ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಅಕ್ಕಗ ಒದ್ದೋರು ಮುಂದಿನ ಜನ್ಮದಾಗ ಬೆಕ್ಕು ಆಗತಾರ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ….

2

“ಅಪ್ಪಾ..ಈಗಲೆ ಶುರು ಹಚ್ಚಿಕೊಂಡು ಬಿಡಲೇನು…?”
“ನೀನು ಹಿಂಗ ನೋಡು ತಲೆಯಲ್ಲಿ ಬಂದುದೆಲ್ಲ ಮಾಡಬೇಕಂತಿ. ಅವತ್ತು ರೋಬೋಟ್‌ನ್ನು ನೋಡಿ ನಾನು ಡಿಫರೆಂಟ್ ರೋಬೊ ಕಂಡುಹಿಡಿತನಂದಿ, ಅದಕ್ಕಾಗಿ ‘ನಿಮ್ಮ ದೊಡ್ಡಕ್ಕಗ ಬೆಂಗಳೂರಿನಿಂದ ಅದು ತೆಗೆದುಕೊಂಡು ಬಾ ಇದು ತೆಗೆದುಕೊಂಡು ಬಾ’ ಎಂದು ಹಠ ಹಿಡಿದಿದ್ದಿ, ಸೈನಿಕರ ನೋಡಿ ಸೈನ್ಯ ಸೇರತಿನಂತಿ, ವಿಮಾನ ಹೋಗೋದನ್ನು ನೋಡಿ ನಾನು ಪೈಲಟ್ ಆಗತಿನಿ ಅಂತಿ. ಕ್ರಿಕೇಟ್, ಕಬ್ಬಡ್ಡಿ ಆಡೋರನ್ನ ನೋಡಿ ನಾನು ಹಾಂಗ ಆಗತೀನಿ ಅಂತಿ. ಮೊನ್ನೆ ಸ್ಪೈಡರ್‌ ಫಿಲ್ಮ ನೋಡಿ ನಾನು ಹಾಂಗ ಆಗಬೇಕು ಅಂತ ಜೇಡನ್ನ ಕಡಿಸಿಕೊಂಡು…ಏನೇನೋ ಮಾಡಿ ನಾನು ಯಾಕ ಆಗವಲ್ಲಿ ಎಂದಿ. ಕಲ್ಪನೆ ಮಾಡಿಕೊಂಡದನ್ನ ಕೂಡಲೆ ಸಾಧಿಸೋಕೆ ಆಗತದನು..! ಸಮಯ ಬೇಕು, ಓದು ಬೇಕು ಅದಕ್ಕೂ ಮೊದಲು ಗಟ್ಟಿ ನಿರ್ದಾರ ಮಾಡಬೇಕು, ನಂತರ ಏನೆಲ್ಲ ಮಡಬಹುದು” “ಓದದೆ ಇದ್ರೂ ಮಾಡಕಾಗಲ್ಲೇನು? ಎಡಿಸನ್, ಫ್ಯಾರಡೆ ಇವರೆಲ್ಲ ಓದೆ ಇಲ್ಲ ಅಂತ, ಆದರೂ ಏನೇನೋ ಕಂಡುಹಿಡಿದರು?” “ನೀನು ಹೇಳೊದು ಸರಿನಪ, ಅದರ ಬಗ್ಗೆ ಕನಿಷ್ಠ ಜ್ಞಾನವಾದರೂ ಬೇಕಲ್ಲ. ನೋಡಪ ನಮಗ ಸ್ವಂತ ಮನಿ ಇಲ್ಲ, ಆಸ್ತಿ ಇಲ್ಲ, ಕುಟುಂಬದ್ದಂತ ಉದ್ಯೋಗನೂ ಇಲ್ಲ. ನಮ್ಮ ಜಾತಿಗೆ ಯಾವ ಮೀಸಲಾತಿ ಇಲ್ಲ. ಓದು ಒಂದ ನಮ್ಮ ಬದುಕಿರುವರ್ಗ, ಮುಂದ ಓದಲಾರದ ಕಸಬಳಿಲಿಕ್ಕ, ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಲಿಕ್ಕೆ ಹೋದ್ರೂ ನಮ್ಮನ್ನ ಸೇರಿಸಿಕೊಳ್ಳಲ್ಲ ‘ಅಯ್ಯೊ ನಿಮಗ ಕೊಡಕಾಗಲ್ಲಪ ಇಂತವೆಲ್ಲ ಕೆಲಸ ಪಾಪಾ ನಮಗ ಇರ‍್ತದ’ ಅಂತ ಹೊರಗ ದಬ್ಬತಾರ. ಯೋಚಿಸು ನೋಡು.

ಮೊದಲು ಓದು..ಓದುತ್ತಾ ಯತ್ನ ಮಾಡು..ಒಂದು ಹಂತದಲ್ಲಿ ಎಲ್ಲಾ ಸಾಧ್ಯ ಆಗತದ. ಬರಿ ಕಲ್ಪನಾ ಪ್ರಪಂಚದಾಗ
ಮುಳಗಬಾರದು..ಇಲ್ಲಂದ್ರ ತಿರುಕನ ಕನಸಿನಂಗ ಆಗತದ” ಅಂತಿದ್ದ.
“ಅಪ್ಪಾ, ಓದಷ್ಟು ಓದೋದು…ಸಿಕ್ರೆ ಸರಿ, ಇಲ್ಲಂದ್ರ ಸ್ವಂತ ಬಿಜಿನೆಸ್ಸು ಮಾಡತೀನಿ” ಎಂದು ಪ್ರಶ್ನೆ ಮಾಡತಿದ್ದೆ.
“ನೋಡು ಈಗೆ ಎಲ್ಲಿದ್ದಿ..? ಏನೆಲ್ಲ ಮಾತಾಡತಿದ್ದಿ…?ಎಲ್ಲಿಂದ ಎಲ್ಲಿಗ ಜಂಪ್ ಹೊಡೆದಿ? ಇದ ಚಂಚಲ ಮನಸ್ಥಿತಿ. ಗುರಿ ಸ್ಥಿರವಾಗಿರಬೇಕು. ನಮಗ ಬಿಜಿನೆಸ್ಸು ಹಚ್ಚಿ ಬರಲ್ಲಪ” ಅಂತ ಹೇಳಿ ಹಾಗೆ ಮಾಡಲು ಹೋದ ಅನೇಕರ ವಿಷಯ ಹೇಳತಿದ್ದ. ನನಗೆ ಅನ್ನಬೇಕೆನಿಸಿದರೂ ಆಯ್ತು ಓದಿ ಮುಂದೆ ನೋಡಿದ್ರಾಯಿತು ಎಂದು ಸುಮ್ಮನಾಗಿದ್ದೆ. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಅಕ್ಕ ಅಪ್ಪ ಹೋದ ಮೇಲೆ “ಇದು ಬೇಕಿತ್ತಾ…? ಇದು ಬೇಕಿತ್ತಾ.?…ನಿನಗೆ ಬೇಕಿತ್ತಾ…? ಕೊರೆಸಿಕೊಳ್ಳೊದು ಬೇಕಿತ್ತಾ?” ಎಂದು ಚುಡಾಯಿಸುತ್ತಿದ್ದಳು.

“ಅಪ್ಪಗ ಹೇಳುತೀನಿ ತಡಿ” ಎಂದು “ಅಪ್ಪಾ…” ಎಂದಕೂಡಲೆ “ಬಿಡು…ನನಗೂ ಮತ್ತೆ ಅಪ್ಪ ಮೆದುಳಿಗೆ ಕೈ ಹಾಕತಾರ…ಅದೆ ತಮ್ಮ ಕತಿನ ಹೇಳಿಕೋತ ಕೂಡತಾರ” ಎನ್ನುತ್ತಿದ್ದಳು.

“ಅಪ್ಪಗ ಹಾಗೆಲ್ಲ ಅಂತಾರೇನು? ನಮ್ಮ ಒಳ್ಳೆದಕ್ಕಲ್ಲ ಹೇಳೋದು. ನಮ್ಮ ಸಲುವಾಗಿ ಅಪ್ಪೆಷ್ಟು ತ್ರಾಸು ತೊಗೋತಾರೆ…..ಹೇ.ಹೇ….ಎಂತಾ ಅಕ್ಕ” ಅಂದ್ರೆ “ಚೋಟಿದ್ದೆ ನನಗೆ ಬುದ್ಧಿ ಹೇಳ್ತಿಯಾ?” ಎಂದು ಬಡಿಯಲೂ ಬಂದಾಗ ನಾನು ಜಗಳಕ್ಕ ಬೀಳತಿದ್ದೆ. “ಲೇ ನನಗ ಒದ್ದಿಯಲ್ಲೋ ಅಕ್ಕಗ ಒದ್ದೋರು ಮುಂದಿನ ಜನ್ಮದಾಗ ಬೆಕ್ಕು ಆಗತಾರ” ಅಂತ ಕೂಗತಿದ್ಲು. “ಸುಳ್ಳ ಅಪವಾದ ಹೊರಸಬ್ಯಾಡ…ಒದ್ದಿನಿ ಅಂತ…ಅಪ್ಪನ ಮುಂದ ಎಲ್ಲ ಹೇಳತೀನಿ ನೋಡು” ಎಂದು ಭಯ ಹುಟ್ಟಿಸಿ ಅಕ್ಕನ ಕಡಿಂದ ಲಂಚವಾಗಿ ತಿಂಡಿ ಪಡೆತಿದ್ದೆ.. ಏನೆ ಆದರೂ ಇಂಗ್ಲಿಷ್ ಮೇಷ್ಟ್ರು ಸಲುವಾಗಿ ನನಗ ಜೀವ ಹಿಂಡಿದಾಂಗ ಆಗತಿತ್ತು. ಈ ಸಾರಿ ನೂರಕ್ಕ ನೂರು ತೆಗೆದಕೊಳ್ಳಬೇಕು ಅಂತ ಸಣ್ಣ ದೀಪದ ಮಧ್ಯೆ ಓದುತ್ತಾ ಇರಬೇಕಾದ್ರೆ ಈ ಸೊಳ್ಳೆಗಳ ಕಾಟ ಬೇರೆ, ಬೀಸಣಿಕೆ ಬೀಸಿಕೊಳ್ಳೊದು, ಸೊಳ್ಳೆನ ಹೊಡೆಯೊದು, ಈ ಕಡೆ ಓದೋದು ಒಂದಕ್ಕೂ ತಾಳ ಇರಲಿಲ್ಲ. ಹಲವಾರು ಸೊಳ್ಳೆಗಳನ್ನು ಸಂಹಾರ ಮಾಡಿದೆನಾದ್ರೂ ಒಂದು ಸೊಳ್ಳೆ ಮಾತ್ರ ‘ಝಂಯ್’ ಗುಡುತ್ತಾ ಕೈಗೆ ಸಿಗದೆ ಕಿರಿಕಿರಿ ಮಾಡತಾ ಸಹನೆ ಪರೀಕ್ಷೆ ಮಾಡತೊಡಗಿತು.

ಅದರ ಉಪಟಳಕ್ಕೆ ರೋಸಿಹೋಗಿ ಸೊಳ್ಳೆನ ಒಂದು ಏಟಿಗೆ ಮುಗಿಸುವ ಯೋಚನೆ ಮಾಡಿ ಅದರ ಬರುವಿಕೆಗಾಗಿ ಹೊಂಚು ಹಾಕಿ ಕುಳಿತೆ.

ಸಮ್ಮು ..ಸಮ್ಮು… ಏಳು ಸಮ್ಮು?
‘ಹಲೋ….’ ಎಂಬ ಸಣ್ಣದಾಗಿ ಧ್ವನಿ ಕೇಳಿಬಂತು.
ಸ್ವಲ್ಪ ಗಾಬರಿಗೊಂಡು ‘ಯಾರು? ಯಾರು?’ ಅಪ್ಪ ಅಮ್ಮ ಕೂಗಿದ್ರೇನು ಅಂತ… ನೀವು ಕರದ್ರೇನು ಅಂತ ಕೂಗಿದೆ. ಅವರು ಗಾಢ ನಿದ್ರೆಯಲ್ಲಿದ್ದರು. ಕಿಡಿಕಿಯಲ್ಲಿ ನೋಡಿದೆ, ಗೆಳೆಯರೇನಾದ್ರೂ ಬಂದಿದ್ದಾರೆ ಎಂದು…ಇರಲಿಲ್ಲ..ಹೊರಗೆ ಬಂದು ನೋಡಿದೆ..ದೂರದಲ್ಲೆ ಅದೆ ಅವರ ಸಂಭ್ರಮದ ಚೀರಾಟ ನಡೆದಿತ್ತು. ಬಾಗಿಲು ಹಾಕಿಕೊಂಡು ಬಂದು ಮತ್ತೆ ಓದುತ್ತಾ ಕುಳಿತೆ. ನಾಲ್ಕೈದು ಸೊಳ್ಳೆಗಳು ಮತ್ತೆ ಕಾಟ ಕೊಡ ಹತ್ತಿದವು. ಅವನ್ನು ಹೊಡಿಯ ಹತ್ತಿದೆ. ಒಂದು ಮಾತ್ರ ತಪ್ಪಿಸಿಕೊಳ್ಳುತ್ತಾ ಇತ್ತು. ನೊಣ ಹಿಡಿಯೋದ್ರಲ್ಲಿ ಎಕ್ಸರ‍್ಟ ಇದ್ದ ನಾನು, ಖಾಲಿ ಕುಳಿತಾಗ ಅದ ಹಿಡಿಯೊ ಆಟ ಆಡತಿದ್ದೆ. ನೆಲದ ಮೇಲೆ ಕುಳಿತಿರುತ್ತಿದ್ದ ನೊಣವನ್ನು ಎರಡು ಕೈಯಗಳನ್ನು ನಿಧಾನವಾಗಿ ಸರಸುತ್ತಾ ಹತ್ರತಂದು ‘ಪಟ್ ಅಂತ ಸಡನ್ ಆಗಿ ಮುಚ್ಚಿಬಿಡುತ್ತಿದ್ದೆ. ಇಲ್ಲವೆ ಒಂದ ಕೈಯಿಂದ ಕೆಳಗೆ ಕುಳಿತ ನೋಣದ ಮೇಲೆ ‘ಪಟ್’ ಅಂತ ಮುಚ್ಚಿ ಹೀಗೆ ಮಾಡಿ ಒಮ್ಮೊಮ್ಮೆ ಹತ್ತೆಂಟು ನೊಣ ಸಂಗ್ರಹಿಸಿ ಬಾಟಲಲ್ಲಿ ಹಾಕತಿದ್ದೆ.

ಅಪ್ಪಾ “ಚೀ…ಏನೊ ನೊಣ ಹಿಡಿಯೋದು ಅಸಹ್ಯ..ಎಲ್ಲೆಲ್ಲೊ ಕೂತು ಬಂದಿರತಾವ..ಸರಿಗೆ ಕಾಣುತಾದನು’ ಎಂದು ಅದರ ಬಗ್ಗೆ ಹೇಳಿ ಬೈದು ಬಿಡಿಸಿದ್ದ. ಆದರೂ ಕಲ್ತ ಚಾಳಿ ಕಲ್ಲು ಹಾಕಿದ್ರು ಹೋಗಲ್ಲ ಅಂತಾರಲ್ಲ.. ನೋಣ ನೋಡಿದ ಕೂಡಲೆ ಕೈ ಆ ಕಡೆನೆ ಓಡುತಿತ್ತು.
ನನಗೂ ನೊಣದಂಗ ಸೊಳ್ಳೆನೂ ಹಿಡಿಬೇಕೆಂಬ ಆಸೆ ಇತ್ತಾದ್ರೂ ಸೊಳ್ಳೆನ ಹಿಡಿದ್ರ ಅದು ಚೂಪಾದ ಕೊಂಡಿಯಿಂದ ಕಚ್ಚಿದ್ರೆ…? ‘ಸುಮ್ಮನೆ ಹೋಗೊ ದೆವ್ವನ ಮನ್ಯಾಗ ಎಳಕೊಂಡಾಂಗ’ ಅಂತಾರಲ್ಲ ಒಣ ರೋಗಕ್ಕ ಮೂಲ ಮಾಡಿಕೊಳ್ಳೊದು ಯಾಕ ಅಂತ ಅದಕ್ಕೆ ಹೊಡದು ಹೊಡದು ಕೊಲ್ಲುತ್ತಿದ್ದೆ. ಆದರ ಈ ಸೊಳ್ಳೆ ಮಾತ್ರ ಬಾಳ ಕಾಡಕ ಹತ್ತಿತು. ನನ್ನ ಪೇಶನ್ಸ್ನ ಕೆಡಸಕತಿತು. ಕಾದು ಕಾದು ಸಾಕಾಗಿ ಬರಲಿಲ್ಲ. ಬಂದಾಗ ನೋಡಿದ್ರಾಯ್ತು ಅಂತ ಪುಸ್ತಕ ಹಿಡಿದೆ; ಹಾಂಗ ಕಣ್ಣಿಗೆ ಮಬ್ಬು ಏರಿಬಿಡ್ತು.

ತೂಕಡಸಾಕತ್ತಿದ್ದೆ ಮತ್ತೆ ಆ ಧ್ವನಿ ಕೇಳಿತು. ಥಟ್ಟನೆ ಎಚ್ಚರಾಗಿ ಸುತ್ತಲೂ ನೋಡಿದೆ; ಆದರೆ ಯಾರೂ ಇರಲಿಲ್ಲ. ಮತ್ತೆ ತಲೆತಗ್ಗಿಸಿಕೊಂಡು ಪುಸ್ತಕ ನೋಡಿಕೊಂತ ಕೂತೆ. ‘ಹಲೋ..ಹಲೋ..’ ಎಂದು ಮತ್ತೆ ಅದೆ ಧ್ವನಿ ಕೇಳಿಸಿತು. ಅತ್ತ ಇತ್ತ ನೋಡಿದೆ…..ಮತ್ತೆ ಕಿಡಿಕಿಯತ್ತ ನೋಡಿದೆ. ಎಲ್ಲಿ ಏನೂ ಇಲ್ಲ. ಸ್ವಲ್ಪ ಭಯ ಆಯ್ತು.
ಅಕ್ಕ ಬೇರೆ ಹೋದರ‍್ಷ “ಅಪ್ಪಾ, ರಾತ್ರಿ ಓದುವಾಗ ‘ಗೆಜ್ಜೆ’ ಸದ್ದು ಕೇಳಿದಂಗ ಆಗತದಪ್ಪಾ?’ ಅಂತಿದ್ದು ನೆನಪಾಯಿತು. ಅಕ್ಕನ ಅಂಜಿಕೆ ಓಡಿಸಲೆಂದು ಆ ಧ್ವನಿ ಕೇಳಲೆಂದು ಅಪ್ಪ ವಾರಗಟ್ಟಲೆ ಅಕ್ಕನ ಜೊತೆ ಎದ್ದು ‘ನನಗೂ ಕೇಳಿಸು?’ ಎಂದು ಹಠ ಹಿಡಿದು ಕುಳಿತಿರುತಿದ್ದ; ಆದರೆ ವಾರ ಅಪ್ಪ ಎಚ್ಚರಿದ್ದು ಕುಳಿತಿದ್ರು… ಫಲ ಕೊಟ್ಟಿರಲಿಲ್ಲ. ಅವಾಗ ಕಾಡದ ಆ ಗೆಜ್ಜೆ ಧ್ವನಿ, ವಾರದ ನಂತರ ಒಬ್ಬಳೆ ಕುಳಿತಾಗ ಮತ್ತೆ ಕೇಳುತ್ತಿತ್ತು. ಅಪ್ಪಾ “ನಿನಗ ಎಲ್ಲೋ ಭ್ರಮೆ, ಓದೊದಕೆ ನೆವ ಹುಡುಕುತ್ತಿಯಾ?” ಎಂದು ಬೈದಿದ್ದ. ಇಲ್ಲಪ್ಪ ಎಂದರೂ “ನೋಡಮ್ಮ ಮನೆ ಸುತ್ತಲೂ ಎಮ್ಮೆ, ದನ ಕರಗಳಿವೆ, ಅವುಗಳಿಗೆ ಗೆಜ್ಜೆ ಕಟ್ಟಿದ್ದರೆ ಅವು ಅಳ್ಳಾಡಿಸುವಾಗ ಆ ಸೌಂಡ್ ಆಗುತ್ತದೆ, ಅಷ್ಟಕ್ಕ ಭಯಗೊಳ್ಳೊದಾ?”ಅಂದಿದ್ರು. “ಹಾಗಲ್ಲಪ್ಪ, ನನಗೆ ಕೇಳಿಸುತ್ತದೆ” ಅಂದ್ರ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಷ್ಟೋ ಸಾರಿ ಆ ಧ್ವನಿ ಬಂದೊಡನೆ ಮಲಗಿ ಬಿಡುತ್ತಿದ್ದಳು.. ಒಮ್ಮೆ ಹೀಗೆ ಆದಾಗಲೂ ಅಪ್ಪನನ್ನು ಎಬ್ಬಿಸಿದ್ದಳು. ನಾನು ಹಿಂದೆ ಹೋಗಿದ್ದೆ. ‘ನಡಿ ಹೋಗೋಣ’ ಎಂದು ಅಕ್ಕನನ್ನು ಒತ್ತಾಯಿಸಿದಾಗ ‘ಒಲ್ಲೆ’ ಎಂದು ಅತ್ತಿದ್ದಳು.

“ಪುಟ್ಟ ಹುಡಗಗ ನೋಡೋ ಕುತೂಹಲ, ನಿನಗೇನಾಗ್ಯಾದ?” ಎಂದು ಬಯ್ದು ಕರೆದುಕೊಂಡು ಹೋಗಿದ್ದರು. ಆ ಸಪ್ಪಳದ ಬೆನ್ನಟ್ಟಿ ಮನೆಯಿಂದ ಹೊರಗಡೆ ಬಂದಾಗ ಅತ್ತ ಇತ್ತ ನೋಡಿದೆವು. ಮತ್ತೆ ಧ್ವನಿ ಬಂದ ದಾರಿ ಹಿಡಿದು ನಡೆದಾಗ ನಾಯಿ ಹೋಗೋದು ಕಂಡಿತು. ಅದರ ಕೊರಳಲ್ಲಿ ಗಂಟೆ ಕಟ್ಟಿದ್ದರು. ‘ಇದೇನೇ?’ ಎಂದ.. “ಅಲ್ಲಪ್ಪ…ಘಲ್ ಘಲ್ ಮಾಡುತ್ತಿದೆ’ ಅಂದಳು. ಅದೆ ಸಮಯದಲ್ಲಿ ಕೊನೆ ಮನೆಯ ಆಂಟಿ ನೀರು ತೆಗೆದುಕೊಂಡು ಹೊಂಟಿದ್ಲು. ಆಕೆಯ ಕಾಲಲ್ಲೂ ಗೆಜ್ಜೆಯಿಂದ ಧ್ವನಿ ಬರುತ್ತಿತ್ತು.
“ಇವೇನೆ?”
“ಅಲ್ಲ” ಎಂದಳು.

ನಮ್ಮ ಗಮನಿಸಿದ ಆಂಟಿ “ಯಾಕ್ರಿ ಮಕ್ಕಳನ್ನು ಕರಕೊಂಡು ಎಲ್ಲಿಗೆ ಹೊಂಟಿರಿ?” ಅಂತ ಕೇಳಿದಾಗ “ಏನೊ ಗೆಜ್ಜೆ ಸೌಂಡು ಬರುತ್ತಂತ ಮಗಳು ಅಂಜತಿದ್ಲು, ಅದಕ ನೋಡೊಣ ಬಾ ಎಂದು ಕರಕೊಂಡು ಬಂದೆ” ಎಂದರು ಅಪ್ಪ “ಎಂತಕಿ ಯವ್ವಾ. ಕುಡೆ ನೀರಿನ ಸಲುವಾಗಿ ಸವರಾತ್ರಿ ಎರಡು ಅನ್ನಂಗಿಲ್ಲ ಮೂರ ಅನ್ನಂಗಿಲ್ಲ, ದೆವ್ವದಂಗ ಅಡ್ಡಾಡಿ ನೀರು ತರತೀನಿ. ನನಗ್ಯಾವು ಕೇಳಿಲ್ಲ ಬಿಡವ್ವ” ಎಂದು ನಕ್ಕು ಹೋದಳು. “ತಿಳಿತಿಲ್ಲ ಆಕಿ ಹೇಳಿದ್ದಾದ್ರೂ….” ಎಂದು ಮತ್ತೆ ಅಪ್ಪ ಬೈದಿದ್ದ.

ಅಕ್ಕ “ತಿಳಿತು, ಆದರೆ ಆಂಟಿ ನಕ್ಕು ಹೋದರಲ್ಲ ಅಂದ್ರ ಏನರ ಇರಬೇಕು ಅಂತ ಅಲ್ಲನು” ಎಂದ್ಲು.
“ಹುಚ್ಚು ಹುಡುಗಿ ನಿನಗಿನ್ನು ರ‍್ಥವಾಗವಲ್ತು. ಮತ್ತೆಲ್ಲಿ ಬರುತ್ತೇಳು. ಇವತ್ತು ಬೆಳತನ ಜಾಗರಣೆ ಆದ್ರೂ ಚಿಂತಿಲ್ಲ ನಿನ್ನ
ದೆವ್ವನ್ನ ಒಂದು ಕೈ ನೋಡಕೊಂಡ ಬಿಡ್ತೀನಿ” ಎಂದ…

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

13 February, 2023

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading