ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರವಂಶದ ದೀಪದಡಿ ಅವಳ ಬೇಗುದಿಯ ಕತ್ತಲೆ!

chetana2.jpg“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ಮುಸ್ಸಂಜೆಯ ಹೊಸ್ತಿಲಲ್ಲಿ ಕುಳಿತಿದ್ದಳು ಮಮತಾ.
ದೇವತೆಗಳ ಸುಪಾರಿ ಹಿಡಿದ ಮದನ ಹೂಬಾಣ ಬಿಟ್ಟು ಸುತ್ತಮುತ್ತಲೆಲ್ಲ ಸೊಗಸಾಗಿಸಿದ್ದ.
ಮೈದುನನೆದುರು ಮಂಕಾಗಿಹೋಗಿದ್ದ ತನ್ನ ಪತಿಯನ್ನು ನೆನೆದು ಕೊರಗುತ್ತಿದ್ದವಳಿಗೆ ಸುತ್ತಲಿನ ಯಾವುದೂ ಮನ ಹೊಕ್ಕಲೇ ಇಲ್ಲ. ತನ್ನ ತಮ್ಮ ಹೇಳಿದ ಯಾವುದನ್ನೂ ಒಲ್ಲೆ ಅನ್ನುವ ಸ್ಥಿತಿಯಲ್ಲಿರಲೇ ಇಲ್ಲ ಆತ. ಹಾಗಂತಲೇ ಅಂವ ತನ್ನ ಪಾಲಿನ ಕೆಲಸ ಮುಗಿಸಿ ಎಲ್ಲೋ ಕಮಂಡಲು ಹಿಡಿದು ಹೊರಟುಹೋಗಿದ್ದ.

ide.jpg

ಇಲ್ಲೀಗ ಒಂಟಿ ಹೆಣ್ಣು ಗೌರವವಿಲ್ಲದ ಗಂಡನಿಗಾಗಿ ಮರುಗುತ್ತ ನಿಯತಿಯ ಆದೇಶಕ್ಕೆ ಮಣಿದು ಕುಂತಿದ್ದಳು. ಇನ್ನೇನು, ಮೈದುನ ಬರುವ ಹೊತ್ತು… ದೇವ ಗುರು ಬೃಹಸ್ಪತಿ ಬರುವ ಹೊತ್ತು!

* * *

“ಒಂದೇ ಕ್ಷೇತ್ರದಲ್ಲಿ ಎರಡು ಬೀಜ ಬಿತ್ತಬೇಕು. ತಳಿ ವೈವಿಧ್ಯವಿಲ್ಲವಾದರೆ ಗುಣಮಟ್ಟ ಕಾಯೋದು ಕಷ್ಟ!”
ಋಷಿ ಗಣ ಬಿಸಿಬಿಸಿ ಚರ್ಚೆಯ ನಂತರ ಒಕ್ಕೊರಲಿನಿಂದ ಘೋಷಿಸಿತು. ಅದಾಗಲೇ ಮಾನವ ಜಾತಿ ಸಾಮಾಜಿಕ ಕಟ್ಟುಪಾಡಿಗೆ ಬಿದ್ದು ಚೌಕಟ್ಟಿನೊಳಗೆ ಸಂಕುಚಿತವಾಗುತ್ತ, ಸತ್ತ್ವಹೀನವಾಗುತ್ತ ಸಾಗುತ್ತಿತ್ತು. ಹಾಗೆಂದೇ ಸೃಷ್ಟಿಯ ಹೊಣೆ ಹೊತ್ತಿದ್ದ ದೇವತೆಗಳು, ಋಷಿಗಳು ಸಭೆ ನಡೆಸಿದ್ದರು.

ಕಶ್ಯಪ ಹೇಳಿದ. “ಅದಾಗಲೇ ಅಂಥ ಪ್ರಯತ್ನ ಶುರುವಿಟ್ಟಿದ್ದೇವೆ. ಸಾಕಷ್ಟು ಮಾಡಿಯೂ ಇದ್ದೇವೆ. ಈಗ ಬೇರೆಯೇ ಬಗೆಯ ಪ್ರಯೋಗ ನಡೆಯಲಿ”
ಪ್ರಜಾಪತಿಯ ಇಂಗಿತ ಯಾರಿಗೂ ಅರ್ಥವಾಗಲಿಲ್ಲ. ಹಾಗೆ ತರ್ಕ ಮಾಡುತ್ತ ಕೂರಲು ಅವರಿಗೆ ಪುರುಸೊತ್ತೂ ಇರಲಿಲ್ಲ.
ಚಂದ್ರವಂಶದ ರಾಜ ಭರತ, ಮಕ್ಕಳಿಲ್ಲದೆ ಬರಡಾಗಿದ್ದ. ಅವನಿಗೊಂದು ಬಲಿಷ್ಠ ಸಂತಾನ ಹೊಂಚುವ ತುರ್ತು ದೇವತೆಗಳಿಗಿತ್ತು.
ಕಶ್ಯಪ ನಕ್ಕ. “ಎರಡು ಬೀಜಗಳ ಕಸಿ ಮಾಡಿ ಒಂದೇ ಬೆಳೆ ತೆಗೆಯಲು ಪ್ರಯತ್ನಿಸಿ! ಚಂದ್ರ ವಂಶ ಬಹುಕಾಲ ಬಾಳಬೇಕಿದೆ. ಹೊಸ ಬೆಳೆ ಸಾಕಷ್ಟು ಸಂಪನ್ನವಾಗಿರುವುದು ಅನಿವಾರ್ಯ.”

* * *

ಅದಾಗಲೇ ಚಿಕ್ಕಿ ಮೂಡಿತ್ತು. ಕಾಮನ ಸಾಹಸ ವ್ಯರ್ಥವಾಗುವಂತೆಯೇ ಇರಲಿಲ್ಲ.
ಮಮತಾಳಿಗೆ ಈಗ ಅರೆ ಎಚ್ಚರ. ಸಂಜೆಗೆ ಮುನ್ನ ಮುದ್ದಿಸಿ, ಒಡಲುಕ್ಕಿಸಿ ಹೋದ ಗಂಡನ ನೆನಪಿನ ಉನ್ಮಾದ.
ಇನ್ನೂ ಗುಂಗು ಹರಿದಿರಲಿಲ್ಲ. ಬೃಹಸ್ಪತಿಯೂ ರತಿಯನ್ನು ಭೆಟ್ಟಿಯಾಗಿಯೇ ಬಂದಿದ್ದ. ಅಂವ ಬಂದಿದ್ದು ಮಮತೆಗೆ ತಿಳಿಯಲಿಲ್ಲ.
ಅಥವಾ… ಬೇಕೆಂದೇ ತಿಳಿವುಗೇಡಿಯಾಗುವುದೂ ಹೆಣ್ಣಿಗೆ ಗೊತ್ತು!
ಪ್ರಯೋಗ ಪಾತ್ರೆಯಾದಳು ಮಮತಾ. ಬೃಹಸ್ಪತಿ ತನ್ನ ಕೆಲಸ ಶುರುವಿಟ್ಟ.

* * *

ಇದೀಗ ಹೊಸ ಬೆಳಗು.
ಮಮತಾ ಮಗ್ಗಲು ಬದಲಿಸುವ ಹೊತ್ತಿಗೆ, ಬೃಹಸ್ಪತಿ ಜನಿವಾರ ಬದಲಿಸುತ್ತಿದ್ದ.
ಪ್ರಯೋಗ ಯಶಸ್ವಿಯಾಗಿತ್ತು.

ಸಣ್ಣಗೆ ಚೀರಿದಳು ಮಮತಾ. ಕಾಮನ ಕರಾಮತ್ತು ಕರಗಿತ್ತು. ಹೊಟ್ಟೆಯಲ್ಲಿ ಹಾದರದ ಮುದ್ದೆ!
ರೋಷದಿಂದ ಹೊಟ್ಟೆ ಹಿಸುಕಿ ಹಿಸುಕಿ ಅತ್ತಳು. ಗೌರವವೇ ಇಲ್ಲದ ತನ್ನ ಪತಿಯ ಪಾಡು ಇನ್ನು ಏನಾಗಬೇಡ?
ಅವಡುಗಚ್ಚಿ ಗುದ್ದಿಕೊಂಡಳು.
ಅದೆಲ್ಲಿದ್ದರೋ ಮರುತರು. ಓಡೋಡಿ ಬಂದು ಅವಳನ್ನು ತಡೆದರು.
“ಮೂಢೇ! ಭರ ದ್ವಾಜಮ್”*೧
ಕಷ್ಟಪಟ್ಟು ಮಾಡಿದ ಪ್ರಯೋಗ…! ಮೂರ್ಖಳೇ, ಹಾಳು ಮಾಡಬೇಡ!!

* * *

ಒಂಭತ್ತು ತಿಂಗಳು….ಅಸಹನೆಯಲ್ಲೇ ನೂಕಿದಳು.
ಭರದ್ವಾಜನನ್ನು ಹೆತ್ತು, ಅಲ್ಲೇ ಬಿಸುಟು ನಡೆದಳು. ದಾಕ್ಷಿಣ್ಯದ ಬಸಿರು. ಮಮತಾಳ ಮಮತೆ ಬತ್ತಿ ಹೋಗಿತ್ತು.
“ಮಗುವನ್ನು ಮನೆಗೊಯ್ದರೆ ತಾರಾ ಸಿಡುಕುತ್ತಾಳೆ!” ಬೃಹಸ್ಪತಿ ಅಳುಕಿದ.
ಮರುತರು ಮಗುವನ್ನು ಹೊತ್ತೊಯ್ದು ಭರತನ ಕೈಲಿತ್ತರು.
ನಿರಾಶನಾಗಿದ್ದ ಭರತ ಮಗುವನ್ನು ಸ್ವೀಕರಿಸಿ ವಿತಥ*೨ ಎಂದೇ ಕರೆದ.
 
ಪ್ರಯೋಗ ಫಲ ವಿತಥ, ಭರತನ ಸಂತಾನವಾಗಿ ಕುಲದೀಪಕನಾದ.
ಪ್ರಯೋಗ ನಡೆಸಿದ ಬೃಹಸ್ಪತಿಯನ್ನು ದೇವ- ಋಷಿಗಳು ಕೊಂಡಾಡಿದರು.
ಮಮತಾ ಮಾತ್ರ ದೊಡ್ಡವರ ಗುಡಾಣ ತುಂಬುವ ಭರದಲ್ಲಿ ತಾನು ಪ್ರಯೋಗಪಶುವಾದಳು…
ಗಂಡನಿಂದಲೂ ದೂರಾಗಿ ಕಾಡುಪಾಲಾದಳು. ಚಂದ್ರವಂಶದ ಹೆಸರುಳಿಸಿ, ತಾನು ಹೇಳಹೆಸರಿಲ್ಲವಾಗಿಹೋದಳು.

—————————

*೧ ಭರ= ಕಾಪಾಡು; ದ್ವಾಜಮ್= ಇಬ್ಬರಿಂದ ಹುಟ್ಟಿದವನನ್ನು
*೨ ವಿತಥ= ನಿರಾಶೆಯ ಸನ್ನಿವೇಶದಲ್ಲಿ ಸ್ವೀಕರಿಸಲ್ಪಟ್ಟವನು

‍ಲೇಖಕರು avadhi

8 January, 2008

2 Comments

  1. Malathi S

    Intense.
    malathi S

  2. ನಾ.ಸೋಮೇಶ್ವರ

    ಇಂತಹ ನಿಯೋಗ ಕಥೆಗಳೇ ಭೈರಪ್ಪನವರ ‘ಪರ್ವ‘ ಕಾದಂಬರಿಗೆ
    ಮೂಲವಾಗಿರಬಹುದು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading