ಚಂದ್ರಶೇಖರ ಮಾಡಲಗೇರಿ ಎರಡು ಕೃತಿಗಳೊಂದಿಗೆ ಓದುಗರ ಮುಂದೆ ನಿಂತಿದ್ದಾರೆ.
ಇತ್ತೀಚಿಗೆ ತಾನೇ ‘ಸ್ಟಾಗ್ ಪಬ್ಲಿಕೇಷನ್’ ಆರಂಭಿಸಿದ ಚಂದ್ರಶೇಖರ್ ರಾಜಕುಮಾರ ಮಡಿವಾಳರ ಅವರ ‘ಆಡಿಸಿ ನೋಡು’ ಕೃತಿಯನ್ನು ಹೊರತಂದಿದ್ದರು.
‘ಚಾಂದನಿ’ಗೆ ಸೋಮುರೆಡ್ಡಿ ಬರೆದ ಬೆನ್ನುಡಿ ಇಲ್ಲಿದೆ
ಮನುಷ್ಯ ತನ್ನ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ ಹೊಸ ಅನುಭವಗಳಿಗೆ ಪ್ರತಿಕ್ಷಣವೂ ಎದರುಗೊಳ್ಳುತ್ತಲೇ ಇರುತ್ತಾನೆ. ಪ್ರತ್ಯಕ್ಷ-ಪರೋಕ್ಷ, ಮಾನಸಿಕ, ಭೌತಿಕ, ಲೌಕಿಕ, ಆಧ್ಯಾತ್ಮಿಕ ಹೀಗೆ ಅನುಭವಗಳ ಸ್ವರೂಪ ಅಪಾರ ಮತ್ತು ಅಗಣಿತವಾಗಿರುತ್ತವೆ. ಇಂತಹ ಅನುಭವಗಳನ್ನು ಯಥಾವತ್ತಾಗಿ ನಿರೂಪಿಸಿದರೆ ವರದಿಯಾಗುತ್ತದೆ.
ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಶಾಸ್ತ್ರವಾಗುತ್ತದೆ. ಈ ಪ್ರಾಥಮಿಕ ಪ್ರಜ್ಞೆಯನ್ನು ಅರಿತು ಒಂದು ರೀತಿಯ ಸಿದ್ಧ ಮಾದರಿಯಲ್ಲಿ ಎಲ್ಲ ಭಾವಗಳನ್ನು ಅಂತರ್ಗತಗೊಳಿಸಿ, ಅಲಂಕಾರ, ರೂಪಕ, ಪ್ರತಿಮೆಗಳನ್ನು ಸಂಕಲಿಸಿ ಅನುಭವಗಳನ್ನು ಪದಗಳಿಂದ ಬಣ್ಣಿಸಿದಾಗ ಅದೊಂದು ಕಾವ್ಯವಾಗುತ್ತದೆ.
ಹೀಗೆ ಕವಿಯ ಭಾವ-ಅನುಭಾವಗಳು ಕಾವ್ಯವಾಗಿ ರೂಪಗೊಳ್ಳಲು ಬೇಕಾದ ತೀಕ್ಷ್ಣ ಸಂವೇದನೆ, ಎಲ್ಲ ಬಗೆಯ ವಸ್ತು-ವಿಷಯದ ಸೂಕ್ಷ್ಮತೆ, ಕಾವ್ಯ ಕಟ್ಟುವ ತಂತ್ರ ಮತ್ತು ಬೌದ್ಧಿಕ ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಚಂದ್ರಶೇಖರ ಮಾಡಲಗೇರಿ ಅವರು ತಮ್ಮ ಕಾವ್ಯ ಸಾಮರ್ಥ್ಯದ ನೆರವಿನಿಂದ ಇಲ್ಲಿನ ಹೊಸ ಬಗೆಯ ಪದ್ಯಗಳನ್ನು ನೇಯುವದರ ಮೂಲಕ ಕನ್ನಡ ಪದ್ಯ ಪ್ರಕಾರಗಳ ವಿಕಸನದತ್ತ ಹೆಜ್ಜೆ ಹಾಕಿದ್ದಾರೆ.

ಇಲ್ಲಿನ ಪದ್ಯಗಳು ಗಜ಼ಲ್, ಶಾಹರಿ, ಚುಟುಕು, ವಚನ, ತತ್ವಪದ, ಭಜನೆ, ಕೀರ್ತನೆ ಎಂಬಿತ್ಯಾದಿ ಪ್ರಕಾರಗಳಿಗಿಂತ ತುಸು ಭಿನ್ನವಾಗಿಯೇ ಓದಿಸಿಕೊಳ್ಳುತ್ತವೆ. ಓದು ಆಸ್ವಾದಿಸುವ ಓಘಕ್ಕೆ ಕಿಂಚಿತ್ತೂ ಅಡೆತಡೆಯಾಗದಂತೆ ಮಾಡಿದ ಪದಬಳಕೆ ಗಮನ ಸೆಳೆಯುತ್ತದೆ.
ಗೆಳತಿಯ ಅನುಪಸ್ಥಿತಿ ಸೃಷ್ಟಿಸುವ ತಲ್ಲಣ, ನೋವು, ಹತಾಶೆ, ಬೇಸರ ಮತ್ತು ಪ್ರೇಮ, ಕಾಮ, ವಿರಹದ ಅಮಲಿನಲಿ ಆಕೆಯನ್ನು ಮೋಹಿಸಿದ, ಕನಸಿದ, ಸಂಭ್ರಮಿಸಿದ ಆಕೆಯ ಬಗೆಗಿನ ಈ ಎಲ್ಲವುಗಳನ್ನೂ- ಸೂಸುವ ಬೆಳಕು, ಬೀಸುವ ಗಾಳಿ, ಹರಿಯುವ ನೀರು, ಖಾಲಿ ಭಾನು, ತಣ್ಣನೆಯ ಚಂದಿರ, ಸುಡುವ ಸೂರ್ಯನಿಗೆ ಹೋಲಿಸುತ್ತಾ ಪ್ರೇಯಸಿಯನ್ನು ಹೊಗಳುವುದು-ತೆಗಳುವುದು ಇಲ್ಲಿನ ಪದ್ಯಗಳ ಮೂಲ ದ್ರವ್ಯವಾಗಿರುವದರಿಂದ ಈ ಪದ್ಯಗಳನ್ನು ಪ್ರೇಮಮಯ ಪದ್ಯಗಳೆಂದು ಕರೆಯಬಹುದು.
ಪ್ರೀತಿ ಎಂಬ ಮೋಹಕ್ಕೆ ಬಲಿಯಾಗದೇ ಇರದವರ ಈ ಪ್ರಪಂಚದಲ್ಲಿ ಸೋತ ಜೀವಗಳಿಗೆ ಹಿಡಿಯಷ್ಟು ಸಾಂತ್ವನ, ಗೆದ್ದ ಹಿರಿಮೆಗಳ ಮೊಗದಲ್ಲಿ ಸಣ್ಣ ನಗುವೊಂದನ್ನು ಅಂಟಿಸುವ ಹುನ್ನಾರ ಈ ಪದ್ಯಗಳದ್ದಾಗಿದೆ.
–ಸೋಮು ರೆಡ್ಡಿ







0 Comments