ಪ್ರಸಾದ್ ರಕ್ಷಿದಿ
60 ರ ದಶಕ ನಮ್ಮಂತವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲ, ಆಗ ನಮ್ಮಲ್ಲಿಗೆ ಪತ್ರಿಕೆಗಳು ಬರುತ್ತಿರಲಿಲ್ಲ. ರೇಡಿಯೋ ಇರಲಿಲ್ಲ. ಅಂತೂ ಗ್ರಹಣದ ಸುದ್ದಿ ಎಲ್ಲರಿಗೂ ತಲುಪುತ್ತಿತ್ತು. ಚಂದ್ರ ಗ್ರಹಣವಾದರೆ ಅದೂ ಬೇಸಿಗೆಯಲ್ಲಿ ಬಂದರೆ ರಾತ್ರಿ ಜನರು ಕಾದು ನೋಡುವುದಿತ್ತು. ನಮ್ಮಪ್ಪ ಕೆಲಸ ಮಾಡುತ್ತಿದ್ದ ಕಾಫಿ ತೋಟದಲ್ಲಿ ಆಗ ಮಂಡ್ಯ ಕಡೆಯಿಂದ ಬಂದ ಕಾರ್ಮಿಕರಿದ್ದರು.. ಅವರು ಬೇಸಿಗೆಯ ರಾತ್ರಿಗಳಲ್ಲಿ ಕೋಲಾಟ ಆಡುತ್ತಿದ್ದರು.
ನಾನೂ ಅವರೊಂದಿಗೆ ಕುಣಿದು ಕೋಲಾಟ ಕಲಿತಿದ್ದೆ. ಚಂದ್ರ ಗ್ರಹಣದ ಹುಣ್ಣಿಮೆಯ ದಿನವೂ ನಾವೆಲ್ಲ ಊಟ ಮಾಡಿ, ಬೆಳದಿಂಗಳಿನಲ್ಲಿ ಕೋಲಾಟವಾಡುತ್ತ ಹೊತ್ತು ಕಳೆದೆವು ನಡುರಾತ್ರಿಯ ವೇಳೆಗೆ ಚಂದ್ರ ಗ್ರಹಣ ಬಂತು.. ಅದು ನಾನು ನೋಡಿದ ಮೊದಲ ಪೂರ್ಣ ಚಂದ್ರ ಗ್ರಹಣ…ಗ್ರಹಣ ಮುಗಿದ ನಂತರ ನಾವೆಲ್ಲ ಮನೆಗೆ ಹೋಗಿ ಮಲಗಿದೆವು..ಮರುದಿನ ಶಾಲೆಯಲ್ಲಿ ಮೇಷ್ಟ್ರರು ಯಾರೆಲ್ಲ ಗ್ರಹಣ ನೋಡಿದಿರಿ..? ಎಂದರು.
ಕೆಲವರು ನೋಡಿದ್ದರು. ಯಾರೋ ಒಬ್ಬಳು ಹುಡುಗಿ ಸಾರ್ ಗ್ರಹಣ ನೋಡಿದ್ರೆ ಕೆಟ್ಟದ್ದಾಗುತ್ತ? ಎಂದಳು.ಆಗ ಮೇಷ್ಟ್ರು ಏನೂ ಇಲ್ಲ. ಚಂದ್ರ ಗ್ರಹಣ ನೋಡಿದರೆ ಏನೂ ಆಗಲ್ಲ, ಸೂರ್ಯ ಗ್ರಹಣ ಮಾತ್ರ ಬರಿಗಣ್ಣಿಂದ ನೋಡಬೇಡಿ ಕಣ್ಣಿಗೆ ಹಾಳು. ಅಂಗಳ ದಲ್ಲಿ ಒಂದು ಬಕೆಟಲ್ಲಿ ಸೆಗಣಿ ಕದರಿಟ್ಟು ಅದರಲ್ಲಿ ನೋಡಬೇಕು. ಹಂಗಂತ ಕನ್ನಡಿಲೂ ನೋಡಬೇಡಿ ಎಂದರು.ಇನ್ನೊಬ್ಬ ಸಾ ಗ್ರಾಣ ನೋಡಿ ಸಾನ ಮಾಡಿ ಪೂಜೆ ಮಾಡಬೇಕ ? ಅಂದ.

ಗ್ರಹಣ ನೋಡಿ ಏನು ದಿನಾ ಸ್ನಾನಮಾಡಿ ದೇವರಿಗೆ ಕೈಮುಗಿಯದು ಒಳ್ಳೇದು. ಅದಕ್ಕೂ ಗ್ರಹಣಕ್ಕೂ ಸಮ್ಮಂದ ಇಲ್ಲ. ಎಂದರು.ಆ ಕಾಲದಲ್ಲಿ ಹೆಚ್ಚಿನ ಯಾರ ಮನೆಗಳಲ್ಲಿಯೂ ಗ್ರಹಣ ಕ್ಕೆ ವಿಶೇಷ ಮಹತ್ವ ಇರಲಿಲ್ಲ. ಅಮಾಸೆ, ಹುಣ್ಣಿಮೆ, ಮಳೆಗಾಲ ಚಳಿಗಾಲದಂತೆ ಅದು ಒಂದು ಪ್ರಕೃತಿ ಸಹಜ ಘಟನೆ ಅಷ್ಟೇ..ಧೂಮಕೇತು ಬಂದಾಗ ಮಾತ್ರ ಕೆಲವು ಜನ ಸ್ವಲ್ಪ ಹೆದರಿಕೊಂಡಿದ್ದರು.. ಅದೂ ನಂತರ ಕಡಿಮೆಯಾಯಿತು. ಈಗ ನಾವು ಭಾರತೀಯರಿಗೆ ಐದು ಸಾವಿರ ವರ್ಷಗಳ ಹಿಂದೆಯೇ ಗ್ರಹಣಗಳ ಬಗ್ಗೆ ತಿಳಿದಿತ್ತು ಎನ್ನುತ್ತೇವೆ.
ನಮಗೆ ಗ್ರಹಣಗಳ ಬಗ್ಗೆ ಸಮಗ್ರ ಮಾಹಿತಿ ಇದ್ದಾಗ ಪಾಶ್ಚಾತ್ಯರು ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿದ್ದರು ಎನ್ನುತ್ತೇವೆ..ಅದು ನಿಜ ಕೂಡಾ..ನಮ್ಮ ಯಾವುದಾದರೂ ಕಾವ್ಯ ಗಳಲ್ಲಿ ಸಾಹಿತ್ಯ ದಲ್ಲಿ ಗ್ರಹಣಗಳ ಕೆಡುಕಿನ ಬಗ್ಗೆ ಇದೆಯೇ? ಖಂಡಿತ ಇಲ್ಲ..ಹಾಗಾದರೆ ಈಗ ಗ್ರಹಣದ ವೈಜ್ಞಾನಿಕ ವಿವರಣೆ ಕೊಟ್ಟು ಯಾವುದೇ ಮೂಢ ನಂಬಿಕೆ ಬೇಡ ಎನ್ನುವವರ ಬಗ್ಗೆ ಇಷ್ಟು ಆಕ್ರೋಶ ಯಾಕೆ? ಏನೇನೋ ಕಾರಣಗಳನ್ನು ಹುಡುಕಿ ನಮ್ಮ ಪುರಾತನ ಸನಾತನ ಸಂಸ್ಕೃತಿಗೆ ಇವರೆಲ್ಲ ಅಪಚಾರ ಮಾಡುತ್ತಿದ್ದಾರೆ ಎನ್ನುವ ಹುಯಿಲು ಯಾಕೆ?ಗ್ರಹಣಕ್ಕೆ ಸಂಬಂಧಿಸಿದ ಮೂಢ ನಂಬಿಕೆಗಳೆಲ್ಲ ಫಲ ಜ್ಯೋತಿಷ್ಯ ದ ಸುತ್ತ ಇರುವಂತದು.
ಜ್ಯೋತಿರ್ವಿಜ್ಞಾನ ಖಂಡಿತ ಭಾರತೀಯವಾದದ್ದು. ಮತ್ತು ಜೊತೆಗೆ ಮಾಯಾ ಮತ್ತು ಇಂಕಾ ನಾಗರಿಕತೆಯದ್ದೂ ಕೂಡ.. ಆದರೆ ಫಲಜ್ಯೋತಿಷ್ಯದ ಬೀಜ ಹುಟ್ಟಿದ್ದು ಪಾಶ್ಚಾತ್ಯ ರಲ್ಲಿ ಆದರೆ ಅದು ಸಮಾಜಕ್ಕೆ ಮುಳ್ಳಿನ ಮರವಾಗಿ ಬೆಳೆದದ್ದು ನಮ್ಮಲ್ಲಿ. ಅದೀಗ ಅಗಾಧ ಗಾತ್ರಕ್ಕೆ ಬೆಳೆದು ನಿಲ್ಲಲು ನಮ್ಮ ಮಾಧ್ಯಮಗಳ ಕೊಡುಗೆ ಬಹಳ ದೊಡ್ಡದು… ಮತ್ತು ಅದೀಗ ಗಾಂಜಾ ದಂಧೆಯಂತಹ ಇನ್ನೊಂದು ದಂಧೆಯಾಗಿ ಬೆಳೆದಿದೆ..ಅದರ ಫಲವೇ ನಾನಾ ರೀತಿಯ ಆಚರಣೆ ಪೂಜೆ ದಾನ ಧರ್ಮದ ಹೆದರಿಕೆ ಬೆದರಿಕೆಯ ರೀತಿಯ ಸಲಹೆಗಳು, ಪ್ರಚಾರ ಇತ್ಯಾದಿ..ಇದನ್ನು ವಿರೋಧಿಸಿದವರು, ಮೌಡ್ಯವೆನ್ನುವವರು ಕೂಡಾ ದೇಶದ್ರೋಹಿಗಳು ಧರ್ಮ ದ್ರೋಹಿಗಳು ಎನ್ನುವ ಮಾತು, ದೂಷಣೆ, ಯಾಕೆ?ಯಾಕೆಂದರೆ ಅದೇ ಈಗ ಆಳುವವರ ಅಸ್ತ್ರ..ಮೌಡ್ಯ ತುಂಬಿದ ಜನರೇ ಅವರ ಬಲ…






“ನಮಗೆ ಗ್ರಹಣಗಳ ಬಗ್ಗೆ ಸಮಗ್ರ ಮಾಹಿತಿ ಇದ್ದಾಗ ಪಾಶ್ಚಾತ್ಯರು ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿದ್ದರು ಎನ್ನುತ್ತೇವೆ..ಅದು ನಿಜ ಕೂಡಾ “. ಇಲ್ಲ. ಇದು ಸರಿಯಲ್ಲ. ಗ್ರೀಕರಿಗೆ ಇದು
ಭೂಮಿ ಗುಂಡಗೆ ಇದು ಎಂದು ಹಿಂದೇ ತಿಳಿದಿತತು. ೨) ಗ್ರಹಣಗಳ ಬಗ್ಗೆ ಹಲವಾರು ಸಂಸ್ಕೃತಿಗಳಿಗೆ ತಿಳಿದಿತ್ತು. ಬಾರಟದಲ್ಲಿ ಕೂಡ. ಗ್ರಹಣಗಳ ಲೆಕ್ಕಗಳು ಕ್ಲಿಷ್ಟವಾದರೂ ಕೆಲವು ಸಂಸ್ಕೃತಿಗಳು ಇವನ್ನೂ ಕಲಿತಿದ್ದವು