ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.
ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.
ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ’ ಉತ್ತಮಕಾದಂಬರಿ ಪ್ರಶಸ್ತಿ ದೊರಕಿದೆ.
ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.
ಭಾಗ –9
ಮಿ.ರೆಡ್ ಕೈಟ್ನ ಅಗಲಿಗೆ ಆಳವಾದ ನೋವನ್ನು ಉಂಟುಮಾಡಿತು. ಹಗಲಿರಳು ಅದರ ಯೋಚನೆ. ಅಪ್ಪ ಅಮ್ಮ “ಏನಾಯ್ತು? ಯಾಕೆ ಹೀಗಾದೆ? ಇಷ್ಟು ದಿನ ಎಷ್ಟು ಗೆಲುವಾಗಿ ಇದ್ದೆ” ಎಂದು ಕೇಳಿದರೂ ಹೇಳದಾದೆ. ಮೊದಲಿದ್ದ ಲವಲವಿಕೆ ನನ್ನಲ್ಲಿ ಇಲ್ಲದಿದ್ದನ್ನು ಕಂಡು ಅಪ್ಪಮ್ಮ ಚಿಂತಾಕ್ರಾ೦ತರಾದರು. ಏನು ಆಗಿಲ್ಲ ಎಂದರೂ ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದರು. “ಏನೊ ಮನಸಿಗೆ ಹಚ್ಚಿಕೊಂಡಿದ್ದಾನೆ, ಅವನನ್ನು ಒಂಟಿಯಾಗಿರಲು ಬಿಡಬೇಡಿ, ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿ, ಇದು ಸಾಮಾನ್ಯವಾದ ಹದಿಹರೆಯದ ಸಮಸ್ಯೆ, ನೀವು ಕೂಡಾ ಮಕ್ಕಳೊಂದಿಗೆ ಬೆರೆಯದನ್ನು ಪಾಲಕರು ಕಲಿಯಬೇಕು.
ಊಟ, ನಿದ್ರೆ, ಆಹಾರದ ಬಗ್ಗೆ ಕಾಳಜಿ ಮಾಡಬೇಕು. ನಿಮ್ಮ ವರ್ತನೆಗಳು ಅವನ ಮೇಲೆ ಬೀಳದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು. ಹಬ್ಬ ಇದ್ದುದರಿಂದ ಎರಡು ದಿನ ರಜೆ ಇತ್ತು. ಯಾವಗಾದರೂ ಶಾಲೆ ಆರಂಭವಾಗುತ್ತದೋ ಎನ್ನುವ ಚಿಂತೆ ಅಪ್ಪ ಅಮ್ಮನಿಗಾಯಿತು. ಮನೆಯಲ್ಲಿದ್ದರೆ ಹೀಗೆ ಕುಳಿತುಕೊಳ್ಳುತ್ತಾನೆ ಎಂದು ಒತ್ತಾಯಪೂರ್ವಕವಾಗಿ ಮರುದಿನ ಶಾಲೆಗೆ ಕಳುಹಿಸಿದರು. ಭಾರವಾದ ಹೆಜ್ಜೆ ಇಡುತ್ತಾ ಹೊರಟಿದ್ದಾಗ ರಫಿ ಜೊತೆಯಾದ. ಮತ್ತೆ ಕನುಸು ಬಿತ್ತಿದ. ಮತ್ತೆ ಹೊಸ ಹುರುಪು ಬಂದಿತು. ರೀಟಾ ಮತ್ತೆ ಮನಸ್ಸಲ್ಲಿ ಮೂಡಿದಳು. ಶಾಲೆಗೆ ಹೋದೆ. ಗಂಟೆ ಹೊಡೆಯಿತು, ಪ್ರೆಯರ್ ಆಯಿತು, ತರಗತಿ ಆರಂಭವಾಯಿತು. ರೀಟಾಳ ಸುಳಿವೆ ಇಲ್ಲ. ಆ ಜಾಗ ಹಾಗೆ ಖಾಲಿ ಇತ್ತು. ಅವಳಿಲ್ಲ ತರಗತಿಯಲ್ಲಿ ಪಾಠ ಬೋರೆನಿಸಿತು. ಮಧ್ಯಾಹ್ನ ಊಟವಾದ ನಂತರ ಬೆಲ್ ಹೊಡೆಯಿತು. ರೀಟಾ ಅವರಪ್ಪನ ಗಾಡಿಯಿಂದ ಇಳಿದು ಎದುರಿಗೆ ಬರುತ್ತಿದ್ದಳು. ಎದುರಿಗೆ ಬರುತ್ತಿದ್ದ ರೀಟಾ ನೊಡಿ ಏನೊ ಸಂಚಾರವಾದ೦ತಾಗಿ ಸ್ಟೈಲ್ ಕೊಟ್ಟರೂ ಅದಕ್ಕೆ ತಿರುಗಿ ರಿಯಾಕ್ಟ್ ಮಾಡದೆ ಹಾಗೆ ಹೊದಳು.
ಮೊನ್ನೆ ಅವಾರ್ಡ ತೆಗೆದಕೊಂಡಾಗ ವಿಶ್ ಮಾಡಿದವಳು ಸ್ವಲ್ಪನೂ ಮಾತಾಡಿಸಿದ್ರೂ ಹಾಗೆ ಹೋಗುತ್ತಿದ್ದಾಳಲ್ಲ ಎಂದುಕೊ೦ಡೆ. ‘ರಿ’ ಎಂದು ಕೂಗಿದೆ. ಅವಳು ಹಾಗೆ ಹೋದಳು. ಒಂದೆಡೆ ಕೈಟನ ಚಿಂತೆ, ಮತ್ತೊಂದೆಡೆ ರಿಟಾ ಪ್ರತಿಕ್ರಿಯಿಸದೆ ಇರುವುದರ ನಡುವೆ ಹಾಗೆ ನಿಂತಿದ್ದೆ. ವಾರದ ಹಿಂದೆ ಮೀರಾ ನನ್ನ ಫೇರ್ ನೋಟ್ ಕೇಳಿದ್ದಳು ಕೊಟ್ಟಿದ್ದೆ, ನಾನು ಮರೆತಿದ್ದೆ ಮೀರಾ ‘ಸ್ವಾರಿ, ಸ್ವಾರಿ, ಸ್ವಾರಿ. ಒಂದು ವಾರ ಆಯ್ತು. ಲೇಟ್ ಮಾಡಿದೆ. ಬೈಕೊಬೇಡಿ ತ್ಯಾಂಕ್ಯೂ ಲಾಟ್’ ಎಂದು ನೋಟ್ಸ್ ಕೊಟ್ಟು ಹೋದಳು. ‘ಈಟ್ಸ್ ಓ.ಕೆ’ ಎಂದೆ. ಮೀರಾ ಸ್ಟೈಲ್ ಕೊಟ್ಟು ನನ್ನ ನೋಡುತ್ತಾ ಹೋದಳು. ಅವಳ ಮುಗುಳ್ನಗೆ ನನಗೆ ಏನೂ ಅನಿಸಲಿಲ್ಲ.
ಶಾಲೆ ಬಿಟ್ಟ ಮೇಲೆ ಮನೆಗೆ ಬಂದಾಗ ರೀಟಾಳದೆ ಯೋಚನೆ. ‘ಯಾಕೆ ಮಾತನಾಡಿಸಲಿಲ್ಲ? ಇವತ್ತು ಹೊತ್ತಾಗಿ ಬಂದದ್ದಕ್ಕಾಗಿ ಹಾಗೆ ಮಾತಾಡಿಸದೆ ಹೋಗಿರಬಹುದು” ಎಂದು ಮರುದಿನ ಬುಧವಾರ ಇದ್ದುದರಿಂದ ಕಲರ್ ಡ್ರೆಸ್ ಹಾಕಿಕೊಂಡು ಹೊಸ ಗೆಲುವಿನೊಂದಿಗೆ ಶಾಲೆಗೆ ಹೊರಟೆ. ಮಧ್ಯ ಕಿರಣ, ರಫಿ ಜೊತೆಯಾದರು. ಅವರ ಮಾತುಗಲೆಲ್ಲ ರೀಟಾಳ ಸುತ್ತಲೇ ಇದ್ದವು. ಹಾಗಾಗಿ ನನಗೆ ಖುಷಿಕೊಡುತ್ತೇಲೆ ಇದ್ದವು. ಅವರು ನನ್ನ ಪಾಕೆಟ್ ಮನಿಯಲ್ಲಿ ಇಡ್ಲಿ, ವಡಾ, ಪಲಾವ್, ಪೂರಿ ಎಲ್ಲಾ ಹೊಡೆದರು. ನಾನು ಅವರ ಹೊಗಳಿಕೆಯ ಖುಷಿಯಲ್ಲಿ ಎಲ್ಲಾ ಕೊಡಿಸಿದೆ. ಅವರು ತಿಂದ ಖುಷಿಯಲ್ಲಿ ‘ಇವತ್ತು ನೀನು ಅಂದುಕೊ೦ಡಿದ್ದು ನಡೆಯುತ್ತಮಾ, ಮಾತಾಡಿಸು ಬೆಸ್ಟ್ ಆಫ್ ಲಕ್’ ಎಂದು ಪುಸಿ ಹೊಡೆದು ಹೊದರು.
ನಾನು ಗೇಟ್ನ ಹತ್ತಿರ ನಿಂತಿದ್ದೆ. ರೀಟಾ ಅವರಪ್ಪನ ಗಾಡಿಯ ಮೇಲೆ ಬಂದಳು. ನನಗೆ ಶಕ್ತಿ ಬಂದ೦ತಾಯಿತು. ಅವಳು ಗೇಟ್ನಲ್ಲಿ ಎಂಟ್ರಿ ಕೊಟ್ಟೊಡೊನೆ ನಾನು ಸರಿಯಾಗಿ ಕಾಲಿಟ್ಟೆ. “ಹಾಯ್, ಈಗ ಬಂದ್ರಾ?” ಎಂದೆ. “ಏನ್ರಿ, ಸ್ವಲ್ಪಾದ್ರೂ ಸೆನ್ಸ್ ಇದೆಯಾ. ಹುಡುಗಿಯರು ಒಮ್ಮೆ ಮಾತಾಡಿಸಿದ್ರೂ ಅಂದ ಮಾತ್ರಕ್ಕೆ ಹೀಗೆ ಹಿಂದೆ ಬೀಳೋದಾ? ಫೂಲಿಶ್ ಫೆಲೋ” ಎಂದು ಬೈದು ಹೋದಳು. ನನಗೆ ಮುಖದ ಮೇಲೆ ಉಗುಳಿದ ಹಾಗಾಯಿತು. ಕನಸಿನ ಗೋಪುರವೆಲ್ಲ ಬಿದ್ದು ಹೋದ ಹಾಗಾಯಿತು. ಅವಳು ಹೋದ ಮೇಲೆ ಹಿಂದೆ ಬಂದ ಮೀರಾ “ಹಾಯ್ ದಿನಕರ್, ನಿಮ್ಮ ಡ್ರೆಸ್ ಸೂಪರ್ ಆಗಿದೆ” ಎಂದಳು. ರೀಟಾಳಿಗಾಗಿ ಹಾಕಿಕೊಂಡು ಬಂದಿದ್ದ ಡ್ರೆಸ್, ಅಪ್ರಿಸಿಯೇಶನ್ ಬಂದಿದ್ದು ಮೀರಾಳಿಂದ. “ತ್ಯಾಂಕ್ಯೂ” ಎಂದೆ. “ಹುಡುಗರು ಸ್ವಾರ್ಥಿಗಳು” ಎಂದಳು.
“ಯಾಕ್ರಿ?”ಎ೦ದೆ.
“ನನ್ನ ಡ್ರೆಸ್ ಬಗ್ಗೆ ಹೇಳಲೇ ಇಲ್ಲ” ಎಂದೆ,
ಡ್ರೆಸ್ ಚೆನ್ನಾಗಿತ್ತು, ಹೇರ್ ಸ್ಟೈಲ್ ವಿಶೇಷವಾಗಿತ್ತು. ನಾನು ಸಹಜವಾಗಿ “ಡ್ರೆಸ್ ಸೂಪರ್ ಆಗಿದೆ, ಜೊತೆಗೆ ಹೇರ್ ಸ್ಟೈಲೂ” ಎಂದೆ.
“ಓ . . . ನಾಟಿ ಬಾಯ್” ಎಂದು ನಗುತ್ತಾ ಹೊದಳು. ತರಗತಿಯಲ್ಲಿ ನಾನು ರೀಟಾಳನ್ನು ಗಮನಿಸುತ್ತಿದ್ದೆ, ನನ್ನನ್ನು ಮೀರಾ ಗಮನಿಸುತ್ತಿದ್ದಳು. ಮರುದಿನ ಶಾಲೆಗೆ ಬರುವಾಗ ಭೇಟಿಯಾದ ಕಿರಣ, ರಫಿ, ಮತ್ತೊಂದು ಆಟ ಶುರು ಹಚ್ಚಿಕೊಂಡರು. ರೀಟಾಳನ್ನು ಬಯ್ಯ ತೊಡಗಿದರು. ಮೀರಾಳೊಂದಿಗೆ ಮಾತನಾಡುವುದನ್ನು ಗಮನಿಸಿದ್ದ ಅವರು ಮೀರಾಳ ಬಗ್ಗೆ ಹೇಳತೊಡಗಿದರು. “ನಮ್ಮ ಬಗ್ಗೆ ಕೇರ್ ಮಾಡದವರಿಗಿಂತ ನಮ್ಮನ್ನು ಕೇರ್ ಮಾಡುವವರ ಬಗ್ಗೆ ಯೋಚಿಸಬೇಕು” ಎಂದು ಕಿರಣ್ ಮನಸ್ಸನ್ನು ಬದಲಿಸಲು ನೋಡಿದ. ರಫಿ ಅದಕ್ಕೆ ಉಪ್ಪುಖಾರ ಹಾಕಿದ. ಅವತ್ತು ಉಪ್ಪು ಖಾರದ ನಾನ್ವೆಜ್ ಅವರ ಹೊಟ್ಟೆಯಲ್ಲಿ ಇಳಿಯಿತು. ಒಂದೆರಡು ದಿನದಲ್ಲಿ ಮೀರಾ ನನ್ನನ್ನು ಹೆಚ್ಚುಹೆಚ್ಚು ಮಾತನಾಡಿಸಲಾರಂಬಿಸಿದಳು. ಮನೆಯಿಂದ ತಂದಿದ್ದ ಸ್ನ್ಯಾಕ್ಸ್ ಕರೆದು ಕೊಡುತ್ತಿದ್ದಳು. ಮೊದಮೊದಲು ಕಿರಿಕಿರಿ ಎನಿಸಿತಾದರೂ ಅಮೇಲೆ ಅವು ಹಿತವೆನಿಸತೊಡಗಿದವು. ನಾನು ಅಷ್ಟು ಹಚ್ಚಿಕೊಳ್ಳದಿದ್ದರೂ ಅವಳ ಸಾಂತ್ವನದ ಮಾತುಗಳು ಇಷ್ಟವಾಗತೊಡಗಿದವು. ಅವಳೊಂದಿಗೆ ಮತನಾಡಲಾರಂಭಿಸಿದೆ. ಮರುದಿನ ಆಕೆ ಚಾಕಲೇಟ್ ತಂದಳು, ನಾನು ಐಸಕ್ರಿಮ್ ಕೊಡಿಸಿದೆ, ಹೀಗೆ ಗಿಫ್ಟ ಎಕ್ಸೆಚೆಂಚಜ್ ಆಗತೊಡಗಿದವು.

ಒಂದು ದಿನ ಆಕೆ ನನ್ನ ಬರ್ತಡೆಗೆ ನನ್ನ ಹೆಸರಿರುವ ಕೀಚೈನ ಉಡುಗೊರೆಯಾಗಿ ನೀಡಿ “ಐ ಲೈಕ್ ಯೂ’ ಎಂದಳು. ಇಲ್ಲ ನಾವು ವಿದ್ಯಾಥಿಗಳು ಅಂತಹದೆಲ್ಲ ಹೇಳಬಾರದು. ಅದು ನಮ್ಮ ವಯಸ್ಸುನೂ ಅಲ್ಲ. ಎಂದು ಬುದ್ಧಿವಾದ ಹೇಳಿದೆ. ಆಕೆಗೆ ಏನು ಎನಿಸಿತೋ ಏನು ‘ನಿನ್ನಂತಹ ಒಬಡಿಯಂಟ್ ಬಾಯ್ ನನಗೆ ಇಷ್ಟ” ಎಂದು ಕೈಹಿಡಿದಳು. ಆ ಸ್ಪರ್ಶದಿಂದ ನನಗೆ ರೋಮಾಂಚನವಾಗಿ ಕೈ ಬಿಡಿಸಿಕೊಂಡೆ. ಆ ಸ್ಪರ್ಶ ಎರಡು ದಿನ ನನ್ನನ್ನು ನೆಮ್ಮದಿಯಿಂದ ಇರಲು, ಊಟವನ್ನು, ನಿದ್ದೆಯನ್ನು ಮಾಡಲೂ ಬಿಡಲಿಲ್ಲ.
ಈ ನಡುವೆ ಇಂಟರ್ ಲೇವಲ್ ಸ್ಕೂಲ್ ಕ್ವಿಜ್ ಕಾಂಪಿಟೇಶನ್ ಲಿಖಿತ ಪರೀಕ್ಷೆ ನಡೆಯಿತು. ನಾನು ಹೆಚ್ಚಿನ ಅಂಕ ಪಡೆದು ಮೊದಲಿಗ ನಾಗಿದ್ದೆ. ಎರಡನೆ ಸ್ಥಾನದಲ್ಲಿ ರೀಟಾ ಇರುವಳೆಂದು ತಿಳಿದುಕೊಂಡಿದ್ದೆ. ಆಗಲಾದರೂ ರೀಟಾಳಿಗೆ ಹತ್ತಿರವಾಗಬಹುದೆಂದು ಭಾವಿಸಿದ್ದೆ. ಆದರೆ ಎರಡನೇ ಸ್ಥಾನ ಮೀರಾ ಪಡೆದುಕೊಂಡಿದ್ದಳು. ನನಗೆ ಅಸಮಧಾನವೆನಿಸಿದರೂ ತಿರುಗಿ ನೋಡದ ರೀಟಾಳಿಗಿಂತ ಮೀರಾ ಹತ್ತಿರವಾಗಿದ್ದಳು. ಗುರುಗಳು “ಕ್ರಿಕೆಟ್ ನಲ್ಲಿ ಗೆದ್ದ ಹಾಗೆ ಈ ಸಾರಿ ಕ್ವಿಜ್ನಲ್ಲೂ ಗೆದ್ದು ಶಾಲೆಗೆ ಕೀರ್ತಿತರಬೇಕು” ಎಂದು ನನಗೆ ಜೊತೆಗೆ ಮೀರಾಳಿಗೆ ಸೂಚಿಸಿದರು. ಅದಕ್ಕಾಗಿ ಒಂದು ವಾರ ಟೈಮಿತ್ತು. ಹಗಲು ರಾತ್ರಿ ಅಭ್ಯಾಸ ಮಾಡತೊಡಗಿದೆ. ಗುರುಗಳು ಇಬ್ಬರು ಕೂಡಿ ಚರ್ಚೆ ಮಾಡಿ ಎಂದು ನಮ್ಮ ನಂಬರ್ ಎಕ್ಸೆಂಜ್ ಮಾಡಿಸಿದರು. ನಾಣು ಕ್ವಿಝ್ಗಾಘಿ ಹಾರ್ಡ ಸ್ಟಡಿ ಮಾಡತೊಡಗಿದೆ. ಅದು ಗೆದ್ದಾದರೂ ರಿಟಾಳನ್ನು ಮತ್ತೆ ಇಂಪ್ರೆಸ್ ಮಾಡಬೇಕೆಂದು.
ರಾತ್ರಿ ಓದುವಾಗ ಫೊನ್ ರಿಂಗ್ ಆಯಿತು. ಅಪ್ಪ ಅಮ್ಮ ಇದ್ದಿದುರಿಂದ ಭಯವೆನಿಸಿ ರೀಸಿವ್ ಮಾಡಲಿಲ್ಲ. ಚಾಟ್ ಬಾಕ್ಸ್ ನಲ್ಲಿ ಹಾಯ್ ಎಂದು ಕಳಿಸಿದ್ದಳು. ನಾನು “ಹೆಲೊ” ಎಂದು ಕಳಿಸಿದೆ.
“ಏನು ಮಾಡುತ್ತಿದ್ದೀಯಾ?”
“ಸ್ಟಡಿ, ನೀವು”
“ಸ್ಟಡಿ”
“ಏನು ಸ್ಟಡಿ ಮಾಡುತ್ತಿದ್ದೀರಿ”
“ನೀವು. . .? ಇದೆಲ್ಲ ನೋ, ಹಾಗೆಲ್ಲ ಕರಿಬೇಡ, ನೀನು ಎಂದು ಚಾಟ್ ಮಾಡು”
“ಸರಿ, ಏನು ಮಾಡುತ್ತಿರುವಿ”
“ನಿನ್ನ ಮೈಂಡ್” ಎಂದು ಅತ್ತ ಮೆಸ್ಸೆಜ್ ಬಂತು
ಗಾಭರಿಯಿ೦ದ “ವಾಟ್. . .” ಎಂದೆ
ಸಡನ್ ಆಗಿ ಮಾತು ಬದಲಿಸಿ “ನೀವು ಓದದೆ ಇರೋದನ್ನು ನಾನು ಅಭ್ಯಾಸ ಮಾಡುತ್ತಿರುವೆ”
“ನಾವು ಈ ಸಾರಿ ಗೆಲ್ಲಬೇಕು”
“ನೀನು ಆಗಲೆ ಗೆದ್ದುಬಿಟ್ಟಿದ್ದೀಯಾ?
“ವಾಟ್. . . ಏನೇನೊ ಒಗಟಾಗಿ ಮಾತಾಡಬೇಡ”
“ನೀನು ಕ್ರಿಕೆಟ್ನಲ್ಲಿ ಗೆದ್ದಿಯಾ ಅಂದೆ”
“ಅಮ್ಮಾ . . . ನಾನು ಭಯಗೊಂಡಿದ್ದೆ”
“ನಿನ್ನ ಭಯ ಅರ್ಥ ಆಯ್ತು”
“ವಾಟ್?”
“ಎಸ್”
“ವಾಟ್ ಎಸ್?”
“ಹಾರ್ಟ ಇರುವ ಚಿಹ್ನೆ ಕಳಿಸಿದಳು”
“. . .”
“ಬೇಡ ಇವೆಲ್ಲ”
“ಹೌದಾ ತೊಗೊ” ಎಂದು ಮುತ್ತಿನ ಚಿತ್ರ ಕಳುಹಿಸಿದಳು.
ನಾನು ಸ್ಟನ್ ಆದೆ, ಆಕೆ ಏನೇನೊ ಕಳಿಸಿದಳು. ಅರಿವಿಲ್ಲದೆ ರಿಯಾಕ್ಟ್ ಮಾಡುತ್ತಾ ಹೋದೆ. ಸಮಯ ಆಗಲೇ ಆರು ಗಂಟೆಯಾಗಿತ್ತು. ಎಲ್ಲವನ್ನು ಡಿಲಿಟ್ ಮಾಡಿ ಮಲಗಿದೆ.
ಮರುದಿನ ಅವತ್ತು ಬೇರೆ ಬುಧುವಾರ. ಮೀರಾ ಚೆಂದ ಡ್ರೆಸ್ ಹಾಕಿಕೊಂಡು ಬಂದಿದ್ದಳು. ಅದಕ್ಕಿಂತ ಚೆಂದದ ಹೇರ್ ಸ್ಟೈಲ್. ಸರ್ ಬಂದು ನೀವಿಬ್ಬರೂ ಇವತ್ತು ಈ ಲೈಬ್ರರಿಯಲ್ಲಿಯೇ ಕುಳಿತು ಸ್ಟಡಿ ಮಾಡಿ ಎಂದು ಹೇಳಿ ಹೊದರು. ನನಗೆ ಎದೆ ಡವಡವಡ. ಪುಸ್ತಕ ಹಿಡಿದು ಓದುತ್ತಾ ಕುಳಿತೆ. ಅವಳು ಓದುತ್ತಾ ಕುಳಿತಿದ್ದಳು. ಒಮ್ಮೆ ಅವಳ ಕಡೆ ನೋಡಿದಾಗ ಓದುವುದು ಬಿಟ್ಟು ನನ್ನನ್ನೆ ನುಂಗುವ ಹಾಗೆ ನೋಡುತ್ತಾ ಕುಳಿತಿದ್ದಳು. ಆ ಕಣ್ಣುಗಳಿಂದ ಒತ್ತಾಯವಾಗಿ ತಪ್ಪಿಸಿಕೊಂಡು ಹೊರಗೆ ಹೋಗಿ ಬಂದು ಓದಲು ಕುಳಿತೆ. ತಿರುಗಿ ಬಂದಾಗ ಅವಳು ಓದುತ್ತಿದ್ದಳು. ನಾನು ಓದಿನಲ್ಲಿ ಮಗ್ನನಾಗಿದ್ದೆ. ಯಾರೋ ಹಿಂದಿನಿ೦ದು ಬಂದು ಹಿಡಿದುಕೊಂಡ ಹಾಗಾಯಿತು. ತಿರುಗಿ ನೋಡಿದರೆ ಮೀರಾ! ನನಗಂತೂ ಜಂಗಾಬಲವೆ ಉಡುಗಿ ಹೋಯಿತು. ಹೇಳಲು ಆಗದ ಆನಂದ, ರೋಮಾಂಚನೆ ಮೈಯಲ್ಲಿ ಓಡಾಡಿತು. ಬಿಡಿಸಿಕೊಂಡಾಗ ನೇರವಾಗಿ ಎದುರಾಗಿ ಆಲಂಗಿಸಿದಳು. ಸಹಜವಾಗಿ ನನ್ನ ಕೈ ಅವಳ ಕೆನ್ನೆಯನ್ನು ಸೋಕಿತು. ಅವಳು ಕೈಹಿಡಿದು ಗಟ್ಟಿಯಾಗಿ ತಬ್ಬಿಕೊಂಡಳು. ನಾನು ಅಲ್ಲೆ ಕುಸಿದು ಬಿಟ್ಟೆ.
ನಾನು ನಾನಾಗಿರಲಿಲ್ಲ. ಅಂದಿನಿ೦ದ ನನ್ನ ಲೋಕವೇ ಬೇರೆಯಾಯಿತು. ಒಂಟಿಯಾಗಿ ಇರಬಯಸಿದೆ. ಆಗಾಗ ನೆನಪಿಗೆ ಬರುತ್ತಿದ್ದ ಮಿ.ರೆಡ್ ಕೈಟನ ಮಾತುಗಳೆಲ್ಲವೂ ಸ್ಮರಣೆಗೆ ಬರಲೇ ಇಲ್ಲ. ದಿನಗಳು ಕಳೆದಂತೆಲ್ಲ. ನಮ್ಮಿಬ್ಬರ ನಡುವಿನ ಸಂಬ೦ಧ ಹೆಚ್ಚುತ್ತಾ ಹೋಯಿತು. ಕ್ವಿಝ್ ಕಾಂಪಿಟೇಶನನಲ್ಲಿ ಗೆದ್ದಿದ್ದು ನಮ್ಮನ್ನು ಹಿಡಿಯುವರು ಯಾರೂ ಇರಲಿಲ್ಲ. ಇನ್ನೂ ಹತ್ತಿರ ಮಾಡಿತು. ಈ ನಡುವೆ ಡೆಬಿಟ್, ಸೈನ್ಸ್ ಎಕ್ಸಿಭಿಷನ್ ಮೊದಲಾದ ತಾಲೂಕು ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ನಾವಿಬ್ಬರು ಮತ್ತೆ ಪ್ರಥಮ ಸ್ಥಾನ ಪಡೆದದ್ದು ಇನ್ನೂ ಹತ್ತಿರ ಮಾಡಿತು. ‘ರೀಟಾ’ ವಿಶ್ ಮಾಡಲು ಬಂದರೂ ಆಕೆ ಮೀರಾಳ ಮುಂದೆ ಸಪ್ಪೆ ಎನಿಸಿದಳು. ‘ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವುದನ್ನು ಯಾರು ನೋಡರು’ ಎಂದೆ ಅದು ಭಾವಿಸಿರುತ್ತದೆ. ನಾವು ಕದ್ದು ಮುಚ್ಚಿ ಮಾತಾಡುತ್ತಿದ್ದುದು, ಬದಲಾದ ನನ್ನ ನಡುವಳಿಕೆಗಳು ಶಾಲೆಯಲ್ಲಿ ಎಲ್ಲರ ಬಾಯಲ್ಲಿ ಹರಿದಾಡ ಹತ್ತಿದವು. ರಫಿ ಸುಮ್ಮನಿದ್ದರೂ ಕಿರಣನಿಗೆ ನಿತ್ಯದ ಪಾರ್ಟಿ ತಪ್ಪಿದ ಕಾರಣಕ್ಕಾಗಿ ಏನೆಲ್ಲಾ ಸುದ್ದಿ ಮಾಡಿದ. ಅದು ಶಾಲೆಯ ಗೋಡೆಯಲ್ಲೂ ಮೂಡಿದವು. ಅದು ಮನೆಗೂ ಸುದ್ದಿ ಮುಟ್ಟಿತು.
ಶಾಲೆಯಲ್ಲಿಯ ಎಲ್ಲಾ ಗುರುಗಳಿಗೂ ಹೆಡ್ ಮಾಸ್ಟ್çಗೂ ಗೊತ್ತಾಯಿತು. ಪಾಲಕರನ್ನು ಕರೆಯಿಸಿ ವಿಚಾರಣೆ ಶುರು ಮಾಡಿದರು. ನಾನು ನಡೆದ ಸತ್ಯ ಒಪ್ಪಿಕೊಂಡು ‘ ನನ್ನಿಂದ ಯಾವುದೆ ತೊಂದರೆ ಆಗಿಲ್ಲ. ಪ್ರಮಾಣ ಮಾಡಿ ಹೇಳುವೆ. ಆರಂಭವಾಗಿದ್ದು ಅವಳಿಂದ. ಅವಳದು ತಪ್ಪಿದೆ’ ಎಂದು ವಾದಿಸಿದೆ, ಸಡನ್ ಆಗಿ ತಿರುವಿ ಬಿದ್ದ ಮೀರಾ “ನನಗೇನು ಗೊತ್ತಿಲ್ಲ. ನಾನು ಅಮಾಯಕಳು. ನನಗೆ ಏನೇನೋ ಮಾತಾಡಿ, ಚಾಟ್ ಮಾಡಿ ಆಸೆ ಹುಟ್ಟಿಸಿದರು. ನನ್ನ ಪಾಡಿಗೆ ಇದ್ದ ನನ್ನ ಹೆಸರಿಗೆ ಮಸಿ ಬಳೆದವನು ಇವನೆ” ಎಂದು ಆಕೆ ಮರ್ಯಾದೆ ಉಳಿಸಿಕೊಳ್ಳಲು ಫೊನ್ ತೋರಿಸಿ ನಾನು ಮಾಡಿದ ಚಾಟ್ ಸಂದೇಶ ತೋರಿಸಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಯೇ ಬಿಟ್ಟಳು.
ನಾನು ಡಿಲಿಟ್ ಮಾಡಿದ್ದೆನಾದ್ದರಿಂದ ನನಗೆ ಯಾವುದೆ ಬೆಂಬಲವಿರಲಿಲ್ಲ. ಅವರ ತಂದೆ ಪ್ರಭಾವಿ ವ್ಯಕ್ತಿಯಾಗಿದ್ದ. ಪೊಲೀಸ್ ಕಂಪ್ಲೆ೦ಟ್ ಕೊಡುವುದಾಗಿ ಬೆದರಿಕೆ ಹಾಕಿದರು. ನಾನೆಷ್ಟು ವಾದಿಸಿದರೂ ಬೆಲೆ ಇಲ್ಲದಾಯಿತು. ಒಂದು ಹಂತದಲ್ಲಿ ಪೋಕ್ಸೊ ಕೇಸ್ ನಡಿ ಕೇಸ್ ಹಾಕಲು ಅವರಪ್ಪ ಪೋಲಿಸರಿಗೆ ಕರೆಮಾಡಲು ಹೋದರು. ಮುಖ್ಯಗುರುಗಳ “ಇದು ಶಾಲೆಯ ಮರ್ಯಾದೆಯ ಪ್ರಶ್ನೆ” ಎಂದು ನನ್ನ ತಂದೆ ತಾಯಿಗೆ ಮುಖ್ಯಗುರುಗಳು ಜೋರ್ ಮಾಡತೊಡಗುದರು. ಅಪ್ಪ “ತಪ್ಪಾಗಿದೆ, ನಿಮ್ಮ ಮಗಳ ತಂಟೆಗೆ ಬರದ ಹಾಗೆ ಮಾಡುತ್ತೇವೆ. ಮಗನ ಭವಿಷ್ಯ ಹಾಳಮಾಡಬೇಡಿ” ಎಂದರು.
ಅಮ್ಮ ಕಾಲಿಗೆ ಬಿದ್ದು ಅತ್ತಳು. ಅವರಪ್ಪ ಧನಪಿಶಾಚಿಯಾಗಿದ್ದನೆಂಬು ಅವರ ಮಾತಿನಿಂದ ಗೊತ್ತಾಗುತ್ತಿತ್ತು ಎಂಬುದು ಮುಖ್ಯಗುರುಗಳು ದುಡ್ಡುಕೊಟ್ಟು ಸರಿಮಾಡಿಕೊಳ್ಳಲು ಸೂಚಿಸಿದ ನಂತರ ಗೊತ್ತಾಯಿತು. “ನನ್ನ ಮಗಳ ಗತಿ ಏನು, ಅವಳನ್ನು ಮದುವೆಯಾಗುವರಾರು?” ಎಂದೆಲ್ಲ ರಂಪಾಟ ಮಾಡಿದರು. ಐದು ಲಕ್ಷ ಕೊಟ್ಟರೆ ಮಾತ್ರ ಸುಮ್ಮನಾಗುವುದಾಗಿ ತಿಳಿಸಿದರು. ಅಪ್ಪ ಅನಿವಾರ್ಯವಾಗಿ ಒಪ್ಪಿದರು. ಎಲ್ಲ ಮುಗಿದ ಮೇಲೆ ಮುಖ್ಯಗುರುಗಳು ನನ್ನ ಟಿಸಿಯನ್ನು ಹೋಗುವಾಗ ಕರೆದು ಕೊಟ್ಟು “ನಾಳೆಯಿಂದ ಮಗನನ್ನು ಕಳಿಸಬೇಡಿ” ಎಂದರು. ಎಷ್ಟು ಬೇಡಿಕೊಂಡರೂ ಏನೂ ಸಾಧ್ಯವಾಗಲಿಲ್ಲ. ಭಾರವಾದ ಹೆಜ್ಜೆ ಹಾಕುತ್ತ ಹೊರಗೆ ಬಂದು ನೋಡಿದರೆ ಬಹಳಷ್ಟು ಜನ ಜಮಾಯಿಸಿದ್ದರು. ಎಲ್ಲರೂ ನನ್ನನ್ನು ನೋಡುತ್ತಾ ‘ಛೀ ಥೂ’ ಛಿಮಾರಿ ಹಾಕುತ್ತಿದ್ದರು.
“ಎಂತಹ ಮಗನನ್ನ ಹೆತ್ತುಬಿಟ್ಟರಪಾ?”
“ಇಂತವರಿ೦ದ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸದಂತಾಗ್ಯಾದ”
“ಇ೦ತಹ ಮಕ್ಕಳನ್ನು ಹಡೆಯುವುದಕ್ಕಿಂತ ಮಕ್ಕಳು ಇರಲಾರದದ್ದು ಎಷ್ಟೊ ಛಲೋ”
“ಇಷ್ಟು ಆಗಿನೂ ಎಷ್ಟು ಆರಾಮ ಹೊಂಟಾರ ನೋಡು, ನಾವಾಗಿದ್ದರೆ ಎಲ್ಲಾದರೂ ಕೆರೆನ್ನೊ ಭಾವಿಯನ್ನೊ ನೋಡಿಕೋತಿದ್ವಿ”
ಒಂದೊ೦ದು ಮಾತುಗಳು ಚುಚ್ಚುವಂತಹವಾಗಿದ್ದವು. ದಾರಿಯಲ್ಲಿ ಹೋಗುವಾಗ ಎಲ್ಲರೂ ಬಾಗಿಲು ಹಾಕಿಕೊಂಡರು. ಅದುವರೆಗೂ ನಾನು ಗಳಿಸಿದ ಯಶಸ್ಸು, ಅಪ್ಪ ಅಮ್ಮನ ಮರ್ಯಾದೆ ನನ್ನ ಕಾರ್ಯದಿಂದ ಅಳಿದುಹೋಗಿತ್ತು. ಅಪ್ಪ ಅಮ್ಮನಿಗೆ ಭಾರವಾಧ ಹೆಜ್ಜೆಗಳನ್ನು ಹಾಕುತ್ತ ನಡೆಯುತ್ತಿದ್ದರು. ಎಲ್ಲರಿಗೂ ಮುಖ ತೋರಿಸಲಾದೆ ಕತ್ತಲಾದ ಮೇಲೆ ಮನೆಗೆ ಬಂದೆ. ಬಾಗಿಲು ಮುಚ್ಚಿತು. ನಾನು ಕಾಲಿಂಗ್ ಬೆಲ್ ಒತ್ತಿದೆ. ತೆಗೆಯಲಿಲ್ಲ. ‘ಅಪ್ಪ,ಅಮ್ಮ ಬಾಘಿಲು ತೆರೆಯಿರಿ” ಎಂದು ನೋವಿನಿಂದ ಕೂಗಿದೆ. ಪ್ರತಿಕ್ರಿಯೆ ಬರಲಿಲ್ಲ. ನನಗೆ ಆತಂಕವಾಯಿತು. ಒಳಗಡೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ನಾನು ಆ ದೃಶ್ಯ ನೋಡಿ “ಅಪ್ಪಾ . . . ಅಮ್ಮಾ . . .” ಎಂದು ಚೀರಿದೆ.
“ಏನಾಯ್ತು ದಿನಕರ, ಏನಾಯ್ತು” ಎಂದು ಬಂದು ತಟ್ಟಿ ಎಬ್ಬಿಸಿದರು ಅಪ್ಪ” “ಯಾಕೋ ಇತ್ತಿಚಿಗೆ ತೀರಾ ಬದಲಾಗಿ ಬಿಟ್ಟಿದ್ದೀಯಾ? ವಂದಲಿ ಹನುಮಪ್ಪಗ ನಾಳೆ ಹೋಗಿ ಬರೋಣ ಎಲ್ಲಾ ಸಂಕಟ ದೂರಮಾಡುತ್ತಾನೆ” ಎಂದು ಅಮ್ಮ ಕಣ್ಣೀರು ತೆಗೆದಳು. “ಅಮ್ಮ ಅಪ್ಪಾ ನಿಮಗೆ ಏನೂ ಆಗಿಲ್ಲಲ್ಲ” ಎಂದು ಕೇಳಿದೆ. ನಮಗೇನೂ ಆಗಿಲ್ಲಪ್ಪ ನೀನು ಎಲ್ಲೊ ಕೆಟ್ಟ ಕನಸು ಕಂಡಿರಬೇಕು” ಎಂದು ಅಪ್ಪ ಎಚ್ಚರಿಸಿದರು. “ಅಮ್ಮಾ, ನಾನು ಕಂಡಿದ್ದು ಕನಸು ಎಂದು ನಿಟ್ಟುಸಿರು ಬಿಟ್ಟೆ. ಎಂತಹ ಭಯನಕ ಕನಸು. ಪುಣ್ಯ ಅದು ನಿಜ ಅಲ್ಲಲ್ಲ ಮಿ.ರೆಡ ಕೈಟ್ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಅವನ ಮಾತನ್ನು ಕೇಳದೆ ಹೋದೆ, ಕೈಮಾಡಲು ಬೇರೆ ಪ್ರಯತ್ನ ಮಾಡಿದೆ. ಎಷ್ಟು ಅನುಕೂಲಕ್ಕಿದ್ದವ ನಾನೇ ದುರುಪಯೋಗ ಪಡಿಸಿಕೊಂಡೆ” ಎಂದು ಮನಸ್ಸಿನಲ್ಲಿ ಬೈದುಕೊಂಡೆ. ನನ್ನ ವರ್ತನೆ ನೋಡಿ ಅಮ್ಮ ದೇವರ ಮನೆಯಿಂದ ಆದಾರ ತಂದು ಹಚ್ಚಿದಳು. ಅಪ್ಪ ತೊಡೆಮೇಲೆ ಹಾಕಿಕೊಂಡು ತಲೆ ಒತ್ತುತ್ತಾ ಮಲಗಿಸಿದ.
। ನಾಳೆಗೆ ।






0 Comments