ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಚರಕ, ಸುಸ್ಥಿರ ಬದುಕಿನ ಬಗ್ಗೆ ಮತ್ತೊಂದಿಷ್ಟು…' ಚಲಂ ಬರೀತಾರೆ

ಚಲಂ

ಬದನವಾಳು ವಿಚಾರಕ್ಕೆ ಸಂಭಂಧಿಸಿದಂತೆ ದಯವಿಟ್ಟು ಚರಕವನ್ನು ಬಿಡುಗಡೆಗೊಳಿಸಿ ಎಂಬ ಲೇಖನವನ್ನು ಬರೆದಿದ್ದೆ.ಅದಕ್ಕೆ ಬಂದ ಪೂರಕ ಪ್ರತಿಕ್ರಿಯೆಯಷ್ಟೇ ಗೊಂದಲವನ್ನೂ ಉಂಟು ಮಾಡಿದೆ.ಆ ಗೊಂದಲವನ್ನು ಕೊಂಚ ಮಟ್ಟಿಗೆ ನಿವಾರಿಸಲು ಪ್ರಯತ್ನಿಸುತ್ತೇನೆ.
ಮೊದಲಿಗೆ ಪ್ರಸನ್ನರವರ ಕುರಿತು ನನಗ್ಯಾವ  ಪೂರ್ವಾಗ್ರಹವೂ ಇಲ್ಲ.ಇರಲು ಯಾವ ಕಾರಣಗಳೂ ಇಲ್ಲ.ಅದೇ ರೀತಿ ಈ ಹೋರಾಟದ ಬಗ್ಗೆಯೂ.ಪ್ರಗತಿಪರ ಮನಸ್ಸುಗಳು ನಗೆಪಾಟಲಿಗೀಡಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮಲ್ಲೇ ಕೊಂಚ ಆತ್ಮವಿಮರ್ಶೆ ಇಲ್ಲದೇ ಇದ್ದರೆ ಅಪಾಯಕಾರಿ ಎಂಬುದು ನನ್ನ ನಿಲುವು.
ನಿಜವಾಗಿಯೂ ಈಗಿನ ಜನಪರ ಹೋರಾಟಗಳು ಅಪಾಯದ ಅಂಚಿನಲ್ಲಿವೆ.ಆ ಹೋರಾಟಗಳಿಗೆ ಸರಿಯಾದ ನಿಲುವುಗಳನ್ನು ಕಂಡುಕೊಳ್ಳಲು ಸಾದ್ಯವಾಗುತ್ತಿಲ್ಲ.ಅಥವಾ ಹಾಗಂತ ಬಿಂಬಿಸಲಾಗುತ್ತಿದೆ.ಪ್ರಸನ್ನರವರ ಹೋರಾಟ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.ಪ್ರಸನ್ನರವರು ನಿಜಕ್ಕೂ ಜನರಿಗೆ ಏನಾದರೂ ಅನುಕೂಲ ಮಾಡಬೇಕು ಎಂಬ ಆಸಕ್ತಿ ಇಟ್ಟುಕೊಂಡಂತೆ ಕಂಡರೂ ಅದಕ್ಕಾಗಿ ಅವರು ಆಯ್ದುಕೊಂಡ ಮಾರ್ಗ ಮಾತ್ರ ಸರಿಯಾದುದಾಗಿ ಕಾಣುತ್ತಿಲ್ಲ.
ಈಗ ಜನರಿಗೆ ಬೇಕಾಗಿರುವುದು ಜನಸಾಮಾನ್ಯರಿಂದಲೂ ಆಗಬಹುದಾದ ಹೋರಾಟ.ಅದಕ್ಕಾಗಿ ಈಗಿನ ಸಮಾಜವನ್ನು ನಾವು ಕೂಲಂಕುಷವಾಗಿ ನೋಡಬೇಕಾಗುತ್ತದೆ.ಜನರ ಹತ್ತಿರಕ್ಕೆ ಹೋಗಲು ಯಾವ ಮಾರ್ಗ ಬೇಕು ಎಂಬುದನ್ನು ಮೊದಲು ಕಂಡುಕೊಳ್ಳಬೇಕು.ದಿನ ಉಪವಾಸ ಬೀಳುವ ಜನರ ನಡುವೆ ಉಪವಾಸ ಸತ್ಯಾಗ್ರಹ ಯಾವ ಕಾರಣದಿಂದಲೂ ಪರಿಣಾಮವನ್ನು ಬೀರುವುದಿಲ್ಲ.ಜನರ ಹಸಿವಿಗೆ ಕಾರಣವೇನು ಎಂಬುದನ್ನು ಮೊದಲು ಕಂಡುಕೊಳ್ಳಬೇಕು.
ಅದೇ ರೀತಿಯಾಗಿ ಸರಳ ಜೀವನವನ್ನು ಅನಿವಾರ್ಯವಾಗಿ ಬದುಕುತ್ತಿರುವ ಜನರಿಗೆ (ಇದನ್ನು ಬಡತನ ಅನ್ನಬಹುದು) ಸರಳ ಜೀವನವನ್ನು ಹೇಳುವುದು ಸಾದುವಾದ ವಿಚಾರವಲ್ಲ.ಅಲ್ಲದೇ ಒಂದು ರೀತಿಯಾಗಿ ಆ ಜನರಿಗೆ ಮಾಡುವ ಅವಮಾನ ಎಂಬಂತೆಯೂ ಕಾಣುತ್ತದೆ.ಪ್ರಸನ್ನರನ್ನು ಅಷ್ಟು ಸುಲಭವಾಗಿ ವಿರೋಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಕಾರಣ ಚರಕ.ಚರಕವನ್ನು ಗಾಂಧೀಜಿ ಒಂದು ರೀತಿ ಸಾಂಕೇತಿಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು.ಚರಕದಿಂದಲೇ ಸರಳಜೀವನ ಮಾಡಿ ಅಂತ ಗಾಂದೀಜಿ ಹೇಳಲಿಲ್ಲ.ಅದು ಗಾಂದೀಜಿಯ ಗೆಲುವು.
ಈಗ ಚರಕವನ್ನೂ ಸೆರಿದಂತೆ ಎಲ್ಲ ವಿಷಯಗಳನ್ನು ಬೇರೆಯದೇ ಆದ ರೀತಿಯಲ್ಲಿ ಗ್ರಹಿಸಬೇಕಾದ ಅವಶ್ಯಕತೆಯಿದೆ.ನನ್ನ ದಲಿತ ಗೆಳೆಯನೊಬ್ಬನನ್ನು ಯಾಕೆ ಬದನವಾಳಿಗೆ ಹೋಗಲಿಲ್ಲವೇ ಅಂತ ಕೇಳಿದ್ದಕ್ಕೆ ಆತ ಹೇಳಿದ್ದು ಅವರು ನಮ್ಮ ಕಂಬಾಲಪಲ್ಲಿ ಸೇರಿದಂತೆ ಯಾವ ವಿಚಾರಕ್ಕೆ ಬಂದಿದ್ದಾರೆ..?ಹಾಗಿರುವಾಗ ನಾವ್ಯಾಕೆ ಅಲ್ಲಿಗೆ ಹೋಗಬೇಕುಇದರ ಗ್ರಹಿಕೆ ಬಹಳ ಸುಲಭ ಮತ್ತು ತುಂಬಾ ಅಪಾಯಕಾರಿಯಾದುದು.

ಆ ದಲಿತ ಗೆಳೆಯನಿಗೆ ಯಾವ ರೀತಿಯಾಗಿ ಪ್ರಸನ್ನರವರು ಉತ್ತರಿಸುತ್ತಾರೆ.ಇದು ದಲಿತ ವಿಚಾರಕ್ಕೆ ಮಾತ್ರ ಸಂಭಂದಿಸಿದ್ದಲ್ಲ. ಸಮಾಜವು ಈಗ ಜಾತಿ ವಿಚಾರವಾಗಿ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ.ಅದಕ್ಕೆ ನಮ್ಮ ಅರಿವು ವಿಸ್ತಾರವಾಗುತ್ತಿರುವುದು ಕಾರಣ. ಜಾತ್ಯಾತೀತತೆಯ ಬಗ್ಗೆ ಮಾತನಾಡುವಾಗಲೂ ನಾವು ಜಾತಿಯ,ವರ್ಗದ ಅಸ್ಥಿತ್ವದ ಬಗ್ಗೆ ಖಚಿತ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ.ಹೀಗೆ ಆದಾಗ ಮಾತ್ರ ನಾವು ಏನನ್ನಾದರೂ ಸರಿಯಾದ ಮಾರ್ಗವನ್ನು ಹುಡುಕುವುದು ಸಾದ್ಯವಾಗುತ್ತದೆ.ಅಂದರೆ ಗೊಂದಲಗೊಂಡು ಪ್ರತ್ಯೇಕವಾಗಿರುವ ಸಮುಧಾಯವನ್ನು ಒಟ್ಟಿಗೆ ಕರೆದೊಯ್ಯುವಂತಹಾ ಕೆಲಸ ನಡೆಯಬೇಕಿದೆ.ಸೂಕ್ಷ್ಮ ಪ್ರಜ್ಞೆಯ ದೇವನೂರರೇ ಈಗಿನ ಕಾಲಕ್ಕೆ ಸಲ್ಲುತ್ತಾರಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತಾಗಿದೆ.
ನಿಜಕ್ಕೂ ಒಂದು ಒಳ್ಳೆಯ ಹೋರಾಟದ ಅವಶ್ಯಕತೆ ಇದೆ.ಅದನ್ನು ರೋಮ್ಯಾಂಟಿಕ್ ಆಗಿ ನೋಡುವುದರಿಂದ ಈಗಿಗಿಂತಲೂ ಅಪಾಯವೇ ಹೆಚ್ಚು.ಆ ರೀತಿ ಆಗದಂತೆ ಎಚ್ಚರ ವಹಿಸುವಲ್ಲಿ ಪ್ರಸನ್ನರವರು ವಿಫಲರಾದರು ಎಂಬುದು ನನ್ನ ಅನಿಸಿಕೆ.ಈಗಿನ ಯಾವ ಹೋರಾಟವೂ ಫ್ಯಾಷನ್ನುಗಾಗಿ ಮಾಡಲು ಸಾಧ್ಯವಿಲ್ಲ.ಹಾಗೇ ಮಾಡಲಿ ಎಂದು ಆಶಿಸುತ್ತಾ ಕುಳಿತಿರುವ ಕಾರ್ಪೊರೇಟ್ ವಲಯಕ್ಕೆ ಪೂರಕವಾಗಿ ನಡೆದುಕೊಂಡಂತೆ ಆಗುತ್ತದೆ.
ಲಂಕೇಶ್ ಹಾಗು ಗೆಳೆಯರ ಪ್ರಗತಿ ರಂಗದ ಕಾಲದಿಂದಲೂ ಪ್ರಗತಿಪರರು ಸೋಲನ್ನು ಒಂದು ರೀತಿಯಾಗಿ ಎಂಜಾಯ್ ಮಾಡುತ್ತಲೇ ಬಂದಿದ್ದಾರೆ.ಇದಕ್ಕೆ ನಮ್ಮ ಜನರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂಬ ಕಾರಣವನ್ನು ಕೊಡಲಾಗುತ್ತದೆ.ನಾವು ತುಂಬಾ ಬುದ್ದಿವಂತರು ಜನ ನಮ್ಮ ಬಳಿಗೆ ಬರಲಿ ಎಂಬಂತೆ ನಡೆದುಕೊಳ್ಳುವುದನ್ನು ವಿಚಾರವಂತರು ಬಿಡಬೇಕು.ಲಂಕೇಶ್ ಮತ್ತವರ ಸ್ನೇಹಿರಿಗೆ ನಿಜಕ್ಕೂ ಅದು ಬದುಕಿನ ಪ್ರಶ್ನೆಯಾಗಿತ್ತೇ ಎಂದು ಈಗಲೂ ಅವರದೇ ಶೈಲಿಯಲ್ಲಿ ಅನುಮಾನಿಸುವಂತಾಗುತ್ತದೆ.
ವಿಷಯ ಹೀಗಲ್ಲಾ ಅಂತಾದರೆ ಪ್ರಸನ್ನರವರು ನಾಡಿನ ಯಾವ ಯಾವ ಜನರನ್ನು ಮಾತನಾಡಿಸಿ ಈ ಹೋರಾಟವನ್ನು ಮಾಡಿದರು.ನಿಜಕ್ಕೂ ಜನರ ಸಮಸ್ಯೆಗಳು ಯಾವ ಸ್ವರೂಪದಲ್ಲಿವೆ ಎಂಬುದನ್ನು ಕೂಲಂಕುಶವಾಗಿ ಅರಿಯಲು ಯಾವ ಮಾನದಂಡವನ್ನು ಉಪಯೋಗಿಸಿದರು ಎಂದು ನೋಡಿದರೆ ಅದಕ್ಕೆ ನಮ್ಮ ಹಿಂದಿನ ವಿಚಾರವಂತರು ಮಾಡಿದ ಎಡಚವಟ್ಟುತನವೇ ಕಾಣುತ್ತದೆ.ಜನರ ಕೈಗೆ ಅಧಿಕಾರ ಕೇಳದ ಯಾವ ಹೋರಾಟವೂ ಗೆಲ್ಲುವುದಿಲ್ಲ.
ಇಂತಹಾ ಹಲವಾರು ಸೂಕ್ಷ್ಮಗಳನ್ನು ನೋಡಿಕೊಂಡೇ ಮುಂದುವರೆಯಬೇಕಾಗುತ್ತದೆ.ಪ್ರಸನ್ನರ ಈ ನಡೆ ಯಾಕೆ ಅಪಾಯಕಾರಿ ಎಂಬುದು ಮುಂದಿನ ದಿನಗಳಲ್ಲಿ ಖಂಡಿತಾ ತಿಳಿಯುತ್ತದೆ.ಜನರನ್ನು ಕೊಂಚ ದಿನಗಳ ಮಟ್ಟಿಗೆ ಸಮಾದಾನ ಪಡಿಸಿದ ಕಾರಣವಿದ್ದರೂ ಇರಬಹುದು.ಆದರೆ ಗೊಂದಲಗೊಂಡ ಸಮಾಜವನ್ನು ಹೀಗೆ ಯಾವ ಪ್ರತಿಫಲವೂ ಇಲ್ಲದ ಸಣ್ಣ ಸಮಾಧನ ನೀಡಭಾರದು.ಇದರಿಂದ ನಾಳಿನ ಹೋರಾಟಗಳ ಮೇಲೆ ಪ್ರಭಾವ ಬೀರುತ್ತದೆ.
ಗಾಂದೀಜಿಯವರ ವಿಚಾರವಿದ್ದುದರಿಂದ ಪ್ರಸನ್ನರವರನ್ನು ಕೊಂಚ ಸಾವದಾನವಾಗಿಒ ನೋಡುವುದು ಸಾಧ್ಯವಾಯಿತು.ಗಾಂದೀ ವಿಚಾರಗಳು ಯಾವ ಮಟ್ಟಕ್ಕೆ ಬಮದು ನ ಇಂತಿದೆ ಎಂಬುದಕ್ಕೆ ಇಂತಹಾ ಉದಾಹರಣೆ ಸಾಕು.ಆದರೆ ಲೋಹಿಯಾ ಮುಂತಾದವರು ಗಾಂದೀಜಿಯ ಜೊತೆಯಲ್ಲಿ ಇದ್ದವರೇ ಗಾಂದೀಜಿಯ ವಿಚಾರವನ್ನು ಹೇಗೆ ದುಡಿಸಿಕೊಂಡರು ಎಂಬುದನ್ನು ನೋಡಬೇಕಾದ ಅವಶ್ಯಕತೆಯಿದೆ.ಅದೇ ಕಾಲದಲ್ಲಿ ಕಾಂಗ್ರೆಸನ್ನು ಸ್ವಾತಂತ್ರ್ಯ ನಂತರ ಡಿಸಾಲ್ವ್ ಮಾಡಿ ಎಂಬ ಗಾಂದೀಜಿ ಆಶಯದ ಹಿಂದೆ ತುಂಬಾ ಒಳ್ಳೆಯ ನೋಟವಿತ್ತು ಎಂಬುದನ್ನು ಸ್ವಾತಂತ್ರ್ಯಾ ನಂತರದ ಕಾಂಗ್ರೆಸನ್ನು ನೋಡಿದ ಮೇಲೆ ತಿಳಿಯುತ್ತದೆ.ಗಾಂದೀಜಿಯನ್ನು ಹಿಂಬಾಲಿಸುವವರಿಗೆ ಗಾಂದೀಜಿಯ ಕೆಲವು ನಡೆಗಳು ಅರ್ಥವಾಗದ್ದು ಬೇಸರದ ವಿಷಯ.
ರೈತಸಂಘ ಮುಂತಾದುವುಗಳು ಒಂದು ನಿರ್ದಿಷ್ಟ ರಾಜಕೀಯ ಗುರಿಯನ್ನು ಹೊಂದಿಲ್ಲದ ಕಾರಣ ಈಗಲೂ ರೈತ ಯಾವ ಬವಣೆಯಿಂದ ಬದುಕುತ್ತಿದ್ದಾನೆ ಎಂಬುದನ್ನು ನೋಡಬಹುದು.ನಮ್ಮ ರೈತನ ಈಗಿನ ಕಷ್ಟಕ್ಕೆ ರೈತಸಂಘದ ಕೊಡುಗೆ ಇಲ್ಲ ಅಂತ ಹೇಳುವುದು ಹೇಗೆ.ಹೋರಾಟಗಳು ಹತಾಶೆಯ ಹಂತಕ್ಕೆ ಹೋರಾಟದ ಮೊದಲೇ ಹೋಗಿಬಿಡಲು ಈ ರೀತಿಯ ಕಾರಣಗಳಿವೆ.
ಪ್ರಸನ್ನರ ಹೋರಾಟವನ್ನು ವಿರೊದಿಸುವುದರಿಂದ ಏನೂ ಆಗುವುದಿಲ್ಲ.ಆದರೆ ಯಾಕೆ ವಿರೋದ ಎಂಬುದನ್ನು ಹೇಳದೇ ಹೋದರೆ ಪ್ರಸನ್ನರು ಮಾಡಿದ ಅಪಾಯಕಾರಿ ಕೆಲಸವನ್ನು ವಿರೋದಿಸುವವರು ಮಾಡಿದಂತಾಗುತ್ತದೆ.ಅವರ ಆಶಯ ಚೆನ್ನಾಗಿದೆ ಅನ್ನುವುದರ ಹಿಂದೆ ಕಾಮೆಂಟಿನಲ್ಲಿ ಕಾರ್ಲೋ ರವರು ಹೇಳಿದಂತೆ ರೊಮ್ಯಾಂಟಿಸಂ ಕೆಲಸ ಮಾಡಿರುತ್ತದೆ ಅಷ್ಟೇ.
ಇನ್ನೂ ಕೆಲವು ಜನರಿಗೆ ಈ ಹೋರಾಟ ಯಶಸ್ವಿಯಾಗಬೇಕಿತತು ಅನ್ನಿಸಿದೆ.ಅದಕ್ಕೆ ಕಾರಣ ಮೊದಲ ಲೇಖನದಲ್ಲಿಯೇ ಹೇಳಿದಂತೆ ಏನಾದರೂ ಒಳ್ಳೆಯದಾಗುತ್ತದಾ ಎಂಬ ಆಶಯ.ಇಂತಹಾ ಸೂಕ್ಷ್ಮಗಳನ್ನು ಹೇಳಲು ಹೋದಾಗ ನಾವು ಖಳರಾಗುವ ಸಾಧ್ಯತೆಯೂ ಇರುತ್ತದೆ.ಅದೇ ಕಾರಣಕ್ಕೆ ಮಾತನಾಡಬೇಕಾದ ತುಂಬಾ ಜನರು ಮಾತನಾಡಿಲ್ಲ.ಆದರೆ ಮಾತನಾಡಲೇಬೇಕಾದ ಅನಿವಾರ್ಯದ ಕಾಲದಲ್ಲಿ ನಾವಿದ್ದೇವೆ.
ಹಾಗೆಯೇ ಪ್ರಸನ್ನರ ಸುಸ್ಥಿರ ಬುದುಕು ಅರ್ಥವಾಗದಿದ್ದರೂ ಸುಸ್ಸತಿರವಾದ ಬದುಕು ಯಾರಿಗೆ ಬೇಡ ಹೇಳಿ.ಆದರೆ ಅದು ಸಿಗುವ ಮಾರ್ಗದ ಬಗ್ಗೆ ನಿಖರವಾದ ದೃಷ್ಟಿಕೋನವಿರಬೇಕು.ಅದು ಬಿಟ್ಟು ಸುಮ್ಮನೆ ಮಾಡಿಕೊಳ್ಳುತ್ತೇವೆ ಎಂದರೆ ಮಾಡಿಕೊಳ್ಳಲಿ ಬಿಡಿ ಅಂತ ಸುಮ್ಮನಿರುವುದೂ ಸಾಧ್ಯವಿಲ್ಲ.
 

‍ಲೇಖಕರು G

2 May, 2015

6 Comments

  1. Vasanth

    ಪ್ರಸನ್ನರವರ ಪ್ರಯತ್ನ ನಿಜಕ್ಕೂ ಅದ್ಬುತ. ಪ್ರಸನ್ನರವರು ಈ ಹಿಂದೆ ಭಾಗವಹಿಸಿದ ಸಮುದಾಯ ಸಂಘಟನೆ, ಚರಕ ಮತ್ತು ರಂಗಾಯಣದಲ್ಲಿ ಅವರು ಆರಂಭಿಸಿದ ಕೆಲ ಕಾಯಱಕ್ರಮಗಳು ಯಾವುದೇ ಬೃಹತ್ ಜನ ಸಮುದಾಯಗಳನ್ನು ಒಳಗೊಳ್ಳದೆ ಸದ್ದಿಲ್ಲದೇ ಅನೇಕ ಬದಲಾವಣೆಗಳಿಗೆ ಕಾರಣವಾಗಿದೆ. ಸುಸ್ಥಿರ ಬದುಕಿನ ಪ್ರಯತ್ನದಲ್ಲೂ ಕೂಡ ಪ್ರಸನ್ನರಲ್ಲಿ ಈ ರೀತಿಯ ಆಲೋಚನೆ ಇರಬಹುದು. ಪ್ರಸನ್ನರವರು ಕೇವಲ ಕೈಮಗ್ಗದ ಕುರಿತು ಮಾತ್ರ ಮಾತನಾಡುತ್ತಿಲ್ಲ ಅವರು ಸಮಗ್ರವಾಗಿ ಇವತ್ತು ಹಾದಿ ತಪ್ಪಿರುವ ನಮ್ಮ ಶಿಕ್ಷಣ, ಕೃಷಿ, ಗ್ರಾಮೋದ್ಯೋಗ, ಪೊಳ್ಳು ಅಭಿವೃದ್ದಿಯ ಇವುಗಳ ಬಗ್ಗೆ ಹೊಸ ಚಿಂತನೆ ಸಾಧ್ಯವಿದೆಯೇ ಎಂಬ ಆಲೋಚನೆ. ಪ್ರಸನ್ನರವರು ಬಡವರ ಜೀವನ ಕ್ರಮದಲ್ಲಿ, ಜಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಬಾರದು ಎಂದು ಸುಸ್ಥಿರ ಬದುಕಿನ ಬಗ್ಗೆ ಮಾತನಾಡುತ್ತಿಲ್ಲ. ಇನ್ನೂ ಯಂತ್ರಗಳ ಕುರಿತು ಅವರು ಹೇಳುತ್ತಿರುವುದು ಅವುಗಳನ್ನು ಸಂಪೂಣಱ ನಿರಾಕರಿಸಿ ಎಂದಲ್ಲ, ನಮ್ಮ ನಮ್ಮ ಅವಶ್ಯಕತೆಗಳಿಗೆ ಮಾತ್ರ ಸಾಧ್ಯವಾದಷ್ಟು ಮಿತಿಯಲ್ಲಿ ಬಳಸಿ ಎಂಬುದು. ಹಳ್ಳಿಗಳನ್ನು ನಾಶಮಾಡುತ್ತಿರುವ ಜಾಗತೀಕರಣದ ವಿರುದ್ಧ ಅವರ ಧ್ವನಿ. ಇಷ್ಟು ನಾನು ಬದನವಾಳಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ನಂತರ ಅನಿಸಿದ್ದು.

  2. Ragini

    Prasanna has much bigger picture which non of us can see, above article is the result of that. One can give any dimension to Badanavalu Satyagraha and it could be the fact also, but one should see as a larger picture of Prasannas thoughts. sustainability is connected with so many things and thoughts and its not an easy task for any one. we have traveled too for from the reality and we are finding it hard to accept the truth.

  3. ಸಿದ್ದಯ್ಯ ಕೆ.ಈ.

    ಬದನವಾಳು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶದಲ್ಲಿ ಕೆಲವು ಪ್ರತಿಜ್ಞೆ ಕೈಗೊಳ್ಳಲಾಗಿದೆ. ಕೆಲ ಪ್ರತಿಜ್ಞೆಗಳು ಓಕೆ. ಆದರೆ ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಭಾಗವಹಿಸುತ್ತೇನೆ. ಗೃಹ ಮತ್ತು ಸ್ನಾನಕ್ಕೆ ಬಳಸಿದ ನೀರನ್ನು ಗಿಡಗಳಿಗೆ ಹಾಕುತ್ತೇನೆ ಎಂಬುದು ಸೇರಿದಂತೆ ಹಲವು ಅಂಶಗಳು ಅವೈಜ್ಞಾನಿಕವಾಗಿವೆ. ಅಂತೆಯೇ ಸಿರಿಧಾನ್ಯ ಬೆಳೆಸುವುದು ಮತ್ತು ಸೇವಿಸುವುದು ಕೂಡ ಬರೀ ಬೂಟಾಟಿಕೆ ಮಾತು. ಸಿರಿಧಾನ್ಯ ಬೆಳೆಯುವವರು ಯಾರು ? ಭೂಮಿ ಎಲ್ಲಿದೆ. ಮಳೆ ಎಲ್ಲಿ ಬರುತ್ತಿದೆ. ಸಿರಿಧಾನ್ಯ ಬೆಳೆದರೆ ರೈತರು ಹಣ ಸಂಪಾದಿಸುವುದು ಹೇಗೆ? ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳುವುದಾದರೂ ಹೇಗೆ? ಸಿರಿಧಾನ್ಯ ಬಿತ್ತಲು ಎತ್ತುಗಳು ಬೇಕು. ಹೋರಿಗಳು ಬೇಕು. ಈಗ ರೈತರ ಬಳಿ ಎತ್ತು, ಹೋರಿ ಇಲ್ಲ. ಸಿರಿಧಾನ್ಯ ಬೆಳೆಯುವುದಾಗಿ ಬರೀ ಪ್ರತಿಜ್ಞೆ ಮಾಡಿದರೆ ಸಾಲದು. ಕಳೆದ 25 ವರ್ಷಗಳ ಹಿಂದ ನಮ್ಮ ಊರಿನಲ್ಲಿ ನವಣೆ, ಕೊರಲೆ, ಹಾರಕ, ಸಾವೆ, ಸಜ್ಜೆ ಬೆಳೆಯುತ್ತಿದ್ದೆವು. ನವಣೆ, ಸಜ್ಜೆ ನುಚ್ಚನ್ನೇ ಹಾಕಿ ಮುದ್ದೆ ಮಾಡುತ್ತಿದ್ದೆವು. ಹಬ್ಬಗಳಲ್ಲಿ ನವಣೆ ಅನ್ನ ಮಾಡುತ್ತಿದ್ದೆವು. ಇದು ನಮಗೆ ಪರಮಾನ್ನ. ಭತ್ತದ ಅಕ್ಕಿ ಅನ್ನವನ್ನು ಅಂದು ನೋಡಿದವರಲ್ಲ.(ಶ್ರೀಮಂತರನ್ನು ಹೊರತುಪಡಿಸಿ) ನಮ್ಮ ಮನೆಯಲ್ಲಿ ನವಣೆ ಅನ್ನ ಮಾಡಿದರೆ ನಮ್ಮ ನೆರೆ ಮನೆಯವರು ಆಡಿಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿದೆ. ಶೋಕಿಗಾಗಿ ಮತ್ತು ಹೈಟೆಕ್ ಕಾಯಿಲೆ ತಡೆಗೆ ಕೆಲವರು ಸಿರಿಧಾನ್ಯದ ಪದಾರ್ಥಗಳನ್ನು ತಿನ್ನುವುದು ರೂಢಿ ಮಾಡಿಕೊಂಡಿದ್ದಾರೆ. ಈಗ ಭೂಮಿ ಇಲ್ಲ. ಬೆಳೆಯುವವರು ಇಲ್ಲ. ಸರ್ಕಾರದ ನೀತಿಗಳು ರೈತರ ಭೂಮಿ ಕಳೆದುಕೊಳ್ಳುವಂತೆ ಮಾಡಿವೆ. ಊರೆಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈ ನಿರ್ಣಯವೇ ಅವೈಜ್ಞಾನಿಕವಾಗಿದೆ. ಇನ್ನು ಯುವ ಜನತೆ ನಗರ ಸೇರುತ್ತಿದೆ. ಗ್ರಾಮಗಳು ವೃದ್ಧರ ಆಶ್ರಯ ತಾಣಗಳಾಗಿವೆ. ಇಂತಹ ಹೊತ್ತಿನಲ್ಲಿ ಸಿರಿಧಾನ್ಯ ಬೆಳೆಯುವ ಪ್ರತಿಜ್ಞೆ ಎಷ್ಟು ಮಟ್ಟಿಗೆ ಸರಿ ಎಂಬುದರತ್ತ ಆಲೋಚಿಸಬೇಕು. ಪ್ರಸನ್ನ ಅವರ ಆಲೋಚನಾ ಕ್ರಮ ನಿಂತ ನಿರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಬದಲಾಗಬೇಕು. ಕೃಷಿ ಚಟುವಟಿಕೆ ವೃದ್ಧಿಸುವ ಕಡೆ ಗಮನ ಕೊಡಬೇಕು. ಸರ್ಕಾದ ನೀತಿಗಳು ಕೃಷಿಕರ ಪರವಾಗಿರಬೇಕು. ಇದಕ್ಕೆ ಒತ್ತಡ ಬೇಕು. ಆದರೆ ಪ್ರಸನ್ನ ರೈತರ ಪರವಾಗಿ ಮಾತನಾಡುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಜಾಗತೀಕರಣ ಅಪಾಯಗಳ ಕುರಿತು ಮನವರಿಕೆ ಮಾಡಿಕೊಡಬೇಕು ಮತ್ತು ಅಂತಹ ನೀತಿಗಳು ಜಾರಿಯಾಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ನೋಡುತ್ತ ಸುಮ್ಮನೆ ಕುಳಿತು ಸುಸ್ಥಿರ ಬದುಕು ಎಂದರೆ ಹೇಗೆ? ಇಂತಹ ಅಂಶಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ.

  4. nagarajhettur

    ಸೂಕ್ಷ್ಮ ಪ್ರಜ್ಞೆಯ ದೇವನೂರರೇ ಈಗಿನ ಕಾಲಕ್ಕೆ ಸಲ್ಲುತ್ತಾರಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತಾಗಿದೆ tumba olleya mathu prasanna ….

  5. ಲಲಿತಾ ಸಿದ್ಧಬಸವಯ್ಯ

    ಪ್ರಸನ್ನಮಾರ್ಗ ಎಲ್ಲಿಗೆ ಬಂದು ನಿಲ್ಲುತ್ತದೊ ಗೊತ್ತಿಲ್ಲ. ಈ ಲೇಖನದ ಒಂದು ಮಾತು ನನಗೆ ವಾಸ್ತವ ಸತ್ಯ – “ರೈತಸಂಘ ಮುಂತಾದುವುಗಳು ಒಂದು ನಿರ್ದಿಷ್ಟ ರಾಜಕೀಯ ಗುರಿಯನ್ನು ಹೊಂದಿಲ್ಲದ ಕಾರಣ ಈಗಲೂ ರೈತ ಯಾವ ಬವಣೆಯಿಂದ ಬದುಕುತ್ತಿದ್ದಾನೆ ಎಂಬುದನ್ನು ನೋಡಬಹುದು.ನಮ್ಮ ರೈತನ ಈಗಿನ ಕಷ್ಟಕ್ಕೆ ರೈತಸಂಘದ ಕೊಡುಗೆ ಇಲ್ಲ ಅಂತ ಹೇಳುವುದು ಹೇಗೆ ” – ಇದು ನಿಜ. ಲಂಕೇಶ್ ಮತ್ತವರ ಪ್ರಗತಿರಂಗದ ಹಿಂದೆ ಹಿಂದುಮುಂದು ನೋಡದೆ ಬಿದ್ದವರೆಲ್ಲ ರೈತಸಂಘದ ಬಗ್ಗೆ ಅತೀ ಭರವಸೆಗಳನ್ನು ಬೆಳೆಸಿಕೊಂಡದ್ದು ಈಗ ಕಥೆ. ಬಂಗಾರದಮನುಷ್ಯ ಸಿನಿಮಾ ನೋಡಿ ಕಡಿದಾಳು ಶಾಮಣ್ಣನವರು “ಈ ಸಿನಿಮಾ ತಿರುಗುಮುರುಗಾಗಿದ್ದರೆ ಸರಿಯಾಗಿರ್ತಿತ್ತು,ಮೊದಲು ನುಣ್ಣಗಿದ್ದ ಮನುಷ್ಯ ಬೇಸಾಯಕ್ಕಿಳಿ ಮೇಲೆ ತರಗೆದ್ದು ಹೋಗುತ್ತಾನೆ ಪಿಚ್ಚರಿನಲ್ಲಿದ್ದಂಗೆ ಬೇಸಾಯ ಮಾಡಿ ಬಂಗಾರವಾಗಿದ್ದು ಕಾಣೆ” ಎಂದರು ಅನ್ನುವ ‘ಮಾತು ಕಮ್ ಜೋಕು’ ಪ್ರಚಲಿತದಲ್ಲಿದೆ.(ಇದು ಕಲ್ಪಿತವೊ ನಿಜವೊ ತಿಳಿಯದು) ಈ ಜೋಕಿನಂತೆ ಎಂದೂ ಬೇಸಾಯ ಮಾಡದವರೆಲ್ಲ ಲಂಕೇಶರ ಸ್ಪೂರ್ತಿಯಲ್ಲಿ ರೈತಸಂಘದ ಕಟ್ಟಾಬೆಂಬಲಿಗರಾದೆವು. ಅಂದರೆ ಪುಗಸಟ್ಟೆ ಬೆಂಬಲ. ಮಾತಿಗೇನು ಖರ್ಚು ಮಾಡಬೇಕು? ಇದೇ ಅವಧಿಯಲ್ಲಿ ನಮ್ಮ ಮದುವೆ ಆಯಿತು. ಉತ್ತು ಬಿತ್ತು ಕೊಯ್ದು ಕಣಮಾಡಿ ಅಗೆಹಾಕಿ ಎರಡೂ ಕೈಯಿಂದ ಹೊಯ್ದುಕೊಂಡಿದ್ದ ನನ್ನ ಪತಿದೇವರು “ಯಾವ ಬೊಸುಡಿಮಗ ಮಾಡಿದ್ನೊ ಈ ಬೇಸಾಯ ಅಂಬದ” ಅನ್ನುವಷ್ಟು ರೋಸಿಹೋಗಿ ಇತ್ತ ಮೊಕ ಹಾಕಿ ಮಲಗುವುದಿಲ್ಲ ಅಂತ ಅವರಪ್ಪನ ಕೂಡೆ ವ್ಯಾಜ್ಯ ಮಾಡಿಕೊಂಡು ಬೆಂಗಳೂರು ಬಿದ್ದಿದ್ದರು. ಇಂಥ ವರನ ಧರ್ಮವಧುವಾದ ನಾನು ಇದ್ದ ಸರ್ಕಾರಿ ಕೆಲಸ ಬಿಟ್ಟು “ಹಳ್ಳಿಗೆ ಹೋಗೋಣ ಬೇಸಾಯ ಮಾಡೋಣ ಬಾ” ಅಂತ ಗಂಟುಬಿದ್ದೆ. ನವದಂಪತಿ ನಡುವೆ ಆಗ ನಡೆದ ಧಾರಾವಾಹೀ ಜಗಳದ ಕೇಂದ್ರಬಿಂದು ಈ ರೈತಸಂಘ. ರೈತಸಂಘದ ಬಗ್ಗೆ ಬೇಳೆನುಚ್ಚಿನಷ್ಟೂ ಆದರವಿಟ್ಟುಕೊಳ್ಳದೆ ಅದನ್ನು ಅದರ ನಡೆಗಳನ್ನು ಕಟುವಿಮರ್ಶಿಸುವ ಗಂಡ ಮತ್ತು ಸಂಘದ ಬಗ್ಗೆ ಹತ್ತಿಹಿಂಜಿದಂತ ಕನಸುಗಳನ್ನು ಊದಿಊದಿ ಬಿಡುತ್ತಿದ್ದ ನಾನು,,,,! ಅದೂ ಆಯಿತು. ವರ್ಷದೊಳಗೆ ಮೇಟಿಯಿಂ ರಾಟಿ ನಡೆವ ಅಷ್ಟೂ ಪರಿಯನ್ನು ಕಣ್ಣಾರೆ ಕಂಡು ” ಕೆಲಸಕ್ಕೆ ಹೋಗೋಣ ಸಂಬಳ ಪಡೆಯೋಣ” ಎನ್ನುತ್ತ ಪೇಟೆಗೆ ಬಂದೆವು. ಅಲ್ಲಿಂದ ಕೆಲವೆ,ಕೆಲವೆ ವರ್ಷಗಳಲ್ಲಿ ರೈತಸಂಘ ಚಿಛ್ಚಿದ್ರವೆದ್ದು ಹೋಯಿತು.ಚಕ್ಕೆಸಿಬಿರಿನಂತೆ ರೈತಸಂಘ ಅದೆಷ್ಟು ಭಾಗಗಳೆದ್ದಿತೊ ಅಷ್ಟೂ ಭಾಗಗಳ ತಲಾ ನೇತಾರರು ಒಂದಿಲ್ಲೊಂದು ರಾಜಕೀಯ ಪಕ್ಷದ ಬಹಿರಂಗದ್ದೊ ಅಂತರಂಗದ್ದೊ ಬೆಂಬಲ ಪಡೆದು ಮುಂದುವರೆದಿದ್ದು ಮತ್ತು ಅದರೊಳಗೆ ಜಾತಿರಾಜಕಾರಣವೆ (ಮುಖ್ಯವಾಗಿ ರಾಜಕೀಯವಾಗಿ ಪ್ರಬುದ್ಧವಾಗಿದ್ದ ಜಾತಿಗಳ) ಮುಖ್ಯವಾದದ್ದು ಸಂಘ ಒಪ್ಪಿಕೊಂಡರೂ ಬಿಟ್ಟರೂ ನಿಜ. ಇತ್ತ ಅದನ್ನೆ ನಂಬಿಕೊಂಡು ಊರಲ್ಲಿ ಅಧಿಕಾರಸ್ತರ, ಅವಸರಕ್ಕೆ ಸಾಲ ಕೊಡುತ್ತಿದ್ದವರ, ಕೊನೆಗೆ ಹೆಪ್ಪಿಗೆ ಮಜ್ಜಿಗೆ ಕೊಡುತ್ತಿದ್ದವರನ್ನೂ ಎದುರು ಹಾಕಿಕೊಂಡವರ ಸ್ಥಿತಿಯೇನು? ದೊಡ್ದ ಬದಲಾವಣೆ ಆಗುವಾಗ ಇದು ಸಹಜ ಅಂದುಬಿಡುತ್ತಾರೆ ಕೆಲವರು. ಆದರೆ ಸಣ್ಸಣ್ಣ ನೆಮ್ಮದಿಯ ಬದುಕುಗಳೆ ಇಂಥ ದೊಡ್ಡ ಬದಲಾವಣೆಗೆ ತಲೆದಂಡವಾಗುವುದನ್ನು ತಪ್ಪಿಸುವವರು ಯಾರು ಹೇಳಿ?

  6. maheshwari.u

    ಆತ್ಮವಿಮರ್ಶೆಯಿಂದ ಕೂಡಿದ ನಿಷ್ಠುರವಾದ ಆತ್ಮಾವಲೋಕನದೊಂದಿಗೆ ಸಾಗಬೇಕಾದ ಹೋರಾಟದ ಬಗ್ಗೆಯೇ ಪ್ರಸನ್ನ ಅವರು ಹೇಳಿದ್ದಾರೆಂದು ನಾನು ತಿಳಿದಿದ್ದೇನೆ.ದುಡಿಮೆಯ ಬದುಕಿನ ಘನತೆಯನ್ನು ಅರ್ಥೈಸುವುದು ,ಸಾಧ್ಯವಾದಷ್ಟೂ ಸರಳ ಜೀವನವನ್ನು ಆಶ್ರಯಿಸುವುದು., ನಮ್ಮ ಈ ಇಳೆಯ ಹಾಗೂ ಇಳೆಯ ಮಕ್ಕಳ ಜೀವಸತ್ವವನ್ನು ಕಾಪಾಡುವುದು- ಪ್ರಸನ್ನರ ಕಾಳಜಿ ಎಂಬುದಾಗಿ ನನ್ನ ಗ್ರಹಿಕೆ.ಪ್ರಗತಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚುಕುದುರೆಯ ಓಟ ಎಲ್ಲರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದರೆ ಅದು ರೊಮಾಂಟಿಕ್ ಆಗುತ್ತದೆಯೇನೋ?ರೈತರ, ಬಡವರ , ದುಡಿಮೆಗಾರರ ಬದುಕಿನ ಬಗ್ಗೆ ಅವರ ಬವಣೆಯ ಬಗ್ಗೆ ಪ್ರಸನ್ನ ಅವರ ಸ್ಪಂದನವಿಲ್ಲವೆಂದು ಹೇಳಲು ಸಾಧ್ಯವೇ?ಶಬ್ದಗುಣ ಎಂಬ ಪತ್ರಿಕೆಯಲ್ಲಿ ಪ್ರಸನ್ನ ಅವರೊಂದಿಗೆ ನಡೆದ ಒಂದು ಸಂದರ್ಶನ ಪ್ರಕಟವಾಗಿತ್ತು- ಕೆಲವು ವರ್ಷಗಳಹಿಂದೆ.ಅದನ್ನು ಓದಿದ ಆಧಾರದಲ್ಲಿ ನನಗೆ ಅನಿಸಿದ್ದೇನೆಂದರೆ ಅವರ ಯೋಚನೆ ಮತ್ತು ಕಾರ್ಯಯೋಜನೆ ವಾಸ್ತವದ ಅರಿವಿಲ್ಲದ್ದೆ ಓಮ್ಮಿಂದೊಮ್ಮೆಲೆ ಮೂಡಿದ್ದಲ್ಲ.ಅದರ ಹಿಂದೆ ವರ್ತಮಾನದ ಮಾತ್ರವಲ್ಲ ನಾಳೆಯ ಬದುಕಿನ ಕುರಿತಾದ ಕಾಳಜಿಯೂ ಇದೆ.ಒಂದು ಸಮಗ್ರ ದೃಷ್ಟಿ ಇದೆ. ‘ಬಡವರಿಗೆ ನೀವು ಬಡವರಾಗಿಯೇ ಇರಿ ದುಡಿದು ದುಡಿದು ಸಾಯಿರಿ’ ಎಂಬಷ್ಟು ಸಂವೇದನಾಹೀನರಾಗಿ ನನಗೆ ಅವರು ಕಾಣಿಸಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading