ಸುಮ್ಮನೇ ನೆನಪುಗಳು… 2
”ಲಕ್ಷ್ಮೇಶ್ವರವನ್ನು ಕೆಲವು ಕಾಲ (ಹಿರೇ) ಮಿರಜ ಸಂಸ್ಥಾನದ ಪಟವರ್ಧನ ವಂಶಸ್ಥರು ತಮ್ಮ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು,” ಅಂತ ಹೇಳಿದೆನಲ್ಲ… ಕಳೆದ ಶತಮಾನದ ಮಧ್ಯಭಾಗದವರೆಗೆ ನಮ್ಮೂರು ಎಲ್ಲ ದೃಷ್ಟಿಯಿಂದಲೂ ಪಟವರ್ಧನ ವಂಶಸ್ಥರ ಔದಾರ್ಯದ ಸವಿ ಅನುಭವಿಸಿತು. ಅವರ ಬಗ್ಗೆ, ಅವರ ಔದಾರ್ಯದ ಬಗ್ಗೆ ನಾನು ಎಂಬತ್ತು ತೊಂಬತ್ತರ ಹಿರಿಯರಿಂದ ಕೇಳಿ ತಿಳಿದ ಒಂದಷ್ಟು ಸಂಗತಿಗಳು ಬಲು ಮಜವಾಗಿವೆ. ಅವೆಲ್ಲವನ್ನೂ ಮುಂದಿನ ಕಂತುಗಳಲ್ಲಿ ಹಂಚಿಕೊಳ್ಳುತ್ತೇನೆ. ಸದ್ಯ ಮಿರಜ್ ಬಗ್ಗೆ ಒಂದಷ್ಟು ಮಾಹಿತಿ. ಬೆಳಗಾವಿಯಿಂದ ಮುಂಬಯಿಗೆ ಹೋಗುವ ಮಾರ್ಗದಲ್ಲಿ, ಕರ್ನಾಟಕದ ಗಡಿ ದಾಟಿ, ಮಹಾರಾಷ್ಟ್ರ ಪ್ರವೇಶಿಸುವ ನಮಗೆ ಸಿಗುವ ಮೊದಲ ದೊಡ್ಡ ರೇಲ್ವೆ ನಿಲ್ದಾಣ ಈ ಮಿರಜ್ ಜಂಕ್ಷನ್. ಬ್ರಾಡ್ ಗೇಜ್ ಆಗುವುದಕ್ಕೆ ಮೊದಲು ಮುಂಬಯಿಗೆ ಹೋಗಲು ನಾವೆಲ್ಲಾ ಈ ನಿಲ್ದಾಣದಲ್ಲಿ ಇಳಿದು, ಪ್ಲಾಟ್ ಫಾರ್ಮ್ ಬದಲಿಸಿ, ಮತ್ತೊಂದು ರೈಲಿನ ನಮ್ಮ ಬೋಗಿಯನ್ನು ಹುಡುಕಿ, ಏರಲು ‘ಹರಸಾಹಸ’ಪಡಬೇಕಾಗಿತ್ತು. ಇಲ್ಲಿಂದ ಕೇವಲ ಏಳು ಕಿಲೋಮೀಟರ್ ಅಂತರದಲ್ಲಿದೆ ಸಾಂಗ್ಲಿ. ನಾವು ಹುಬ್ಬಳ್ಳಿ-ಧಾರವಾಡ ಅಂತೀವಲ್ಲ ಹಾಗೆಯೇ ಈ ಮಿರಜ್ -ಸಾಂಗ್ಲಿಗಳು. ಕೃಷ್ಣೆಯ ಕೃಪೆಯಿಂದಾಗಿ ಈ ಪ್ರದೇಶದಲ್ಲಿ ಎಲ್ಲವೂ ಸಮೃದ್ಧವೆ. ನೋಡಿದಲ್ಲೆಲ್ಲ ತೋಟ-ಪಟ್ಟಿಗಳು, ಹೊಲ-ಗದ್ದೆಗಳು. ವರ್ಷಪೂರ್ತಿ ಫಸಲು. ಸುತ್ತಮುತ್ತಲೂ ಹಸಿರುಟ್ಟ ಭೂರಮೆ. ಎತ್ತರೆತ್ತರಕ್ಕೆ ತಲೆ ಎತ್ತಿರುವ ಗುಡಿ-ಗೋಪುರಗಳು… ಗಾಳಿಯ ಹಾದಿಗುಂಟ ತೇಲಿಬರುವ ಹಕ್ಕಿಗಳ ಹಾಡು… ದೊರೆಯ ವಾಸವೇ ಇಂಥ ಸಮೃದ್ಧ ನಾಡಿನಲ್ಲಿ ಎಂದ ಮೇಲೆ…! ಸಹಜವಾಗಿಯೇ ಮಿರಜ್ ‘ಕವಿ-ಕೋಗಿಲೆಗಳ ಪುಣ್ಯಾರಾಮ’ವಾಗಿ, ‘ಗಾಯಕ-ವೈಣಿಕರಾರಾಮ’ವಾಗಿ, ‘ವಿದ್ಯಾವನ’ವಾಗಿ ಬೆಳೆದು ನಿಂತಿತು. ಕ್ರೀಡಾಳುಗಳ, ಕುಸ್ತೀಪಟುಗಳ ‘ಆಡುಂಬೊಲ’ವೆನಿಸಿತು. ಕಿರಾಣಾ ಘರಾಣೆಯ ಹೆಸರು ನೀವು ಕೇಳಿಯೇ ಇರುತ್ತೀರಿ. ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ ಮುಂತಾದ ಅಪ್ರತಿಮ ಪ್ರತಿಭೆಗಳು ಇದೇ ಘರಾಣೆಯ ದೀಪಗಳು. ಈ ಘರಾಣೆಯ ಸಂಸ್ಥಾಪಕ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನರು ಇದೇ ಮಿರಜಿನವರು. (ಮಿರಜಿಯ ಪ್ರತಿಭಾವಂತರ ಪಟ್ಟಿ ಬಲು ದೊಡ್ಡದು)
ತಂಬೂರಿ, ಸಿತಾರ್ ಮುಂತಾದವುಗಳಿಗೆ ಬಳಸುವ ‘ತುಂಬಡಿ’ ಗಳು
ಸಿದ್ಧವಾದ ತಂಬೂರಿ
ಹಾಂ… ಸಂಗೀತ ಕಚೇರಿಯ ಆರಂಭಕ್ಕೆ ಮೊದಲು ತನ್ನ ನಾದದಿಂದ ನಿಮ್ಮನ್ನು ಸೆಳೆಯುವ ತಂಬೂರಿಯಿದೆಯಲ್ಲ… ಅದು ತಯಾರಾಗುವುದೇ ಈ ಮಿರಜಿಯಲ್ಲಿ. ಅದರಲ್ಲೂ ವಿಶೇಷವಾಗಿ ಹಿಂದೂಸ್ತಾನಿ ಪದ್ಧತಿಯ ಹಾಡುಗಾರಿಕೆಗೆ ಬಳಸುವ ತಂಬೂರಿ ಅಥವಾ ‘ತಾನ್ ಪುರಾ’ಗಳು ಸಿದ್ಧಗೊಳ್ಳುವುದು ಇಲ್ಲಿಯೇ. (ಇದರಲ್ಲೂ ‘ಗಂಡು ತಂಬೂರಿ’ ಮತ್ತು ‘ಹೆಣ್ಣು ತಂಬೂರಿ’ ಗಳಿವೆಯಂತೆ…!) ಸಿತಾರ ಮುಂತಾದ ಎಲ್ಲ ಬಗೆಯ ತಂತಿ ವಾದ್ಯಗಳ ತಯಾರಕರೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಜಗತ್ತಿನಾದ್ಯಂತದ ಸಂಗೀತಗಾರರು ಈ ವಾದ್ಯಗಳನ್ನು ತರಿಸಿಕೊಳ್ಳುವುದು ಇಲ್ಲಿಂದಲೇ. ಅಲ್ಲದೆ ಇಲ್ಲಿಗೆ ಬಂದು ನಂಬಿಕೆಯ ತಯಾರಕರ ಬಳಿ ತಂಬೂರಿ ಕೊಳ್ಳುವವರಿಗೂ ಕೊರತೆಯಿಲ್ಲ. ಅಷ್ಟೇ ಅಲ್ಲ, ಈ ವಾದ್ಯಗಳ ತಯಾರಿಕೆಯಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಲೇ ಇರುತ್ತಾರೆ ಇಲ್ಲಿಯ ನಿಷ್ಣಾತರು. ‘ಮಡಿಸುವ ಸಿತಾರ್’ (Foldable Sitar) ಅಂಥ ಸಂಶೋಧನೆಗಳಲ್ಲಿ ಒಂದು. ಹೀಗಾಗಿ ನೀವಿಲ್ಲಿ ಓಡಾಡುತ್ತಿದ್ದರೆ ಒಂದಲ್ಲ ಹತ್ತಾರು ತಂತಿ ವಾದ್ಯಗಳ ನಾದ ನಿಮ್ಮನ್ನು ವಿಸ್ಮಿತರನ್ನಾಗಿ ಮಾಡುತ್ತದೆ. ತಂಬೂರಿ ತಯಾರಕರ ಕೈಚಳಕದ ಕಾರೀಗರಿ, ಕಲಾಕುಸುರಿಯ ಕೆಲಸ, ಮತ್ತು ಹಲವಾರು ವಾದ್ಯ ಪರಿಕರಗಳ ಮಾರಾಟದ ಮಳಿಗೆಗಳ ಸಾಲುಗಳನ್ನು ನೋಡುತ್ತ ಸಾಗುತ್ತಿದ್ದರೆ ನೀವು ಗಂಧರ್ವಲೋಕದಲ್ಲಿ ಸಂಚರಿಸುತ್ತಿರುವ ಅನುಭವ ಪಡೆಯುತ್ತೀರಿ.
ತಂಬೂರಿಯ ತಳಕ್ಕೆ (Base) ಬಳಸುವ ದೊಡ್ಡ ಗಾತ್ರದ (ಕುಂಬಳ ಕಾಯಿ?!) ಕಾಯಿಯನ್ನು ಮರಾಠಿಯಲ್ಲಿ ‘ತುಂಬಡಿ’ ಎನ್ನುತ್ತಾರೆ. ಈ ‘ವಿಶೇಷ’ವಾದ ಕಾಯಿ ಬೆಳೆಯುವುದಕ್ಕೆ ಇಲ್ಲಿಯ ಮಣ್ಣು ಮತ್ತು ಕೃಷ್ಣೆಯ ನೀರು ಕಾರಣ. ಕೇವಲ ಈ ಕಾಯಿಗಳನ್ನೇ ಬೆಳೆಯುವ ಜನ ಮತ್ತು ಜಮೀನುಗಳು ಇಲ್ಲಿವೆ. (ಕರ್ನಾಟಕಿ ಪದ್ಧತಿಯಲ್ಲಿ ಬಳಸಲಾಗುವ ತಂಬೂರಿಗಳು ತಯಾರಾಗುವುದು ತಂಜಾವೂರಿನಲ್ಲಿ.)
ಇನ್ನು ಸಾಹಿತ್ಯದ ವಿಚಾರಕ್ಕೆ ಬರೋಣ. ನಮ್ಮ ಹೆಮ್ಮೆಯ ಕವಿಗಳಾದ ಮುಗಳಿ ಮತ್ತು ಗೋಕಾಕರು ಈ ಮಿರಜ್ -ಸಾಂಗ್ಲಿಗಳಲ್ಲಿ ಕಾಲೇಜುಗಳ ಪ್ರಾಚಾರ್ಯರಾಗಿ ಕೆಲಸ ಮಾಡಿದರು. ಕನ್ನಡದ ವಿದ್ಯಾರ್ಥಿಗಳನ್ನು ಇಲ್ಲಿಗೆ ಸೆಳೆದರು. ಇಲ್ಲಿ ಕನ್ನಡ ನುಡಿ ಅನುರಣಿಸುವಂತೆ ಮಾಡಿದರು. ಗೋಕಾಕರಂತೂ ಅದೆಷ್ಟು ಕನ್ನಡ (ಮತ್ತು ಮರಾಠಿಯ) ಲೇಖಕರಿಗೆ ಪ್ರೇರಣೆಯಾದರೋ…! ಮುಂಬಯಿ ಕರ್ನಾಟಕದಲ್ಲಿ ಧಾರವಾಡ, ಬೆಳಗಾವಿ, ವಿಜಾಪುರಗಳನ್ನು ಬಿಟ್ಟರೆ ಒಳ್ಳೆಯ ಕಾಲೇಜುಗಳು ಇದ್ದದ್ದು ಕೊಲ್ಹಾಪುರ ಮತ್ತು ಮಿರಜ್ -ಸಾಂಗ್ಲಿಗಳಲ್ಲಿ. ಈ ಕಾರಣದಿಂದಲೂ, ಮತ್ತು ಕಲಿತರೆ ‘ಅತ್ತ್ಯುತ್ತಮ ಪ್ರಾಧ್ಯಾಪಕರೆನಿಸಿದ ಮುಗಳಿ-ಗೋಕಾಕರ ಶಿಷ್ಯರಾಗಿಯೇ ಕಲಿಯಬೇಕು’ ಎಂಬ ಅಭಿಪ್ರಾಯದಿಂದಾಗಿಯೂ ಕನ್ನಡದ ಹುಡುಗರು ಮಿರಜ್ -ಸಾಂಗ್ಲಿಗಳಿಗೆ ಹೋಗುತ್ತಿದ್ದರು.
ನಿಮಗೆ ವಸಂತ ಕಾನೀಟ್ಕರ್ ಗೊತ್ತಲ್ಲ… ಅವರು ಮರಾಠಿಯ ಹಿರಿಯ ಮತ್ತು ಪ್ರಸಿದ್ಧ ನಾಟಕಕಾರ. ಈ ಕಾನೀಟ್ಕರ್ ಸಾಂಗ್ಲಿಯಲ್ಲಿ ಗೋಕಾಕರ ಶಿಷ್ಯರು. ಅದೊಮ್ಮೆ ಗೋಕಾಕರು ಶೇಕ್ಸ್ ಪಿಯರನ ನಾಟಕಗಳ ಪಾಠ ಮಾಡುತ್ತ, ”ಆತನ ಎಲ್ಲ ದುರಂತ ನಾಯಕರನ್ನೂ ಒಂದೇ ಪಾತ್ರದಲ್ಲಿ ಏಕೀಭವಿಸಿ ನಾಟಕ ಬರೆದರೆ ಅದೊಂದು ಅಪೂರ್ವ ಕೃತಿಯಾಗಬಹುದು… ಪ್ರಯತ್ನಿಸಿ ನೋಡಿ…” ಅಂತ ವಿದ್ಯಾರ್ಥಿಗಳಿಗೆ ಹೇಳಿದ್ದರಂತೆ. ಗುರುವಾಕ್ಯವನ್ನು ನೆನಪಲ್ಲಿಟ್ಟುಕೊಂಡು ವಸಂತ ಕಾನೀಟ್ಕರರು ಬರೆದ ‘ಗಗನಭೇದಿ’ ಎಂಬ ನಾಟಕ 1980 ರ ದಶಕದಲ್ಲಿ ಮರಾಠಿ ರಂಗಭೂಮಿಯಲ್ಲಿ ತುಂಬ ಹೆಸರು ಮಾಡಿತು. (ಗೋಕಾಕರ ಪ್ರೇರಣೆಯಿಂದ ಕಾನೀಟ್ಕರರು ನಾಟಕ ರಚಿಸಿದ ವಿಚಾರವನ್ನು ಗೌರೀಶ ಕಾಯ್ಕಿಣಿ ಅವರು ‘ಕಸ್ತೂರಿ’ಗೆ ಬರೆದ ಒಂದು ಲೇಖನದಲ್ಲಿ ಪ್ರಸ್ತಾಪಿಸಿದ್ದರು.)
ಈಗಲೂ ಮಿರಜ್ ಕನ್ನಡದ ಸೊಲ್ಲು ಕೇಳಿ ಬರುವ ಊರು.
ಮೂವತ್ತುವರ್ಷಗಳ ಹಿಂದೊಮ್ಮೆ ಮುಂಬಯಿಯಿಂದ ನನ್ನಾಕೆಯೊಂದಿಗೆ ಇಲ್ಲಿಗೆ ಬಂದಿಳಿದೆ. ಪ್ಲಾಟ್ ಫಾರ್ಮ್ ಬದಲಿಸಿ, ಹುಬ್ಬಳ್ಳಿಗೆ ಹೋಗುವ ರೈಲು ಏರಬೇಕು. ಆದರೆ, ನಮ್ಮ ರೈಲು ಒಂದರ್ಧ ಗಂಟೆ ತಡವಾಗಿ ತಲಪಿದ್ದರಿಂದ ಅದಾಗಲೇ ‘ಲಿಂಕ್ ಎಕ್ಸ್- ಪ್ರೆಸ್’ ಹೋಗಿಯಾಗಿತ್ತು. ವಿಚಾರಿಸಿದರೆ, ”ಸಂಜೆಯವರೆಗೂ ಬೇರೆ ಗಾಡಿಯಿಲ್ಲ,” ಎಂದ ಸ್ಟೇಶನ್ ಮಾಸ್ತರ್. ಬಸ್ಸಿನಲ್ಲಿ ಹೋಗಬೇಕೆಂದರೆ ನನ್ನಾಕೆ ಬಸಿರಿ. ಧಡಿಕೆ ಆಗಬಾರದು. ಸಂಜೆಯವರೆಗೂ ಏನು ಮಾಡೋದು? ಅಂತ ಯೋಚಿಸುತ್ತ ಅಲ್ಲಿದ್ದ ಟೀ ಸ್ಟಾಲ್ ಬಳಿ ಹೋದೆ. ಆತ ಉಡುಪಿ ಮನುಷ್ಯ. ನಮ್ಮನ್ನು ಕನ್ನಡದಲ್ಲೇ ಮಾತಾಡಿಸಿದ. ”ಓಯ್… ಹುಬ್ಬಳ್ಳಿಗಾ…? ಸಂಜೆ ಐದಕ್ಕೆ ಗಾಡಿ. ಅಲ್ಲೀತನಕಾ ಊರಲ್ಲಿರೋ ದೇವಸ್ಥಾನಗಳನ್ನ ನೋಡಿಕೊಂಡು ಬನ್ನಿ, ಆಯ್ತಾ… ಮತ್ತೆ, ಅಲ್ಲಿ ಊರಲ್ಲಿ ನಮ್ಮದೇ ಹೋಟಲುಂಟು. ಅಲ್ಲಿಯೇ ಊಟ ಮಾಡಿ ಆಯ್ತಾ… ಕೃಷ್ಣಾ ನದೀಲಿ ಜಾಸ್ತಿ ಫೋರ್ಸು ಉಂಟು. ಕೆಳಗೆ ಇಳೀಬೇಡಿ, ಆಯ್ತಾ… ಹೂಂ, ಸಾಮಾನು ಇಲ್ಲೇ ಈ ರೂಮಲ್ಲಿಡಿ…” ಅಂತೆಲ್ಲ ಉಪಚಾರದ ಮಾತಾಡಿ ಮನಸ್ಸು ಹಗುರ ಮಾಡಿದ.
ನಾವು ಆಟೋ ಒಂದರಲ್ಲಿ ನಗರದ ಮುಖ್ಯ ಭಾಗಕ್ಕೆ ಹೋಗುವಾಗ ಪತ್ರಿಕಾಲಯ ಒಂದರ ಫಲಕ ನನ್ನನ್ನು ಸೆಳೆಯಿತು… ಕೂಡಲೇ ಆಟೋದವನಿಗೆ ನಿಲ್ಲಲು ಹೇಳಿದೆ. ನನ್ನಾಕೆಗೆ ಇಳಿಯಲು ಹೇಳಿದೆ.
”ಇಲ್ಲಿ ಯಾವ ಗುಡಿ?” ಎಂದಳು. ಆಟೋದವನಿಗೆ ಮೀಟರು ತೋರಿಸಿದ ಹಣ ಕೊಡುತ್ತಲೇ ”ಸುದ್ದೆಮ್ಮನ ಗುಡಿ…” ಅಂದೆ. ಆಕೆ ಇದ್ದರೂ ಇರಬಹುದೆಂದುಕೊಂಡು, ನನ್ನ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ ಬಂದಳು. ಪತ್ರಿಕಾಲಯ ಪ್ರವೇಶಿಸಿದಾಗ ನೋಡಬೇಕಿತ್ತು ಅವಳ ಮುಖ.
ನಾನಲ್ಲಿ ಇಳಿದಿದ್ದಕ್ಕೆ ಅದೊಂದು ಪತ್ರಿಕಾಲಯ ಎಂಬುದಷ್ಟೇ ಕಾರಣವಾಗಿರಲಿಲ್ಲ. ನನ್ನನ್ನು ಸೆಳೆದದ್ದು ಆ ಫಲಕದಲ್ಲಿದ್ದ ಬರಹ. ಹೌದು. ಮೇಲೆ ಮರಾಠಿ ಭಾಷೆಯಲ್ಲಿ ಆ ಪತ್ರಿಕೆಯ ಅಕ್ಷರಗಳು. ಕೆಳಗೆ ಅದನ್ನೇ ಕನ್ನಡ ಲಿಪಿಯಲ್ಲೂ ಬರೆದಿದ್ದರು. ಮಹಾರಾಷ್ಟ್ರದ ನೆಲದಲ್ಲಿ, ಮರಾಠಿ ಪತ್ರಿಕಾಲಯದ ಫಲಕದಲ್ಲಿ ಕನ್ನಡ ಅಕ್ಷರಗಳು!! ರೋಮಾಂಚನವಾಗದೆ ಇರುತ್ತದೆಯೇ…? ಒಳಗೆ ಹೋಗಿ, ”ನಾನೊಬ್ಬ ಕನ್ನಡ ಪತ್ರಕರ್ತ, ಹುಬ್ಬಳ್ಳಿಯವ…” ಎಂದು ಪರಿಚಯಿಸಿಕೊಂಡೆ. ಅಲ್ಲಿದ್ದವ ನಮ್ಮಿಬ್ಬರನ್ನೂ ತುಂಬ ಗೌರವಾದರಗಳೊಂದಿಗೆ ”ಯಾ ಸಾಹೇಬ್ ಯಾ…” (ಬರ್ರಿ ಮಹನೀಯರೇ ಬರ್ರಿ…) ಎನ್ನುತ್ತ ಸಂಪಾದಕರ ಬಳಿಗೆ ಕರೆದೊಯ್ದು ಪರಿಚಯಿಸಿದ.
ನನಗಿಂತ ಹದಿನೈದಿಪ್ಪತ್ತು ವರ್ಷ ಹಿರಿಯನಾದ ಆ ಗೃಹಸ್ಥ ಕೂತಲ್ಲಿಂದ ಎದ್ದು ಬಂದು ಹಸ್ತಲಾಘವ ನೀಡಿ ಕುಳ್ಳಿರಿಸಿದ. ನಾನು ಗಾಡಿ ತಪ್ಪಿದ್ದು, ಸಂಜೆಯವರೆಗೂ ಬೇರೆ ಗಾಡಿ ಇಲ್ಲದ್ದು ಎಲ್ಲವನ್ನೂ ಹೇಳುತ್ತಿದ್ದರೆ, ಆತ, ”ಒಳ್ಳೇದೆ ಆಯ್ತು ನೋಡ್ರೀ… ನೀವಿಲ್ಲೇ ಬರೋ ಹಂಗಾತು…” ಎಂದು ಮರಾಠಿ ಮಿಶ್ರಿತ ಕನ್ನಡದಲ್ಲಿ ಹೇಳುತ್ತ, ಗಹಗಹಿಸಿ ನಗುತ್ತ, ತನ್ನೆಲ್ಲ ಸಹೋದ್ಯೋಗಿಗಳನ್ನೂ ಕರೆದು ಪರಿಚಯಿಸಿದ. ಆಮೇಲೆ ತನ್ನ ಪತ್ರಿಕೆಯ ಕುರಿತು ಹೇಳತೊಡಗಿದ.
ಇಪ್ಪತ್ತೈದು ವರ್ಷಗಳಿಂದ ಮುದ್ರಣಗೊಳ್ಳುತ್ತಿದ್ದ ಅದೊಂದು ‘ದ್ವಿಭಾಷಾ’ ದೈನಿಕ. (ಕ್ಷಮಿಸಿ, ಈಗದರ ಹೆಸರು ಮರೆತುಹೋಗಿದೆ.) ನಾಲ್ಕು ಪುಟಗಳದು. ಮೊದಲ ಮತ್ತು ಕೊನೆಯ ಪುಟಗಳಲ್ಲಿ ಮರಾಠಿಯಲ್ಲಿ ಸುದ್ದಿಗಳು. ನಡುವಿನ ಎರಡು ಪುಟಗಳಲ್ಲಿ ಕನ್ನಡದಲ್ಲಿ ಸುದ್ದಿಗಳು. ನನಗೆ ಅಂಥದು ಹೊಸತು. ”ಭಾಳ ಇಂಟರೆಸ್ಟಿಂಗ್” ಅಂದೆ. ”ತಡೀರಿ,” ಅಂತ ಆತ ತನ್ನ ಮೇಜಿನ ಡ್ರಾದಿಂದ ಇನ್ನೊಂದಷ್ಟು ಪತ್ರಿಕೆಗಳನ್ನು ತೆಗೆದುಕೊಟ್ಟ. ಅವೆಲ್ಲ ಅಂದಿನವೇ. ಅದೇ ಊರಿನಿಂದ ಪ್ರಕಟವಾಗುತ್ತಿದ್ದ ಬೇರೆ ಪತ್ರಿಕೆಗಳು. ಎಲ್ಲದರಲ್ಲೂ ಒಳಗಿನ ಪುಟಗಳಲ್ಲಿ ಒಂದಿಷ್ಟಾದರೂ ಸುದ್ದಿಗಳು ಕನ್ನಡದಲ್ಲಿದ್ದವು! ನಾನು ಅಚ್ಚರಿಯಿಂದ ಎಲ್ಲದರ ಮೇಲೂ ಕಣ್ಣಾಡಿಸುತ್ತಿರುವ ಹೊತ್ತಿನಲ್ಲೇ ಆತ ಅದಾರಿಗೋ ಫೋನ್ ಮಾಡಿ ಬರಲು ಹೇಳಿದ. ಮತ್ತಾನರನ್ನೋ ಕರೆದು ಒಂದು ಚೀಟಿ ಬರೆದು ಕೊಟ್ಟ. ಅಷ್ಟರಲ್ಲೇ ಒಂದಷ್ಟು ಜನ ಆತನ ಚೇಂಬರಿನಲ್ಲಿ ಹಾಜರಾದರು. ”ಇವರೆಲ್ಲ ನನ್ನ ಸಿಬ್ಬಂದಿ…” ಎಂದು ಪರಿಚಯಿಸಿದ. ಅವರ ಮ್ಯಾನೇಜರ್ ನನಗೊಂದು ಪುಷ್ಪಗುಚ್ಛವನ್ನಿತ್ತು, ”ನೀವು ಬಂದದ್ದು ಸಂತೋಷವಾಯಿತು,” ಎಂದ. ”ನಿಮ್ಮ ಈ ಪ್ರೀತಿಗೆ ನಾವಿಬ್ಬರೂ ಋಣಿಗಳು. ನಾವಿನ್ನು ಬರ್ತೀವಿ…” ಎಂದು ಕೈಮುಗಿಯುತ್ತ ಎದ್ದೆ. ”ಸ್ವಲ್ಪ ತಡೀರಿ…” ಎಂದವನೇ ಮತ್ತೆ ‘ಇಂಟರ್ಕಾಮ್’ನಲ್ಲಿ ಯಾರಿಗೋ ಏನೋ ಕೇಳಿ, ”ಬರ್ರಿ…ಹೋಗೋಣ,” ಎಂದು ಬಾಗಿಲು ತೆರೆದು ನಿಂತ.
ನಾವು ಹೊರಗೆ ಬಂದರೆ ಅಲ್ಲಿ ಆರೇಳು ಜನ ಪುಷ್ಪಗುಚ್ಛಗಳನ್ನು ಹಿಡಿದು ನಿಂತಿದ್ದಾರೆ! ಅವರೊಂದಿಗೆ ಒಂದು ಫೋಟೋ. ನಮ್ಮಿಬ್ಬರನ್ನೂ ತನ್ನ ‘ಮೀಟಿಂಗ್ ಹಾಲ್’ಗೆ ಕರೆದೊಯ್ದ ಆ ಮಹಾಶಯ. ಅವರೆಲ್ಲ ಅಲ್ಲಿಯ ಪತ್ರಕರ್ತರ ಸಂಘದ ಪದಾಧಿಕಾರಿಗಳು ಎಂದು ಪರಿಚಯಿಸಿದ. ಅವರೆಲ್ಲರಿಗೂ ನಾನು ಕೆಲಸ ಮಾಡುತ್ತಿದ್ದ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಸಮೂಹದ ಬಗ್ಗೆ ತುಂಬ ಗೌರವವಿತ್ತು. ಆಕಸ್ಮಿಕವಾಗಿ ಅವರಲ್ಲಿಗೆ ಹೋಗಿದ್ದ ನನ್ನನ್ನು ಗೌರವಿಸುವುದರ ಮೂಲಕ ಅವರು ಹೊಸ ಪರಿಪಾಠವನ್ನು ಹಾಕಿದ್ದರು.
ನನ್ನಾಕೆಗೋ ದೇವರ ಗುಡಿಗಳನ್ನು ನೋಡುವ ತವಕ… ನನಗೋ ‘ನುಡಿಯ ಗುಡಿ’ಗಳ ದರ್ಶನ ಮಾಡಿದ ಸಮಾಧಾನ. ಆಮೇಲೆ ಸುಮ್ಮನೇ ಆಕೆಯೊಂದಿಗೆ ಅಲ್ಲಿಯ ಕೆಲವು ಮಂದಿರಗಳನ್ನು ನೋಡಿ ಬಂದೆನಾದರೂ, ನನ್ನ ನೆನಪಲ್ಲಿ ಉಳಿದದ್ದು ಮಾತ್ರ ಆ ‘ವಿಶೇಷ’ ಪತ್ರಿಕೆ…
ಇಂದಿಗೂ ನನಗೆ ಮಿರಜ್ ಎಂದರೆ… ಮಿರಜಿಯಲ್ಲಿ ಇರುವವರೆಂದರೆ… ಮಿರಜ್ ಮೂಲಕ ಪ್ರಯಾಣ ಬೆಳೆಸುವುದೆಂದರೆ… ಕೂಡಲೇ ನೆನಪಾಗುವುದು ಈ ಮೇಲಿನ ಪ್ರಸಂಗ.
]]>




Super write up sir….congrats
ಸರ್ರ ನಮ್ಮ ಅಕ್ಕನ ಊರು ಕಿರ್ಲೊಸ್ಕರವಾಡಿ..ಮಿರಜ್ ಆದಮ್ಯಾಲೆ ಪ್ಯಾಸೆಂಜರ್ ಗಾಡಿ ಆದ್ರ ೬ನೇ ಸ್ಟೇಶನ್ನು..ಎಕ್ಸಪ್ರೆಸ್ ಆದ್ರ
೪ನೇ ಸ್ಟೇಶನ್ನು..ಮಿರಜ ಒಂದು ಸ್ಟೇಶನ್ ಅಷ್ಟ ಅಲ್ಲ ಅದೊಂದು ಗಮ್ಯ..ನಮ್ಮ ಅಕ್ಕಂದು ಅಕಿ ಮಗಳದು ಲಗ್ನ ಆಗಿದ್ದು ಮೀರಜದೊಳಗಿನ
ಕಾರ್ಯಲಯದಾಗ. ಆ ಊರು ಭಾಳ ಚಿರಪರಿಚಿತ..ಆ ಊರಾಗಿನ ಟಾಕಿಸಿನ್ಯಾಗ ರಗಡು ಸಿನೆಮಾ ನೋಡೀನಿ..ಅಲ್ಲಿ ಹೊಟೆಲನಾಗಿನ ಮಿಸಳಭಾಜಿ ರುಚಿ
ಇನ್ನೂ ನಲಿಗಿ ಮ್ಯಾಲ ಅದ..ಇನ್ನು ಅಲ್ಲಿಯ ವಿಶೇಷಗಳ ಬಗ್ಗೆ ಐಬಿಎನ್-ಲೋಕಮತ್ ಚಾನೆಲ್ ನವ್ರು ಎಪ್ರಿಲ್ ದಾಗ ಒಂದು ಕಾರ್ಯಕ್ರಮ ಮಾಡಿದ್ರು..
ತಂಬೂರಿ ಗಂಡು ತಂಬೂರಿ ಹೆಣ್ಣು ತಂಬೂರಿ ಫರಕು, ತಬಲಾ ಢಕ್ಕೆ, ಪಿಯಾನ್ ಪೇಟಿ..ಹಿಂಗ ಆ ಊರಿನ್ಯಾಗ ತಯಾರಾಗದ ಸಂಗೀತ ಉಪಕರಣನ ಇಲ್ಲಾ
ಮೀರಜು ಭಾಳ ನೆನಪು ಉಕ್ಕುಸುವುದು ಅಲ್ಲಿ ಲಗ್ನದಾಗ ಮಾಡುವ ಜಿಲೇಬಿ ಅದನ್ನ ಮಟ್ಟಾದಾಗ ಎದ್ದಿ ತಿನ್ನುವಾಗ ಉಕ್ಕುವ ಜಿಹ್ವಾಮೂಲೀಯ ರಸದಷ್ಟ
ರುಚಿಕರ ಆ ಊರಿನ ನೆನಪು…!!!!
ಚೆನ್ನಾಗಿದೆ. ತಂಬೂರಿ ಮಾಹಿತಿ ವಿಶೇಷವಾಗಿದೆ, ಈ ಬಗ್ಗೆ ಗೊತ್ತಿರಲಿಲ್ಲ.
Vajapyee sir baravanige andre ondu retiya manasparsi.kavya,lekana elldakku odisikondu hoguva laya.elladarallu ondu ritiya madurya.innastu lekanagalu barali..
jana
Vajapyee sir, Your collection is very nice.
Ambekar Pramod
ನಿಮ್ಮ ಫೋಟೋ ಕನಕಪುರದ ಮೇಕೆದಾಟಿನ, ಸಂಗಮದಲ್ಲಿ ತೆಗೆದದ್ದಲವ? ಸಂಗಮಕ್ಕೆ ನೀವು ಹೋಗಿಬಂದ ಅನುಭವ ತಿಳಿಸಿ ಸರ್ ಪ್ಲೀಸ್ .
Nimma Ankana shuru madidagininda odalu shuru madideeni. Tumba chennagi manognavagi moodi baruttide. Nimma Mirajna patrikalayada anubhava odi, nange nanna SK dinagalu nenapige bantu.