ಗಾಂಧಿ ಮತ್ತು ಅಂಬೇಡ್ಕರ್ ಕೃತಿಗಳನ್ನ ಓದದೆ..

ಎನ್.ಎಸ್. ಶಂಕರ್

ರಾಜಮೋಹನ ಗಾಂಧಿಯವರ ಈ ಅಪೂರ್ವ ಕಿರುಹೊತ್ತಗೆಯ ಅನುವಾದದ ನನ್ನ ಪುಸ್ತಕವನ್ನು ಗಾಂಧಿ ಸ್ಮಾರಕ ನಿಧಿ ಹೊರತಂದಿದ್ದು ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ.

ಆ ಸಂದರ್ಭದಲ್ಲಿ ಇದರ ಮಾಹಿತಿ ನೀಡೋಣವೆಂದು ಸುಮ್ಮನಿದ್ದೆ. ಆದರೆ ಗೆಳೆಯ ಪ್ರದೀಪ್ ಮಾಲ್ಗುಡಿ ಇದರ ಬಗ್ಗೆ ಉಲ್ಲೇಖಿಸಿದ್ದರಿಂದಾಗಿ ನಾನು ಆ ಪುಸ್ತಕಕ್ಕೆ ಬರೆದ ನನ್ನ ಮುನ್ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ- ಈ ಕೃತಿಯ ವ್ಯಾಪ್ತಿ ಹಾಗೂ ಹಿನ್ನೆಲೆ ತಿಳಿಯಲಿ ಎಂಬ ಕಾರಣಕ್ಕೆ. ಮತ್ತೆ ಯಥಾಪ್ರಕಾರ ಪರ ವಿರೋಧ ವಾದಗಳಿದ್ದೇ ಇರುತ್ತವೆ!…

ನನ್ನ ಮುನ್ನುಡಿ ಹೀಗಿದೆ:

ಅಂಬೇಡ್ಕರ್ ಮತ್ತು ಗಾಂಧೀಜಿ ನಡುವಣ ವಾಗ್ವಾದ, ಸ್ವತಂತ್ರ ಭಾರತದ ಅತಿ ಮಹತ್ವದ ಕಗ್ಗಂಟುಗಳಲ್ಲಿ ಒಂದಿರಬೇಕು. ಒಂದು ಲೆಕ್ಕಕ್ಕೆ ಇದು ಎಂದೂ ಮುಗಿಯದ ವಿವಾದವೇನೋ ಎಂದೂ ಅನಿಸಿದೆ. ಅದರಲ್ಲೂ 1932ರ ಪುಣೆ ಒಪ್ಪಂದವನ್ನೇ ಕೇಂದ್ರವಾಗಿ ಮಾಡಿಕೊಂಡು, ಅಂಬೇಡ್ಕರ್ ಮತ್ತು ಗಾಂಧೀಜಿಯವರನ್ನು ಎದುರಾ ಬದುರು ಪಾಳೆಯಗಳಲ್ಲಿ ನಿಲ್ಲಿಸಿ ಕೂಗಾಡುವ ಪ್ರವೃತ್ತಿ ಅದೇಕೋ ಈಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ನಡೆದಿದೆ.

ಅವರಿಬ್ಬರ ನಡುವೆ ಹಗೆತನ ಹುಟ್ಟುಹಾಕಿ ಸ್ವಾತಂತ್ರ್ಯದ ಆಶಯ ಹಾಗೂ ಸಾಮಾಜಿಕ ನ್ಯಾಯದ ಕಾಳಜಿ ಇವರೆಡನ್ನೂ ಪರಸ್ಪರ ವಿರುದ್ಧ ಗುರಿಗಳೆಂದು ಬಿಂಬಿಸಲಾಗಿದೆ; ಕಾನ್ಶಿರಾಂ ಅವರ ಬಹುಜನ ಸಮಾಜ ಪಕ್ಷದ ರಾಜಕೀಯ ಪ್ರಯೋಗ ಯಶಸ್ವಿಯಾದ ಮೇಲಂತೂ ಗಾಂಧೀಜಿಯನ್ನು ದಲಿತ ವಿರೋಧಿ, ಮನುವಾದಿ ಎಂದು ಬಿಂಬಿಸುವ ಪ್ರಯತ್ನಗಳಿಗೆ ದೊಡ್ಡ ಗಂಟಲು ಬಂದಿದೆ. ಇದರ ಒಳಮರ್ಮವೇನೋ ನನಗಂತೂ ಅರ್ಥವಾಗಿಲ್ಲ.

ಇದೇ ಧಾಟಿಯಲ್ಲಿ ವಾದಿಸುವ ತಾತ್ವಿಕ ಮೊಂಡರು ನನ್ನ ಗೆಳೆಯರಲ್ಲೂ ಹಲವರಿದ್ದಾರೆ. ನಾನೂ ಅವರೊಂದಿಗೆ ಎಷ್ಟೋ ಬಾರಿ ಚರ್ಚಿಸಿ ನೋಡಿದ್ದೇನೆ. ‘ನನ್ನ ಮೂಗಿನ ನೇರಕ್ಕೆ’ ನನ್ನ ವಾದಗಳನ್ನು ಅವರ ಮುಂದೆ ಮಂಡಿಸಿಯೂ ಇದ್ದೇನೆ. ಜಾತಿ ಅನ್ಯಾಯದ ಪ್ರಶ್ನೆ, ನಾಡಿನ ಸ್ವಾತಂತ್ರ್ಯ ಹೋರಾಟಕ್ಕೆ ನೇರವಾಗಿ ಸಂಬಂಧಪಟ್ಟ ವಿಷಯ ಆಗಿರಲಿಲ್ಲವಾದರೂ, ಅಂಬೇಡ್ಕರ್ ಇನ್ನೂ ಸಾರ್ವಜನಿಕ ಜೀವನವನ್ನು ಪ್ರವೇಶಿಸುವ ಮುನ್ನವೇ, ಗಾಂಧೀಜಿ ಅಸ್ಪೃಶ್ಯತೆ ವಿಚಾರದಲ್ಲಿ ರಾಷ್ಟ್ರದ ಆತ್ಮಸಾಕ್ಷಿಯನ್ನು ಕೆದಕಿದ್ದರು. ಶತಮಾನಗಳ ಕಾಲ ಹಿಂದೂಧರ್ಮ ಯಾವ ಎಗ್ಗೂ ಸಿಗ್ಗೂ ಇಲ್ಲದೆ ಆಚರಿಸಿಕೊಂಡು ಬಂದಿದ್ದ ಅಸ್ಪೃಶ್ಯತೆಯ ಪ್ರಶ್ನೆ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದ ರಾಷ್ಟ್ರದ ಕೇಂದ್ರ ಕಾಳಜಿಯಾದದ್ದು ಗಾಂಧೀಜಿಯಿಂದಾಗಿ.

ಎಲ್ಲೋ ದೂರ ಹೋಗುವುದು ಬೇಡ, ಇದಕ್ಕೆ ರುಜುವಾತುಗಳು ಕನ್ನಡ ಸಾಹಿತ್ಯದಲ್ಲೇ ಸಿಕ್ಕುತ್ತವೆ. ಕುವೆಂಪು ಎಂಎ ಓದುತ್ತಿದ್ದಾಗಲೇ (1927ರಲ್ಲಿ) ಜಲಗಾರ ನಾಟಕ ಬರೆದರು, ಕಾರಂತರು ಚೋಮನ ದುಡಿ ಬರೆದರು, ಶ್ರೀರಂಗ ಹರಿಜನ್ವಾರ ನಾಟಕ ಬರೆದರು. ಇವರಲ್ಲದೆ, ಇಷ್ಟು ಮುಖ್ಯರಲ್ಲದ ಇನ್ನೂ ಅನೇಕ ಬರಹಗಾರರು ಅಸ್ಪೃಶ್ಯತೆ ಸಮಸ್ಯೆಯನ್ನು ತಮ್ಮದೇ ರೀತಿಯಲ್ಲಿ ಎದುರಿಸಿದ್ದಾರೆ. ಜೊತೆಗೆ ಇದು ದೇಶವ್ಯಾಪಿಯಾದ ವಿದ್ಯಮಾನವಾಗಿತ್ತು ಕೂಡ. ಗಾಂಧಿ ಹೇಗೆ ಖಾದಿಯನ್ನು ರಾಷ್ಟ್ರೀಯ ಉಡುಪಾಗಿ ಮಾರ್ಪಡಿಸಿದರೋ, ಹಾಗೇ ನಿರಂತರ ಹೋರಾಟದ ಮೂಲಕ ಅಸ್ಪೃಶ್ಯತೆಯನ್ನು ಈ ನಾಡು ಎದುರಿಸಬೇಕಾದ ಪ್ರಧಾನ ಸವಾಲನ್ನಾಗಿ ಪರಿವರ್ತಿಸಿದ್ದರು…

ಇದೇ ಧಾಟಿಯಲ್ಲಿ ನಾನು ಎಷ್ಟೋ ವಾದ ಹೂಡಿದ್ದೇನೆ. ಅಷ್ಟಕ್ಕೂ ಶಾಶ್ವತವಾಗಿ ಪ್ರತ್ಯೇಕ ದ್ವೀಪವಾಗಿಯೇ ಉಳಿಯುವುದು ದಲಿತರ ಗುರಿಯೂ ಆಗಿರಲಾರದು; ಸಮಸಮಾಜದ ಕನಸು ಕಾಣುವವರು ದಲಿತರ ಸ್ವಾಭಿಮಾನವನ್ನೂ, ಹಾಗೆಯೇ ಸವರ್ಣೀಯರ ಪಶ್ಚಾತ್ತಾಪ ಸಹಿತ ಸಹಾನುಭೂತಿಯನ್ನೂ ಒಂದೇ ಪಾಕದಲ್ಲಿ ಬೆರೆಸಬೇಕಾಗುತ್ತದೆ; ಅಂದರೆ ಅಂಬೇಡ್ಕರ್ ಮತ್ತು ಗಾಂಧಿ ಒಂದೇ ವೇದಿಕೆ ಹಂಚಿಕೊಳ್ಳಬೇಕಾಗುತ್ತದೆ ಎಂದೆಲ್ಲ ಮನವರಿಕೆ ಮಾಡಲೆತ್ನಿಸಿದ್ದೇನೆ. ಆದರೂ ಆ ನನ್ನ ಗೆಳೆಯರು ಜಗ್ಗಿಲ್ಲ. ಗಾಂಧೀಜಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಕೊಡಲು ಒಪ್ಪಲಿಲ್ಲ, ಆದ್ದರಿಂದ ಅವರು ದ್ರೋಹಿ ಎಂಬ ಒಂದೇ ಸೊಲ್ಲು ಹಾಡುತ್ತ ನಿಂತಿದ್ದಾರೆ.

ಈ ವಿಷಯದಲ್ಲಿ ನಾನೂ ಸಾಕಷ್ಟು ಚಿಂತಿಸಿದ್ದೇನೆ. ನನ್ನದೇ ಮಟ್ಟದಲ್ಲಿ ಬರೆದೂ ಇದ್ದೇನೆ. ಆದರೆ ನನಗೂ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿತ್ತೆಂದು ಆತ್ಮವಿಶ್ವಾಸದಿಂದ ಹೇಳಲಾರೆ.
ಇಂಥ ಸಂದಿಗ್ಧದ ಸಮಯದಲ್ಲಿ ರಾಜಮೋಹನ್ ಗಾಂಧಿಯವರ ಈ ಅಪೂರ್ವ ಕಿರುಹೊತ್ತಗೆ ನನ್ನ ಕೈಗೆ ಬಂತು. ಗಾಂಧಿ ಸ್ಮಾರಕ ನಿಧಿಯ ಪರವಾಗಿ ಗೆಳೆಯ ಮಂಗ್ಳೂರ ವಿಜಯ ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಕೊಡುವಂತೆ ಕೇಳಿದರು. ನಾನು ಈ ಕೃತಿಯನ್ನು ಓದುತ್ತಿದ್ದಂತೆಯೇ, ಇಷ್ಟೂ ಕಾಲ ಬಗೆಹರಿಯದೆ ಉಳಿದಿದ್ದ ನನ್ನ ಎಲ್ಲ ಸಂದೇಹಗಳಿಗೂ ಉತ್ತರ ಸಿಕ್ಕು ಆನಂದವಾಯಿತು. ನನ್ನ ಪ್ರಶ್ನೆಗಳೇಕೆ, ಯಾರೇ ಎತ್ತಬಹುದಾದ ಯಾವುದೇ ಪ್ರಶ್ನೆಗೂ ಸಮರ್ಥ ಸಮಜಾಯಿಷಿ ನೀಡಬಲ್ಲ ಅಂತಿಮ ಪುಸ್ತಕವಿದು. ನಿಜಕ್ಕೂ ನನ್ನ ತಿಳಿವನ್ನು ಹಿಗ್ಗಿಸಿದ ಕೃತಿಯಿದು.

ಈ ಪುಸ್ತಕವನ್ನು ಕನ್ನಡಕ್ಕೆ ತರಲು ನನಗೆ ಸಿಕ್ಕಿದ ಅವಕಾಶ ನನಗೆ ಅಪಾರ ಸಂತೋಷವನ್ನು ತಂದಿದೆ. ಅದಕ್ಕಾಗಿಯೇ ಈ ಕೃತಿಯನ್ನು ಅತ್ಯಂತ ಜಾಗರೂಕತೆಯಿಂದ- ಪದ ಪದದ ಅರ್ಥ, ಭಾವ, ಧಾಟಿ- ಯಾವುದಕ್ಕೂ ಚ್ಯುತಿ ಬಾರದಂತೆ ಅನುವಾದಿಸಲು ಯತ್ನಿಸಿದ್ದೇನೆ.

ಪ್ರದೀಪ್ ಮಾಲ್ಗುಡಿ 

ಗಾಂಧಿ ಮತ್ತು ಅಂಬೇಡ್ಕರ್ ಕೃತಿಗಳನ್ನ ಓದದೆ ಅವರ ವಿರೋಧಿಗಳಾದವರು, ಪೂನಾ ಪ್ಯಾಕ್ಟ್ ಕಾರಣಕ್ಕೆ ಗಾಂಧಿಯನ್ನ ಉಗ್ರ ವಿಮರ್ಶೆಗೆ ಒಳಪಡಿಸುವವರು ಓದಬೇಕಾದ ಕೃತಿ.

ಗಾಂಧಿ ಅನುಪಸ್ಥಿತಿಯಲ್ಲಿ ಅವರ ಚಿಂತನೆಗಳನ್ನು ಅರಿಯಲು ಅನುವು ಮಾಡಿಕೊಡುವ ಈ ಸಣ್ಣ ಪುಸ್ತಕದಲ್ಲಿ, ಪುಟಪುಟವು ಖಚಿತ ಮತ್ತು ನಂಬಲರ್ಹ ದಾಖಲೆಗಳೊಂದಿಗೆ ರಾಜಮೋಹನ್ ಗಾಂಧಿಯವರು ವಾದಿಸುತ್ತಾರೆ.

ನನ್ನ ತಲೆಮಾರಿನ ಗಾಂಧಿ ವಿರುದ್ಧ ಆಪಾದನೆಗಳ ಸುರಿಮಳೆ ಸುರಿಸಿದವರನ್ನು ಕನ್ವಿನ್ಸ್ ಮಾಡಲು ನಾನು ಪಟ್ಟ ಪ್ರಯತ್ನವನ್ನ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಕೃತಿ ನೆನಪಿಸಿದೆ.

ದೈಹಿಕ ಶ್ರಮವಿಲ್ಲದ ದುಡಿಮೆ ಅನೈತಿಕ ಎಂದ ಗಾಂಧಿ ಮೇಲ್ವರ್ಗದವರ ಶತೃಗಳಾದರೆ, ಪೂನಾ ಪ್ಯಾಕ್ಟ್ ಮತ್ತು ಅಂಬೇಡ್ಕರ್ ಅವ್ರ What Congress and Gandhi have done to the Untouchables; Mr. Gandhi and the Emancipation of the Untouchables ಕೃತಿಯ ಕಾರಣಕ್ಕೆ ದಲಿತ ಸಮುದಾಯದವರು ಗಾಂಧಿಯವರನ್ನು ವಿರೋಧಿಸುತ್ತಿದ್ದಾರೆ.

ಈ ಎರಡೂ ವರ್ಗಕ್ಕೆ ಸೇರಿದವರು ಈ ಕೃತಿಯನ್ನ ಓದಬೇಕು. ಇದನ್ನು ಅನುವಾದಿಸಿದ, ಅನೇಕ ವಿಷಯಗಳಲ್ಲಿ ಗುರುಸಮಾನರಾದ ಎನ್.ಎಸ್. ಶಂಕರ್ ಅವರಿಗೆ ಅಭಿನಂದನೆ ಮತ್ತು ಧನ್ಯವಾದಗಳು

‍ಲೇಖಕರು Admin

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: