ಗಿರಿಜಾ ಶಾಸ್ತ್ರಿ
ಮೊನ್ನೆ ಉತ್ತರ ಕರ್ನಾಟಕ ಲೇಖಕಿಯರ ಸಂಘದವರು ಏರ್ಪಡಿಸಿದ ‘ಪ್ರವಾಸ ಕಥನಗಳು ‘ ಎಂಬ ರಾಷ್ಟ್ರೀಯ ವಿಚಾರಸಂಕಿರಣ ಯಶಸ್ವಿಯಾಗಿ ನಡೆಯಿತು. ಒಡಿಯಾ ಭಾಷೆಯ ಖ್ಯಾತ ಲೇಖಕಿ, ಜ್ಞಾನಪೀಠ ಪ್ರಶಸ್ತಿವಿಜೇತೆ ಪ್ರತಿಭಾ ರೇ ಅವರು ಉದ್ಘಾಟಕರಾಗಿ ಬಂದಿದ್ದರು. ಅವರನ್ನು ಕಂಡದ್ದು ಒಂದು ಅವಿಸ್ಮರಣೀಯ ಸಂಗತಿ. ಹಾಗೂ ನಮ್ಮವರೇ ನೇಮಿಚಂದ್ರ ಅವರೂ ಕೂಡ ಆಶಯ ಭಾಷಣ ಮಾಡಲು ಬಂದಿದ್ದರು. ಉ.ಕಲೇ.ಸಂ ನ ಅಧ್ಯಕ್ಷೆಯಾದ ಶ್ರೀಮತಿ ರಾಜೇಶ್ವರಿ ಮಾಹೇಶ್ವರಯ್ಯ ಅವರ ನೇತೃತ್ವದಲ್ಲಿ ಮಹಿಳೆಯರೆಲ್ಲಾ ಬಹಳ ಉತ್ಸಾಹದಿಂದ, ಉಲ್ಲಾಸದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸರೋಜಾ ಲೊಡಾಯ ಮುಂತಾದ ಅನೇಕ ಫೇಸ್ ಬುಕ್ ಗೆಳತಿಯರನ್ನು ಮುಖತಃ ಭೇಟಿ ಮಾಡಲು ಸಾಧ್ಯವಾಯಿತು.
ನನಗೆ ಬೇಕಾದ ಪುಸ್ತಕಗಳನ್ನು ತಲಪಿಸಲೆಂದೇ ಹಿರಿಯರಾದ ಹರ್ಷ ಡಂಬಳ್ ಮತ್ತು ಆನಂದ ಝುಂಜರವಾಡರು ದೂರದ ಕರ್ನಾಟಕ ವಿ.ವಿ.ಗೆ ಬಂದದ್ದು ಸಂಕೋಚ ಮತ್ತು ಮುಜಗರವನ್ನುಂಟುಮಾಡಿತು. ನಮ್ಮ ಮೇಲಿನ ಅವರ ಪ್ರೀತಿಗೆ ನಾವಿಬ್ಬರೂ ಕರಗಿ ಹೋದೆವು. ಹೇಮಾ ಪಟ್ಟಣಶೆಟ್ಟಿ ಮತ್ತು ಸಿದ್ದಲಿಂಗ ಪಟ್ಟಣ ಶೆಟ್ಟಿಯವರ ದರ್ಶನ ಲಾಭ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತು. ಹೇಮಾ ಅವರು ಏನೋ ಔಪಚಾರಿಕವಾಗಿ ಮಾತಾಡಿದರು. ಅದಕ್ಕೆ ‘ನೀವು ನನಗೆ ಅಕ್ಕ’ಎಂದೆ. ಗಲ್ಲ ಹಿಡಿದು ಅಲುಗಾಡಿಸಿ ಫ್ಲೇಯಿಂಗ್ ಕಿಸ್ ಗಾಳಿಯಲ್ಲಿ ಹಾರಿಸಿದರು. ಪ್ರಜ್ಞಾ ಮತ್ತೀಹಳ್ಳಿಯವರಂತೂ ಯಾವುದೋ ಜನ್ಮದ ಗೆಳತಿಯೆಂಬಂತೆ ಮಾತನಾಡಿದರು. ಅವರನ್ನು ಮುಖತಃ ಕಂಡದ್ದು ಅದೇ ಮೊದಲು. ಎಲ್ಲಾ ಮೊಗಹೊತ್ತಿಗೆಯ ಮಾಯೆ!!!
ನನಗೆ ಎಷ್ಟೊಂದು ಜನ ಅಕ್ಕ ತಂಗಿಯರುಸಿಕ್ಕರು! ಎಲ್ಲರಲ್ಲೂ ಆ ‘ಅಕ್ಕ’ ಮರುಹುಟ್ಟು ಪಡೆಯುತ್ತಲೇ ಇದ್ದಾಳೆ ಎಂಬುದನ್ನು ತಮ್ಮ ಅದಮ್ಯ ಚೈತನ್ಯ ಉತ್ಸಾಹಗಳಿಂದ ಅನುಭವಕ್ಕೆ ತಂದು ಕೊಟ್ಟರು?!
ಬಹಳ ಕಾಲದ ಮೇಲೆ, ನನ್ನ ಜೊತೆಗೆ ಪ್ರಬಂಧ ಮಂಡಿಸಿದ ನಮ್ಮ ಬಹು ಕಾಲದ ಗೆಳೆಯರಾದ ಅಶೋಕ ನರೋಡೆಯವರನ್ನು ಕಂಡು ಖುಷಿಯಾಯಿತು. ಜಗದೀಶ ಕೊಪ್ಪ ಅವರ ಜೊತೆಗೇ ನಾವು ಬೆಳಗಿನ ನಾಸ್ತಾ ಮುಗಿಸಿದೆವು. ಅವರ ದೀರ್ಘ ಪ್ರಬಂಧ ಒಂದು ಸಬಾಲ್ಟ್ರನ್ ಅಧ್ಯಯನವೇ ಆಗಿತ್ತು.
ಅಭ್ಯರ್ಥಿಗಳಾಗಿ ಬಂದಿದ್ದ ಅನೇಕ ಅಪರಿಚಿತ ಶಿಕ್ಷಕರೂ, ಸಂಶೋಧನ ವಿದ್ಯಾರ್ಥಿಗಳೂ ಪ್ರೀತಿಯಿಂದ ಮುತ್ತಿಕೊಂಡರು. ಸೆಲ್ಫಿಗಳ ಸಮಾರಾಧನೆಯಾಯಿತು. ಮೂವತ್ತು ದೇಶಗಳನ್ನು ಸುತ್ತಿರುವ ಲೇಖಕಿ ಬೆಳಗಾವಿಯ ಜ್ಯೋತಿ ಬಾದಾಮಿ ಮತ್ತವರ ಗೆಳತಿಯರ ಪರಿಚಯವಾದದ್ದಂತೂ ಒಂದು ಅಪೂರ್ವ ಸಂಧಿ. ಒಟ್ಟಿನಲ್ಲಿ ಒಂದು ಉತ್ಸವ ತಂದ ಖುಷಿ.















0 Comments