ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಅಂತಃಕರಣ ತಟ್ಟಿದ ಒಂದು ಎಸ್ಸೆಮ್ಮೆಸ್

On winter nights

when my father

went to work, I

carried a lantern

to light his way

Today I saw a

person through my

window standing

in the dark. He is

cold and sad,

Looking at my

lighted window

and cosy home

It is a terrible

scene

*

ಈಚೆಗೆ ಅನಿವಾರ್ಯವಾಗಿ ನಾನೊಂದು ಸೆಲ್ ಫೋನ್ ತೆಗೆದುಕೊಳ್ಳಲೇಬೇಕಾಯ್ತು. ಈ ಅನಿವಾರ್ಯತೆಯ ಬಗ್ಗೆ ಮುಂದೆ ಎಂದಾದರೂ ಹೇಳುತ್ತೇನೆ. ಆ ಮೊಬೈಲ್ನಲ್ಲಿ ಬಂದು ನನ್ನ ಅಂತಃಕರಣವನ್ನು ಗಾಢವಾಗಿ ತಟ್ಟಿದ ಎಸ್ಎಂಎಸ್ ಇದು. ಇದನ್ನ ಕಳುಹಿಸಿದವರು ನನ್ನ ಸಹಪಾಠಿ-ಸ್ನೇಹಿತೆ ಎಂ.ಆರ್. ಕಮಲ. ಸ್ವಯಂ ಕವಿಯಾದ ಅವರಿಗೆ ಕಾವ್ಯದ ಹುಚ್ಚು. ಆಗಾಗ ಅವರು ಓದಿದ ಕಾವ್ಯದ ಸಾಲುಗಳನ್ನು ನನಗೆ ಎಸ್ಎಂಎಸ್ ಮಾಡುತ್ತಾರೆ. ನಿಜ ಹೇಳಬೇಕೆಂದರೆ ನಾನು ಅಂಥ ಕಾವ್ಯ ಪ್ರೇಮಿ ಏನಲ್ಲ. ನನ್ನ ಮೊದಲ ಪ್ರಬಂಧ ಸಂಕಲನ `ಆ ಕ್ಷಣದ ಸತ್ಯ’ ಓದಿದವರು ಇಂದಿಗೂ ನಾನೊಬ್ಬ ಅತ್ಯುಗ್ರ ಕಾವ್ಯ ಪ್ರೇಮಿ ಎಂದೇ ನಂಬಿದ್ದಾರೆ. ಆ ಕ್ಷಣದ ಸತ್ಯಕ್ಕೆ ಮುನ್ನುಡಿ ಬರೆದ ನನ್ನ ಪ್ರಿಯ ಮೇಷ್ಟ್ರು ಕಿರಂ ನಾಗರಾಜ್ “ಕಾವ್ಯ (ಕನ್ನಡ ಕವಿತೆಗಳು, ಇಂಗ್ಲಿಷ್ ರೊಮ್ಯಾಂಟಿಕ್ ಕವಿತೆಗಳು, ನೆರೂಡಾ ಇತ್ಯಾದಿ) ಚಂದ್ರಶೇಖರ ಆಲೂರು ಅವರ ಹೃದಯಸ್ಥ ಭಾಗವಾಗಿದೆ. ಅವರಿಗೆ ಬೇಕೆನಿಸಿದಾಗ ಅಲ್ಲಾ ಉದ್ದೀನನ ಅದ್ಭುತ ದೀಪದಂತೆ ಕಾವ್ಯ ಭಾಗಗಳು ನೆರವಿಗೆ ಬರುತ್ತವೆ…” ಮುಂತಾಗಿ ಬರೆದಿದ್ದರು. ನಿಜ ಹೇಳಬೇಕೆಂದರೆ ನಾನು ಅಷ್ಟಾಗಿ ಕಾವ್ಯವನ್ನು ಓದಿಕೊಂಡವನಲ್ಲ. ಇಂದಿಗೂ ಗದ್ಯದ ಓದಿಗೇ ನನ್ನ ಮೊದಲ ಆದ್ಯತೆ. ಅದಿರಲಿ, ಕಮಲ ಕಳುಹಿಸಿದ ಸಾಲುಗಳನ್ನು ಮತ್ತೊಮ್ಮೆ ಗಮನಿಸಿ. ಆಕೆ ಕವಿಯಾದ್ದರಿಂದ ಆ ಕ್ಷಣದಲ್ಲಿ ಕಂಡದ್ದನ್ನ ಹರಳುಗಟ್ಟಿದಂತೆ ಎಷ್ಟೊಂದು ಸಾಂದ್ರವಾಗಿ ನಿರೂಪಿಸಿದ್ದಾರೆ. ಅದೊಂದು ಸುಂದರ ಕವನದಂತೆಯೇ ಕಾಣುವುದಿಲ್ಲವೇ. ಚಳಿಗಾಲದ ರಾತ್ರಿಯಲ್ಲಿ ಅಚಾನಕ್ಕಾಗಿ ಮನೆಯ ಕಿಟಕಿಯಲ್ಲಿ ಕಂಡ ದೃಶ್ಯ ಅವರ ಮನ ಕಲಕಿದೆ. ಚಳಿಯಲ್ಲಿ ಮುದುಡಿ ನಿಂತಿದ್ದ ವ್ಯಕ್ತಿಯನ್ನು ಕಂಡಾಗ ಆದ ವ್ಯಥೆ ಈ ಎಸ್ಎಂಎಸ್ ಸಾಲುಗಳಲ್ಲಿವೆ.

ಬ್ರಾಹ್ಮಣರಾದರೂ, ಶಾನುಭೋಗರಾದರೂ ಅಪ್ಪಟ ರೈತರಾಗಿದ್ದ ಅವರ ತಂದೆ ನನಗೂ ಸುಪರಿಚಿತರು. ಸ್ವಂತ ಮೆಹನತ್ತಿನಿಂದ ಬಹುದೊಡ್ಡ ತೆಂಗಿನ ತೋಟವನ್ನು ಬೆಳೆಸಿದವರು ಅವರು. ಚಳಿಗಾಲದ ರಾತ್ರಿಗಳಲ್ಲಿ ತೆಂಗಿನ ತೋಟಕ್ಕೋ, ಶೇಂಗಾ ಬಿತ್ತಿದ ಹೊಲಕ್ಕೋ ಹೋದಾಗ ಕಮಲ ಒಂದು ಲಾಟೀನು ಹಿಡಿದು ಅವರ ಮುಂದೆ ನಡೆದಿರಬಹುದು- I carried a lantern to light his way. ಆದರೆ ಕಿಟಕಿಯಲ್ಲಿ, ಚಳಿಯಲ್ಲಿ ನಿಂತ ವ್ಯಕ್ತಿಯನ್ನು ಕಂಡಾಗ ಆಕೆಯಲ್ಲಿ ಅವರ ತಂದೆಯ ನೆನಪು ಯಾಕೆ ಸ್ಫುರಿಸಿತೋ ತಿಳಿಯದು.

ಕಮಲ ಅವರ ಕವನದಂತಿರುವ ಎಸ್ಎಂಎಸ್ ಸಾಲುಗಳು ಅಥವಾ ನುಡಿಗಟ್ಟುಗಳು ನನ್ನ ಹೃದಯದವನ್ನು ಕಲಕಿ ಎರಡು ದೃಶ್ಯಗಳನ್ನ ನನ್ನ ಕಣ್ಣ ಮುಂದೆ ತಂದವು :

ದೃಶ್ಯ 1 : ಕಪ್ಪು ವುಲನ್ ಸೂಟ್ ಧರಿಸಿದ್ದ ನನ್ನ ತಂದೆಯವರನ್ನು ನಾನು ಮುಂದೆ ಲ್ಯಾಂಟರ್ನ್ ಹಿಡಿದುಕೊಂಡು ಕೊಡಗನೂರು ರೈಲ್ವೆ ಸ್ಟೇಷನ್ನಿಂದ ಎರಡು ಫರ್ಲಾಂಗ್ ದೂರವಿದ್ದ ಮನೆಗೆ ಕರೆದುಕೊಂಡು ಬರುತ್ತಿದ್ದುದು.

ದೃಶ್ಯ 2 : ಚಳಿಗಾಲದ ರಾತ್ರಿಗಳಲ್ಲಿ ಪಂಚೆ ಎತ್ತಿ ಕಟ್ಟಿ ಗದ್ದೆಗೆ ನೀರು ಹಾಯಿಸಲೆಂದು ಹೊರಟ 60-62ರ ತಂದೆಯವರ ಮುಂದೆ ಲುಂಗಿ ಎತ್ತಿ ಕಟ್ಟಿದ ನಾನು ಲಾಟೀನು ಹಿಡಿದು ದೊಡ್ಡ ಹೆಜ್ಜೆ ಹಾಕುತ್ತಾ ನಡೆಯುತ್ತಿದ್ದುದು.

ನಮ್ಮ ತಂದೆ ರೈಲ್ವೆ ಸ್ಟೇಷನ್ ಮಾಸ್ಟರಾಗಿದ್ದ ವಿಷಯ ನಿಮಗೆ ತಿಳಿದೇ ಇದೆ. ಒಂದೆರಡು ಊರುಗಳಲ್ಲಿ ಮನೆ ಸ್ಟೇಷನ್ನಿಂದ ಒಂದೆರಡು ಫರ್ಲಾಂಗ್ ದೂರದಲ್ಲಿರುತ್ತಿತ್ತು. ರಾತ್ರಿ ಹತ್ತರ ಸಮಯದಲ್ಲಿ ಡ್ಯೂಟಿ ಮುಗಿದಾಗ ಅವರು ಮನೆಗೆ ಬರಬೇಕಾದರೆ ಯಾರಾದರೂ ಪಾಯಿಂಟ್ಸ್ಮನ್ ಲ್ಯಾಂಪ್ ಹಿಡಿದು ಬಂದು ಅವರನ್ನು ಮನೆಗೆ ಬಿಟ್ಟು ಹೋಗಬೇಕಿತ್ತು. ನಮ್ಮ ತಂದೆಯವರು ಇದನ್ನು ಇಷ್ಟಪಡುತ್ತಿರಲಿಲ್ಲ. ಆಗ ಟಾರ್ಚ್ ಗಳಿದ್ದರೂ ಅದೊಂದು ಬಗೆಯಲ್ಲಿ ಲಕ್ಝುರಿಯೇ. ಈ ಕಾರಣದಿಂದ ನಾನು ನನ್ನ ತಂಗಿಯೊಂದಿಗೆ ಲ್ಯಾಂಟರ್ನ್ ಹಿಡಿದು ನನ್ನ ತಂದೆಯವರನ್ನು ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದೆ. ಆಗ ಅವರು ಸುಮ್ಮನೆ ನಡೆದು ಬರುತ್ತಿರಲಿಲ್ಲ. ಯಾವುದಾದರೂ ಕತೆ ಹೇಳುತ್ತಿದ್ದರು ಅಥವಾ ಸರಳವಾದ ಲೆಕ್ಕವನ್ನು ಹೇಳಿ ಚಕ್ಕೆಂದು ಬಿಡಿಸಲು ಹೇಳುತ್ತಿದ್ದರು. ಲೆಕ್ಕ ತಪ್ಪಾದರೆ `ಥೂ ದಡ್ಡ ಬಡ್ಡೆತ್ತದೆ’ ಎಂದು ಬೈದು ಲೆಕ್ಕವನ್ನು ವಿಷದವಾಗಿ ವಿವರಿಸಿ ಬಿಡಿಸುತ್ತಿದ್ದರು. ಆಗಾಗ್ಗೆ ಲಭಿಸುತ್ತಿದ್ದ ಆ 8-10 ನಿಮಿಷದ ತಂದೆಯವರೊಂದಿಗಿನ ಸಾಮೀಪ್ಯ ಎಂದೂ ಮರೆಯದ ಕ್ಷಣ.

ನಮ್ಮ ತಂದೆಯವರು ಸ್ಟೇಷನ್ ಮಾಸ್ಟರರಾಗಿದ್ದರೂ, ವುಲನ್ ಸೂಟ್ ಹಾಕುತ್ತಿದ್ದರೂ ಅವರು ನಿವೃತ್ತರಾಗಿ ಊರಿಗೆ ಬಂದು ನೆಲೆಸಿದಾಗ ನಮ್ಮದು ತೀರಾ ಸಾಧಾರಣ ರೈತ ಕುಟುಂಬದಂತಾಯ್ತು. ಬಹುಕಾಲ ಅವಿಭಕ್ತ ಕುಟುಂಬವೊಂದನ್ನು ಸಲಹಿದ್ದರಿಂದ ತಂದೆ ಬರಿಗೈಯಾಗಿದ್ದರು. ಕಿರಿದಾದ ಮನೆಯೊಂದರಲ್ಲಿ ನಮ್ಮ ಇಬ್ಬರು ಚಿಕ್ಕಪ್ಪಂದಿರ ಕುಟುಂಬದೊಂದಿಗೆ ನಾವು ನೆಲೆಸಬೇಕಾಯ್ತು. ಅಲ್ಲಿದ್ದುಕೊಂಡೇ ಅಪ್ಪ ಮನೆ ಕಟ್ಟಿಸಿದರು. ನೆಲಕ್ಕೆ, ಗೋಡೆಗೆ ಗಾರೆ ಕಾಣುವ ಮುನ್ನವೇ ನಾವು ನಮ್ಮ ಹೊಸಮನೆ ಸೇರಿದೆವು. ಆ ಮನೆ ಗಾರೆ-ಸುಣ್ಣ ಕಾಣಬೇಕಾದರೆ ಒಂದು ದಶಕವೇ ಆಯ್ತು. ನನ್ನ ಸೋದರಿಯರು ಹಳ್ಳಿಯ ಇತರ ಹೆಣ್ಣು ಮಕ್ಕಳಂತೆ ಅಥವಾ ಅವರಿಗೂ ಮಿಗಿಲಾಗಿ ದುಡಿಯುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ಹಿಪ್ಪುನೇರಳೆ ಸೊಪ್ಪು ಬಿಡಿಸಿ ತಂದು ರೇಷ್ಮೆ ಹುಳುಗಳಿಗೆ ಮೇವು ಹಾಕಿ, ನಂತರ ಶಾಲೆ-ಕಾಲೇಜುಗಳಿಗೆ ಹೊಳೆ ದಾಟಿಕೊಂಡು ಹೋಗಬೇಕಿತ್ತು.

ಎಷ್ಟೆಲ್ಲ ದೈಹಿಕ-ಮಾನಸಿಕ ಪರಿಶ್ರಮವಿದ್ದರೂ ಆಗ ನಮ್ಮ ಮನೆಯಲ್ಲಿ ನೆಲೆಸಿದ್ದ ನೆಮ್ಮದಿ-ಶಾಂತಿ-ಸಂಭ್ರಮವನ್ನು ನೆನಪಿಸಿಕೊಂಡರೆ ಈಗಲೂ ಹೃದಯ ತುಂಬಿ ಬರುತ್ತದೆ. “ನಿಮ್ಮ ಅಪ್ಪ ಮೈಸೂರಲ್ಲೋ ಬೆಂಗಳೂರಲ್ಲೋ ಮನೆ, ಸೈಟು ಮಾಡಬಹುದಿತ್ತು. ಕಡೇ ಪಕ್ಷ ಮದ್ದೂರಿನಲ್ಲಿಯಾದರೂ ಮನೆ ಮಾಡಿ ನಿಮ್ಮನ್ನ ಓದಿಸಬಹುದಿತ್ತು. ಜವಾನರಾಗಿದ್ದವರೇ ಬೇಕಾದಂಗೆ ಮಾಡಿದ್ದಾರೆ, ಊರಿಗೆ ಯಾರೂ ಬರಲೇ ಇಲ್ಲ…” ಮುಂತಾಗಿ ಮನೆಗೆ ಬಂದ ನೆಂಟರಿಷ್ಟರೆಲ್ಲ ಹೇಳುತ್ತಿದ್ದರು. ಆದರೆ ಇಂಥ ಮಾತುಗಳ್ಯಾಕೋ ನಮ್ಮ ಮನದೊಳಗೆ ಇಳಿಯುತ್ತಲೇ ಇರಲಿಲ್ಲ. ಯಾಕೆಂದರೆ ನಮಗೆ ಏನಾದರೂ ಕೊರತೆ ಇದೆ ಅನ್ನಿಸುತ್ತಲೇ ಇರಲಿಲ್ಲ. ಸೇತುವೆ ಇರದಿದ್ದ ಹೊಳೆ ಹಾಯ್ದುಕೊಂಡು ಓದಿದ ನನ್ನ ಸೋದರಿಯರೆಲ್ಲ ಡಬಲ್ ಗ್ರಾಜುಯೇಟ್ಗಳಾದರು… ಇದೆಲ್ಲಕ್ಕೂ ಮಿಗಿಲಾಗಿ ಶನಿವಾರ ಭಾನುವಾರಗಳಂದು ನಮ್ಮ ಸಗಣಿ ನೆಲದ ಮೇಲೆಯೇ ಹನ್ನೆರಡು ಮನೆ ಚೌಕಾಬಾರ ಬರೆದು ಆಡುತ್ತಿದ್ದುದು, ಅಳಿಗುಳಿ ಮನೆ ಆಟ ಆಡಿ ನಲಿಯುತ್ತಿದ್ದುದು… ಆ ಖುಷಿ, ಸಂಭ್ರಮ, ನಗು ಈಗಲೂ ನನ್ನ ಕಣ್ಣ ಮುಂದಿದೆ.

ನನ್ನ ಮನದ ಮುಂದೆ ಮೂಡಿದ ಎರಡನೆಯ ದೃಶ್ಯ ಈ ನೆನಪುಗಳಿಗೆ ಕಾರಣ! ನಾಲೆಯ ಕಡೆಯ ಗದ್ದೆಗಳಿಗೆ ಬೆಳೆಯ ಅಂತಿಮ ಘಟ್ಟದಲ್ಲಿ ನೀರು ಸಿಕ್ಕುವುದು ಕಷ್ಟ. ಕೊರೆವ ಚಳಿಯಲ್ಲಿ, ಸರಿ ರಾತ್ರಿಯಲ್ಲಿ ಹೋಗಿ ನೀರು ದಕ್ಕಿಸಿಕೊಳ್ಳಬೇಕು. ಇಂಥ ಚಳಿಗಾಲದ ರಾತ್ರಿಗಳಲ್ಲಿ ನೀರು ಹಾಯಿಸಲು ಹೋಗುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ನಾನು ಹೊರಟಾಗಲೆಲ್ಲ ಅಪ್ಪ ನನ್ನೊಬ್ಬನನ್ನೇ ಎಂದೂ ಕಳಿಸುತ್ತಿರಲಿಲ್ಲ. ಆಗ ತಂದೆಯವರಿಗೆ 60-62ರ ಇಳಿವಯಸ್ಸು. ನಾನು ಎಷ್ಟೇ ಹೇಳಿದರೂ ಕೇಳುತ್ತಿರಲಿಲ್ಲ. ನೀನು ಸುಮ್ಮನೆ ಲ್ಯಾಂಟರ್ನ್ ಹಿಡಕೊಂಡು ಹೊರಡೋ ಎಂದು ಗದರುತ್ತಾ ಹಿಂದೆ ಬರುತ್ತಿದ್ದರು. ಬಹುಶಃ ಮೂರ್ಛೆ ಖಾಯಿಲೆ ನನ್ನನ್ನು ಇನ್ನೂ ಕಾಡುತ್ತಿದ್ದುದು ಇದಕ್ಕೆ ಕಾರಣವಿರಬಹುದು. “ಈ ರಾತ್ರೀಲಿ ಎಂಥ ಫ್ಯಾಷನ್… ತಲೆಗೆ ಟವೆಲ್ಲೋ ಮಫ್ಲರ್ರೋ ಸುತ್ತಿಕೊಂಡು ಬರೊಕ್ಕೆ ಆಗಲ್ಲವಾ” ಎಂದು ರೇಗಿ ತಮ್ಮ ಮಫ್ಲರ್ ಕೊಡಲು ಬರುತ್ತಿದ್ದರು. ಆಗ ನಾನು ಧೈರ್ಯ ತಾಳಿ “ಸುಮ್ಮನೆ ನಡೀರಪ್ಪಾ” ಎಂದು ಗದರುತ್ತಿದ್ದೆ!

ನಾನು ಪುಟ್ಟ ಬಾಲಕನಾಗಿದ್ದಾಗ ಕಥೆ ಹೇಳುತ್ತಿದ್ದಂತೆ, ಲೆಕ್ಕ ಬಿಡಿಸಲು ಹೇಳುತ್ತಿದ್ದಂತೆ ಈಗಲೂ ಅಪ್ಪ ಏನಾದರೂ ವಿವರಿಸುತ್ತಿದ್ದರು. ಅಮೆರಿಕಾ, ರಷ್ಯಾ, ಪಾಕಿಸ್ತಾನ… ಇಂದಿರಾಗಾಂಧಿ ಈ ಮಾತುಕತೆಯಲ್ಲಿ ಬರುತ್ತಿದ್ದರು.

ಈ ನೆನಪು ಎಷ್ಟು ಮಧುರ. ಇದರಲ್ಲಿ ಅಂದು ಅನುಭವಿಸಿದ ಕರುಳು ಕೊರೆವ ಚಳಿ ಇಲ್ಲ.

ಮನದ ಮುಂದೆ ಎರಡು ವಿಭಿನ್ನ ದೃಶ್ಯಗಳನ್ನು ಮೂಡಿಸಿ, ಅದರೊಂದಿಗೆ ನೆನಪಿನ ಬುತ್ತಿಯನ್ನು ತೆರೆಸಿದ ಎಸ್ಎಂಎಸ್ ಗೆ ಕೃತಜ್ಞತೆ ಹೇಳುತ್ತಾ ಕಮಲ ಕಿಟಕಿಯಲ್ಲಿ ಕಂಡ ವ್ಯಕ್ತಿಗೆ, ಅಂಥ ನೂರಾರು ಸಾವಿರಾರು ಜನರಿಗೆ ಎಂಥ ಕಡು ಚಳಿಯನ್ನೂ ತಾಳಿಕೊಳ್ಳುವ ಶಕ್ತಿ ಬರಲೆಂದು, ಆಸರೆ ಸಿಕ್ಕಲೆಂದು ಆಶಿಸುತ್ತೇನೆ.

‍ಲೇಖಕರು G

23 April, 2011

6 Comments

  1. kmmahesha

    ನಿಮಗೆ ಒಂದು ಎಸ.ಎಂ.ಎಸ. ನಿoದ ಎರಡು ಘಟನೆ ಜ್ಞಾಪಕಕ್ಕೆ ಬಂದರೆ, ನನಗೆ ನಿಮ್ಮ ಬರಹ ಓದಿದಮೇಲೆ ನನ್ನ ಅವ್ವ ಅಪ್ಪನ ಹಲವಾರು ಘಟನೆ ಗಳು ಈ ಬಾನುವಾರದ ತುಂಭಾ ನೆನೆಸಿ ಕೊಳ್ಳುವಂತೆ ಮಾಡಿದ್ದಕ್ಕೆ ವಂದನೆಗಳು….. ಮಂಡ್ಯ ಮಹೇಶ.

    • Akarsha

      intha manatattuvantaha paripoornavaada baalya nanagirallilla embude manadaalada dukha. I have to find my own light

  2. Anasuya M.R.

    Alur ankana namma anthakaranadalli bahala apthavagi uliuttade.

  3. bharathi

    nenapugalu garigedarodikke ond sanna nepa saaku alvaa? kushi aaythu odi …

  4. chandrualur

    thanks

  5. swamy

    sir thanku nanu kannada blog nodidde ewag istu artapoornawagi ,manassige ssamadana koduwanta article bardiddira .nange bahala kushi agide thanku sir….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading