
ಗಿರಿಜಾ ಶಾಸ್ತ್ರಿ
“ಬದುಕಿನ , ಸಮಾಜದ ಈ ಸಂದರ್ಭದಲ್ಲಿ ( ಕೋವಿಡ್) ನಾವೆಲ್ಲ ಒಂದು ಸಮುದಾಯವಾಗಬೇಕಿತ್ತು. ಆದರೆ ಏಕಾಂಗಿಗಳಾದೆವು. ಸ್ವಾರ್ಥಿಗಳಾದೆವು. ನಾನು, ನಮ್ಮ ಕುಟುಂಬದ ಯೋಗಕ್ಷೇಮವೇ ಮುಖ್ಯವಾಯಿತು. ಇದೇನು ತಪ್ಪಲ್ಲ ಸಹಜ. ದೀರ್ಘಕಾಲ ಬದುಕಬೇಕೆಂಬ ಆಸೆ ಕೂಡ ತಪ್ಪಲ್ಲ. ಆದರೆ ಸೋಂಕು ನನ್ನ ಹತ್ತಿರ, ನಮ್ಮ ಕುಟುಂಬದ ಹತ್ತಿರ ಬರಬಾರದು, ನಾವು ಮಾತ್ರ ಸಾಯಬಾರದು.
ಪ್ರಳಯವಾಗಿ ಜಗತ್ತೇ ಕೊನೆಯಾದರೂ, ನಾನೊಬ್ಬ ಮಾತ್ರ, ನನ್ನ ಕುಟುಂಬ ಮಾತ್ರ ಏನೂ ಆಗದವರಂತೆ ಪ್ರಳಯದ ಜಲರಾಶಿಯ ದಡದಲ್ಲಿ ನಿಂತು ಮುಂದಿನವರಿಗೆ ಎಲ್ಲವನ್ನೂ ಹೇಳಬೇಕೆಂಬ ಆಸೆಯೇ ಎಷ್ಟು ಕ್ರೂರವಾದದ್ದು ಅನಿಸುತ್ತದೆ. ಹಾಗೆಂದು ಮನಸ್ಸಿಗೆ ಮತ್ತೆ ಮತ್ತೆ ಪಾಠ ಹೇಳಿದರೂ, ಅದೇ ಆಸೆಯೇ ಮತ್ತೆ ಮತ್ತೆ ಚಿಗುರೊಡೆಯುತ್ತದೆ (ಕೋವಿಡ್ ದಿನಚರಿ. ಕೆ. ಸತ್ಯನಾರಾಯಣ. ಪುಟ. ೨)
ಒಬ್ಬರನ್ನು ಭೇಟಿ ಮಾಡುವ, ದುಃಖದ ಕಾರಣಗಳನ್ನು ತಿಳಿಯುವ ಅವಕಾಶಗಳನ್ನು ಕೂಡ ನಮ್ಮ ಕಾಲ ನಮ್ಮಿಂದ ಕಸಿದುಕೊಳ್ಳುತ್ತಿದೆ. ಮನುಷ್ಯನ ಸ್ವಭಾವ ಎಷ್ಟು ದರಿದ್ರವಾದದ್ದು, ಅಂದರೆ ಇದಕ್ಕೂ ನಾವು ಹೊಂದಿಕೊಂಡುಬಿಡುತ್ತೇವೆ. ಇದೆಲ್ಲ ಅನಿವಾರ್ಯವಲ್ಲವೇ, ಸಹಜವಲ್ಲವೇ ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ನಮ್ಮ ಬಗ್ಗೆ ನಾವೇ ಅಸಹ್ಯಪಟ್ಟುಕೊಳ್ಳಲು ಕೂಡ ಸಾಧ್ಯವಾಗದಂತಹ ಸ್ಥಿತಿ ತಲಪುತ್ತೇವೆ (ಪು. ೧೪)
ಕೆ. ಸತ್ಯನಾರಾಯಣ ಅವರ ‘ಕೋವಿಡ್ ದಿನಚರಿ’ಯಿಂದ ಆಯ್ದ ಈ ಸಾಲುಗಳು ಒಂದು ರೀತಿಯ ‘ಕಪಾಳ ಮೋಕ್ಷ’ಮಾಡುತ್ತವೆ. ಇದು ನಮಗೆ ನಾವೇ ಮಾಡಿಕೊಳ್ಳುವ ಕಪಾಳ ಮೋಕ್ಷ- ವೈಯಕ್ತಿಕ ಮತ್ತು ಸಾಮಾಜಿಕ ಎರಡು ನೆಲೆಗಳಲ್ಲೂ.
ಕೋವಿಡ್ ಸಂದರ್ಭದ ಭಯ, ತಲ್ಲಣ, ಕೌಟುಂಬಿಕ ಸ್ವಾರ್ಥ, ಅಸಹಾಯಕತೆ, ಭಯಕ್ಕೆ ಕಾವು ಕೊಡುವ ದೂರವಾಣಿ ಕರೆಗಂಟೆಗಳು , ವಿದೇಶದಲ್ಲಿರುವ ಮಕ್ಕಳ ಆತಂಕಗಳು, ಬಾಲ್ಯವನ್ನು ತಪ್ಪಿಸಿಕೊಂಡ ಮಕ್ಕಳು ಆಸ್ಪತ್ರೆ ದಾಖಲಾತಿಯ ಪಡಿಪಾಟಲುಗಳು,ಅದರ ಅವ್ಯವಸ್ಥೆ. ಲಸಿಕೆಯ ಗೊಂದಲ, ಸಾವು, ಸಾವಿನ ಸಂಖ್ಯೆ ಕೇವಲ ಮಾಹಿತಿಯಾಗಿಬಿಡುವ ದುರಂತ, ದಿನವೂ ಬದಲಾಗುತ್ತಲೇ ಹೋಗುವ ಸಾವಿನ ವಿವರಗಳು, ವಿಶ್ಲೇಷಣೆಗಳು, ಸಂಬಂಧಗಳ ಅಸೂಕ್ಷ್ಮತೆ, ಸಾಮೂಹಿಕ ಅಂತ್ಯ ಸಂಸ್ಕಾರ ತರುವ ಅನಾಥ ಪ್ರಜ್ಞೆ ಇವು ಒಂದು ಕಡೆಗಿದ್ದರೆ ಇನ್ನೊಂದು ಕಡೆಗೆ ಸಮಾಜ ರಾಜಕಾರಣ, ಸರ್ಕಾರದ ಜವಾಬ್ದಾರಿಯ, ರಾಜಕಾರಣಿಗಳ ಬೇಜವಾಬ್ದಾರಿಯ ವಿಶ್ಲೇಷಣೆ, ಸಣ್ಣ ವ್ಯಾಪಾರಸ್ಥರ ಮತ್ತು ಕಾರ್ಮಿಕರ ಸಂಕಟಗಳು, ಕಾರ್ಪೋರೇಟ್ ಉದ್ಯೋಗಿಗಳ ಸಮಸ್ಯೆಗಳು ಎಲ್ಲವೂ ಇಲ್ಲಿ ಅನಾವರಣಗೊಂಡಿವೆ.

ಇದು ವೈಯಕ್ತಿಕ ದಿನಚರಿಯಾದುದರಿಂದ ಇದಕ್ಕೊಂದು ತೀವ್ರತರವಾದ , ನಾವಿನ್ನೂ ಅನುಭವಿಸುತ್ತಲೇ ಇರುವ ನರಳುತ್ತಲೇ ಇರುವ ಆತ್ಮಸ್ಪರ್ಶವಿದೆ.
ವಿಷ್ಣು ಸಹಸ್ರನಾಮದ ಡೈರಿಯಲ್ಲಿ ಕೋವಿಡ್ ದಿನಚರಿಯನ್ನು ಬರೆಯಲು ಆರಂಭಿಸಿದೆ ಎನ್ನುವ ಲೇಖಕರ ಮಾತು ಕೋವಿಡ್ ದುರಿತವನ್ನು ಮೀರುವ ಅದರಿಂದ ಪಾರಾಗುವುದರ ಸಂಕೇತವಾಗಿಯೂ ಕಾಣಿಸುತ್ತದೆ. ಹೆಂಡತಿ ಹಾಡುವ ಕೀರ್ತನೆಗಳ ವಿವರಗಳ ಪಟ್ಟಿಯಲ್ಲಿ , ಅದನ್ನು ಲೇಖಕ ಮೆಚ್ಚುವಲ್ಲಿ ಹಾಗೂ ಲೇಖಕರನ್ನು ಸ್ವಾಗತಿಸುವ ಅಂಗೈಅಗಲ ಅರಳಿನಿಂತ ದಾಸವಾಳದ ಹೂವನ್ನು ನೋಡಿಕೊಂಡು ಲೇಖಕ ವಾಕ್ ಮಾಡುವ ವಿವರಗಳಲ್ಲಿ , ನೆದರ್ ಲ್ಯಾಂಡ್ ನಿಂದ ಮಗಳು ನೀಡುವ ಗರ್ಭಿಣಿಯ ಯೋಗಕ್ಷೇಮ ಮುಂತಾದ ವಿವರಗಳಲ್ಲಿ ಕೂಡ ಇದೇ ರೀತಿ ದುರಿತವನ್ನು ಪಾರಾಗಬೇಕೆಂಬ ಹಂಬಲ ಅಡಗಿದೆ.
ದಿನ ನಿತ್ಯದ ಸಣ್ಣ ಸಣ್ಣ ವಿವರಗಳಲ್ಲಿ ಕೋವಿಡ್ ಹರಡಿದ ಸೂತಕದ ಛಾಯೆಯನ್ನು ಗಮನಿಸುತ್ತಾರೆ ( ಉದಾ: ಹೆಂಡತಿ ಮಾರುಕಟ್ಟೆಯಲ್ಲಿ ಹಣ್ಷು ತರಕಾರಿಗಳನ್ನು ಕೊಳ್ಳುವ ಸಂದರ್ಭ) ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರವನ್ನು ನೆನಪಿಸುತ್ತಾ ಇದನ್ನು ‘ಕರೋನಾ ಕುರುಕ್ಷೇತ್ರ’ ಎನ್ನುತ್ತಾರೆ. ಇಡೀ ಜಗತ್ತೇ ಒಂದು ಹೊಲೆಮನೆಯಾಗಿರುವ ತನ್ನ ಸಹಜತೆಯನ್ನು ಕಳೆದುಕೊಂಡಿರುವ ಪರಿಯನ್ನು ಇದು ಗಾಢವಾಗಿ ವ್ಯಕ್ತಪಡಿಸುತ್ತದೆ.
ಕೆ. ಸತ್ಯನಾರಾಯಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಸ್ಯ ಪ್ರಜ್ಞೆ ಸಹಜವಾಗಿಯೇ ಇಲ್ಲಿ ಮರೆಯಾಗಿದೆ. ಆದರೆ ಅವರ ಬರಹಗಳಲ್ಲಿ ಹೆಚ್ಚಾಗಿ ಕಾಣದ ಕವಿಯೊಬ್ಬ ಇಲ್ಲಿ ನುಸುಳಿದ್ದಾನೆ. “ಯಾರೋ ಯಾವಾಗಲೋ ಬರುತ್ತಾರೆ ಹೋಗುತ್ತಾರೆ. ಮನೆ ಇದೆ. ಮನೆಯವರು ಇಲ್ಲ ಅಷ್ಟೇ. (೧೩)
“ಅಲ್ಲೇ ಚಿಕ್ಕ ಜಗುಲಿಯ ಮೇಲೆ ಒಬ್ಬ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಾನೆ. ಇನ್ನೊಬ್ಬರ ದೃಷ್ಟಿ ಬೇರೆಲ್ಲೋ ನೆಟ್ಟಿದೆ. ಇನ್ನೊಬ್ಬರು ಸುಮ್ಮನೆ ನಿಂತಿದ್ದಾರೆ” (೧೯)
“ಹಕ್ಕಿಗಳು ಗೂಡಿಗೆ ವಾಪಸ್ ಹೊರಟಿರುವ, ಲಾಕ್ ಡೌನ್ ನಿಂದ ಮೂಡಿರುವ ನಿಶ್ಶಬ್ದದಿಂದ ಪ್ರೇರಣೆ ಪಡೆದಂತೆ ಹಕ್ಕಿಗಳ ಚಿಲಿಪಿಲಿ. ಈ ಚಿಲಿಪಿಲಿಗೆ ಮೇಳಕೊಡುವಂತೆ ಕುಹೂ! ಕುಹೂ! “(೨೧)
ಈ ಸಾಲುಗಳು ಕೋವಿಡ್ ಸಂದರ್ಭ ಸೃಷ್ಟಿಸಿರುವ ಹೃದಯವಿದ್ರಾವಕತೆಯನ್ನು ಮನಮುಟ್ಟುವ ಹಾಗೆ ಚಿತ್ರಿಸುತ್ತವೆ. ಸಾವಿನ ಸಮ್ಮುಖದಲ್ಲಿ ಚರಮಗೀತೆ ಮಾತ್ರವಲ್ಲದೇ ಬೇರೇನು ಹಾಡಲು ಸಾಧ್ಯ?
ಸುಮಾರು ನಲವತ್ತು ದಿನಗಳ ದಿನಚರಿಯ ಪುಟಗಳು ಇವು. ಕೆಲವು ಕಡೆ ಎರಡು ನಾಲ್ಕು ಸಾಲಿನ ವಿವರಗಳು ನುಸುಳಿವೆ. ಅವು ವಿಷಯಕ್ಕೆ ನೇರವಾಗಿ ಸಂಬಂಧಿಸಿದಂತೆ ಕಾಣುವುದಿಲ್ಲ. ಅವುಗಳಲ್ಲಿ ಸಾತತ್ಯವಿಲ್ಲ. ಬಹುಶಃ ಈ ತರಹದ ಅಸಂಬದ್ಧತೆ ಮತ್ತು ಅಸಾಂಗತ್ಯ ಕೂಡ ಕೋವಿಡ್ ಸಂದರ್ಭದಲ್ಲಿ ಮಾನವ ಜನಾಂಗ ಎದುರಿಸಿದ ಅನಿಶ್ಚಿತತೆಯನ್ನೇ, ಅಸಾಂಗತ್ಯವನ್ನೇ ಹೇಳುತ್ತಿರಬಹುದು.
ಪಂಪ ‘ಭಯ’ ಮತ್ತು ‘ಲೋಭ’ವನ್ನು ಪಾಪ ಎನ್ನುತ್ತಾನೆ. ‘ಈ ಎರಡರ ಪಾಪಕ್ಕೆ ಪಕ್ಕಾಗಿ, ಆಳಿದವನು ಮಾಡಿದ ಉಪಕಾರವನ್ನು ಧಿಕ್ಕರಿಸಿ ನಿನ್ನ ಜೊತೆ ಬಂದುಬಿಟ್ಟರೆ… ಈ ಒಡಲೆನ್ನುವುದೇನು ವಿಖ್ಯಾತ ಕೀರ್ತಿಯ ಹಾಗೆ ಕಲ್ಪಾಂತರ ಸ್ಥಾಯಿಯೇ, ತಾಯೇ ?’ ಇದು ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಕರ್ಣ ಕುಂತಿಗೆ ಹೇಳುವ ಮಾತು.
ಸತ್ಯನಾರಾಯಣ ಅವರ ಕೋವಿಡ್ ದಿನಚರಿ ಓದುವಾಗ ಪಂಪನ ಈ ಮಾತು ಗಾಢವಾಗಿ ತಟ್ಟಿದುದಕ್ಕೆ ಕಾರಣ ಇಂದು ನಮ್ಮ ಮೇಲೆ ಅಮರಿಕೊಂಡಿರುವ ಭಯ ಮತ್ತು ಲೋಭದ ಕರಾಳ ನೆರಳು. ಸಾವಿನ ಭಯ ಮತ್ತು ಸಾವು ನನ್ನ ಕುಟುಂಬದವರನ್ನು ಮಾತ್ರ ತಟ್ಟಬಾರದು…..ಎನ್ನುವ ಲೋಭ. ಸಾಮುದಾಯಿಕವಾಗಿ ಎದುರಿಸಬೇಕಾಗಿದ್ದ ನಾವು ಚೆದುರಿ ಹೋಗಿದ್ದೇವೆ. ನಮ್ಮಿಂದಲೇ ನಾವು ಹೇಗೆ ಪ್ರತ್ಯೇಕವಾಗಿಬಿಟ್ಟಿದ್ದೇವೆ’ ಎನ್ನುವ ಮಾತುಗಳು ಈ ಭಯ ಮತ್ತು ಲೋಭದ ತೀವ್ರ ಸ್ವರೂಪವನ್ನು ವ್ಯಕ್ತಪಡಿಸುತ್ತವೆ.

ಈ ಭಯ ನಮ್ಮ ಕಲ್ಪಿತ ಭಯವೂ ಹೌದು ಮತ್ತು ಅದು ಸ್ವಾರ್ಥಮೂಲವಾದುದು ಎನ್ನುವುದೇ ಅತ್ಯಂತ ಕ್ರೂರವಾದುದು. ಅದರೊಂದಿಗೆ ಅಂಟಿಕೊಂಡಿರುವ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಪೊಳ್ಳುತನಗಳು ಅದನ್ನು ಇನ್ನೂ ಕ್ರೂರವಾಗಿಸಿದೆ. ಕರ್ಣ ಅಂದು ತನ್ನ ಸುರಕ್ಷಾ ಕೋಟೆಯನ್ನು ಧಿಕ್ಕರಿಸಿ (comfort zone) ವಿಖ್ಯಾತನಾದರೆ ನಾವು ನಮ್ಮ ಸುತ್ತ ಪರೀಕ್ಷಿತನ ಹಾಗೆ ಸುಭದ್ರ ಕೋಟೆಯನ್ನು ಕಟ್ಟಿಕೊಂಡು ಕಲ್ಪಾಂತರ ಸ್ಥಾಯಿಯಾಗುವ ಭ್ರಮೆಯಲ್ಲಿದ್ದೇವೆ.
ಈ ದಾರುಣ ವ್ಯಂಗ್ಯ ಈ ದಿನಚರಿಯ ಪುಟಗಳಲ್ಲಿ ಬಹಳ ಮಾರ್ಮಿಕವಾಗಿ ವ್ಯಕ್ತವಾಗಿದೆ. ಬಾರಿ ಬಾರಿ ಕಮೂನ ಪ್ಲೇಗ್ (ಎಚ್.ಎಸ್. ಆರ್ ಅನುವಾದ) ಕಾದಂಬರಿಯ ಉಲ್ಲೇಖ ಇದನ್ನು ಸ್ಪಷ್ಟಪಡಿಸುತ್ತದೆ. ಅನಂತವಾದ ಕಾಸ್ಮಿಕ್ ಬದುಕಿನೊಳಗೆ, ಸೀಮಿತವಾದ ನಮ್ಮ ಬದುಕಿನ chaos ಗಳನ್ನು ‘ಚಿರ ವಾಸ್ತವ ಮತ್ತು ಚರ ವಾಸ್ತವಗಳ’ ನಡುವಿನ ದ್ವಂದ್ವವನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ ಈ ದಿನಚರಿಯ ಪುಟಗಳು.
ಅವರ ಬರಹಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆತ್ಮಪರಿವೀಕ್ಷಣೆ ಮತ್ತು ಅರಿವಿನ ಕುರುಹುಗಳು ಈ ದಿನಚರಿಯ ಪುಟಗಳಲ್ಲಿ ಕೂಡ ಕಂಡುಬರುತ್ತವೆ. ಇದಕ್ಕೆ ಆತ್ಮಚರಿತ್ರೆಯ ಸ್ವರೂಪವಿದೆ ಎಂದು ಪ್ರಸನ್ನ ಸಂತೇಕಡೂರು ಅವರ ಬಹಳ ಸರಿಯಾಗಿಯೇ ಗುರುತಿಸಿದ್ದಾರೆ.
ಕೋವಿಡ್ ದಿನಚರಿ ಎನ್ನುವುದು ಕಾಲಕ್ಕೆ ಸಂಬಂಧಿಸಿದುದು. ಕಾಲಕ್ಕೆ ರಿವರ್ಸ್ ಗೇರುಗಳಿಲ್ಲ. ಮಬ್ಬಿನಿಂದ ಮಬ್ಬಿಗೆ ಇದರ ನಡೆ.
ಹೊರಗಿನ ಮಬ್ಬು ಹರಿಯಬಹುದು. ಆದರೆ ಮನುಷ್ಯ ಜನಾಂಗದ ಸ್ಮೃತಿಯೊಳಗೆ ಮಾತ್ರ ಕೋವಿಡ್ ನಿಂದಾಗಿ ಆವರಿಸಿದ ಈ ಮಬ್ಬು ಶಾಶ್ವತವಾಗಿ, ಗಾಢವಾಗಿ ಉಳಿದುಬಿಡುತ್ತದೆ. ಆದುದರಿಂದಲೇ ಅದನ್ನು ತಿದ್ದುವ ಹಕ್ಕು ಬರೆದುಕೊಂಡವನಿಗೂ ಓದುವವನಿಗೂ ಇಲ್ಲ ಎಂದು ಮುಖ ಪುಟದಲ್ಲೇ ಘೋಷಿಸಿದ್ದಾರೆ. ಜಾಗತಿಕವಾಗಿ ಕೋವಿಡ್ ಮಾಡಿರುವ ಆಳವಾದ ಗಾಯಗಳು ಮನುಷ್ಯ ಚರಿತ್ರೆಯಲ್ಲಿ ಅಳಿಸಲಾರದ, ತಿದ್ದಲಾರದ ಪುಟಗಳಾಗಿ ಉಳಿದುಬಿಡುತ್ತವೆ ಎಂಬುದನ್ನು ಇದು ಬಹಳ ಮಾರ್ಮಿಕವಾಗಿ ತಿಳಿಸುತ್ತದೆ.
ಯಾವ ತತ್ವಶಾಸ್ತ್ರವೂ ಕಲಿಸಲಾರದ ಪಾಠವನ್ನು ಕೋವಿಡ್ ಈ ಎರಡು ವರುಷಗಳಲ್ಲೇ ನಮಗೆ ಕಲಿಸಿದೆ. ಈ ಪುಸ್ತಕ ಬರೆಯುವುದರ ಮೂಲಕ ಅದರ ಸತ್ಯದರ್ಶನ ಮಾಡಿಸಿದ ಕೆ. ಸತ್ಯನಾರಾಯಣ ಅವರಿಗೆ ಅಭಿನಂದನೆಗಳು. ಈ ಪುಸ್ತಕವನ್ನು ಉಡುಗೊರೆಯಾಗಿ ನಮಗೆ ಕೊಟ್ಟಿದ್ದಾರೆ. ಅವರು ನೀಡಿರುವ ಗೌರವಕ್ಕೆ, ಪ್ರೀತಿ ಆದರಗಳಿಗೆ ಧನ್ಯವಾದಗಳು.






ಸೊಗಸಾದ ಪುಸ್ತಕ ಪರಿಚಯ