ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.

ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ‌’ ಉತ್ತಮ‌ಕಾದಂಬರಿ ಪ್ರಶಸ್ತಿ ದೊರಕಿದೆ.

ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.

ಭಾಗ – ೨

ಅದೂ ನನ್ನ ಹಿಂದೆ ಬಿಡದೆ ಹಿಂಬಾಲಿಸುತ್ತಿದೆ ಎಂದು ತಿರುಗಿ ನೋಡಿದಾಗ ಗೊತ್ತಾಯಿತು.

‘ಇದು ಒಳ್ಳ ಕತೆ ಆಯಿತಲ್ಲ, ಏನೋ ಮಾಡಲಿಕ್ಕೆ ಹೋಗಿ ತಗಲು ಹಾಕಿಕೊಂಡ೦ತಾಯಿತಲ್ಲ’ ಎಂದು ನನ್ನಷ್ಟಕ್ಕೆ ನಾನು ಬೈದುಕೊಂಡೆ.
“ಡೋಂಟ್ ವರಿ . . . ನಾನು ಭೂತನೂ ಅಲ್ಲ . . . ದೆವ್ವನೂ ಅಲ್ಲ . . . ನೀನು ತಿಳಿದುಕೊಂಡ ಹಾಗೆ ನಾನು ನಿನಗೆ ತೊಂದರೆ ಕೊಡುವವನೂ ಅಲ್ಲ. ನಾನು ಗಾಳಿಪಟ . . . ನನ್ನಿಂದ ನಿನಗೇನೂ ಆಗಲ್ಲ. ನೀನು ಸಹಾಯ ಮಾಡಿದ್ದಕ್ಕಾಗಿ ನಿನಗೆ ತ್ಯಾಂಕ್ಸ್ ಹೇಳಿದೆ” ಎಂದಿತು.

“ಹಾ೦ . . . ಏನಿದು? ಮಾತಾಡುತ್ತಿದೆ. ಇದು ಪಕ್ಕಾ ಅದೇ ಅದು, ಅಪ್ಪ ಅಮ್ಮ ಹೇಳಿದ್ದು ಸತ್ಯ ಆಯಿತು, ಅವತ್ತು ಮಹೇಶ ಹಳ್ಳದ ಜಾಲಿಯಲ್ಲಿ ದೆವ್ವ ಅದ ಅಂತ ಹೇಳಿದರೂ ‘ಅದೆಲ್ಲಿ ದೆವ್ವಾ ಅವ. ನೀನು ಯಾವ ಕಾಲದಾಗ ಇದ್ದೀ . . .?’ ಅಂತ ಗೇಲಿ ಮಾಡಿದ್ವಿ. ಇವತ್ತು ನೋಡಿದ್ರ ನನಗೆ ಕಾಡುತ್ತಿದೆ. “ಕಾಪಾಡಿ, ಕಾಪಾಡಿ, ಕಾಪಾಡಿ” ಎಂದು ಕೂಗುತ್ತಾ ಓಡತೊಡಗಿದೆ.

ಮತ್ತೆ ಬೆನ್ನು ಹತ್ತಿ ನನ್ನ ಕೈಗೆ ಸೇರಿ, ಗಾಳಿಪಟ ನಾನು ಹೆಜ್ಜೆ ಕಿತ್ತದಂತೆ ನಿಲ್ಲಿಸಿ “ಸ್ಟಾಪ್. . . ನನ್ನ ಮಾತು ಕೇಳು” ಎಂದು ಗದರಿತು.
ಭಯದಿಂದ “ಅಮ್ಮಾ . . . ಅಮ್ಮಾ . . . ಮಾತಾಡೋ. . . ಗಾಳಿಪಟ ಇರುತಾದನಾ . . .?” ಎಂದೆ ಭಯದಲ್ಲಿ.
“ಮಾತಾಡುವ ಮನುಷ್ಯ ಇರಬೇಕಾದರೆ ಮಾತಾಡುವ ಗಾಳಿಪಟ ಇರಬಾರದನಾ?” ಎಂದು ನಕ್ಕಿತು.

“ನಾವು ಮನುಷ್ಯರು, ಬುದ್ಧಿ ಇದೆ, ಮಾತಾಡುತ್ತೇವೆ” ಎಂದೆ.
“ನನಗೂ ನಿಮ್ಮ ಹಾಗೆ ಬುದ್ಧಿ ಇದೆ, ಅದಕ್ಕೆ ಮಾತಾಡುತ್ತಿರುವೆ” ಎಂದಿತು.
“ನಾನು ಎಲ್ಲಿಯೂ ಕೇಳಿಲ್ಲ”
“ನಾವು ಯಾರಿಗೂ ಹೇಳಿಲ್ಲ . . .”
“ಇಲ್ಲ ಸುಳ್ಳು , ಇದು ವಿಜ್ಞಾನಕ್ಕೆ ನಿಲುಕದ ಸಂಗತಿ”
“ಓಹೋ . . . ನೀನು ಸೈನ್ಸ್ ಸ್ಟುಡೆಂಟೂ . . .? ಗುಡ್ ಗುಡ್”
“ಹೌದು ನನಗೆ ವಿಜ್ಞಾನ ಇಷ್ಟದ ವಿಷಯ. ಪ್ರಶ್ನೆಯೇ ಪ್ರಜ್ಞೆಯಾಗಲಿ, ಪ್ರಶ್ನಿಸದೆ ಏನನ್ನು ಒಪ್ಪಿಕೋಬೇಡ . . . ಪರೀಕ್ಷಿಸದೆ ಏನನ್ನೂ ನಂಬಬೇಡ ಎಂದಿದ್ದಾರೆ ನಮ್ಮ ಮೇಷ್ಟ್ರು”
“ನಿಮ್ಮ ಮೇಷ್ಟ್ರು ತಲಿಕುಟ್ಟಾ . . . !” ಎಂದು ನಕ್ಕು ನನ್ನನ್ನು ನೋಡಿಯೂ . . . ನಿನ್ನ ಅನುಭವಕ್ಕೂ ಬಂದೂ ಈ ಮಾತು ಹೇಳುತ್ತಿದ್ದಿಯಲ್ಲಾ?” ಎಮದು ನಕ್ಕಿತು.
“ಹೌದು . . . ಹೌದು. . . ನಾನು ಹಾಗೆ”

“ನಿನ್ನ ತಲಿನೂ ಕುಟ್ಟಾ . . . ಮನುಷ್ಯರು ದೊಡ್ಡ ಶ್ಯಾಣೆರು! ನೀವು ಸರಿಯಾಗಿ ಪಕ್ಕದ ಮಂಗಳ ಗ್ರಹದಾಗ ಏನೂ ಅದಂತ ನೋಡಾಕ ತಿಣುಕಾಕತಿರಿ. ನಿಮ್ಮ ವಿಜ್ಞಾನ ಅನ್ನುವ ನಿಲುಕದ ಹಲವು ವಿಸ್ಮಯಗಳು ಜಗತ್ತಿನಲ್ಲಿವೆ. ಇನ್ನೂ ಸಾವಿರ ವರ್ಷ ಹೋದರೂ ತಿಳಿದುಕೊಳ್ಳಲು ಆಗಲ್ಲ. ಅಷ್ಟೊತ್ತಿಗೆ ಈ ಭೂಮಿನ ಇರಲ್ಲ. ಇರಲಿ ಬಿಡು ನನ್ನ ನಂಬತೀಯೋ ಇಲ್ಲೊ. ನಂಬದಿದ್ದರೂ ನನಗೇನು ನಷ್ಟ ಇಲ್ಲ ಬಿಡು”
ನನಗೂ ಏನೊ ಕುತೂಹಲ ಹುಟ್ಟಿ “ನೀನು ಹಾರ್ಮಫುಲ್ ಅಲ್ಲಲ . . .” ಎಂದೆ.

“ಜಗತ್ತಿನಲ್ಲಿ ಹಾರ್ಮಫುಲ್ ಅಂದ್ರ ಮನುಷ್ಯರ ಬಿಟ್ರ ಬೇರೆ ಇಲ್ಲವೆ ಇಲ್ಲ, ಇರಲೂ ಸಾಧ್ಯವೇ ಇಲ್ಲ”
“ನಾವು ಹಾರ್ಮಫುಲ್ . . . ?”

“ಎಲ್ಲಾ ಗೊತ್ತಿದ್ದು ನನ್ನ ಬಾಯಿಂದ ಯಾಕ ಹೇಳಿಸುತ್ತಿಯಾ? ಪರಿಸರನನ್ನ ಎಷ್ಟು ಹಾಳು ಮಾಡಿರಿ ಅಂದ್ರ ಶುದ್ಧ ಕುಡಿಯುವ ನೀರು ಸಿಗದಷ್ಟು ಹಾಳುಮಾಡಿದ್ದೀರಾ. ನೀವು ಫಿಲ್ಟರ್ ನೀರು ಕುಡಿಯೋದು ನೋಡಿದ್ರ, ದೆಹಲಿ ಮೊದಲಾದ ಸಿಟಿಯಲ್ಲಿ ಆಕ್ಸಿಜನ್ ಕೆಫೆ ಮಾಡಿಕೊಂಡಿದ್ದನ್ನ ನೋಡಿದ್ರೆ ಗೊತ್ತಾಗುತ್ತದ”
“ಅಂದ್ರ . . .”
“ಅಂದ್ರ ಇಲ್ಲ ಚಪ್ಪರ ಇಲ್ಲ. ಎಲ್ಲಾ ನಿಮಗ ಗೊತ್ತಿದ್ದ ಅದ. ಎಷ್ಟು ವಿಷ ತಿನ್ನಾಕತಿರಿ, ಕುಡಿಯಾಕತಿರಿ ಅಂತ. ಆ ಶಿವ ಒಮ್ಮೆ ವಿಷ ಕುಡದು ಗಂಟಲದಲ್ಲಿ ಮಾತ್ರ ಇಟ್ಟುಕೊಂಡು ವಿಷಕಂಠನಾದ ಆದ್ರ ನೀವು ನಿತ್ಯ ವಿಷವನ್ನು ತಿನ್ನುತ್ತೀರಿ, ಕುಡಿಯುತ್ತೀರಿ, ಉಸಿರಾಡುತ್ತೀರಿ. ಖರೇನ ಹಾವಿಗಿಂತಲೂ ಬಹುದೊಡ್ಡ ವಿಷಜಂತುಗಳೇ ಅಲ್ಲ ವಿಷ ಮಾನವರೇ ಆಗಿ ಬಿಟ್ಟೀರಿ”

ಅದು ಹೇಳೊ ಮಾತೆಲ್ಲ ಸತ್ಯ ಇತ್ತು. ನಾನು “ಸತ್ಯ ಬಿಡು, ಆದ್ರೂ ನಿನ್ನ ಮೇಲೆ ಅನುಮಾನಪ” ಎಂದೆ.
“ಹಾ೦ಗಿದ್ರ ಇಷ್ಟೊತ್ತಗೆ ನಿನ್ನ ತಿಂದು ಹಾಕಿ ಬಿಡುತ್ತಿದ್ದೆ” ಎಂದು ನಕ್ಕಿತು.
“ಹೌದಲ್ಲ! ಹಾಗಾದರೆ ತ್ಯಾಂಕ್ಯೂ ನಿನಗೂ” ಎಂದೆ.
“ನನಗ್ಯಾಕೆ ಹೇಳಿದೆ?”
“ವಿಶಿಷ್ಟ ಗಾಳಿಪಟ ಸಿಕ್ಕಿದ್ದಿಯಲ್ಲ ಅದಕ್ಕೆ ಹೇಳಿದೆ”
“ನಿನಗೆ ನಾನು ಸ್ಪೆಶಲ್ ಅನಿಸಿದ್ರ ವಿಚಿತ್ರ ಅಷ್ಟ . . . ನಾನೇನು ಪರ್ಮನೆಂಟಾಗಿ ನಿನ್ನ ಜೊತೆ ಇರೋನಲ್ಲ”
“ಹೌದಾ! ಸರಿ ತ್ಯಾಂಕ್ಯೂ”
“ನಿನಗೇನು ಅನಿಸಲಿಲ್ಲವಾ?”
“ಯಾವುದನ್ನೇ ಬಹಳ ಹಚ್ಚಿಗೋಬಾರದು ಅಂತ ಅಪ್ಪ ನನಗೆ ಹೇಳಿದ್ದಾರೆ . . .”

“ಓಹೋ . . . ಈಗ ಗೆಳೆಯರು ‘ಏನೊ ಅಂದ್ರು’ ಎಂದು ಬೇಜಾರು ಮಾಡಿಕೊಂಡು ಹಳ್ಳದ ದಾರಿಗೆ ಬಂದ ದೊಡ್ಡವರು ಯಾರೊ?” ಎಂದು ನಕ್ಕಿತು.
“ಅಯ್ಯ . . . ! ನಿನಗೆ ಎಲ್ಲಾ ಗೊತ್ತಾಗುತ್ತಿದ್ದಂಗ ಅದ ಮಹರಾಯ. ಆಯ್ತು ಇನ್ನು ನೀನು ಸಿಕ್ಕಿಯಲ್ಲಾ ಬಿಟ್ಟೆ ನೋಡು. ಎಲ್ಲಾ ಬೇಜಾರು ಹೋಯಿತು” ಎಂದೆ.

“ಏನು ಮನುಷ್ಯರೋ ಏನೋ. . . ಹೇಳೊದು ಒಂದು ಮಾಡೋದು ಒಂದು. ಇರಲಿ, ನೀನು ನನಗ ಸಹಾಯ ಮಾಡಿದ್ದೀಯಾ? ನಾನು ನಿನಗ ಸಹಾಯ ಅಂತಲ್ಲ ನಿನ್ನ ಜೊತೆಗಿದ್ದು ಖುಷಿ ಕೊಡುತೀನಿ”
“ಅಂದ್ರೆ . . .?”
“ನೀನು ಏನು ಬಯಸ್ತಿಯಾ, ಅದು ಮಾಡುತೀನಿ”
“ನಾನು ಮೇಲೆ ಹಾರಬೇಕು ಅಂತೀನಿ, ಮೋಟುಪತ್ಲು ಹಾಗೆ . . . ಸಾಧ್ಯನಾ?” ಎಂದು ತಮಾಷೆ ಮಾಡಿದೆ.
“ಓ . . . ಎಸ್. ಬಾ ನನ್ನ ಚುಂಗು ಹಿಡುಕೋ” ಎಂದಿತು.
ನಕ್ಕು “ನನ್ನ ಹಾಗೆ ಜೋಕ್ ಮಾಡ್ತೀಯಾ?” ಎಂದೆ.
“ಮನುಷ್ಯರ ಹಾಗೆ ಅಲ್ಲಾ ನಾವು. ಆಗುತ್ತದ ಅಂದ್ರ ಆಗುತ್ತೆ ಅಂತ ಹೇಳ್ತೀವಿ, ಇಲ್ಲಾಂದ್ರ ಇಲ್ಲ ಅಂತ ಹೇಳ್ತೀವಿ”
“ಚುಂಗು ಹಿಡಿಕೊ ಅಂತಿ. ನನ್ನನ್ನು ಕರೆದುಕೊಂಡು ಹೋಗಲು ಸಾಧ್ಯನಾ?” ಎಂದು ನಕ್ಕೆ.

“ವಾಮನ ಒಂದಾ ಪಾದಕ್ಕೆ ಭೂಮಿಯನ್ನು ಆವರಿಸಿದ್ದನ್ನು ನಂಬತೀರಿ, ವರಹ ಭೂಮಿ ಎತ್ತಿದ್ದನ್ನು ನಂಬತೀರಿ, ಹನುಮಂತ ಗುಡ್ಡ ಹೊತ್ತಿದ್ದನ್ನು ನಂಬತೀರಿ, ಸ್ವಾಮಿಗಳು ಮಾಡೋ ಪವಾಡನ್ನ ನಂಬತೀರಿ, ಬೆಂಕಿ ಮ್ಯಾಲೆ ಓಡಾಡಿದ್ರ, ಬೆಂಕಿ ನುಂಗಿದ್ರ ಭಕ್ತಿ ಭಾವದಿಂದ ನಂಬತೀರಿ, ವಿಜ್ಞಾನದ ಆವಿಷ್ಕಾರಗಳನ್ನ ನಂಬಲ್ಲ, ಪರಿಸರದ ರಹಸ್ಯಗಳನ್ನ ನಂಬಲ್ಲ”
“ಓ ಓ ಓ . . . ಕೈಬಿಡು ಮಹರಾಯ. ಥೇಟು ನಮ್ಮ ಸೈನ್ಸ್ ಮೇಷ್ಟ್ರು ತರಹ ಪ್ರಶ್ನೆ ಕೇಳತೀಯಾ?”
“ಇದ್ದುದ್ದು ಇದ್ದಂಗ ಹೇಳಿದ್ರಾ ಏನೋ ಎದೆಗೆ ಒದ್ದಂಗ ಅಂತಾರಲ್ಲ, ನಿಮ್ಮ ಮನುಷ್ಯರ ಹಣಬರೆಹನಾ ಇಷ್ಟು”
“ಸಾಕು ಸಾಕಪ್ಪ, ಜೀವನ ಪರ್ಯಂತ ಎಲ್ಲಾರಿಂದ ಉಪದೇಶ ತೆಗೆದುಕೊಳ್ಳೊದಾ ಆಯ್ತು. ನೀನು ನನ್ನ ಚುಂಗು ಹಿಡಿ ಅಂದಿ, ಅದು ಸಾಧ್ಯನಾ? ಎಂದು ಕೇಳಿದ್ದಕ್ಕೆ ಇಷ್ಟೆಲ್ಲಾ ಮಾತಾ?”
“ಮನುಷ್ಯರ ಇಷ್ಟೆ, ನೀವು ನಂಬದೇ ಇಲ್ಲ. ನಂಬಿಕೆ ಇಲ್ಲದನಾ ಅಹಂನಲ್ಲಿ ಒದ್ದಾಡಿ, ಬೈದಾಡಿ, ಬಡದಾಡಿ, ಹೊಡದಾಡಿ ಸಾಯಕತೀರಿ. ಮುಂದ ಯಾರೂ ಉಳಿಯದಂಗ ಆಗಿ ಹೋಗತೀರಿ”

“ಸಾಕುಸಾಕು . . . ಅಪ್ಪಾ ಅಪ್ಪಾ ತಂದೆ, ಕೈಮುಗಿತಿನಿ, ತಪ್ಪಾಯ್ತು. ಆಯ್ತು, ನಿನ್ನ ಚುಂಗು ಹಿಡಿತಿನಿ. ನೋಡತೀನಿ ಏನು ಕಿಸಿತಿಯೋ ಕಿಸಿ” ಎಂದು ನಕ್ಕು ನಾನು ಪಟದ ಚುಂಗ ಹಿಡುಕೊಂಡೆ, ನಲವತ್ತು ಕೆ.ಜಿ ಇರೋ ನನ್ನ ಎತ್ತಲು ಹೇಗೆ ಸಾಧ್ಯ? ಎಂಬ ಉಡಾಫೆಯಿಂದ.

ಅದನ್ನು ಹಿಡಿಯುತಿದ್ದ ಹಾಗೆ ಅದು ಮೇಲೆರಲು ಆರಂಭಿಸಿತು. ಅದು ಮೇಲೆ ಹೋದಂತೆಲ್ಲ ಆ ಸಣ್ಣ ದಾರ ನನ್ನ ಜಗ್ಗ ಹತ್ತಿತ್ತು. ನಾನು ಗಟ್ಟಿಯಾಗಿ ನಿಂತು ಅದರ ವಿರುದ್ಧ ಜಗ್ಗಿದೆ. ಬಲ ಹೆಚ್ಚಾದಾಗ ಬಲವಾಗಿ ಹಿಡಿದು ಜಗ್ಗಿ ಹರಿಯಲು ನೋಡಿದೆ. ನನಗೆ ನಂಬಲಾಗಲಿಲ್ಲ. ಆ ಸಣ್ಣ ದಾರ ಹರಿಯದೆ ಬಲವಾದ ಹಗ್ಗದಂತೆ ಭಾಸವಾಗ ತೊಡಗಿತು. ಅದು ನನ್ನನ್ನು ನಿಧಾನವಾಗಿ ಮೇಲೆ ಜಗ್ಗತೊಡಗಿತು. ನಾನು ಬೆವರ ತೊಡಗಿದೆ. ಅದುವರೆಗಿನ ನನ್ನ ‘ಅಹಂ’ ನೀರಾಗಿ ಇಳಿದು ಹೋಯಿತು. ನಾನು ಭಯದಿಂದ ದಾರದ ಕೈಬಿಟ್ಟೆ ಆದರೆ ಅದು ಬಿಡಲಿಲ್ಲ. ದಾರವೇ ಗಟ್ಟಿಯಾಗಿ ಬಿಗಿದುಕೊಂಡಿತು “ಅಯ್ಯೊ! ಏನು ಇದು, ತಮಾಷೆ ಮಾಡಿದ್ರೆ ನನ್ನನ್ನು ಮೇಲೆ ಜಗ್ಗುತ್ತಿದೆ. ಬೇಡ ನನಗೆ ಅಂಜಿಕೆ ಬರುತ್ತಿದೆ, ಕೈಬಿಡು” ಎಂದು ನಾನು ಕೈಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲ. “ಹೆಲ್ಪ್ . . . ಹೆಲ್ಪ್ . . . ಕಾಪಾಡಿ ಕಾಪಾಡಿ. . .” ಎಂದು ಕೂಗಿದೆ.

“ಪ್ರಶ್ನೆ ಕೇಳಬೇಕು . . . ಪರೀಕ್ಷಿಸಬೇಕು ಅಂತ ದೊಡ್ಡದಾಗಿ ಬಿಲ್ಡ್ಪ್ ಕೊಡುತ್ತಿದ್ದೆ? ಈಗ ನೋಡಿದ್ರ ಎಷ್ಟು ಹೆದರುತ್ತಿದ್ದಿಯಲ್ಲ . . . ಹೆದರು ಪುಕ್ಕಲು ಸೈನಸ್ ಸ್ಟುಡೆಂಟ್” ಎಂದು ನಕ್ಕು ಮೇಲೇರತೊಡಗಿತು.
“ದಮ್ಮಯ್ಯ. ನಾನು ನಿನ್ನನ್ನು ಅಂಡರ್ ಎಸ್ಟೀಮೇಟ್ ಮಾಡಿದೆ. ದಯವಿಟ್ಟು ಕ್ಷಮಿಸು. ಇದು ಕನಸೋ ನನಸೋ ಒಂದು ನಂಬಲಾಗುತ್ತಿಲ್ಲ. ಪ್ಲೀಜ್” ಎಂದು ಬೇಡಿಕೊಂಡೆ.

“ಸೈನ್ಸ್ ಸ್ಟುಡೆಂಟ್ ಆಗಿ ಇಷ್ಟೆಲ್ಲಾ ಹೆದರೊದಾ? ‘ಏನೋ ಮುಂದೆ ಸ್ಪೇಸ್ ವಾಕ್ ಮಾಡಬೇಕು, ಹೊಸ ಗ್ರಹ ಮೊದಲು ನಾನಾ ಕಂಡುಹಿಡಿಯಬೇಕು’ ಎಂದುಕೊ೦ಡಿದ್ದೆಲ್ಲ ಏನಾಯ್ತು. ಹೆದರಿಕೆ ಇದ್ರೆ ಅದು ಸಾಧ್ಯವಾಗುತ್ತದನಾ?”
“ಅಯ್ಯೋ, ನನ್ನ ಮನಸ್ಸಿನದು ಎಲ್ಲಾ ನಿನಗೆ ಗೊತ್ತಾಗುತ್ತಿದೆಯಲ್ಲಾ. ತಪ್ಪಾಯ್ತು. ಇನ್ನ ಮುಂದ ಸೈನ್ಸ್ ತಂಟೆಗೆ ಹೋಗಲ್ಲ, ನೀನು ಬಿಡು ಅಂದ್ರೆ ಸಾಲಿ ಓದದ ಬಿಟ್ಟುಬಿಡುತೀನಿ” ಎಂದು ಬೇಡಿಕೊಂಡೆ.

ನಗುತ್ತಾ “ಹ್ಹ ಹ್ಹ ಹ್ಹ . . . ಡ್ರಾರ್ಪ ಔಟ್ ಸುಡೆಂಟ್ ಆಗ್ತೀಯೋ? ಡೋಂಟ್ ವರಿ, ನಿನಗೆ ಏನು ಆಗೊಲ್ಲ ಆಸೆ ಈಡೇರಿಸೊ ಜವಬ್ದಾರಿ ನನ್ನದು” ಎಂದು ಮೇಲೆ ಕರೆದುಕೊಂಡು ಹೊರಟಿತು.
ನಾನು ಅದರಿಂದ ತಪ್ಪಿಸಿಕೊಳ್ಳಬೆಕೆಂದು ನನಗೆ ‘ಸುಸೂ’ ಬಂದಿದೆ ಕೆಳಗಿಳಿಸು, ಆಮೇಲೆ ನಿನ್ನ ಜೊತೆ ಬರುವೆ’ ಎಂದೆ.
“ಅ೦ದರೆ . . . ಎಂದಿತು”
“ಏಕ್ ನಂಬರ್, ಇಂಟರ್‌ವೆಲ್, ಉಚ್ಚಿಬಂದಾವ, ಅದಾ ದೇಹದಾಗ ನೀರು ಹೆಚ್ಚಾದಾಗ . . . ಬರೋದು”
“ಸಾಕು ಸಾಕು ಸಾಕು, ಅಷ್ಟು ಮಬ್ಬ ನಾನಲ್ಲ. ಪೂರ್ತಿ ಎಕ್ಸಪ್ಲೆನೆಷನ್ ಬೇಕಿಲ್ಲ. ಯಾವುದನ್ನು ತಡೆ ಹಿಡಿದ್ರೂ ಒಂದು, ಎರಡನ್ನು ಎಂದೂ ತಡೆಹಿಡಿಬಾರದಪ್ಪ” ಎಂದು ನಿಧಾನವಾಗಿ ಕೆಳಗಿಳಿಯ ತೊಡಗಿತು. ಕೆಲಗೆ ಇಳಿದ ಕೂಡಲೇ ‘ಸಧ್ಯ,ಉಳಿದೆನಪ್ಪ, ಬದುಕಿದೆ ಬಡಜೀವವೇ’ ಎಂದು ದಾರವನ್ನು ಬಿಡಿಸಿಕೊಂಡು ನಾನು ‘ಸುಸೂ’ ಮಾಡಲು ಹೋದೆ.

। ನಾಳೆಗೆ ।

‍ಲೇಖಕರು Admin

17 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading