ಗಿರಿಜಾ ಶಾಸ್ತ್ರಿ
ಬದುಕೆಂದರೆ ಅನೇಕ ತಗ್ಗು ದಿಣ್ಣೆಗಳ ಅನಂತ ಪಯಣ ಎನ್ನುತ್ತೇವೆ. ಈ ತಗ್ಗು ದಿಣ್ಣೆಗಳ ಸ್ವರೂಪವನ್ನು ಅನುಸರಿಸಿ ನಮ್ಮ ಪಯಣದ ವೇಗ ರೂಪುಗೊಳ್ಳುತ್ತದೆ. ಈ ಪ್ರಯಾಣದ ಬಗೆಗೆ ನಮ್ಮ ದೃಷ್ಟಿಕೋನ ಹಾಗೂ ಅದರ ಸವಾಲುಗಳನ್ನು ಸ್ವ್ವೀಕರಿಸುವ ಸಾಮರ್ಥ್ಯದ ಮೇಲೆ, ನಮ್ಮ ಬದುಕಿನ ನೋವು, ನಲಿವುಗಳ ಪರಿಮಾಣ ನಿರ್ಧಾರವಾಗುತ್ತದೆ. ಬದುಕಿನ ಚಲನೆ ಒಮ್ಮೊಮ್ಮೆ ಕೇವಲ ತಗ್ಗು, ದಿಣ್ಣೆಗಳೇ ಅಲ್ಲದೇ, ಗಿರಿ ಕಂದರಗಳ ರೋಲರ್ ಕೋಸ್ಟರ್ ಸವಾರಿ ಕೂಡ ಆಗುವುದುಂಟು. ಅಂತಹ ಸವಾರಿಗಳಲ್ಲಿ ಅಪಘಾತಗಳ ಸಾಧ್ಯತೆಯೇ ಹೆಚ್ಚು. ಅಪಘಾತ ಆಗುತ್ತದೆ ನಿಜ, ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಸಾಮಾನ್ಯ ಜನರಲ್ಲಿ ಅದು ವ್ಯಕ್ತಿತ್ವದ ನಾಶಕ್ಕೆ ಕಾರಣವಾಗುತ್ತದೆ. ಆದರೆ ಅಪರೂಪವಾಗಿ, ಅಪಘಾತದಿಂದಾಗುವ ನೋವು, ನಷ್ಟಗಳನ್ನು ಕ್ರಿಯಾತ್ಮಕವಾದ ಚಟುವಟಿಕೆಗಳಿಗೆ ರೂಪಾಂತರಿಸಿಕೊಂಡು, ಬದುಕಿನುದ್ದಕ್ಕೂ ಸೃಜನಶೀಲರಾಗಿ ಉಳಿದ ಧೈರ್ಯಶಾಲಿಗಳ ಉದಾಹರಣೆಗಳು ನಮ್ಮಲ್ಲಿ ಇವೆ. ಇವರುಗಳು ಫೀನಿಕ್ಸ್ ಹಕ್ಕಿಯ ಹಾಗೇ ವಿನಾಶದ ಬೂದಿಯಿಂದಲೇ ಎದ್ದು ಬಂದಂತಹವರು.
‘ಫ್ರೀಡಾ ಕಹಲೊ’ ಎನ್ನುವ ಮೆಕ್ಸಿಕನ್ ಕಲಾವಿದೆ ಅಂತಹವರಲ್ಲಿ ಒಬ್ಬಳು. ಅವಳು ತನ್ನ ಯಾತನಾಮಯ ಬದುಕಿನ ವಿನಾಶದ ಒಳಗಿನಿಂದಲೇ ಮರುಹುಟ್ಟು ಪಡೆದು ಬಂದವಳು. ಅವಳು ನೋವನ್ನು ನಿರ್ವಹಿಸಿದ ಪರಿ, ಅದನ್ನು ಮೀರಿದ ರೀತಿ, ಬೆರಗು ಹÅಟ್ಟಿಸುತ್ತದೆ. ಬುದ್ಧ ಕೂಡ ಸಂಬೋಧಿಸಿದ್ದು ಯಾತನೆಯನ್ನೇ, ಅವುಗಳನ್ನು ಮೀರುವ ಉಪಾಯವನ್ನೇ. ಈ ನಿಟ್ಟಿನಲ್ಲಿ ನೋವನ್ನು ಮೀರಲು ಪ್ರಯತ್ನಿಸುವ ಸಾಹಸಿಗಳೆಲ್ಲಾ ಬುದ್ಧ ದೇವನ ಹಾದಿಯಲ್ಲಿ ನಡೆಯುವವರೇ. ಏಸುಕ್ರಿಸ್ತ ಕೂಡ ಬೋಧಿಸಿದ್ದು ಪ್ರೀತಿಯ ಮೂಲಕ ಬದುಕನ್ನು ಗೆಲ್ಲುವ ಕಲೆಯನ್ನೇ. ಈ ಅದಮ್ಯ ಪ್ರೀತಿಯೇ ಅವನಿಗೆ ಶಿಲುಬೆ ಏರುವ ಶಕ್ತಿಯನ್ನೂ ಕೊಟ್ಟಿತು.
“ಕಿತ್ತು ತಿನ್ನುವ ನನ್ನ ನೋವುಗಳನ್ನು, ಈ ಮದಿರೆಯಲ್ಲ್ಲಿ ಮುಳುಗಿಸಿ ಸಾಯಿಸಬಿಡಬೇಕೆಂದಿದ್ದೆ. ಆದರೆ ಬೊಡ್ಡಿ ಮಕ್ಕಳು (bastards) ಈಜುವುದನ್ನು ಕಲಿತು ಬಿಟ್ಟವು” – ಈ ಉಕ್ತಿ ಹೆಂಡದ ನಶೆಗೆ ಅಡಿಯಾಳಾದ ಒಬ್ಬ ವ್ಯಕ್ತಿಯಿಂದ ಬಂದದ್ದಲ್ಲ, ಬದಲಾಗಿ ಇಪ್ಪತ್ತೊಂದನೇ ಶತಮಾನದ ಪ್ರಾರಂಭದಲ್ಲಿ ಮೆಕ್ಸಿಕೋ ದೇಶದ ಪ್ರಖ್ಯಾತ ಚಿತ್ರಕಲಾವಿದೆಯಾಗಿ ಮೆರೆದ, ಕ್ರಾಂತಿಕಾರಿ ಫ್ರೀಡಾ ಕಹಲೋ ಅವಳದು. ಬಣ್ಣ ಮತ್ತು ಕುಂಚಗಳ ಮೂಲಕ ಬದುಕಿನ ಅಸಂಗತತೆಯನ್ನು ಅನನ್ಯವಾಗಿ ಅಭಿವ್ಯಕ್ತಿಸಿದ ಫ್ರೀಡಾಳಿಗೆ, ಅವಳು ಪಟ್ಟ ಪಾಡುಗಳೇ ಕ್ಯಾನ್ವಾಸುಗಳಾದವು. ಅವಳ ಹೆಚ್ಚಿನ ಕಲಾಕೃತಿಗಳೆಲ್ಲಾ, (ಅದರಲ್ಲೂ ಪ್ರಾರಂಭದ ಹಂತದವು) ಅವಳದೇ ವ್ಯಕ್ತಿಚಿತ್ರಗಳು. (ಸೆಲ್ಫ್ ಪೋಟ್ರೈಟ್) ಆದುದರಿಂದಲೇ ಅವಳಿಗೆ ತನ್ನ ವೈಯಕ್ತಿಕ ನೋವನ್ನು ಸಾರ್ವತ್ರಿಕವಾಗಿಸಲು ಸಾಧ್ಯವಾಗುತ್ತದೆ. ನೋವೇ ಅವಳ ಕಲಾಕೃತಿಯ ಕೇಂದ್ರ, ಸ್ಥಾಯೀ ಭಾವ. ಇದು ಅವಳ ‘ಬ್ರೋಕನ್ ಕಾಲಮ್’(1944) ಎನ್ನುವ ಪ್ರಸಿದ್ಧ ತೈಲಚಿತ್ರದಲ್ಲ್ಲಿ ಮೈಪಡೆದಿದೆ. ಅದರಲ್ಲಿ, ಮರಳು ಗಾಡಿನ ಹಿನ್ನೆಲೆಯಿಂದ ಬತ್ತಲೆಯಾಗಿ ಫ್ರೀಡಾ ಬರುತ್ತಿದ್ದಾಳೆ. ಅವಳ ಬೆನ್ನುಮೂಳೆಗಳನ್ನು ಒಡೆದು ಹೋದ ಕಲ್ಲುಗಳಿಂದ ಜೋಡಿಸಲಾಗಿದೆ. ಇದು ಅವಳ ಹರಿದು ಛಿದ್ರವಾದ ಶರೀರದ ಮೂಲಕ ಕಾಣುತ್ತಿದೆ. ಅವಳ ಛಿದ್ರವಾದ ಶರೀರಕ್ಕೆ ಬಿಗಿದ ಕೇವಲ ಕೆಲವು ಪಟ್ಟಿಗಳು ಅವಳನ್ನು ಕುಸಿಯದಂತೆ ತಡೆದಿವೆ. ಅವಳ ಇಡೀ ದೇಹವನ್ನು ಮೊಳೆಗಳಿಂದ ಬಡಿಯಲಾಗಿದೆ. ಅವಳ ಕಣ್ಣಿನಿಂದ ಹನಿಗಳು ಉದುರುತ್ತಿವೆ. ಇದು ಅವಳ ವೈಯಕ್ತಿಕ ನೋವಿನ ಒಂದು ರೂಪಕವಾಗಿರುವುದು ಮಾತ್ರವಲ್ಲದೇ, ಕ್ರಿಸ್ತನ ಶಿಲುಬೆಗೇರುವ ಯಾತನಾಮಯ ದೃಶ್ಯವನ್ನೂ ಪ್ರತಿನಿಧಿಸುತ್ತದೆ. ಕ್ರಿಸ್ತನ ಯಾತನೆಯ ಜೊತೆಗೆ ತನ್ನದನ್ನು ಸಮೀಕರಿಸಿಕೊಳ್ಳುತ್ತಿದ್ದಾಳೆ. ಮರಳು ಗಾಡಿನ ಹಿನ್ನೆಲೆಯಲ್ಲಿ ಅವಳು ಏಕಾಂಗಿಯಾಗಿ ನಿಂತು, ಕಂಬನಿ ಸುರಿಸುತ್ತಿರುವ ದೃಶ್ಯ, ಅವಳ ಅಸಹಾಯಕತೆ, ಅರಣ್ಯರೋದನವನ್ನು ಸಂಕೇತಿಸುತ್ತದೆ. ಆದರೆ, ನಮನಶೀಲತೆಯನ್ನು ಕಳೆದುಕೊಂಡಿರುವ, ಕಲ್ಲಿನ ಚೂರುಗಳಿಂದ ಮಾಡಿದ ಬೆನ್ನುಮೂಳೆಯನ್ನು ಹೊಂದಿ, ಕುಸಿಯುತ್ತಿರುವ ದೇಹವನ್ನು ಪಟ್ಟಿಯಿಂದ ಕಟ್ಟಿಕೊಂಡು ಅವಳು ನಡೆದು ಬರುತ್ತಿರುವ ದೃಶ್ಯ, ಸೋಲೊಪ್ಪದ ಎಣೆಯಿಲ್ಲದ ಅವಳ ಧೈರ್ಯ ಹಾಗೂ ತಾಳ್ಮೆಯ ಪ್ರತೀಕವೇ ಆಗಿದೆ. ಇದು, ಅವಳ ಸಾಯುವ ಹತ್ತು ವರುಷಗಳ ಮುನ್ನಿನ ಕೃತಿಯಾದ್ದರಿಂದ ಅವಳ ವೈಯಕ್ತಿಕ ನೋವಿನ ಜೊತೆಗೆ, ಅವಳ ಮಾಗಿದ ಲೋಕದೃಷ್ಟಿಯನ್ನೂ ವ್ಯಕ್ತಪಡಿಸುತ್ತದೆ.

ಮೇಲಿನದರ ಹಾಗೆಯೇ ಫ್ರೀಡಾ ತನ್ನ ಕೊರಳನ್ನು ಮುಳ್ಳಿನ ನೆಕ್ಲೆಸ್ ನಿಂದ ಅಲಂಕರಿಸಿಕೊಂಡಿರುವ ‘ಥಾರ್ನ್ ನೆಕ್ಲೇಸ್’ (1940) ಎನ್ನುವ ಚಿತ್ರವಿದೆ. ಈ ಚಿತ್ರದಲ್ಲಿರುವ ನೆಕ್ಲೆಸಿಗೆ, ಹಾಡುವ ಹಕ್ಕಿಯ ಒಂದು ಪದಕವಿದೆ. ಚಿತ್ರದಲ್ಲಿ ಮುಳ್ಳಿನ ಕಿರೀಟದ ಬದಲು ಮುಳ್ಳಿನ ನೆಕ್ಲೇಸ್ ಧರಿಸಿ ಫ್ರೀಢಾ ತನ್ನನ್ನು ಕ್ರಿಸ್ತನನನ್ನಾಗಿ ಕಾಣಿಸುವ ಇದು ಕ್ರಿಶ್ಚಿಯನ್ ಮತ್ತು ಆಜ್ಟೆಕ್ (Christian and Aztec) ಜನಾಂಗದ ಸಾಂಸ್ಕತಿಕ ಪ್ರತಿಮೆಗಳ ಬೆಸುಗೆಯಾಗಿದೆ. ಇದು ಮೆಕ್ಸಿಕನ್ ಸಂಸ್ಕತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವೆಂದು ವಿಮರ್ಶಕರು ಗುರುತಿಸುತ್ತಾರೆ. ಅವಳ ನೆಕ್ಲೆಸಿನ ಪದಕದ ಹಾಡುವ ಹಕ್ಕಿ ಆಜ್ಟೆಕ್ ಜನಾಂಗದ ದೇವರ ಪ್ರತೀಕವಾಗಿದೆ ಎಂದೂ ಗುರುತಿಸುತ್ತಾರೆ. ಹೀಗೆ ಅವಳ ವೈಯಕ್ತಿಕ ನೋವುಗಳೇ ಅವಳ ಕಲೆಯಲ್ಲಿ ಮರುಹುಟ್ಟು ಪಡೆದಿರುವ ರೀತಿಯನ್ನು ಅದರ ಹಿಂದಿನ ಬರ್ಬರ ಸತ್ಯವನ್ನು ಜಾರ್ಜ್ ಲ್ಯೂಕ್ ಎನ್ನುವ ಮೆಕ್ಸಿಕನ್ ಲ್ಯಾಟಿನ್ ಅಮೇರಿಕೆಯ ಪ್ರಸಿದ್ಧ ಕಲಾತಜ್ಞ ಕೊಂಡಾಡುವುದೇ ಇದಕ್ಕೆ ಸಾಕ್ಷಿಯಾಗಿದೆ.
ಫ್ರೀಡಾ ಕಹಲೊ ಹುಟ್ಟಿದ್ದು 1907ರ ಜುಲೈ 7ರಂದು, ಮೆಕ್ಸಿಕೋ ಶಹರದ ಕೊವಾಕಾನ್ ಎನ್ನುವ ಒಂದು ಪ್ರದೇಶದಲ್ಲಿ. ಅವಳು ಆರು ವರುಷದವಳಿದ್ದಾಗ ಪೋಲಿಯೋ ರೋಗಕ್ಕೆ ತುತ್ತಾಗಿ, ಕಾಲಿನ ಊನದ ಜೊತೆಗೆ ಸಾಮಾಜಿಕ ಅವಹೇಳನಕ್ಕೂ ಗುರಿಯಾಗುತ್ತಾಳೆ. ಆನಂತರ ಹದಿನೆಂಟು ವರುಷದ ಯುವತಿ ಫ್ರೀಡಾ, ಒಂದು ಭಯಂಕರ ಅಪಘಾತಕ್ಕೆ ತುತ್ತಾಗಿ ಬೆನ್ನುಮೂಳೆ ಹಾಗೂ ದೇಹದ ಇತರ ಭಾಗಗಳ ಮುರಿತ ಹಾಗೂ ಇತರ ತೊಂದರೆಗಳಿಂದಾಗಿ ಅವಳು ಬಹಳ ಕಾಲ ಆಸ್ಪತ್ರೆಯಲ್ಲಿ ಮಲಗಬೇಕಾಗುತ್ತದೆ. ಜೊತೆಗೆ ತಾನು ವೈದ್ಯೆಯಾಗಬೇಕೆಂಬ ಅವಳ ಕನಸೂ ನುಚ್ಚು ನೂರಾಗಿ ಹೋಗುತ್ತದೆ. ಹೀಗೆ ಆಸ್ಪತ್ರೆಯಲ್ಲಿ ಮಲಗಿರುವಾಗ ಕಾಲ ಕಳೆಯುವ ಸಾಧನವಾಗಿ ಅವಳು ಚಿತ್ರಕಲೆಗೆ ಮೊರೆ ಹೋಗುತ್ತಾಳೆ.
ಫ್ರೀಡಾ ತನ್ನ ಬದುಕಿನಲ್ಲಿ ಮೂವತ್ತಕ್ಕೂ ಹೆಚ್ಚು ಸಲ ಶಸ್ತ್ರಕ್ರಿಯೆಗೆ ಒಳಗಾಗುತ್ತಾಳೆ. ಈ ದೈಹಿಕ ಹಾಗೂ ಮಾನಸಿಕ ಹೋರಾಟಗಳು ಅವಳ ಎಲ್ಲಾ ಕಲಾಕೃತಿಗಳಲ್ಲಿ ಅನನ್ಯವಾಗಿ ಮೊಗಪಡೆದಿವೆ. ಡಿಯಾಗೋ ರಿವೆರಾ ಎನ್ನುವ ಒಬ್ಬ, ಅವಳದೇ ದೇಶದ ಪ್ರಖ್ಯಾತ ಚಿತ್ರಕಲಾವಿದನ ಜೊತೆ ನಡೆಯುವ ಅವಳ ಪ್ರೇಮ ವಿವಾಹ, ಈ ಹೋರಾಟಕ್ಕೆ ಹೊಸದೊಂದು ಆಯಾಮವನ್ನು ಒದಗಿಸುತ್ತದೆ. ವಯಸ್ಸಿನಲ್ಲಿ ಅವಳಿಗಿಂತ ಬಹಳ ಹಿರಿಯನಾದ, ಧಡೂತಿಯಾದ ಡಿಯಾಗೋ ಅವಳ ಅಭಿಮಾನಿಯಾಗುವುದರ ಮೂಲಕ ಅವರೀರ್ವರಲ್ಲಿ ಪ್ರೇಮ ಬೆಳೆದು ಮದುವೆಯಲ್ಲಿ ಪರ್ಯವಸಾನಗೊಳ್ಳುತ್ತದೆ. ಅವರಿಬ್ಬರದೂ ಆನೆ ಆಡಿನ ಜೋಡಿಯಂತೆ ಎಂಬ ಜನರ ಕುಹಕಕ್ಕೂ ಕಾರಣವಾಗುತ್ತದೆ. ಡಿಯಾಗೋ ಅವಳ ಸಹೋದರಿಯನ್ನೇ ಮೋಹಿಸುವುದರ ಮೂಲಕ ಅವಳಿಗೆ ದ್ರೋಹವೆಸಗುತ್ತಾನೆ. ‘ನನ್ನ ಜೀವನದಲ್ಲಿ ಎರಡು ದೊಡ್ಡ ಅಪಘಾತಗಳನ್ನು ಎದುರಿಸಿದೆ. ಅದು, ಒಂದು ಟ್ರಾಲಿಯಾದರೆ ಇನ್ನೊಂದು ಡಿಯಾಗೋ. ಅದರಲ್ಲಿ ಡಿಯಾಗೋ ಪ್ರಸಂಗ ಹೆಚ್ಚು ದುರದೃಷ್ಟಕರವಾದದ್ದು’ ಎಂದು ಹೇಳುತ್ತಾಳೆ. ಅದರ ಜೊತೆಗೆ ಮೂರು ಸಲ ಗರ್ಭಪಾತಕ್ಕೆ ಒಳಗಾಗುವ ಫ್ರೀಡಾಳಿಗೆ ತಾಯಿಯಾಗುವ ಸಾಧ್ಯತೆಗೆಳೇ ಬತ್ತಿಹೋಗುತ್ತವೆ. ಬಂಜೆತನ, ನೋವು, ನಷ್ಟ, ಏಕಾಕಿತನ ಮುಂತಾದ ಆಶಯಗಳು ಅವಳ ಕಲಾಕೃತಿಯನ್ನು ಆವರಿಸುತ್ತವೆ. ಅವಳು ಬೆಳೆಸಿಕೊಳ್ಳುವ ಪ್ರಾಣಿಗಳ, ಪಕ್ಷಿಗಳ ವಿಶೇಷವಾಗಿ ಮಂಗಗಳ ಬಗೆಗಿನ ಮೋಹ ಅವಳ ಖಿನ್ನತೆಯನ್ನು ಮೀರುವ ಸಾಧನವಾಗಿಯೇ ವ್ಯಕ್ತವಾಗುತ್ತದೆ.
ಡಿಯಗೋನಿಂದ ವಿಚ್ಛೇದನಗೊಂಡ ಫ್ರೀಡಾ ಮತ್ತೊಮ್ಮೆ ಅವನ ಅಪೇಕ್ಷೆಯ ಮೇರೆಗೆ ಅವನೊಡನೆ ರಾಜಿ ಮಾಡಿಕೊಂಡು ಮರುಮದುವೆ ಮಾಡಿಕೊಳ್ಳುತ್ತಾಳೆ. ಅವನಿಗೆ ಹೆಂಡತಿಯಾಗುವ ಬದಲು ತಾಯಿಯಾಗುತ್ತಾಳೆ. ಆನಂತರದ ಅವಳ ಚಿತ್ರಗಳಲ್ಲಿ ಅಂತಹ ತಾಯ್ತನದ ತುಡಿತವನ್ನು ಕಾಣಬಹುದಾಗಿದೆ. ಸಂದರ್ಶನವೊಂದರಲ್ಲಿ , ಡ್ಯಾನಿಯಲ್ ನಾಫೋ ಎನ್ನುವ ಮಾನಸಿಕ ಚಿಕಿತ್ಸಕ ತಜ್ಞೆ ಯೊಬ್ಬಳು, ಫ್ರೀಡಾಳ ಬಗೆಗೆ ಮಾತನಾಡುತ್ತಾ, “ಅವಳ ವ್ಯಕ್ತಿತ್ವವು ಅನೇಕ ವೈರುಧ್ಯಗಳಿಂದ ಕೂಡಿದ್ದಿತು. ಅವಳಿಗೆ ದೇವಿಯ ಕೋಮಲ ಗುಣಗಳು ಇದ್ದಂತೆ, ಪುರುಷನ ಕಾಠಿಣ್ಯವೂ ಇದ್ದಿತು. ಗಂಡಸರಂತೆ ಅವಳು ಸಿಗರೇಟು ಸೇದುವುದರಲ್ಲಿ ಮತ್ತು ಕುಡಿಯುವುzರಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಳ್ಳುತ್ತಿದ್ದಳು” ಎಂದು ಅಭಿಪ್ರಾಯ ಪಡುತ್ತಾಳೆ. ಬಹುಶಃ ಅವಳ ಛಿದ್ರಗೊಂಡ ವ್ಯಕ್ತಿತ್ವªನ್ನು ಸಮತೋಲನಗೊಳಿಸುವ ಸಾಧನವಾಗಿ ಇಂತಹ ವೈರುಧ್ಯಗಳು ಅವಳಲ್ಲಿ ಮನೆಮಾಡಿದ್ದಿರಬಹುದು.
ಫ್ರೀಡಾಳಿಗೆ ತನ್ನ ನಾಡು ನುಡಿಯ ಬಗ್ಗೆ ಬಹಳ ಪ್ರೇಮ. ಅದು ಅವಳ ತಂದೆಯಿಂದ ಬಂದ ಕೊಡುಗೆ. ‘ತನ್ನ ತಂದೆ ಬಹಳ ಬುದ್ಧಿವಂತ ಮತ್ತು ಅಷ್ಟೇ ಸ್ವಾತಂತ್ರ್ಯ ಪ್ರಿಯನಾಗಿದ್ದ’ ಎಂದು ಅವಳು ಕೊಂಡಾಡುತ್ತಾಳೆ. ಮೆಕ್ಸಿಕನ್ ಸಾಂಪ್ರದಾಯಕ ಉಡುಗೆ ತೊಡುಗೆಗಳನ್ನು ತೊಟ್ಟು, ಹೂವಿನಿಂದ ಕೇಶಾಲಂಕಾರ ಮಾಡಿಕೊಂಡಿರುವ ಅವಳ ಚಿತ್ರ ಸಾಮಾನ್ಯವಾಗಿ ಕಂಡು ಬರುತ್ತದೆ. ಹೀಗೆ ಅಲಂಕರಿಸಿಕೊಳ್ಳುವುದರ ಮೂಲಕ ತನ್ನ ನಾಡಿನ ಸಂಸ್ಕತಿಯ ಜೊತೆಗೆ ತನ್ನನ್ನು ಗುರುತಿಸಿಕೊಳ್ಳುತ್ತಾಳೆ. ಆದುದರಿಂದಲೇ ಅವಳ ಚಿತ್ರಗಳಮೇಲೆ ಆಗಿರಬಹುದಾದ ಹೊರಗಿನ ಸಂಸ್ಕತಿಯ ಪ್ರಭಾವವನ್ನು ಅಲ್ಲಗಳೆಯುತ್ತಾಳೆ. ಆದರೆ ಅವಳ ‘ವೆಲ್ವೆಟ್ ಡ್ರೆಸ್ಸಿ’ನ ವ್ಯಕ್ತಿ ಚಿತ್ರದಲ್ಲಿ ಕಂಡು ಬರುವ, ನೀಳವಾದ ಕೈಗಳು ಮತ್ತು ಉದ್ದವಾದ ಕೊರಳು ಮತ್ತು ಮಾನಸಿಕ ಪ್ರಕ್ಷುಬ್ಧತೆಯನ್ನು ಸಾಂಕೇತಿಸುವ ಉಕ್ಕೇರುವ ಅಲೆಗಳ ಹಿನ್ನಲೆ ಇವೆಲ್ಲವೂ ಆಧುನಿಕ ಚಿತ್ರಕಲೆಯ ನೇತಾರನಾದ, ಪ್ರಖ್ಯಾತ ‘ವ್ಯಾನ್ ಗೋ’ ಕೃತಿಗಳಲ್ಲಿ ಕಂಡು ಬರುವ ಮಾದರಿಯಾಗಿದೆ ಎಂದು ವಿಮರ್ಶಕರು ಅಭಿಪ್ರ್ರಾಯ ಪಡುತ್ತಾರೆ.
ಆದರೆ “ಮೈ ಡ್ರೆಸ್ ಹ್ಯಾಂಗ್ಸ್ ದೇರ್” ಎನ್ನುವ ಫ್ರೀಡಾಳ ವ್ಯಕ್ತಿ ಚಿತ್ರದಲ್ಲಿ ಅಮೆರಿಕೆಯ ಮೇಲಿನ ಅವಳ ಅಸಮಾಧಾನ ಸ್ಪಷ್ಟವಾಗಿ ಅಭಿವ್ಯಕ್ತಿಗೊಂಡಿದೆ. ‘ಯುಎಸ್ ಈಸ್ ಅಗ್ಲಿ ಅಂಡ್ ಡಲ್’ ಎಂದು ನಿರ್ಭಿಡೆಯಿಂದ ಹೇಳುತ್ತಾಳೆ. ಮೇಲಿನ ಚಿತ್ರ ಅಮೆರಿಕೆಯ ತಂತ್ರಜ್ಞಾನ ಮತ್ತು ಅವ್ಯವಸ್ಥೆಯ ಕುರಿತಾದ ವಿಡಂಬನೆಯೇ ಆಗಿದೆ.

1938 ರ ಅನಂತರ ಅವಳ ಕಲಾಕೃತಿಗಳು ಸಂಕೀರ್ಣವಾದವು, ಅಮೂರ್ತವಾದವು. ಮನೋವಿಷ್ಲೇಷಣಾತ್ಮಕ ನೆಲೆಯನ್ನು ಆತುಕೊಂಡವು. ಸಾವು, ದೈಹಿಕ ನೋವು, ಲೈಂಗಿಕತೆ, ಹಗಲುಗನಸು ಮುಂತಾದ ಸಂಗತಿಗಳ ನಿಗೂಢ ಶೋಧನೆಯತ್ತ ಮುಖಮಾಡಿದವು. ತನ್ನನ್ನೆ ಬಾಲಕಿಯಾಗಿ ಬತ್ತಲಾಗಿ ನಿಲ್ಲಿಸಿ ತನ್ನ ಎರಡೂ ಕಡೆಯ ವಂಶಜರಿಗೆ ಕೊಂಡಿಯಾಗಿಸುವಂತೆ ಚಿತ್ರಿಸುವುದರ ಮೂಲಕ ಸಾವು ಬದುಕಿನ ಚಕ್ರದ ಒಂದು ಅಖಂಡ ಸ್ವರೂಪವನ್ನು ಬಯಲಾಗಿಸಲು ಪ್ರಯತ್ನಿಸಿದಳು. ತನ್ನ ಗರ್ಭಪಾತವನ್ನು, ತನ್ನ ಸಾವನ್ನು ಚಿತ್ರಿಸುವ ಅವಳು, ‘ಮೀ ಅಂಡ್ ದಿ ಡಾಗ್ಸ್’, ‘ಮೈ ಬಾಡಿ ಈಸ್ ಲ್ಯಾಂಡ್ ಸ್ಕೇಪ್’, ‘ಡಿಸೈರ್ ಆಫ್ ದಿ ಯೂನಿವರ್ಸ್’ , ‘ಲಾಂಗಿಂಗ್ ಫಾರ್ ಫರ್ಟಿಲಿಟಿ’, ‘ಹ್ಯೂಮನ್ ಬಾಡಿ ರೂಟೆಡ್ ಇನ್ ಅರ್ಥ್ ಸೈಕಲ್ ಆಫ್ ಲೈಫ್ ಆಂಡ್ ಡೆಥ್’ ಮುಂತಾದ ಕೃತಿಗಳ ಮೂಲಕ ತನ್ನ ದೇಹದ ಉರವಣೆಗಳು, ಬಯಕೆಗಳನ್ನು, ಭೂಮಿಯ (ವಿಶ್ವದ) ಬಯಕೆಗಳು ಮತ್ತು ಉರವಣೆಗಳ ಜೊತೆಗೆ ಸಮೀಕರಿಸುತ್ತಾಳೆ. ತನ್ನ ತಾಯ ಗರ್ಭದಿಂದ ತಾನುಹೊರಬರುತ್ತಿರುವ ಚಿತ್ರ, ವಯಸ್ಕ ಮುಖದ, ಆದರೆ ಎಳೆಯ ಮಗುವಿನ ದೇಹದ ತಾನು ನರ್ಸ್ ಒಬ್ಬಳ ಎದೆಹಾಲು ಕುಡಿಯುತ್ತಿರುವ, ಇನ್ನೊಂದು ಮೊಲೆಯಿಂದ ಹಾಲು ಒಸರುತ್ತಿರುವ ಮುಂತಾದ ಅವಳ ಚಿತ್ರಗಳ ಕಲ್ಪನೆಯ ಹಿಂದೆ ರಕ್ತಸ್ರಾವದ ಮಧ್ಯೆ ಬಿದ್ದಿರುವ ಕನ್ಯೆಯೊಬ್ಬಳ ಯಾತನೆಯನ್ನು, ಹೊರಗೆಡಹುವುದೇ ಆಗಿದೆ. ತಾನು ಬತ್ತಲಾಗಿ ಮಲಗಿರುವ, ಕೊಲೆಗೆ ಈಡಾಗಿರುವ, ಗಂಡಸೊಬ್ಬ ತನ್ನನ್ನು ಹಿಂಸಿಸುತ್ತಿರುವ, ರಕ್ತಸ್ರಾವದಿಂದ ಕೂಡಿದ, ಯೋನಿಯ ಅನೂಹ್ಯತೆಯನ್ನು ಬಟಾಬಯಲಾಗಿಸುವ ಅನೇಕ ಚಿತ್ರಗಳು ಫ್ರೀಡಾಳ ಸ್ತ್ರೀ ಲೋಕದ ಆಯಾಮವನ್ನು, ಅದರ ಶಕ್ತಿ ಸ್ವರೂಪವನ್ನು ತೆರೆದು ತೋರುತ್ತದೆ. ಅವಳ ಅನನ್ಯವಾದ ಈ ಸ್ತ್ರೀನಿಷ್ಠತೆಯೇ, ಮೆಕ್ಸಿಕನ್ ಭೂಪಟದ ಮೇಲೆ ಅವಳನ್ನು ಅಜರಾಮರವಾಗಿ ಉಳಿಸಿದೆ. ತನ್ನ ವ್ಯಕ್ತಿತ್ವದ ವಿಚ್ಛೀದ್ರೀಕರಣವನ್ನು “ಟು ಫ್ರೀಡಾಸ್’ ಎನ್ನುವ ಚಿತ್ರದ ಮೂಲಕ, ಪ್ರೇಮಕ್ಕೆ ಪಾತ್ರವಾದ ಫ್ರೀಡಾ ಮತ್ತು ಭಗ್ನಗೊಂಡ ಫ್ರೀಡಾಳನ್ನು ಚಿತ್ರಿಸಿದ್ದಾಳೆ. ಇದು ಅವಳ ಸ್ತ್ರೀ ಅಸ್ಮಿತೆಗೆ ಸಾಕ್ಷಿಯಾಗಿದೆ. ಇದರಲ್ಲಿ ಒಂದು ಕಡೆ ಕಾಲ ಕೆಳಗೆ ಬಿದ್ದು ರಕ್ತಸೋರುತ್ತಿರುವ ಹೃದಯವಿದ್ದರೆ, ಇನ್ನೊಂದು ಕಡೆ ಆ ಹೃದಯಕ್ಕೆ ಜೋಡಿಸಲಾದ ನಾಳವನ್ನು ಕತ್ತರಿಯಿಂದ ಕತ್ತರಿಸುತ್ತ್ತಿರುವ ಚಿತ್ರವಿದೆ. ಈ ಚಿತ್ರದ ಮೂಲಕ ಮನುಷ್ಯ ಸಬಂಧಗಳ ಹುಸಿತನವನ್ನು ಬಯಲಾಗಿಸಿದ್ದಾಳೆ.
ಅವಳ ಬದುಕಿನ ಉತ್ತರಾರ್ಧದ ಚಿತ್ರಗಳಲ್ಲಿ ಸಾವು ಒಂದು ಗೀಳಾಗಿ ಕಾಡಿದೆ. ‘ನೆಕ್ಲೆಸ್ ಆಫ್ ಥಾನ್ರ್ಸ್’, ‘ಡಿಕೆ ಆಂಡ್ ಡೆಥ್’ ‘ಥಿಂಕಿಂಗ್ ಅಬೌಟ್ ಡೆಥ್’, ‘ಡೇ ಆಫ್ ದಿ ಡೆಡ್’ ಮುಂತಾದ ಕಲಾಕೃತಿಗಳಲ್ಲಿ ಇದು ಪರಿಣಾಮಕಾರಿಯಾಗಿ ಮೈದಳೆದಿದೆ. ಸಾವನ್ನು ಬದುಕಿನ ಒಂದು ವಾಸ್ತವ ಎಂದು ಅವಳು ಗ್ರಹಿಸಿದ್ದರೂ, ಅವಳ ಕೊನೆಗಾಲದ ಚಿತ್ರಗಳಲ್ಲಿ ಅಸ್ಥಿಪಂಜರಗಳು, ತಲೆ ಬುರುಡೆಗಳು ಪ್ರಧಾನವಾಗಿ ಕಾಣಿಸಿಕೊಳ್ಳುವುದು, ಅವಳು ತನ್ನ ಮನೆಯಲ್ಲೆಲ್ಲಾ ಅಸ್ಥಿಪಂಜರ ಮತ್ತು ತಲೆ ಬುರುಡೆಗಳನ್ನು ಅಲಂಕಾರಿಕ ವಸ್ತುಗಳಂತೆ ತೂಗು ಹಾಕುವುದು ಇವು ಸಾವಿನ ಬಗೆಗೆ ಅವಳಿಗಿದ್ದ ತೀವ್ರವಾದ ಆಲೋಚನೆಗಳನ್ನು ಬಯಲಾಗಿಸುತ್ತದೆ. ಅವಳ ಕೊನೆಗಾಲದಲ್ಲಿ, ಆಸ್ಪತ್ರೆಯಲ್ಲಿ ಮಲಗಿರುವಾಗ ಗ್ಯಾಂಗ್ರಿನ್ ಆಗಿ ಅವಳ ಕಾಲನ್ನು ಕತ್ತರ್ರಿಸಲಾಗುತ್ತದೆ. ಆಗ “ಹಾರಲು ರೆಕ್ಕೆಗಳಿರುವಾಗ, ಓ ಕಾಲುಗಳೇ ನೀವೇಕೆ ನನಗೀಗ?” ಎಂದು ಉದ್ಗಾರ ತೆಗೆಯುತ್ತಾಳೆ. ಅವಳು ಹಾಸಿಗೆ ಹಿಡಿದು ಮಲಗಿರುವಾಗ ಪಾರಿಸ್ ನಲ್ಲಿ ನಡೆಯುವ ಮಹಿಳಾ ಏಕವ್ಯಕ್ತಿ ಪ್ರದರ್ಶನಕ್ಕೆ ಹಾಜರಾಗಬೇಕೆನ್ನುವ ಅವಳ ಆಸೆಯನ್ನು ಅವಳ ಹಿತೈಷಿಗಳು ವಿರೋಧಿಸುತ್ತಾರೆ. ಆದರೂ ಅವಳ ಹಠಕ್ಕೆ ಮಣಿದು ಆಂಬ್ಯುಲೆನ್ಸ್ ವಾಹನದಲ್ಲಿ ಅವಳನ್ನು ಅಲ್ಲಿಗೆ ಕರೆದೊಯ್ಯಲಾಗುತ್ತದೆ. ಆರ್ಟ್ ಗ್ಯಾಲರಿಯಲ್ಲಿಯೇ ಮಂಚ ಹಾಸಿಗೆ ಹಾಕಿ ಅವಳ ಅವಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ.
ಫ್ರೀಡಾ ತನ್ನ ಕೊನೆಯುಸಿರು ಇರುವವರೆಗೆ ಕುಂಚವನ್ನು ಬಿಡಲಿಲ್ಲ. ಇದಕ್ಕೆ ಆಸ್ಪತ್ರೆಯ ಹಾಸಿಗೆಯ ಮೇಲೆ ಚಿತ್ರಬಿಡಿಸಲೆಂದು ಅವಳಿಗೆಂದು ವಿಶೇಷ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತದೆ. ಅವಳ ಕಟ್ಟ ಕಡೆಯ ಚಿತ್ರ ‘ ‘ಮೆಸೇಜ್ ಆಫ್ ಪೇನ್’. ಎಂಬುದು. ಅದರಲ್ಲಿ ತಾನೇ ಬಿಡಿಸಿದ ಅವಳ ವೈದ್ಯ ಡಾ. ಫ್ಯಾರಿಲ್ ಚಿತ್ರದ ಮುಂದೆ ರೋಗಿಯಾದ ಫ್ರೀಡಾ ಕುಂಚ ಹಾಗೂ ಬಣ್ಣದ ತಟ್ಟೆಯನ್ನು ಹಿಡಿದು ವೀಲ್ ಛೇರ್ ನಲ್ಲಿ ಕುಳಿತಿರುವುದು. ಈ ಚಿತ್ರದ ಬಗ್ಗೆ ತನ್ನ ಬದುಕಿನ ಭರತ ವಾಕ್ಯವನ್ನು ಬರೆಯುತ್ತಾಳೆ. ಅದೆಂದರೆ “ನನ್ನೆಲ್ಲಾ ಕಲಾಕೃತಿಗಳು ದಾಟಿಸುವುದು ನೋವಿನ ಸಂದೇಶವನ್ನು. ಈ ನನ್ನ ನೋವಿನ ಬದುಕನ್ನು ಪೂರ್ಣಗೊಳಿಸಿದ್ದು ಕಲೆಯೇ”
ನಾನು ನನ್ನ ಕನಸುಗಳನ್ನು, ದುಃಸ್ವಪ್ನಗಳನ್ನು ಚಿತ್ರಿಸುವುದಿಲ್ಲ ಬದಲಾಗಿ ನನ್ನದೇ ವಾಸ್ತವಗಳನ್ನು ಚಿತ್ರಿಸುತ್ತೇನೆ ಎನ್ನುತ್ತಾಳೆ. ಆದರೆ ಆಂಡ್ರೆ ಬ್ರೆಟನ್ ಎನ್ನುವ ಸರ್ರಿಯಲಿಸಂ ಪಂಥದ ನೇತಾರ ಅವಳ ವ್ಯಕ್ತಿಚಿತ್ರಗಳನ್ನು ‘ಮಹಿಳೆಯ ಆತ್ಮಪ್ರತ್ಯಯದ ಅನನ್ಯ ಅಭಿವ್ಯಕ್ತಿ, ಅವಳ ಕಲಾಕೃತಿಯಲ್ಲಿ ಒಬ್ಬ ಅಪ್ಪಟ ಹೆಣ್ಣಿನ ದರ್ಶನವಿದೆ, ಅವು ಸರ್ರಿಯಲಿಸಂನ ತಾತ್ವಿಕ ನೆಲೆಗಳನ್ನು ಪ್ರತಿನಿಧಿಸುತ್ತವೆ, ಅವು ರಿಬ್ಬನ್ ಸುತ್ತಿದ ಬಾಂಬ್ ನಂತಿವೆ” ಎಂದು ಕೊಂಡಾಡಿದಾಗ ‘ನಾನು ಸರ್ರಿಯಲಿಸ್ಟ್ ಎಂದು ನನಗೇ ಗೊತ್ತ್ತಿರಲಿಲ್ಲ’ ಎನ್ನುತ್ತಾಳೆ.
ಅವಳು ಬದುಕಿದ ಕಾಲದಲ್ಲಿ ಅವಳ ಗಂಡ ಡಿಯಾಗೋಗೆ ಸಿಕ್ಕಿದ ಕೀರ್ತಿ ಅವಳಿಗೆ ಲಭಿಸದಿದ್ದರೂ ಅವಳ ಆತ್ಮವೃತ್ತಾಂತದ ಚಿತ್ರಗಳು ಇಂದು ಅವಳ ಸಮಕಾಲೀನ ಪುರುಷ ಚಿತ್ರಕಾರರ ನಡುವೆ ಮಹತ್ವದ ಸ್ಥಾನವನ್ನು ಪಡೆದಿವೆ. ಆದರೆ ಫ್ರೀಡಾ ತಾನು ಬದುಕಿದ್ದ ಕಾಲದಲ್ಲೇ ಕಲಾಜಗತ್ತಿನ ದಿಗ್ಗಜರಾದ ಪಿಕಾಸೋ, ನ್ಯೂರೋ ಹಾಗೂ ಲಿಯೋನ್ ಟ್ರಾಟ್ ಸ್ಕಿ ಯವರಿಂದ ಮೆಚ್ಚುಗೆ ಗಳಿಸಿದಳು. ತನ್ನ ಪತಿ ಡಿಯಾಗೋನ ಜೊತೆಯಲ್ಲಿ ಕ್ರಿಯಾಶೀಲ ಕಮ್ಯುನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಫ್ರೀಡಾ, ಸೋವಿಯತ್ ಯೂನಿಯನ್ ನಿಂದ ಗಡೀಪಾರಾಗಿ ಬಂದಿದ್ದ ಲಿಯೋನ್ ಟ್ರಾಟ್ಸ್ಕಿ ಯ ಮೋಹಕ್ಕೆ ಕೆಲಕಾಲ ಒಳಗಾಗಿದ್ದಳು. ಆನಂತರ ಡಿಯಾಗೋ ಮತ್ತು ಫ್ರೀಡಾ ಸ್ಟ್ಯಾಲಿನ್ ನ ಹಿಂಬಾಲಕರಾದರು

“ಈ ಪ್ರಪಂಚದೊಳಗೆ ನಾನೊಬ್ಬಳೇ ಬಹಳ ಶಕ್ತಿಶಾಲಿಯೆಂದು ಭಾವಿಸಿದ್ದೆ. ಆದರೆ ನನ್ನಂತೆಯೇ ವಿಲಕ್ಷಣವಾದ, ದುರದೃಷ್ಟದ ಜನರು ಇರಬಹುದು ಎಂದು ಗೊತ್ತಾದ ಮೇಲೆ, ಅಂತಹವಳೊಬ್ಬಳು ಇಲ್ಲಿಯೇ ಎಲ್ಲೋ ನನ್ನ ಬಗ್ಗೆಯೇ ಅಲೋಚಿಸುತ್ತಾ ಕುಳಿತಿರಬಹುದು ಎಂದು ನಾನು ಕಲ್ಪಿಸಿಕೊಳ್ಳುತ್ತೇನೆ. ಹೌದು, ನೀನೇನಾದರೂ ಇಲ್ಲಿ ಇದ್ದುದೇ ಆದರೆ ಈ ನನ್ನ ಬರಹವನ್ನು ಓದುವೆ. ಆಗ, ಅಪರಚಿತಳಾಗಿ ನಿನ್ನ ಬಳಿಯಲ್ಲೇ, ನಿನ್ನಂತೇ ನಾನು ನಿಜವಾಗಿ ಇದ್ದೆ ಎಂಬುದು ಅರಿವಿಗೆ ಬರುತ್ತದೆ” ಎಂದು ಬರೆಯುವಾಗ ಅವಳ ಪ್ರಜ್ಞಾ ವಿಸ್ತಾರದ ಬಗೆ ಮನದಟ್ಟಾಗುತ್ತದೆ.
“ನಾನು ನನ್ನ ಚಿತ್ರಗಳನ್ನೇ ಬರೆದೆ ಏಕೆ ಗೊತ್ತೇ? ನಾನು ಬಹಳ ಸಲ ಏಕಾಂಗಿಯಾಗಿದ್ದೆ. ಅಲ್ಲದೆ ನನ್ನನ್ನು ನಾನಲ್ಲದೆ, ಇನ್ನಾರು ಬಲ್ಲರು.?” ಈ ಮಾತುಗಳು ಫ್ರೀಡಾಳಿಗೆ ‘ನಾನು ಯಾರು?’ ಎಂಬುದರ ಅಧ್ಯಾತ್ಮಿಕ ಹುಡುಕಾಟದ ಸ್ವರೂಪವೂ ಆಗಿದ್ದಿತು ಎಂಬುದನ್ನು ಪುಷ್ಠೀಕರಿಸುತ್ತದೆ.
‘ನಾನು ಹೋರಾಡಬೇಕು, ನನ್ನ ಶಕ್ತಿ ಮೀರಿ ಹೋರಾಡಬೇಕು. ನನ್ನ ಆರೋಗ್ಯವನ್ನು ಕಾಪಾಡುವ ಈ ಧನಾತ್ಮಕ ಸಂಗತಿಗಳು ಕ್ರಾಂತಿಯ ಸಾಧ್ಯತೆಯೆಡೆಗೆ ಬೆರಳುತೋರುತ್ತಿವೆ. ನಾನು ಜೀವದಿಂದಿರಲು ಅದೊಂದೇ ಕಾರಣವಾಗಿದೆ’
‘ಕ್ರಾಂತಿಯೆಂದರೆ ಬಣ್ಣ ಹಾಗೂ ಅಕೃತಿಗಳ ಸಾಮರಸ್ಯ. ಅಲ್ಲಿ ಎಲ್ಲವೂ ಸಮಾನ ಗ್ರಹಿಕೆಯ ನಿಯಮದ ಅಡಿಯಲ್ಲಿ ಚಲಿಸುತ್ತವೆ’. ಎನ್ನುವ ಮಾತು ಸ್ಟಾಲಿನ್ ಗೆ ಬರೆಯಲಾದದ್ದೆಂದು ಹೇಳಲಾಗುತ್ತದೆ.
ಮೇಲಿನ ಎಲ್ಲಾ ಮಾತುಗಳು ಕಲಾಜಗತ್ತಿನಲ್ಲಿ ಅವಳು ಸಾಧಿಸಿದ ಅಸ್ಮಿತೆಯನ್ನು ಅವಳ ಹೋರಾಟದ ಸ್ವರೂಪವನ್ನು, ಅವಳ ಆಂತರಿಕ ಬೆಳವಣಿಗೆಯನ್ನು ಅನನ್ಯವಾಗಿ ಹೊರಗೆಡಹುತ್ತವೆ.
ನ್ಯುಮೋನಿಯ ರೋಗಕ್ಕೆ ತುತ್ತಾದ ಫ್ರೀಡಾ, 1954ನೆಯ ಇಸವಿ ಬೇಸಿಗೆಯ ಒಂದು ದಿನ ತನ್ನ ಸ್ವಗೃಹದಲ್ಲಿ ತನ್ನ ಅನಂತ ಹೋರಾಟದ ಯಾತನೆಯ ಬದುಕಿಗೆ ಕೊನೆ ಹಾಡಿದಳು. ಆದರೆ ಅವಳ ಯಾತನೆಯ ಪರಿಣಾಮವಾಗಿ ಗಳಿಸಿದ ಅರಿವು ಅವಳ ಕ್ಯಾನ್ವಾಸುಗಳಲ್ಲಿ ನಿರಂತರ ಸ್ಫೋಟಗೊಳ್ಳುತ್ತಲೇ ಇವೆ.






Wonderful article madam… She is my favorite artist. Enjoyed reading your write up.
ಕಲಾವಿದೆ ಫ್ರೀಡಾ …..ಬಗ್ಗೆ ಓದಿದ ನಂತರ ನನ್ನ
ಆಲೋಚನಾ ಕ್ರಮಕ್ಕೆ ಹೊಸ ದಿಕ್ಕು ಸಿಕ್ಕಿತು. ಫ್ರೀಡಾ ಬಗ್ಗೆ ಸಮಗ್ರ ನೋಟ ಸಿಗುವಂತೆ ಈ ಬರಹವಿದೆ.