ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ‘ಅವನು ಅಮ್ಮನ ಮಗ!

ತಾಯಿಯ ಉಗುರಿನ ಸಾಮರ್ಥ್ಯವೂ ಹೆಂಡತಿಯ ಮುಖದಲ್ಲಿರಲಾರದು! -ಯಯಾತಿ

ಖಂಡೇಕರರ ‘ಯಯಾತಿ ಕಾದಂಬರಿಯಲ್ಲಿ ತರುಣ ಯಯಾತಿ ತಾಯಿಗೆ ಹೇಳುವ ಮಾತುಗಳು ಇವು. ದುರಂತವೆಂದರೆ ಯಯಾತಿ ಮುಂದೆ ಬದುಕಿನಲ್ಲಿ ಒಳ್ಳೆಯ ಮಗನೂ ಆಗುವುದಿಲ್ಲ, ಒಳ್ಳೆಯ ಪತಿಯೂ ಆಗುವುದಿಲ್ಲ… ಯಾಕೆಂದರೆ ಆತ ಒಳ್ಳೆಯ ಮನುಷ್ಯನೇ ಆಗುವುದಿಲ್ಲ.

ಈಚೆಗೆ ಬಂದ ಓದುಗರ ಪತ್ರವೊಂದು ನನ್ನಲ್ಲಿ ಯಯಾತಿಯ ಮಾತುಗಳನ್ನು ನೆನಪಿಗೆ ತಂದಿತು. ಆಗಾಗ್ಗೆ ಹೀಗೆ ಸಲಹೆ-ಸಾಂತ್ವನ-ಪರಿಹಾರ ಕೋರುವ ಪತ್ರಗಳು ಬರುತ್ತಿರುತ್ತವೆ. ಅದೊಂದು ಕೌಟುಂಬಿಕ ಸಮಸ್ಯೆಯನ್ನು ಕುರಿತ ಪತ್ರ. ಸುದೀರ್ಘ ಪತ್ರದ ವಿವರಗಳಿಗೆ ಹೋಗದೆ ಸಾರಾಂಶವನ್ನು ಹೇಳುತ್ತೇನೆ: ‘ನಾನೀಗ ನನ್ನ ಜೀವನದಲ್ಲಿ ಬಹು ದೊಡ್ಡ ಸಂದಿಗ್ಧದಲ್ಲಿ ಸಿಲುಕಿದ್ದೇನೆ. ನನಗೆ ಅಮ್ಮ ಅಂದರೆ ತುಂಬಾ ಇಷ್ಟ. ನನ್ನ ಪತ್ನಿಯನ್ನು ಕಂಡರೂ ಅಷ್ಟೇ ಇಷ್ಟ. ಹಲವು ವರ್ಷಗಳ ನಿರಂತರ ಸಂಘರ್ಷದ ನಂತರ ಇದೀಗ ನಾನು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಒದಗಿದೆ. ದಯವಿಟ್ಟು ನಿಮ್ಮ ಅಮೂಲ್ಯ ಸಲಹೆ ನೀಡಿ ಸಹಕರಿಸಿ…

ಇಂಥ ಪತ್ರಗಳು ಸದಾ ಉತ್ತರವನ್ನೇ ಬಯಸುತ್ತವೆ ಎಂದೇನಲ್ಲ. ಹೀಗೆ ಬರೆದವರಿಗೆ ಏನಾದರೊಂದು ತೀರ್ಮಾನ ತೆಗೆದುಕೊಳ್ಳುವ ಮುನ್ನ ತಮ್ಮ ಎದೆ ಭಾರ ಇಳಿಸಿಕೊಳ್ಳಬೇಕೆನಿಸುತ್ತದೆ. ಅಥವಾ ಯಾರಾದರೂ ಆಪ್ತರೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕೆನಿಸುತ್ತದೆ. ಈ ಓದುಗರು ಅದಕ್ಕಾಗಿ ನನ್ನನ್ನ ಆಯ್ಕೆ ಮಾಡಿಕೊಂಡಿದ್ದಾರೆ, ಅಷ್ಟೆ. ಈ ಪತ್ರ ಓದಿದಾಗ ಮತ್ತೊಂದು ಸಂಗತಿಯೂ ನೆನಪಿಗೆ ಬಂದಿತು: ಈಚೆಗೆ ಸರಳ ವಿವಾಹ ಕಾರ್ಯಕ್ರಮಕ್ಕೆ ನನ್ನನ್ನ ಕರೆಯಲು ಬಂದ ಹುಡುಗರು ಸರ್ ನೀವು ನಮ್ಮ ನಲ್ಮೆಯ ಲೇಖಕರು. ಸೂಕ್ಷ್ಮ ಮನಸ್ಸಿನವರು. ನಮ್ಮಂಥ ಯುವಕರಿಗೆ ನೀವೇ ದಾರಿ ದೀಪ. ಈ ಕಾರ್ಯಕ್ರಮದಲ್ಲಿ ನೀವು ದಾಂಪತ್ಯದ ಸಕ್ಸಸ್ ಕುರಿತು ನಾಲ್ಕು ಮಾತು ಹೇಳಬೇಕು ಎಂದರು. ನನ್ನ ಬಳಿ ಅಂಥ ಯಾವುದೇ ಸಕ್ಸನ್ ಫಾರ್ಮುಲಾ ಇಲ್ಲ ಎಂದು ಆ ಹುಡುಗರಿಗೆ ನಗುತ್ತಾ ಹೇಳಿದೆ.

ನಂತರ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲು ನಾನು ಆ ಮಾತುಗಳನ್ನು ಹೇಳಿದೆ: ಹೆಣ್ಣು ಮತ್ತು ಗಂಡು ಪರಸ್ಪರ ಆತ್ಮಗೌರವದಿಂದ ವರ್ತಿಸಬೇಕು, ಇಬ್ಬರೂ ಭಿನ್ನ ಮನೋಧರ್ಮದ ಸ್ವತಂತ್ರ ವ್ಯಕ್ತಿಗಳು ಎಂಬುದನ್ನು ಅರಿತು ನಡೆಯುವುದೇ ದಾಂಪತ್ಯ. ಈ ಬಗ್ಗೆ ನನ್ನ ಬಳಿ ಯಾವುದೇ ಸಿದ್ಧ ಸೂತ್ರಗಳಿಲ್ಲ. ಹಾಗಿದ್ದರೆ ಆಧುನಿಕ ವಿಜ್ಞಾನ ದಾಂಪತ್ಯದ ಯಶಸ್ಸಿಗೂ ಏನಾದರೂ ಸೂತ್ರಗಳನ್ನು ಕಂಡು ಹಿಡಿಯುತ್ತಿತ್ತು. ಅದನ್ನು ಮಾರ್ಕೆಟ್ ಮಾಡುವವರೂ ಹುಟ್ಟಿಕೊಳ್ಳುತ್ತಿದ್ದರು. ಅಲ್ಲದೆ ಒಬ್ಬ ಮನುಷ್ಯ ಮತ್ತೊಬ್ಬನಿಂದ ಹೇಗೆ ಸಂಪೂರ್ಣ ಭಿನ್ನನೋ ಅದೇ ರೀತಿ ದಂಪತಿಗಳು ಕೂಡಾ. ಈ ಜಗತ್ತಿನಲ್ಲಿ ಎಷ್ಟು ದಂಪತಿಗಳಿದ್ದಾರೋ ಅಷ್ಟು ಬಗೆಯ ದಾಂಪತ್ಯವಿರುತ್ತದೆ. ಆದ್ದರಿಂದ ಮೊದಲೇ ಹೇಳಿದಂತೆ ನನ್ನ ಬಳಿ ಯಾವುದೇ ರೆಡಿಮೇಡ್ ಸೂತ್ರಗಳಿಲ್ಲ. ಪ್ರತಿಯೊಬ್ಬ ಮಾನವನ ಬದುಕು ಆಗುತ್ತಾ, ಮಾಗುತ್ತಾ ತನ್ನ ಹೆಜ್ಜೆ ಜಾಡನ್ನ ತಾನೇ ಹುಡುಕಿಕೊಳ್ಳುತ್ತದೆ- ಎಂದು ನಂಬಿದವನು ನಾನು. ನಮ್ಮ ದಾಂಪತ್ಯ ಹಾಗಿರಬೇಕು, ಹೀಗಿರಬೇಕು ಎಂದು ಯೋಜನೆಗಳನ್ನು ಹಾಕಬೇಡಿ. ಸುಮ್ಮನೆ ಸರಳವಾಗಿ, ಸಾಮರಸ್ಯದಿಂದ ಬದುಕುತ್ತಾ ಹೋಗಿ…

ನನ್ನ ಮಾತುಗಳು ಅಲ್ಲಿದ್ದ ಸಭಿಕರಿಗೆ ರುಚಿಸಿದವೋ ಇಲ್ಲವೋ ತಿಳಿಯದು. ಆದರೆ ಅದು ನನ್ನ ಅಭಿಪ್ರಾಯ. ಈ ಪತ್ರ ಬರೆದವರಿಗೂ ನನ್ನದು ಇದೇ ಉತ್ತರ. ಆದರೆ ಈ ಪತ್ರ ನನ್ನಲ್ಲಿ ಮೂಡಿಸಿದ ದುಗುಡವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಹಲವಾರು ಗಂಡಸರು ಅಮ್ಮ ಹಾಗೂ ಜೆಂಡತಿಯನ್ನು ತಕ್ಕಡಿಯಲ್ಲಿ ಹಾಕಿ ತೂಗಿ ನೋಡಿ ಯಾರು ಹೆಚ್ಚು ಯಾರು ಕಮ್ಮಿ ಎಂದು ನಿರ್ಧರಿಸಲು ಮುಂದಾಗುವುದನ್ನು ಕಂಡಾಗ ನನಗೆ ನಗು ಬರುತ್ತದೆ. ಗಂಡಿನ ಬದುಕಿನಲ್ಲಿ ಅಮ್ಮನ ಪಾತ್ರವೇ ಬೇರೆ, ಪತ್ನಿಯ ಪಾತ್ರವೇ ಬೇರೆ. ಅಮ್ಮ ಎಂದರೆ ಅಕ್ಕರೆ, ಮಮತೆ, ಆರ್ದ್ರತೆ. ಪತ್ನಿ ಎಂದರೆ ಪ್ರೀತಿ, ಪ್ರೇಮ, ನಚ್ಚನೆಯ ಭಾವ. ನಿಜವಾದ ತಾಯಿ ತಾನು ಕೊಟ್ಟಿದ್ದಕ್ಕೆ ಪ್ರತಿಯಾಗಿ ಮಕ್ಕಳಿಂದ ಏನನ್ನೂ ಬಯಸುವುದಿಲ್ಲ. ದಿ ಆರ್ಟ್ ಅಫ್ ಲಿವಿಂಗ್ ಎಂಬ ಮನೋಜ್ಞ ಕೃತಿ ರಚಿಸಿದ ಎರಿಕ್ ಫ್ರಾಮ್ ‘ಮದರ‍್ಸ್ ಲವ್ ಇಸ್ ಅನ್‌ಕಂಡಿಷನಲ್. ಮದರ‍್ಸ್ ಲವ್ ಇಸ್ ಬ್ಲಿಸ್, ಇಸ್ ಪೀಸ್- ಎನ್ನುತ್ತಾದೆ. ಮಾತೆ ಮಗುವಿಗೆ ಹಾಲು ಜೇನು- ಎರಡನ್ನೂ ಉಣಿಸಬೇಕು ಆದರೆ ಬಹುಪಾಲು ತಾಯಿಯರು ಬರೀ ಹಾಲೂಡಿಸುತ್ತಾರಷ್ಟೆ. ಹಾಲು ಮಮತೆಯನ್ನು ಸೂಚಿಸಿದರೆ ಜೇನು ಬದುಕಿನ ಸಿಹಿಯನ್ನು ಸೂಚಿಸುತ್ತದೆ. (ಇದು ಬೈಬಲ್‌ನಿಂದ ಸ್ವೀಕರಿಸಿದ ಪ್ರತಿಮೆ). ಇಂಥ ಜೇನನ್ನು ನೀಡಲು ತಾಯಿ ಕೇವಲ ಒಳ್ಳೆಯ ಮಾತೆ ಆಗಿದ್ದರೆ ಸಾಲದು. ಒಬ್ಬ ಸಂತುಷ್ಟ, ಸಂತಸಮಯ ಹೆಣ್ಣಾಗಿರಬೇಕು. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಹೋಗದೆ ಭಾರತೀಯ ಗಂಡಸರ ಬಗ್ಗೆ ನಡೆದ ಹಲವು ವೈಜ್ಞಾನಿಕ, ಮನೋವೈಜ್ಞಾನಿಕ ಅಧ್ಯಯನಗಳನ್ನು ನೆನಪಿಸಿಕೊಳ್ಳುತ್ತೇನೆ. ವಿಶ್ವದೆಲ್ಲೆಡೆ ಹೆಣ್ಣು-ಗಂಡಿನ ಮನೋಧರ್ಮ ಸಾಮಾನ್ಯವಾಗಿ ಒಂದೇ ಆದುದಾದರೂ ಪರಿಸರ, ಸಂಸ್ಕೃತಿ, ವಿದ್ಯೆ, ವೈಜ್ಞಾನಿಕ ಆಲೋಚನೆಗಳು, ಬೆಳೆದು ಬಂದ ಬಗೆ ವಿವಿಧ ದೇಶಗಳ ಹೆಣ್ಣು ಗಂಡುಗಳಲ್ಲಿ ವಿವಿಧ ಬಗೆಯ ಸ್ಪಂದನವನ್ನು ಮೂಡಿಸಿರುವುದು ಸಹಜನೇ ಆಗಿದೆ. ಈಗಲೂ ಭಾರತೀಯ ಗಂಡಸರನ್ನು ‘ಅಮ್ಮನ ಮಕ್ಕಳು, ‘ಮಾಮ್ಸ್ ಚೈಲ್ಡ್ ಎಂದೇ ಕರೆಯಲಾಗುತ್ತದೆ. ಅಂದರೆ ಬೆಳೆದು ದೊಡ್ಡವನಾದ ಮೇಲೆ ಕೂಡಾ ಭಾರತೀಯ ಗಂಡು ಅಮ್ಮನೆಡೆಗೆ ಒಂದು ವಿಶಿಷ್ಟವಾದ ಮಮತೆಯನ್ನು ಉಳಿಸಿಕೊಂಡಿರುತ್ತಾನೆ. ಯಾಕೆಂದರೆ ಅವನು ‘ಅಮ್ಮನ ಮಗ.

ಈಗಲೂ ನಾನು ಹಲವು ಮದುವೆ ಮನೆಗಳಲ್ಲಿ ಕಂಡಿದ್ದೇನೆ. ತಾಯಿಯ ಎತ್ತರವನ್ನು ಮೀರಿ ಬೆಳೆದ ಗಂಡು ಮಕ್ಕಳು ತಾಯಿಯ ಸೆರಗು ಹಿಡಿದುಕೊಂಡೇ ಓಡಾಡುತ್ತಿರುತ್ತಾರೆ. ಅಂಥ ಮಕ್ಕಳನ್ನು ಎಲ್ಲರೂ ‘ಎಷ್ಟು ಒಳ್ಳೆಯ ಮಕ್ಕಳು. ಅಮ್ಮ ಹಾಕಿದ ಗೆರೆ ದಾಟುವುದಿಲ್ಲ ಮುಂತಾಗಿ ಬಣ್ಣಿಸುವುದನ್ನೂ, ಹಾಗೂ ‘ಅಂಥ ಮಕ್ಕಳನ್ನು ಪಡೆಯಲು ಆಕೆ ಪುಣ್ಯ ಮಾಡಿದ್ದಳು… ಮುಂತಾಗಿ ಕೊಂಡಾಡುವುದನ್ನು ಕೇಳಿದ್ದೇನೆ. ಇದೇ ಜನ ಹಲವು ವರ್ಷಗಳ ನಂತರ ಇಂಥ ಕೆಲವು ಗಂಡುಗಳ ಬಗ್ಗೆ ಅವನೊಬ್ಬ ಹೆಂಡಿರ ಗುಲಾಮ ಸದಾ ಹೆಂಡತಿಯ ಸೆರಗು (ದುಪ್ಪಟ್ಟಾ!) ಹಿಡಿದುಕೊಂಡು ಓಡಾಡುತ್ತಾನೆ ಎಂದು ಹಂಗಿಸುವುದನ್ನೂ ಕೇಳಿದ್ದೇನೆ. ಪಾಪ ಅವನದೇನು ತಪ್ಪು. ಯಾವುದೋ ಒಂದು ಸೆರಗು ಎಂದು ತಮಾಷೆ ಮಾಡಿದ್ದೇನೆ.

ಇದಕ್ಕೆ ಮುಖ್ಯ ಕಾರಣ ಇಂಥ ಮಕ್ಕಳು ಬೌದ್ಧಿಕವಾಗಿ ಬೆಳೆದು ದೊಡ್ಡ ದೊಡ್ಡ ಉದ್ಯೋಗಗಳಿಗೆ ಹೋದರೂ ಮಾನಸಿಕವಾಗಿ ಬೆಳೆಯದೇ ಇರುವುದು. ಇಂಥವರಿಗೆ ಭಾವನಾತ್ಮಕವಾಗಿ ಸದಾ ಒಂದು ಸೆರಗು ಬೇಕು. ಗಂಡೆಂಬ ಹಮ್ಮಿದ್ದರೂ ಗಟ್ಟಿಯಾದ ವ್ಯಕ್ತಿತ್ವ ಇಲ್ಲದೇ ಹೋಗುವುದೇ ಇದಕ್ಕೆ ಕಾರಣ. ಇಂಥವರನ್ನು ಹೆಂಡತಿ ಅಥವಾ ತಾಯಿ ತಮ್ಮ ಇಷ್ಟಾರ್ಥಗಳಿಗೆ ಬಳಸಿಕೊಳ್ಳುವುದನ್ನು ನಾವು ಕಂಡಿದ್ದೇವೆ.

ಇದಕ್ಕೆ ಪೂರಕವಾಗಿ ಘಟನೆಯೊಂದು ನೆನಪಿಗೆ ಬರುತ್ತಿದೆ. ಕೆಲವು ವರ್ಷಗಳ ಹಿಂದೆ ನಾನು ವಿಜಯನಗರದ ಅತ್ತಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದೆ. ಅದರ ಮಾಲೀಕರು ತೆಲುಗರು. ಗಂಡ ಹೆಂಡತಿ ಇಬ್ಬರೂ ಅಧ್ಯಾಪಕರು. ಒಬ್ಬನೇ ಮಗನನ್ನ ಡಾಕ್ಟರ್ ಮಾಡಿಸಿದ್ದರು. ಆತ ನನಗಿಂತ ತುಸು ಕಿರಿಯನಾದ ಯುವಕ. ಯಾವುದೋ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಊರಿಗೆ ಹೋಗಿ ಭಾರೀ ವರದಕ್ಷಿಣೆ ಪಡೆದು ಮಗನಿಗೆ ಮದುವೆ ಮಾಡಿಕೊಂಡು ಬಂದರು. ಸೊಸೆಯೂ ಪದವೀಧರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಒಂದು ಮುದ್ದಾದ ಮಗುವೂ ಆಯ್ತು. ನಂತರ ಏನು ಕಾರಣವೋ, ಅತ್ತೆ ಸೊಸೆಯರಲ್ಲಿ ಮನಸ್ತಾಪ ಆರಂಭವಾಯ್ತು. ದಿನನಿತ್ಯ ಜಗಳ. ಅತ್ತೆಯ ಬೈಗುಳ, ಕಿರುಚಾಟ ನಮ್ಮನ್ನೂ ತಲುಪುತ್ತಿತ್ತು. ಇಂಥ ತಣ್ಣನೆಯ ಕ್ರೌರ್ಯ ಇದುವರೆಗೆ ಎಲ್ಲಿ ಅಡಗಿತ್ತು ಎಂದು ನಾನು ನಡುಗಿಹೋದೆ. ಕೆಲವು ದಿನಗಳ ನಂತರ ಡಾಕ್ಟರನೂ ತನ್ನ ಪತ್ನಿಯ ಮೇಲೆ ಕೈ ಮಾಡಲಾರಂಭಿಸಿದ. ಆ ಹುಡುಗಿ ಅದೇನು ಸಹಿಸುತ್ತಿದ್ದಳೊ ಅವಳ ಧ್ವನಿಯೇ ಬರುತ್ತಿರಲಿಲ್ಲ.

ಆದರೂ ಆಕೆ ಎಷ್ಟು ದಿನ ಸಹಿಸಿಯಾಳು? ‘ನಾನು ಬದುಕಿರುವವರೆಗೆ ನಿಮ್ಮ ಮನೆಯ ಹೊಸ್ತಿಲು ತುಳಿಯುವುದಿಲ್ಲ. ನಿಮ್ಮ ಮನೆ ಉದ್ಧಾರವಾಗುವುದಿಲ್ಲ ಎಂದು ಹಿಡಿಶಾಪ ಹಾಕಿ ಮಗುವನ್ನು ಕರೆದುಕೊಂಡು ಹೊರಟೆಹೋದಳು. ‘ಎಲ್ಲಿ ಹೋಗುತ್ತಾಳೆ, ಬಂದೇ ಬರುತ್ತಾಳೆ ಎಂದು ಇವರು ಕಾಯುತ್ತಾ ಕುಳಿತರು. ಎಷ್ಟೆಂದರೂ ಹೆಣ್ಣು ಹೆತ್ತವರು ಬಂದು ಬೇಡಿಕೊಳ್ಳುತ್ತಾರೆ ಎಂಬ ಹಮ್ಮಿನಿಂದ ಕಾದವರಿಗೆ ನಿರಾಶೆಯಾಯ್ತು. ಪರವಾಗಿಲ್ಲ, ಆ ಹುಡುಗಿ ಬುದ್ಧಿ ಕಲಿಸಿದಳು ಅಂದುಕೊಳ್ಳುತ್ತಿರುವಾಗಲೇ ಒಂದು ದಿನ ಮಾಲೀಕರ ಹೆಂಡತಿ ನನ್ನನ್ನು ಕರೆದು ಹೇಳಿದರು: “ನೀವಾದರೂ ಇವನಿಗೆ ಬುದ್ಧಿ ಹೇಳಿ. ಒಳ್ಳೊಳ್ಳೆ ಸಂಬಂಧಗಳು ಬಂದಿವೆ. ಅವಳ ಮುಖಕ್ಕೆ ನೀವಾಳಿಸಬೇಕು, ಅಂಥ ಹುಡುಗಿಯರು ಬಂದಿದ್ದಾರೆ. ಆದರೆ ಈ ಅಂಜುಬುರುಕ ಹೆದರಿಕೊಳ್ಳುತ್ತಿದ್ದಾನೆ…

ನನಗೆಲ್ಲ ಅರ್ಥವಾಯ್ತು. ನಿಜಕ್ಕೂ ಶಾಕ್ ಆಯ್ತು. “ನೀವು ನಿಜಕ್ಕೂ ಈತನ ತಾಯಿಯಾಗಿದ್ದರೆ ಸೊಸೆಯನ್ನು ಕರೆಸಿಕೊಂಡು ಮಗ ಸೊಸೆಯನ್ನು ಬಾಳಿಸಿ. ಇಂಥ ಅನ್ಯಾಯದ ಮಾತನ್ನು ಕನಸಿನಲ್ಲೂ ಆಡಬೇಡಿ ಎಂದು ನಿಷ್ಠುರವಾಗಿ ಹೇಳಿ ಎದ್ದು ಬಂದೆ. ಇದಾದ ಒಂದೆರಡು ದಿನಕ್ಕೆ ಆ ವೈದ್ಯ ಭೂಪತಿ ನನ್ನ ಬಳಿ ಬಂದು ಹೇಳಲಾರಂಭಿಸಿದ: ಸಾರ್ ನಾನು ಹಂಡ್ರೆಡ್ ಪರ್ಸೆಂಟ್ ಅಮ್ಮನ ಮಗ. ಮಾತೃವಾಕ್ಯ ಪರಿಪಾಲಕ. ಅಮ್ಮ ಹಾಕಿದ ಗೆರೆ ದಾಟುವುದಿಲ್ಲ… ಮುಂತಾಗಿ ತನ್ನ ಮಾತೃಪ್ರೇಮದ ಬಗ್ಗೆ ತೆಲುಗು ಪರಿಭಾಷೆಯಲ್ಲಿ ಭಾವೋದ್ವೇಗದಿಂದ ಬಣ್ಣಿಸಿದ. ಈ ಭಾವನೆಯ ಮಹಾಪೂರಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ನಾನು ತಮಾಷೆಯಾಗಿ ಹೇಳಿದೆ: ನೀನೊಬ್ಬ ಡಾಕ್ಟರ್, ನಿನಗೂ ಗೊತ್ತು ಜಗತ್ತಿನಲ್ಲಿ ಎಲ್ಲರೂ ಅಮ್ಮನ ಮಕ್ಕಳೇ. ಅಪ್ಪನ ಹೊಟ್ಟೆಯಲ್ಲಿ ಯಾರೂ ಹುಟ್ಟುವುದಿಲ್ಲ! ಆತ ಮುಂದುವರೆಸಿದ: “ಸಾರ್ ಏನು ಮಾಡಲಿ. ಆಕೆ ನಿತ್ಯ ನನಗೆ ಫೋನ್ ಮಾಡುತ್ತಾಳೆ. ನನ್ನ ಮಗು ಕೂಡಾ ಫೋನಿನಲ್ಲಿ ಮುದ್ದುಗರೆಯುತ್ತದೆ. ಇಷ್ಟಾಗಿಯೂ ನಾನು ಅವಳಿಗೆ ಡೈವೋರ್ಸ್ ನೋಟಿಸ್ ಕಳಿಸಿದ್ದೇನೆ. ಆಕೆಯ ಗಂಡನಾಗುವುದಕ್ಕಿಂತ ಅಮ್ಮನ ಮಗನಾಗಿರುವುದೇ ನನಗೆ ಹೆಮ್ಮೆ… ಆತನ ಮಾತನ್ನು ತುಂಡರಿಸಿ ನಾನು ಕಟುವಾಗಿಯೇ ಹೇಳಿದೆ: “ನೋಡು ಎದೆಹಾಲು ಕುಡಿವ ಮಗುವಿನಂತೆ ಮಾತಾಡಬೇಡ. ಗಂಡಿನ ಬದುಕಿನಲ್ಲಿ ತಾಯಿಯ ಪಾತ್ರವೇ ಬೇರೆ, ಹೆಂಡತಿಯ ಪಾತ್ರವೇ ಬೇರೆ. ಗಂಡಿನಿಂದ ಇಬ್ಬರೂ ಬಯಸುವುದು ಭಿನ್ನವಾದುದನ್ನೇ. ಇಷ್ಟಾಗಿಯೂ ನೀನು ನಿಜಕ್ಕೂ ಒಳ್ಳೆಯ ಮಗನಾಗಿದ್ದರೆ, ಒಳ್ಳೆಯ ಗಂಡನೂ ಆಗುತ್ತಿದ್ದೆ. ನೀನು ಒಳ್ಳೆಯ ಮಗನಾಗಿ ಬೆಳೆದಿಲ್ಲ ಅಥವಾ ನಿನ್ನ ಬೆಳವಣಿಗೆ ಅಪೂರ್ಣ. ಯಾವುದೋ ಹಂತದಲ್ಲಿ ನಿನ್ನ ಬೆಳವಣಿಗೆ ನಿಂತುಹೋಗಿದೆ. ನೀನು ದೊಡ್ಡ ವಿದ್ಯಾವಂತನಿರಬಹುದು. ಆದರೆ ನಿನಗೆ ಸ್ವತಂತ್ರ ವ್ಯಕ್ತಿತ್ವವಿಲ್ಲ. ಎಮೋಷನಲ್ ಆಗಿ ನೀನು ಗಟ್ಟಿಯಾಗಿಲ್ಲ. ನಿನ್ನಂಥ ದುರ್ಬಲ ವ್ಯಕ್ತಿಯಿಂದ ಕಡೆಗೆ ನಿನ್ನ ಅಮ್ಮನಿಗೂ ಒಳ್ಳೆಯದಾಗುವುದಿಲ್ಲ…”

ಆತ ಮರು ಮಾತಾಡದೆ ಎದ್ದು ಹೋದ. ಅಂದಿನಿಂದ ಅಮ್ಮ-ಮಗ ನನ್ನನ್ನು ವೈರಿಯಂತೆ ಕಾಣಲಾರಂಭಿಸಿದರು. ನನ್ನ ಮಾತು ಕಹಿ ಅನ್ನಿಸಬಹುದು. ಈಗಲೂ ನಾನು ಎಷ್ಟೋ ಯುವಕರನ್ನು ನೋಡಿದ್ದೇನೆ. ಅವರು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ‘ನಾನಂತೂ ನಮ್ಮ ಅಮ್ಮ ಹೇಳಿದ ಹಾಗೆ ಅನ್ನುತ್ತಾರೆ ಅಥವಾ ‘ನನ್ನ ಹೆಂಡತಿ ಹೇಳಿದ ಹಾಗೆ ಎನ್ನುತ್ತಾರೆ. ಇವರಲ್ಲಿ ಒಂದು ರೀತಿಯಲ್ಲಿ ಎಲ್ಲ ಬಗೆಯ ನೈತಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಜಾಣತನವೂ ಬಂದುಬಿಡುತ್ತದೆ.

ಇದೆಲ್ಲವನ್ನು ಹೇಳುತ್ತಿರುವಾಗಲೂ ನನಗೆ ಚೆನ್ನಾಗಿ ತಿಳಿದಿದೆ: ಇಂದಿನ ದಿನಮಾನದಲ್ಲಿ ತಾಯಿಯೇ ಹೆಚ್ಚು ಸಮಸ್ಯೆಗೆ ತೊಂದರೆಗೆ ಸಿಲುಕುವವಳು ಎಂದು. ತಾಯಂದಿರು ವಯಸ್ಸಾದ ಹಾಗೆ ದಿಟ್ಟತನವನ್ನೂ, ಸ್ವತಂತ್ರ ಹಾಗೂ ಧೀಮಂತ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬೇಕು. ಅವನು ನನ್ನ ಮಗ, ಆಕೆಯ ಪತಿ ಅಂದುಕೊಂಡಾಗ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ.

ಇದೆಲ್ಲವನ್ನೂ ಕೊಂಚ ಅಳುಕಿನಿಂದಲೇ ಬರೆಯುತ್ತಿದ್ದೇನೆ. ಯಾಕೆಂದರೆ ಬಲ್ಲವರು ನನ್ನನ್ನು ಕೂಡಾ ‘ಅಮ್ಮನ ಮಗ ಎಂದೇ ಕರೆಯುತ್ತಾರೆ. ನಿಜವಿರಬಹುದು. ಆದರೆ ನನ್ನ ವ್ಯಕ್ತಿತ್ವ ರೂಢಿಸುವಲ್ಲಿ ನನ್ನ ತಂದೆಯವರ ಪಾತ್ರ ಕಡಿಮೆ ಏನಲ್ಲ. ಇಷ್ಟಾಗಿಯೂ ಅಮ್ಮನ ಮಗ ಎಂದರೆ ಅದು ಹೆಮ್ಮೆಯ ಸಂಗತಿಯೇ. ನನ್ನ ಅಮ್ಮ ನನ್ನಿಂದ ಏನನ್ನೂ ಬಯಸಿದವಳಲ್ಲ. ಆಕೆಯದು ಅನ್ ಕಂಡೀಷನಲ್ ಲವ್. ಆಕೆಯದು ದಿಟ್ಟ ಹಾಗೂ ಅವಲಂಬನೆಯನ್ನು ಒಲ್ಲದ ಸ್ವತಂತ್ರ ಮನೋಭಾವ (ಅದೃಷ್ಟವಶಾತ್ ಆಕೆಯ ಸೊಸೆಯೂ ಅಂಥವಳೇ!) ಇದೇ ನನ್ನ ವ್ಯಕ್ತಿತ್ವವನ್ನೂ ರೂಪಿಸಿದೆ…

ಪತ್ರ ಬರೆದ ನನ್ನ ಓದುಗ ಮಿತ್ರರಿಗೆ ಬಹುಶಃ ಈ ಬರಹದಿಂದ ಚಿಕ್ಕಾಸಿನ ಪ್ರಯೋಜನವೂ ಆಗಲಾರದು. ಇದರಲ್ಲಿ ಯಾವುದೇ ಸೂತ್ರರೂಪವಾದ ಪರಿಹಾರೋಪಾಯವೂ ಇಲ್ಲ! ಅದಕ್ಕಾಗಿ ಕ್ಷಮೆ ಇರಲಿ.

‍ಲೇಖಕರು G

18 June, 2011

5 Comments

  1. raghavendra

    amma athava hendatiya seragu hididu odaduva gandasa kannu teresuva uolleya lekhana. haagehe ammanagali, hendatiyagali tamma palina `priti’yannu matra maga/gandaninda nirikshisabeku.

  2. veda

    endinante vicharapoornavada lekhana sir

  3. Keshav

    ಈ ಲೇಖನ ಓದಿ, ಹಿಂದೆ ನಾನು ಬರೆದಿದ್ದ ’ನೀಲು’ ನೆನಪಾಯೊತು,

    ’ನನ್ನ ಮಗ ಮುಂದೊಂದು ದಿನ

    ಇನ್ನೊಂದು ಹೆಣ್ಣಿನ ಬಾಳು ಸೇರಿದರೂ

    ನನ್ನ ಮಗನಾಗಿಯೇ ಉಳಿಯಬೇಕು,

    ನನ್ನ ಹುಡುಗ ಮಾತ್ರ

    ತನ್ನ ತಾಯಿ ಮಾತು ಕೇಳದ

    ಬರೀ ನನ್ನವನಾಗಿರಬೇಕು

    ಎನ್ನುವುದರಲ್ಲೇ ಹೆಣ್ತನವಿದೆಯೇ?’

  4. tarun

    hi all,

    can some-kind-one provide me CHANDRASHEKHARA ALURU’s contact details? like phone no. or email address? desperately want to read a book authored by him which i’m finding neither in the real, nor in the virtual world.. i’m left with no other option but to contact the writer himself.

    would be of great help! thanks in advance!

    -tarun
    ph: 9880150567
    email: tarun.6380@gmail.com

  5. Anasuya M.R.

    Sir, what you have told about your mother and wife shows their personalities and your personality also. It is a meaningful and memorable article. It is alesson for the mothers who have possesive nature.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading