ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಘಾಚರ್ ಘೋಚರ್' ಮತ್ತು 'ಕ್ರ್ವಾಕ್'

ಪೂರ್ಣ ಓದಿಗೆ ಭೇಟಿ ಕೊಡಿ

chukkubukku.com

ಕೆ ವಿ ತಿರುಮಲೇಶ್: ನಿಮ್ಮ ‘ಘಾಚರ್ ಘೋಚರ್’ ಕತೆಯಲ್ಲಿ ಈ ವಿಚಿತ್ರ ಪದಗಳು ಹೇಗೆ ಜನನಕ್ಕೆ ಬಂದುವು ಎನ್ನುವುದಕ್ಕೆ ಒಂದು ವಿವರಣೆಯೇನೋ ಇದೆ. ಆದರೆ ಕತೆಗಾರರಾಗಿ ನಿಮಗೆ ಇವು ಹೇಗೆ ಹೊಳೆದುವು?

ವಿವೇಕ ಶಾನಭಾಗ: ಕತೆಯನ್ನು ಬರೆಯುವಾಗ ನನ್ನ ಮನಸ್ಸು ಕತೆಯ ವಾತಾವರಣದಲ್ಲಿ ಸಂಪೂರ್ಣ ಅದ್ದಿ ಹೋಗಿರುತ್ತದೆ. ಹಾಗಲ್ಲದೇ ನನಗೆ ಕತೆಯ ವಿವರಗಳು ಕಾಣುವುದೇ ಇಲ್ಲ. ಇದು ಸಾಮಾನ್ಯವಾಗಿ ಎಲ್ಲ ಕತೆಗಾರರಿಗೂ ಅನ್ವಯಿಸುವ ಸಂಗತಿಯೆಂದುಕೊಂಡಿದ್ದೇನೆ. ಎಷ್ಟು ತೀವ್ರವಾಗಿ ಇದನ್ನು ಅನುಭವಿಸುತ್ತೇವೆ ಎನ್ನುವುದರ ಮೇಲೆಯೇ ಕತೆಯ ಜೀವಂತಿಕೆ ನಿಂತಿದೆ. ತೀರಾ ಜಾಣರಾದರೆ ಇದು ಸಿಗುವುದಿಲ್ಲ. ತೀರಾ ಭೋಳೆಯಾಗಿದ್ದರೂ ಇದು ಸಿಗುವುದಿಲ್ಲ. ಒಂದು ಬಗೆಯ ತಪ್ತ, ಪ್ರಾಮಾಣಿಕ ಹುಡುಕಾಟದಲ್ಲಿ, ತುಸು ಅದೃಷ್ಟದ ಬಲವಿದ್ದರೆ ಮತ್ತು ಅಪಾರ ಪರಿಶ್ರಮವಿದ್ದರೆ ಇದು ದೊರೆಯುವ ಸಾಧ್ಯತೆ ಹೆಚ್ಚು.
ಈ ಕತೆಯನ್ನು ಬರೆಯುವಾಗ ಭಾಷೆಯಲ್ಲಿ ಹಿಡಿಯಲಿಕ್ಕಾಗದ, ಎಷ್ಟು ಹೇಳಿದರೂ ಉಳಿದೇಬಿಡುವ, ಇನ್ನೊಬ್ಬರಿಗೆ ಅರ್ಥವನ್ನು ಹೇಳಿದರೂ ಪೂರ್ತಿಯಾಗಿ ತಲುಪಲಿಕ್ಕಾಗದ ಸ್ಥಿತಿಯ ಕುರಿತು ಚಿಂತಿಸುತ್ತಿದ್ದೆ. ಈ ಕತೆಯನ್ನು ನಾನು ತುಂಬ ತಳಮಳದಲ್ಲಿ ಬರೆದೆ. ಇದರ ಮುಕ್ತಾಯವೆಲ್ಲಿ ಎನ್ನುವುದು ನನಗೆ ಹೊಳೆದಿರಲಿಲ್ಲ. ಒಂದು ಮುಂಜಾನೆ ಎಚ್ಚರವಾಗುತ್ತಿದ್ದ ಹಾಗೆಯೇ ನನಗೆ ಘಾಚರ್ ಘೋಚರ್ ಎಂಬ ಶಬ್ದಗಳು ಹೊಳೆದವು. ನಾನ್‌ಸೆನ್ಸ್ ಶಬ್ದಗಳು ಮನುಷ್ಯ ತರ್ಕಕ್ಕೆ ಅತೀತವಾದದ್ದನ್ನು ಹಿಡಿಯುತ್ತವೆ. ಹೀಗೆ ಈ ಶಬ್ದಗಳು ಮನಸ್ಸನ್ನು ಆವರಿಸಿಕೊಂಡ ನಂತರವೇ ಕತೆಗೊಂದು ರೂಪವೂ ಆಕಾರವೂ ಮುಕ್ತಾಯವೂ ಒದಗಿ ಅದರ ಹಲವು ಘಟಕಗಳು ಪರಸ್ಪರ ಸಂಬಂಧ ಪಡೆದವು.
ನನಗೆ ನಿಮ್ಮ ‘ಮುಖಾಮುಖಿ’ ಸಂಕಲನದ ‘ಕ್ರ್ವಾಕ್’ ಎಂಬ ಪದ್ಯ ನೆನಪಾಗುತ್ತಿದೆ. ಈ ಕವಿತೆಯಲ್ಲಿ ಒಂದು ಶಬ್ದವೇ ಕವಿಯನ್ನು ಆರಿಸಿಕೊಳ್ಳುತ್ತದೆ! ನನ್ನ ಕತೆಯ ವಿಷಯದಲ್ಲಿಯೂ ಹೀಗೆಯೇ ಆಗಿರುವ ಸಾಧ್ಯತೆ ಕೂಡ ಇಲ್ಲದಿಲ್ಲ. ನಿಮ್ಮ ಕವಿತೆ ಹೀಗಿದೆ:

ಕ್ರ್ವಾಕ್
ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು
ಆಕ್ರಮಿಸಿದ ಶಬ್ದ: ಕ್ರ್ವಾಕ್
ದಣಿದಿದ್ದೆ. ಮಧ್ಯಾಹ್ನ ಊಟ ತಡವಾಗಿ ಮುಗಿಸಿ
ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ.
ನಿದ್ದೆಯೇನೂ ಹಿಡಿದಿರಲಿಲ್ಲ. ಮಂಪರಿನಲ್ಲೂ ಇರಲಿಲ್ಲ.
ಮನಸ್ಸಿನಲ್ಲೆ ಮೆಸ್ಸಿನ ಲೆಕ್ಕ ಕೂಡಿಸುತ್ತಿದ್ದೆ ಅಷ್ಟೆ.
ಆಗ ಹೊಕ್ಕ ಶಬ್ದ ಅದು. ಹೇಗೆಂದು ತಿಳಿಯದು.
ಮರೆಯಲು ಪ್ರಯತ್ನಿಸಿದಷ್ಟೂ ಆವರಿಸತೊಡಗಿತು.
ಯಾವ ಭಾಷೆಗೆ ಸೇರಿದ್ದೋ ನನಗೆ ಗೊತ್ತಿರಲಿಲ್ಲ.
ಜನ ಮಾತಾಡುವಾಗ ಗುಟ್ಟಾಗಿ ಕೇಳಿದೆ.
ತಿಳಿದವರನ್ನು ವಿಚಾರಿಸಿದೆ. ಹಲವು ಪುಸ್ತಕಗಳನ್ನು ನೋಡಿದೆ.
ಏನೂ ಉಪಯೋಗವಾಗಲಿಲ್ಲ ಎಂದ ಮೇಲೆ
ಇಂಥ ಶಬ್ದ ಸುಳ್ಳೆಂದುಕೊಂಡೆ. ಆದರೆ ಕ್ರ್ವಾಕ್ ಮಾತ್ರ ನಿಜವಾಗುತ್ತಿದೆ.
ಕಡಲು ಕಾಗೆಯ ಹಾಗೆ ಮತ್ತೆ ಮತ್ತೆ ಎರಗುತ್ತಿದೆ.
ಕೆಲವೊಮ್ಮೆ ನನಗೇ ತಿಳಿಯದಂತೆ ನನ್ನ ಭಾಷೆಯನ್ನು ಅದು
ಪ್ರವೇಶಿಸಿದಂತೆ ತೋರುತ್ತದೆ. ಯಾಕೆಂದರೆ
ಮಾತಿನ ಮಧ್ಯೆ ಕೆಲವರು ಕೇಳುವುದನ್ನು ಬಿಟ್ಟು ನನ್ನ
ಮುಖವನ್ನೆ ನೋಡುವುದನ್ನು ಕಂಡಿದ್ದೇನೆ.
ಇದು ಭಯಂಕರ. ಹೀಗೆ ಆರಿಸಲ್ಪಡುವುದಕ್ಕೆ
ನಾನಾದರೂ ಏನು ಮಾಡಿದ್ದೇನೆ?

‍ಲೇಖಕರು G

20 February, 2013

2 Comments

  1. sunil Rao

    a beautiful book
    ಸಣ್ಣ ಸಣ್ಣದ್ದನ್ನೂ ಚಂದವಾಗಿ ಗ್ರಹಿಕೆಗೆ ತಂದಿದ್ದಾರೆ ಲೇಖಕರು.

  2. ಉದಯಕುಮಾರ್ ಹಬ್ಬು

    ಘಾಚರ್ ಘೋಚರ್ ನನಗೆ ಬಾಲ್ಯದಲ್ಲಿ ಎಲ್ಲಿಯೋ ಕೇಳಿದ ಶಬ್ದದ ಹಾಗೆ ಕಂಡು ಬಂತು. ವ್ಯಸ್ತ ಮನಸ್ಸು, ಅಥವಾ ಅಸ್ತವ್ಯಸ್ತ ಮನಸ್ಸು ಹೀಗೆಲ್ಲಾ ಹೊಳೆಯಿತು. ಮತ್ತೆ ಓದುತ್ತಾ ಹೋದಂತೆ ಈ ಶಬ್ದ ಹಿನ್ನೆಲೆಗೆ ಸರಿತಿತು. ಬದುಕು ತೆರೆದುಕೊಳ್ಳುತ್ತ ಹೋಯಿತು. ರಿಯಲಿ ಗ್ರೇಟ್. ಉದಯಕುಮಾರ ಹಬ್ಬು, ಕಿನ್ನಿಗೋಳಿ ದ ಕ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading