ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ದೊಡ್ಡವರ ಲೋಕ ಮತ್ತು ಪುಟಾಣಿಯ ಪ್ರಾಮಿಸ್

ಒಂದು ದಿನ ಇಳಿ ಸಂಜೆಯಲ್ಲಿ ಪೀಟರ್ಸ್ ಬರ್ಗ್ ನ ಶ್ರೀಮಂತರಲ್ಲಿ ಒಬ್ಬನಾದ ನಿಕೊಲಾಯ್ ಇಲಿಸಿಚ್ ಓಲ್ಗಾಳ ಮನೆಗೆ ಬಂದಿದ್ದ. ಅವನ ಪ್ರಕಾರ ಅವರಿಬ್ಬರ ಪ್ರೇಮದ ಮಧುರ ದಿನಗಳು ಮುಗಿದು ಹೋಗಿದ್ದವು. ಈಗಾಗಲೇ ಮುಗಿದು ಹೋಗಿರುವ ಪ್ರೇಮ ಕಾದಂಬರಿಯನ್ನ ಸುಖಾ ಸುಮ್ಮನೆ ಎಳೆದುಕೊಂಡು ಹೋಗುತ್ತಿರುವಂತೆ ಅವನಿಗೆ ಭಾಸವಾಗುತ್ತಿತ್ತು. ಒಂದು ಕಾಲದಲ್ಲಿ ಓಲ್ಗಾಳನ್ನ ನೋಡಲು ಹೊರಟರೆ ನವಿಲಾಗುತ್ತಿದ್ದ ಹೃದಯಕ್ಕೆ ಈಗೇನೂ ಅನ್ನಿಸುತ್ತಿರಲಿಲ್ಲ. ಅವಳೊಂದಿಗೆ ಮಾತಾಡಲು, ಹಂಚಿಕೊಳ್ಳಲು ಏನೂ ಉಳಿದಿಲ್ಲ ಎಂಬ ನಿರಾಶಾಭಾವ ಅವನನ್ನ ಮುತ್ತಿತ್ತು.

ಓಲ್ಗಾ ಮನೆಯಲ್ಲಿ ಇರಲಿಲ್ಲ. ಅವಳ ಆರೇಳು ವರ್ಷದ ಮಗ ಬಂದು ಅವನಿಗೆ ಗುಡ್ ಈವನಿಂಗ್ ಹೇಳಿ “ಅಮ್ಮ ಸೋನಿಯಾಳೊಂದಿಗೆ ಅಂಗಡಿಗೆ ಹೋಗಿದ್ದಾರೆ, ಇನ್ನೇನು ಬಂದು ಬಿಡುತ್ತಾರೆ, ಕೂತ್ಕೊಳ್ಳಿ” ಎಂದು ತಿಳಿಸಿ ಅದೇ ಹಾಲ್ನಲ್ಲಿದ್ದ ಸೋಫಾದ ಮೇಲೆ ಕುಳಿತು ತನ್ನ ಪಾಡಿಗೆ ತಾನು ಹಿಂದಿನ ದಿನ ಸರ್ಕಸ್ನಲ್ಲಿ ನೋಡಿದ ಟ್ರಿಕ್ ಮಾಡಲು ಯತ್ನಿಸುತ್ತಿದ್ದ. ಸುಮ್ಮನೆ ಕುಳಿತಿರುವ ಬದಲು ಈ ಹುಡುಗನನ್ನಾದರೂ ಮಾತಾಡಿಸಬಹುದಲ್ಲಾ, ಒಂದು ದಿನವೂ ಓಲ್ಗಾಳ ಮಕ್ಕಳನ್ನ ಸರಿಯಾಗಿ ಗಮನಿಸಿಯೇ ಇಲ್ಲ ಎಂದುಕೊಂಡು ಅಲ್ಯೋಷಾನನ್ನ ಕೂಗಿದ:

“ಏಯ್ ಪುಟ್ಟಾ ಬಾ ಇಲ್ಲಿ. ನಿನ್ನನ್ನ ಸರಿಯಾಗಿ ನೋಡೇ ಇರಲಿಲ್ಲ. ಹೇಗಿದೀಯಾ ನೋಡೋಣ ಬಾ” ಸೋಫಾದಿಂದ ಜಂಪ್ ಹೊಡೆದು ಬಾಲಕ ಅಲ್ಯೋಷಾ ಮಿಂಚಿನಂತೆ ನಿಕೊಲಾಯ್ ಬಳಿ ಬಂದು ನಿಂತ.

“ಗುಡ್ ಹೇಗಿದ್ದೀಯಾ ಮರಿ, ಹೇಗಿದೆ ಜೀವನ” ಏನು ಕೇಳಬೇಕೆಂಬುದು ತೋಚದೆ ಪೆದ್ದುಪೆದ್ದಾಗಿ ನಿಕೊಲಾಯ್ ಮಾತು ಆರಂಭಿಸಿದ. “ಅದೇನೋ ಗೊತ್ತಿಲ್ಲ ಮೊದಲಿಗಿಂತ ಈಗ ಚೆನ್ನಾಗಿದೆ.”

“ಹೇಗೆ?”

“ಇಷ್ಟು ದಿನ ನನಗೆ, ಸೋನಿಯಾಗೆ ಪಿಯಾನೊ ಮತ್ತು ಸ್ವಲ್ಪ ಓದುವುದನ್ನ ಹೇಳಿಕೊಡುತ್ತಿದ್ದರು. ಈಗ ಫ್ರೆಂಚ್ ಪದ್ಯಗಳನ್ನ ಕಂಠಪಾಠ ಮಾಡಿಕೊಂಡು ಬರಲು ಕೊಡುತ್ತಿದ್ದಾರೆ… ಹೇರ್ ಕಟ್ ಗೆ ಹೋಗಿದ್ದಿಯಾ, ಹೋಗಿದ್ದೆ ಅನ್ಸುತ್ತೆ ಅಲ್ವಾ…” “ಹುಂ ಮರಿ, ಮೂರ್ನಾಲ್ಕು ದಿನದ ಹಿಂದೆ”

“ನೋಡಿದ್ಯಾ, ನಾನು ಹೇಗೆ ಹೇಳಿದೆ. ಗಡ್ಡ ಎಲ್ಲ ಶಾರ್ಟ್ ಆಗಿದೆ. ಇದನ್ನ ಮುಟ್ಟಲಾ, ನೋವಾಗುತ್ತಾ” “ಏನಿಲ್ಲ.”

ಅಲ್ಯೋಷಾ ಆತನ ಗಡ್ಡವನ್ನ ಮೃದುವಾಗಿ ಎಳೆಯುತ್ತಾ ಕೇಳಿದ : “ಒಂದು ಕೂದಲನ್ನ ಎಳೆದರೆ ನೋವುತ್ತೆ. ಹೀಗೆ ಗೊಂಚಲನ್ನ ಎಳೆದರೆ ನೋವಲ್ಲ, ತಮಾಷೆ ಅಲ್ವಾ. ನೀನು ಸಿದೆಬುರ್ನ್ಸ್ ಬಿಡು ಚೆನ್ನಾಗಿ ಕಾಣುತ್ತೆ…” ಎಂದು ಮುದ್ದಾಗಿ ಮಾತಾಡುತ್ತಾ ಅವನ ವಾಚ್ ನೊಂದಿಗೆ ಆಟ ಆಡಲಾರಂಭಿಸಿದ. ನಾನು ಇನ್ನೂ ಸ್ವಲ್ಪ

ದೊಡ್ಡವನಾದ ಮೇಲೆ ಅಮ್ಮ ನನಗೆ ವಾಚ್ ತೆಗೊಡ್ತಾಳೆ ಗೊತ್ತಾ. ಈ ಥರ ಚೈನ್ ಇರೋ ವಾಚ್ ತೆಗೊಡೊಕ್ಕೆ ಕೇಳ್ತೀನಿ. ಡ್ಯಾಡಿ ಹತ್ತಿರಾನೂ ಇದೇ ಥರ ವಾಚ್ ಇದೆ ಗೊತ್ತಾ, ನಿನ್ನದು ಲಿಂಕ್ ಚೈನು, ಅಪ್ಪನದು ರಿಬ್ಬನ್ ಥರ ಇದೆ. ಡ್ಯಾಡಿಯ ಲಾಕೆಟ್ನಲ್ಲಿ ಅಮ್ಮನ ಫೊಟೋ ಇದೆ ಗೊತ್ತಾ…”

“ಅರೆ ನಿನಗೆ ಹೇಗೆ ಗೊತ್ತು? ನೀನು ನಿಮ್ಮ ಡ್ಯಾಡೀನ ನೋಡೋಕ್ಕೆ ಹೋಗಿದ್ಯಾ” “ನಾನಾ ? ಅಯ್ಯೋ ಇಲ್ಲಪ್ಪಾ…”

ಅಲ್ಯೋಷಾ ನಾಚಿಕೆಯಿಂದ ಕೆಂಪಾದ. ಸುಳ್ಳು ಹೇಳುತ್ತಿರುವಾಗ ಸಿಕ್ಕಿ ಹಾಕಿಕೊಂಡೆ ಎಂಬಂಥ ಮುಜುಗುರ ಬೇರೆ. ಇದರಿಂದ ಪಾರಾಗಲೆಂಬಂತೆ ಆತನ ವಾಚ್ನ ಲಾಕೆಟ್ಟನ್ನ ಉಗುರಿನಿಂದ ಕೆರೆಯಲಾರಂಭಿಸಿದ. ನಿಕೊಲಾಯ್ ಅಲ್ಯೋಷಾ ನನ್ನ ಕೊಂಚ ಕಾಠಿಣ್ಯದಿಂದ ನೋಡುತ್ತಾ

“ನೀನು ನಿಮ್ಮ ಅಪ್ಪನ್ನ ನೋಡ್ತಿರ್ತೀಯಾ” “ಉಹುಂ… ಇಲ್ಲ…”

“ಧೈರ್ಯವಾಗಿ ಹೇಳು, ಪ್ರಾಮಿಸ್ ಹೇಳು… ನೀನು ಮಾತಾಡ್ತಿರೋದು ಕೇಳಿದ್ರೆ ಸುಳ್ಳು ಅನ್ಸುತ್ತೆ. ಒಂದ್ಸಲ ಸೀಕ್ರೆಟ್ ಹೇಳಿದ ಮೇಲೆ ಮುಗೀತು, ಅದನ್ಯಾಕೆ ಬಚ್ಚಿಡೋಕೆ ಟ್ರೈ ಮಾಡ್ತಿದೀಯಾ. ಗಛಿ ಚ್ಟಛಿ ್ಛ್ಟಜಿಛ್ಞಿಛಠ, ಟ.” ಅಲ್ಯೋಷಾ ಒಂದು ಕ್ಷಣ ಯೋಚಿಸಿ ನುಡಿದ

“ನೀನು ಅಮ್ಮಂಗೆ ಹೇಳಲ್ಲ ಅಲ್ವಾ” “ಇಲ್ಲಪ್ಪಾ ನಾನ್ಯಾಕೆ ಹೇಳಲಿ”

“ಪ್ರಾಮಿಸ್” “ಐ, ಪ್ರಾಮಿಸ್”

“ಕ್ರಾಸ್ ಯುವರ್ ಹಾರ್ಟ್ ಹಾರ್ಟ್ ”

“ಆಯ್ತು, ಯಾವ್ಯಾವ ಥರ ಭಾಷೆ, ಪ್ರಮಾಣ ಮಾಡಿಸ್ಕೋತೀಯಪ್ಪ”

“”For heaven’s sake dont tell mummy…’ ಅಥವಾ ಯಾರಿಗೂ ಹೇಳಬಾರದು. ಇದು ಸೀಕ್ರೆಟ್ ಅಲ್ವಾ. ಗೊತ್ತಾದರೆ ನಾನು, ಸೋನಿಯಾ ನಮ್ಮ ಕೆಲಸದ ಹುಡುಗಿ ಪೆಲೊದ್ಯಾ… ಎಲ್ಲ ಸಿಕ್ಕಿ ಹಾಕ್ಕೋತೀವಿ. ಆಯ್ತು ಈಗ ಹೇಳ್ತೀನಿ ಕೇಳು : ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಪ್ಪನ್ನ ಮೀಟ್ ಮಾಡ್ತೀವಿ.

ಪೆಲೊದ್ಯಾ ಸಂಜೆ ನಮ್ಮನ್ನ ವಾಕ್ ಕರೆದುಕೊಂಡು ಹೋಗ್ತಾಳಲ್ವಾ. ಅಪ್ಪಾ ನಮಗಾಗಿ ಕಾಫಿ ಶಾಪ್ನಲ್ಲಿ ಕಾಯುತ್ತಿರುತ್ತಾರೆ. ಒಂದು ಪ್ರೈವೇಟ್ ರೂಂ ಇದೆಯಲ್ಲಾ ಅಲ್ಲಿ…”

“ಏನು ಮಾಡ್ತೀರಾ ಅಲ್ಲಿ”

“ಏನು ಇಲ್ಲಪ್ಪಾ. ಫಸ್ಟ್… ಒಬ್ಬರಿಗೊಬ್ಬರು ಹಲೋ ಹೇಳ್ತೀವಿ… ಆಮೇಲೆ ಡ್ಯಾಡಿ ನನಗೆ, ಸೋನಿಯಾಗೆ ಕೇಳಿದ್ದೆಲ್ಲಾ ತೆಕ್ಕೊಡ್ತಾರೆ… ಅಪ್ಪ ಎಷ್ಟೊಂದು ತಿನ್ನಿಸಿ

ಬಿಡ್ತಾರೆ ಅಂದ್ರೆ ರಾತ್ರಿ ಮನೇಲಿ ಊಟಾನೆ ಸೇರಲ್ಲ. ಅಮ್ಮನಿಗೆ ಅನುಮಾನ ಬರಬಾರ್ದು ಅಂಥ ಹೇಗೋ ಕಷ್ಟಪಟ್ಟು ತಿಂತೀವಿ. “ಅದು ಸರಿ… ಅಲ್ಲಿ ಏನು ವಿಷಯ ಮಾತಾಡ್ತೀರಿ…”

“ಅಪ್ಪನ ಜೊತೇಲಾ… ಎಲ್ಲ ವಿಷಯ. ಅಪ್ಪ ನಮ್ಮನ್ನ ತಬ್ಕೋತಾರೆ, ಮುತ್ತು ಕೊಡ್ತಾರೆ. ಏನೇನೋ ಜೋಕ್ಸ್ ಹೇಳ್ತಾರೆ. ಅಷ್ಟೇ ಅಲ್ಲ ಅಪ್ಪ ಏನು ಹೇಳ್ತಾರೆ

ಗೊತ್ತಾ? ನಾವು ದೊಡ್ಡವರಾದ ಮೇಲೆ ನಮ್ಮನ್ನ ಅವರೇ ಕರ್ಕೊಂಡು ಹೋಗ್ತಾರಂತೆ. ಸೋನಿಯಾಗೆ ಈ ಐಡ್ಯಾ ಇಷ್ಟ ಆಗಲಿಲ್ಲ. ನನಗೆ ಇಷ್ಟ ಆಯ್ತು. ಮಮ್ಮೀನ

ನಾನು ಮಿಸ್ ಮಾಡ್ತೀನಿ. ಆದರೆ ನಾನು ಅಮ್ಮಂಗೆ ಕಾಗದ ಬರೀತೀನಿ. ರಜಾದಲ್ಲಿ ಬಂದು ಅಮ್ಮನ ಜೊತೇಲೆ ಇರ್ತೀನಿ. ಅಪ್ಪ ನಂಗೆ ಒಂದು ಕುದುರೆ ತೆಕ್ಕೊಡ್ತಾರಂತೆ ಏನ್ ಮಜಾ ಅಲ್ವ. ನಮ್ಮಪ್ಪ ತುಂಬಾ ಗ್ರೇಟ್. ಅಂಥವರು ಈ ಜಗತ್ತಿನಲ್ಲೇ ಯಾರೂ ಇಲ್ಲ ಗೊತ್ತಾ? ಅಪ್ಪನ್ನ ಇಲ್ಲೇ ಬಂದು ಇರು ಅಂತ ಅಮ್ಮ ಯಾಕೆ ಕೇಳಲ್ವೊ, ಅದೂ ಹೋಗ್ಲಿ ನಾವು ಹೋಗಿ ಅಪ್ಪನ್ನ ಮಾತಾಡ್ಸೋದನ್ನ ಕೂಡ ಅಮ್ಮ ಯಾಕೆ ಇಷ್ಟ ಪಡಲ್ಲ… ಏನೋ ಅರ್ಥ ಆಗಲ್ಲಪ್ಪ. ನಿಂಗೊತ್ತಾ ಅಪ್ಪಂಗೆ ಅಮ್ಮ ಅಂದ್ರೆ

ಪ್ರಾಣ. ಅಮ್ಮ ಹೇಗಿದಾರೆ, ಹುಷಾರಾಗಿದಾರಾ… ಎಷ್ಟು ವಿಚಾರಿಸ್ತಾರೆ ಗೊತ್ತಾ. ಅಮ್ಮಂಗೆ ಒಂದ್ಸಲ ಹುಷಾರಿರಲಿಲ್ಲ ಅಂತ ಹೇಳಿದ್ವಿ. ಅಪ್ಪ ಇಡೀ ದಿನ ಪೆಚ್ಚಾಗಿದ್ರು. ಅಮ್ಮಂಗೆ ಏನೂ ತೊಂದರೆ ಕೊಡಬೇಡಿ ಅಂತ ನಮ್ಮಿಬ್ಬರಿಗೂ ನೂರು ಸಲ ಹೇಳಿದ್ರು…”

“ಆಯ್ತು… ಆಯ್ತು ಅಂದರೆ ವಾರಕ್ಕೆರಡು ದಿನ ಕಾಫಿ ಶಾಪ್ನಲ್ಲಿ ನಿಮ್ಮಪ್ಪನ ಜತೆ ಮೀಟಿಂಗ್ ಮಾಡ್ತೀರಿ. ನಿಮ್ಮ ಅಮ್ಮಂಗೆ ಈ ವಿಚಾರ ಗೊತ್ತಿಲ್ಲ ಅಂತೀಯ

ನೀನು…”

“ಓಹ್ ಇಲ್ಲಪ್ಪಾ, ಅಮ್ಮಂಗೆ ಹೇಗೆ ಗೊತ್ತಾಗುತ್ತೆ, ಪೆಲೊದ್ಯಾ ಇದನ್ನೆಲ್ಲ ಅಮ್ಮನಿಗೆ ಹೇಳಲ್ಲ. ಅಪ್ಪ ನಿನ್ನೆ ಎರಡು ಪೇರಲ ಹಣ್ಣು ಕೊಡಿಸಿದ್ರು, ಒಳ್ಳೆ ಜೇನುತುಪ್ಪದ

ಥರ ಇತ್ತು ಗೊತ್ತಾ?”

“ಹಮ್… ವೆರಿಗುಡ್ ಅಲ್ಯೋಷಾ ನಿಮ್ಮ ತಂದೆ ಯಾವಾಗಲಾದರೂ ನನ್ನ ಬಗ್ಗೆ ಮಾತಾಡ್ತಾರಾ” “ನಿಮ್ಮ ಬಗ್ಗೇನಾ… ಏನು ಹೇಳೋದು”

“ಆ ಥರ ನಿನ್ನ ಬಗ್ಗೇನೆ ಅಂತ ಏನೂ ಮಾತಾಡಿಲ್ಲ”

“ಹೌದು ಪುಟ್ಟಾ, ನನ್ನ ಹೆಸರು ಹೇಳಿ ಏನೂ ಮಾತಾಡಿರಲ್ಲ, ಜನರಲ್ ಆಗಿ…”

“ಹೌದು, ಹೌದು. ಅಪ್ಪಂಗೆ ನಿನ್ನ ಮೇಲೆ ಕೋಪ ಇದೆ. ನಿನ್ನಿಂದಾನೆ ಅಮ್ಮ ಸುಖವಾಗಿಲ್ಲ, ಅಮ್ಮನ ಜೀವನ ಹಾಳಾಯ್ತು ಅಂತಾನೆ. ಆದರೆ ನೀನು ಕೆಟ್ಟೋನಲ್ಲ ಅಂತ ಅಪ್ಪನಿಗೆ ನಾನು ಹೇಳ್ತಾ ಇದ್ದೆ…”

“ನಾನು ನಿಮ್ಮ ಅಮ್ಮನ ಜೀವನ ಹಾಳು ಮಾಡಿದೆ ಅಂತ ಹೇಳ್ತಾನಲ್ವ” “ಹೌದು ನಿಕೊಲಾಯ್ ಆದರೆ ಅದನ್ನೆಲ್ಲ ಮನಸ್ಸಿಗೆ ಹಚ್ಕೋಬೇಡ.”

ನಿಕೊಲಾಯ್ ಸೋಫಾದಿಂದ ಎದ್ದು ಶತಪಥ ತಿರುಗುತ್ತಾ “ನಾನು ಇವರ ಜೀವನ ಹಾಳು ಮಾಡಿದೆ ಅಲ್ವಾ” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ಬಾಲಕನ ಕಡೆಗೆ ತಿರುಗಿ “ನಾನು ನಿಮ್ಮ ಅಮ್ಮನ ಜೀವನ ಹಾಳು ಮಾಡ್ದೆ ಅಂತಾನಲ್ವ” ಎಂದು ಮತ್ತೆ ಮತ್ತೆ ಕೇಳುತ್ತಾನೆ.

ಅಷ್ಟರಲ್ಲಿ ಕರೆಗಂಟೆಯ ಶಬ್ದ. ಅಲ್ಯೋಷಾ ಕೂಡಲೇ ಓಡಿದ. ಒಂದು ನಿಮಿಷದ ನಂತರ ಓಲ್ಗಾ ಇವಾನೊವ್ನ ಹಾಲ್ನೊಳಕ್ಕೆ ನಡೆದು ಬಂದಳು, ಅವಳ ಜತೆಗೆ

ಸೋನಿಯಾ, ಹಿಂದೆ ಅಲ್ಯೋಷಾ ಕುಣಿಯುತ್ತಾ ಯಾವುದೋ ಹಾಡು ಗುನುಗುತ್ತಾ ಬಂದ.

“ನನ್ನನ್ನಲ್ಲದೆ ಬೇರೆ ಯಾರನ್ನು ದೂಷಿಸಲು ಸಾಧ್ಯ. ಅವನು ಹೇಳಿದ್ದು ಸರಿ… ಪಾಪ! ಅವನು ನೋವಿಗೊಳಗಾದ ಪತಿದೇವ ತಾನೆ…” “ತಲೆ ಬುಡ ಒಂದೂ ಇಲ್ಲದೆ ಏನು ಮಾತಾಡ್ತಾ ಇದೀಯ ನಿಕೊಲಾಯ್”

“ಹೌದು ಹೌದು ನಾನೇನು ಮಾತಾಡ್ತಾ ಇದೀನಿ. ನನ್ನ ಮಾತು ಬೇಡ. ನಿನ್ನ ಪತಿರಾಯನ ಬೋಧನೆ ಕೇಳು. ನಾನೊಬ್ಬ ದುಷ್ಟ, ನೀಚ, ವಿಲನ್. ನಿನ್ನ ಜೀವನಾನ ಹಾಳು ಮಾಡಿದೆ, ನಿನ್ನ ಮಕ್ಕಳ ಬದುಕನ್ನೂ. ನಿಮ್ಮನ್ನೆಲ್ಲ ನರಕಕ್ಕೆ ನೂಕಿ ನಾನು ಸಂಭ್ರಮದಿಂದ ಇದ್ದೇನೆ…”

“ನನಗೆ ನಿಜಕ್ಕೂ ಏನೂ ಅರ್ಥ ಆಗ್ತಿಲ್ಲ, ದಯವಿಟ್ಟು ಅದೇನು ಅಂತ ಬಿಡಿಸಿ ಹೇಳಬಾರದೆ.” “ಅರ್ಥ ಆಗಲಿಲ್ಲವಾ, ಈ ನಿನ್ನ ಮುದ್ದು ಮಗನನ್ನ ಕೇಳು ಹೇಳ್ತಾನೆ.”

ನಿಕೊಲಾಯ್ನ ಮಾತು ಕೇಳಿ ಬಾಲಕ ಅಲ್ಯೋಷಾ ಬೆಚ್ಚಿ ಬಿದ್ದ. “ಬೇಡ ನಿಕೊಲಾಯ್ ಪ್ಲೀಸ್ ಬೇಡ” ಎಂದು ಗುಟ್ಟು ಹೇಳುವವನಂತೆ ಹೇಳಿದ.

ನಿಕೊಲಾಯ್ ಬಾಲಕನತ್ತ ನೋಡದೆ, “ಕೇಳು ನಿನ್ನ ಪೆಲೊದ್ಯಾ ವಾರಕ್ಕೆರಡು ಸಲ ನಿನ್ನ ಮಕ್ಕಳನ್ನ ಕರೆದುಕೊಂಡು ಹೋಗಿ ಅವರ ಅಪ್ಪನನ್ನ ಭೆಟ್ಟಿ ಮಾಡಿಸುತ್ತಾಳಲ್ಲ ಅವಳನ್ನ ಕೇಳು. ವಿಷಯ ಅದಲ್ಲ. ಅಲ್ಲಿ ನಿನ್ನ ಗಂಡ ಹುತಾತ್ಮನಂತೆ ಮಾತಾಡುತ್ತಾನೆ. ಮತ್ತು ನಾನು ನಿಮ್ಮೆಲ್ಲರ ಬದುಕನ್ನ ಹಾಳು ಮಾಡಿದ ವಿಲನ್”

“ನಿಕೊಲಾಯ್ ಇಲಿಸಿಚ್ ನೀನು ನನಗೆ ಪ್ರಾಮಿಸ್ ಮಾಡಿದ್ದೆ” ಅಲ್ಯೋಷಾ ಗೋಗರೆಯುವ ದನಿಯಲ್ಲಿ ಹೇಳಿದ. “ಶಟ್ಅಪ್, ಎಲ್ಲಾ ಪ್ರಾಮಿಸ್ಗಿಂತ ಇದು ನನಗೆ ಮುಖ್ಯ”

“ನನಗೊಂದೂ ಅರ್ಥವಾಗುತ್ತಿಲ್ಲ” ಎಂದ ಓಲ್ಗಾಳ ಕಣ್ಣುಗಳಲ್ಲಿ ಬಳಬಳನೆ ನೀರು ಉದುರಲಾರಂಭಿಸಿದವು. “ಮಗು ಅಲ್ಯೋಷಾ ನೀವು ನಿಮ್ಮ ತಂದೆಯನ್ನ

ಭೆಟ್ಟಿ ಮಾಡಿದ್ದಿರಾ”-ಎಂದು ನಡುಗುವ ದನಿಯಲ್ಲಿ ಕೇಳಿದಳು.

ಅಲ್ಯೋಷಾ ಅದನ್ನು ಕೇಳಿಸಿಕೊಳ್ಳಲೇ ಇಲ್ಲ. ಭಯ, ಅಪಮಾನ ಹಾಗೂ ವಿಹ್ವಲಗೊಂಡ ಮುಖದಿಂದ ನಿಕೊಲಾಯ್ನನ್ನ ದಿಟ್ಟಿಸುತ್ತಿದ್ದ. ಅಮ್ಮ, `ಪೆಲೊದ್ಯಾಳನ್ನ ಕೇಳುತ್ತೇನೆ’ ಎಂದು ಹೋದಾಗ “ನೀನು ನನಗೆ ಪ್ರಾಮಿಸ್ ಮಾಡಿದ್ದೆ ಈ ಥರ ಮೋಸ ಮಾಡಬಹುದಾ” ಎಂದು ನಿಕೊಲಾಯ್ನನ್ನ ಜಗ್ಗಿ ಕೇಳಿದ.

ಆಗಲೇ ದುರಂತ ನಾಯಕನಂತೆ ಕೂಗಾಡುತ್ತಾ, ಜಗತ್ತಿನಲ್ಲಿ ತನ್ನಷ್ಟು ದುಃಖಿ ಯಾರೂ ಇಲ್ಲವೆಂಬಂತೆ ಶತಪಥ ತಿರುಗುತ್ತಿದ್ದ ನಿಕೊಲಾಯ್ ಬಾಲಕನನ್ನ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅವನ ಲೋಕದಲ್ಲಿ ಮಗುವಿನ ಮುಗ್ಧ ಭಾವನೆಗಳಿಗೆ, ಪ್ರಾಮಿಸ್ಗೆ ಚಿಕ್ಕಾಸು ಬೆಲೆಯೂ ಇರಲಿಲ್ಲ. ಅಲ್ಯೋಷಾ ಒಂದು ಮೂಲೆಯಲ್ಲಿ

ದಿಗ್ಭ್ರಾಂತನಾಗಿ ಕುಳಿತು ಸೋದರಿ ಸೋನಿಯಾಳಿಗೆ ನಿಕೊಲಾಯ್ನ ವಚನಭಂಗದ ಬಗ್ಗೆ ಪಿಸುಗುಟ್ಟಿದ. ಸಿಹಿಸಿಹಿಯಾದ ಹಣ್ಣುಗಳು, ಅಪ್ಪ-ಅಮ್ಮನ ಮುದ್ದು ಮಾತು, ಚಾಕೋಲೆಟ್, ಐಸ್ಕ್ರೀಂಗಳನ್ನ ಕಂಡಿದ್ದ ಬಾಲಕ ದೊಡ್ಡವರ ಲೋಕದ ಕ್ರೌರ್ಯ ವಂಚನೆ ಕಂಡು ಮೂಕನಾಗಿದ್ದ.

 

 

‍ಲೇಖಕರು G

29 March, 2011

3 Comments

  1. ಪ್ರವೀಣ್

    ಕತೆ ಆರಂಭವಾಯ್ತು ಅಂದುಕೊಂಡಾಗ ಮುಗಿಸಿಬಿಟ್ರಿ

  2. Sudha ChidanandaGowda.

    so, what next? OR what should be the next, according to u sir?

  3. Ranganath S

    ಅಯ್ಯೋ., ಇಷ್ಟು ಬೇಗ ಮುಗಿಸಬಾರದಿತ್ತು., ಮುಂದ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading