ಗಾಂಧಿ…

ಡಾ ಜಿ‌‌ ಎಸ್ ಶಿವರುದ್ರಪ್ಪ

ನೀನೊಬ್ಬ ವಿಚಿತ್ರ ಮನುಷ್ಯ
ಎಲ್ಲವನ್ನೂ ಅಂಗಡಿ ತೆರೆದು ಬೆಲೆ ಕಟ್ಟಬರದ
ಈ ಮಂದಿಯ ಮುಂದೆ ಹರಾಜಿಗಿಟ್ಟೆ.
ಕಾಸಿಗೆ ಕಾಸು, ಬಡ್ಡಿಗೆ ಬಡ್ಡಿ ಸೇರಿಸುತ್ತಾ,
ಕತ್ತಲ ಮೂಲೆಯಲ್ಲಿ ದಿನವೂ
ಇಲಿ ಹೆಗ್ಗಣಗಳೊಡನೆ ತೂತು ಕೊರೆಯುತ್ತಾ,
ಬ್ಯಾಂಕಿನಲ್ಲಿ ಬೆಳೆವ ಬಡ್ಡಿಗೆ ರೋಮಾಂಚನಗೊಳ್ಳುತ್ತಾ
ಕೂತವರ ನಡುವೆ ನೀನು
ಎಲ್ಲಿಂದ ಬಂದೆಯೋ ಮಹರಾಯ !

ಉತ್ತ ಹೊಲ, ತೆರೆದ ಪುಸ್ತಕ,
ಗಾಜುಮೈ ಗಡಿಯಾರ, ನಿನ್ನ ಬದುಕು.
ಕಾವಿಯುಡಲಿಲ್ಲ, ಹೆಣ್ಣ ಬಿಡಲಿಲ್ಲ;
ಎಲ್ಲೋ ಮಠದೊಳಗೆ ಕೂತು ರಹಸ್ಯವಾಗಿ
ಜಪಮಣಿ ಎಣಿಸಿ ಸಮಾಧಿಸ್ಥನಾಗಲಿಲ್ಲ;
ತೆರೆದ ಬಯಲಿನ ಕೆಳಗೆ ಎಲ್ಲರ ಜೊತೆಗೂ
ಕೂತು ಪ್ರಾರ್ಥಿಸಿದೆ : ಸಬಕೋ ಸನ್ಮತಿ ದೇ ಭಗವಾನ್.
ಪವಾಡಗಳನ್ನು ತೋರಿಸಿ ಯಾರನ್ನೂ ಮರುಳು ಮಾಡಲಿಲ್ಲ
ಮಾಡಿದ್ದೇ ಪವಾಡದ ತಲೆ ಮೆಟ್ಟಿತು.

ಕತ್ತಿ-ಕೋವಿ ಹಿಡಿಯಲಿಲ್ಲ ಆದರೂ ಯುದ್ಧ ಮಾಡಿದೆ.
ತುಟಿ ಬಿಗಿಯಲಿಲ್ಲ, ಹಲ್ಲು ಕಚ್ಚಲಿಲ್ಲ,
ಕಣ್ಣು ಕೆಂಪಗೆ ಮಾಡಲಿಲ್ಲ, ನಗು ನಗುತ್ತಲೇ
ಎದುರಾಳಿಗಳ ಮೇಲೆ ಮುನ್ನುಗ್ಗಿದೆ. ಗೆದ್ದೆ.

ಎಲ್ಲವನ್ನೂ ಕಟ್ಟಿಕೊಂಡೆ, ಆದರೂ ಏಕಾಂಗಿಯೇ ತೋರಿದೆ.
ನೋಡುವುದಕ್ಕೆ ಏಕಾಂಗಿಯಾದರೂ
ಜನಗಣಮನದ ಅಧಿನಾಯಕನಾಗಿ ನಡೆದೆ.
ಕಡೆಗೆ ಬಾವುಟವನ್ನು ಮುಗಿಲಿಗೇರಿಸಿ
ಸಿಡಿಗುಂಡುಗಳ ಹಾಸಿಗೆಯ
ಮೇಲೆ ನಿನಗೆ ತಣ್ಣಗೆ ನಿದ್ದೆ.

ನಮಗೂ ನಿದ್ದೆ, ಒಮ್ಮೊಮ್ಮೆ ಎಚ್ಚರ,
ಯಾರ್ಯಾರೋ ಬರುತ್ತಾರೆ, ಹೋಗುತ್ತಾರೆ,
ತುಂಬಿರುವ ಜಂಕ್ಷನ್ನಿನಲ್ಲೇ ರೈಲಿಗೆ
ಟಿಕೇಟು ಕೊಂಡೂ ಕೂಡ ವೆಯಿಟಿಂಗ್
ರೂಮಿನಲ್ಲಿ ಗೊರಕೆ.
ಬರುತ್ತವೆ, ಹೋಗುತ್ತವೆ ರೈಲು,
ಹತ್ತುತ್ತಾರೆ ಇಳಿಯುತ್ತಾರೆ ಜನ;
ಕಡೆಗೆ ಕಸಗುಡಿಸುವಾತನೇ ಬಂದು
ಎಚ್ಚರಿಸಿದಾಗ ದಿಗಿಲು,
ಸುತ್ತಲೂ ಕೆಂಪಗೆ ಕೆಂಡ ಕಾರುವ ಹಗಲು.

ನೀ ಬಂದು ಹೋದಾಮೇಲೆ ಏನೇನಾಗಿದೆ ಎಂದು
ಹೇಳಲಾರೆ. ನಿನ್ನೆದೆಗೆ ತಾಕಿದ ಗುಂಡು
ನಮ್ಮದೆಗೂ ತಾಕಿದ್ದರೆ… ಆ ಮಾತೆ ಬೇರೆ.

ನೀನಿದ್ದೆ ಎಂಬುದಕ್ಕೆ ಸ್ಮಾರಕ ನಿರ್ಮಿಸುವುದನ್ನು
ನಾವು ಮರೆತಿಲ್ಲ. ಇಗೊ ಈ ಚೌಕದಲ್ಲಿ, ಆ ಮಹಲಿನಲ್ಲಿ
ಈ ಪಾರ್ಕಿನಲ್ಲಿ ನಿನ್ನ ವಿಗ್ರಹವನ್ನು ಸ್ಥಾಪಿಸಿ
ವರ್ಷ ವರ್ಷವೂ ನಿನ್ನ ನೆನಪುಗಳಲ್ಲಿ ಕೈ
ತೊಳೆದುಕೊಳ್ಳುತ್ತಿದ್ದೇವೆ. ಆದರೂ
ಕೈಗಂಟಿಕೊಂಡಿರುವ ನಿನ್ನ
ರಕ್ತದ ಗುರುತು ಇನ್ನೂ ಹೋಗುತ್ತಿಲ್ಲ.

ಸಂಜೆ ಪಾರ್ಕಿನಲ್ಲಿ ನಿನ್ನ ವಿಗ್ರಹದ ಮೇಲೆ ಹಕ್ಕಿಗಳು
ಗಲೀಜು ಮಾಡಿರುವಲ್ಲಿ ಜನ ಬರುತ್ತಾರೆ, ಹೋಗುತ್ತಾರೆ. ನಿನಗೆ ಪ್ರಿಯವಾದ ಕಡಲೇಕಾಯಿ ತಿಂದು ಸಿಪ್ಪೆಯನ್ನಲ್ಲೇ ನಿನ್ನ ಪಾದಕ್ಕೆ ಸುರಿದು ನಡೆಯುತ್ತಾರೆ.

ವಾಕಿಂಗ್ ಬಂದ ತರುಣ ದಂಪತಿಗಳು ‘ಪಾಪ ಯಾರದೋ ಮುದುಕನದು ಈ ಪ್ರತಿಮೆ’ ಎಂದುಕೊಳ್ಳುತ್ತಾರೆ. ಅಜ್ಜ ಹೇಳುತ್ತಾನೆ ಮೊಮ್ಮಗನಿಗೆ: ‘ಇದು ಗಾಂಧೀ’
‘ಗಾಂಧಿ ! ಹಾಗೆಂದರೇನಜ್ಜ’ ಅನ್ನುತ್ತದೆ ಮಗು.
ಅಜ್ಜ ಹೇಳುತ್ತಾನೆ, “ಅವನೊಬ್ಬ ಹುಚ್ಚ…
ಬ್ರಿಟಿಷರಿದ್ದಾಗಲೇ ಚೆನ್ನಾಗಿತ್ತು’ ಎಂದು ಗೊಣಗುತ್ತ
ತನ್ನ ಕಳೆದ ಕಾಲದ ಸಾಹೇಬಗಿರಿಯ ನೆನಪು ಕುಟ್ಟುತ್ತಾ
ಮುಂದೆ ಹೋಗುತ್ತಾನೆ.

ಇದನ್ನೆಲ್ಲ ನೋಡುತ್ತ ನಿದ್ದೆಯೊಳಗೆ ನಾನು
ಕುಮಟಿ ಬೀಳುತ್ತೇನೆ. ಗಾಳಿ ಬೀಸುತ್ತದೆ
ಎಲೆ ಉದುರುತ್ತವೆ
ಭದ್ರವಿರದ ಈ ಮನೆಯ ಕಿಟಕಿ ಕದಗಳು
ಗಾಳಿಗೆ ಹೊಯ್ದಾಡುತ್ತವೆ.
ನಿನ್ನ ನೆನಪನ್ನೇ ಹೊದ್ದು ನಿಟ್ಟುಸಿರು ಬಿಡುತ್ತಾ
ಎಂದಾದರೂ ನೀನುತ್ತು ಬಿತ್ತಿದ ಬೀಜ
ಮೊಳೆತಾವೇ ಎಂದು ಕೊರಗುತ್ತೇನೆ.

ಗೋಡೆ : ೧೯೭೨.

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: