ಚಂದ್ರ ಶೇಖರ ಆಲೂರು
ಜನ್ನಪ್ಪ ಎಂದರೆ ನನ್ನ ಪಾಲಿಗೆ ಸ್ನೇಹದ ಕಣಜ. ಮೊಗೆದಷ್ಟೂ ಉಕ್ಕುವ ಸಿಹಿ ನೀರಿನ ಒರತೆಯಂತೆ. ನಮ್ಮದು ಮೂರು ದಶಕಗಳ ಗೆಳೆತನ. ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಶಿವು, ಜನ್ನಿ, ಸೋಮು, ಕಾಮು ಮತ್ತು ನಾನು ಹೀಗೆ ಐವರು ಗೆಳೆಯು ಆಕಸ್ಮಿಕವಾಗಿ ಒಂದಾದೆವು. ನಮ್ಮಲ್ಲಿ ಜನ್ನ ಮೃದುಭಾಷೆ ಎಂದೂ ಯಾರ ಬಳಿಯೂ ಅವನು ಜೋರಾಗಿ ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ. ವಾದವಿವಾದ ಮಾಡುವಾಗ ಕೂಡಾ ನಮ್ಮೆಲ್ಲರ ಧ್ವನಿ ಏರಿದರೂ ಅವನ ದನಿ ಜೋರಾಗುತ್ತಿರಲಿಲ್ಲ. ಅದೇಕೋ ನಡೆನುಡಿಯಲ್ಲಿ ಸ್ವಲ್ಪ ಜೋರು ಎಂಬಂತೆ ಕಾಣುತ್ತಿದ್ದ. ನಮ್ಮ ಗುಂಪು ಹಾಗೂ ಇತರ ಗುಂಪುಗಳ ನಡುವೆ ಜನ್ನಿ Trouble Shooter ಆಗಿ ಓಡಾಡುತ್ತಿದ್ದ. ಹೀಗಾಗಿ ನಮ್ಮ ಕ್ಯಾಂಪಸ್ನಲ್ಲಿ ಅವನು ಅಜಾತ ಶತ್ರು.
ಆ ದಿನಗಳಲ್ಲಿ ನಾವೆಲ್ಲ ಗೆಳೆಯ-ಗೆಳತಿಯರು ಅದು ಬರೆಯುತ್ತೇವೆ-ಇದು ಬರೆಯುತ್ತೇವೆ ಎಂದು ಗದ್ದಲ ಮಾಡಿಕೊಂಡು ಓಡಾಡುತ್ತಿದ್ದಾಗ, ಅವನು ವಿದ್ಯಾರ್ಥಿದೆಸೆಯಲ್ಲಿಯೇ ‘ಗೀಜಗ’ ಎಂದ ಕವನ ಸಂಕಲನ ಪ್ರಕಟಿಸಿ, ನಮ್ಮೆಲ್ಲರನ್ನು ಅಚ್ಚರಿಗೊಳಿಸಿದ. ಅದು 1980 ಎಂ.ಎ ಮುಗಿಸಿದ ನಂತರ ಒಂದೆರಡು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ ಬಳಿಕ ಕರ್ನಾಟಕ ಸರ್ಕಾರದ ಆಡಳಿತ ಸೇವೆಯನ್ನು (ಕೆ.ಎ.ಎಸ್.) ಸೇರಿ ಈಗ ಉನ್ನತಾಧಿಕಾರದಲ್ಲಿದ್ದಾನೆ. ಅವನು ಆ ಕಾಲದಿಂದಲೂ ‘ಓದುಬುರುಕ’ ನಮಗೆಲ್ಲಾ ನಗರದ ವಿವಿಧ ಗ್ರಂಥಾಲಯಗಳನ್ನು ಪರಿಚಯಿಸಿ ಓದಿನ ಕುಡಿ ಹತ್ತಿಸಿದವನು ಜನ್ನಿ. ಅವನಿಂದಾಗಿ ನಾವು ಲೈಬ್ರರಿಗಳಿಗೆ ಚಿತ್ರಮಂದಿರಗಳಿಗೆ ಹೋಗುವಷ್ಟೆ ಖುಷಿಯಿಂದ ಹೋಗುವುದನ್ನು ಕಲಿತೆವು!
ನಾವು ಓದುತ್ತಿದ್ದ ಅವಧಿಯಲ್ಲಿ ಎಲ್ಲ ಗೆಳೆಯರೂ ಪರಸ್ಪರ ಹಳ್ಳಿಗಳಿಗೆ ಹೋಗುತ್ತಿದ್ದೆವು. ಹಾಗೇ ಕಟಾವೀರನಹಳ್ಳಿಗೆ ಹೋಗಿದ್ದು, ಹಳ್ಳದ ನೀರಲ್ಲಿ ಈಜಾಡಿದ್ದು, ಅವರ ತೋಟದ ಬಳಿ ಇದ್ದ ಗುಡ್ಡ ಹತ್ತಿ, ಅದುವರೆಗೂ ನಾವು ನೋಡಿರದ ಬಹುಶಃ ನಮ್ಮ ಮಕ್ಕಳು ಕೇಳಲೂ ಆಗದ ಬಗೆಬಗೆಯ ಹಣ್ಣುಗಳನ್ನು ತಿಂದ ನೆನಪು ನನ್ನ ಮನದಲ್ಲಿ ಇನ್ನು ಹಚ್ಚಹಸಿರಾಗಿದೆ. ಅಂದು ನಾನು ಕಂಡ ಅವರ ಹಳ್ಳಿ, ಮನೆ ಈ ಕೃತಿಯಲ್ಲಿ ಸಾಕ್ಷಾತ್ಕಾರಗೊಂಡಿವೆ. 32 ವರ್ಷಗಳ ಹಿಂದೆ ನಮ್ಮನ್ನೆಲ್ಲ ಗೀಜಗ ಕವನ ಸಂಕಲನದ ಮೂಲಕ ಅಚ್ಚರಿಗೊಳಿಸಿದಂತೆ ಈಗ ‘ನಮ್ಮೂರು-ನಮ್ಮವರು’ ಮುಖಾಂತರ ಒಂದು Pleasant Surprise ನೀಡಿದ್ದಾನೆ. ಈಗ್ಗೆ ವರ್ಷದ ಹಿಂದೆ ಇದ್ದಕ್ಕಿದ್ದಂತೆ ಅವನ ಕವಿ ಮನಸ್ಸು ಜಾಗೃತಗೊಂಡು, ಹಲವಾರು ಕಿರುಕವನಗಳನ್ನು ಬರೆದು ನಮಗೆಲ್ಲಾ ಮೆಸೇಜ್ ಮಾಡಲಾರಂಭಿಸಿದ್ದ. ನಾವೆಲ್ಲ ಅವನ ಕವನ ಸಂಕಲನವನ್ನು ನಿರೀಕ್ಷಿಸುತ್ತಿದ್ದಾಗ ಈ ಕೃತಿ.
* * * * *
‘ನಮ್ಮೂರು-ನಮ್ಮವರು’ ಓದುತ್ತಾ ಹೋದಂತೆ ನನಗಾದ ಖುಷಿಗೆ ಮುಖ್ಯ ಕಾರಣವನ್ನು ಮೊದಲು ಹೇಳಿ ಬಿಡುತ್ತೇನೆ. ನಮ್ಮ ಬಹುತೇಕ ಹಳ್ಳಿಗಳು ಕೇವಲ ವೃದ್ದರ, ಮಧ್ಯ ವಯಸ್ಕರ ಆಶ್ರಯತಾಣವಾಗುತ್ತಿರುವ; ಯುವಕರೆಲ್ಲಾ ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿರುವ; ವ್ಯವಸಾಯ ಎಂಬುದು ಲಾಭದಾಯಕವಲ್ಲದ ಒಂದು ಅನಿವಾರ್ಯ ಕರ್ಮ ಮಾತ್ರ ಎಂಬ ಭಾವನೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಸಕಲ ಸೌಲಭ್ಯಗಳನ್ನು ಪಡೆದ ಒಂದು ಸ್ವಯಂ ಸಂಪೂರ್ಣ ಹಳ್ಳಿಯಂತೆ ಕಾಣುತ್ತಿರುವ ಜನ್ನಪ್ಪನ ಕಟಾವೀರನಹಳ್ಳಿ ಒಂದು ಮಾದರಿ ಗ್ರಾಮದಂತೆ ಕಾಣುತ್ತಿದೆ. ನಮ್ಮ ಹಳ್ಳಿಗಳ ಬಗ್ಗೆ ತೀರಾ ನಿರಾಶಾಭಾವ ಕಾಣುವ ಅಗತ್ಯವಿಲ್ಲ ಎಂಬುದನ್ನು ತೋರುತ್ತಿದೆ.
ಕಟಾವೀರನಹಳ್ಳಿಯಲ್ಲಿರುವ ಪ್ರಾಚೀನ ದೇವಸ್ಥಾನಗಳ ಬಗ್ಗೆ ಬರೆದಿರುವ ಜನ್ನಪ್ಪ ಅವರ ಊರಿನಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ಅಂಗನವಾಡಿ ಕೇಂದ್ರ, ಮಹಿಳೆಯರ ಹತ್ತು ಸ್ವಸಹಾಯ ಗುಂಪುಗಳು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘ, ಗ್ರಾಮ ಪಂಚಾಯಿತಿ, ಅಂಚೆ ಕಛೇರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪ ಕೇಂದ್ರ, ಅರಣ್ಯ ಇಲಾಖೆ ನರ್ಸರಿ, ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ನಿಲಯ, ನ್ಯಾಯಬೆಲೆ ಅಂಗಡಿ, ಕಟಾವೀರನಹಳ್ಳಿ ಕ್ಷೇಮಾಭಿವೃದ್ದಿ ಸಂಘ… ಹೀಗೆ ಆಧುನಿಕ ಕಟಾವೀರನಹಳ್ಳಿ ಹೊಂದಿರುವ ಸೌಲಭ್ಯಗಳ ಬಗ್ಗೆ ಕೂಡ ಜನ್ನಪ್ಪ ಬರೆದಿರುವುದು ವಿಶೇಷ.
ಇದಕ್ಕೆ ಮುನ್ನ ಲೇಖಕರು ತನ್ನ ಊರಿಗೆ ಆ ಹೆಸರು ಬರಲು ಕಾರಣವಾದ ವಿವರಗಳನ್ನ ತಿಳಿಸುವುದರ ಜೊತೆಗೆ ಆ ನೆಲದ ಮಣ್ಣಿನ ಗುಣ, ಅಲ್ಲಿನ ಜನಸಂಭ್ರಮ ಏರುಪೇರು, ಊರಿನ ನಿರ್ಮಾಣ, ಪುನರ್ ನಿರ್ಮಾಣದ ಬಗ್ಗೆ ಹೇಳಿದ್ದಾನೆ. ಊರಿನ ಚರಿತ್ರೆ, ಸಂಸ್ಕೃತಿ, ಜನಜೀವನ, ಜನರ ಆಚಾರವಿಚಾರಗಳು ಹೀಗೆ ಇದು ಒಂದು ಸಮಾಜ ಶಾಸ್ತ್ರೀಯ ಅಧ್ಯಯನೂ ಆಗಿದೆ. ಜನ್ನಪ್ಪ ಸಾಹಿತ್ಯದ ವಿದ್ಯಾರ್ಥಿಯಾದ್ದರಿಂದ ಊರಿನಲ್ಲಿರುವ ಕೆರೆಕಟ್ಟೆಗಳು, ಸ್ಮಾರಕಗಳು, ದೇವಸ್ಥಾನಗಳು ಶಾಸನಗಳ ಬಗ್ಗೆ ಮನದುಂಬಿ ಬರೆದಿದ್ದಾರೆ.
ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗ ನಮ್ಮೂರು, ಎರಡನೆ ಭಾಗ ನಮ್ಮವರು, ಮೂರನೆಯ ಭಾಗ ಒಂದು ಅನುಬಂಧ. ಇದರಲ್ಲಿ ಹೊರಗಿನವರು (ಅಂದರೆ ಜನ್ನಪ್ಪನ ಆಪ್ತರು) ಕಟಾವೀರನಹಳ್ಳಿಯನ್ನು ಕಂಡ ಬಗ್ಗೆ ದಾಖಲುಗೊಂಡಿದೆ. ನಮ್ಮೂರಿನ ಬಗ್ಗೆ ಹೇಳುವ ಕಥೆಯಲ್ಲಿ ನಮ್ಮವರು ಕಾಣಿಸಿಕೊಳ್ಳುವುದು; ನಮ್ಮವರ ಬಗ್ಗೆ ಬರೆಯುವಾಗ ನಮ್ಮೂರಿನ ವರ್ಣನೆಯೂ ಸೇರುವುದು ಸಹಜ ಸ್ವಾಭಾವಿಕವಾದ್ದರಿಂದ ಎರಡು ಭಾಗಗಳಿಗೂ ಅಂತರವೇನಿಲ್ಲ. ನಮ್ಮವರು ಭಾಗದಲ್ಲಿ ಬರುವ ಬೃಹತ್ತಾದ ಸೀಗೆಮೇಳೆಯ ವರ್ಣನೆ; ಅವರ ಮನೆ ಮತ್ತು ಕಾಮಯ್ಯನಕಟ್ಟೆ ಬಣ್ಣನೆ ಈ ಅಂಟಿದ ನಂಟಿಗೊಂದು ಉದಾಹರಣೆ.
‘ನಮ್ಮೂರು-ನಮ್ಮವರು’ ಬಹುಶಃ ಜನ್ನಪ್ಪ ಮುಂದೆ ಬರೆಯಬಹುದಾದ ಆತ್ಮಚರಿತ್ರೆಯ ಭಾಗದಂತಿದೆ ಅಥವಾ ಬೇರೊಂದು ಮಾತಿನಲ್ಲಿ ಹೇಳಬೇಕೆಂದರೆ ‘ನಮ್ಮೂರು-ನಮ್ಮವರು’ ಒಂದು ಆತ್ಮಕಥನದಂತೆಯೂ ಕಾಣುತ್ತದೆ. ಯಾರಾದರೂ ಅವರ ಊರಿನ ಬಗ್ಗೆ, ಅವರ ಜನರ ಬಗ್ಗೆ ಬರೆಯಲು ಹೊರಟರೆ ಅದು ಅವರ ಆತ್ಮಕಥನದಂತೆ ಕಾಣುವುದು ಸಹಜ. ಇಲ್ಲವಾದಲ್ಲಿ ಅಂಥ ಕೃತಿ ಆತ್ಮೀಯ ಹಾಗೂ ಭಾವನಾತ್ಮಕ ಸ್ಪರ್ಶವನ್ನು ಕಳೆದುಕೊಂಡು ಕೇವಲ ವರದಿ ಅಥವಾ ಒಣ ಅಧ್ಯಯನವಾಗಿ ಬಿಡುವ ಸಾಧ್ಯತೆ ಇರುತ್ತದೆ.
ಜನ್ನಪ್ಪ ಮೂಲತಃ ಕವಿಯಾದ್ದರಿಂದ ಅವನ ಬರವಣಿಗೆ ಅತ್ಯಂತ ಸೂಕ್ಷ್ಮ ವಿವರಗಳನ್ನು ಒಳಗೊಂಡು ಹೃದ್ಯವಾಗಿದೆ. ….ಸರಿ ಮಾವಿನಕಾಯಿಯನ್ನು ಹಣ್ಣು ಮಾಡಲು ನಮ್ಮ ಮನೆಯಲ್ಲಿ ಬತ್ತದ ಹುಲ್ಲು (ನೆಲ್ಲು ಹುಲ್ಲು) ಹಾಕಿ ಒಂದರ ಪಕ್ಕ ಒಂದೊಂದು ಕಾಯಿಗಳನ್ನು ಜೋಡಿಸುತ್ತಿದ್ದೆವು. ಅದೂ ಎಳೆಯದಾದ, ತಡವಾಗಿ ಹಣ್ಣಾಗುವ ಕಾಯಿ ಒಂದು ಕಡೆ, ಚೆನ್ನಾಗಿ ಬಲಿತ ಮಾವಿನಕಾಯಿಗಳನ್ನ ತಕ್ಷಣಕ್ಕೆ ಸಿಕ್ಕುವ ಹಾಗೆ… ಹೀಗೆ ಒತ್ತು ಹಾಕುವುದು, ಬತ್ತದ ಹುಲ್ಲಿನ ಮೇಲೆ ಇಟ್ಟು ಮತ್ತೆ ಅದರ ಮೇಲೆ ಬತ್ತದ ಹುಲ್ಲು ಹಾಕಿ, ಕಿಟಕಿ ಭದ್ರ ಮಾಡಿ ಅಪ್ಪ, ಅಮ್ಮ ಬೀಗ ಜಡಿಯುತ್ತಿದ್ದರು. ದಿನಾ ಮಧ್ಯಾಹ್ನ, ರಾತ್ರಿ ರೂಮಿನ ಹತ್ತಿರ ಹೋಗುವುದು, ಮೂಸುವುದು, ಮಾವಿನಕಾಯಿ ಹಣ್ಣಾಗಿದ್ದರೆ ಘಂ ಅಂತ ವಾಸನೆ, ಪರಿಮಳ ಬರುತ್ತಿತ್ತು. ಮಾವಿನಹಣ್ಣಿನ ಕಾಲಕ್ಕೆ ಸರಿಯಾಗಿ ಅಕ್ಕಂದಿರ ಮಕ್ಕಳು, ಅತ್ತೆ ಮಕ್ಕಳು, ಚಿಕ್ಕಪ್ಪನ ಮಕ್ಕಳು, ಇತರೇ ನೆಂಟರಿಷ್ಟರ ಮಕ್ಕಳು ಬರುತ್ತಿದ್ದರು. ಅಮ್ಮ ಹಣ್ಣಾದ ಮಾವಿನ ಹಣ್ಣುಗಳನ್ನು ಆರಿಸಿಕೊಂಡು ದೊಡ್ಡದಾದ ಮಂಕರಿಯಲ್ಲಿ ತುಂಬಿಕೊಂಡು ಬಂದು ಹಜಾರದಿಂದ ಮುಂದೆ ಇದ್ದ ಸಗಣಿ ಸಾರಿಸಿದ್ದ ಗಟ್ಟಿ ನೆಲದ ಮೇಲೆ ಸುರಿದು, ಅವರವರ ಯೋಗ್ಯತೆ ಅಂದರೆ ತಿನ್ನುವ ಶಕ್ತಿಗೆ ಅನುಗುಣವಾಗಿ ಹಂಚುತ್ತಿದ್ದಳು. ಆ ಸಂಭ್ರಮ ಆ ಹಣ್ಣುಗಳನ್ನು ತಿನ್ನುವಾಗ ಬಾಯಿ, ಕೈ, ಮೈಮೇಲೆಲ್ಲ ಸೋರಿಸಿಕೊಂಡು, …. ತಿಂಡಿಯಿಂದ ಪ್ರಾರಂಭವಾಗಿ ಸಂಜೆಗೆ ಮುಗಿಯುತ್ತಿತ್ತು.
ಹೀಗೆ ಜನ್ನಪ್ಪ ಬಾಲ್ಯ ಕಾಲದಲ್ಲಿ ಗೆಳೆಯರೊಂದಿಗೆ ಊರಿಂದ ಸುಮಾರು ಎಂಟು ಕಿಲೋ ಮೀಟರ್ ದೂರದಲ್ಲಿದ್ದ ಕಾಮಯ್ಯಕಟ್ಟೆಗೆ, ಹಳ್ಳದಲ್ಲಿ ಸುಡುಮರಳಿನಲ್ಲಿ ಬರಿಗಾಲಿನಲ್ಲಿ ನಡೆಯುತ್ತಾ ಹೋಗುತ್ತಿದ್ದುದು, ದಾಹವಾದಾಗಲೆಲ್ಲ, ಮರಳಿನಲ್ಲೆ ಚಿಲುಮೆ ಮಾಡಿ ಸಿಹಿ ನೀರು ಕುಡಿಯುತ್ತಿದ್ದುದು; ಮಾರ್ಗ ಮಧ್ಯದಲ್ಲಿ ಕಾಣುವ ಪರರ ತೋಟದಲ್ಲಿ ಎಳೆನೀರು, ತೆಂಗಿನಕಾಯಿ, ಬೇಲದ ಹಣ್ಣು, ಮಾವಿನ ಹಣ್ಣು, ನೇರಳೆ ಹಣ್ಣು… ಹೀಗೆ ಸಿಕ್ಕಿದ್ದನ್ನೆಲ್ಲ ಗ್ರಹಿಸುತ್ತಾ, ತಿನ್ನುತ್ತಾ ಯಲದಬಾಗಿ, ಕಂಟೇದಾಡನಹಳ್ಳಿ, ಸಣ್ಣತಿಪ್ಪನಹಳ್ಳಿ, ಚೋರಸಂದ್ರ, ದೊಡ್ಡ ಶೀಬಿ ಮುಂತಾದ ಹಳ್ಳಿಗಳ ಮೂಲಕ ಸಾಗುತ್ತಿದ್ದ ಹಳ್ಳದಲ್ಲಿ ನಡೆಯುತ್ತಿದ್ದ ಐಠಟಿರ ಒಚಿಡಿಛಿ ನೆನಪಿಸಿಕೊಂಡಿರುವುದು ಸೊಗಸಾಗಿದೆ. ಈ ಕೃತಿಯಲ್ಲಿ ಇಂಥ ಹತ್ತಾರು ವರ್ಣನೆಗಳಿವೆ: ಹಾವಿನ ರೀತಿಯಲ್ಲಿ ಹರಿಯುವ ಹಳ್ಳದಲ್ಲಿ ನಡೆಯುವ ಸಾಹಸ ಇಂದಿಗೂ ರೋಮಾಂಚನಗೊಳಿಸುತ್ತಾ, ಮಧ್ಯ ಮಧ್ಯ ಜಮೀನುಗಳು, ಹಾಗೆಯೇ ಕೆಲವು ಕಡೆ ಸುತ್ತಲೂ ಸೀಗೆ ಮಳೆ, ಹೊಂಗೆ ತೋಪು, ಕಾಡಿನ ರೀತಿ ಆವರಿಸಿದ್ದ ಬೃಹದಾಕಾರದ ಬೇಲಿಗಳು, ಈ ಮಧ್ಯೆ ಎಲ್ಲಿ ಕರಡಿ, ತೋಳ, ನಾಯಿ, ನರಿ ಬಂದು ನಮ್ಮನ್ನ ಕಚ್ಚುತ್ತವೋ ಎನ್ನುವ ಭಯ, ಆಗಾಗ ಮಧ್ಯ ಕೇಳುವುದೇ ಹೆಜ್ಜೆ ಮುಂದೆ ಇಡಲು ದಾರಿದೀಪವಾಗುತ್ತಿತ್ತು.
‘ನಮ್ಮೂರು-ನಮ್ಮವರು’ ಕೃತಿಯಲ್ಲಿ ನಮ್ಮೂರು ಮತ್ತು ನಮ್ಮವರನ್ನು ಜನ್ನಪ್ಪ ಅನಾವರಣಗೊಳಿಸಿರುವ ಬಗೆಯಲ್ಲಿ ಆತ್ಮೀಯತೆ ಇದೆ, ಹೇಳುವ ಧಾಟಿಯಲ್ಲಿ ತನ್ಮಯತೆ ಇದೆ. ಈ ಕೃತಿಗೆ ಮತ್ತೊಂದು ವಿಶಿಷ್ಟಗುಣವೂ ಇದೆ. ಇದು ಕಟಾವೀರನಹಳ್ಳಿಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನವೂ ಆಗಿದೆ.
ಕಟಾವೀರನಹಳ್ಳಿ ಒಳಗಿನವದಾಗಿ ಇರುವ ತುಡಿತದೊಂದಿಗೆ, ಅಲ್ಲಿಂದ ದೂರು ನಿಂತು ನೋಡುವ ನೋಟವೂ ಪ್ರಾಪ್ತವಾಗಿದೆ. ಹೆಚ್ಚೇನೂ ಹೇಳುವುದಿಲ್ಲ. ನೀವೇ ಓದುತ್ತೀರಲ್ಲ.







ಆಲೂರು ವೆಂಕಟರಾಯರೆ ಬರೆದಂತಿದೆ.
ಸರ್…ನೀವು ಬರೆದ ಆಪ್ತ ಮಾತುಗಳು ತುಂಬಾ ಇಷ್ಟವಾದವು. ಕಟಾವೀರನಹಳ್ಳಿ ಒಂದು ರೂಪಕ ಅನ್ನಿಸಿತು.ಒಂದು ಕಾಲದಲ್ಲಿ ನಾವು ಹುಟ್ಟಿ ಬೆಳೆದ ಎಲ್ಲ ಹಳ್ಳಿಗಳೂ ಹೀಗೆಯೇ ಇದ್ದವು ಅನ್ನಿಸುತ್ತದೆ.ಪುಸ್ತಕ ಓದಬೇಕು ಅನ್ನುವ ಕುತೂಹಲ ಜೊತೆಯಾಗಿದೆ..
ಹಳ್ಳದ ಹರವಿನ ಹದವಾದ ಹಳ್ಳಿಯ ಗೂಡಿಂದ ರೆಕ್ಕೆ ಬಲಿತವೆಂದೋ ನಿಲ್ಲಲು ಗೂಡು ಸಾಲದೆಂದೋ ಎಲ್ಲೆಲ್ಲೋ ಹೋಗಿ ಹೆಣಗಿ ಗೂಡು ಕಟ್ಟಿಕೊಂಡು ಕಟ್ಟಿದ ಗೂಡು ಒತ್ತಡದ ಬೆಂಗಾಡಾಗಿ ಮನಸ್ಸಿಗೆ ಮತ್ತೇನಾದರೂ ನೆನಪಾಗುವುದೊಂದು ಬಾಕಿ ಇದ್ದರೆ ಅದು ಕೇವಲ ಮನಸಿನ ಮೂಲ ಹಳೆಯ ಹಳ್ಳಿಮೆದೆ.ಇದನ್ನು ಓದುವಾಗಲೇ ನಂಗೆ ಒಮ್ಮೆ ನನ್ನ ಹಳ್ಳಿಯನ್ನು ಮತ್ತೊಮ್ಮೆ ನಿಚ್ಚಳ ಕಂಗಳಿಂದ ಕಂಡು ಬರಬೇಕೆನ್ನಿಸುತ್ತಿರುವುದರ ಹಿಂದಿನ ಹೊಯ್ದಾಟವೇ ಈ ಕೃತಿ ಇರಬಹುದು. ಓದಲೇ ಬೇಕೆನ್ನಿಸುತ್ತಿರುವ ಕೃತಿಗಳ ಸಾಲಲ್ಲಿ ಈ ಕೃತಿ ಅದು ಹೇಗೆ ಗೊಣ್ಣೆ ಒರೆಸಿಕೊಳ್ಳುತ್ತಾ ಮುಂದೆ ನಿಂತಿತಲ್ಲಾ…….!