ಗಾಯತ್ರೀ ರಾಘವೇಂದ್ರ

ಅದೃಷ್ಟ
ಅವನಿಗೆ ಎರಡು ದಿನದಿಂದ ಎಷ್ಟು ಭಿಕ್ಷೆ ಬೇಡಿದರೂ ಒಂದು ಬಿಡಿಗಾಸೂ ಸಿಕ್ಕಿರಲಿಲ್ಲ.. ಹಳಸಿದ ತಂಗಳೂ ದೊರಕಲಿಲ್ಲ..
ನಡೆದು ನಡೆದು ಸೋತು ಹೋದವನ ಕಣ್ಣಿಗೆ ದೂರದಲ್ಲಿ ರಸ್ತೆಯಲ್ಲಿ ಏನೋ ಹೊಳೆದಂತೆ ಕಂಡು ಹತ್ತಿರ ಹೋಗಿ ನೋಡಿದಾಗ ಅದು ಐದು ರೂಪಾಯಿ ನಾಣ್ಯವಾಗಿತ್ತು.
ಹರ್ಷ ಆನಂದೋದ್ವೇಗದಲಿ ಲಗುಬಗೆಯಿಂದ ಅದನ್ನು ಕಿಸೆಗೆ ಹಾಕಿಕೊಂಡು ದೂರದ ಅಂಗಡಿಯಲ್ಲಿ ತಿಂಡಿ ಕೊಳ್ಳಲು ಓಡುತ್ತ ಓಡುತ್ತ ಹಲವು ಹಾದಿಗಳ ದಾಟಿ ಹೋದ.
ನಾಣ್ಯಕ್ಕಾಗಿ ಕಿಸೆಗೆ ಕೈ ಹಾಕಿದ.
ಕಿಸೆ ಹರಿದಿತ್ತು..
ಪ್ರೀತಿ
ಅಂದೊಂದು ದಿನ ಅವಳು ಅವನನ್ನು ಬಂದು ಆವರಿಸಿದಳು..
ಮರುದಿನ ಅವನು ಕುರುಡಾದ..
ಆದರೆ ಅವನಿಗೆ ಜಗತ್ತು ಅತಿ ಸುಂದರವಾಗಿ ಕಾಣಿಸಲು ಶುರುವಾಯಿತು..
ಹಸಿವು

ಅಂಬಾ.. ಎಂದು ಮುಂಜಾನೆಯಲ್ಲಿ ಕೂಗಿ ಕೂಗಿ ಕರೆಯುತ್ತಿರುವ ಪುಟ್ಟ ಎಳೆಗರುವಿಗೆ ಅದರ ತಾಯಿ ಹೇಳಿತು. .
ತಾಳು ಮಗು ತಡೆದುಕೋ.. ನಮ್ಮ ಯಜಮಾನ ಇನ್ನೂ ಎದ್ದಿಲ್ಲ. ಪುಟ್ಟ ಕರು ಹೇಳಿತು ಅಮ್ಮಾ ಹಸಿವು ತಡೆಯಲಾಗುತ್ತಿಲ್ಲ.. ತಾಯಿ ಹಸು ಕಕ್ಕುಲಾತಿಯಿಂದ ಮಗೂ ಯಜಮಾನನಿಗೆ ಹಸಿವಾಗುವವರೆಗೆ ನಮ್ಮ ಹಸಿವಿನ ಅರಿವು ಅವನಿಗಾಗುವುದಿಲ್ಲ..
ರೀ..ರೀ..ಏಳ್ರೀ.. ಎಂಬ ಕೂಗಿಗೆ ಬೆಚ್ಚಿ ಕನಸಿಂದ ಎಚ್ಚೆತ್ತವನಿಗೆ ಹೆಂಡತಿಯ ಜೋರು ದನಿ ಕೇಳಿಸಿತು..
ಮಗು ಆಗಿಂದ ಅಳ್ತಾ ಇದೆ ಹೋಗಿ ಹಾಲು ಕರೆದುಕೊಂಡು ಬನ್ನಿ..
ಅವ್ಯಕ್ತ ಭಾವವೊಂದು ಅವನನ್ನು ಆವರಿಸಿಕೊಂಡಿತು..
ಹುಡುಕಾಟ
ಅಮ್ಮ ಹೇಳಿದ್ದಾಳೆ ಈ ಮೊಬೈಲ್ ನಲ್ಲಿ ಎಲ್ಲವೂ ಇದೆಯಂತೆ ಎಲ್ಲ ಸಿಗುತ್ತದಂತೆ..ಎಂದು ಹರ್ಷದಿಂದ ನೋಡುತ್ತಿದ್ದಳು ಪುಟಾಣಿ ಹುಡುಗಿ.
ಅವಳಿಗೆ ಆಡಲು ಇಡೀ ಊರಲ್ಲಿ ಯಾರೂ ಇಲ್ಲ ವಾರಗೆಯ ಮಕ್ಕಳು.
ಅಪ್ಪ ಆಫೀಸು ಅಮ್ಮ ಯಾವಾಗ್ಲೂ ಫೇಸ್ಬುಕ್ಕು ವಾಟ್ಸಾಪಿನಲಿ ಬ್ಯೂಸಿ..
ಇವಳ ಜೊತೆ ಆಡಲು ಒಂದಿಷ್ಟು ಗೊಂಬೆಗಳು..
ಅವುಗಳ ಜೊತೆ ಆಡಿ ಮಾತಾಡಿ ಅತ್ತು ನಕ್ಕು ಬೇಸರ ಹುಟ್ಟಿತ್ತು..
ಅಮ್ಮನಜೊತೆ ಆಡಲು ಬಾ ಎಂದು ಗೋಗರೆದರೆ ಬೈಗುಳವೇ ಉತ್ತರ..
ಈಗ ಹೊಸ ಮೊಬೈಲ್ ಕೊಡಿಸಿದ್ದಾಳೆ ಅಮ್ಮಆಡಲು..
ಅದರಲ್ಲಿ ಆ ಪುಟ್ಟ ಮಗು ಹುಡುಕುತ್ತಿದ್ದಾಳೆ ಗೂಗಲ್ ಸರ್ಚಿನಲಿ ಅಪ್ಪ ಅಮ್ಮ ನ ಪ್ರೀತಿ
ಗಾಯತ್ರೀ ರಾಘವೇಂದ್ರರ 'ಚಿಕ್ಕಥೆ'ಗಳು
ನಿಮಗೆ ಇವೂ ಇಷ್ಟವಾಗಬಹುದು…





ಗೂಗಲ್ಲಿನಲ್ಲಿ ಅಪ್ಪ ಅಮ್ಮನ ಪ್ರೀತಿ ಹುಡುಕುವ ಪುಟ್ಟ ಮಗು! ಕಣ್ತುಂಬಿ ಬಂತು.
ಮನ ತುಂಬುವ ಕತೆಗಳು
ಚಿಕ್ಕಥೆ ಅಂದ್ರೆ ಇಷ್ಟೊಂದು ಚಿಕ್ಕದಿರುತ್ತೆ ಅನ್ಕೊಂಡಿರಲಿಲ್ಲ ತುಂಬ ಅರ್ಥಪೂರ್ಣ ಕಥೆಗಳು ಇಷ್ಟವಾದವು ಮೇಡಂ