ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಹೆಗಡೆ ಓದಿದ ‘ಬೆಳಕ ನಿಚ್ಚಣಿಕೆ’

ಬೆಳಗಿನೊಳಗಣ ಬೆಳಗ ಕಡೆದಡೆ…

ಚಂದ್ರಶೇಖರ ಹೆಗಡೆ

ನಿಚ್ಚಣಿಕೆ ಎನ್ನುವುದೊಂದು ಬೆಳಕಿನೆಡೆಗೆ ಕರೆದೊಯ್ಯುವ ರೂಪಕ. ಇಲ್ಲಿರುವುದು ಬರೀ ನಿಚ್ಚಣಿಕೆಯಲ್ಲ ; ಅದು ಬೆಳಕ ನಿಚ್ಚಣಿಕೆ ಎನ್ನವುದು ಬಯಲಿನೊಳಗಣ ಬಯಲಾಗಿ, ಬೆಳಕಿನೊಳಗಣ ಬೆಳಕಾಗಿ ಅದ್ವೈತವನ್ನು ಆರಾಧಿಸುತ್ತದೆ. ಮಾತೆಂಬುದು ಜ್ಯೋತಿರ್ಲಿಂಗವೆನ್ನುವುದಕ್ಕೆ ಅನೇಕ ನಿದರ್ಶನಗಳನ್ನೊದಗಿಸುವ ಈ ಗಜಲ್ ಸಂಕಲನ ಸಹೃದಯರನ್ನು ತನ್ನದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅಲ್ಲಮಪ್ರಭು ಹೀಗೆ ಹಾಡುತ್ತಾನೆ-

ಬೆಳಗಿನೊಳಗಣ ಬೆಳಗ ಕಡೆದಡೆ
ಮರಳಿ ಕೂಡಿತ್ತಲ್ಲಾ
ಮೇರುವನೆ ಬೋನವ ಮಾಡಿ ಸವಿದ ಭಕ್ತರ ನೋಡಾ
ಅಡಗನಾರೋಗಣೆಯ ಮಾಡಿದ
ಲಿಂಗವು ಕೊಡಗೂಸು ನುಂಗಿತ್ತ ಕಂಡೆ ಗುಹೇಶ್ವರಾ

ಹೀಗೆ ಬೆಳಗಿನೊಳಗಣ ಬೆಳಕೆಂಬ ಬೆಣ್ಣೆಗಾಗಿ ಗಜಲ್‌ಗಳನ್ನು ಕಡೆದವರು ಚಂದ್ರಶೇಖರ ಪೂಜಾರರವರು. ಕೊನೆಗೆ ಬೆಣ್ಣೆ-ಬೆಳಕು-ಕವಿ ಈ ಮೂವರು ಅದ್ವೈತವಾಗುವುದು ಈ ಸಂಕಲನದ ವಿಶಿಷ್ಟತೆ. ಅಲ್ಲಮನ ವಚನದಲ್ಲಿ ಲಿಂಗವು ಕೊಡಗೂಸನ್ನು ನುಂಗಿದ ಹಾಗೆ ಇಲ್ಲಿ ಕವಿಯನ್ನು ಗಜಲ್ ನುಂಗಿರುವುದು ಸೋಜಿಗವನ್ನುಂಟು ಮಾಡುವ ಸಂಗತಿ. ಶರೀಫರು ಇದನ್ನು
ಕೋಡಗನ ಕೋಳಿ ನುಂಗಿತ್ತ
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ
ಎಂದು ಹಾಡಿರುವುದನ್ನು ನಾವಿಲ್ಲಿ ನೆನೆಯಬೇಕು. ಇಂತಹ ನುಂಗುವಿಕೆಯಿಂದ ಮಾತ್ರ ಕಾವ್ಯವೊಂದು ಹುಟ್ಟಿಕೊಳ್ಳಲು ಸಾಧ್ಯವಿದೆ.

ಈ ನುಂಗುವಿಕೆ ಮತ್ತೇನೂ ಅಲ್ಲ ಅದೊಂದು ಅದ್ವೈತ. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ತಾತ್ವಿಕತೆಯಲ್ಲಿಯೂ ನಮಗೆ ಕಾಣವುದು ಇದೇ ಅದ್ವೈತವೇ. ಕವಿಯಿಲ್ಲಿ ಅರಸನಾಗಿ ಗಜಲ್ ರಾಣಿಯಾಗಿ ರೂಹು ಪಡೆದಿರುವುದು ಈ ಸಂಕಲನದ ಅನನ್ಯತೆಗಳಲ್ಲಿ ಒಂದು. ಈ ಅದ್ವೈತವೇ ಚಂಪೂರವರನ್ನು ಸಮರ್ಥ ಗಜಲ್‌ಕಾರರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

ಹೀಗೆ ನಾಮಕರಣದಲ್ಲೇ ಪ್ರತಿಮೆಗಳ ಮೊರೆ ಹೋಗಿರುವ ಕವಿ ಚಂದ್ರಶೇಖರರು ತಮ್ಮ ಗಜಲ್‌ನ ಪ್ರತಿ ಸಾಲಿನಲ್ಲಿಯೂ ರೂಪಕಗಳ ಸರಮಾಲೆಯನ್ನೇ ಹೆಣೆಯುವ ಸಾಹಸ ಮಾಡಿದ್ದಾರೆ. ಇವುಗಳನ್ನೊಮ್ಮೆ ಮುಡಿದು ಭೋಗಿಗಳಾದಾಗಲೇ ರಸಾನುಭವದ ಸದಾವಕಾಶವಿದೆ. ಕವಿಯ ನಂಬಿಕೆಯಿಷ್ಟೇ. ಗಜಲ್ ಮೊದಲೇ ಗದ್ಯ ಪ್ರಣೀತದಂತೆ ಕಾಣುವ ವಚನದಂತಹ ರಚನೆ. ಇದರಲ್ಲಿ ಕನಿಷ್ಠ ಉಪಮೆ, ರೂಪಕಗಳೂ ಇಲ್ಲದೇ ಹೋದರೆ ಹೇಗೆ ಎಂಬುದು. ಈ ಸಂಗತಿ ಕವಿಯನ್ನು ಕಾಡಿದ ಕಾರಣದಿಂದಾಗಿ ಕಾವ್ಯ ಲೋಕಕ್ಕೊಂದು ಧ್ವನಿಪೂರ್ಣ ಗಜಲ್ ಸಂಕಲನವೊಂದು ದಕ್ಕಲು ಸಾಧ್ಯವಾಗಿದೆ. ವಾಚ್ಯಾರ್ಥಗಳನ್ನು ಮೀರಿ ಲಕ್ಷಾರ್ಥ ಹಾಗೂ ವ್ಯಂಗ್ಯಾರ್ಥಗಳ ಹದಭರಿತ ರಸಾಯನವಾಗಿ ಈ ಗಜಲ್ ಸಂಕಲನ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದೆ.

ಹೀಗಾಗಿ ಚಂಪೂರವರನ್ನು ಬೆನ್ನುಡಿ ಬರೆದು ಬೆನ್ನುತಟ್ಟಿದ ಅಬ್ದುಲ್ ಹೈ ತೋರಣಗಲ್ಲರವರು ‘ರೂಪಕಗಳ ರಾಜ’ ಎಂದು ಕರೆದಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಪ್ರೇಮಕಾವ್ಯವಾಗಿ, ಭಕ್ತಿಕಾವ್ಯವಾಗಿ, ಒಗಟಿನ ಸವಾಲಿನ ಕಾವ್ಯವಾಗಿ ಸಂತರು ಹಾಗೂ ಫಕೀರರ ಎದೆಯಿಂದ ರೆಕ್ಕೆಗಳನ್ನು ಬಿಚ್ಚಿಕೊಂಡು ಹಾರಿದ ಗಜಲ್ ಕನ್ನಡದಲ್ಲಿ ಇಂದು ಇವೆಲ್ಲವುಗಳನ್ನು ಮೀರಿದ ಸಾಮಾಜಿಕ ಜಗತ್ತಿಗೂ ತನ್ನನ್ನು ತೆರೆದುಕೊಂಡು ಸಶಕ್ತತೆಯನ್ನು ಪಡೆದುಕೊಳ್ಳುತ್ತಿರುವುದು ಪ್ರಗತಿಶೀಲ ಬೆಳವಣಿಗೆ. ವ್ಯಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಯವರೆಗೆ ತನ್ನ ಮಿತಿಯನ್ನು ವಿಸ್ತರಿಸಿಕೊಂಡು ಕುಣಿಯುತ್ತಿರುವ ನವಿಲಾಗಿ ಗಜಲ್ ಗಮನಸೆಳೆಯುತ್ತಿದೆ.

ಕಾವ್ಯ ಎನ್ನುವುದು ಅಂತಿಮವಾಗಿ ಸಮಾಜಮುಖಿಯಾದಾಗಲೇ ಅದಕ್ಕೊಂದು ಸಾರ್ಥಕತೆ. ಕಾವ್ಯಮೀಮಾಂಸಕರು ಹೇಳುವ ಕಾವ್ಯ ಪ್ರಯೋಜನಗಳಲ್ಲಿ ಇದೂ ಒಂದು. ಕಾವ್ಯವನ್ನೇ ಉಂಡು ಕಾವ್ಯವನ್ನೇ ಕುಡಿದು ಕಾವ್ಯಕ್ಕಾಗಿ ಮಡಿದ ಕೀಟ್ಸ್, ಕುವೆಂಪು, ಬೇಂದ್ರೆ, ಶ್ಯಾಮ್ ಎ ತಬ್ರೀಝಿ, ಫ್ರಿದಾ ಕಾಹ್ಲೋವಾ, ರಾಬಿಯಾ, ಸರ್ಮದ್, ಗಾಲಿಬ್, ದಾರಾಶಿಕೊರಂತಹ ದೊಡ್ಡ ಪರಂಪರೆಯೇ ನಮ್ಮ ಕಣ್ಣೆದುರಿಗಿದೆ. ಇಂತಹ ಪರಮಶ್ರೇಷ್ಠ ಕಾವ್ಯವನ್ನು ಒಲಿಸಿಕೊಳ್ಳಬೇಕೆನ್ನುವ ಶ್ರದ್ಧೆಯ ಹಂಬಲ ಅವರ ಗಜಲ್‌ಗಳಲ್ಲಿ ಎದ್ದು ಕಾಣುತ್ತದೆ.

ಮುನ್ನುಡಿಯ ತೋರಣ ಕಟ್ಟಿರುವ ಇಮಾಮ್ ಸಾಹೇಬ ಹಡಗಲಿಯವರು ‘ಸೋತು ಸುಣ್ಣವಾದವರ ನಡುವೆ ಬಣ್ಣವಾದ ಚಂಪೂ’ ಎಂಬ ನುಡಿಗಟ್ಟನ್ನೇ ಕವಿಯ ಕುರಿತು ಸೃಷ್ಟಿಸಿರುವುದು ವರ್ತಮಾನದ ಗಜಲ್ ಕಾವ್ಯದ ಹಾದಿಯನ್ನು ಬಣ್ಣಿಸುವಂತಿದೆ. ಇಲ್ಲಿರುವ ಗಜಲ್‌ಗಳನ್ನು ಅವಲೋಕಿಸಿದ ನಂತರ ಈ ನುಡಿಗಟ್ಟನ್ನು “ಸಹೃದಯರ ಎದೆಯೊಳಗೆ ವೈವಿಧ್ಯಮಯ ಭಾವ ಬಣ್ಣಗಳನ್ನೆರಚಿ ಕಾಮನಬಿಲ್ಲಾದವರು ಚಂಪೂ” ಎಂದು ವಿಸ್ತರಿಸಬೇಕೆನ್ನಿಸಿತು ನನಗೆ.

ಗಜಲ್ ಅರಬ್ಬೀ ಶಬ್ದ. ಫಾರ್ಸಿಯಿಂದ ಉರ್ದುವಿಗೆ, ಉರ್ದುವಿನಿಂದ ಕನ್ನಡಕ್ಕೆ ಬಂದ ಪರಿಯಿದು. ಶಾಂತರಸರ ಪರಂಪರೆಯನ್ನು ಮುಂದುವರೆಸುವ ಭರವಸೆಯ ಗಜಲ್‌ಕಾರರಾಗಿ ಕೆಲವೇ ಕವಿಗಳ ಸಾಲಿನಲ್ಲಿ ಗಮನಸೆಳೆಯುವ ಮತ್ತೊಂದು ಹೆಸರು ಚಂದ್ರಶೇಖರರದು ಎಂಬುದು ಅವರ ಗಜಲ್‌ಗಳನ್ನು ಆಸ್ವಾದಿಸಿದ ನಂತರ ಹೊರಡುವ ಉದ್ಘಾರವಾದರೆ ಅಚ್ಚರಿಯಲ್ಲ. ಇವರ ಗಜಲ್‌ಗಳು ಹೇಗೆ ಸೋತವರ ಗೆಲುವಾಗುತ್ತವೆ ಎಂಬುದನ್ನೊಮ್ಮೆ ಕೇಳಿ-
ಹರವಿದ ಬಣ್ಣದ ಕೌದಿಯೊಳು ಗಂಧವನದ ತುಣುಕು ಕಂಡಿದೆ
ಜೋಗಿಯ ಜೋಳಿಗೆಯಲಿ ಅಪರಂಜಿ ಕಣ್ಣು ತರೆದು ನೋಡಿದೆ

ಬಣ್ಣದ ಕೌದಿಯಿಲ್ಲಿ ಬಣ್ಣದ ಬದುಕಿನ ರೂಪಕ. ಅದರಲ್ಲಿ ಗಂಧವನವಾಗಿ ಗಂಧರ್ವಲೋಕವೂ ಇದೆ. ಗಂಧವಿಲ್ಲದ ನೋವು ಸಂಕಟಗಳ ಜೋಳಿಗೆಯೂ ಇದೆ. ಅವರ ಬೆಳಕ ನಿಚ್ಚಣಿಕೆಯು ಈ ಜೋಳಿಗೆಯೊಳಗಿನ ಅಪರಂಜಿಯಿಂದಲೇ ಹೊರಡುವುದೆನ್ನವುದು ಕವಿಯ ಅಪ್ರತಿಮ ಪ್ರತಿಮೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕಗಳನ್ನು ತುಂಬಿಕೊಂಡಿರುವ ಜೋಳಿಗೆಯೂ ಜೀವನದ ಒಂದು ಮಹತ್ ರೂಪಕವೇ. ಫಕೀರನ ಜೋಳಿಗೆಯೂ ಇದರಿಂದ ಹೊರತಾದುದಲ್ಲ. ಇಲ್ಲಿ ಕವಿ ಚಂದ್ರಶೇಖರರ ಜೋಳಿಗೆಯೂ ಹೊರಗಲ್ಲ. ಹೀಗಾಗಿ ಇಲ್ಲಿ ಜೋಗಿಯ ಜೋಳಿಗೆಯಲ್ಲಿ ಅಪರಂಜಿ ಕಾಣುತ್ತಿದೆ. ಈ ಅಪರಂಜಿಗಿಂತ ಅದರಿಂದ ಹೊರಡುವ ಬೆಳಕಿನತ್ತ ಕವಿಯ ಗಮನವಿರುವುದು ಕಾವ್ಯದುದ್ದಕ್ಕೂ ಎದ್ದು ಕಾಣುವ ಅಂಶವಾಗಿದೆ.

ಅಳತೆಗೆ ನಿಲುಕದ ಆಸೆಗಳಿಗೆ ಕೈಮುಗಿದು ಬೀಳ್ಕೊಡಬೇಕಿದೆ
ಕೆನ್ನೆ ಮೇಲೆ ಸುರಿವ ಕಣ್ಣೀರ ಪ್ರವಾಹಕೆ ಕೊನೆ ಹಾಡಬೇಕಿದೆ
ಈ ಸಾಲುಗಳನ್ನು ಓದಿದೊಡನೆಯೇ ‘ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ; ತನ್ನ ನೂಲು ತನ್ನನೇ ಸುತ್ತಿ ಸಾವ ತೆರನಂತೆ ; ಮನ ಬಂದುದ ಬಯಸಿ ಬೇವುತ್ತಿರುವೆನಯ್ಯಾ; ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನ’ ಎಂಬ ಅಕ್ಕನ ವಚನ ನೆನಪಾಗುತ್ತದೆ ನನಗೆ. ಈ ಕಾವ್ಯದ ತಲ್ಲಣಗಳು ವರ್ತಮಾನದ್ದೇ ಆದರೂ ಇದರ ತಾತ್ವಿಕತೆ ಮಾತ್ರ ಬುದ್ಧನಷ್ಟೇ ಐತಿಹಾಸಿಕವಾದುದು. ಇಡೀ ನಾಡು ಈಗಲೂ ಆಸೆಯೇ ದುಃಖಕ್ಕೆ ಮೂಲ ವೆಂಬ ತತ್ವಾದರ್ಶವನ್ನು ಮನುಷ್ಯರಲ್ಲಿ ಬಿತ್ತುವ ಹೋಳಿ ಹಬ್ಬದ ಅಮಲಿನಲ್ಲಿದೆ.

ಈ ಹೊತ್ತಿನಲ್ಲಿ ಕಾಮನಬಿಲ್ಲಿನ ಕವಿಯಾದ ಚಂದ್ರಶೇಖರರ ಈ ಗಜಲ್ ಕೃತಿಯ ರಸಾಯನವನ್ನು ಆರೋಗಿಸುವ ಹವಣಿಕೆಯೆದುರಾಗಿರುವುದು ಜಾರುತ್ತಿರುವ ಹಬ್ಬದ ಕಳೆಯನ್ನು ಮತ್ತೆ ಹೆಚ್ಚಿಸಲನುವಾಗಿದೆ. ಧರ್ಮಮಾರ್ಗವಲ್ಲದ ಕಾಮನೆಗಳನ್ನು ಕಳೆದುಕೊಳ್ಳುವುದಕ್ಕೆ ಇದಕ್ಕಿಂತ ಉಚಿತವಾದ ಮಗದೊಂದು ಹಬ್ಬ ಬೇರಿಲ್ಲವೆಂದೇ ಹೇಳಬೇಕು. ರತಿಯೂ ಕೂಡ ಈ ಹಬ್ಬದ ದಿನದಂದೇ ಕೆನ್ನೆ ಮೇಲೆ ಕಣ್ಣೀರ ಪ್ರವಾಹವನ್ನು ಹರಿಸಿದವಳೇ. ಇಲ್ಲಿ ರತಿಯಾದಿಯಾಗಿ ನೊಂದವರ ಕಣ್ಣೀರನ್ನೊರೆಸುವ ಬಂಡಾಯವನ್ನು ಕವಿ ಸಾತ್ವಿಕವಾಗಿಯೇ ತೋರುತ್ತಾರೆ. ಈ ಹಬ್ಬವನ್ನು ತಮ್ಮದೇ ಗಜಲ್ ಮೂಲಕ ಹೀಗೆ ಆಚರಿಸುತ್ತಿರುವವರು ಕವಿ ಚಂಪೂರವರು.

ಕವಿಗೆಳೆಯರಾದ ಚಂದ್ರಶೇಖರರ ಗಜಲಿನಲ್ಲಿ ಆಗಾಗ ಬುದ್ದ, ಬಸವ, ಅಂಬೇಡ್ಕರ, ಮಹಾತ್ಮಾ ಗಾಂಧೀಜಿ, ಮೀರಾಬಾಯಿ, ಶಿಶುನಾಳ ಶರೀಫರು, ಕಬೀರ, ಹರಳಯ್ಯ, ಅಕ್ಕಮಹಾದೇವಿಯಾದಿಯಾಗಿ ಜಗತ್ತಿನ ಹಲವಾರು ದಾರ್ಶನಿಕರ ಅನುಭವದ ಮಹಾಮನೆಯೊಂದು ಕಾಣಿಸಿಕೊಳ್ಳುವುದು ವಿಶೇಷ. ಇವರೆಲ್ಲರ ಸಾಮಾಜಿಕ ಸುಧಾರಣೆಯ ಚಿಂತನೆ ಹಾಗೂ ಕಾಳಜಿಗಳ ಮಂಥನವೊಂದು ಸದ್ದಿಲ್ಲದೇ ಸಂಭ್ರಮವಾಗಿಬಿಡುವುದು ಇವರ ಕಾವ್ಯದ ಸಹಜ ಶೈಲಿಯಗಿದೆ. ಈ ಸಂತರನ್ನೆಲ್ಲಾ ತಮ್ಮ ಮುಂದೆ ಕೂಡ್ರಿಸಿ ಹಾಡುವ ಕವಿಯ ಸೃಜನಶೀಲತೆ ದೃಶ್ಯಕಾವ್ಯದ ನಿರ್ಮಾಣಕ್ಕೆ ಎಡೆ ಮಾಡಿಕೊಡುತ್ತದೆ. ಇಲ್ಲಿ ಕೆಲವು ರೂಪಕಗಳು ಮತ್ತೆ ಮತ್ತೆ ಪುನರಾವರ್ತನೆಯಾಗಿವೆಯಾದರೂ ಇವು ಅನುಷಂಗಿಕವಾಗಿ ಹೊಸ ಆಯಾಮಗಳನ್ನು ಕಾವ್ಯಕ್ಕೆ ಕಟ್ಟಿಕೊಡುವ ಆಭರಣಗಳಾಗಿ ಬಂದಿರುವುದು ಪುನರುಕ್ತಿ ದೋಷವನ್ನು ಮರೆಸಿದಂತಾಗಿದೆ.

ಹರಿಹರನ ರಗಳೆಗಳಲ್ಲಿರುವಂತೆ ಇಲ್ಲಿ ಸಮಾಜದ ಮುಖ್ಯವಾಹಿನಿಯಿಂದ ಹೊರತಾದವರೇ ಕಾವ್ಯದ ನಾಯಕರಾಗಿರುವುದು ಕವಿಯ ಮಾನವೀಯ ಹೃದಯದ ಪರಿಚಯವನ್ನು ಮಾಡಿಸುತ್ತದೆ. ಇದರಲ್ಲಿ ಚೋಮ, ನಳಿನಿ, ಅಹಲ್ಯೆ, ಬಡವ, ಏಕಲವ್ಯರಂಥವರು ಕವಿಯ ಕಾವ್ಯದ ಮುನ್ನಲೆಗೆ ನಿಂತು ಸಾಂತ್ವನವನ್ನು ಪಡೆಯುತ್ತಾರೆ. ಚೋಮನಂತೂ ಮತ್ತೆ ಮತ್ತೆ ಅವರ ಕಾವ್ಯದಲ್ಲಿ ಎದುರುಗೊಳ್ಳುವ ಪರಿಯನ್ನು ಗಮನಿಸಿ-
ಗೋರಿಯ ಮೇಲಿನ ಹೂವು ಹಸಿವಿನಿಂದ ಸತ್ತವರ ನೆನೆದಿದೆ ಚೋಮ
ತಿಪ್ಪೆ ಸೇರಿದ ಅನ್ನಕ್ಕೆ ಕರಿ ಮುಖದ ಕಣ್ಣು ಕೈ ಚಾಚಿದೆ ಚೋಮ

ಹಸಿವು ಹಾಗೂ ಹುಸಿವು ಈ ಭುವನವನ್ನಾಳುತ್ತಿರುವ ಅನಭಿಷಕ್ತ ದೊರೆಗಳು. ವಸಾಹತು ಹಾಗೂ ವಸಾಹತೋತ್ತರ ಕಾಲಘಟ್ಟದ ಭಾರತದ ಚಕ್ರವರ್ತಿಯಾಗಿಯೂ ಜನರನ್ನು ಇನ್ನಿಲ್ಲದಂತೆ ಹಿಂಸಿಸಿರುವುದು ಕಾರ್ಲಮಾರ್ಕ್ಸ್ ವಾದದ ಚಿಂತನೆಗಳಿಗೆ ಇಂಬನ್ನು ನೀಡಿತು. ಸಮಾಜವಾದ ಇದರ ಸಹೋದರ ಸಿದ್ಧಾಂತ. ಜೇಡರ ದಾಸಿಮಯ್ಯರು ‘ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ಒಡಲುಗೊಂಡಿಹನೆಂದು ನೀನೊಮ್ಮೆ ಜರಿದು ನುಡಿಯದಿರಾ ನೀನೂ ಎನ್ನಂತೊಮ್ಮೆ ಒಡಲುಗೊಂಡು ನೋಡಾ’ ಎಂದು ಸವಾಲೆಸೆಯುವಲ್ಲಿ ಹಸಿವು ಕಾಡಿದ ಬಗೆಯನ್ನು ಅರಿಯಬಹುದು. ಎಂಬ ಊಳಿಗಮಾನ್ಯ ಸಂಸ್ಕೃತಿಯ ಜೀವಂತ ಪ್ರತಿನಿಧಿಯಾಗಿ ಇಂದಿಗೂ ಎಲ್ಲರೊಳಗೊಂದಾಗಿ ಕಾಣುವ ಮಂಕುತಿಮ್ಮ ಈ ಹಸಿವು. ವರ್ಗಭೇದದ ಸೃಷ್ಟಿಕರ್ತ ಈ ಹಸಿವು ಎಂದರೆ ಅತಿಶಯೋಕ್ತಿಯೇನಲ್ಲ. ಇದು ಸಂಧರ್ಭಗಳಿಗನುಗುಣವಾಗಿ ವೈವಿಧ್ಯಮಯವಾದ ಸ್ವರೂಪಗಳನ್ನು ತಾಳುವುದು ಇದರ ವಿಶೇಷ. ಇದೇ ಹಸಿವು ಚಂಪೂರವರ ಕಾವ್ಯದಲ್ಲಿ ಚೋಮನ ರೂಹು ಪಡೆದಿರುವುದು ಸಹಜವೇ ಆಗಿದೆ. ಸಾಮಾನ್ಯವಾಗಿ ಹೊಟ್ಟೆ ತುಂಬಿದವರ ಕೊರಳು ಹಾಗೂ ಮುಡಿಯಲ್ಲಿ ಮೆರೆಯುವ ಹೂವು ಹಸಿದವರಿಗೆ ಎಲ್ಲ ಬಗೆಯ ಸಾವುಗಳ ನಂತರವೇ ದಕ್ಕುವುದು ಕ್ರೌರ್ಯದ ಪರಮಾವಧಿಗಳಲ್ಲಿ ಒಂದು. ಹಸಿವಿನ ಹಿಂದಿರುವ ಬೆವರಿನ ಸಂಸ್ಕೃತಿಯನ್ನು ಕಟ್ಟಿಕೊಡುವ ಚಂಪೂರವರ ಗಜಲ್‌ನ ಸಾಲುಗಳಿವು-
ಸೌದೆ ಸೀಳಿ ಉಳ್ಳವರ ಒಲೆ ಹೊತ್ತಿಸಿ ಕಪ್ಪು ಬೂದಿ ಆದವರೆಷ್ಟೋ
ಬಿಸಿಲಲ್ಲಿ ಬಸಿದ ಬೆವರ ಪೆಟ್ಟಿಗೆ ಪಕ್ಕೆಲುಬು ಮುರಿದಿದೆ ಚೋಮ

ಹಸಿವಿನ ಇದೇ ಭಯಾನಕತೆಯನ್ನು ದ.ರಾ.ಬೇಂದ್ರೆಯವರು ತಮ್ಮ ಅನ್ನಾವತಾರ ಕಾವ್ಯದಲ್ಲಿ ಆರ್ದ್ರವಾಗಿ ಕಟ್ಟಿಕೊಡುತ್ತಾರೆ. ರತ್ನಾಕರ ಹಾಗೂ ವಸುಮತಿಯರ ನಡುವಿನ ಸಂವಾದವಾಗಿ ಹೆಣೆದಿರುವ ಅವರ ಕಾವ್ಯ ಬಡತನದ ಬೇಗೆಯನ್ನು ಅನುಭವಿಸುವಂತೆ ಮಾಡುತ್ತದೆ. ಕರಿಮುಖ ಹಸಿದವರನ್ನು ಕಟ್ಟಿಕೊಡಬಲ್ಲ ದೃಶ್ಯರೂಪಕ. ಇದನ್ನು ಚಂಪೂರವರು ಚೋಮನ ಚಿತ್ರಣಕ್ಕಾಗಿ ಬಳಸಿರುವುದು ಸಾಲಿಗೊಂದು ಪ್ರತಿಮಾತ್ಮಕತೆಯನ್ನು ತಂದಿದೆ. ನೆತ್ತರು ಕೊರಳಕುಣಿಕೆ, ಕಪ್ಪುಗುಳಿ, ಸಂತೆ, ನೆರಳು, ಗೀಜಗ, ಬುರ್ಲಿ, ಹಂಸ, ಚಕ್ರವಾಕ, ಚಾತಕ ಇತ್ಯಾದಿ ಹಕ್ಕಿಗಳು, ಸಿಡಿಲು, ಬಿರುಗಾಳಿ, ಬಿಸಿಲು, ಕೆಂಡ, ಪಂಜರ, ಬಲೆ, ಮಣ್ಣು ಮುಂತಾದ ಪದಾರ್ಥಗಳು ಚಂಪೂರವರ ಕಾವ್ಯಗಳಲ್ಲಿ ಮೈದಾಳಿದ ಶ್ರಮಸಂಸ್ಕೃತಿಯನ್ನು ಹಿಡಿದಿಡುವಲ್ಲಿ ಒಲಿದು ಬಂದಿವೆ.

೧೯೭೦ ದಶಕದಲ್ಲಿ ಮೂಡಿಬಂದ ದಲಿತ ಹಾಗೂ ಬಂಡಾಯದ ಚಿಂತನೆಗಳು ಮತ್ತೆ ಚಂಪೂರವರನ್ನು ಬಡಿದೆಬ್ಬಿಸಿವೆ. ಗಜಲ್ ಕಾವ್ಯದಲ್ಲಿ ಇಂತಹ ಪ್ರತಿಭಟನೆಯ ಚಳುವಳಿಯೊಂದು ರೂಪುಗೊಳ್ಳುತ್ತಿರುವುದು ಸೋಜಿಗವನ್ನು ತಂದಿದೆ. ಇದಕ್ಕಾಗಿ ಭಾಷೆ, ಉಪಮೆ, ರೂಪಕ ಹಾಗೂ ಪ್ರತಿಮೆಗಳನ್ನು ಕವಿ ಇಲ್ಲಿ ಸಮರ್ಥವಾಗಿ ದುಡಿಸಿಕೊಂಡಿರುವುದು ಅವರ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ.
ಹೊತ್ತಿ ಉರಿಯುವ ಎದೆಯ ಮೆದೆಗೆ ನೀನೇ ಉತ್ತರ ಕಂಡುಕೊಳ್ಳಬೇಕು
ತುಂಡು ಬಟ್ಟೆ ಉಟ್ಟವರ ಮುಂದೆ ಉಂಡು ಕುಣಿದರೆ ಸುಮ್ಮನಿರು

ಸದಾ ಶೋಷಿತರ ಪರವಾಗಿ ದನಿಯೆತ್ತುವ ಚಂಪೂರವರ ಕಾವ್ಯಕ್ಕೆ ಅಂಬೇಡ್ಕರರ ವಿಚಾರಧಾರೆಗಳು ಆಧಾರವಾಗಿರುವುದನ್ನು ಗುರುತಿಸಬಹುದು. ಅವರು ದಮನಿತರು ಇಂತಹ ಸಹನೆ ಹಾಗೂ ಸಂಯಮಶೀಲತೆಯನ್ನು ಬೆಳೆಸಿಕೊಳ್ಳಲು ಶಿಕ್ಷಣದ ಮೊರೆ ಹೋಗಬೇಕು ಎಂದು ಬಯಸಿದ್ದರು. ಇದೇ ಶಿಕ್ಷಣವನ್ನು ನೀಡಲು ಕವಿ ಇಲ್ಲಿ ಗಜಲ್ ಮಾಧ್ಯಮವನ್ನು ಬಳಸಿಕೊಂಡಿರುವುದು ಅನನ್ಯವಾಗಿದೆ. ಬುದ್ಧ ಪ್ರತಿಪಾದಿಸಿರುವುದೂ ಕೂಡ ಇದೇ ಸಂಯಮವನ್ನು. ತನ್ನರಿವೇ ತನಗೆ ಗುರು ಎಂದು ಹಾಡಿದ ಕುವೆಂಪುರವರ ಪ್ರಭಾವವೂ ಚಂಪೂರವರ ಮೇಲಾಗಿರುವುದು ಉಚಿತವೇ ಆಗಿದೆ. ಸಿದ್ಧಲಿಂಗಯ್ಯನವರು ‘ಸಾವಿರಾರು ನದಿಗಳು’ ಎಂಬ ಕಾವ್ಯವನ್ನು ಹೀಗೆ ಹಾಡುತ್ತಾರೆ-
ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು
ಕಪ್ಪು ಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ

ಇದು ಕ್ರಾಂತಿಗೀತೆಯೂ ಹೌದು. ಪ್ರತಿಭಟನೆಯ ಘೋಷಣೆಯೂ ಹೌದು. ಇಲ್ಲಿರುವ ಸೂತ್ರಪ್ರಾಯವಾದ ಪದಗಳೆಲ್ಲವೂ ಚಂಪೂರವರಲ್ಲಿ ವರ್ತಮಾನದ ರಕ್ತ ಮಾಂಸವನ್ನು ತುಂಬಿಕೊಂಡು ಒಂದೊಂದು ಗಜಲ್ ಕಾವ್ಯ ಆಗಿ ಹರಿದಿರುವುದು ಕವಿಯ ಸೂಕ್ಷ್ಮತೆಗೆ ನಿದರ್ಶನವಾಗಿದೆ. ಚಳುವಳಿಯೊಂದು ಹೇಗಿರಬೇಕು ಎಂಬುದನ್ನು ಮೇಲಿನ ಕಾವ್ಯ ಚಿತ್ರಿಸುತ್ತಾ ಹೋಗುತ್ತದೆ. ಇದರ ಮುಂದುವರಿಕೆಯನ್ನು ಚಂಪೂರವರಲ್ಲಿ ಮಂದಗಾಮಿ ನೆಲೆಯಲ್ಲಿ ಕಾಣಬಹುದು. ವ್ಯಕ್ತಿಗತವಾಗಿ ಸಾತ್ವಿಕರಾಗಿರುವ ಕಾರಣಕ್ಕೆ ಇವರ ಕಾವ್ಯವೂ ಹಾಗೆ ರಚನೆಯಾಗಿರುವುದರಲ್ಲಿ ಅಚ್ಚರಿಯಿಲ್ಲ. ಹಾಗೆಂದು ಅವರ ಬಂಡಾಯ ಸೋತುಹೋಗುವುದಲ್ಲ. ಬದಲಾಗಿ ಭೇದಗಳೆಂಬ ಸಾಮಾಜಿಕ ಕಂಟಕಗಳನ್ನು ಬೇರುಸಮೇತ ಕಿತ್ತೆಸೆಯುವಲ್ಲಿ ನಿತ್ಯ ನಿರಂತರ ಎಂಬುದನ್ನು ಸಾರುತ್ತವೆ ಅವರ ಗಜಲ್‌ಗಳು.

ಪಾಚಿಯ ನೆತ್ತಿಯ ಮೇಲೆ ಕಾಲಿಟ್ಟು ಏಳುವುದು ತಾವರೆ ಅಲ್ಲವೇ
ಬಣ್ಣದ ಪತಾಕೆಗಳಲ್ಲಿ ಹಾರಿ ಹಲಬುವುದು ಯಾವ ದೇವರು ಹೇಳು
ದೇವರು ಹಾಗೂ ಧರ್ಮ ರಾಜಕಾರಣವನ್ನು ಮನೋಜ್ಞವಾಗಿ ಬಣ್ಣಿಸುವ ನನಗಿಷ್ಟವಾದ ಸಾಲುಗಳಿವು. ಧರ್ಮದೊಳಗಿನ ಅರಿವು ಮಾಯವಾಗಿ ಕುರುಹುಗಳೇ ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ದೇವರು ಮತ್ತು ಧರ್ಮಗಳು ಸ್ವಾರ್ಥ ಸಾಧನೆಯ ಸರಕುಗಳಾಗುತ್ತಿರುವುದಕ್ಕೆ ನನ್ನ ವಿಷಾದವಿದೆ. ಹಿಜಾಬ್, ಭಗವದ್ಗೀತೆ, ದಿ ಕಾಶ್ಮೀರಿ ಫೈಲ್ಸ್ ಸಿನೇಮಾ ಇಂದಿನ ಧರ್ಮ ಜಿಜ್ಞಾಸೆಗೆ ಮುನ್ನುಡಿ ಬರೆದಿರುವುದು ಎಲ್ಲರಿಗೂ ಗ್ರಾಹ್ಯವಾಗಿರುವ ಸಂಗತಿಯೇ. ಇಂತಹ ಸಂದಿಗ್ಧ ಧಾರ್ಮಿಕ ಪರಿಸರಕ್ಕೆ ಪ್ರಾಣವಾಯುವಾಗಿ ಚಂಪೂರವರ ಕಾವ್ಯ ಕಂಡರೆ ಉತ್ಪ್ರೆಕ್ಷೆ ಏನಲ್ಲ. ವರ್ತಮಾನದ ತಲ್ಲಣಗಳಿಗೆ ಉತ್ತರವಾಗಬಲ್ಲ ಇವರ ಕಾವ್ಯದ ಅಂತಃಸತ್ವ ಕಸುವಿನಿಂದ ಕೂಡಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ದೇವರನ್ನು ಶೋಧಿಸುವ ಬಗೆಯೇ ಲೋಕ ಕಲ್ಯಾಣದ ಹಾದಿಯನ್ನು ತೆರೆದು ತೋರುತ್ತದೆ ಹೀಗೆ-
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ

ಜಿ.ಎಸ್.ಎಸ್. ಎತ್ತುವ ಪ್ರಶ್ನೆಯೂ ಇಲ್ಲಿ ಕುರುಹುವಿನದ್ದೇ. ಸರ್ವ ಜನಾಂಗಕ್ಕೂ ಬೆಳಕಾಗಬಲ್ಲ ಅರಿವನ್ನು ಹಿಂದಿಕ್ಕಿ ಕುರುಹುಗಳನ್ನು ಹಿಡಿದು ಹೊರಟಿರುವ ಮಾನವನ ದಾರಿ ವಿಶ್ವಪಥವಾಗುವುದು ಹೇಗೆ ?. ಸ್ಥಾವರಗಳಿಗಿರುವ ಮಹತ್ವವನ್ನು ಜಂಗಮದತ್ತ ಪಲ್ಲಟಗೊಳಿಸಬೇಕಾಗಿದೆ. ಕಾಮನಿಬಿಲ್ಲಿನ ಬಣ್ಣಗಳಲ್ಲಿಯೂ ಜಾತಿ, ಮತ, ಧರ್ಮವನ್ನು ಅರಸುವುದಾದರೆ, ಮನುಜಮತವೆತ್ತ ಸಾಗುತ್ತಿದೆಯೆಂಬುದು ಚಿಂತಿಸಬೇಕಾದ ಸಂಗತಿ. ಇಂತಹ ಆತ್ಮವಿಮರ್ಶೆಗೆ ತೆರೆದುಕೊಳ್ಳುವ ಪ್ರಯೋಗಶಾಲೆಯಾಗಿದೆ ಚಂಪೂರವರ ಕಾವ್ಯ.

ಹಣದ ಹಾಸಿಗೆ ಹೊದ್ದವರಿಗೆ ಬಡವರ ಹೃದಯ ಕಾಣದು ಬುಲ್ ಬುಲ್
ದರ್ಪದ ಕಳ್ಳು ಕುಡಿದವರಿಗೆ ಎದೆಯ ಕವಾಟ ತೆರೆಯದು ಬುಲ್ ಬುಲ್
ನಿಜ. ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳಾದ ಅಮೇರಿಕಾ, ರಷ್ಯಾ, ಚೀನಾಗಳು ಹೊದ್ದುಕೊಂಡಿರುವ ಹಣದ ಹಾಸಿಗೆಯ ಕೆಳಗಿರುವ ಉಕ್ರೇನ್ ನಂತಹ ಪುಟ್ಟ ರಾಷ್ಟ್ರಗಳು ಅವರ ಹೃದಯದ ಕಣ್ಣಿಗೆ ಕಾಣಿಸುತ್ತಿಲ್ಲವೆನ್ನವುದೇ ವಿಪರ್ಯಾಸದ ಸಂಗತಿ. ಸಂಪತ್ತಿನ ದುರಂತಗಳನ್ನು ಬಲ್ಲವರಾಗಿದ್ದ ವಚನಕಾರರು ೧೨ ನೇಯ ಶತಮಾನದಲ್ಲಿಯೇ ಕಾಯಕ-ಪ್ರಸಾದ-ದಾಸೋಹಗಳೆಂಬ ತಾತ್ವಿಕತೆಗಳನ್ನು ಅಳವಡಿಸಿಕೊಂಡು ಮಾದರಿಯಾದರು. ಜೇಡರ ದಾಸಿಮಯ್ಯನವರು
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೇ ಮಾಣ್ಬುದೇ
ಕಡೆಗೀಲು ಬಂಡಿಗಾಧಾರ
ಕಡುದರ್ಪವನೇರಿದ ಒಡಲೆಂಬ ಬಂಡಿಗೆ ನಿಮ್ಮ
ಶರಣರ ಸೂಳ್ನುಡಿಯೇ ಕಡೆಗೀಲು ಕಾಣಾ ರಾಮನಾಥ

ಕಡುದರ್ಪವನ್ನು ಖಂಡಿಸುವ ಇಂತಹ ಶರಣರ ಪಂಥಕ್ಕೆ ಸೇರುವ ಚಂಪೂರವರು ಕಾವ್ಯದ ಹೃದಯಭಾಷೆಯ ಜೊತೆಗೆ ಮನುಷ್ಯನ ಹೃದಯಬಡಿತವನ್ನೂ ಚೆನ್ನಾಗಿ ಅರಿತವರು. ಕಡುದರ್ಪವನ್ನೇರಿಸಿಕೊಂಡ ದೇಶಗಳಿಗೆಲ್ಲಾ ಯುದ್ಧವೇ ಪರಿಹಾರವಾಗಿ ಕಾಣಿಸುತ್ತದೆ. ಹಿಂಸೆಯೇ ಮಂತ್ರವಾಗಿ ಗೋಚರಿಸುತ್ತದೆ. ಬಾಂಬು ಗುಂಡುಗಳ ಮಧ್ಯೆ ಇವರೊಮ್ಮೆ ತಮ್ಮೆದೆಯ ಕವಾಟಗಳನ್ನು ತೆರದು ಅವಲೋಕಿಸಬೇಕಾಗಿದೆ. ಅದರೊಳಗೆ ಅದೆಷ್ಟು ಮುಗ್ಧ ಹೃದಯಗಳ ಹೆಣ ಬಿದ್ದಿದೆಯೋ ಎಂದೊಮ್ಮೆ ಎಣಿಸಬೇಕಾಗಿದೆ.

ಇಂತಹ ಗಣಿತದಲ್ಲಿ ಚಂಪೂರವರ ಕಾವ್ಯಕ್ಕೆ ಆಸಕ್ತಿಯಿಲ್ಲ. ಜಾಗತೀಕರಣದ ಅಡ್ಡಪರಿಣಾಮಳಲ್ಲಿ ಈ ವರ್ಗಭೇದವೂ ಒಂದು. ಸತ್ಯವನ್ನು ಗಜಲ್ ನ ಮಾಧುರ್ಯದ ಮೂಲಕ ಹೇಳುವ ಕವಿಯ ಶೈಲಿ ಸಹೃದಯರಿಗೆ ಬಲು ಬೇಗ ಆಪ್ತವಾಗುತ್ತದೆ. ಆರಾಧಿಸಿ ಒಳಗಿಳಿಯಬೇಕಷ್ಟೇ. ಒಲುಮೆಯ ಆರಾಧನೆಗೂ ಕಾವ್ಯಾರಾಧನೆಗೂ ವ್ಯತ್ಯಾಸಗಳಿಲ್ಲ. ತೆರೆದುಕೊಳ್ಳಲು ನಿರ್ಮಲ ಹೃದಯವಿರಬೇಕಷ್ಟೇ. ಹಾಗೆ ಆಗಸವಾಗದ ಹೊರತು ಕಾವ್ಯ ದಕ್ಕಲು ಸಾಧ್ಯವಿಲ್ಲ. ಇದನ್ನು ಸಾಧ್ಯವಾಗಿಸಿಕೊಂಡವರು ಚಂದ್ರಶೇಖರ ಪೂಜಾರರವರು.

ಜಡಿಮಳೆಯ ಮಧ್ಯೆ ಪಲ್ಲಕ್ಕಿಯ ಮೆರವಣಿಗೆ ಹೊರಟಾಗ ಅದರೊಳಗೆ ಕುಳಿತುಕೊಳ್ಳಲು ಬಯಸದ ಚಂಪೂರವರು ಪಲ್ಲಕ್ಕಿಯ ಕೆಳಗಿನ ಕಲ್ಲುಮುಳ್ಳಿನ ಹಾದಿಯನ್ನು ನೆಚ್ಚಿಕೊಂಡಿರುವುದು ಅವರ ನೆಲಮೂಲ ಸಂಸ್ಕೃತಿಯ ಮೇಲಿನ ಅದಮ್ಯ ಪ್ರೀತಿಯನ್ನು ಅರಿಯುವಂತೆ ಮಾಡುತ್ತದೆ. ಇದು ಗಜಲ್ ಕಾವ್ಯ ಸಾಗಬೇಕಾದ ಪಥವೂ ಹೌದು. ಎಂದಾಗಲೇ ಪರಿಪಕ್ವ ಮನದ ಅನುಭವಗಳ ಹನಿಗಳು ಗಂಗೆಯಾಗಿ ಹರಿಯಲು ಸಾಧ್ಯವಿದೆ.

‍ಲೇಖಕರು Admin

6 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading