ಗಿರಿಜಾ ಶಾಸ್ತ್ರಿ
ತುಕೋಬಾನ ನೋಡಲು
ಬಂದ ಶೇಕ್ಸ್ ಪಿಯರ್
ಅಂಗಡಿಯೊಳಗೆ
ಏನು ಸಡಗರ
ಇಬ್ಬರೂ ತೆಕ್ಕೆಬಿದ್ದರು ಗಾಢ
“ಹರಿಯಿತು ಅಮೃತವಾಹಿನಿ
ಎದೆಯಿಂದ ಎದೆಗೆ”
ತುಕಾ ಅಂದ, “ವಿಲ್ಯಾ ನೀ ಎಂಥಾ ದೋಡ್ಡ್ ಕೆಲ್ಸಾ ಮಾಡಿದ್ಯೋ ಮಾರಾಯ
ಮಣ್ಣಿನ ಗಂಧಾನ ಅಖಂಡ್ ದುನಿಯಾಕ್ಕೇ ಬೀರಿದ್ಯೆಲ್ಲೋ”
ಶೇಕ್ಸ್ ಪಿಯರ್ ಹೇಳಿದ “ಆದರೆ ನೀನು ಇಟ್ಟಿಗೆ ಮೇಲೆ ಏನು ಕಂಡ್ಯೋ
ಅದೊಂದು ಉಳಿದು ಹೋಯ್ತು ನೋಡು”
ತುಕಾ ಹೇಳಿದ ” ಅಪ್ಪಾ ನೀನು ಚಲೋನೇ ಮಾಡಿದೀ
ಅದರ ಸಲುವಾಗಿ ನನ್ನ ಸಂಸಾರಾನೇ ಬಿರುಕುಬಿಟ್ಟಿತೋ
ಬಲು ಕಿಲಾಡಿ ನೋಡಪಾ ವಿಟ್ಠಲ ಅಂದ್ರ
ಅವನ ರೀತಿ ನೀತೀನೇ ಅದ ವಿಚಿತ್ರ
ಸಾಕಷ್ಟು ಬರೆದ ಮ್ಯಾಲೂ ಖರೇ
ನನ್ನ ಪಾಟಿ ಖಾಲೀನೇ ಉಳೀತು ನೋಡ್ ”
ಶೇಕ್ಸ್ ಪಿಯರ್ ಹೇಳಿದ
“ಶಬ್ದಾತೀತ, ತಾನೇ ಆಡಿತೋ ಈ ಮಣ್ಣಿನೊಳಗಾ
ನಿನ್ನ ಶಬ್ದಗಳ ಮೂಲಕ”

ತುಕಾ ಹೇಳಿದ “ಗೆಳೆಯಾ ಎಲ್ಲಾ ಶಬ್ದ ಸೂತಕ
ಪ್ರತಿ ಮಂದಿ ಹಾದೀನೂ ಬ್ಯಾರೆ ಬ್ಯಾರೇನೇ ಇರ‍್ತದ
ಎಷ್ಟೊಂದು ದಾರಿಗೋಳು
ಎಷ್ಟೊಂದು ಮುಳ್ಳುಗೋಳು
ಮತ್ತ “ಮುಳ್ಳು ಕೊನೆಯ ಮ್ಯಾಲೇನ” ಅವನ ಭೆಟ್ಟಿ
ಅಗೋ ನೋಡು ಒಂದೊಂದೇ ಗಂಟಿ ಕೇಳಿಸ್ತಾವ
ಗುಡಿಯಾಗಿಂದ
ನನ್ ಹಾದಿ ಕಾಯ್ತಾ ಇನ್ ಪಿರಿ ಪಿರಿ ಮಾಡ್ತಾಳ
ನಾ ಹೊಂಟೆ ನೋಡಪಾ”
ಇಬ್ಬರೂ ಹೊರಟರು ಅವರವರ ಪಾಡಿಗೆ
ಬೇರೆ ಬೇರೆ ದಿಕ್ಕಿಗೆ
ತಡೆಯಲಾಗದ ಕೌತುಕ ಆಗಸಕೆ
• ‘ವಿ ಟೆ’ ಅಂದರೆ ಮರಾಠಿಯಲ್ಲಿ ಇಟ್ಟಿಗೆ, ‘ವಿ ಟೆ’ಯ ಮೇಲೆ ನಿಂತವನು ವಿಟ್ಠಲ
(ಸಂದರ್ಭ: ಪುಸ್ತಕದ ಅಂಗಡಿಯೊಂದರಲ್ಲಿ ಶೇಕ್ಸ್ ಪಿಯರ್ ಮತ್ತು ತುಕಾರಾಮನ ಗ್ರಂಥಗಳ ಮುಖಾಮುಖಿ)
[ಮರಾಠಿಯ ಪ್ರಸಿದ್ಧ ಲೇಖಕ ವಿಂದಾ ಕರಂದೀಕರ್ ಎಂದೇ ಹೆಸರಾದ ಗೋವಿಂದ ವಿನಾಯಕ್ ಕರಂದೀಕರ್ (೧೯೧೮-೨೦೧೦) ಅವರ “ತುಕೋಬಾಂಚ್ಯ ಭೇಟಿ ಶೇಕ್ಸ್ ಪಿಯರ್ ಆಲಾ” ಕವಿತೆಯ ಕನ್ನಡ ಅನುವಾದ : ಗಿರಿಜಾಶಾಸ್ತ್ರಿ]
ಶೇಕ್ಸ್ ಪಿಯರ್ ಗುರಿಯಾಗಿಸಿಕೊಂಡಿದ್ದು ಮರ್ತ್ಯಲೋಕವನ್ನು (groundlings), ತುಕಾರಾಮನಿಗಾದರೋ ಅಮರ್ತ್ಯದ ಕನಸು. ಅವರಿಬ್ಬರೂ, ಮರಾಠಿಯ ಪ್ರಸಿದ್ಧ ನವೋದಯದ ಕವಿ ವಿಂದಾಕರಂದೀಕರ್ ಅವರ ಕವಿತೆಯಲ್ಲಿ ಭೇಟಿಯಾಗುತ್ತಾರೆ. ಅದೂ ಒಂದು ಪುಸ್ತಕದ ಅಂಗಡಿಯಲ್ಲಿ! ಶೇಕ್ಸ್ ಪಿಯರ್ ಹಾಗೂ ತುಕಾರಾಮನ ಒಂದೊಂದು ಪುಸ್ತಕ ಕಪಾಟೊಂದರಲ್ಲಿ ಮುಖಿಮುಖಿಯಾಗುತ್ತವೆ. ಆನಂತರ ಕವಿಯ ಕಲ್ಪನೆಯ ರೆಕ್ಕೆಯ ಮೇಲೆ ಅವರಿಬ್ಬರೂ ಹಾರಿ ಮರ್ತ್ಯ ಅಮರ್ತ್ಯದ ಸಂವಾದ ನಡೆಸುತ್ತಾರೆ.
ಮನುಷ್ಯನಿಗೆ ಮಣ್ಣಿನ ಬದುಕಿನ ಜೊತೆಗೆ ಅಮೂರ್ತಕ್ಕೆ ಹಾರುವ ಬಯಕೆ. ಈ ಎರಡೂ ಕೂಡ ಮನುಷ್ಯ ಬದುಕಿನ ವಾಸ್ತವಗಳು. ಅವುಗಳ ನಡುವಿನ ಸಂಘರ್ಷವೇ ಮನುಕುಲದ ಚರಿತ್ರೆ. ಈ ಎರಡರ ನಡುವಿನ ಸಂವಾದವನ್ನು ಬಹಳ ಮಾರ್ಮಿಕವಾಗಿ ವಿಂದಾಕರಂದೀಕರ್ ಅವರು ತಮ್ಮ “ತುಕಾರಾಮನ ನೋಡಲು ಬಂದ ಶೇಕ್ಸ್ ಪಿಯರ್” ಕವಿತೆಯಲ್ಲಿ ಅನಾವರಣಗೊಳಿಸಿದ್ದಾರೆ. ಒಬ್ಬರ ಶ್ರೇಷ್ಠತೆಯನ್ನು ಇನ್ನೊಬ್ಬರು ಹೊಗಳುವುದರ ಮೂಲಕ ಅವು ತಮ್ಮಿಬ್ಬರ ಬದುಕಿನ ಅನಿವಾರ್ಯ ಸಂಗತಿಗಳು ಎಂಬುದನ್ನು ಹೊರಗೆಡಹುತ್ತಾರೆ. ಇದು ಪೂರ್ವ ಮತ್ತು ಪಶ್ಚಿಮ ಚಿಂತನೆಗಳ ಪ್ರಾತಿನಿಧಿಕ ಚರ್ಚೆಯೂ ಹೌದು.
ಭಾರತೀಯ ಚಿಂತನೆಯಲ್ಲಿ ಮಾನವ ಜನ್ಮ ದೊಡ್ಡದು ಅದನ್ನು ಹಾಳುಮಾಡಬಾರದು ಎನ್ನುವುದಿದ್ದರೂ ಅದರ ಸಾರ್ಥಕ್ಯವಿರುವುದು ಮೋಕ್ಷ ಸಾಧನೆಯಲ್ಲಿ. ಉಪಭೋಗದ ನೆಲೆ ನಮ್ಮದಲ್ಲ. ಸಾಲವನ್ನಾದರೂ ಮಾಡಿ ತುಪ್ಪವನ್ನು ಕುಡಿ ಎನ್ನುವ ಚಾರ್ವಾಕ ತತ್ವ ನಮ್ಮಲ್ಲೇ ಹುಟ್ಟಿದುದಾದರೂ, ಮೋಕ್ಷವೇ ಭಾರತೀಯ ಚಿಂತನೆಯ ಆತ್ಯಂತಿಕ ಗುರಿ. ಈ ಕವಿತೆಯಲ್ಲಿನ ತುಕಾರಾಮ ಅದರ ಸಮರ್ಥ ಪ್ರತಿನಿಧಿಯಾಗಿದ್ದಾನೆ.
ಶೇಕ್ಸ್ ಪಿಯರ್ ಮಣ್ಣಿನ ಬದುಕನ್ನು ಪ್ರತಿನಿಧಿಸುತ್ತಾನೆ. ಮಣ್ಣನ್ನು ತುಕಾರಾಮ ಮೃತ್ತಿಕೆ ಮಾಡಿದರೆ, ಮೃತ್ತಿಕೆಯನ್ನು ಶೇಕ್ಸ್ ಪಿಯರ್ ಮಣ್ಣಿನ ಘಮಲಾಗಿಸಿದ್ದಾನೆ. ಈ ಎರಡರ ಅಖಂಡ ನೋಟವಿರುವುದೇ ಈ ಕವಿತೆಯ ಮಹತ್ವ. ಎರಡೂ ಕೂಡಿಯೇ ಬದುಕು.
ಶೇಕ್ಸ್ ಪಿಯರ್ ಮತ್ತು ತುಕಾರಾಮ ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ಬದುಕಿದ್ದವರು. ಶೇಕ್ಸ್ ಪಿಯರ್ ಹುಟ್ಟಿದ್ದು (೧೫೬೪- ೧೬೧೬) ಯುನೈಟೆಡ್ ಕಿಂಗ್ ಡಂನ ಸ್ಟ್ರಾಟ್ಫೋರ್ಡ್-ಆಪಾನ್- ಏವನ್ ನಲ್ಲಾದರೆ, ತುಕಾರಾಮ ಹುಟ್ಟಿದ್ದು (೧೫೯೮/ ೧೬೦೮- ೧೬೫೦) ಪುಣೆಯ ಬಳಿಯ ದೇಹುವಿನಲ್ಲಿ. ಭಾರತ ಮತ್ತು ಇಂಗ್ಲಂಡ್ ಮಾತನಾಡತೊಡಗುತ್ತವೆ ಪುಸ್ತಕದ ಅಂಗಡಿಯಲ್ಲಿ.
ಇಲ್ಲಿ ಕೇವಲ ತುಕಾರಾಮನನ್ನೇ ಕವಿ ವೈಭವೀಕರಿಸಿಬಿಟ್ಟಿದ್ದರೆ ಅಂತಹ ವಿಶೇಷವೇನೂ ಇರುತ್ತಿರಲಿಲ್ಲ.

ತುಕಾರಾಮನ ಎದುರಿಗೆ ಶೇಕ್ಸ್ ಪಿಯರ್‌ನನ್ನು ತಂದು ನಿಲ್ಲಿಸುತ್ತಾರೆ. ತುಕಾರಾಮನ ಬಳಿಗೆ ಬಂದ ಶೇಕ್ಸ್ ಪಿಯರನಿಗೆ ಎಂತಹ ಆನಂದ! ತುಕಾರಾಮನಿಗೂ ಅಷ್ಟೇ ಸಂಭ್ರಮ. ಪಶ್ಚಿಮದಿಂದ ಬಂದ ವಿಲ್ಯಾ ಪೂರ್ವದ ಸಂತ ತುಕಾನಿಗೆ ತೆಕ್ಕೆ ಬೀಳುತ್ತಾನೆ. ಎದೆಯಿಂದ ಎದೆಗೆ ಅಮೃತವಾಹಿನಿ ಹರಿಯುತ್ತದೆ. ಅವರು ಯಾವುದೋ ಜನ್ಮ ಜನ್ಮಾಂತರದ ಸ್ನೇಹಿತರಂತೆ, ಚೆಡ್ಡಿ ದೋಸ್ತುಗಳಂತೆ ಒಬ್ಬರಿಗೊಬ್ಬರು ಸಂಬೋಧಿಸುವುದೇ ‘ತುಕಾ’ ಮತ್ತು ‘ವಿಲ್ಯಾ’ ಎಂದು. ಕವಿಗೆ ಕವಿ ಮಣಿಯುತ್ತಾನೆ. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತ ಅವರಿಗೆ ತಮ್ಮ ತಮ್ಮ ಲೋಕದ ಬಗ್ಗೆ ಶ್ರೇ಼ಷ್ಠತೆಯ ಭ್ರಮೆಯಿಲ್ಲ. ಪರಸ್ಪರ ಅವಜ್ಞೆ, ತಿರಸ್ಕಾರಗಳಿಲ್ಲ. ಪರಸ್ಪರ ಶ್ರೇ಼ಷ್ಠತೆಯನ್ನು ಹೊಗಳುವಾಗ ಪರಸ್ಪರ ಕೊರತೆಯನ್ನೇ ದಾಖಲಿಸುತ್ತಾರೆ.
“ವಿಲ್ಯಾ ನೀ ಎಂಥಾ ದೋಡ್ಡ್ ಕೆಲ್ಸಾ ಮಾಡಿದ್ಯೋ ಮಾರಾಯ
ಮಣ್ಣಿನ ಗಂಧಾನ ಅಖಂಡ್ ದುನಿಯಾಕ್ಕೆ ಬೀರಿದ್ಯಲ್ಲೋ”
ಎಂದು ತುಕಾ ಹೇಳುತ್ತಾನೆ. ಶೇಕ್ಸ್ ಪಿಯರನ ಪಾತ್ರಗಳು ಮಣ್ಣಿನ ಸಜೀವ ಪಾತ್ರಗಳು ಪ್ರೀತಿ. ಪ್ರೇಮ, ವಿರಹ, ಅಸೂಯೆ, ಲಾಲಸೆ, ಶಂಕೆ, ಮಹತ್ವಾಕಾಂಕ್ಷೆ ಈ ಎಲ್ಲವನ್ನೂ ಎರಕಗೊಂಡ ಪಾತ್ರಗಳು. ದುಷ್ಟ ಭಾವಗಳು ಕೊನೆಗೂ ಮನುಷ್ಯನಿಗೆ ಸುಖ ತಂದು ಕೊಡಲಾರವು ಎಂದು ಹೇಳುವುದರ ಮೂಲಕ ಸ್ವಲ್ಪ ತುಕಾರಾಮನ ಹತ್ತಿರಕ್ಕೇ ಬರುತ್ತಾನೆ ಶೇಕ್ಸ್ ಪಿಯರ್.
“ಆದರೆ ನೀನು ಇಟ್ಟಿಗೆಯ ಮೇಲೆ ಏನು ಕಂಡ್ಯೋ ಅದೊಂದು ಉಳಿದೇ ಹೋಯಿತು ನೋಡು” ಎಂದು ವಿಲ್ಯಾ ತುಕಾನಿಗೆ ಹೇಳುವಾಗ ಮಣ್ಣಿನ ಬದುಕನ್ನೇ ಕೇಂದ್ರೀಕರಿಸಿಕೊಂಡ ಕಾರಣ ಅದರಾಚೆಯ ಬದುಕು ಕೈತಪ್ಪಿ ಹೋಯಿತು ಎನ್ನುವ ವಿಷಾದ ಭಾವವಿದೆ ಶೇಕ್ಸ್ಪಿಯರನಿಗೆ. ಇಟ್ಟಿಗೆಯ ಮೇಲೆ ನಿಂತ ವಿಟ್ಠಲನ ಮೂಲಕ ತುಕಾ ಕಂಡ ಜಗತ್ತು ವಿಲ್ಯಾನ ಜಗತ್ತಿಗಿಂತ ಬೇರೆ.
ತುಕಾ ಹೇಳಿದ
” ಅಪ್ಪಾ ನೀನು ಚಲೋನೇ ಮಾಡಿದೀ
ಅದರ ಸಲುವಾಗಿ ನನ್ನ ಸಂಸಾರಾನೇ ಬಿರುಕುಬಿಟ್ಟಿತೋ
ಬಲು ಕಿಲಾಡಿ ನೋಡಪಾ ವಿಟ್ಠಲ ಅಂದ್ರ
ಅವನ ರೀತಿ ನೀತೀನೇ ಅದ ವಿಚಿತ್ರ
ಸಾಕಷ್ಟು ಬರೆದ ಮ್ಯಾಲೂ ಖರೇ
ನನ್ನ ಪಾಟಿ ಖಾಲೀನೇ ಉಳೀತು ನೋಡ್ ”
ಪೂರ್ಣವನ್ನು ಹಿಡಿಯಲಾಗದು. ಹಿಡಿದೇನೆಂಬುದೂ ಅಪೂರ್ಣವೇ! ಅದಕ್ಕೇ ಎಷ್ಟು ಬರೆದರೂ ತುಕಾನ ಪಾಟಿ (ಸ್ಲೇಟ್) ಖಾಲಿಯೇ ಉಳಿಯುತ್ತದೆ. ಅವನು ಹಿಡಿಯಲಾರದ್ದು ಇವನಿಗೆ, ಇವನು ಹಿಡಿಯಲಾರದ್ದು ಅವನಿಗೆ ಬೆರಗು. ಕುತೂಹಲ. ಪರಸ್ಪರ ವೈರುಧ್ಯಗಳ ನಡುವೆ ಇರಬೇಕಾದದ್ದು ದ್ವೇಷ, ಹೇವರಿಕೆಗಳಲ್ಲ ಬದಲಾಗಿ ಬೆರಗೇ ಎನ್ನುವುದನ್ನು ಇದು ಹೇಳುತ್ತದೆ. ನಿನ್ನದೂ ನಿಜವಿರಬಹುದು ಎನ್ನುವ ಸ್ವೀಕೃತಿ. ಆಧ್ಯಾತ್ಮ ಕಟ್ಟಿಕೊಂಡರೆ ಸಂಸಾರ ಸಾಗದು ಸಂಸಾರ ಕಟ್ಟಿಕೊಂಡರು ಅಧ್ಯಾತ್ಮ ಉಳಿಯದು. ಸಂಸಾರ ಮತ್ತು ಆದ್ಯಾತ್ಮ ಎನ್ನುವುದು ಸರಳವಾದ ಎರಡು ದಾರಿಗಳಲ್ಲ. ದಾರಿಯೊಳಗೊಂದು ದಾರಿ ಅನೇಕ ಅಸಂಖ್ಯ ದಾರಿಗಳು. ಯಾವ ದಾರಿಯೂ ಸುಲಭ ಸಾಧ್ಯವಲ್ಲದ ಕಷ್ಟವಾದ ಮುಳ್ಳು ದಾರಿಗಳು. ಪ್ರತಿಯೊಬ್ಬರದೂ ಅವರದ್ದೇ ದಾರಿಗಳು. ಅವರವರೇ ಅದನ್ನು ಸವೆಸಬೇಕು. ಯಾವ ದಾರಿಯೂ ಶ್ರೇಷ್ಠವಲ್ಲ. ಅಮೂರ್ತವಲ್ಲ. ಹಾಗೆಯೇ ಕನಿಷ್ಟವೂ ಅಲ್ಲ. ಶೇಕ್ಸ್ಪಿಯರ್ ಹೇಳುತ್ತಾನೆ ತುಕಾ ಶಬ್ದಾತೀತವಾದದ್ದನ್ನು ಹಿಡಿದನೆಂದು. ಅದಕ್ಕೆ ತುಕಾನ ಉತ್ತರವೆಂದರೆ ಬದುಕಿನಲ್ಲಿ ಆತ್ಮಸಾತ್ ಮಾಡಿಕೊಳ್ಳದ ಶಬ್ದಗಳು ಕೇವಲ ಶಬ್ದ ಸೂತಕ ಮಾತ್ರ ಎನ್ನುತ್ತಾನೆ. ಗುಡಿಯಿಂದ ಗಂಟೆ ಶಬ್ದ ಕೇಳಿಬರುತ್ತದೆ ತುಕಾರಾಮನಿಗೆ ಗಯ್ಯಾಳಿ ಹೆಂಡತಿಯ ನೆನಪಾಗುತ್ತದೆ.

ತುಕಾರಾಮನಿಗೆ ಒಬ್ಬ ಗಯ್ಯಾಳಿ ಹೆಂಡತಿ ಇದ್ದಳೆಂದು ತಿಳಿದು ಬರುತ್ತದೆ. ಯಾವಾಗಲೂ ದೇವಾಲಯದಲ್ಲಿ ತಾಳ ಕುಟ್ಟುತ್ತಾ ಇದ್ದರೆ ಪಾಪದ ಆ ಹೆಂಡತಿ ಸಂಸಾರವನ್ನಾದರೂ ಹೇಗೆ ಸಾಗಿಸಬೇಕು? ಅದಕ್ಕೇ ಅವಳು ತುಕಾನ ಕಣ್ಣಿಗೆ ಅವಳು ಗಯ್ಯಾಳಿ. ಹೆಂಡತಿಯ ಕಣ್ಣಿಗೆ ಗಂಡ ನಿಷ್ಪ್ರಯೋಜಕ. ಅವಳು ಮಣ್ಣಿನ ಅಣುಗಿ. ಇವನು ಅಮೂರ್ತಕ್ಕೆ ಹಾರುವ ಪುರುಷ. ಇಬ್ಬರ ನಡುವೆ ನೆಲ ಮುಗಿಲುಗಳ ಅಂತರ. ಇಲ್ಲಿ ಗಯ್ಯಾಳಿ ಹೆಂಡತಿಯ ಉಲ್ಲೇಖ ಕೂಡ ಭೌತಿಕ ಮತ್ತು ಅಭೌತಿಕ ಸಂಗತಿಗಳ ಸಂಘರ್ಷವನ್ನೇ ಹೇಳುತ್ತದೆ. ಈ ಎರಡೂ ಜಗತ್ತುಗಳು ಅವುಗಳ ಪಾಡಿಗೆ ಅವು ಸ್ವಸ್ಥವಾಗಿ ಇರಬಲ್ಲವು ಎನ್ನುವುದು ತುಕಾ ಮತ್ತು ವಿಲ್ಯಾನ ನಡುವಿನ ಸಂವಾದ ಹೇಳುತ್ತದೆ. ಅಲ್ಲಿ ಸಂಘರ್ಷ ಇರಬೇಕಾಗಿಲ್ಲ. ಸಾಮರಸ್ಯ ಸಾಧಿಸಬೇಕಾದರೆ ಎರಡು ಜಗತ್ತುಗಳ ನಡುವೆ ಇರಬೇಕಾದುದು ಅವಕಾಶ (ಸ್ಪೇಸ್) ಎಂಬುದನ್ನು ಹೇಳುತ್ತದೆ.
ಸಂಜೆಯಾಗುತ್ತದೆ ಇಬ್ಬರೂ ಬೇರೆಯಾಗುತ್ತಾರೆ ಆಗಸ ಕೌತುಕದಿಂದ ನೋಡುತ್ತಿರುತ್ತದೆ. ಆಗಸಕ್ಕೆ ಕೌತುಕ, ಪೂರ್ವ ಪಶ್ಚಿಮಗಳ ನಡುವೆ ಇಂತಹ ಒಂದು ಸಾಮರಸ್ಯವೂ ಸಾಧ್ಯ ಎನ್ನುವ ಕೌತುಕ.
ವಿಲ್ಯಾ ನಾಟಕ ಮತ್ತು ಕವಿತೆಗಳ ಮೂಲಕ ಮನುಷ್ಯನ ಅಂತಃಕರಣವನ್ನು ಹಿಡಿದರೆ, ತುಕಾ ಅದನ್ನೇ ಅಭಂಗಗಳ ಮೂಲಕ ಹಿಡಿಯುತ್ತಾನೆ. ವಿಟ್ಠಲ ಅದರ ಕೇಂದ್ರ. ಇಬ್ಬರೂ ಹಿಡಿದ್ದು ಒಂದನ್ನೇ. ಆದರೆ ದಾರಿಗಳು ಮಾತ್ರ ಬೇರೆ ಬೇರೆ. ವಾರಕರಿಯಾಗಿ ತುಕಾ ಕಟ್ಟಿಕೊಂಡದ್ದೂ ಸಾಮಾನ್ಯ ಜನರನ್ನೇ. ಶೇಕ್ಸ್ ಪಿಯರನಂತೂ ಸಾಮಾನ್ಯ ಜನರನ್ನು ಉದ್ದೇಶಿಸಿ ರಾಜ ಮಹಾರಾಜರ ಕಥೆಯನ್ನೂ ಹೇಳಿದ- ಪ್ರತಿಯೊಬ್ಬ ತಿರುಕನಿಗೂ ಅರಮನೆಯ ಕನಸು ಇರುವ ಹಾಗೆ. ತುಕಾ ಕೂಡ ತನ್ನ ಅಭಂಗಗಳ ಮೂಲಕ ತೋರಿಸಿದ್ದು ಮನುಷ್ಯ ಜೀವನದ ಮಹೋನ್ನತಿಯನ್ನೇ. ತುಕಾನ ಹಿಂಬಾಲಕರಿಗೆ ವಿಟ್ಠಲನ ಕನಸು, ಶೇಕ್ಸ್ ಪಿಯರನ ಪ್ರೇಕ್ಷಕರಿಗೆ ರಾಜ ಮಹಾರಾಜರ ಕನಸು. ಇಬ್ಬರೂ ಎತ್ತಿಹಿಡಿದಿದ್ದು ಮಾನವೀಯತೆಯನ್ನು ತಬ್ಬುವ ಕನಸಿನ ಘನತೆಯನ್ನು. ಮನುಷ್ಯ ಜನ್ಮದ ಸಾರ್ಥಕತೆ ಇರುವುದೇ ಕನಸಿನ ದಾರಿಯಲ್ಲಿ.
“ಕತ್ತಲೆಯ ದಾರಿಯಲ್ಲಿ ನಡೆಯಬಹುದು ಕನಸುಗಳಿಲ್ಲದ ದಾರಿಯಲ್ಲಿ ನಡೆಯಬಹುದೇ? ( ಗಿರೀಶ್ ಕಾರ್ನಾಡ್) ಕನಸುಗಳಿಲ್ಲದ ಬದುಕೆಂದರೆ ಅದು ಸತ್ತ ಬದುಕೇ. ವಿಲ್ಯಾ ಮತ್ತು ತುಕಾ ಭೇಟಿಯಾಗಿ ತಕ್ಕೈಸಿಕೊಳ್ಳುವುದು ವಿಂದಾ ಕರಂದೀಕರ್ ಅವರ ಮಹತ್ವದ ಕನಸು. ಪೂರ್ವ ಪಶ್ಚಿಮ ಸಮಾನಾಂತರವಾಗಿ ಸಾಗುವ ಕನಸು. ಈ ಕನಸನ್ನು ಆಗಸ ಕೂಡ ಸೋಜಿಗದಿಂದ ನೋಡುತ್ತದೆ.






ತುಂಬಾ ಒಳ್ಳೆಯ ಲೇಖನ. ಇಷ್ಟವಾಯಿತು.
ತುಲನೆ ತುಂಬಾ ರೋಚಕವಾಗಿದೆ.ಧನ್ಯವಾದಗಳು