ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ- ಚಿತ್ರಗೀತೆ:ಚದುರಿದ ಚಿತ್ರಗಳು

“ಪಾಪ! ಯಾರೋ ಸೋನು ಕೈಲಿ ಪಾಠ  ಓದಿಸ್ತಿದ್ದಾರೆ ”

-ಟಿವಿಎಸ್ ಸರಿಗಮದ ಕಾಲದಿಂದ ಸೋನು ನಿಗಮ್ ನ ಕಟ್ಟರ್ ಅಭಿಮಾನಿಯಾದ ನನ್ನ ಪತ್ನಿ ವಿಷಾದದಿಂದ ಎಂಬಂತೆ ಹೇಳಿದಳು. ಆಕೆಯ one line ವಿಮರ್ಶೆಯಂಥ ಮಾತು ಕೇಳಿ ನಗು ಬಂತು. ಅವಳೇನು ವಿಮರ್ಶೆ ಮಾಡಿರಲಿಲ್ಲ. ಸೋನು ರಾಗವಾಗಿ ಗದ್ಯ ಒಪ್ಪಿಸುತ್ತಿರುವುದನ್ನ ಕೇಳಿ spontaneous ಆಗಿ ಪ್ರತಿಕ್ರಿಯಿಸಿದ್ದಳು. ಆ ‘ಗಪದ್ಯ’ವನ್ನು ಆಗಲೇ ನಾಲ್ಕಾರು ಬಾರಿ ಕೇಳಿದ್ದ ನಾನು ಹೇಳಿದೆ: ಸೋನು ಕಂಠದಲ್ಲಿ ‘ಪಾಠ’ವನ್ನೇ ನಾಲ್ಕಾರು ಸಲ ಕೇಳಿದರೆ ಅದೇ ಪದ್ಯವಾಗುತ್ತೆ (ನೂರು ಸಲ ಹೇಳಿದ ಸುಳ್ಳು ಸತ್ಯವಾಗುತ್ತೆ ಅಂತಾರಲ್ಲ ಹಾಗೆ). ನಂತರ ನಾವು ಗುನುಗುಟ್ಟಲು ಆರಂಭಿಸುತ್ತೇವೆ.

“ಹೌದಮ್ಮಾ ಅಪ್ಪಾ ಹೇಳೋದು ಒಂಥರಾ ನಿಜ. ನಾನು ಎಷ್ಟೋ ಹಾಡುಗಳನ್ನ ಎಫ್ ಎಂ ನಲ್ಲಿ ಮೊದಲ ಸಲ ಕೇಳಿದಾಗ ಥೂ ಏನ್ ದರಿದ್ರವಾಗಿದೆ ಅಂದ್ಕೋತಿದ್ದೆ. ಆದರೆ ಎಲ್ಲ ಚಾನಲ್ ನಲ್ಲಿಯೂ ಏಳೆಂಟು ಸಲ ಅ ಹಾಡು ಕೇಳಿದ ಮೇಲೆ ಹಮ್ ಮಾಡಲು ಶುರುಮಾಡ್ತಿದ್ದೆ…” ನನ್ನ ಮಗಳು ಹೇಳಿದಳು. ರಾಜ್ ಕುಮಾರ್ ತಾವು ಗಾಯಕನಾದ ಬಗ್ಗೆ ಎಲ್ಲೆಡೆ ವಿನಯ ಮತ್ತು ಸಂಕೋಚದಿಂದ ಹೇಳುತ್ತಿದ್ದರು: “ಅದೇನೋ ಹೇಳ್ತಾರಲ್ಲ ನರಳ್ತಾ ನರಳ್ತಾ ರೋಗ; ಹಾಡ್ತಾ ಹಾಡ್ತಾ ರಾಗ ಅಂತ, ಹಾಗೆ ನಾನು ಹಾಡ್ತೀನಿ ನೀವು ಕೇಳ್ತಿರಿ”.

ಈಗ ಎಫ್ ಎಂ ಚಾನಲ್ ಗಳು ಹೊಸ ಸಿನೆಮಾ ಹಾಡುಗಳನ್ನ ಪ್ರಮೋಶನ್ ಗೆಂದು ಬೆಳಗಿನಿಂದ ರಾತ್ರಿವರೆಗೆ ಅಕ್ಷರಶಃ ಹತ್ತಾರು ಸಲ ಹಾಕುವುದರಿಂದ ‘ಕೇಳ್ತಾ ಕೇಳ್ತಾ ರಾಗ’ ಎನ್ನಬಹುದೇನೋ!- ಹೀಗೆ ನಾವು ಮೂವರು ಏನೇನೋ ಹರಟುತ್ತಾ ಮೂಡಿಗೆರೆಯ ಬಳಿ ಕಾಫಿಗಾಗಿ ಕಾರು ನಿಲ್ಲಿಸಿದೆವು. ಅಲ್ಲಿ ಊರೊಳಗೆ ಯಾವುದೋ ಮದುವೆ ಮನೆಯಿಂದ ಗ್ರಾಮಾಫೋನ್  ನಲ್ಲಿ ‘ಸಿರಿವನ್ತನಾದರು ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರು ಕನ್ನಡ ನಾಡಲ್ಲೇ ಉಳಿವೆ’ ಎಂಬ ಹಾಡು ಬರುತ್ತಿತ್ತು.

ಅಪರೂಪಕ್ಕೊಮ್ಮೆ ವಿವಿಧಭಾರತಿ ಈ ಹಾಡನ್ನು ಪ್ರಸಾರ ಮಾಡಿದರೂ ಇದನ್ನು ಕೇಳಿ ಎಷ್ಟೋ ದಿನಗಳಾದವು ಅನ್ನಿಸಿತ್ತು. ಹಾಗೆಯೇ ಗಮನವಿಟ್ಟು ಹಾಡನ್ನು ಅಲಿಸಿದೆ. ಇ ಹಾಡು ನಿಜಕ್ಕೂ ಒಂದು ಸೋಜಿಗ. ಯಾಕೆಂದರೆ ನನಗೆ ತಿಳಿದಂತೆ ಯಾವ ಚಿತ್ರಕ್ಕೆಂದು ಇ ಹಾಡನ್ನು ರೆಕಾರ್ಡ್ ಮಾದಲಾಗಿತೋ ಅ ಚಿತ್ರ  (ಬಹುಶಃ ‘ಸಂಗಮ’ ಎಂದು ಕಾಣುತ್ತದೆ) ಬಿಡುಗಡೆ ಆಗಲೇ ಇಲ್ಲ. ನನ್ನ ನೆನಪು ಸರಿ ಇರುವುದಾದರೆ ಆ ಸಿನೆಮಾದ ಚಿತ್ರೀಕರಣವೇ ನಡೆದಂತಿಲ್ಲ. ಹಿಂದಿನ ದಿನಮಾನದಲ್ಲಿ ಒಂದು ಚಿತ್ರಗೀತೆ ಯಶಸ್ಸು ಪಡೆಯಬೇಕೆಂದರೆ ಆ ಗೀತೆ ಇರುವ ಚಿತ್ರವು ಯಶಸ್ವಿಯಾಗಬೇಕಿತ್ತು. ಇಲ್ಲವಾದರೆ ಅದು ರಸಿಕರ ಕಿವಿಗಳ ಮೇಲೆ ಬೀಳುತ್ತಲೇ ಇರಲಿಲ್ಲ. ಆಕಾಶವಾಣಿಯಲ್ಲಿ ಕನ್ನಡ ಚಿತ್ರ ಗೀತೆಗಳು ತೀರಾ ಸೀಮಿತ ಅವಧಿಯಲ್ಲಿ ಪ್ರಸಾರವಾಗುತ್ತಿದ್ದ ಕಾಲ. ಅದು ಬಿಟ್ಟರೆ ಗಣೇಶನ ಹಬ್ಬದ ಅರ್ಕೆಸ್ತ್ರಾಗಳು, ಮಾಡುವೆ ಮನೆ ಗ್ರಾಮಾಫೋನ್.

ಹೀಗಿರುವಾಗ ‘ಸಿರಿವಂತನಾದರೂ’ ಗೀತೆ ಅಷ್ಟೊಂದು ಜನಪ್ರೀತಿ ಗಳಿಸಿದ್ದು ಅಚ್ಚರಿಯ ಸಂಗತಿಯೇ. ಕನ್ನಡ ನಾಡಿನ ಪ್ರಸ್ತಾಪದಿಂದಾಗಿ ಜನಪ್ರಿಯವಾಯ್ತು ಎಂದೂ ಹೇಳಲಾಗದು. ಕನ್ನಡ ಸಿನೆಮಾಗಳಲ್ಲಿ ಇಂಥ ನಾಡು ನುಡಿಯ ಗೀತೆಗಳು ಸಾಕಷ್ಟಿವೆ. ಬಹುಶಃ ಆ ಗೀತೆ ಮತ್ತು ಅದರ ಭಾವಪೂರ್ಣ ಗಾಯನ ಅದರ ಅಪೂರ್ವ ಯಶಸ್ಸಿಗೆ ಕಾರಣವಿರಬಹುದು. ಯಾಕೆಂದರೆ ಆ ಕಾಲದಲ್ಲಿ ಸಾಮಾನ್ಯವಾಗಿ ಯಶಸ್ಸು ಪಡೆದ ಸಿನೆಮಾದಲ್ಲಿದ್ದರೆ ಅಥವಾ ಜನಪ್ರಿಯ ಕಲಾವಿದನ ಮೇಲೆ ಚಿತ್ರಿತವಾಗಿದ್ದರೆ ಮಾತ್ರ ಒಂದು ಹಾಡು ಜನಪ್ರೀತಿ ಗಳಿಸುತ್ತಿತ್ತು. ಖ್ಯಾತ ಗಾಯಕ ಮನ್ನಾ ಡೇ  ಕೂಡ ಈ  ಬಗ್ಗೆ ತಮ್ಮ ಆತ್ಮ ಚರಿತ್ರೆಯಲ್ಲಿ ತಿಳಿಸಿದ್ದಾರೆ. ಗಾಯಕ ಜೀವನದ ಆರಂಭದ ದಿನಗಳಲ್ಲಿ ಮನ್ನಾ ಡೇ ಅಂದಿನ ಸ್ಟಾರ್ ಕಲಾವಿದರು ಪರದೆಯ  ಮೇಲೆ ಹಾಡುವಂಥ ಹಾಡುಗಳನ್ನ ತಮಗೆ ನೀಡಲು ಸಂಗೀತ ನಿರ್ದೇಶಕರನ್ನು ಕೇಳಿ ಕೊಳ್ಳುತ್ತಿದ್ದರಂತೆ. ಅಂದಿನ ಜನಪ್ರಿಯ ಬಂಗಾಳಿ ನಾಯಕ ನಟರಿಗೆ ಅದಾಗಲೇ ಕೆಲವು ನಿರ್ದಿಷ್ಟ ಗಾಯಕರ ಕಂಠ ಅಚ್ಚುಕಟ್ಟಾಗಿ ಹೊಂದುತ್ತದೆ (ರಾಜ್- ಪಿ.ಬಿ.ಎಸ್ ಜೋಡಿಯಂತೆ ) ಎಂದು ಸಂಗೀತ ನಿರ್ದೇಶಕರು ನಿರ್ಧರಿಸಿದ್ದರಿಂದ ಅಂತ ಅವಕಾಶಗಳು ದೊರೆಯುವುದು ಕಷ್ಟವಾಗುತ್ತಿತ್ತು. ಹೀಗಾಗಿ ಇತರೆ ಪೋಷಕ ಪಾತ್ರಗಳು ಅಂದರೆ ಹೆಚ್ಚಾಗಿ ಹಾಸ್ಯ ನಟರ ಮೇಲೆ ಚಿತ್ರಿತವಾಗಿದ್ದ ಹಾಡುಗಳನ್ನ ಹಾಡಲು ಅವಕಾಶ ಸಿಗುತ್ತಿತ್ತು. ನಮ್ಮ ಸಿನೆಮಾಗಳು ಸಂಪೂರ್ಣ ಹಿರೋಗಿರಿಗೆ ಬಲಿಯಾಗುವ ಮುನ್ನ ಚಿತ್ರದಲ್ಲಿ ಉಪಧಾರೆಯಂತೆ ಒಂದು ಹಾಸ್ಯ ಜೋಡಿಯೂ ಇದ್ದು ಅವರಿಗೂ ಹಾಡುಗಳನ್ನ ಕೊಡುತಿದ್ದರು. ಕನ್ನಡದಲ್ಲಿ ಖ್ಯಾತ ಹಾಸ್ಯ ಕಲಾವಿದ ನರಸಿಂಹರಾಜು ಅವರ ಪಾತ್ರಕ್ಕೆ ಕಡ್ಡಾಯವಾಗಿ ಒಂದಾದರೂ  ಹಾಡು ಇರುತ್ತಿತ್ತು.

ಅಂದರೆ ಬಹುತೇಕ ತೆರೆಯ ಮೇಲೆ ಯಶಸ್ವಿಯಾದ ಹಾಡುಗಳೇ ಹೊರಗೂ ಜನಪ್ರಿಯವಾಗುತ್ತಿದ್ದುದು. ಹಾಗೆ ನೋಡಿದರೆ ಇದು ತೀರಾ ಪುರಾತನ ವಿಚಾರವಲ್ಲ. ನನಗೆ ಅನ್ನಿಸಿದಂತೆ ಖ್ಯಾತ ಸಂಗೀತ ನಿರ್ದೇಶಕ-ಗೀತ ರಚನಕಾರ ಹಂಸಲೇಖ ಕುಮಾರ್ ಬಂಗಾರಪ್ಪನ ಚಿತ್ರಗಳಿಗೆ ಉತ್ತಮ ಗೀತೆಗಳನ್ನು ರಚಿಸಿದ್ದಾರೆ. ಆದರೆ ಆ ಚಿತ್ರಗಳು ಅಷ್ಟೇನೂ ಯಶಸ್ಸು ಪಡೆಯದ ಕಾರಣ ಅವರು ಆ ಚಿತ್ರಕ್ಕಾಗಿ ರಚಿಸಿದ ಗೀತೆಗಳೂ ಅಷ್ಟೊಂದು ಜನಪ್ರಿಯವಾಗಲಿಲ್ಲ. ಅಷ್ಟು ದೂರ ಯಾಕೆ? ‘ಅನಿಸುತಿದೆ’ ಎಂಬ ಕೆಲವು ಸುಂದರ ವಾಕ್ಯಗಳ ಗೀತೆಯ ಮೂಲಕ ಮ್ಯಾಟಿನಿ ಷೋ ಮುಗಿಯುವ ಮುನ್ನವೇ ಜನಪ್ರಿಯರಾದ ಜಯಂತ್ ಕಾಯ್ಕಿಣಿ ಅದಕ್ಕೂ ಮೊದಲು ಶಿವರಾಮ ಕಾರಂತ ಕಾದಂಬರಿ ಆಧರಿಸಿದ, ಶಿವರಾಜ್ ಅಭಿನಯದ ‘ಚಿಗುರಿದ ಕನಸು’ ಹಾಗು ಹೆಸರಾಂತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿಯವರ ಚಿತ್ರಗಳಿಗೆ ಹಾಡುಗಳನ್ನ ಬರೆದಿದ್ದರು ಎಂಬುದು ಕೂಡ ಯಾರಿಗೂ ತಿಳಿದಿರಲಿಲ್ಲ. ಇದಕ್ಕೆ ಕಾರಣ ಕಾಯ್ಕಿಣಿಯವರ ಗೀತ ರಚನಾ ಕೌಶಲ್ಯದ ಕೊರತೆಯಲ್ಲ, ಚಿತ್ರಗಳ ದಯನೀಯ ಸೋಲು ಎಂಬುದು ನನ್ನ ನಂಬಿಕೆ ಆದರೆ ಈಗ ನಾಲ್ಕಾರು FM ಚಾನಲ್ ಗಳು, ಆರೆಂಟು ಟಿವಿ ಚಾನಲ್ ಗಳಲ್ಲಿ ಸದಾ ಕಾಲ ಹಾಡು ಪ್ರಸಾರವಾಗುವುದರಿಂದ ಪರಿಸ್ಥಿತಿ ಭಿನ್ನವಾಗಿದೆ.

ವಿಷಯಾಂತರವಾಗುವ ಮುನ್ನ ನಿರ್ದೇಶಕ ಚಿತ್ರ ಸಾಹಿತಿ ಸಿ. ವಿ ಶಿವಶಂಕರ್ ಬಗ್ಗೆ ಒಂದೆರಡು ಮಾತು ಹೇಳಬೇಕು. ಇವರ ಜನಪ್ರಿಯ ಗೀತೆಗಳಲ್ಲಿ ಒಂದಾದ ‘ಹೋಗದಿರಿ ಸೋದರರೇ’ ಯನ್ನು ನಾನು ಮೊದಲು ಕೇಳಿದ್ದು ಒಂದು ಮದುವೆ ಮನೆ ಗ್ರಾಮಾಫೋನ್ ನಲ್ಲಿ, ನನ್ನ ಬಾಲ್ಯದಲ್ಲಿ. ಎಷ್ಟೋ ವರ್ಷಗಳ ನಂತರ ಯಾವುದೋ ಟೆಂಟ್ ನಲ್ಲಿ ಈ  ಸಿನೆಮಾ ನೋಡಿದ ನೆನಪು. ಆ ಕಾಲದ ಸಾಮಾಜಿಕ ಚಿತ್ರಗಳಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದ ಚಿತ್ರ ‘ನಮ್ಮ ಊರು. ಮುಂದೆ ಕನ್ನಡದ ಉತ್ತಮ ಕಲಾವಿದರಾಗಿ ರೂಪುಗೊಂಡ ರಾಜೇಶ್ ಅಭಿನಯದ ಮೊದಲ ಸಿನೆಮಾ ‘ ನಮ್ಮ ಊರು’. ಇದಕ್ಕೂ ಮುನ್ನ ‘ಮನೆ ಕಟ್ಟಿ ನೋಡು’ ಎಂಬ ಯಶಸ್ವಿ ಚಿತ್ರವನ್ನು ಶಿವಶಂಕರ್ ನಿರ್ದೇಶಿಸಿದ್ದರು.

ಒಮ್ಮೆ ಗೆಳೆಯ ಸತ್ಯ” ಈ  ಕಾವೇರಿ ವಿವಾದಕ್ಕೆ ನೀವೇ ಕಾರಣ ಸ್ವಾಮಿ” ಎಂದು ಹೇಳಿ ಶಿವಶಂಕರ್ ರನ್ನು ಬೆಚ್ಚಿ ಬೀಳಿಸಿದ್ದ. ನಂತರ ಅವರ ಗೀತೆಯ ಸಾಲೊಂದನ್ನು ನೆನಪಿಸಿದ:

ಕಾವೇರಿ ನೀರು ಹರಿವಾಗ ನಮಗೇನು ಕೊರತೆ

ಕೈ ನೀಡಿ ಕೊಡುವೆವು ನೂರೆಂಟು ದೇಶಕ್ಕೆ

ಕನ್ನಡ ನಾಡು-ನುಡಿಯ ಬಗ್ಗೆ ಮೈದುಂಬಿ ಬರೆಯುತ್ತಿದ್ದ ಶಿವಶಂಕರ್ ರ ಗೀತೆಗಳಲ್ಲಿ ‘ಕನ್ನಡದ ರವಿ ಮೂಡಿ ಬಂದ’ ಎಂಬ ಗೀತೆ ಕೂಡ ಅಪಾರ ಕೀರ್ತಿ ಗಳಿಸಿತು. ಇಂಥ ಶಿವಶಂಕರ್ ಬಗ್ಗೆ ನನ್ನ ‘ಗೀತ ಸಂಗೀತ’ ಕೃತಿಯಲ್ಲಿ ಚರ್ಚೆಯಾಗಬೇಕಿತ್ತು. ಅದು ಹೇಗೆ ತಪ್ಪಿ ಹೋಯ್ತು ಎಂಬುದೇ ಆಶ್ಚರ್ಯ.

**********

ಈ ಬರಹ ಚಿತ್ರಗೀತೆಗಳ ಬಗೆಗಿನ ಚದುರಿದ ಚಿತ್ರಗಳಂತೆ ಇರುವುದರಿಂದ ನನ್ನನ್ನ ಕಾಡುವ ಬೀಜವೃಕ್ಷ ನ್ಯಾಯದ ಬಗೆಗೂ ನಿಮ್ಮೊಂದಿಗೆ ನನ್ನ ಭಾವನೆಗಳನ್ನ ಹಂಚಿಕೊಳ್ಳಬೇಕು ಅನ್ನಿಸುತ್ತದೆ. ಚಿತ್ರಗೀತೆ, ಅಲ್ಬಂ ಸಾಂಗ್…ಇಂತಹವನ್ನ ಮೂಲಭೂತವಾಗಿ composer’s medium ಅಥವಾ composer’s creation ಎನ್ನುತ್ತಾರೆ . ಅಂದರೆ ಸಂಗೀತ ನಿರ್ದೇಶಕನ ಟ್ಯೂನ್ ಗೆ ಸಾಹಿತಿಗಳು ಬರೆಯುತ್ತಾರೆ ಎಂಬರ್ಥದಲ್ಲಿ. ‘ಗೀತ ರಚನಾಕಾರರ ಕೆಲಸ ಬಡಗಿಯ ಕೆಲಸ ಇದ್ದಂತೆ’ ಎಂದು ಒಮ್ಮೆ ಜಯಂತ್  ಹೇಳಿದ್ದ ಮಾತುಗಳು ಇದಕ್ಕೆ ಇಂಬು ಕೊಡುವಂತಿದೆ. ಮೊನ್ನೆ ಟಿವಿಯಲ್ಲಿ ಯಾವುದೋ ಕಾರ್ಯಕ್ರಮವನ್ನ ನೋಡುತ್ತಿದ್ದೆ. ‘ಅಮೃತ ವರ್ಷಿಣಿ’ ಚಿತ್ರದ ಮೂಲಕ ಕನ್ನಡಕ್ಕೆ ಕೆಲವು ಮಧುರ ಗೀತೆಗಳನ್ನ ನೀಡಿದ ಸಂಗೀತ ನಿರ್ದೇಶಕ ದೇವ ತಮಿಳಿನಲ್ಲಿ ಮಾತಾಡುತ್ತಿದ್ದರು. ಅವರಿಗೆ ಕನ್ನಡ ಅರ್ಥವೇ ಆಗುತ್ತಿರಲಿಲ್ಲ. ಅಂದರೆ ಟ್ಯೂನ್ ಎಂಬುದು ಸಾರ್ವತ್ರಿಕ, ಗೀತೆ ಎನ್ನುವುದು ಪ್ರಾದೇಶಿಕವೇ.

ಸಂಗೀತ ನಿರ್ದೇಶಕ ಕನ್ನಡದವನೇ ಆಗಿದ್ದಾಗ ಸಹ ಅಂತ ಹೆಚ್ಚಿನ ವ್ಯತ್ಯಾಸವಿರುವಂತೆ ಕಾಣುವುದಿಲ್ಲ. ಜಯಂತ್, ಮಣಿಕಾಂತ್ ರೊಂದಿಗೆ ಹಂಚಿಕೊಂಡಿರುವ (‘ಹಾಡು ಹುಟ್ಟಿದ ಸಮಯ’ ಕೃತಿಯಲ್ಲಿರುವ) ಒಂದು ಸ್ವಾರಸ್ಯಕರ ಪ್ರಸಂಗವನ್ನು ಗಮನಿಸಿ:

“ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.

ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ”

ಎಂಬ ಹೊಸ ಸಾಲು ಹೊಳೆಯಿತು. ಅದನ್ನು ಬರೆದು ಸಂಗೀತ ನಿರ್ದೇಶಕ್ ಮನೋಮೂರ್ತಿ ಅವರಿಗೆ ಹಾಡಿ ತೋರಿಸಿದೆ. ‘ಅವರು ವಾಹ್, ವಾಹ್ ಚೆನ್ನಾಗಿದೆ, ಚೆನ್ನಾಗಿದೆ’ ಅಂದರು. ಈ ಸಂದರ್ಭದಲ್ಲಿಯೇ ಒಂದು ತಮಾಷೆ ನಡೆಯಿತು. ಎರಡು ಸಾಲು ಬರೆದು ಹಾಡು ತೋರಿಸಿದ ನಂತರ ಮನೋಮೂರ್ತಿಯವರಿಗೆ ‘ಈ ಹಾಡಿನಲ್ಲಿ ಅನುಪಲ್ಲವಿ ಉಳಿದು ಹೋಗಿದೆ’ ಎಂದು ಹೇಳಿದೆ. ಅವರು ಅದನ್ನು ಕೂಡ ಹಾಡಿನ ಸಾಲೇ ಎಂದು ಭಾವಿಸಿ ‘ ವಾಹ್ ವಾಹ್, ತುಬಾ ಚೆನ್ನಾಗಿದೆ’ ಅಂದು ಬಿಟ್ಟರು”

ಅಂದರೆ ಒಬ್ಬ ಸಂಗೀತ ನಿರ್ದೇಶಕ ಒಂದು ಹಾಡಿನ ಅಥವಾ ಒಂದು ಸಾಲಿನ ಭಾವಾರ್ಥ, ಭಾವತೀವ್ರತೆಗಿಂತ ಮಿಗಿಲಾಗಿ ಆ ಪದಗಳು ತನ್ನ ಟ್ಯೂನ್ ನಲ್ಲಿ (fit) ಸರಿಯಾಗಿ ಕೊರುತ್ತವೆಯೇ ಎಂಬ ಬಗೆಗೆ ಹೆಚ್ಚು ಜಾಗೃತನಾಗಿರುವಂತೆ ಕಾಣುತ್ತದೆ. ಇಲ್ಲಿಯೇ ಚಲನಚಿತ್ರ ನಿರ್ದೇಶಕರೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ. ಅವರ ಮೊದಲ ಚಿತ್ರಕ್ಕೆ ಸಂಗೀತ ನಿರ್ದೇಶಕರು ಕೆಲವು ಟ್ಯೂನ್ ಗಳನ್ನೂ ನೀಡಿದಾಗ ಅದನ್ನು ಕೇಳಿ ಅವರಿಗೆ ಏನೂ ಅನ್ನಿಸಲಿಲ್ಲವಂತೆ. ಆ ಟ್ಯೂನ್ ಗಳು ಹಾಡಾದ ಮೇಲೆ ‘ಆಹಾ ಅದ್ಭುತ’ ಎನಿಸಿತಂತೆ.

ಟ್ಯೂನ್ ಎಂಬ ಅಸ್ತಿಪಂಜರಕ್ಕೆ ರಕ್ತ ಮಾಂಸ ತುಂಬಿ ಪ್ರಾಣ ನೀಡಿದಾಗಲೇ ಅದು ಹಾಡಾಗುವುದು ಅಲ್ಲವೇ. ಅಥವಾ ನಾನು ಸಾಹಿತಿಗಳ ಪರ ವಾಲುತ್ತಿದ್ದೇನೆಯೇ?

‍ಲೇಖಕರು G

16 April, 2011

2 Comments

  1. kumvee

    chandrasekhara aluru avara gadyada sogasu nangista, avara chitra geethe kurita baraha prakatisida avadhige dhanyavaadaglu, si.vi, sivashankara avara namma uooru chitrada hogadiri sodarare emba hadannu estu sala kelidaroo kadimeye, chitragalallina aneka hadugalu olleya kavithegale. avugalannu saviyuva dodda guna nammallirabeku.

    • chandrualur

      thank you boss.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading