ಹಂಗಾಮದಿಂದ ಹೆಕ್ಕಿದ್ದು
ಗಾನಾ ಜೋಯ್ಸ್
ಇದ್ದಕ್ಕಿದ್ದ ಹಾಗೇ ಒಂದಿನ ಅಮ್ಮ ಗಂಭೀರ ದನಿಯಲ್ಲಿ ಗದರಿದಳು. “ಇನ್ಮೇಲೆ ನೀನು ಅವನ ಜತೆ ಬೆಟ್ಟ, ಗುಡ್ಡ, ಕೆರೆ ಅಂತೆಲ್ಲಾ ಅಲೆಯೋದೇನೂ ಬೇಕಾಗಿಲ್ಲ” ಅಂತ. ನಾನೂ ಲೆಕ್ಕ ಹಾಕಿದೆ. ನೆರೆದು ಆಗಲೇ ಐದು ವರ್ಷ ಆಗಿಹೋಗಿತ್ತು. ಅಮ್ಮ ಅದ್ಯಾವ ಬೋಧಿವೃಕ್ಷದ ಕೆಳಗೆ ಕುಂತೆದ್ದು ಬಂದಿದ್ದಳೋ, ಇದ್ದಕ್ಕಿದ್ದ ಹಾಗೇ ಜ್ಞಾನೋದಯವಾಗಿತ್ತು. ನನ್ನ-ಅವನ ಮಧ್ಯದ ಸಲಿಗೆ ಅವಳಿಗೆ ಬೇರೇನೂ ಚಾಡಿ ಹೇಳಿದಂತಿತ್ತು.
ಕಳ್ಳ ಚಂದ್ರನಿಲ್ಲದ ಕದ್ದಿಂಗಳ ರಾತ್ರಿಗಳು, ಬಾನು ಕಾವಣ ಹೊಚ್ಚಿ ಹೂ-ಲತೆಗಳಿಗೆ ಮುತ್ತಿಕ್ಕುವ ಮುಂಜಾವಗಳು, ಮಳೆಗಾಲದ ದಭದಭ, ಯಕ್ಷಗಾನಗಳೆಲ್ಲವೂ ನಮಗೆ ಈವರೆಗೂ ಜತೆಯಾಗಿ ನಿಂತಿದ್ದವು. ಗುಟ್ಟು ಮುಚ್ಚಿಟ್ಟುಕೊಂಡಿದ್ದವು.
ಅಮ್ಮ, ಇಷ್ಟು ದಿನ ಸುಮ್ಮಗಿದ್ದವಳು ಹಿಂಗ್ಯಾಕೆ ಅಂದುಬಿಟ್ಲು? ಅದ್ಯಾಕೋ, ಅಮ್ಮ ಹಾಗಂದಾಗಿಂದ ಅಪ್ಪನ ಮೂತಿ ಸಣ್ಣಗಾಗಿತ್ತು. ಮೂರೊತ್ತೂ ತಂಬಾಕು ನುರಿಯಲು ಶುರು ಹಚ್ಚಿದ್ದ. ಇದ್ದೊಬ್ಬ ತಂಗಿಯ ಮಗ, ಗಂಡು ಹುಟ್ಟಿಲ್ಲದ ಮನೆಗೆ ಅಳಿಯನಾಗಿ ಬರಲಿ ಅನ್ನೋ ಆಸೆ ಹೊತ್ತಿದ್ದ ಅಪ್ಪ-ನನ್ನಾಸೆಗೂ ದನಿಯಾಗುವನೆಂದುಕೊಂಡೆ. ಉಹೂಂ. ಅಂವ ಅಮ್ಮನ ಬಾಯಿಗೆ ಹೆದರಿ ಕುಕ್ಕರಗಾಲಲ್ಲಿ ಕುಂತು ಎಲೆ-ಅಡಿಕೆ ಜಗೀತಾ ಇದ್ದುಬಿಟ್ಟ. ಅವನೆಂತಾ ಗಂಡಸೇ? ನಾನೇ ಖುದ್ದು ನನ್ನ ಹುಡುಗನಿಗೆ “ನಡಿ ಓಡಿ ಹೋಗುವಾ” ಅಂದರೆ, ಕಾಲೂ ಕದಲಿಸದೇ ನಿಂತುಬಿಟ್ಟ ಅವ. ಅವನೂ ಒಬ್ಬ ಗಂಡಸೇನೇ?
ಇಪ್ಪತ್ಮೂರು ವರ್ಷಗಳಿಂದಲೂ ಕೊಟ್ಟಿಗೆಗೆ ಕಲಗಚ್ಚಿಡುತ್ತಾ, ಮುರು ಬೇಯಿಸ್ತಾ, ಆಳು-ಕಾಳುಗಳಿಗೆ ಮಾಡಿ ಒಟ್ಟುತ್ತಾ, ಅಡಿಕೆ ಸುಲ್ತ ಅಂತೆಲ್ಲಾ ಸೆರಗು ಕಟ್ಟಿಕೊಂಡು ಓಡಾಡ್ತಾ ಪರದಾಡ್ತಿದ್ದ ಅಮ್ಮ, ಈ ಗಂಡಸರಲ್ಲದವರ ತೆಕ್ಕೆಯಲ್ಲಿ ನನ್ನ ಹಾಕಲು ಹಿಂಜರಿದಳೇನೋ. ಅದಕ್ಕೇ ಇರಬೇಕು, ಅವಳು “ಅಮೆರಿಕಾ ಇಂಜಿನಿಯರ್ರು” ಹುಡುಕಿದ್ದು!
ಇದೀಗ ಅಮೆರಿಕಾ. ಹೊಸ ಗಂಡು-ಗಂಡ! ಹೊಸ ಹಸಿರು. ಹೊಸ ಥರದ ಚಳಿ. ಹೊಸ ಗಾಳಿ. ಆದರೆ ಅದ್ಯಾವುದಕ್ಕೂ ಜೀವವಿಲ್ಲವೇ ಗೆಳತೀ. ಅದ್ಯಾವುದೂ ನನ್ನ ಮಲೆನಾಡಾಗಲು ಸಾಧ್ಯವಿಲ್ಲ. ಡಾಲರುಗಟ್ಟಲೆ ತಂದು ಸುರಿದು, ಪಿಜ್ಜಾ ತಿನ್ನಿಸುವ, ಶಾಪಿಂಗ್ ಮಾಡಿಸುವ ಇವ ಕೂಡಾ ನನ್ನವನೆನಿಸೋದೇ ಇಲ್ಲ.
ಶ್! ಹೇಳ್ತೀನಿ ಕೇಳು… ಗಂಡಸಾಗಲು ಪರದಾಡಿದ ಆ ನನ್ನ ಹುಡುಗನ ಮರೆಯಲಾಗುತ್ತಿಲ್ಲ!


0 Comments