ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಅರುಂಧತಿ ನೆನಪಿಸಿದ ಖಲಿಸ್ತಾನ್

 

(ಚಂದ್ರಶೇಖರ ಆಲೂರು ಅವರ ಹಿಂದೊಮ್ಮೆ ಬರೆದ ಲೇಖನ)

ಕಾಲ ಬದಲಾಗಿದೆ. ಅಥವಾ ಬದಲಾದಂತೆ ಭಾಸವಾಗುತ್ತಿದೆಯೇ!

ಒಬಾಮಾನಿಗೆ ಮುನ್ನ ಎಂಟು ವರ್ಷಗಳ ಕಾಲ ಅಮೆರಿಕಾವನ್ನು ಆಳಿದ ಬುಶ್ ಗೆ  ಚುನಾವಣಾ ಪ್ರಚಾರ ಕೈಗೊಂಡಾಗ ಭಾರತದ ಪ್ರಧಾನಿ ಯಾರು ಎಂಬುದೇ ತಿಳಿದಿರಲಿಲ್ಲ. ಅದು ಕೇವಲ ಸಾಮಾನ್ಯ ಜ್ಞಾನದ ಕೊರತೆಯಲ್ಲ. ಭಾರತದಂತಹ ರಾಷ್ಟ್ರಗಳ ಬಗ್ಗೆ ಕೊಬ್ಬಿದ ಅಮೆರಿಕಾಕ್ಕೆ ಇದ್ದ ಅಸಡ್ಡೆ. ಈಗ ಆ ಕೊಬ್ಬು ಕೊಂಚವಾದರೂ ಕರಗಿದಂತೆ ಕಾಣುತ್ತಿದೆ. ತಾನು ಏನಿದ್ದರೂ ಕೇವಲ ಕೊಡುವ ರಾಷ್ಟ್ರ ಎಂದು ಭಾವಿಸಿದ್ದ ಅಮೆರಿಕಾ ಈಗ ಬೇಡುವ ಮಟ್ಟಕ್ಕೆ ಇಳಿಯದಿದ್ದರೂ ಪರಸ್ಪರ ಅವಲಂಬನೆಯ ಬಗ್ಗೆ ಮಾತಾಡಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದರೂ ಅಯ್ಯೋ ನಿಮಗೇನು ಕಮ್ಮಿ, ನೀವು developing ಅಲ್ಲ developed” ಎನ್ನುವುದು ಜಾಣತನದ ಮಾತುಗಳಂತೆ ಕಾಣುತ್ತಿವೆ.

ಆರಂಭದ ಎರಡು ದಿನ ಪಾಕಿಸ್ತಾನದ ಬಗ್ಗೆ ತುಟಿ ಪಿಟಿಕ್ ಎನ್ನದ ಒಬಾಮಾ ಲೋಕಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಮಾತಾಡಿ ಭಾರತೀಯರಿಗೆ ಸ್ವಲ್ಪವಾದರೂ ಸಮಾಧಾನ ತಂದಿದ್ದಾನೆ. ಆದರೆ ಅಮೆರಿಕಾ ದೇಶಕ್ಕೆ ಯಾವಾಗಲೂ ತನ್ನ ಸ್ವಂತ ಹಿತಾಸಕ್ತಿಗಳೇ ಮುಖ್ಯವಾದ್ದರಿಂದ ಆ ದೇಶದಿಂದ ಏನನ್ನಾದರೂ ನಿರೀಕ್ಷಿಸುವುದೇ ತಪ್ಪು. ನಮ್ಮಂಥ ಸಾಮಾನ್ಯ ಭಾರತೀಯರಿಗೆ ಒಬಾಮಾನಿಂದ ನಿರಾಶೆಯಾದಂತೆ ಅರುಂಧತಿ ರಾಯ್ ಥರದವರಿಗೂ ನಿರಾಶೆಯಾಗಿದೆ! ಕಾಶ್ಮೀರ ವಿಚಾರದಲ್ಲಿ ಒಬಾಮಾ ಮಧ್ಯ ಪ್ರವೇಶಿಸುತ್ತಾನೆ. ಭಾರತ ಸರ್ಕಾರಕ್ಕೆ ಬುದ್ಧಿವಾದ ಹೇಳುತ್ತಾನೆ ಎಂಬ ನಿರೀಕ್ಷೆ ಆಕೆಯದಾಗಿತ್ತು. ಮೊನ್ನೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಒಬಾಮಾ ಬೋಯಿಂಗ್ ವಿಮಾನ ವ್ಯಾಪಾರದಲ್ಲಿ ಕಾಶ್ಮೀರದ ವಿಚಾರವನ್ನ ಮರೆತಿದ್ದಾನೆ ಎಂದು ಆಪಾದಿಸಿದ್ದಾಳೆ.

***

ಕಳೆದ ವಾರ ರವಿಯವರು ಈಕೆಯ ಬಗ್ಗೆ ಬರೆದದ್ದು ಓದಿದ ಮೇಲೆ ಮತ್ತೆ ಬರೆಯುವಂಥದ್ದು ಏನಿಲ್ಲ ಅನ್ನಿಸಿ ಸುಮ್ಮನಾಗಿದ್ದೆ. ಆದರೆ ಅದೇಕೋ ಅರುಂಧತಿ ಕಾಶ್ಮೀರದ ಜನರ `ಸ್ವತಂತ್ರ ಕಾಶ್ಮೀರ’ದ ಆಶಯದ ಬಗ್ಗೆ ಮಾತಾಡುವುದನ್ನ ಕೇಳಿದಾಗಲೆಲ್ಲ ನನಗೆ ಎಂಬತ್ತರ ದಶಕದ ಸಿಖ್ಖರ ಖಲಿಸ್ತಾನ್ ಚಳವಳಿಯ ನೆನಪಾಗುತ್ತದೆ. ಆ ದಿನಗಳನ್ನ ಒಮ್ಮೆ ಸುಮ್ಮನೆ ನೆನಪಿಸಿಕೊಳ್ಳಿ: ಅಮೆರಿಕಾ ಸೃಷ್ಟಿಸಿದ ಒಸಾಮಾ ಬಿನ್ ಲಾಡೆನ್ ಕಾಲಾಂತರದಲ್ಲಿ ಆ ದೇಶವನ್ನೇ ದುಃಸ್ವಪ್ನವಾಗಿ ಕಾಡಿದಂತೆ ನಮ್ಮ ಇಂದಿರಾ ಗಾಂಯ ಸೃಷ್ಟಿಯಾದ `ಸಂತ’ ಭಿಂದ್ರನ್ ವಾಲೆ ರೂಪಿಸಿದ ಚಳವಳಿ ಪಂಜಾಬ್ನಲ್ಲಿ ನಿತ್ಯ ನರಮೇಧ, ರಕ್ತಪಾತಕ್ಕೆ ಕಾರಣವಾಗಿ ತದನಂತರ ಆಕೆಯನ್ನೇ ಬಲಿತೆಗೆದುಕೊಂಡಿತು. ಸ್ವಾಯತ್ತತೆಯ ನೆಪದಲ್ಲಿಯೇ ಸಿಖ್ಖರ ಖಲಿಸ್ತಾನ್ ಚಳವಳಿ ಕೂಡಾ ಶುರುವಾಗಿದ್ದು. ಬ್ರಿಟನ್, ಅಮೆರಿಕಾ, ಕೆನಡಾದಲ್ಲಿ ನೆಲೆಸಿದ್ದ ಸಿಖ್ಖರ ಹಣ ಹಾಗೂ ಸ್ವಲ್ಪ ಮಟ್ಟಿಗೆ ಪಾಕಿಸ್ತಾನದ ಆಯುಧಗಳ ನೆರವಿನೊಂದಿಗೆ ಆರಂಭವಾದದ್ದು ಈ ಖಲಿಸ್ತಾನ್ ಚಳವಳಿ.

ಆರಂಭದಲ್ಲಿ ಮಕ್ಕಳ ಆಟದಂತೆ ಕಂಡ ಈ ಚಳವಳಿ ಪಂಜಾಬಿನ ಯುವಕರನ್ನ ಸೆಳೆದ ಬಗೆ ಭೀಕರ ತಲ್ಲಣಗಳನ್ನ ಸೃಷ್ಟಿಸಿತು. ಅರುಂಧತಿ ರಾಯ್ ಕಂಡ ಕಾಶ್ಮೀರದ ಯುವಕರು ಸ್ವತಂತ್ರ ಕಾಶ್ಮೀರವನ್ನು ಬಯಸಿದಂತೆ ಲಕ್ಷಾಂತರ ಸಿಖ್ ಯುವಕರು ಕೂಡ ಸ್ವತಂತ್ರ ಖಲಿಸ್ತಾನದ ಹಂಬಲ ವ್ಯಕ್ತಪಡಿಸಲಾರಂಭಿಸಿದರು. ಹುಂಬ ಭಿಂದ್ರನ್ ವಾಲೆ ಸಿಖ್ಖರ ಪವಿತ್ರ ಸ್ವರ್ಣ ಮಂದಿರವನ್ನೇ ತನ್ನ `ರಾಜಧಾನಿ’ಯನ್ನಾಗಿ ಮಾಡಿಕೊಂಡ. ಸ್ವರ್ಣಮಂದಿರ ಖಲಿಸ್ತಾನ್ ವಾದಿಗಳ ಶಸ್ತ್ರಾಗಾರವಾಗಿಯೂ ಪರಿಣಮಿಸಿತು. ಖಲಿಸ್ತಾನ್ ಪರ ವಕ್ತಾರರು ವಿದೇಶಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ಕರೆದು ಭಾರತ ಸರ್ಕಾರ ಪಂಜಾಬಿನಲ್ಲಿ Referendumಅಂದರೆ ಖಲಿಸ್ತಾನ್ ವಿಚಾರವಾಗಿ `ಪ್ರಜಾ ನಿರ್ಧಾರ’ವನ್ನು ಕೇಳಲಿ. ಬಹು ಸಂಖ್ಯಾತ ಸಿಖ್ಖರು ಸ್ವತಂತ್ರ ಖಲಿಸ್ತಾನದ ಪರವಾಗಿ ಇದ್ದಾರೆ ಎಂದು ಹೇಳಲಾರಂಭಿಸಿದರು. ಅರುಂಧತಿ ಹೇಳುತ್ತಿರುವುದೂ ಅದನ್ನೆ. ಕಾಶ್ಮೀರದಲ್ಲಿ `ಪ್ರಜಾ ನಿರ್ಧಾರ ‘ಕ್ಕೆ ಅವಕಾಶ ಕೊಟ್ಟರೆ ಬಹು ಸಂಖ್ಯಾತರು ಸ್ವತಂತ್ರ ಕಾಶ್ಮೀರವನ್ನು ಬಯಸುತ್ತಾರೆ. ಇದು ನಿಜವಾದ ಪ್ರಜಾಸತ್ತಾತ್ಮಕ ಮೌಲ್ಯ ಕೂಡಾ ಆದ್ದರಿಂದ ಕಾಶ್ಮೀರವನ್ನು ಭಾರತದ ಹಿಡಿತದಿಂದ ಮುಕ್ತಗೊಳಿಸಬೇಕು ಎಂದು. ಅಂದು ಬಹುಶಃ ಆ ಅವಧಿಯಲ್ಲಿ ಪಂಜಾಬ್ ನಲ್ಲಿ Referendumಗೆ ಅವಕಾಶ ನೀಡಿದ್ದರೆ ಸ್ವತಂತ್ರ ಖಲಿಸ್ತಾನದ ಉದಯವಾಗುತ್ತಿತ್ತೆಂದು ಕಾಣುತ್ತದೆ.

ನಂತರ ಏನಾಯ್ತು? ಸ್ವರ್ಣಮಂದಿರದೊಳಗೆ ಸೇನೆ ಪ್ರವೇಶಿಸುವುದು ಅನಿವಾರ್ಯವಾಯ್ತು. ಇದನ್ನು ಇಂದಿರಾ ಗಾಂಧಿ ತೆಗೆದುಕೊಂಡ ಮೂರ್ಖ ನಿರ್ಧಾರ ಅನ್ನುವವರಿದ್ದಾರೆ. ಆದರೆ ಆ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಅನ್ಯ ಮಾರ್ಗವೇ ಇರಲಿಲ್ಲ. ಸೇನೆಯ ಪ್ರವೇಶ, ಭಿಂದ್ರನ್ ವಾಲೆಯ ಹತ್ಯೆ ಸಿಖ್ಖರನ್ನು ಕೆರಳಿಸಿದವು. ಗಾಂ ಕುಟುಂಬದ (ಇಂದಿರಾ) ಆಪ್ತರಾಗಿದ್ದ ಖ್ಯಾತ ಪತ್ರಕರ್ತ ಖುಷ್ವಂತ್ ರಂತಹ ಉಗ್ರ ವೈಚಾರಿಕ ಕೂಡಾ ಇದನ್ನು ತೀವ್ರವಾಗಿ ವಿರೋಧಿಸಿ ಬರೆದರು. (ಸಂಡೆ ಅಬ್ಸರ್ವರ್ ನಲ್ಲಿ ಪ್ರಕಟವಾದ ಈ ಲೇಖನಕ್ಕೆ ಪ್ರತಿಕ್ರಿಯಿಸಿ “Khushwanth, a simple sikh’ಎಂದು ಯುವ ಪತ್ರಕರ್ತನೊಬ್ಬ ಬರೆದ. ಇದನ್ನು ಪ್ರತಿಭಟಿಸಿ ಖುಷ್ವಂತ್ ಆ ಪತ್ರಿಕೆಗೆ ತಮ್ಮ ಅಂಕಣ ನೀಡುವುದನ್ನೇ ನಿಲ್ಲಿಸಿದರು!) ಅಂದಿನ ಸಿಖ್ಖರ ಮನೋಭಾವ ಹೇಗಿತ್ತೆಂಬುದಕ್ಕೆ ಇದೊಂದು ಉದಾಹರಣೆ.

ಆಗ ಪಂಜಾಬ್ ನಲ್ಲಿ ಪ್ರಜಾಭಿಪ್ರಾಯ ಕೇಳಿದ್ದರೆ?

ಒಂದು ವಿಚಾರದಲ್ಲಿ ಅರುಂಧತಿಯ ಬಗ್ಗೆ ನನ್ನ ಸಹಮತವಿದೆ. ಅದೆಂದರೆ ಅಮಾಯಕ ನಾಗರೀಕರ ಮೇಲೆ ಮಿಲಿಟರಿ ಮತ್ತು ಕಾಶ್ಮೀರ ಪೊಲೀಸ್ ನಡೆಸುತ್ತಿರುವ ಅಟಾಟೋಪ. ಕೆಲವೊಮ್ಮೆ ಇದು ಅಕಸ್ಮಾತ್ತಾಗಿ ಘಟಿಸಿದರೂ ಬಹಳಷ್ಟು ಸಲ ಇವು ಉದ್ದೇಶಪೂರ್ವಕವಾಗಿರುತ್ತವೆ. ಪಂಜಾಬಿನಲ್ಲಿಯೂ ಹೀಗೇ ಆಗಿತ್ತು. ಮನೆಗಳಿಂದ ಯುವಕರು ರಾತ್ರೋರಾತ್ರಿ ಕಾಣೆಯಾಗುತ್ತಿದ್ದರು. `ಎನ್ಕೌಂಟರ್’ನಲ್ಲಿ ಸತ್ತರೆಂದು ಪೊಲೀಸರು ಹೇಳುತ್ತಿದ್ದರು. ಕಾಶ್ಮೀರದಲ್ಲಿಯೂ ಇದು ನಡೆಯುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳೂ ವರದಿಯಾಗುತ್ತಿವೆ. ಇಂಥದ್ದನ್ನ ನಾವು ತೀವ್ರವಾಗಿ ಪ್ರತಿಭಟಿಸಬೇಕು ಮತ್ತು ಸಾಮಾನ್ಯ ನಾಗರೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಅಂದಿನ ಪಂಜಾಬಿನಲ್ಲಿ ಇಂಥದ್ದೊಂದು ಗಂಭೀರ ಪ್ರಯತ್ನ ನಡೆಯಿತು. ಒಂದು ಹಂತದಲ್ಲಿ ಸ್ವತಂತ್ರ ಖಲಿಸ್ತಾನ ನಿರ್ಮಾಣವಾಗುತ್ತದೇನೋ ಎಂಬ ಆತಂಕ ನನ್ನನ್ನೂ ಕಾಡಿತ್ತು. ಆದರೆ ಕಾಲ ಕಳೆದಂತೆ ವಾತಾವರಣ ತಿಳಿಯಾಗುತ್ತಾ ಸಾಗಿತ್ತು. ಉಗ್ರಗಾಮಿಗಳ ಚಟುವಟಿಕೆ ಉಡುಗುತ್ತಾ ಬಂತು. ಇಂದಿರಾ ಗಾಂಯವರ ಕಗ್ಗೊಲೆಯ ನಂತರ ದೆಹಲಿಯಲ್ಲಿ ನಡೆದ ಸಿಖ್ಖರ ಮಾರಣಹೋಮ ಕೂಡಾ ಉಗ್ರಗಾಮಿಗಳ ನೆರವಿಗೆ ಬರಲಿಲ್ಲ. ಜನಸಾಮಾನ್ಯರು ಅಂದರೆ ನಾಗರೀಕರು ಉಗ್ರಗಾಮಿಗಳನ್ನ ದೂರ ಮಾಡಲು ಪ್ರಾರಂಭಿಸಿದರು. ಮತ್ತೊಂದು ಕಾರಣ ಹೊರಗಿನಿಂದ ಹರಿದು ಬರುತ್ತಿದ್ದ ಹಣದ ಪ್ರವಾಹ ತಗ್ಗಿತು.

ಹೀಗಾಗಿ ಉಗ್ರಗಾಮಿಗಳಿಗೆ ಆಯುಧಗಳನ್ನ ಕೊಳ್ಳಲು ಸಾಧ್ಯವಾಗಲಿಲ್ಲ. ತೊಂಬತ್ತರ ದಶಕದ ಆರಂಭದ ಪಂಜಾಬಿನಲ್ಲಿ ಖಲಿಸ್ತಾನ್ ಚಳವಳಿ ನಡೆಯಿತೇ ಎಂದು ಅಚ್ಚರಿ ಪಡುವಂತಾಯ್ತು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ನಾವೆಲ್ಲ ಹೆಮ್ಮೆ ಪಡಬಹುದಾದ ಅಂಶ ಇದು.

ಶ್ರೀಲಂಕಾದಲ್ಲಿ ದಶಕಗಳ ಕಾಲ ನಡೆದ ಎಲ್.ಟಿ.ಟಿ.ಇ ಚಳವಳಿಯ ಅಂತ್ಯಕ್ಕೆ ಕೂಡಾ ಹೀಗೆ ಹೊರಗಿನಿಂದ ಬರುತ್ತಿದ್ದ ಹಣ ಮತ್ತು ಬಂದೂಕುಗಳು ನಿಂತು ಹೋಗಿದ್ದೇ ಕಾರಣ. ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳಿಗೆ ಬಹುಮುಖ್ಯ ಕಾರಣ ಪಾಕಿಸ್ತಾನ ಮತ್ತು ಚೈನಾದಿಂದ ಬರುತ್ತಿರುವ ಹಣ ಮತ್ತು ಆಯುಧಗಳು. ಅರವತ್ಮೂರು ವರ್ಷಗಳಿಂದ ಈ ಎರಡೂ ದೇಶಗಳು ನಿರಂತರವಾಗಿ ಇವೆರಡನ್ನೂ ಪೂರೈಸುತ್ತಿವೆ. ಪಾಕಿಸ್ತಾನ ಅಗತ್ಯವಿರುವ ಮಾನವ ಸಂಪನ್ಮೂಲ, ತರಬೇತಿಯನ್ನೂ ನೀಡುತ್ತಿದೆ. ವಿಶಾಲ ಗಡಿಯನ್ನು ಹೊಂದಿರುವ ನಮಗೆ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ನ್ಯೂಯಾರ್ಕ್ , ವಾಷಿಂಗ್ಟನ್ನಲ್ಲಿ ಪತ್ರಿಕಾಗೋಷ್ಠಿ ನಡೆಸುವ, ಟಿ.ವಿ. ಸಂದರ್ಶನಗಳನ್ನ ಕೊಡುವ ಅರುಂಧತಿ ಥರದವರು ಅಮೆರಿಕಾ ತಾಲಿಬಾನಿಗಳನ್ನು ಮಣಿಸಲು ಪಾಕಿಸ್ತಾನಕ್ಕೆ ಕೊಡುತ್ತಿರುವ ಹಣ ಮತ್ತು ಅತ್ಯಾಧುನಿಕ ಆಯುಧಗಳು ಕಾಶ್ಮೀರಿ ಯುವಕರನ್ನ ತಲುಪುತ್ತಿರುವ ಬಗ್ಗೆ ಮಾತಾಡಬೇಕು. ಪಾಕಿಸ್ತಾನಿ ಸೈನ್ಯವೇ ಅಕೃತವಾಗಿ ಉಗ್ರಗಾಮಿಗಳಿಗೆ ಮತ್ತು ಭಯೋತ್ಪಾದಕರಿಗೆ ನೆರವು ನೀಡುತ್ತಿರುವ ಬಗ್ಗೆ ಅಮೆರಿಕನ್ ಜನರ ಗಮನ ಸೆಳೆಯಬೇಕು. ಆದರೆ ಇದರಿಂದ ಅಂಥ ಪ್ರಚಾರ ಸಿಕ್ಕುವುದಿಲ್ಲ! ಅಮೆರಿಕಾ ದೇಶಕ್ಕೆ ಕೂಡಾ ಇಂಥ ಪಾಕಿಸ್ತಾನವೇ ಬೇಕು. ಕಳೆದ ವರ್ಷ ಅಮೆರಿಕಾ ಸರ್ಕಾರ ಬಿಡುಗಡೆ ಮಾಡಿದ ವರದಿ (Military Document) ಹೀಗಿದೆ: “ಒಂದರ್ಥದಲ್ಲಿ ಭಾರತ ತಾಲಿಬಾನ್ ಮತ್ತು ಪಾಕ್ ಪ್ರಚೋದಿತ ಭಯೋತ್ಪಾದಕರಿಂದ ಅಮೆರಿಕಾವನ್ನು ರಕ್ಷಿಸುತ್ತಿದೆ. ಪಾಕಿಸ್ತಾನ ಮತ್ತು ಆಫ್ಘನ್ ನೆಲದಲ್ಲಿ ತಯಾರಾದ ಭಯೋತ್ಪಾದಕರಲ್ಲಿ ಬಹುತೇಕ ಯುವಕರು ಕಾಶ್ಮೀರ ಪ್ರವೇಶಿಸುತ್ತಾರೆ, ಇಲ್ಲವೇ ಭಾರತವನ್ನು ಕಾಡಲಾರಂಭಿಸುತ್ತಾರೆ. ಅಮೆರಿಕಾ ಮತ್ತು ಪಶ್ಚಿಮ ರಾಷ್ಟ್ರಗಳ ಬಗ್ಗೆ ಇರುವ ಅವರ ಆಕ್ರೋಶಕ್ಕೆ ಭಾರತ ಬಲಿಪಶುವಾಗುತ್ತಿದೆ. ಅಂದರೆ ಭಾರತ ಅಮೆರಿಕಾದ ಪಾಲಿಗೆ ಗುರಾಣಿಯಂತಿದೆ.”

ಇದನ್ನು ವಿವರಿಸುವುದು ಅನಗತ್ಯ. ಖಲಿಸ್ತಾನ್ ಚಳವಳಿಯ ತೀವ್ರತೆಯನ್ನ ಕಂಡ ನನಗೆ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಅಷ್ಟೇನೂ ಭೀಕರವಲ್ಲ ಅನ್ನಿಸುತ್ತಿದೆ. ಭಾರತವೆಂಬ ದೇಶದ ಪ್ರೀತಿಯಲ್ಲಿ ಕರಗಿ ಹೋದ ಕಠೋರವಾದಿಗಳಾದ ಸಿಖ್ಖರು ಖಲಿಸ್ತಾನವನ್ನ ಮರೆತೇ ಬಿಟ್ಟರು. ಶತಶತಮಾನಗಳಿಂದ ಭಾರತಾಂಬೆಯ ಮಮತೆಯಲ್ಲಿ ಮಿಂದ ಕಾಶ್ಮೀರಿಗಳು `ಆಜಾದಿ ಕಾಶ್ಮೀರ’ವನ್ನು ಮರೆಯದಿರಲಾರರೇ.

‍ಲೇಖಕರು G

13 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading