
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.
ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…
ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…
13
“ಫ್ರೆಂಡು ಎಲ್ಲಿ ಹೋದಿ?”
“ನಾನೆಲ್ಲಿ ಹೋಗಲಿ.. ಇಲ್ಲೇ ಇದ್ದೀನಿ ನೋಡು”
“ಅದೆ ಕೇಳಲಾ.. ಸೂಸುಗೆ ಹೋಗುವಾಗ ಕೇಳತೀನಿ ಅಂದಿದ್ದು”
“ಕೇಳು”
“ ನನ್ನನ್ನು ಒಮ್ಮೆ ನಿನ್ನ ಹಾಗೆ ಮಾಡು”
“ಬೇಡ ಮಹರಾಯ… ಏನದ ನಮ್ಮ ಬದುಕು… ಎಲ್ಲವೂ ನಿಂತ ನೀರಲ್ಲಿ.. ಹೊಲಸಿನಲ್ಲಿ”
“ಇಲ್ಲ…. ಇಲ್ಲ… ನಿಮ್ಮ ಲೋಕದೊಳಗ ಸುತ್ತೋ ಆಸೆ…. ಹಾರೊ ಆಸೆ… ನನಗೂ ನೀರಲ್ಲಿ ತೇಲೊ ಆಸೆ.. ನಿಮ್ಮ ಹಾಗೆ ಊಟ ಮಾಡೋ ಆಸೆ”
“ಇದು ಒಂದು ಆಸೆನಾ! ಮನುಷ್ಯರು ನೀವೆಲ್ಲ ಅದಕ್ಕಂತನ ತಲಿ ಓಡಿಸಿ ವಿಮಾನ, ಹಡುಗು ಕಂಡು ಹಿಡಿದಿಲ್ಲೇನು?”
“ಅದು ಎಷ್ಟಾದ್ರೂ ಕೃತಕನೊ.. ರಿಯಲ್ ಹೇಗಾಗುತ್ತದ..ಸ್ವತಃ ಅನುಭವಿಸಿದಾಗನ ಮಜಾ ಇರೋದು”
“ಹೌದು ಏನು ಮಾಡಬೇಕಂದಿ ಈಗ”
“ಆಗಲೇ ಹೇಳಿದಿನಲ್ಲ… ನನ್ನ ಸೊಳ್ಳೆ ಮಾಡಿಬಿಡು”
“ಮನುಷ್ಯರನ್ನ ಸೊಳ್ಳೆ ಮಾಡೋಕೆ ಹೇಗೆ ಬರತಾದೊ?”
“ನಿನಗೆ ಮಾತಾಡೋಕೆ… ಏನೆಲ್ಲ ಬದಲಾಯಿಸೋಕೆ ಬರತದ ಅಂದ್ರ ನನ್ನನ್ನ ಸೊಳ್ಳೆ ಮಾಡೋಕು ಬರತಾದ… ಅಷ್ಟೆ” ಎಂದು ಸಿಟ್ಟುಮಾಡಿಕೊಂಡು ಹೇಳಿದೆ
“ಒಳ್ಳೆ ಫ್ರೆಂಡಪ.. ನೀನು.. ಆದರೂ ಅದು ರಿಸ್ಕಿಪ.. ಬಹಳ ಕಷ್ಟ”
“ ನೀನು ಇರುವಾಗ ನನಗೇನು ಆಗೊಲ್ಲ… ಹಾಂಗ ಬಂದ್ರೂ ನಾನು ಎದುರಸ್ತೀನಿ. ಮನೆಯಲ್ಲಿ ಯಾರೂ ಇಲ್ಲ ಒಂದು ಸುತ್ತಾ ಹಾಕಿ ಬಂದು ಬಿಡ್ತೀನಿ”
“ಬೇಡ ಸಮು.. ಪ್ಲೀಜ್”
“ಪ್ಲೀಜ್ ಫ್ರೆಂಡು…. ಹಾಗನ್ನಬೇಡ ಫ್ರೆಂಡು..ನನ್ನ ಲವ್ಲಿ ಫ್ರೆಂಡು”
“ನೀನು ಪ್ರೆಂಡು ಅಂದು ಅಂದು ನನ್ನ ಮೆತ್ತಗ ಮಾಡಿಬಿಡತಿಪಾ…? ಆಯ್ತಪ್ಪ ನಿನ್ನಿಷ್ಟ.. ಒಂದು ಮಂತ್ರ ಹೇಳತೀನಿ ಹಾಗ ಹೇಳತೀಯಾ?”
“ನಿಮ್ಮಲ್ಲೂ ಮಂತ್ರ ಅವಾನಾ?”
“ನೀನು ಹೀಗೆಲ್ಲ ಪ್ರಶ್ನೆ ಮಾಡಿದ್ರ ನಾನು ಕರೆದುಕೊಂಡು ಹೋಗಲ್ಲ ನೋಡು”ಎಂದು ಮುಖ ಸಿಂಡರಿಸಿಕೊ೦ಡಿತು
“ಆಯ್ತಪ್ಪ ಹೇಳು”

“ಕಣ್ಣನ್ನು ಮುಚ್ಚಿ ಹೇಳಬೇಕಾ? ಅಪ್ಪಿ ತಪ್ಪಿಯೂ ಕಣ್ಣು ತೆರೆದರ ನಿನಗ ತೊಂದರೆ” ಎಂದು ಹೇಳಿ “ಜುಂಯ್..ಜು೦ಯ್..ಜುಯ್ಯ…ಸೊ೦ಯಿ..ಸೊ೦ಯಿ. ಸೊ೦ಯ್ಯ… ಡು೦ಯಿ ಡುಂಯಿ ಡುಂಯ್ಯ… ಬು೦ಯಿ ಬುಂಯಿ ಬುಂಯ್ಯ… ಪು೦ಯಿ ಪುಂಯಿ ಪುಂಯ್ಯ” ಅಂತು
“ಹೇ..ಹೇ..ಹೇ..ಹ೦..ಹ೦..ಹ೦…ಏನು ಫ್ರೆಂಡು ತಮಾಷೆ ಮಾಡಾತ ಇದ್ದಿಯಾ.. ನಾವು ಹಿಂಗ ಎಷ್ಟೊ ಸಲ ಮಾಡಿವಿ ಮಾಟಗಾತಿ ಕತಿ ಓದಿ…. ‘ಅಬರಕ ಡಬರಾ..ಗಿಲಿ ಗಿಲಿ.’ ಅಂತ ಹಾರಿ ಮಾಯ ಆಗಲಾರದ ಬಿದ್ದು ಗಾಯ ಮಾಡಿಕೊಂಡಿವಿ”
“ನೀನು ಅಂತಿಯೋ ಇಲ್ಲನೊ ಸಮು”
“ಫ್ರೆಂಡು ಮಂತ್ರಕ್ಕ ಮಾವಿನ ಕಾಯಿ ಉದೋರಲ್ಲ ಅಂತ ಹೇಳತಾರ ನಮ್ಮ ಮೇಷ್ಟ್ರು”
“ಒಳ್ಳೆ ವಿಚಾರ ನಂಬೋರಿಗೆ ಎಲ್ಲಾನೂ ಉದರತಾವ..ನೀನು ಅಂತಿಯೋ ಇಲ್ಲ..ಬೇಡ ಬಿಡು…”
“ಇಲ್ಲ ಫ್ರೆಂಡು ಹೇಳತಿನಿ… ನಿನ್ನ ಜೊತೆ ಸುತ್ತುವ ಸಲುವಾಗಿಯಾದರೂ….” ಎಂದು “ಜುಂಯ್..ಜು೦ಯ್..ಜುಯ್ಯ…ಸೊ೦ಯಿ..ಸೊ೦ಯಿ. ಸೊ೦ಯ್ಯ…ಡು೦ಯಿ ಡುಂಯಿ ಡುಂಯ್ಯ…ಬು೦ಯಿ ಬುಂಯಿ ಬುಂಯ್ಯ…ಪು೦ಯಿ ಪುಂಯಿ ಪುಂಯ್ಯ” ಎಂದೆ.
“ಈಗ ಬಲಕ್ಕ ಬಾ….”
“ಬಂದೆ”
“ಈಗ ಸ್ವಲ್ಪ ತಿರುಗು”
“ಹಾಂ…. ತಿರುಗಿದೆ”
“ಇನ್ನೊಂದು ಸಾರಿ ಆ ಮಂತ್ರ ಅಂದು ಜಂಪು ಮಾಡಿ ಕಣ್ಣು ತೆರೆ”
“ಜುಂಯ್..ಜು೦ಯ್..ಜುಯ್ಯ…ಸೊ೦ಯಿ..ಸೊ೦ಯಿ. ಸೊ೦ಯ್ಯ…ಡು೦ಯಿ ಡುಂಯಿ ಡುಂಯ್ಯ…ಬು೦ಯಿ ಬುಂಯಿ ಬುಂಯ್ಯ…ಪು೦ಯಿ ಪುಂಯಿ ಪುಂಯ್ಯ” ಎಂದು ಹೇಳಿ ಜಂಪ ಮಾಡಿದೆ. ದೇಹದಲ್ಲಿ ಸಡನ್ನ ಆಗಿ ಏನೊ ಹೊಕ್ಕೊಂಡು ಏನೊ ಹಾರಿ ಹೋದಂಗ ಆಯ್ತು. ದೇಹ ಹಗುರಾಗಿತ್ತು. ಕಣ್ಣ ಆಪರೇಶನ್ ಮಾಡಿಸಿಕೊಂಡ ಮೇಲೆ ಕಣ್ಣು ತೆಗಿತಾರಲ್ಲ ಹಾಂಗ ತೆಗೆದು ನೋಡಿದೆ…”ಅಮ್ಮಾ?” ಎಂದು ಚೀರಿದೆ.
“ಯಾಕೆ ಸಮ್ಮು ಏನಾಯಿತು”
“ಕಣ್ಣು ಕಾಣುತ್ತಿಲ್ಲ”
“ಕಣ್ಣು ಕಾಣುತ್ತಲ್ಲನೊ? ನೀನು ಕಾಣುತಿಲ್ಲವೊ?”
ಸರಿಯಾಗಿ ನೋಡಿ “ಇಲ್ಲ ಕಾಣ್ತಿದೆ ನಾನು ಕಾಣುತ್ತಿಲ್ಲ”
“ನಿನಗೆ ಏನು ಕಾಣುತ್ತಿದೆ”
“ಖಾಲಿ ಕನ್ನಡಿ”
“ಅದರ ಹತ್ರಕ್ಕೆ ಹೋಗಿ..ಹಾರೋದನ್ನು ನೋಡು”
ಅದು ಹೇಳಿದ ಹಾಗೆ ಹೋಗಿ “ಸೊಳ್ಳೆ ಕಾಣ್ತಿದೆ..”
“ನೀನೆ ಅದು”
“ನಾನಲ್ಲಪ್ಪ ಅದು ನೀನೆ…? ಕನ್ನಡಿಯನ್ನು ಸರಿಯಾಗಿ ನೋಡು ಹಾರತಿರೋದು ನೀನೆ!”
“ಅಮ್ಮಾ…ನಾನಾ? ಹಿಂಗಾದೇನಾ?
“ನೀನೆ ಬಯಸಿದ್ದೆಲ್ಲಪಾ..ನನ್ನ ಹಾಗೆ ಆಗಬೇಕು ಅಂತ” ಎಂದು ನಕ್ಕಿತು.
“ನಿಜಕ್ಕೂ…ನಾನಾ …ನಾನಾ?”
“ಹೌದು..ಹೌದು.. ನೀನೆ…ನೀನೆ?”
ಸೊಳ್ಳೆ ಫ್ರೆಂಡಗಿ೦ತ ಸ್ವಲ್ಪ ದೊಡ್ಡದಾಗಿರುವ ಸೊಳ್ಳೆ ಕಾಣುತ್ತಿತ್ತು. ರೆಕ್ಕೆ ವಿಶೇಷವಾಗಿದ್ದುವು…ರೆಕ್ಕನ ಮೇಲೆ ಕೆಳಗೆ ಮಾಡಿದೆ… ಕನ್ನಡಿಯ ಮೇಲೆ ಕುಳಿತು ಕಾಲನ್ನು ಎತ್ತಿದೆ… ಕೊಂಡಿಯಿ೦ದ ಕನ್ನಡಿಯನ್ನು ಚುಚ್ಚಿದೆ..ಕನ್ನಡಿ ಫಳ್ ಎಂದು ಒಡಿತು. ಅಂಜಿಕೊ೦ಡೆ
“ಏನಾಯ್ತು ಸಮ್ಮು”
“ಏನಿಲ್ಲ.. ಕೊಂಡಿಯಿ೦ದ ಸ್ವಲ್ಪ ಒತ್ತಿದೆ.. ಅಷ್ಟಕ್ಕೆ ಕನ್ನಡಿ ಒಡೆದುಬಿಡೋದಾ? ಏನು ಫ್ರೆಂಡು ನನ್ನ ಶಕ್ತಿಮಾನ್ ಟೈಪ್ ಮಾಡಿಬಿಟ್ಟಿಯಾ?
“ನನಗೆ ಗೊತ್ತಾಗುತ್ತಿಲ್ಲಲ್ಲೊ… ನೀನು ಮನುಷ್ಯ ಅಲ್ಲ.. ಅದಕೆ ಆ ಪವರ್ ಬಂದಿದೆಯೇನೊ”
“ಹೌದಾ..ಹೂ..ಹಾ..ಹೂ..ಹಾ”
“ಹಾಗೆಲ್ಲ ಹೆಗರಾಡಬೇಡಾಪ್ಪ ಮನೆಯಲ್ಲಿ ಸಾಮಾನುಗಳೆಲ್ಲ ಒಡೆದು ಹೋಗಿಬಿಡತಾವ್”
“ಬಾಳ ಖುಷಿ ಆಗತಿದೆ ಫ್ರೆಂಡು.. ತ್ಯಾ೦ಕ್ಯೂ… ಹೊಸ ಅನುಭವ ಕೊಡತಿರೋದಕ್ಕೆ” ಎಂದು “ಹೌದು ಫ್ರೆಂಡು ಮೊದಲಿನಂಗ ಆಗಬೇಕಾದ್ರೆ…ಏನು ಮಾಡಬೇಕು?”
“ಮಾಡೋಕಾಲ್ಲ…. ಆಯಿತು ಇಷ್ಟೆ”ಎಂದು ನಕ್ಕಿತು.
“ಹೌದಾ ಚಲೊ ಆಯಿತು ಬಿಡು…. ನನ್ನದು ಓದೋದು ಬರೆದು ತಪ್ಪಿತು.. ಅರಾಮಾಗಿ ಹಾರಾಡಿಕೊಂತ ಇರತಿನಿ” ಎಂದೆ.
“ಅಮ್ಮಾ ಭಾರಿ ಇದ್ದಿ ಬಿಡು… ಮತ್ತೆ ಇಡಿ ನಮ್ಮ ಸೊಳ್ಳೆ ಕುಲಾನ ಕೊಲ್ಲಂಗಿದ್ದಿ”
“ಗೆಳೆಯನಿಗೆ ಮೋಸ ಮಾಡ್ತಿನೇನೊ ಫ್ರೆಂಡು?”
“ಯಾವ ಟೈಮಿನ್ಯಾಗ ಯಾರು ಹ್ಯಾಂಗಿರುತಿರಿ ಗೊತ್ತಾಗಲ್ಲ”
“ಹೇಳ್ತಿಯೊ ಇಲ್ಲೊ….?”
“ಮೊದಲು ಅದರ ಮಜಾ ಅನುಭವಿಸು ಆಮೇಲೆ ಹೇಳೋಣ”
“ಸರಿ” ಎಂದು ಮೈಯಲ್ಲಾ ನೋಡಿಕೊಂಡೆ ಸೊಳೆ ಮೈ ಆಗಿ ಬಿಟ್ಟಿತ್ತು… ಆರು ಕಾಲುಗಳು, ಎರಡು ಮೀಸಿ, ಎರಡು ರೆಕ್ಕಿ..,, ಕೊಂಡಿ, ತೆಳುವಾದ ಉದ್ದನೆಯ ದೇಹವಾಗಿ ಬದಲಾಗಿತ್ತು. ಒಂದು ಕ್ಷಣ ಅಸಹ್ಯ ಎನಿಸಿಕೊಂಡು ಪಾರಿವಾಳ, ಗಿಳಿ ಇಂತವಾಗಿದ್ರ ಚಲೊ ಇತ್ತ ಅಂತ ಅನಕೊಂಡೆ
“ಹಿ೦ಗ ನೀವು, ಡಿ.ವಿ.ಜಿ ಅವರು ‘ಇರುವ ಭಾಗ್ಯವ ನೆನೆದು ಬಾರದದೆಂಬುದನು ಬಿಡು, ಹರುಷಕ್ಕಿದು ದಾರಿ’ ಅಂತ ಹೇಳಿಲ್ಲವೇನು?”ಎಂದಿತು
“ಹೌದಪ ಅಡಿಗರು ಹೇಳ್ಯಾರ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೆ ಜೀವನ’ ಅಂತನೂ”ಎ೦ದೆ”
“ಇಷ್ಟೆಲ್ಲ ಹೇಳತಿ.. ಮತ್ತೆ ಪಾರಿವಾಳ ಆಗಬೇಕು…. ಗಿಳಿ ಆಗಬೇಕಿತ್ತು ಅಂತ ಯೋಚಸ್ತಿ”
“ಪುರಾಣ ಹೇಳಾಕ ಬದನೆಕಾಯಿ ತಿನ್ನೋಕ ಅಂತ ಸುಡುಗಾಡು ನಮ್ಮ ಹುಟ್ಟಗುಣ.. ಒಂದನ್ನ ಬಿಟ್ಟು ಮತ್ತೊಂದನ್ನು ಯೊಚಿಸೊ ಹಾಂಗ ಮಾಡತಾದ”
“ ಇರಲಿ ನಿನ್ನ ಕೊಂಡಿ ಸ್ಟಾಂಗದಪ.. ಯಾಕ೦ದ್ರ ನೀನು ಮನುಷ್ಯ”
“ಹೌದಾ ಟೆಸ್ಟ ಮಾಡಿ ನೋಡಲಾ?”
“ಯಾರ ಮ್ಯಾಲೆ ಮಾಡತಿ.. ಆಗಲೆ ಮನ್ಯಾಗಿನ ಕನ್ನಡಿ ಒಡೆದಿದ್ದಿಯಾ?”
“ಬಾ ಹೊರಗಡೆ ಹಾರಿ ಒಂದು ರೌಂಡ ಹೋಗಿ ಬರೋಣ”
“ಹಾರೋದು ಕಷ್ಟ ಅಂತ ಹೇಳಿದೆನಲ್ಲ.. ನಿಮ್ಮ ಅಶುನಿಂದ”
“ಉದ್ರಿ ಪುರಾಣ ಬ್ಯಾಡ ಇಷ್ಟೆಲ್ಲ ನಮ್ಮ ಆಕಾರ ಚೆಂಜ್ ಮಾಡೋಕೆ ಬರತಾದ.. ನಿನ್ನ ಕಾಲು ಸರಿಮಾಡಿಕೊಳ್ಳಕಾಗಲ್ಲನು..?”
“ಭಾರಿ ಇದ್ದಿಯಾ.. ಎಲ್ಲಾ ನನ್ನ ರಹಸ್ಯನ ತಿಳುಕೊಂಡು ಬಿಟ್ಟಿ…! ಇನ್ನೂ ಬಾಳವ”
“ಆಮೇಲೆ ಹೇಳುವಂತಿ.. ಮೊದಲು ಹಾರೋಣ ಬಾ.. ಹಾರಂಗ ಅನಸ್ತಿದೆ..”
“ಹೊಸದು ಎಲ್ಲರಿಗೂ ಚಂದ… ನಮಗ ಹಾರೋದು ಸಾಕನ್ಸತದ ನಿನಗ ಬೇಕನಸ್ತದ.. ಹಾರು ಏನೂ ಬೀಳಲ್ಲ…”
“ಹೌದಾ ಹೌದಾ” ಎಂದು ರೆಕ್ಕೆ ಬಡಿದು ‘ಅಯ್ಯಿ ಅಯ್ಯಿ…’ಎಂದು ಹಾರಿ ಖುಷಿ ಪಟ್ಟೆ.. ಕೇಕೆ ಹಾಕಿದೆ “ಕೇಳತಿದಿಯಾ..?
“ನಿನ್ನ ಕೇಕೆನ ಯಾರೂ ಕೇಳಿಸಿಕೊಳ್ಳಲ್ಲ..”
“ನಡಿಯೋಣ ಹೊರಗೆ” ಎಂದು ಕಿಡಿಕಿಯೊಳಗಿಂದ ಹಾರಲು ಹೋದೆ ಪಟ್ ಅಂತ ಕೆಳಗೆ ಬಿದ್ದೆ.
ಸೊಳ್ಳೆ ನಗುತ್ತಾ ಹತ್ರ ಬಂತು
“ಯಾಕೆ ನಗುತ್ತಿದ್ದಿಯಾ?”
“ರೆಕ್ಕೆ ಬಂದವ೦ತ ಎಲ್ಲಿ ಬೇಕಲ್ಲಿ ಹಾರಕ ಬರಂಗಿಲ್ಲಪ…. ನೋಡಬೇಕು.. ಹಾರುವಾಗ ಎಲ್ಲೆಲ್ಲಿ ಏನು ಬರತಾವಂತ.. ಯಾರನ್ನು ನಮ್ ನೋಡ್ತಿರಂತ ಗಮನಸಬೇಕು.. ನಮ್ಮನ್ನ ಕೊಲ್ಲಾಕ ಏನೆಲ್ಲ ಸ್ಪೆç ಮಾಡಿರತಾರಲ್ಲ ಅದರ ಲಕ್ಷನೂ ಬೇಕು… ಈಗ ನೀನೆ ನೋಡು ಸೊಳ್ಳೆ ಜಾಸ್ತಿ ಆಗ್ಯಾವಪ ಅಂತ ಕಿಡಕಿಗೆ ಮ್ಯಾಟ್ ಹಾಕಿಸಿದ್ದಿ… ಈಗ ನಿನಗ ಅದು ಅಡ್ಡ ಆಗ್ಯಾದ” ಎಂದು ನಕ್ಕಿತು.
ನಾನು ನಕ್ಕು… ಸರಿ ಹೇಳೊದೆಲ್ಲ ಗೊತ್ತಾಯ್ತು… “ನಿಮ್ಮ ದಾರಿ ತೋರಿಸು” ಎಂದೆ
“ಬಾ..ನನ್ನ ಹಿಂದೆ” ಎಂದು ಮೇಲೆ ಹಾರುತ್ತ ವೆಂಟಿಲೇಷನ್ಗಾಗಿ ಬಿಟ್ಟಿದ್ದ ಕಿಡಿಕಿಯಲ್ಲಿ ಮ್ಯಾಟ ಗೆ ಬಾಲ್ ಬಿದ್ದುತೆಗ್ಗಗಿತ್ತು.. ಅಲಿ ಸಣ್ಣ ಕಿಂಡಿ ಬಿಟ್ಟಿತ್ತು…. ‘ಹೊ ಇದು ಅವತ್ತು ಅಕ್ಕನ ಜೊತೆ ಕ್ರಿಕೇಟ್ ಆಡುವಾಗ, ಬಾಲನ್ನು ಹೊಡೆದಿದ್ದೆ.. ಅದು ಮ್ಯಾಟನ್ನು ಸೀಳಿ ಹೊರಗೆ ಹೋಗಿ ಬಿದ್ದಿತ್ತು…ನಾವು ಯಾರೂ ಅಷ್ಟಾಗಿ ನೋಡಿರಲಿಲ್ಲ “ಭಾರಿ ಚಾಲಾಕಿನ ನೀವು… ಎಲ್ಲಿ ದಾರಿ ಹುಡುಕಿರಿ!” ಎಂದು ಹಾರುತ್ತ ನಿಂತೆ.

“ನಿನ್ನ ತಲೆಗಿಂದು ಎಲ್ಲಾ ಗೊತ್ತಾಗತಾದ… ಬೇಗ ಬಾ” ಎಂದು ಕರೀತು.
ಹೊರಗಡೆ ನಿಧಾನವಾಗಿ ಹೋದೆ… ನೆಲದ ಮೇಲೆ ಅಡ್ಡಾಡಿದ್ದ ನಾನು ಈಗ ಗಾಳಿಯಲ್ಲಿ ತೇಲುತ್ತಿದ್ದೆ..
“ಹುಷಾರು ಮೈಮರಿಬೇಡ”
“ಆಯ್ತು ಆಯ್ತು” ಅಂತ ಹಾರುತ್ತ ಹೊರಟೆ
“ನಿಲ್ಲಪ… ನಿನ್ನಷ್ಟು ಹಾರಕ ಆಗಲ್ಲ ನೀನು ಮುನುಷ್ಯ ಸೊಳ್ಳೆ…. “
“ಆಯ್ತು… ನೀನು ನನ್ನ ಗುರು ಅಲ್ಲೇನು”ಎಂದು ಅದರ ಜೊತೆ ಹೊರಟು “ಎಲ್ಲಿಗೆ ಹೋಗೋದು ಎಂದೆ?”
“ನೀನೆ ಬಯಸಿ ಬಯಸಿ ನೋಡಬೇಕೆಂತಿರುವೆಯಲ್ಲ… ನಮ್ಮ ಲೋಕಕ್ಕ” ಅಂತು
“ಐದು ನಿಮಿಷ… ಅಲ್ಲಿ ಕಾಣತಿದೆಯಲ್ಲ ಸೇಟ್ನ ಆ ಸ್ವೀಟ್ ಅಂಗಡಿ. ಅಲ್ಲಿ ಹೊಕ್ಕು ಎಲ್ಲಾ ಸ್ವಲ್ಪ ತಿಂದು ಬಂದುಬಿಡತಿನಿ.. ಅಸೆ ತೀರಿಸಿಕೊಂಡು ಬಿಡತಿನಿ… ಅಪ್ಪ ಕೊಡಸಲ್ಲ.. ಬಹಳ ದಿನ ಆಸೆ ಅದ”
“ಆಯ್ತು ಆಯ್ತು…. ಹುಷಾರು…! ಬೇಗ ಬಾ”
“ಸರಿ” ಎಂದು ಬೇಕರಿಯಲ್ಲಿ ಹೊಕ್ಕಂಡು..ಅಲ್ಲಿಯ ಜಹಾಂಗೀರು, ಜಿಲೇಬಿ. ಮೈಸೂರು ಪಾಕು, ಖವಾ, ಕೇಖು… ಪಫ್.. ಇದ್ದುದ್ದವು ಮೇಲೆ ಕುಳಿತು ಕೊಂಡಿಯಿ೦ದ ಕಚ್ಚಿ ಕಚ್ಚಿ ತಿಂದೆ.. ಬಾಯಿಯಿ೦ದ ಸರಳವಾಗಿ ತಿನ್ನಲು ಸಾಧ್ಯವಾಗದಿದ್ದರೂ ಕೊಂಡಿ ಮೂಲಕ ತಿನ್ನೊದು ಮಜಾ ಅನಿಸ್ತು. ಕೋಲ್ಡ ಕೇಕು, ಹನಿಕೇಕು, ಚಾಕಲೇಟು ಎಲ್ಲವನ್ನು ಮೆಲ್ಲುತ್ತಿರಬೇಕಾದರೆ ಒಬ್ಬಾವ “ಅಲ್ಲೊ ನೋಡೊ ಎಂತಹ ದೊಡ್ಡ ಸೊಳ್ಳೆ” ಎಂದು ಕೂಗಿದ. ಅಂಗಿಯ ಕೆಲಸದವ “ಎಲ್ಲಿ ಎಲ್ಲಿ” ಎಂದು ನೋಡಿ ಹೊಡೆಯಲು ಬಂದ… ನನ್ನ ಹಿಡಿಯಲು ಓಡಾಡಿದ. ನಾನು ಸಿಟ್ಟು ಬಂದು ಅವನ ಮೇಲೆ ಕುಳಿತು ಬಲವಾಗಿ ಕಚ್ಚಿದೆ.. ಇದ್ದಕ್ಕಿದಂತೆ ಕೊಂಡಿಯಿ೦ದ ರಕ್ತ ಬಾಯಲ್ಲಿ ಬಂದು ಬಿಟ್ಟಿತು. ನನಗೆ ಸೊಳ್ಳೆಯ ಸಹಜ ಗುಣ ಅಂತ ಗೊತ್ತಾಗಲೇ ಇಲ್ಲ.
ಉಪ್ಪು ಉಪ್ಪು ರಕ್ತ ಒಳಗೆ ಹೋಗಿದ್ದನ್ನು ನೋಡಿ ನಾನು “ಯಾಕ್ ಚೀ….” ಎಂದು ಪಿಚಕ್ ಅಂತ ಉಗುಳಿದೆ… ಅದು ಮುಂದಿದ್ದ ಅವರ ಯಜಮಾನ ಬಿಳಿ ಅಂಗಿಯಲ್ಲಿ ಬಿದ್ದಿತು.
। ಮುಂದುವರೆಯುವುದು |






0 Comments