ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಜಿ, ಉಪ್ಪಿನಕಾಯಿ, ಮೀನು, ಕೊಬ್ಬರಿ ಎಣ್ಣೆಯ ಸುಖದ ಹಾಗೆಯೇ ಇರುವಂತದ್ದು ಯಕ್ಷಗಾನ..

ನಮ್ಮೂರಿನ ಜಗನ್ನಾಥ ಆಚಾರಿಯವರು ತಾನು ದೊಡ್ಡ ಮದ್ದಳೆಗಾರನೆಂದೇನು ತಿಳಿದುಕೊಂಡಿರಲಿಲ್ಲ. ಅವರು ಯಾವ ಸೀಮೆಯ ಕೀರ್ತಿ ಪತಾಕೆಯನ್ನೂ ಪ್ರಶಸ್ತಿಯನ್ನೂ ಬೇಡುವವರಲ್ಲ, ಊರಿನ ನಾಲ್ಕು, ಜನರು “ಆಚಾರ್ಯರ ಮದ್ದಳೆ ಪೆಟ್ಟು ಅಡ್ಡಿಲ್ಲ, ಒಳ್ಳೆ ಆಟ”, ಇಷ್ಟು ಹೇಳಿದರೆ ಸಾಕು ಜೀವಪೂರ್ತಿ ತೃಪ್ತಿಪಟ್ಟುಕೊಳ್ಳುವಂತಹ ಜೀವ.

ಮನೆಯಲ್ಲಿ ಮರದ ಕೆಲಸ ಮಾಡುವಾಗ ಪದ ಹೇಳಿಕೊಂಡು, ಮರದ ಹಲಗೆ ಮೇಲೆ ಸುಮ್ಮನೆ ತಾಳದ ಎರಡು ಪೆಟ್ಟು ಬಡಿದುಕೊಂಡಿರುವ ನೆಮ್ಮದಿಯ ಜೀವನ ಅವರದು. ಊರಿನ ದೇವಸ್ಥಾನದ ಯಕ್ಷಗಾನ ಸಂಘದಲ್ಲಿ, ಚಂಡೆ, ಮದ್ದಳೆ ಹಿಡಿದು ಓಡಾಡುತ್ತಿದ್ದ ಹಿರಿಯ ಮದ್ದಳೆಗಾರರು. ನಮ್ಮ ಮನೆಯ ಎರಡು ಗದ್ದೆಯ ಆಚೆ ಒಬ್ಬರು ಭಾಗವತರ ಮನೆಯಿತ್ತು. ಸೋಮೇಶ್ವರದ ಹತ್ತಿರದ ಮಡಾಮಕ್ಕಿಯವರು. ಅಲ್ಲಲ್ಲಿ ಹವ್ಯಾಸಿ ಮೇಳಗಳಲ್ಲಿ ಭಾಗವತಿಕೆ ಮಾಡುತ್ತಿದ್ದರು.

avadhi-column-nagashree- horiz-editedಮಳೆಗಾಲ ಬಂತೆಂದರೆ ಸಾಕು, ನಮ್ಮ ಮನೆಯಲ್ಲಿ ಜಗನ್ನಾಥ ಆಚಾರಿಯ ಮದ್ದಳೆ, ಮಡಾಮಕ್ಕಿ ಭಾಗವತರದು ಪದ ಶುರುವಾಗುತ್ತಿತ್ತು. ಮದ್ದಳೆ, ಪದ, ಮತ್ತು ಆ ಜಾಗಟೆ ನಮಗೆ ಎಷ್ಟು ಜೀವ ಕೊಡುತ್ತಿತ್ತು ಎಂದರೆ ಕರೆಂಟಿದ್ದರೂ ಟಿ.ವಿ ಆರಿಸಿ ನಮ್ಮ ಮನೆಗೆ ಬಂದು ಎರಡು ಪದವಾದರೂ ಕೇಳದೆ ಮಲಗದ ಆಸುಪಾಸಿನವರು ಇರಲಿಲ್ಲ. ಭಾಗವತರಿಗೂ ಆಚಾರಿಯವರಿಗೂ ಒಳಗೆ ಪರಮಾತ್ಮ ಸೇರಿದರಂತೂ ಅವರ ಕಂಠ ಮತ್ತೆ ಇವರ ಪೆಟ್ಟು ಇನ್ನೂ ಜೋರಾಗಿರುತ್ತಿತ್ತು.

ಮುಗಿಯದ ಮಳೆ, ದಿನಗಟ್ಟಲೇ ಸೂರ್ಯನನ್ನು ಕಾಣದ ಕರಾವಳಿಗರಿಗೆ ಗಂಜಿ, ಉಪ್ಪಿನಕಾಯಿ, ಮೀನು, ಕೊಬ್ಬರಿ ಎಣ್ಣೆಯ ಸುಖದ ಹಾಗೆಯೇ ಇರುವಂತದ್ದು ಯಕ್ಷಗಾನ. ಮಳೆಗಾಳಕ್ಕೆ ಮುನ್ನುಡಿ ಇಟ್ಟಂತೆ ಮೊನ್ನೆಯಷ್ಟೇ ಪತ್ತನಾಜೆ (ತುಳುನಾಡಿನ ವಿಶೇಷವಾದ ಪತ್ತನಾಜೆ ವೃಷಭ ಮಾಸದ ಹತ್ತನೇ ದಿನ) ಮುಗಿದು ಯಕ್ಷಗಾನ ಮೇಳಗಳೂ ವರ್ಷದ ತಿರುಗಾಟ ಮುಗಿಸಿ ಗೆಜ್ಜೆ ಬಿಚ್ಚಿ ಬಣ್ಣಗಳೆಲ್ಲಾ ಪೆಟ್ಟಿಗೆ ಸೇರಿಕೊಂಡಿದೆ.

ಈಗ ನನ್ನ ಊರಿನ ಜಗನ್ನಾಥ  ಆಚಾರಿ, ಭಾಗವತರಂತವರು, ಮನೆಯಲ್ಲೇ ನಾಲ್ಕು ಪದ ಹೇಳಿಕೊಂಡು,  ಅಲ್ಲಿಲ್ಲಿ ನಡೆಯುವ ತಾಳಮದ್ದಳೆ ಕೇಳಿಕೊಂಡು, ಅಪರೂಪಕ್ಕೆ ಎಲ್ಲಾದರೂ ನಡೆಯುವ ಆಟ ನೋಡಿಕೊಂಡು ಮಳೆಗಾಲ ಕಳೆಯುತ್ತಾರೆ. ಅವಿರತ ಮಳೆಯಲ್ಲಿ ಬೇಸಾಯದ ಕೆಲಸ ಮಾಡುವಾಗ, ಇನ್ಯಾವುದೋ ಹೋಟೆಲಿನ ಅಡುಗೆ ಭಟ್ಟರು, ಕಾದ ಹೆಂಚಲ್ಲಿ ದೋಸೆ ಹುಯ್ಯುವಾಗ, ಎರಡು ಪದ ತಾವೇ ಹಾಡಿಕೊಂಡೋ ಕೇಳಿಕೊಂಡೋ ಇರದಿದ್ದರೆ ಇಲ್ಲಿ ಜನರಿಗೆ ಸಮಾಧಾನವಿರುವುದಿಲ್ಲ.

ರಾತ್ರಿ ಆಟವಿದ್ದರೆ, ಜಗನ್ನಾಥ ಆಚಾರಿಯವರು ಬೆಳಗ್ಗೆಯೇ ಮನೆಗೆ ಬಂದು, “ಇವತ್ತು ಆಟ ಉಂಟು, ಮಧ್ಯಾಹ್ನ ಊಟ ಮುಗಿಸಿ ನಿದ್ದೆ ಮಾಡಿಯಮ್ಮ, ನಿಮ್ಮ ಅಪ್ಪನದೇ ವೇಷ ಉಂಟಲ್ಲಾ, ನಾನು ಕರ್ಕೊಂಡು ಹೋಗ್ತೇನೆ,” ಎಂದು ಹೇಳುವ ಸುಖ ಎಲ್ಲೋ ಕಳೆದು ಹೋಗಿದೆ ಅನ್ನಿಸುತ್ತಿದೆ. ಅವರು ಮನೆಗೆ ಹೋಗುವ ಮೊದಲು ಅಪ್ಪನ ಬಣ್ಣದ ಪೆಟ್ಟಿಗೆಯಲ್ಲಿ ಸಪೇತ ಎನ್ನುವ ಬಿಳಿ ಬಣ್ಣ, ಇಂಗ್ಲಿಕಾ ಎಂಬ ಕೆಂಪು ಬಣ್ಣ , ಈಗಿನ ಕಾಲದ ಕಾಡಿಗೆಯ ಬದಲು ಕಪ್ಪು ಬಣ್ಣದ ಎಣ್ಣೆ ಮಸಿ ಮತ್ತು ಹಳದಿ ಬಣ್ಣಗಳನ್ನೆಲ್ಲಾ ರೆಡಿ ಮಾಡಿಕೊಂಡು, ಡಾಬು, ಗುಂಡುಮಣಿ ಸರ, ಕೇದಗೆ, ವಂಕಿಯಂತಹ ಆಭರಣೆಗಳೆಲ್ಲವನ್ನೂ ಒಂದು ರೌಂಡು ಬಿಸಿಲಿಗಿಟ್ಟು ಅದನ್ನು ಮತ್ತೆ ಪೆಟ್ಟಿಗೆಗೆ ತುಂಬಿಸುತ್ತಿದ್ದರು. ಆಟಕ್ಕೆ ಹೋಗುವ ಮೊದಲು ಆವತ್ತಿನ ಪ್ರಸಂಗದ ಇಡೀ ಕಥೆ ಹೇಳುತ್ತಿದ್ದರು. ಒಮ್ಮೆ ಮಂದರತಿ, ನೀಲರತಿ, ನಾಗರತಿ ಚಾರುರತಿ, , ದೇವರತಿ ಎಂಬ ಐದು ನಾಗ ಸುಂದರಿಯರ ಕತೆ ಹೇಳಿದ್ದರು. ಇದನ್ನೂ ಈಗಲೂ ಕ್ಷೇತ್ರ ಮಹಾತ್ಮೆ ಎಂದು ಮೇಳಗಳು ಆಡುತ್ತಾರೆ.  ಅದರಲ್ಲಿ ಅವರು ಹೇಳಿದ ನೀಲರತಿಯ ಕಥೆ ಹೀಗಿದೆ:

ಒಮ್ಮೆ ದಟ್ಟ ಕಾಡೊಂದರಲ್ಲಿ ಬೆಂಕಿ ಬಿದ್ದು, ಬಿದಿರ ಮೆಳೆಗಳಲ್ಲಿ ಪಂಚ ನಾಗ ಸುಂದರಿಯರು ಸಿಲುಕಿಕೊಂಡಿದ್ದರಂತೆ. ಆ ಹೊತ್ತಲ್ಲಿ ಅಲ್ಲೊಬ್ಬ ಬ್ರಾಹ್ಮಣನನ್ನು ನೋಡಿ, ಈ ಸರ್ಪಗಳು, ಹೇಗಾದರೂ ನಮ್ಮನ್ನು ಇಲ್ಲಿಂದ ರಕ್ಷಿಸಿ, ನಾವು ನಿನ್ನನ್ನು ಉದ್ದಾರ ಮಾಡುತ್ತೇವೆ ಅಂತ ಹೇಳಿದರಂತೆ. ಆಗ ಬ್ರಾಹ್ಮಣ ಆ ಐದೂ ಸರ್ಪಗಳನ್ನು ಬೈರಾಸ ಒಂದರಲ್ಲಿ ಕಟ್ಟಿ ತಲೆಯ ಮೇಲಿಟ್ಟುಕೊಂಡು ಹೋಗುತ್ತಿದ್ದಾಗ ಒಂದೊಂದೇ ಸರ್ಪಕನ್ನಿಕೆಯರು ಆ ಬುಟ್ಟಿಯಿಂದ ಜಾರಿ ಹೋಗುತ್ತಾರೆಂತೆ ತನ್ನ ಪಾಡು ಇಷ್ಟೇ ಎಂದುಕೊಂಡು, ಈ  ಸರ್ಪಸುಂದರಿಯರ ಮೇಲೆ ಕೋಪ ಮಾಡಿಕೊಳ್ಳದೆ ಆ ಬ್ರಾಹ್ಮಣ ಸುಮ್ಮನೆ ನಡೆಯುತ್ತಿದ್ದ.

14ಆದರೆ  ಕೊನೆಗೆ ಉಳಿದ ನೀಲರತಿಯು ತಾನು ಹಾಗೆ ಮಾಡುವುದಿಲ್ಲವೆಂದು, ಹೇಳಿ, ಈ ಊರಿನ ರಾಜನ ಮಗಳಿಗೆ ನಾನು ಕಚ್ಚುತ್ತೇನೆ. ಯಾರು ಏನೇ ಔಷಧ ನೀಡಿದರೂ ಅವಳಿಗೆ ಗುಣವಾಗುವುದಿಲ್ಲ, ಆ ಹೊತ್ತಲ್ಲಿ ನೀನು ಬಂದು ಮದ್ದು ಕೊಟ್ಟರೆ ಗುಣವಾಗುತ್ತಾಳೆ. ನಿನಗೆ ಒಳ್ಳೆದಾಗುತ್ತೆ ಎನ್ನುತ್ತಾಳಂತೆ. ಅಂತೆಯೇ ಯುವರಾಣಿಗೆ ಸರ್ಪಕಚ್ಚಿ ಯಾರ ಮದ್ದೂ ನಡೆಯುವುದಿಲ್ಲ. ಕೊನೆಗೆ ರಾಜ, ಮಗಳಿಗೆ ಗುಣಪಡಿಸಿದವರಿಗೆ ಅರ್ಧ ರಾಜ್ಯ ಕೊಡುವುದಾಗಿ ಡಂಗುರ ಸಾರುತ್ತಾನೆ. ಆಗ ಬ್ರಾಹ್ಮಣ ಮದ್ದು ಕೊಟ್ಟು, ಅವಳು ಗುಣಮುಖಳಾಗಿ ಬ್ರಾಹ್ಮಣನಿಗೆ ಅರ್ಧ ರಾಜ್ಯ ದೊರೆಯುತ್ತದೆ.

ಹೀಗೆ ದೇವ ಮಾನವರ ಕಥೆಗಳು, ಕತ್ತಲು, ಬೆಳಕು, ರಂಗಸ್ಥಳವೆಂಬ ವಿಚಿತ್ರ ಲೋಕದಲ್ಲಿ ಯಾವುದೋ ಕಾಲದ ರಾಜಮಹಾರಾಜ ರಕ್ಕಸರ ರಾಜ್ಯ. ರಂಗಸ್ಥಳದ ಮುಂದೆ ದೈವದ ಹಾಗೆ ಕಾಣುವ ಕೃಷ್ಣ ದೇವೇಂದ್ರರು ಅಲ್ಲೇ ರಂಗಸ್ಥಳದ ಹಿಂದೆ ಟೀ ಕುಡಿವುದೋ, ಬೀಡಿ ಸೇದುವುದನ್ನೋ ನೋಡುವಾಗ ನನಗೆ ಎಲ್ಲಿದ್ದೇನೆ, ಇದೆಲ್ಲಾ ಯಾವ ಲೋಕದ ಕಥೆಗಳು ಗೊತ್ತಾಗದೆ ಮನುಷ್ಯಲೋಕ ಮತ್ತು ದೇವಲೋಕಗಳು ಕಲಸುಮೇಲೋಗರವಾಗುತ್ತಿತ್ತು. ನನ್ನ ಅಪ್ಪ ಹೇಳುತ್ತಿದ್ದ ಅನುಭವವೊಂದು ನೆನೆಪಾಗುತ್ತಿದೆ. ಸಾಮಾನ್ಯವಾಗಿ ವೇಷಧಾರಿಗಳು ಒಮ್ಮೆ ರಂಗಸ್ಥಳ ಪ್ರವೇಶ ಮಾಡಿ ಮತ್ತೆ ಹೋಗಲು ಅರ್ಧ ಮುಕ್ಕಾಲು ಘಂಟೆ ಇದ್ದರೆ ಸಣ್ಣ ನಿದ್ದೆ ಮಾಡುತ್ತಿದ್ದರಂತೆ.

ನಿದ್ದೆ ಮಾಡಿದವನನ್ನು ಚೌಕಿಯಲ್ಲಿದ್ದವರು ಕಾಲು ಗಂಟೆ ಬೇಗವೇ ಎಬ್ಬಿಸುತ್ತಿದ್ದರು. ನಿದ್ದೆ ಹೋದದ್ದು ರಕ್ಕಸ ವೇಷಧಾರಿ ಎಂದಿಟ್ಟುಕೊಳ್ಳೋಣ. ಹಾಗೆ ಎಬ್ಬಿಸಿದಾಗ, ಅವನು ಗಾಬರಿಯಾಗಿ ಎರ್ರಾಬಿರ್ರಿ ಎದ್ದು ಹೋಹೋ ಅಂತ ಆರ್ಭಟ ಕೊಡುತ್ತಾ ಸೀದಾ ರಂಗಸ್ಥಳಕ್ಕೆ ಓಡುತ್ತಿದ್ದನಂತೆ. ಕಾಲು ಗಂಟೆ ಮುಂಚಿತವಾಗಿ ಬಂದದ್ದರಿಂದ ಬೇರೆ ಸನ್ನಿವೇಷಗಳು ನಡೆಯುತ್ತಿರುತ್ತದೆ. ಆಗ ಭಾಗವತರಿಗೆ ಸಿಟ್ಟು ಬಂದು, ಆಗಿನ ಪ್ರಸಿದ್ಧ ಅಗರಿ ಭಾಗವತರು,  ‘ಎಂಚಿ ಅಪ್ಪೆ ಸಾವು ನಿನ್ನ’ ಎಂದು ಗಟ್ಟಿಯಾಗಿ ಮೈಕಿನಲ್ಲಿ ಎಲ್ಲರಿಗೂ ಕೇಳಿಸುವ ಹಾಗೆ ಹೇಳಿ ವೇಷಧಾರಿಗೆ ಗಾಬರಿಯಾಗಿಸುತ್ತಿದ್ದರು. ಸಭಿಕರಿಗೆ ಮಾತ್ರ ನಗುವೋ ನಗು. ಮರುದಿನ ಊರಲ್ಲಿ ತುಂಡು ಬೀಡಿ ಸೇದುತ್ತಾ ಇದೇ ಜೋಕು ಹೇಳಿಕೊಂಡು ಕಳೆದ ರಾತ್ರಿಯ ಸೊಬಗನ್ನು ಇನ್ನೊಮ್ಮೆ ಸವಿಯುತ್ತಾರೆ.

ಈಗ ನೋಡಿದರೆ ಅಂತಹ ಊರುಗಳು, ಅಂತಹ ವೇಷಧಾರಿಗಳು, ಅಂತಹ ಭಾಗವತರು, ಆ ಕಾಲದ ಮಳೆಗಾಲ, ಅಂದಿನ ಮನುಷ್ಯರೆಲ್ಲಾ ಎಂದಿಗೋ ಸೇರಿದ ಕಥೆಗಳಂತೆ ಕೇಳಿಸುತ್ತಿದೆ.

ಇದೆಲ್ಲಾ ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನ ಮಾತಾದರೆ, ತೀರಾ ಇತ್ತೀಚೆಗೆ ಊರಲ್ಲಿ ಒಂದು ನೋಡಲು ಹೋಗಿದ್ದೆ. ಆಟವಿದ್ದದ್ದು ಮಂದರ್ತಿಯ ಸಮೀಪದ ಆಗ ಹೇಳಿದ ಕಥೆಯಲ್ಲಿ ಬರುವ ನಾಗೇರ್ತಿಯಲ್ಲಿ (ನಾಗರತಿ). ನಾಗೇರ್ತಿಯನ್ನು ಹಳ್ಳಿ ಎಂದೇ ಕರೆಯಬಹುದು. ಅಂತಹ ಆಧುನಿಕತೆ ಸುಳಿಯದಂತಹ ನಾನು ಕತ್ತಲೆಯಲ್ಲಿ ನೋಡುವಾಗಲೂ ಬಹಳ ಸುಂದರವಾಗಿದ್ದ ಒಂದು ಹಳ್ಳಿ. ಅಲ್ಲಿಯ ಜನರು ಇನ್ನೂ ಜಾತ್ರೆಗೆ ಬಂದು ಉತ್ಸವನೋಡಿ, ಊಟ ಮಾಡಿಕೊಂಡು ಇಡೀ ರಾತ್ರಿ ಕುಳಿತು ಆಟ ನೋಡುತ್ತಾರೆ..

ಊರು ತುಂಬಾ ಜಗಮಗಿಸುವ ಬೆಳಕು, ಜನರೇಟರ್, ಸಂತೆ, ಮಿಠಾಯಿ ಅಂಗಡಿ, ಚುರುಮುರಿ, ಕಡ್ಲೇಕಾಯಿ ಅಂಗಡೀಗಳು, ಟಿಪಿಕಲ್ ಹಳ್ಳಿಯ ಜಾತ್ರೆಯನ್ನು ನೆನೆಪಿಸುತ್ತಿದ್ದವು. ಯಕ್ಷಗಾನ ಆಡಿಸುವವರೇ ವಡೆ, ಪಕೋಡ, ಬೋಂಡ, ಜೊತೆಗೆ ಟೀಯನ್ನೂ ನೀಡುವ ಪರಿಪಾಠ ಬೇರೆ ಈಗೀಗ ಶುರುವಾಗಿದೆ .”ಅವನು ಬೋಂಡಾ ಕೊಟ್ಟನಾ, ನಮ್ಮ ಆಟಕ್ಕೆ ಗೋಬಿ ಮಂಚೂರಿ ಇರಲಿ” ಎಂದು ಕಾಂಪಿಟೀಶನ್ ಕೂಡಾ ಇರುತ್ತದೆ.

18ಉತ್ಸವದ ಪ್ರಯುಕ್ತ ಅಲ್ಲಿ ಪ್ರಸಿದ್ಧ ಮೇಳದ ಒಂದು ಆಟವಿತ್ತು. ಆಟದ ಚೌಕಿಗೆ ಹೊದರೆ ಟೆಂಟಿನ ಒಳಗೆ ಕಲಾವಿದರು ಬಣ್ಣ ಹಚ್ಚುತ್ತಿದ್ದರು. ಆ ಬಣ್ಣದ ಪರಿಮಳ, ಅವರು ಹಾಕುವ ಎಲೆಅಡಿಕೆ, ಪಾನ್ ಪರಾಗ್ ಗಳ ಕಮಟು ವಾಸನೆ, ಅಲ್ಲಲ್ಲೇ ಟೀ ಕುಡಿದಿಟ್ಟ ಲೋಟೆಗಳು, ಚೌಕಿಯಲ್ಲಿ ಗಣಪತಿ ಪೂಜೆಯಾಗುವಾಗ ಚಪ್ಪಲಿ ಕಳಚಿ ಬಂದು ಕೈಮುಗಿದಿದ್ದ ಊರಿನ ಜನರು ಎಲ್ಲವೂ ಒಮ್ಮೆಲೆ ಮೈ ಜುಮ್ಮೆನಿಸುವಂತಿತ್ತು. ಎಷ್ಟೋ ದಿನಗಳ ನಂತರ ನನಗೆ ಬಯಲಾಟ ನೋಡಿದ ಸುಖಕ್ಕೆ, ಆ ಚೆಂಡೆಯ ಪೆಟ್ಟಿಗೆ ನನಗೆ ಭಾವೋದ್ವೇಗ ಆಗಿದ್ದೂ ಸುಳ್ಳಲ್ಲ. ಮತ್ತೆ ಒಂದು ಅವ್ಯಕ್ತ ಲೋಕಕ್ಕೆ ಹೋದಂತೆ, ಆ ಇರುಳು ಕಳೆದ ನಂತರ ಆ ಊರು ಇರುವುದೇ ಸುಳ್ಳು ಎನ್ನಿಸುವಂತಿತ್ತು.

ನಾಗೇರ್ತಿಯಲ್ಲಿ ಬೆಳಗ್ಗೆ ಮಂಗಳ ಹಾಡುವ ತನಕವೂ ಒಬ್ಬರು ವಯಸ್ಸಾದ ಹಿರಿಯರು ಮರವೊಂದರ ಬಳಿ ಕುರ್ಚಿ ಹಾಕಿಕೊಂಡು ಗೊರಕೆ ಹೊಡೆಯುತ್ತಿದ್ದರು. ಆಗಾಗ ಬಣ್ಣದ ವೇಷಗಳು ಬಂದು ರಾಳ ಹಾಕುವಾಗ ಅವರಿಗೆ ಎಚ್ಚರವಾಗುತ್ತಿತ್ತು. ಮತ್ತೆ ಮಲಗಿ ಮತ್ತೆ ಎದ್ದು ಅಲ್ಲಿ ಹಾಗೆಯೇ ಕುಳಿತಿದ್ದರು. ಅಂದು ನಿದ್ದೆಯಲ್ಲೂ ಅವರು ಇಡಿ ಆಟ ನೋಡಿರುತ್ತಾರೆ. ಅದೆಲ್ಲವೂ ಅವರ ಒಳಗೆ ಇಳಿದಿರುತ್ತದೆ ಆ ರಾತ್ರಿ ಅವರು ಅಲ್ಲಿ ಕುಳಿತಿರದಿದ್ದರೆ ಅವರಿಗೆ ಮನೆಯಲ್ಲಿ ನಿದ್ದೆ ಬರುತ್ತಿರಲಿಲ್ಲ.ಅವರ ಆನಂದಮಯ ಕೋಶವು ತೃಪ್ತಿಹೊಂದುತ್ತಿರಲಿಲ್ಲ,

ರಾತ್ರಿಯ ನಿದ್ದೆಯಂತೆ, ಹಸಿದಾಗ ಉಣ್ಣುವಂತೆ, ಆಟ ನಡೆವ ಜಾಗದಲ್ಲಿರುವುದು ಅವರ ಬದುಕಿನ ಅಲಿಖಿತ ನಿಯಮ. ಆದರೆ ಅವರಿಗಾಗುವ ಸಂವೇದನೆಗಳು ಅವರಿಗೂ ಅರಿಯದೆ ಅವರ ಬದುಕಿನ ಅವಿಭಾಜ್ಯ ಅಂಗವಾದ ಯಕ್ಷಗಾನ ಎಂಬ ಮಹೋನ್ನತ ವಿಚಾರವು ಮಗುವೊಂದರ ಪ್ರೀತಿಯ ತಲೆ ನೇವರಿಕೆಯಂತೆಯೇ ಆಗಿರುತ್ತದೆ. ಆ ಕಲೆಯ ವೈಭವ, ಸೌಂದರ್ಯ, ತಪ್ಪುಒಪ್ಪುಗಳೆಲ್ಲವೂ ಅವರದ್ದೇ ಆಗಿಹೋಗಿದೆ. ಜಗನ್ನಾಥ ಆಚಾರಿಯಂತವರು, ಮಡಾಮಕ್ಕಿಯ ಭಾಗವತರು, ನಾಗೇರ್ತಿಯಲ್ಲಿ ನಿದ್ದೆ ಹೋದ ಹಿರಿಯರಂತವರೆಲ್ಲರೂ ಹೀಗೇ ಇರುತ್ತಾರೆ.

ಮೊನ್ನೆ ಊರಿಗೆ ಹೋಗಿದ್ದಾಗ ಜಗನ್ನಾಥ ಆಚಾರಿಗಳು ಸಿಕ್ಕಿದ್ದರು. ಆವತ್ತು ರಾತ್ರಿ ಆಟ ನೋಡಲು ನಾನೂ ಅಪ್ಪ ಅವರ ಜೊತೆ ಹೋಗಿದ್ದೆವು. ರಾತ್ರಿಯ ಊಟ ಟಾರ್ಚ್ ಲೈಟಲ್ಲಿ ನಾಯಿಬೊಗಳುವುದನ್ನು ಲೆಕ್ಕಿಸದೆ ಹಚಾ ಹಚಾ ಎನ್ನುತ್ತಾ ನಡಕೊಂಡು ಹೋಗಿದ್ದೆವು. ಆಚಾರಿಗಳಂತು ಪ್ರತಿಸಲ ಸಿಕ್ಕಿದಾಗಲೂ ಅದೇ ಅದೇ ಡೈಲಾಗು, ಅದೇ ನೆನಪನ್ನು ಹೇಳುತ್ತಿರುತ್ತಾರೆ, ಒಂದೂವರೆ ವರುಷದ ನನ್ನ ಮಗಳು, “ಅಮ್ಮಾ ಆಟ, ಆಟ.. ದಿದ್ದಗ ದಿದ್ದಗ…” ಎಂದು ತೊದಲು ನುಡಿವಾಗ ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿ, “ಮಗಾ, ನಿಮ್ಮ ಅಜ್ಜ ವೇಷ ಮಾಡಿದ್ದಾರೆ, ಅಮ್ಮ ವೇಷ ಮಾಡಿದ್ದಾರೆ…” ಎಂದು ವಿಪರೀತ ಪ್ರೀತಿಯಲ್ಲಿ ನನಗೆ ಹೇಳಿದ್ದನ್ನೇ ಮಗುವಿಗೂ ಅಷ್ಟುದ್ದ ಕಥೆ ಹೇಳುತ್ತಿದ್ದರು.

ಅವರಿಬ್ಬರೂ ತಮಗೆ ಅರ್ಥವಾಗುವಂತೆ ಒಬ್ಬರಿಗೊಬ್ಬರು ನಗುತ್ತಾ ಏನೋ ಮಾತಾಡುತ್ತಿದ್ದರು. ಈಗ ಪತ್ತನಾಜೆ ಮುಗಿದು ಇಲ್ಲಿ ಮಳೆ ಬರುವಾಗ ಇವರೆಲ್ಲರೂ ನೆನಪಾಗುತ್ತಿದ್ದಾರೆ. ಇಂತಹ ಯಾವುದೇ ಹಳ್ಳಿಯಿರಲಿ, ಯಕ್ಷಗಾನದಂತಹ ಯಾವುದೇ ಕಲೆಯಿರಲಿ ಆಚಾರಿಯಂತವರು, ಭಾಗವರಂತವರು ನನ್ನ ಮಗಳಿಗೂ ಸಿಕ್ಕಿ ನಾಗೇರ್ತಿಯಂತಹ ಊರೇ ಎಲ್ಲವನ್ನೂ ಹೇಳುವಂತಾಗಲಿ ಅನ್ನಿಸುತ್ತಿದೆ.

2012 02 18_2561

2012 02 18_2529

22

19

‍ಲೇಖಕರು Admin

23 June, 2016

14 Comments

  1. ರಾದ

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಮೈಸೂರಿನ ಕಡೆಯವರಿಗೆ ಕರಾವಳಿಯ ಪ್ರತೀ ಕಥೆಯೂ ಇಷ್ಟವಾಗುತ್ತೆ. ಯಕ್ಷಗಾನ, ಮದ್ದಳೆಯ ರೀತಿ ನೀತಿಗಳನ್ನು ನಮಗೆ ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು.

  2. sindhu

    ನಾಗಶ್ರೀ

    ತುಂಬ ಚೆಂದಾಗಿ ಬಂದಿದೆ ಈ ಅಂಕಣ. ನಾಗೇರ್ತಿಯ ಆಟಕ್ಕೆ ಹೋಗಿ ಬಂದಂತಾಯಿತು.
    ನಾನು ಸಹ ನನ್ನ ಬಾಲ್ಯದ ಯಕ್ಷಗಾನ ವೀಕ್ಷಣೆಯನ್ನು ಮಿಸ್ ಮಾಡುತ್ತಿರುತ್ತೇನೆ. ಆ ಯಕ್ಷಲೋಕವೇ ಬೇರೆ.
    ನಾವಿರುವ ಭೂಮಿಯೇ ಬೇರೆ.
    ಒಂದು ವಿಷಯದಲ್ಲಿ ನಾವು ಧನ್ಯರು. ಈ ಭೂಮಿಗೆ ನಾವು ಗುಪ್ಪು ಹಾರಿ ಬರುವ ಮೊದಲು ಆ ಭೂಮಿಯಲ್ಲಿ ತೊದಲು ಹೆಜ್ಜೆ ಇಟ್ಟಿದ್ದರಿಂದ ಅಲ್ಲಿನ ಫ್ಯಾಂಟಸಿಗಳು ನಮ್ಮ ನೆನಪಿನಲ್ಲಿ ಬೆಚ್ಚಗಿವೆ
    ಮಳೆ ಬಿದ್ದ ಕೂಡಲೇ ಎಲ್ಲ ವೇಷಗಳೂ ಮನಸಿನ ರಂಗಸ್ಥಳದಲ್ಲಿ ಧಿಗಣ ಹಾಕುತ್ತವೆ.

    ಪ್ರೀತಿಯಿಂದ
    ಸಿಂಧು

  3. Anonymous

    Thumba chenagidhe.

  4. Anonymous

    Yakshagana nodidha hage aythu.. nice!!

  5. Anonymous

    Nanu Kannada odhi thumba dina agithu..snehitharu heli eankana odisidhru… inmele nim ankanada pakka reader nanu:-) really great writing..

  6. Anonymous

    Athyuthama Baraha

  7. K.R.B

    ಬರಹ ತುಂಬಾ ಖುಷಿ ಆಯಿತು . ಬಾಲ್ಯದ ದಿನಗಳ ನೆನಪು ಮರುಕಳಿಸಿತು

  8. Anonymous

    Awesome writing.. thank you..
    Prasad BLR

  9. Vidyashankar

    ella OK adre ee haLahaLikeya tone yaake?!

  10. Rajashekhar Joginmane

    ” ಆ ರಾತ್ರಿ ಅವರು ಅಲ್ಲಿ ಕುಳಿತಿರದಿದ್ದರೆ ಅವರಿಗೆ ಮನೆಯಲ್ಲಿ ನಿದ್ದೆ ಬರುತ್ತಿರಲಿಲ್ಲ.ಅವರ ಆನಂದಮಯ ಕೋಶವು ತೃಪ್ತಿಹೊಂದುತ್ತಿರಲಿಲ್ಲ’.. ನಿಜ, ಇಂಥ ಹತ್ತಾರು ಅನುಭವಗಳು ನನಗೂ ಆಗಿವೆ. ಮಕ್ಕಳೂ ಅಷ್ಟೇ. ಆಟಕ್ಕೆ ಹೋಗಿ ನಿದ್ದೆ ಮಾಡದಿದ್ದರೆ ಸಮಾಧಾನವೇ ಇರುವುದಿಲ್ಲ. ಬರಹ ಖುಷಿ ನೀಡಿತು
    -ರಾಜಶೇಖರ ಜೋಗಿನ್ಮನೆ

  11. sharadhi

    ದಿನಗಟ್ಟಲೆ ಮಳೆ!, ಸೂರ್ಯ ಗೋಚರಿಸದ ದಿನಚರಿ! ಮಿಡಿ ಉಪ್ಪಿನ ಕಾಯಿ, ಹಾಗೂ ಕೊಬ್ಬರಿ ಎಣ್ಣೆಯಷ್ಟೇ ಸಹಜ ಸುಖದ್ದು ಮಲೆನಾಡಿಗರಿಗೂ ಯಕ್ಷಗಾನವೇ!. ‘ನಾಗರತಿ’ ಯ ಕುರಿತಾದ ಯಕ್ಷರತಿ ಯ ಬರಹ ಒಂದು ಅವರ್ಣನೀಯ ಓದುವ ಸುಖ ನೀಡಿತು. ಅದರಲ್ಲಿಯೂ ಶುಕ್ರವಾರದ ನಾಕ್ಸ್ವಿಲ್ -ಟೆನ್ನೆಸ್ಸೀ ಯ ದೀರ್ಘ ಸೂರ್ಯನ ಸಾಯಂಕಾಲದಲ್ಲಿ ಒಂದಿಡೀ ವಾರದ ‘ಗೋಳು’ ನೀಗುವ”‘ಕೆಂಪು-ದ್ರವದ ಸಾಂಗತ್ಯ ಸುಖದಲ್ಲಿ ನಿಮ್ಮ (ನಿನ್ನ) ಬರಹ ಓದುವುದು ‘ನಿರ್ವಾಣ’ ಸುಖಕ್ಕೆ ಸಮ!. ಒಳ್ಳೆಯ ಬರಹ. ‘ಹಳಹಳಿ’ ಯಲ್ಲೂ ಸುಖದ ನೆನಪಿದೆ.

    ಯಕ್ಷಗಾನಕ್ಕೆ ರಾತ್ರಿಯೇ ಸೂಕ್ತ!. ಅದು ದಿನದ ಗೋಳು ನೀಗುವ ನಿರ್ವಾಣ ಘಳಿಗೆ!, ಸಂಪೂರ್ಣ ಎಚ್ಚರವೂ ಅಲ್ಲದ , ನಿದ್ದೆಯೂ ಬಾರದ ಕಾಲದಲ್ಲಿ ಯಕ್ಷ ಕಿನ್ನರ-ಕಿನ್ನರಿಯರ “ಕ್ರೀಡೆ” ಒಂದು ಮಾಯಾ ಲೋಕವನ್ನೇ ನಿರ್ಮಾಣ ಮಾಡುವುದು!. ಇಂತಹ ಬರಹಗಳು ಮಾತಷ್ಟು ಬರಲಿ.

  12. ಪ್ರಮೋದ್

    ಹಾಗೇಯೇ ಬಾಲ್ಯಕ್ಕೆ ಹೋಗಿ ಬ೦ದ ಹಾಗಾಯಿತು. ಸೊಗಸಾದ ಲೇಖನ.

  13. Priya Karanth

    Athyuttama lekhana … Baalayadalli ajjaihnottige aata noduthidda nenapugalu marukalisi manassige hita needitu.. thumbaa thanks..

  14. Shama, Nandibetta

    ಬಾಲ್ಯಕ್ಕೆ ಇನ್ನೊಂದು ಸುತ್ತು ಹೊಡೆದು ಬಂದೆ. ಚೆಮಡೆ ಪೆಟ್ಟಿನ ಸದ್ದನ್ನು ಉಸಿರಾಟದಷ್ಟೇ ಸಹಜ ಸುಖವೆಂದು ಭಾಔಇಸುವ ನನ್ನ ಪುಟ್ಟ ಮಗಳು “ಅಮ್ಮಾ ಭರತನಾಟ್ಯ ಕಲೀತೀನಿ ಆದ್ರೆ ಮೊದ್ಲು ಯಕ್ಷಗಾನ ಕ್ಲಾಸಿಗೆ ಸೇರಿಸು” ಅಂದ ಕ್ಷಣಗಳ ಹೆಮ್ಮೆ ನೆನಪಾಯಿತು. ಯಕ್ಷಗಾನದ ಮೋಹಕತೆಯೇ ಅಂಥದ್ದು. Thanks a million

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading