ಗಿರಿಧರ್ ಖಾಸನೀಸ್
**
ಟೇಬಲ್ ಎರಡು ಮತ್ತು ಮೂರರಲ್ಲಿ ಕೂತವರು ಬಿಯರ್ ಕುಡಿಯುತ್ತಿದ್ದಾರೆ.
ಟೇಬಲ್ ಒಂದಕ್ಕೆ ಬ್ರಾಂಡಿ ಸರಬರಾಜಾಗಿದೆ.
ಟೇಬಲ್ ನಾಲ್ಕರಲ್ಲಿ ಕೂತವನು ಮೆನು ಕಾರ್ಡ್ ತಿರುವಿಹಾಕುತ್ತಿದ್ದಾನೆ.
ಟೇಬಲ್ ಎರಡು ಹಾಗೂ ನಾಲ್ಕರಲ್ಲಿ ಕೂತವರು ವಿವಾಹಿತರು.
ತಮ್ಮ ತಮ್ಮ ಮೊಬೈಲ್ ಫೋನುಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ.
ಟೇಬಲ್ ಮೂರರಲ್ಲಿ ಕೂತವನಿಗೆ ಮದುವೆ ನಿಶ್ಚಯ ಆಗಿದೆ.
ಹುಡುಗಿ ಇನ್ನೊಬ್ಬನನ್ನ ಪ್ರೀತಿಸುತ್ತಿದ್ದಾಳೆ ಅಂತ ಗೊತ್ತಾಗಿ ತಲೆ ಬಿಸಿಯಾಗಿದೆ.
ಟೇಬಲ್ ಒಂದರಲ್ಲಿ ಕೂತವನಿಗೆ ಒಬ್ಬ ಗೆಳೆಯನಿದ್ದಾನೆ. ಚಿಕ್ಕ ಹುಡುಗ.
ಕರೆದಾಗ ಬರುತ್ತಾನೆ. ದುಡ್ಡಿಗಾಗಿ ಏನು ಕೆಲಸ ಕೊಟ್ಟರೂ ಮಾಡುತ್ತಾನೆ.
ಟೇಬಲ್ ನಾಲ್ಕು ಹಾಗೂ ಟೇಬಲ್ ಒಂದರಲ್ಲಿ ಕೂತವರು ಬೋಳು ತಲೆಯವರು.
ಒಬ್ಬ ಟೋಪಿ ಹಾಕಿದ್ದಾನೆ. ಇನ್ನೊಬ್ಬ ಕೆಟ್ಟದಾದ ವಿಗ್ ಧರಿಸಿದ್ದಾನೆ.
ನಾಲ್ಕು ಟೇಬಲ್ಲಿಗೂ ಒಬ್ಬನೇ ಮಾಣಿ. ಸ್ಮಾರ್ಟ್ ಹುಡುಗ.
ಕೆಂಪಗೆ ಹೊಳೆಯುವ ಮುಖ. ಗುಂಗುರು ಕೂದಲು.
ಟೇಬಲ್ ಒಂದರಲ್ಲಿ ಕೂತವನಿಗೆ ಅವನ ಮೇಲೆ ಕಣ್ಣು.
ಹೇಳಲು ಮನದಲ್ಲಿ ಹಿಂಜರಿಕೆ.
ಮಾಣಿಗೆ ಇದು ಗೊತ್ತು. ಆದರೆ ಅವನಿಗೆ ಇಂಟರೆಸ್ಟ್ ಇಲ್ಲ.
ಊರಿನಲ್ಲಿ ಹೆಂಡತಿ ಮಕ್ಕಳಿದ್ದಾರೆ. ಆಗಾಗ ಊರಿಗೆ ಹೋಗಿ ಬರುತ್ತಾನೆ.
ಟೇಬಲ್ ಎರಡರ ಮೇಲೆ ಫಿಂಗರ್ ಚಿಪ್ಸ್ ಟೊಮೇಟೊ ಸಾಸ್ ಇಡುತ್ತಾನೆ.
ಟೇಬಲ್ ನಾಲ್ಕನೆಯವನು ಕ್ವಾರ್ಟರ್ ರಮ್ ತರಲು ಹೇಳುತ್ತಾನೆ.
ಜೊತೆಗೆ ಎರಡು ಮೊಟ್ಟೆಯ ಆಮ್ಲೆಟ್.
ಮಾಣಿ ಕಿಚನ್ ಕಡೆ ನಡೆಯುತ್ತಾನೆ. ಟೇಬಲ್ ಒಂದನ್ನು ದಾಟುವಾಗ …
ನೆಲದ ಮೇಲೆ ಇನ್ನೂರು ರೂಪಾಯಿ ನೋಟು ಅರೆ ಕತ್ತಲಲ್ಲೂ ಮಿಂಚುತ್ತದೆ.
0 ಪ್ರತಿಕ್ರಿಯೆಗಳು