀನು ನಕ್ಕು ಬಿಡುವ ಅಪಾಯವನ್ನು ಊಹಿಸಿದ್ದೆ. ಆ ನಗು ವಾತಾವರಣವನ್ನು ತೆಳುವಾಗಿಸುವ ಭಯವಿತ್ತು.
ಬಿಗುವಿನ ವಾತಾವರಣವನ್ನು ಎಂಜಾಯ್ ಮಾಡುತ್ತಾ ಮಲಗಿದವನಂತೆ ಕುಳಿತೇ ಇದ್ದೆ.
ನೀನು ಎದ್ದು ಒಳಗೆ ಹೋದೆ. ಒಳಗಿನಿಂದ ಯಾವ ಸದ್ದೂ ಕೇಳಿಸಲಿಲ್ಲ. ನೀನು ಅಳುತ್ತಿರಬಹುದಾ ಅಂತ ಅನುಮಾನವಾಯಿತು. ನಿನ್ನ ಅನುಪಸ್ಥಿತಿಯಲ್ಲಿ ಸೋಫಾದ ಮೇಲೆ ನೆಟ್ಟಗೆ ಕೂರಲು ಪ್ರಯತ್ನಿಸಿದೆ. ತುಂಬಾ ಕೃತಕ ಎನಿಸಿತು. ಮೊದ್ಲು ಸರಿಯಾಗಿ ಕೂತುಕೊಳ್ಳೋದ್ ಕಲಿ ಅಂತ ದಿನಕ್ಕೆರಡು ಬಾರಿ ಗದರುವ ಅಪ್ಪ ನೆನಪಾದ. ಅವನ ಅತಿಯಾದ ಶಿಸ್ತು ನೆನಪಾಗಿಯೋ, ಒಳಗಿಂದ ನೀನು ಬರುವ ಭಯದಿಂದಲೋ ಮತ್ತೆ ಮೊದಲಿನಂತೆಯೇ ಕುಳಿತೆ.
ಒಳಗಿನಿಂದ ಬರುವಾಗ ಕಾಫಿ, ನೀರು ಏನನ್ನಾದರೂ ತರುತ್ತೀಯ ಅಂದುಕೊಂಡೆ. ನೀನು ಹೋದ ಹಾಗೆಯೇ ತಿರುಗಿ ಬಂದು ಕುಳಿತೆ. ಮುಖದಲ್ಲಿ ಅಸಹನೆಯಿತ್ತು. ಅದನ್ನು ನೀನು ಸಹಿಸಿಕೊಳ್ಳಬೇಕು ಎಂಬಂತೆ.
ನಾನು ಬರುತ್ತೇನೆ ಅಂತ ಎದ್ದೆ. ನೀನು ಸೋಫಾದ ಮೇಲೆ ಮಡಿಸಿಟ್ಟ ಕಾಲನ್ನು ಕೆಳಗೆ ಬಿಟ್ಟೆ. ನೀನು ಬಾಗಿಲು ಹಾಕಿಕೊಳ್ಳುವಾಗ ನಾನು ಬೈಕಿನ ಕಿಕ್ಕನ್ನು ಒದೆಯುವಾಗ ನಿಜಕ್ಕೂ ನಿರಾಳತೆಯಿದ್ದದ್ದು ಇಬ್ಬರಿಗೂ ಅರಿವಾಯಿತು.
ಮನೆಗೆ ಬಂದು ಚಪ್ಪಲಿ ಕಳಚುವಾಗ ಬೆಳಿಗ್ಗ್ಗೆ ನಾಲ್ಕು ಬಾರಿ ಹೇಳಿ ಕಳುಹಿಸಿದ್ದ ಬಟ್ಟೆ ಸೋಪನ್ನು ಮರೆತು ಬಂದದ್ದು ನೆನಪಾಯಿತು. ಬಾಗಿಲು ತೆರೆದವಳೇ ನನ್ನ ಬರಿಗೈಯನ್ನು ನೋಡಿ ಯಾಕೆ ಸೋಪು ತರಲಿಲ್ವಾ, ನಾಳೆಯಿಂದ ಹಾಕಿರೋ ಬಟ್ಟೆಯನ್ನೇ ಹಾಕಿಕೊಂಡು ಹೋಗಿ, ಬೆಳಿಗ್ಗೆ ತಲೆ ಚಚ್ಚಿಕೊಂಡು ಹೇಳಿದಿನಿ. ನಿಮಗೆ ಸ್ವಲ್ಪನೂ ಸೀರಿಯಸ್ನೆಸ್ ಇಲ್ಲ ಅಂತ ಗೊಣಗಿಕೊಂಡು ಅರ್ಧಕ್ಕೆ ಬಿಟ್ಟ ಸೀರಿಯಲ್ಲನ್ನು ನೋಡುತ್ತಾ ಕುಳಿತು ಬಿಟ್ಟಳು.
ಹಾಸಿಗೆಯಲ್ಲಿ ಒರಗಿಕೊಂಡವನಿಗೆ ಒಂದೇ ದಿನ ಎರಡು ಬಾರಿ ನನ್ನ ಸೀರಿಯಸ್ನೆಸ್ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು ಇರುಸು ಮುರುಸಾಯಿತು. ಅಷ್ಟಕ್ಕೂ ಶೀತೂ ಅಂತ ಕರೆಯುವ ಶೀತಲಳ ಹತ್ತಿರ ನಾನು ಕೇಳಿದ್ದರಲ್ಲಿ ತಪ್ಪಾದರೂ ಏನಿತ್ತು? ಹೊಸದಾಗಿ ಕಾರೊಂದನ್ನು ತೆಗೆದು ಬಾಡಿಗೆ ಬಿಡುತ್ತೇನೆ ಎಂದೆ. ಅದೆಷ್ಟೋ ದಿನಗಳಿಂದ ಅದುಮಿಟ್ಟುಕೊಂಡ ಅಭಿಪ್ರಾಯವನ್ನು ಯಾವ ಸುತ್ತು ಬಳಸು ಇಲ್ಲದೇ ಕೇಳಿದಳು.

ನಿನ್ನ ಸೀರಿಯಸ್ನೆಸ್ ಬಗ್ಗೆ ಹೇಳು ಅಂತ. ಅದೂ ನೀನು ಸೀರಿಯಸ್ಸಾಗಿ ಕೆಲಸ ಮಾಡಿದರಷ್ಟೇ ನಾನು ಬದುಕುವುದು ಎಂಬಂತೆ.
ನಿನ್ನ ಕಾಳಜಿ ನನಗೆ ಅರ್ಥವಾಗುತ್ತೆ ಬಿಡು ಅಂತಲಾದರೂ ಹೇಳಬೇಕಿತ್ತು. ನನ್ನ ಕೆಲಸ-ಅಭಿರುಚಿಗಳನ್ನು ಮೊದಲಿನಿಂದಲೂ ಪೋಷಿಸಿಕೊಂಡು ಬಂದವಳು. ನನಗೆ ನೋವಾಗುತ್ತದೆ ಅಂತ ಹಿತವಾದ ಮಾತುಗಳನ್ನೇ ಆಡುತ್ತಾ ಬಂದವಳು. ಪ್ರತಿ ಬಾರಿ ಸೋತು ಬಂದಾಗ ಆ ಕೆಲಸ ನಿನಗಲ್ಲಬಿಡು ಅಂತ ಸಮಾಧಾನಿಸಿದವಳು.
ಅಂತಹದ್ದರಲ್ಲಿ ಅವಳು ಕೇಳಿದ್ದು ತಪ್ಪಿರಲಿಲ್ಲ. ಯಾವುದನ್ನೂ ಕೇಳಿಸಿಕೊಳ್ಳದ ನನ್ನಲ್ಲಿ ತಪ್ಪಿತ್ತು. ಯಾರೂ ನನಗೆ ಏನನ್ನೂ ಹೇಳದೇ ಇರುವುದರಲ್ಲಿ ತಪ್ಪಿತ್ತು. ಪದೇ ಪದೇ ಸೋತು ಬಂದವನಿಗೆ ಒಳ್ಳೇ ಅನುಭವ. ನಿನ್ನ ಧೈರ್ಯ ಮೆಚ್ಚಲೇಬೇಕು ಅಂತ ಬೆನ್ನು ತಟ್ಟಿದವರಲ್ಲಿ ತಪ್ಪಿತ್ತು.
ಯಾಕೋ ನನ್ನ ಬಗ್ಗೆ ನನಗೆ ಬೇಸರವೆನಿಸತೊಡಗಿತು. ಈ ರೀತಿ ಅನಿಸುವುದು ಕೂಡ ನನಗೆ ಮೊದಲ ಬಾರಿಯೇನಲ್ಲ. ಪ್ರತೀ ಬಾರಿಯ ಸೋಲು ನನಗೆ ಕ್ಷಣ ಮಾತ್ರದ ಬೇಸರವನ್ನು ತರಿಸಿದೆ. ಕೊಂಚ ಸಮಯದ ಬೇಸರವೂ ಹಿತವಾಗಿರತ್ತೆ. ಹೇಳಿದಾಗ ಕೇಳಿದವರೂ ಒಪ್ಪಿಕೊಂಡದ್ದೂ ಇದೆ. ಈ ಬಾರಿ ಆ ಬೇಸರವನ್ನು ಎಂಜಾಯ್ ಮಾಡಬಾರದು ಅಂತ ಮತ್ತೆ ಎದ್ದವನೇ ಮನೆಯಿಂದ ಹೊರಟೆ. ಬೈಕ್ ಸ್ಟಾಟರ್್ ಆದ ಸದ್ದಿನಲ್ಲಿ ಮನೆಯವಳು ರೀ ಸೋಪು ಅಂದದ್ದು ಕೇಳಿಸಿತ್ತು.
ಸೋಪನ್ನು ಮರೆತು ಬರಬಾರದು ಅಂತ ತೀಮರ್ಾನಿಸಿ ಎಕ್ಸಲೇಟರ್ ತಿರುವುತ್ತಿದ್ದಂತೆ ಜವಾಬ್ದಾರಿ ಬಂದಿದೆ ಅನಿಸಿತು.
ಶೀತೂವಿನ ಬಳಿ ಕಾರನ್ನು ಕೊಳ್ಳುವ ಬಗ್ಗೆ ಹೇಳಲೇಬಾರದಿತ್ತು ಅನಿಸಿ ಹೋಟೇಲಿನೊಳಗೆ ನುಗ್ಗಿದೆ. ಭಟ್ಟರು ಲೆಮೆನ್ ಟೀ ಜತೆಗೆ ನೆತ್ತಿಯಿಂದ ಬುಡದವರೆಗಿನ ಬಿಳೀ ಸಿಗರೇಟನ್ನು ಕೊಟ್ಟರು. ಹೊಗೆಯ ಚಿತ್ತಾರ ಮೂಡುತ್ತಿದ್ದಂತೆಯೇ ಚಿತ್ತಾರದೊಳಗಿಂದ ಸುನೀಲ್ ಕಾಣಿಸಿದ. ನನಗೂ ಅವನಿಗೂ ಅದು ಮಾಮೂಲು ಅಡ್ಡಾ. ಭಟ್ಟರು ಅವನಿಗೆ ನೆತ್ತಿಯ ಬಳಿ ಕಂದು ಬಣ್ಣದ ಸಿಗರೇಟು, ಟೀಯನ್ನು ಕೊಟ್ಟರು. ಭಟ್ಟರಿಗೆ ಯಾರಿಗೆ ಯಾವುದನ್ನು ಕೊಡಬೇಕು ಅಂತ ಗೊತ್ತಿತ್ತು. ನಗು-ನಗುತ್ತಾ ಇರುವ ಭಟ್ಟರಲ್ಲಿ ಶೀತೂ ಹೇಳಿದ
ಸೀರಿಯಸ್ನೆಸ್ ಇತ್ತು ಅಂತ ಅನಿಸಿತು.
ಸುನೀಲ್ ನನ್ನ ಹೊಸ ಹೊಸ ಪ್ರಯೋಗಗಳಿಗೆ ಬೆನ್ನೆಲುಬಾಗಿ ಸ್ಪಂದಿಸುವವನು. ಅವನಿಗೂ ಸಹ ಶೀತೂವಿಗೆ ಅನ್ನಿಸುವಂತೆ ನಾನು ಏನಾದರೂ ಆಗಲೇಬೇಕು ಎಂಬ
ಆಸೆಯಿತ್ತು. ಆದರೆ ನನ್ನ ಸೋಲುಗಳ ಅಭಿಪ್ರಾಯದಲ್ಲಿ ಶೀತೂಗೂ, ಇವನಿಗೂ ಭಿನ್ನಾಭಿಪ್ರಾಯವಿತ್ತು.
ನೀನು ಹೀಗೆ ಆದ್ರೆ ನಿನ್ನನ್ನೂ ಯಾರೂ ನಂಬಲ್ಲ ಬಿಡು. ಯಾರಾದ್ರೂ ಒಂದ್ಸಲ ನೋಡ್ತಾರೆ, ಎರಡ್ಸಲ ನೋಡ್ತಾರೆ. ದಿನವೂ ಅದೇ ಕತೆಯಾದ್ರೆ ಯಾರ್ತಾನೆ ಗಮನಿಸ್ತಾರೆ ಹೇಳು. ನೀನು ಕಳೆದ ಬಾರಿ ತೆಗೆದುಕೊಂಡ ಮಿನರಲ್ ವಾಟರಿನ ಏಜೆನ್ಸಿಯಲ್ಲಿ ಏನಪ್ಪಾ ಕಡಿಮೆಯಾಗಿತ್ತು. ಒಳ್ಳೇ ಕಂಪನಿ, ಹೆಸರಿತ್ತು. ಪ್ರಮೋಟ್ ಮಾಡಲು ಅಡ್ವಟೈಸ್ಮೆಂಟ್ ಮಾಡ್ತಾ ಇದ್ರು. ನೀನೇನ್ ಮಾಡಿದೆ ಇಡೀ ಕೆಲಸವನ್ನು ಹುಡುಗರಿಗೆ ಒಪ್ಪಿಸಿ ಮಲಕ್ಕೊಂಡೆ. ಯಾವ ಹುಡುಗನಾದ್ರೂ ನೆಟ್ಟಗೆ ಕಲೆಕ್ಷನ್ ಕೊಟ್ಟನಾ. ನೀನೇನು ಅಂತ ಗೊತ್ತಿತ್ತು. ಅದಕ್ಕೇ ಕೈ ಎತ್ತಿದ್ರು
ಹೀಗೆ ಹೇಳುತ್ತಲೇ ಇದ್ದ. ನಾನು ಮೌನವಾಗಿ ಕುಳಿತೇ ಇದ್ದೆ. ಅದೆಷ್ಟೋ ಹೊತ್ತಿನ ನಂತರ ಅವನು ಸುಮ್ಮನಾದ. ಸಮ್ಮನಾಗಲೇಬೇಕಿತ್ತು. ಅದೆಷ್ಟು ಮಾತನಾಡಲು ಸಾಧ್ಯ. ಸ್ವಲ್ಪ ಹೊತ್ತಿನ ನಂತರ ಮುಂದೇನ್ ಮಾಡ್ತೀಯಾ ಅಂದ. ನಾನು ಬೇಸರದಲ್ಲಿದ್ದೇನೆ ಅಂತ ಭಾವಿಸಿದ್ದ. ದನಿಯಲ್ಲಿ ಸಾಂತ್ವಾನದ ಛಾಯೆಯಿತ್ತು.
ನಾನು ಕಾರು ಕೊಳ್ಳುವುದರಿಂದ ಹಿಡಿದು ಅದರ ಕೆಲಸ, ಫಾಯಿದೆ ಎಲ್ಲವನ್ನೂ ವಿವರಿಸಿದೆ. ಈ ವಿಚಾರದಲ್ಲಿ ಮಾತ್ರ ನಾನು ಎಂತಹವರನ್ನು ಒಪ್ಪಿಸಬಲ್ಲೆ ಎಂಬುದು ನನಗೆ ಮಾತ್ರ ಗೊತ್ತಿತ್ತು. ಅಷ್ಟು ತರ್ಕಬದ್ಧವಾದ ಪ್ಲಾನಿಂಗು. ಕೇಳಿದವರು ಒಪ್ಪದಿರುವ ಸಾಧ್ಯತೆಗಳೇ ಇರುತ್ತಿರಲಿಲ್ಲ.
ಹತ್ತಾರು ಬಾರಿ ಸುನೀಲನಿಗೂ ಪ್ಲಾನುಗಳನ್ನು ಹೇಳಿದ್ದೆ. ಅವನು ಒಪ್ಪಿದ್ದ. ಒಳ್ಳೆಯ ವ್ಯವಹಾರವನ್ನು ನಡೆಸುತ್ತಿದ್ದ ಅವನಿಗೆ ಊರ ತುಂಬಾ ಒಳ್ಳೇ ಕಾಂಟಾಕ್ಟ್ಗಳಿದ್ದವು. ಅವುಗಳಿಂದಲೇ ನನ್ನನ್ನು ಟ್ರ್ಯಾಕಿಗೆ ತರಲು ಪ್ರಯತ್ನಿಸುತ್ತಿದ್ದ. ಕಾಲೇಜಿನ ದಿನಗಳ್ಲಲಿ ನಾನು ಅದೆಂತಹ ಟ್ಯಾಲೆಂಟ್ ಫೆಲೋ ಎಂಬುದನ್ನು ನನಗೆ ಸಹಾಯ ಮಾಡುವವರಿಗೆ ರಸವತ್ತಾಗಿ ವಿವರಿಸುತ್ತಿದ್ದ. ಅದೇನು ಕತೆಯೋ ಏನೋ. ನಾನು ಒಂದಲ್ಲ ಒಂದು ದಿನ ಬಹು ದೊಡ್ಡ ಮನುಷ್ಯನಾಗುತ್ತೀನಿ ಅಂತ ಸುನೀಲ ಬಲವಾಗಿ ನಂಬಿದ್ದ. ಅದೆಲ್ಲೋ ಎಡವಟ್ಟಾಗ್ತಿದೆ. ಮುಂದೆ ಸರಿ ಹೋಗತ್ತೆ ಅನ್ನುವುದು ಅವನ ಆಶಾವಾದ.
ಸರಿ ಮುಂದಿನ ತಿಂಗಳು ಏನಾದ್ರು ಮಾಡೋಕಾಗುತ್ತೆ. ಈ ಸರಿನಾದ್ರೂ ಸೀರಿಯಸ್ಸಾಗಿರು ಅಂದವನೇ ಎದ್ದು ಹೊರಟ. ಇವತ್ತು ಇದೆಷ್ಟನೇ ಬಾರಿಗೆ ಸೀರಿಯಸ್ನೆಸ್ ಬಗ್ಗೆ ಕೇಳುತ್ತಿದ್ದೇನೆ ಅಂತ ಲೆಕ್ಕ ಮಾಡುವಷ್ಟರಲ್ಲಿ ಭಟ್ಟರು ಮತ್ತೊಮ್ಮೆ ಟೀ ಕೊಟ್ಟರು. ಮೂರನೇ ಬಾರಿ ಟೀ ಕುಡಿದು ಹೊರಗೆ ಬಂದೆ.
ಕಾರು ಕೊಳ್ಳುವುದಕ್ಕಿಂತ ರಿಯಲ್ ಎಸ್ಟೇಟ್ ಮಾಡುವುದು ಉತ್ತಮ ಅಂತ ಅನ್ನಿಸಿದ್ದು ಎದುರಿಗಿದ್ದ ಮನೆ ಮಾರಾಟಕ್ಕಿದೆ ಅನ್ನುವ ಬೋರ್ಡನ್ನು ನೋಡಿದಾಗಲೇ. ಸುನಿ ಹತ್ರಾನೂ ಅದೆಷ್ಟು ಸಲ ಹಣ ತಗೊಳ್ಳೋದು. ಇದಾದರೆ ಬಂಡವಾಳ ಬೇಕಿಲ್ಲ. ಯಾರನ್ನಾದರೂ ಒಪ್ಪಿಸುವ ಮಾತುಗಾರಿಕೆಯಿದೆ. ಮುಂದೆ ಇದರಿಂದಲೇ ದೊಡ್ಡ ಬ್ಯುಸಿನೆಸ್ ಮಾಡಬಹುದು ಅನ್ನಿಸಿತು. ಅದು ಸರಿ ಅಂತಲೂ ಅನ್ನಿಸಿತು.
ಶೀತೂ ಹೇಳುತ್ತಿದ್ದ ನನ್ನ ಪ್ರಸಿದ್ಧಿ, ಸುನಿ ಹೇಳುತ್ತಿದ್ದ ನನ್ನ ಟ್ಯಾಲೆಂಟು ನನ್ ಹೊಸ ಪ್ರಾಜೆಕ್ಟಿಗೆ ಪೂರಕ ಅಂತ ನಿರ್ಧರಿಸಿ ಮನೆಗೆ ಬಂದಾಗಲೇ ಗೊತ್ತಾಗಿದ್ದು ಬಟ್ಟೆ ಸೋಪನ್ನು ಮರೆತು ಬಂದಿದ್ದೆ.






Nice Story…