ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಲ೦ : ಊರೆಲ್ಲ ತೋರಣ!

ಸುಮ್ಮನೇ ನೆನಪುಗಳು-4

– ಗೋಪಾಲ ವಾಜಪೇಯಿ

ರಾಣೀ ಸಾಹೇಬರ ಸಮೇತ ಬಾಳಾ ಸಾಹೇಬರು ನಮ್ಮ ಊರಿಗೆ ಬರುತ್ತಾರೆ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಆ ನೆಪದಿಂದಾಗಿ ಊರಿನಲ್ಲಿ ಕೆಲವು ದುರಸ್ತಿ ಕೆಲಸಗಳು ನಡೆಯುತ್ತಿದ್ದವಲ್ಲ, ಆ ಕಾರಣಕ್ಕೆ ಕಂತ್ರಾಟುದಾರರಿಗೆ ಖುಷಿ. ಬಡ ಕಾರ್ಮಿಕರಿಗೆ ದುಡಿಮೆ ಸಿಗುವ ಸಮಾಧಾನ. ಅವರ ಹೆಂಗಸರು-ಮಕ್ಕಳಿಗೆ ಹೊಸ ಬಟ್ಟೆ, ಜತೆಗೆ ಹೊಟ್ಟೆ ತುಂಬ ಊಟ ಸಿಗುತ್ತದೆಂಬ ಸಂತೋಷ. ಒಟ್ಟಿನಲ್ಲಿ ಊರೆಲ್ಲ ನವವಧುವಿನಂತೆ ಸಿಂಗಾರಗೊಳ್ಳುತ್ತಿದ್ದದ್ದಂತೂ ನಿಜ. ‘ಸಂಸ್ಥಾನಿಕ ದಂಪತಿ’ಯನ್ನು ಎದುರುಗೊಳ್ಳಲು ಗುಡಗೇರಿ ಅಗಸಿಯಲ್ಲೊಂದು ದೊಡ್ಡ ಕಮಾನು. ಕಿಲ್ಲೆಯ ವರೆಗೆ ಕರೆದೊಯ್ಯಲು ಮೆರವಣಿಗೆಯ ಏರ್ಪಾಡು. ಆ ಮೆರವಣಿಗೆ ಸಾಗುವ ದಾರಿಯಲ್ಲೆಲ್ಲ ಇಕ್ಕೆಲಗಳಿಗೆ ತಳಿರು ತೋರಣ ಸಾಲು. ಥಳಿ (ನೀರು ಚಿಮುಕಿಸುವುದು) ರಂಗೋಲಿ. ನಾನಾ ನಮೂನೆಯ ಚಿತ್ತಾರ ಬಿಡಿಸಲು ಹೆಂಗಸರಲ್ಲೇ ನಾ ಮುಂದು ತಾ ಮುಂದು ಎಂಬ ಪೈಪೋಟಿ. ಅವರೆಲ್ಲ ಪರಸ್ಪರ ಚೇಷ್ಟೆ ಮಾಡುತ್ತ, ಹಿಗ್ಗಿನಿಂದಲೇ ರಸ್ತೆಯ ಇಕ್ಕೆಲಗಳನ್ನೂ ತಮ್ಮ ಕೈಚಳಕದಿಂದ ಅಂದಗೊಳಿಸಿಬಿಡುತ್ತಿದ್ದರಂತೆ. ಇನ್ನು, ಪುರುಷರಲ್ಲಿ ಕೆಲವರಿಗೆ ದೊರೆಯ ದೃಷ್ಟಿಗೆ ಬೀಳುವ ಆಸೆ. ಅದಕ್ಕಾಗಿ ಒಬ್ಬನನ್ನೊಬ್ಬ ಹಿಂದೂಡುತ್ತ ಮುಂದುವರಿಯುವ ತವಕ. ಕೆಲವರ ಕೈಯಲ್ಲಿ ಹಾರ, ಕೆಲವರ ಕೈಯಲ್ಲಿ ನಿಂಬೆ ಹಣ್ಣು. ಇನ್ನು ಕೆಲವರು ಕಂಡುಕೊಂಡ ಉಪಾಯವೇ ಬೇರೆ. ಅವರು ತಮ್ಮ ಮನೆಯ ಎದುರು ನಿಂತುಕೊಂಡೇ, ದೊರೆಯ ಸಾರೋಟು ಸಮೀಪಿಸಿದಾಗ ಆರತಿ ಹಿಡಿದ ಪತ್ನಿಯ ಸಮೇತ ನಡುದಾರಿಗೆ ಬಂದು ನಿಲ್ಲಬೇಕು. ಆಮೇಲೆ, ಮೆರವಣಿಗೆಯಲ್ಲಿ ತಾವೂ ಒಂದಾಗಿ ಮುಂದೆ ಸಾಗಬೇಕು. ಮೆರವಣಿಗೆ ಗುಡಗೇರಿ ಅಗಸಿಯಿಂದ ನೇರವಾಗಿ ‘ಬಸ್ತಿ ಬಣ’ದ ಮೂಲಕ ಪೇಟ ಬಣಕ್ಕೆ ಬಂದು, ಅಲ್ಲಿಂದ ಹಣಮಪ್ಪನ ಗುಡಿಯ ಮೂಲಕ ‘ಆಸಾರ ರಸ್ತೆ’ಗೆ ತಿರುಗಿ (ಇಲ್ಲಿರುವ ದೂದ್ ಪೀರಾ ಎಂಬ ಸಂತನ ದರ್ಗಾವನ್ನು ಇಲ್ಲಿಯವರು ‘ಆಸಾರ’ ಎಂದು ಕರೆಯುವ ವಾಡಿಕೆ.) ಅಲ್ಲಿಂದ ಎಡಕ್ಕೆ ತಿರುಗಿ ಕಿಲ್ಲೆಯ ಪೂರ್ವ ದ್ವಾರವನ್ನು ತಲಪುತ್ತಿತ್ತು. ಅಲ್ಲಿ, ಪೂರ್ವದ್ವಾರದಲ್ಲಿ ‘ಹಿರೇಬಣ’ದ ವಿಪ್ರೋತ್ತಮರ ದಂಡು ವೇದಘೋಷಗಳೊಂದಿಗೆ ದೊರೆಯನ್ನು ಸ್ವಾಗತಿಸಿ, ಆಶೀರ್ವದಿಸಲು ಸಿದ್ಧಗೊಂಡು ನಿಂತಿರುತ್ತಿತ್ತು. (ಇಲ್ಲಿ ‘ಬಣ’ ಎಂದರೆ ವಾರ್ಡ್ ಎಂದರ್ಥ. ನಮ್ಮ ಊರಲ್ಲಿ ‘ಹಿರೇ ಬಣ’, ‘ಪೇಟ ಬಣ’, ‘ಬಸ್ತಿ ಬಣ’, ‘ದೇಸಾಯಿ ಬಣ’ ಮತ್ತು ‘ಹುಲಿಗೇರಿ ಬಣ’ ಅಂತ ಒಟ್ಟು ಐದು ವಿಭಾಗಗಳು. ಹಿಂದಿನ ಕಾಲದಲ್ಲಿ ಈ ಪ್ರತಿಯೊಂದು ವಿಭಾಗಕ್ಕೂ ಬೇರೆ ಬೇರೆ ಪಟೇಲರು, ಬೇರೆ ಬೇರೆ ಶಾನುಭೋಗರು ಇರುತ್ತಿದ್ದರು.) ದೊರೆ ಪೂರ್ವದ್ವಾರದಲ್ಲಿ ಬಂದ ಕೂಡಲೇ ಅದರಾಚೆಯ ಮೈದಾನದಲ್ಲಿ ಬ್ಯಾಂಡು ಬಜಾನಾ ಶುರು. ಅತ್ತ ತಮಾಷಾ ಮದ್ದಿನ ಸದ್ದು. (ಆ ಸದ್ದಿಗೆ ಕುದುರೆಗಳು ಬೆದರದಿದ್ದರೆ) ಇವುಗಳ ನಡುವೆಯೇ ಸಾರೋಟು ಮುಂದೆ ಸಾಗುತ್ತಿತ್ತು. ಮಹಲಿನ ಎದುರು ಇಳಿದ ದೊರೆ ಕಾಲು ತೊಳೆದು, ಪೀಠವನ್ನು ಅಲಂಕರಿಸುವ ಮುನ್ನ ಅದಕ್ಕೆ ನಮಸ್ಕರಿಸಿ, ಸಾಂಕೇತಿಕವಾಗಿ ಅದನ್ನು ಏರುವುದು ಅಂದಿನ ಮುಖ್ಯ ಕಾರ್ಯ. ಆ ಸಂಜೆ ಬಾಳಾ ಸಾಹೇಬರು ಅಧಿಕಾರಿವರ್ಗದವರೊಂದಿಗೆ ಸಮಾಲೋಚನೆ ನಡೆಸಿ, ಉತ್ಸವದ ತಯಾರಿಯನ್ನು ತಾವೇ ಖುದ್ದು ಪರಿಶೀಲಿಸುತ್ತಿದ್ದರು. ಆ ಮೇಲಿನ ದಿನಗಳದು ಮತ್ತೊಂದು ರೀತಿಯ ರಂಗು. ಊರಿಗೆ ಊರೇ ‘ಹಬ್ಬದ ಉಬ್ಬಿನಲ್ಲಿ’ ಮೈಮರೆಯುತ್ತಿತ್ತು.  ]]>

‍ಲೇಖಕರು G

8 July, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading