ನಾಗರಾಜ್ ಹರಪನಹಳ್ಳಿ
ಗಿರೀಶ್ ಕಾರ್ನಾಡ್ ರಂಥ ಪ್ರತಿಭೆ ಜೊತೆ ಒಂದುವೊರೆ ತಾಸು ಮಾತುಕತೆ ಮಾಡುವ ಸಂದರ್ಭ ನನಗೆ ಒದಗಿ ಬಂದಿತ್ತು. ಅದು 1995ರ ಸಮಯ. ಧಾರವಾಡದಲ್ಲಿ ನಾನು ಎಂ.ಫಿಲ್. ಗಾಗಿ ಕ.ವಿ.ವಿ.ನಲ್ಲಿದ್ದೆ. ಎಂ.ಫಿಲ್. ಪ್ರಬಂಧಕ್ಕೆ ಕಾರ್ನಾಡರ ತಲೆದಂಡ, ಡಾ.ಎಂ.ಎಂ. ಕಲಬುರ್ಗಿ ಸರ್ ಅವರ ಕೆಟ್ಟಿತ್ತು ಕಲ್ಯಾಣ ನಾಟಕಗಳ ತೌಲಕನಿಕ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ಕಲಬುರ್ಗಿ ಸರ್ ಜೊತೆ ಹಲವು ಸುತ್ತಿನ ಚರ್ಚೆ ನಂತರ ಕಾರ್ನಾಡ್ ಸರ್ ಸಂದರ್ಶನ ಮಾಡುವುದೆಂದು ನಿರ್ಧಾರವಾಯಿತು.
ಆಗ ಸಮಾಜ ಪುಸ್ತಕಾಲಯದಲ್ಲಿ ಕಾರ್ನಾಡ ಅವರ ಸ್ನೇಹಿತರನ್ನು ಸಂಪರ್ಕಿಸಿ , ಕಾರ್ನಾಡರು ಧಾರವಾಡಕ್ಕೆ ಬರುವ ಸಮಯ ತಿಳಿದುಕೊಂಡೆ. ಕಾರ್ನಾಡರು ಮನೋಹರ ಗ್ರಂಥಮಾಲೆ ಕಚೇರಿ ಅಟ್ಟದ ಮೇಲೆ ಮಾತಿಗೆ ಸಿಕ್ಕರು. ನಾಟಕಗಳ ಕುರಿತು, ತಲೆದಂಡ ಬರೆದ ಸನ್ನಿವೇಶ ಸಂದರ್ಭ ವಿವರಿಸಿದರು. ಸಂಕ್ರಾಂತಿ ಗಿಂತ ಹೇಗೆ ತಲೆದಂಡ ಭಿನ್ನ ಎಂದು ಅವರು ವಿವರಿಸಲಿಲ್ಲ. ವ್ಯವಸ್ಥೆಯ ವಿರುದ್ಧ ಸೆಣೆಸುವುದು ಕಷ್ಟ ಎಂಬ ಅವ್ಯಕ್ತ ಧ್ವನಿ ಅವರ ಮಾತಿನಲ್ಲಿತ್ತು…
ಕೋಮುಸೌಹಾರ್ದತೆ, ಅವತ್ತಿನ ಭಾರತದ ಸನ್ನಿವೇಶ, ಬಾಬರಿ ಮಸೀದ್ ಉರುಳಿದ ನಂತರದ ಭಾರತ, ತುಘಲಕ್ ನಾಟಕ, ಲಂಡನ್ ಥೇಟರ್ ಬಗ್ಗೆ ವಿವರವಾಗಿ ಮಾತನಾಡಿದರು…
ಆ ಸಂದರ್ಶನವನ್ನು ಕರಾವಳಿ ತಾರೆ ಎಂಬ ಪಾಕ್ಷಿಕದಲ್ಲಿ ದಾಖಲಿಸಿದೆ. ಧಾರವಾಡದಲ್ಲಿ ತುಘಲಕ್ ನಾಟಕ ಪ್ರದರ್ಶನವನ್ನು ನೋಡಿದ್ದೆ. ಅವಾಗಿನಿಂದ ಕಾರ್ನಾಡ್ ನನ್ನ ಮನದಲ್ಲಿ ಶಾಶ್ವತವಾಗಿ ಉಳಿದು ಬಿಟ್ಟಿರು.ಕುಂದಾಪುರದಲ್ಲಿ ಅವರ ಆಗ್ನಿ ಮತ್ತು ಮಳೆ ನಾಟಕ ನೋಡಿದ್ದೆ.
ಕಾರ್ನಾಡರು ಕನ್ನಡ ನಾಡು ಮರೆಯಲಾರದ ನಾಟಕಕಾರ. ಅವರ ನಾಟಕಗಳಲ್ಲಿನ ಕನ್ನಡ ಭಾಷೆಯ ಬೌದ್ಧಿಕ ಶ್ರೇಷ್ಠತೆ ಕಾಣ ಸಿಗುತ್ತದೆ.
ಕಾರ್ನಾಡರಂತೆ ತುಘಲಕ್ ಮತ್ತು ಟಿಪ್ಪುಸುಲ್ತಾನನ್ನು ಅರ್ಥ ಮಾಡಿಕೊಂಡವರು ಕಡಿಮೆ. ಅಷ್ಟು ಮನೋಜ್ಞ ಬರಹಗಾರ ಅವರು.
ನಾನು ಅವರ ಯಯಾತಿ ನಾಟಕವನ್ನು ಪಿ.ಯು.ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶ ನನಗೆ ಸಿಕ್ಕಿತ್ತು…
ಅವರ ಜೊತೆ ನನಗಾಗಿ ಒಂದುವೊರೆ ತಾಸು ಕೊಟ್ಟಿದ್ದರು ಎಂಬುದೇ ಈಗ ಮರೆಯಲಾಗದ ನೆನಪು.
ಪ್ರೀತಿಯ ಕಾರ್ನಾಡರೇ ನಿಮಗೆ ನಮಸ್ಕಾರ…






0 Comments