ಭಿಕ್ಷುಕರ ದೇವರು

ಸೋಮವಾರ ಶಿವನ ದೇವಸ್ಥಾನ, ಮಂಗಳವಾರ, ಶುಕ್ರವಾರ ದೇವಿ ಮಂದಿರಗಳು, ಗುರುವಾರ ಸಾಯಿಬಾಬ, ಶನಿವಾರ ಮಾರುತಿ ಗುಡಿ ಹೀಗೆ ದೇವಸ್ಥಾನಗಳನ್ನು, ಚರ್ಚು, ಮಸೀದಿಗಳನ್ನು ಹುಡುಕಿಕೊಂಡು ಅಲೆಯುವ ಮಹಾರಾಷ್ಟ್ರದ ಏಕೈಕ ವೈದ್ಯನೆಂದರೆ ಅದು ಅಭಿಜಿತ್ ಸೋನಾವಣೆ.
ಪುಣೆಯ ಬೀದಿಗಳಲ್ಲಿ ಇವರು ಹೀಗೆ ದೇವಾಲಯಗಳಿಗೆ ಎಡತಾಕುವುದು ದೇವರ ದರ್ಶನಕ್ಕಾಗಿ ಅಲ್ಲ. ದೇವಾಲಯದ ಹೊರಗೆ ಸಾಲಾಗಿ ಕುಳಿತು ಭಿಕ್ಷೆ ಬೇಡುವ ನಿಜವಾದ ದೇವರುಗಳ ದರ್ಶನಕ್ಕೆ.
ಈ ಭಿಕ್ಷುಕರಿಗೆ ಇವರು ಎಲ್ಲರಂತೆ ಹಣವನ್ನಾಗಲೀ, ಆಹಾರವನ್ನಾಗಲೀ ನೀಡುವುದಿಲ್ಲ, ಬದಲಾಗಿ ಹೊಸ ಜೀವನವನ್ನು ನೀಡುತ್ತಿದ್ದಾರೆ. “ನನ್ನ ಪ್ರಕಾರ ಭಕ್ತರಿಗೂ ಭಿಕ್ಷುಕರಿಗೂ ಅಂತಹ ವ್ಯತ್ಯಾಸವೇನಿಲ್ಲ. ಒಬ್ಬ ದೇವಾಲಯದ ಹೊರಗೆ ಬೇಡಿದರೆ, ಇನ್ನೊಬ್ಬ ದೇವಾಲಯದ ಒಳಗೆ ಬೇಡುತ್ತಾನೆ ಅಷ್ಟೇ” ಎನ್ನುತ್ತಾರೆ ಡಾ. ಸೋನಾವಣೆ. ಡಾ ಅಭಿಜಿತ್ ಸೋನಾವಣೆ ಮತ್ತು ಅವರ ಶ್ರೀಮತಿ ಮನಿಷಾ ಸೋನಾವಣೆ ಇಬ್ಬರನ್ನೂ “ಭಿಕಾರಿಗಳ ವೈದ್ಯರು” “ಡಾಕ್ಟರ್ಸ್ ಫಾರ್ ಬೆಗ್ಗರ್ಸ್” ಎಂದೇ ಗುರುತಿಸಲಾಗುತ್ತದೆ.
ವಿಶ್ವದಲ್ಲೆಲ್ಲ್ಲೆಡೆ ಕೊರೋನಾ ಅಮರಿಕೊಂಡು ನಮ್ಮ ಇಡೀ ದೇಶವೇ ಲಾಕ್‍ಡೌನ್‍ಗೆ ತುತ್ತಾದ ದಿನಗಳಿಗಿಂತಲೂ ಮುಂಚಿತವಾಗಿಯೇ ಇವರು ಬೀದಿ ಬೀದಿಯ ಭಿಕ್ಷುಕರಿಗೆ ಅಂತರವನ್ನು ಕಾಯ್ದುಕೊಳ್ಳಬೇಕಾಗಿರುವ ಅಗತ್ಯವನ್ನು ಮನಗಾಣಿಸಿದರಲ್ಲದೇ, ಆ ರೋಗದ ಕುರಿತಾದ ಮಾಹಿತಿಗಳನ್ನೂ, ಅದರ ನಿವಾರಣೆಗೆ ಅನುಸರಿಸಬೇಕಾದ ಎಚ್ಚರಿಕೆಯನ್ನೂ ನೀಡಲು ಪ್ರಾರಂಭಿಸಿದವರು. ಈಗಲೂ ತಮ್ಮ ಈ ಕೆಲಸವನ್ನು ಮುಂದುವರೆಸುತ್ತಲೇ ಇದ್ದಾರೆ.
ಎಬಿಪಿ ಮಾಝಾ ಎನ್ನುವ ಮರಾಠಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ “ಪ್ರಾರಂಭದಲ್ಲಿ ನನ್ನನ್ನು ಯಾರು ತಾನೇ ಡಾಕ್ಟರ್ ಎಂದು ಗುರುತಿಸುತ್ತಿದ್ದರು” ಎನ್ನುತ್ತಾರೆ ಸೋನಾವಣೆ. ನಮ್ಮ ಕನ್ನಡದ ಸುದ್ದಿ ಛಾನೆಲ್‍ಗಳವರು ಕೊರೋನಾವನ್ನು ಅಶ್ಲೀಲವಾಗಿ ವೈಭವೀಕರಿಸುತ್ತ ಹೊಯ್ಕೊಳ್ಳುತ್ತಿದ್ದರೆ, ಮರಾಠಿಯ ಎಬಿಪಿ ಮಾಝಾದವರು “ಮಝಾ ಕಟ್ಟ” (ನನ್ನ ಕಟ್ಟೆ) ಎನ್ನುವ ಕಾರ್ಯಕ್ರಮದ ಅಡಿ ಇಂತಹ ಅನೇಕ ವಿಶಿಷ್ಟ ಸೇವಾಧುರಂದರರ ಸಂದರ್ಶನ ಪರಿಚಯ ಕಾರ್ಯಕ್ರಮ ನಡೆಸಿಕೊಡುತ್ತಾರೆ- ರೋಗ ಉಲ್ಬಣದ ಅಂಕಿ ಅಂಶಗಳ ಜೊತೆಗೆ.
ಕೆಳ ಮಧ್ಯಮವರ್ಗದಿಂದ ಬಂದ ಅಭಿಜಿತ್ ಅವರು 1999ರಲ್ಲಿ ಎಂಬಿಬಿಎಸ್ ಮಾಡಿದನಂತರ ಇನ್ನು ಮುಂದೆ ತಂದೆ ತಾಯಿಯರಿಗೆ ಭಾರವಾಗಿರುವುದು ಬೇಡವೆಂದು ಸ್ವಂತವಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸುತ್ತಾರೆ. ಆದರೆ ಹಣವಿಲ್ಲದೆ ಯಾವುದೂ ಸಾಧ್ಯವಿಲ್ಲ? ಹಳ್ಳಿಯೊಂದರ ಮನೆ ಮನೆಗೆ ಹೋಗಿ ನಿಮ್ಮ ಮನೆಯಲ್ಲಿ ಯಾರಾದರೂ ರೋಗಿಗಳಿದ್ದಾರೆಯೇ? ಎಂದು ಕೇಳುತ್ತಾ ಅವರಿಗೆ ಔಷಧೋಪಚಾರ ನೀಡುತ್ತಾ ಅವರು ಕೊಟ್ಟ ಐದು ರೂಗಳಲ್ಲಿ ವಡಾಪ್ಪಾವ್ ತಿಂದುಕೊಂಡು ಅರೆಹೊಟ್ಟೆ ಜೀವನ ನಡೆಸಿದವರು ಇವರು. “ಅಗತ್ಯ ಔಷಧಗಳನ್ನುಳ್ಳ ಬ್ಯಾಗುಗಳನ್ನು ಕೈ ಮೈ ತುಂಬಾ ನೇತಾಡಿಸಿಕೊಂಡು, ಹವಾಯ್ ಚಪ್ಪಲಿ ಮೆಟ್ಟಿಕೊಂಡು, ಇರಸರಿಕೆಯಿಲ್ಲದ ಯಾರು ಯಾರೋ ಗೆಳೆಯರ ದಿರಿಸುಗಳನ್ನು ಧರಿಸಿಕೊಂಡು, ಕೆದರಿದ ತಲೆ ಹೊತ್ತುಕೊಂಡು ಮನೆ ಮನೆ ತಿರುಗುತ್ತಿದ್ದರೆ ಜೋಕರ್ ಎಂದು ಆಡಿಕೊಂಡವರೆಷ್ಟು ಜನವೋ.

ಹೀಗೆ ಯಾರದಾದರೂ ‘ಸಭ್ಯರ’ ಮನೆಯ ಬಾಗಿಲು ಬಡಿದರೆ “ಡಾಕ್ಟರುಗಳು ಹೀಗೂ ಇರುತ್ತಾರೆಯೇ? ಯಾರೋ ಕಳ್ಳಕಾಕರು ಇರಬೇಕು” ಎಂದು ಬಾಗಿಲು ಮುಚ್ಚಿದವರೆಷ್ಟು ಜನವೋ. ಕೆಲವರು ಒಪ್ಪಿಕೊಂಡು ತಪಾಸಣೆ ಮಾಡಿಸಿಕೊಂಡರೂ ಐದುರೂಗಳನ್ನೂ (199ರಲ್ಲಿ) ಕೊಡಲಾಗದೇ ಎರಡೋ ಮೂರೋ ರೂಗಳನ್ನು ಕೈಗಿತ್ತು ಕಳುಹಿಸಿದ್ದಿದೆ. ಅದರಲ್ಲಿ ವಡಾಪ್ಪವ್ ತಿಂದುಕೊಂಡು ಅನೇಕ ವೇಳೆ ಭಿಕ್ಷುಕರಾಗಿಯೇ ಬದುಕಿದ್ದಿದೆ” ಎನ್ನುತ್ತಾರೆ ಅಭಿಜಿತ್.
ಪುಣೆಯ ಬೀದಿಗಳಲ್ಲಿ ಸ್ಟೆಥಾಸ್ಕೋಪನ್ನು ಹಿಡಿದುಕೊಂಡು ಅಲೆಯುತ್ತಿದ್ದ ಕಾಲದಲ್ಲಿ “ಒಮ್ಮೊಮ್ಮೆ ದಿನಕ್ಕೆ 60-70 ರೋಗಿಗಳನ್ನು ನೋಡಿದ್ದಿದೆ. ದಿನವಿಡೀ ದುಡಿದರೂ ಕೆಲವೊಮ್ಮೆ ಕೇವಲ 30ರೂಪಾಯಿ ಸಿಗುತ್ತಿತ್ತು” ಎನ್ನುವ ಡಾ ಅಭಿಜಿತ್ ಅವರಿಗೆ ಜೋಕರ್ ನಿಂದ ಡಾಕ್ಟರ್ ವರೆಗಿನ ಅವರ ಪಯಣವನ್ನು ನೆನೆಸಿಕೊಳ್ಳುವುದರಲ್ಲಿ ಒಂದು ಹೆಮ್ಮೆಯಿದೆ. ಸಾರ್ಥಕತೆ ಇದೆ.
ಹೀಗೆ ಹತಾಶರಾಗಿ ಒಮ್ಮೆ ದೇವಸ್ಥಾನದ ಬಳಿ ಕುಳಿತಿದ್ದಾಗ ಅವರಿಗೆ ಒಬ್ಬ ಭಿಕ್ಷುಕ ಬಾಬಾ ಹಾಗೂ ಅವನ ಹೆಂಡತಿಯ ಪರಿಚಯವಾಗುತ್ತದೆ. ಅಂದಿನಿಂದ ಇವರ ಕಷ್ಟ ಸುಖಗಳಲ್ಲಿ ಆ ದಂಪತಿ ಭಾಗಿಯಾಗುತ್ತಾ ಹೋಗುತ್ತಾರೆ. ಕೆಲವೊಮ್ಮೆ ಊಟಕ್ಕೆ ತತ್ವಾರವಾದ ದಿನಗಳಲ್ಲಿ ಅವರ ಬಿಕ್ಕೆಯ ಊಟದ ಉತ್ತಮ ಪಾಲು ಇವರಿಗೆ ದಕ್ಕಿದೆ. ದುರ್ಭಿಕ್ಷದ ದಿನಗಳಲ್ಲಿ ಬಾಬಾನಿಂದ ಹಣದ ಸಹಾಯವೂ ದೊರೆತಿದೆ. “ನೀನು ಇನ್ನೂ ಚಿಕ್ಕವನು ಹಣವನ್ನೇನೋ ಸಂಪಾದಿಸಬಹುದು ಆದರೆ ಒಳ್ಳೆಯ ಮನುಷ್ಯನಾಗುವುದು ಮುಖ್ಯ, ಎಂದು ಪದೇ ಪದೇ ಹೇಳಿ ನನ್ನ ಬದುಕನ್ನು ಬದಲಾಯಿಸಿದವ” ಎಂದು ಆ ಬಾಬನಿಗೆ ಅವರು ಇಂದಿಗೂ ಋಣಿಯಾಗಿದ್ದಾರೆ. ತನ್ನ ಕಷ್ಟದ ದಿನಗಳಲ್ಲಿ ತನಗೆ ನೈತಿಕ ಧೈರ್ಯವನ್ನೂ, ಆರ್ಥಿಕ ಒತ್ತಾಸೆಯನ್ನು ನೀಡಿದ ಅವರನ್ನು ತನ್ನ ತಂದೆತಾಯಿಯ ಸಮಾನರೆಂದೇ ಭಾವಿಸುತ್ತಾರೆ.
ಅಬಿಜಿತ್ ಅವರು ಕಾಲಕಳೆದಂತೆ ಒಂದೊಂದೇ ಮೆಟ್ಟಿಲೇರುತ್ತ ಒಂದು ದೊಡ್ಡ ಇಂಟರ್ ನ್ಯಾಷನಲ್ ಮೆಡಿಕಲ್ ಕಂಪನಿಯಲ್ಲಿ ದೊಡ್ಡ ಹುದ್ದೆಗೆ ಏರುತ್ತಾರೆ. ಗಂಡ ಹೆಂಡತಿ ಇಬ್ಬರಿಗೂ ತಿಂಗಳಿಗೆ ಮೂರು ನಾಲ್ಕು ಲಕ್ಷ ಸಂಬಳ!! ನೆಮ್ಮದಿಯ ಜೀವನ ನಡೆಸಬಹುದಿತ್ತು. ಆದರೆ ಅಭಿಜಿತ್ ಅವರು ತಮ್ಮ ಬಾಬಾನ ಕನಸನ್ನು ನನಸು ಮಾಡಲು ತಮ್ಮ ಕೆಲಸವನ್ನು ಬಿಟ್ಟು ಮತ್ತೆ ಬೀದಿಗೆ ಇಳಿಯುತ್ತಾರೆ. ಆಗ ಅವರ ಹೆಂಡತಿ ಮನಿಷಾ ಅವರು ನೀಡಿದ ಸಹಕಾರ ಬಹಳ ಮಹತ್ವದ್ದು ಎಂದು ಸ್ಮರಿಸುತ್ತಾರೆ.
ಸೋಮವಾರದಿಂದ ಶನಿವಾರದವರೆಗೆ ಹತ್ತರಿಂದ ನಾಲ್ಕರ ತನಕ ಅವರಿಗೇ ಇದೇ ಡ್ಯೂಟಿ. ಹೆಗಲಿನ ಮೇಲೆ ಮೂಟೆಯಂತಹ ಬ್ಯಾಗುಗಳನ್ನು ಹೊತ್ತುಕೊಂಡು ಬೀದಿಗಳಲ್ಲಿ ಭಿಕ್ಷುಕ ರೋಗಿಗಳನ್ನು ಉಚಿತವಾಗಿ ತಪಾಸು ಮಾಡುವುದು. ಚಿಕಿತ್ಸೆ ಕೊಡುವುದು. “ಹಿಂದೆ ನನ್ನ ಈ ಬ್ಯಾಗುಗಳನ್ನು ಹೊತ್ತು ತಿರುಗುತ್ತಿದ್ದಾಗ ಜನ ನನ್ನನ್ನು ಜೋಕರ್ ಎಂದು ಹಾಸ್ಯ ಮಾಡುತ್ತಿದ್ದರು. ಈಗಲೂ ಈ ಮೂಟೆಗಳನ್ನು ಹೊತ್ತು ತಿರುಗುತ್ತಿದ್ದೇನೆ. ಆದರೆ ಜನ ಈಗ ಅಪಹಾಸ್ಯಮಾಡುವುದಿಲ್ಲ. ಯಾಕೆಂದರೆ ಈಗ ಇದು ನನ್ನ ಹೊಟ್ಟೆಪಾಡಿಗಲ್ಲ ಬೀದಿಗೆ ಬಿದ್ದವರನ್ನು ರಕ್ಷಿಸುವುದಕ್ಕೆ” ಎನ್ನುತ್ತಾರೆ.
ಮನಿಷಾ ಅವರ ಕೆಲಸ ಪ್ರಾರಂಭವಾಗುವುದು ಬೆಳಗಿನ ನಾಲ್ಕುಗಂಟೆಗೆ. ಅವರಿಗೆ ತಮ್ಮದೇ ಆದ ಒಂದು ಕ್ಲಿನಿಕ್ ಇದೆ. ಜೊತೆಗೆ ಒಂದು ಯೋಗಾ ಕೇಂದ್ರ. ಮನೆಯ ನಿರ್ವಹಣೆ. ಅತ್ತೆಮಾವಂದಿರ ಜವಾಬ್ದಾರಿ. ಮಗನ ದೇಖರೇಖಿ. ಅಲ್ಲದೇ ಕೆಲವೊಮ್ಮೆ ಭಿಕ್ಷುಕ ಹೆಣ್ಣುಮಕ್ಕಳಲ್ಲಿ ಏನಾದರೂ ಸ್ತ್ರೀ ಸಂಬಂಧಿತ ರೋಗ ಕಂಡು ಬಂದರೆ ಅಲ್ಲಿಗೆ ಓಟ. ಮನಿಷಾ ಅವರ ಸಂಪಾದನೆಯ ಶೇಕಡಾ ಮೂವತ್ತು ಭಾಗವನ್ನು ಭಿಕ್ಷುಕರ ಸೇವೆಗೆಂದೇ ಮೀಸಲಿಡಲಾಗಿದೆ. ತಮ್ಮ “ಸೋಹಂ” ಎನ್ನುವ ಟ್ರಸ್ಟಿನ ಮೂಲಕ ಕೈಲಾಗದವರಿಗೆ, ಕಣ್ಣಿನ ಪೊರೆಯ ಆಪರೇಷನ್ನೇ ಅಲ್ಲದೆ ಕೆಲವು ಗಂಭೀರ ಸಮಸ್ಯೆಗಳಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸುವ ಹೊಣೆಗಾರಿಕಯನ್ನೂ ಈ ದಂಪತಿ ಹೊತ್ತುಕೊಂಡಿದ್ದಾರೆ.
ಬೀದಿ ಬದಿಯ ಭಿಕ್ಷುಕರನ್ನು ಹುಡುಕಿಕೊಂಡು ಹೋಗಿ ಅವರಿಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಅನನ್ಯ ಜೋಡಿ ಇವರದು. “ಯಾವುದಾದರೂ ಭಿಕ್ಷುಕನನ್ನು ಸುಮ್ಮನೇ ‘ದುಡಿಯುವುದಕ್ಕೆ ಆಗುವುದಿಲ್ಲವಾ’ ಎಂದು ಬೈದರೆ ಕೇಳುವುದಿಲ್ಲ. ಅವರ ಜೊತೆಗೆ ಒಂದು ನಂಟನ್ನು ಸಾಧಿಸಿ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಔಷಧಿಯನ್ನು ಕೊಡುತ್ತಾ ಅವರಿಗೆ ಚಿಕಿತ್ಸೆ ಮಾಡುತ್ತಾ ಅವರ ಜೊತೆಗೆ ಈಗ ಒಂದು ಸಂಬಂಧವೇರ್ಪಟ್ಟಿದೆ. ಈಗ ನಾವು ಏನು ಹೇಳಿದರೂ ಅವರು ಕೇಳುತ್ತಾರೆ. ಅವರ ಮಾತನ್ನು ನಾನೂ ಕೇಳುತ್ತೇನೆ” ಎನ್ನುವ ಇವರಿಗೆ ಸುಮಾರು ನೂರಾರು ಭಿಕ್ಷುಕ ರೋಗಿಗಳಿದ್ದಾರೆ. ಅವರೆಲ್ಲಾ ಇವರನ್ನು ಅಣ್ಣನೆಂದೋ, ತಂದೆಯೆಂದೋ, ಮಗನೆಂದೋ ಕರೆಯುತ್ತಾರೆ. ಆದರೆ ಮಂದಿರದ ಒಳಗೆ ಇರುವ ದೇವರು ನಿಜವಾಗಿ ಇವರ ರೂಪದಲ್ಲಿ ಹೊರಬಂದು ತಮ್ಮ ಕೈಹಿಡಿದ್ದಾನೆ ಎನ್ನುವುದು ಆ ಭಿಕ್ಷುಕರಿಗೂ ಚೆನ್ನಾಗಿ ಗೊತ್ತಿದೆ.

ಭಿಕ್ಷುಕರನ್ನು ಅವರ ವೃತ್ತಿಯಿಂದ ವಿಮುಖಗೊಳಿಸುವುದು ಸುಲಭವಲ್ಲ. “ನನ್ನ ಅಮ್ಮ ಎನ್ನುತ್ತೀಯಾ ಅಪ್ಪ ಎನ್ನುತ್ತೀಯಾ ಡಾಕ್ಟರ್ ಮಗಳಾಗಿ ನೀನು ಭಿಕ್ಷೆ ಬೇಡುವುದು ಸರಿಯಾ? ನೀನು ಭಿಕ್ಷೆ ಬೇಡುವುದೇ ಆದರೆ ನಿನ್ನ ಜೊತೆ ಸಂಬಂಧ ಇಟ್ಟುಕೊಳ್ಳುವುದಿಲ್ಲ, ಹೋಗು… ಕುಳಿತು ಬಿಕ್ಷೆ ಬೇಡುವೆಯಲ್ಲಾ ಹಾಗೆಯೇ ಕುಳಿತು ಹೂಗಳನ್ನು ಮಾರು ಇಲ್ಲವೇ ರುಮಾಲುಗಳನ್ನು ಮಾರು ಏನಾದರೂ ಮಾಡು” ಎಂದು ವೈದ್ಯರು ಪುಸಲಾಯಿಸಿದರೆ. ಆ ಭಿಕ್ಷುಕರು “ಮನೆಯವರು ಬೀದಿಗೆ ಬಿಸಾಕಿದರು. ಬೀದಿಯಲ್ಲಿ ಬಿದ್ದವರನ್ನು ಕೈಹಿಡಿದೆತ್ತಿದೆ. ಇನ್ನು ನಿನ್ನನ್ನು ಬಿಡಲಾರೆವು, ನೀನು ಹೇಳಿದಂತೆಯೇ ಕೇಳುತ್ತೇವೆ” ಎನ್ನುತ್ತಾರೆ. “ಪ್ರಪಂಚದಲ್ಲಿಯೇ ನಮ್ಮದು ಬಹಳ ಶ್ರೀಮಂತ ಕುಟುಂಬ ಎಂದು ಹೇಳಿಕೊಳ್ಳಲು ಖಷಿಯಾಗುತ್ತದೆ.
ನನಗೆ ನೂರಾರು ತಾಯಿ ತಂದೆಯರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಅಜ್ಜ ಅಜ್ಜಿಯರಿದ್ದಾರೆ. ಆದರೆ ಈಗಲೂ ರಸ್ತೆಯಲ್ಲಿ ಮಲಗುವ, ಹೊಟ್ಟೆಗಿಲ್ಲದ ಅನೇಕ ಮಂದಿ ಇದ್ದಾರೆ ಎನ್ನುವುದೇ ದುಃಖದ ವಿಷಯ” ಎಂದು ದುಃಖಿತರಾಗುವ ಅಭಿಜಿತ್ “ಎಲ್ಲಿಯವರೆಗೆ ಭಿಕ್ಷುಕರಿರುತ್ತಾರೋ ಅಥವಾ ನಾವು ಇರುತ್ತೇವೆಯೋ ಅಲ್ಲಿಯವರೆಗೆ ಈ ಕೆಲಸ ಮಾಡುವುದನ್ನು ನಾವು ಬಿಡುವುದಿಲ್ಲ ಎನ್ನುವ ಈ ವೈದ್ಯ ದಂಪತಿಯನ್ನು ಈ ಬೀದಿ ಬದಿಯ ನಿರಾಶ್ರಿತರು ತಬ್ಬಿ ಮುದ್ದಾಡುತ್ತಾರೆ. ಕೃತಜ್ಞತೆಯಿಂದ ಕಣ್ಣೀರು ಹರಿಸುತ್ತಾರೆ. ಈ ಭಿಕ್ಷುಕರ ಸಿಕ್ಕಿದುದನ್ನೆಲ್ಲಾ ತಿನ್ನುತ್ತಾರೆ. ಇವರಿಗೂ ಬಿ.ಪಿ., ಸಕ್ಕರೆ ಖಾಯಿಲೆಯೆ ಅಲ್ಲದೆ ಇತರ ಖಾಯಿಲೆಗಳೂ ಇವೆ. ಎಂತಹ ಖಾಯಿಲೆಗಳು ತಮಗೆ ಇವೆ, ಅದಕ್ಕೆ ಯಾವ ವೈದ್ಯರನ್ನು ನೋಡಬೇಕು ಎನ್ನುವುದು ಗೊತ್ತಿಲ್ಲ. ಒಂದು ಪಕ್ಷ ವೈದ್ಯರ ಬಳಿಗೆ ಹೋದರೂ ಅವರು ತಮ್ಮನ್ನು ನೋಡುತ್ತಾರೋ ಇಲ್ಲವೋ ಅದೂ ಇವರಿಗೆ ಗೊತ್ತಿಲ್ಲ. ಅಲ್ಲದೇ ಎಲ್ಲದಕ್ಕೂ ಹಣ ಬೇಕಾಗುತ್ತದೆ.
“ಹೊಟ್ಟೆಗೇ ಪಡಿಪಾಟಲು ಪಡುವ ಜನ ಚಿಕಿತ್ಸೆಗೆ ಎಲ್ಲಿಂದ ತಂದಾರು? ಇಂತಹ ಅನೇಕ ಸಂಕಟಗಳಲ್ಲಿ ಅವರು ಬೀದಿಯ ಹೆಣವಾಗಿಬಿಡುತ್ತಾರೆ” ಎನ್ನುವ ಡಾ ಅಭಿಜಿತ್ ಇಂತಹವರ ಬಳಿಗೆ ಹೋಗಿ ಅವರನ್ನು ತಪಾಸು ಮಾಡಿ ಔಷಧಿ ಕೊಡುತ್ತಾರೆ. ಗುಣವಾದ ಕೆಲವರಿಗೆ ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಪ್ರೋತ್ಸಾಹಿಸುತ್ತಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ – “ಮನೆ ಕೆಲಸ, ಬೇಬಿ ಸಿಟ್ಟಿಂಗ್, ಆಫೀಸುಗಳಲ್ಲಿ ಆಫೀಸ್ ಬಾಯ್, ಹೊಟೇಲ್, ಫಾಕ್ಟರಿ ಕಾರ್ಮಿಕರುಗಳಾಗಿ, ಕಟ್ಟಡ ನಿರ್ಮಾಣಗಳ ಕೆಲಸದಲ್ಲಿ ಬಹಳ ಜನ ಇಂದು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಗುರುತು ಪರಿಚಯವಿರುವರನ್ನು ಹಿಡಿದು ಕೆಲಸಕ್ಕೆ ಹಾಕಿ ಸಭ್ಯತೆಯ ಜೀವನ ಮಾಡುವುದಕ್ಕೆ ಸಹಾಯ ಮಾಡುತ್ತೇವೆ.
ಹೀಗೆ ಸುಮಾರು ಐವತ್ತೊಂಬತ್ತು ಹಿರಿಯ ನಾಗರಿಕರು ಇಂದು ಸಭ್ಯ ಜೀವನ ನಡೆಸುತ್ತಿದ್ದಾರೆ. ಸು. 850 ಜನ ಹೀಗೆ ನಮ್ಮ ಸಂಸ್ಥ್ಥೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಭಿಕ್ಷುಕರ ಪುನರ್ವಸತೀಕರಣ ನಮ್ಮ ಮುಖ್ಯ ಧ್ಯೇಯ” ಎನ್ನುವ ಸೋನಾವಣೆ ದಂಪತಿಗಳು, ದುಶ್ಚಟಕ್ಕೆ ಬಿದ್ದ ಕೆಲವು ಮೈಗಳ್ಳ ಭಿಕ್ಷುಕರನ್ನೂ ಕೌನ್ಸಲಿಂಗ್ ಮಾಡುವುದರ ಮೂಲಕ ದಾರಿಗೆ ತಂದಿದ್ದಾರೆ. ಈ ಭಿಕ್ಷುಕರೆಲ್ಲಾ ತಮ್ಮ ತಮ್ಮ ಮನೆಗಳಿಗೆ ಹೋಗುವಂತಾಗಲೀ ಘನತೆಯಿಂದ ಜೀವಿಸುವಂತಾಗಲೀ ಕೊನೆಗೆ ಈ ಭಿಕ್ಷೆ ಬೇಡುವ ಅನಿಷ್ಠ ವ್ಯವಸ್ಥೆಯೇ ಇಲ್ಲವಂತಾಗಲೀ ಎನ್ನುವುದ ನನ್ನ ಕೊನೆಯ ಆಸೆ……ಭಿಕ್ಷುಕರಿಗೆ ಚಿಲ್ಲರೆ ಕಾಸುಗಳನ್ನೋ ಆಹಾರ ಪದಾರ್ಥಗಳನ್ನೋ ಎಸೆದು ಅವರನ್ನು ಪರಾವಲಂಬಿಗಳನ್ನಾಗಿ ಮಾಡಬೇಡಿ. ಅವರನ್ನು ಸ್ವಾವಲಂಬಿಗಳನ್ನಾಗಿಸಲು ಸಹಾಯಮಾಡಿ” ಎನ್ನುವ ಅಭಿಜಿತ್ ಅವರಿಗೆ ಭಿಕ್ಷುಕರನ್ನು ಉದ್ಯಮಿಗಳನ್ನಾಗಿ ಮಾಡುವ ದೊಡ್ಡ ಕನಸಿದೆ.






0 Comments