ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಗಂಗೂರು ಗ್ರಾಮದಲ್ಲಿ ನಿಜಕ್ಕೂ ನಡೆದದ್ದೇನು……’ – ನಾಗರಾಜ ಹೆತ್ತೂರ್

ಅಸ್ಪೃಶ್ಯತೆ ಆಚರಣೆ ತೊಲಗಲಿ ಎಂಬುದೇ ಎಲ್ಲರ ಆಶಯ..

ನಾಗರಾಜ್ ಹೆತ್ತೂರು

ಹಾಸನ ಜಿಲ್ಲೆಯ ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಗಂಗೂರು ದೇವಸ್ಥಾನ ಪ್ರಕರಣ ಕಳೆದ ಒಂದು ವಾರದಿಂದ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದೆ. ಬೇಲೂರು , ಹಳೇಬೀಡಿನಂತ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಬೇಲೂರು ತಾಲೂಕಿನಲ್ಲಿ ಇಂತಹುದೊಂದು ಪ್ರಕರಣ ನಡೆದಿರುವುದು ಶೋಭೆಯಲ್ಲ. ಅದರಾಚೆ ಪ್ರಕರಣ ಈ ಹೊತ್ತಿಗೂ  ದಲಿತರು ಮತ್ತು ಸವರ್ಣೀಯರ ನಡುವೆ ದ್ವೇಷದ ಕಿಡಿ ಹೊತ್ತಿಸಿದೆ. ಪರಸ್ಪರ ಮುಖ ಕ್ಕೆ ಮುಖ ಇಟ್ಟು ನೋಡದಂತ ಸ್ಥಿತಿಗೆ ತಲುಪಿಸಿದೆ. ಗ್ರಾಮದಲ್ಲಿ ಇಂದಿಗೂ ಕೂಡ 144 ಸೆಕ್ಷನ್ ಜಾರಿಯಲ್ಲಿದೆ. ಇಷ್ಟಕ್ಕೂ ಅಂದು ನಡೆದಿದ್ದೇನು..?  ಇಡೀ ಗ್ರಾಮ ಬಿಕ್ಕೋ ಎನ್ನುತ್ತಿದೆ. ನಿಜಕ್ಕೂ ಆ ಗ್ರಾಮದಲ್ಲಿ ನಡಿದಿದ್ದೇನು..?  ಪ್ರಕರಣ ಇಷ್ಟು ದೊಡ್ಡದಾಗಲು ಏನು ಕಾರಣ..? ಇದರಲ್ಲಿ ಅಮಾಯಕರು ಯಾರು… ಇದರ ಹಿನ್ನೆಲೆ ಏನು..? ನೋಡೋಣ. ಅದು ಗಂಗೂರು ಗ್ರಾಮ. ಗಂಗೂರು ಸುಮಾರು 500 ಕುಟುಂಬಗಳಿರುವ ಗ್ರಾಮ. ಒಕ್ಕಲಿಗರು 400 ಇದ್ದರೆ ದಲಿತರು 40 ಕಟುಂಬಗಳಿವೆ. ಉಳಿದಂತೆ ನಾಲ್ಕೈದು ಲಿಂಗಾಯಿತ ಕುಟುಂಬಗಳು. ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ಇಲ್ಲ, ಕ್ಷೌರ ಮಾಡುವುದಿಲ್ಲ, ಹೋಟೆಲ್ಗಳಿಗೆ ದಲಿತರನ್ನು ಸೇರಿಸುವುದಿಲ್ಲ ಎಂಬುದು ಬಹುಮುಖ್ಯ ಆರೋಪ. ಕಳೆದ ಹಲವು ದಶಕಗಳಿಂದ ಇದು ಮುಂದುವರೆದುಕೊಂಡು ಬಂದಿತ್ತು. ಇಲ್ಲಿನ ದಲಿತರು ಕೂಡ ಯಾವುದೇ ವಿರೋಧ ಇಲ್ಲದೆ ಸಂಪ್ರದಾಯ ಮುಂದುವರೆದಿತ್ತು.

ಇಲ್ಲಿ ದೇವಸ್ಥಾನ ಪ್ರವೇಶಕ್ಕಿಂತ ಮುಖ್ಯವಾಗಿ ದಲಿತರಿಗೆ ಅಸಹನೆ ತರಿಸಿದ್ದು ಮತ್ತು ಅಸ್ಪೃಶ್ಯತೆ ಅನುಭವ ಆಗಿದ್ದು ಗ್ರಾಮದಲ್ಲಿ ದಲಿತರಿಗೆ ಕಟ್ಟಿಂಗ್ ಮಾಡುವುದಿಲ್ಲ ಎಂಬ ವಿಚಾರ. ಹೊಸ ತಲೆಮಾರಿನ ದಲಿತ ಯುವಕರಿಗೆ ಈ ಆಚರಣೆ ನೋಡಿ ಅಸಹನೆ ವ್ಯಕ್ತವಾಗಿದದೆ ಇದು ಸಹಜ ಕೂಡ.  ಈ ಅಸಹನೆ ನಡುವೆಯೇ ಇಲ್ಲಿನ ದಲಿತರು ಅನಿವಾರ್ಯವಾಗಿ ಹಳೇಬೀಡಿಗೆ ಹೋಗಿ ಕ್ಷೌರ  ಮಾಡಿಸುತ್ತಿದ್ದರು. ಇಲ್ಲಿನ ಇರುವ ಕೆಲ ಹೋಟೆಲ್ಗಳಲ್ಲಿ ದಲಿತರಿಗೆ ತಿಂಡಿ ನೀಡುತ್ತಿದ್ದರಾದರೂ ಬಳಸಿ ಎಸೆಯುವ ಪೇಪರ್ನಲ್ಲಿ ಮತ್ತು ಒಳಗೆ ಸೇರಿಸುತ್ತಿರಲಿಲ್ಲ. ಎದು ಅಕ್ಷರಶಃ ಅಸ್ಪೃಶ್ಯತೆ ಆಚರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ರಂಗಸ್ವಾಮಿ ದೇವಸ್ಥಾನಕ್ಕೆ ದಲಿತರನ್ನು ಒಳಗೆ ಬಿಡುತ್ತಿರಲಿಲ್ಲ. ಅದು ಸತ್ಯ ಅದಾರಾಚೆ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗೂ  ದಲಿತರ ಸಹಕಾರ ನಡೆದುಕೊಂಡು ಬಂದಿತ್ತು. ಈಚೆಗಷ್ಟೆ ದೇವಾಲಯ ಪುನರ್ ನಿರ್ಮಾಣಕ್ಕೆ ದಲಿತರಿಂದಲೂ ಚಂದಾ ಎತ್ತಲಾಗಿತ್ತು . ಆರ್ಥಿಕವಾಗಿ ಸದೃಡಗೊಂಡಿದ್ದ ಕೆಲ ದಲಿತರು ಹಣ ಕೊಟ್ಟಿದ್ದರು. ಈ ನಡುವೆಯೂ ನಾವು ಹಣ ಕೊಟ್ಟರೂ ದೇವಸ್ಥಾನದ ಒಳಗೆ ಹೋಗಲು ಅವಕಾಶ ಇಲ್ಲದಿರುವ ಬಗ್ಗೆ ಅಸಹನೆ ಇತ್ತು.  ದೇವಸ್ಥಾನ ಪ್ರವೇಶ ಇಲ್ಲಿ ನೆಪ ಮಾತ್ರ, ಆದರೆ ಒಟ್ಟಾರೆ ದಲಿತರ ಆಕ್ರೋಶ ಇದ್ದದ್ದು ಕ್ಷೌರ ಮಾಡದೆ ಇದ್ದಿದ್ದರ ವಿರುದ್ಧ, ಹೋಟೆಲ್ ಗೆ ಸೇರಿಸದ ವಿರುದ್ಧ. ಈ ಕಾರಣಗಳನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಅವಕಾಶ ಸೇರಿದಂತೆ ನಮಗೂ ಎಲ್ಲರಂತೆ ಬದುಕಲು ಅವಕಾಶ ಕೊಡಿ ಎಂದು ದಲಿತರು ಈ ಹಿಂದೆ ಎಸ್ಸಿ ಎಸ್ಟಿ ಸಭೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಧಿಕಾರಿಗೆ ಮನವಿ ಮಾಡಿದ್ದರು.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಈ ಸಂಬಂಧ ಗ್ರಾಮಕ್ಕೆ ತೆರಳಿ ವಿವರವನ್ನೂ ಪಡೆದುಕೊಂಡಿದ್ದರು. ಈ ನಡುವೆ ಇಲ್ಲಿನ ಅಸಮಾನತೆಯಿಂದ ಬೇಸತ್ತಿದ್ದ ಕೆಲ ವಿದ್ಯಾವಂತ ಯುವಕರು ದೇವಸ್ಥಾನಕ್ಕೆ ಪ್ರವೇಶ ಮಾಡುವ ಮುಖೇನ ಇಲ್ಲಿನ ಇತರೆ ಆಚರಣೆಗಳಿಂದ ಹೊರಬರಬಹುದು ಎಂದು ಚಿಂತನೆ ನಡೆಸಿದರು. ಈ ನಡುವೆ ಖಾಸಗಿ ಚಾನಲ್ ಒಂದು ಸ್ಟಿಂಗ್ ಆಪರೇಷನ್ ನಡೆಸಿ ಸೋಮವಾರ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಊರ ಮಾನ ದೇಶಕ್ಕೆ ಹರಾಜಾಗುತ್ತಿದೆಯಲ್ಲ  ಎಂಬ ಬಗ್ಗೆ ಆಕ್ರೋಶವಿತ್ತು. ಸುದ್ದಿ ಬಂದ ನಂತರ ಒಂದಷ್ಟು ದೈರ್ಯಗೊಂಡ ಯುವಕರ ಈ ಎಲ್ಲಾ ಆಲೋಚನೆಗಳ ಫಲ. ಕಳೆದ ಸೋಮವಾರ ಜಿಲ್ಲಾಡಳಿತದ ಸಹಕಾರ ಪಡೆದುಕೊಂಡು ದೇವಸ್ಥಾನ ಪ್ರವೇಶಿಸುವ ಬಗ್ಗೆ ಯೋಜಿಸಲಾಯಿತು. ಅಂದು ನಡೆದ ಪ್ರಕರಣಕ್ಕೆ ನಾನೂ ಕೂಡ ಸಾಕ್ಷಿಯಾಗಿದ್ದೆ. ಮದ್ಯಾಹ್ಮ 2 ಗಂಟೆಗೆ ಗ್ರಾಮಕ್ಕೆ ಬೇಟಿ ನೀಡಿದ್ದ ಬೇಲೂರು ತಹಸಿಲ್ದಾರ್ ಗ್ರಾಮಸ್ಥರ ಮನವೊಲಿಸಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿ ಮನವೊಲಿಸಿದ್ದರು. ಅದಾದ ನಂತರ ಗ್ರಾಮದ ದಲಿತರು ಮುಖಂಡರ ಜೊತೆಗೂಡಿ ದೇವಸ್ಥಾನಕ್ಕೆ ಪ್ರವೇಶ ಮಾಡಿದರು. ನಾವು ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಊರ ಹಿರಿಯರು ಒಪ್ಪಿದರು. ನಿಗಧಿಯಂತೆ ದೇವಸ್ಥಾನ ಪ್ರವೇಶ ನಡೆದು ಎಲ್ಲರಿಗೂ ಪೂಜೆ ನೆರವೇರಿಸುವಂತೆ ಪೂಜೆ ನಡೆಯಿತು. ಈ ಪ್ರವೇಶ ಕಾರ್ಯಕ್ರಮವನ್ನು ಇಡೀ ಗ್ರಾಮಸ್ಥರು ನೋಡಿದರು. ಅದಾದ ನಂತರ ನಡೆದ ಸಭೆಯಲ್ಲಿ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಎಲ್ಲವೂ ಶಾಂತಿಯುತವಾಗಿ ಮುಗಿದಿತ್ತು.

ಮುತ್ತರಾಜ್ ಆಗಮನ:

ಆದರೆ ಮಾರನೆ ದಿನ ನಡೆದ  ಘಟನೆ ಪ್ರಕರಣದ ದಿಕ್ಕನ್ನೇ ಬದಲಾಯಿಸಿತು. ಇಲ್ಲಿನ ಅಸ್ಪೃಶ್ಯತೆ ಆಚರಣೆ ಬಗ್ಗೆ ರಾಜ್ಯ ಮಟ್ಟದಲ್ಲಿ ಸುದ್ದಿ ಪ್ರಸಾರವಾಗಿದ್ದರಿಂದ ಇದನ್ನು ನೋಡಿದ ಸವಿತಾ ಸಮಾಜದ ಮುಖಂಡ ಹಾಗೂ ಸೀರಿಯಲ್ ನಟ ಮುತ್ತುರಾಜ್ ಯಾರ ಗಮನಕ್ಕೂ ತಾರದೆ ಒಂದಷ್ಟು ಪ್ರಚಾರದ ಉದ್ದೇಶವನ್ನೂ ಇಟ್ಟುಕೊಂಡು ಚಾನೆಲ್ ವರದಿಗಾರನ್ನು ಜೊತೆಗಿಟ್ಟುಕೊಂಡು ನೇರ ಗಂಗೂರಿಗೆ ಬಂದಿಳಿದರು. ಬಂದವರು ಗ್ರಾಮದವನ್ನು ಮಾತನಾಡಿಸಲೂ ಇಲ್ಲ. ಉದ್ದೇಶ ಒಳ್ಳೆಯದಿರಬಹುದು ಆದರೆ ಈಗಾಗಲೇ ಗ್ರಾಮದಲ್ಲಿ ಒಂದು ರೀತಿಯಲ್ಲಿ ಎರಡೂ ಕೋಮಿನ ನಡುವೆ ದ್ವೇಷ ಬಿತ್ತಿದ್ದರಿಂದ ಅದು ಆರುವವರೆಗೂ ಕಾಯಬೇಕಿತ್ತು. ಅಥವಾ ಗ್ರಾಮಸ್ಥರ ಮನವೊಲಿಸಿ ಕಟಿಂಗ್ ಗೆ ಮುಂದಾಗಬೇಕಿತ್ತು. ಆದರೆ ಇದರ ಹಿನ್ನಲೆ ಮುನ್ನೆಲೆ ಯೋಚಿಸದ ಮುತ್ತುರಾಜ್ ಯಾರ ಬೆಂಬಲವನ್ನೂ ಕೇಳದೆ ಶಾಲೆ ಹತ್ತಿರ ಸಾಮೂಹಿಕ ಕ್ಷೌರಕ್ಕೆ ಮುಂದಾದರು.ಟಿವಿ ಯಲ್ಲಿ ಬರುವ ಆಸೆ ಹಾಗೂ ಮುತ್ತುರಾಜ್ ನನ್ನು ಟಿವಿಯಲ್ಲಿ ನೋಡಿದ್ದ ಮಕ್ಕಳು ಆಚೆ ಬಂದು ತಲೆ ಒಡ್ಡಿದರು. ಇಡೀ ಪ್ರಕರಣಕ್ಕೆ ತಿರುವು ನೀಡಿದ್ದು ಇಲ್ಲಿಂದ ವಿಚಾರ ತಿಳಿದ ಪೋಷಕರು ನಮ್ಮ ಅನುಮತಿ ಇಲ್ಲದೆ ಏಕೆ ನಮ್ಮ ಮಕ್ಕಳಿಗೆ ಏಕೆ ಕೂದಲು ಕಟ್ ಮಾಡಿದ್ದೀರಿ? ನಾವು ಊರ ದೇವರಿಗೆ ಬಿಟ್ಟಿದ್ದೆವು… ನಮ್ಮ ಮಕ್ಕಳಿಗೆ ಕಟ್ಟಿಂಗ್ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು  ನೀನ್ಯಾಕೆ ಕಳಿಸಿಕೊಟ್ಟೆ ಎಂದು ಮೊದಲು ಅಲ್ಲಿನ ಮುಖ್ಯೋಪದ್ಯಾಯನನ್ನು ಹಿಡಿದು ಕೇಳಿದ್ದಾರೆ.

ಅಸಹಾಯಕ  ಉಪದ್ಯಾಯ ಇದರಲ್ಲಿ ನನ್ನದೇನೂ ಪಾತ್ರ ಇಲ್ಲ ಎಂದರೂ ಕೇಳದ ಮನಸ್ಸುಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆಘಾತಗೊಂಡ ಶಿಕ್ಷಕ ಪೊಲೀಸರಿಗೆ ದೂರು ಕೊಡಲು ಹೋದಾಗ ದೇವಸ್ಥಾನ ಪ್ರವೇಶ, ಮಾಧ್ಯಮಗಳಲ್ಲಿ ಸುದ್ದಿ ಹೀಗೆ ಹಲವು ಕಾರಣದಿಂದ  ಆಕ್ರೋಶಗೊಂದ್ದರಿಂದ ರಾಜ್ಯದ್ಯಾಂತ ಗ್ರಾಮದ ಬಗ್ಗೆ ಕೆಟ್ಟ ಹೆಸರು ಬಂದಿದ್ದ ಸಿಟ್ಟಿದ್ದರಿಂದ ಗ್ರಾಮಸ್ಥರು ಘಟನೆ ಬಗ್ಗೆ ತಮ್ಮ ಸಿಟ್ಟಿದ್ದ ಗ್ರಾಮಸ್ಥರು ಹಲವು ದಲಿತ ಮುಖಂಡರ ಮೇಲೆ ದೂರು ನೀಡಿ ತಕ್ಷಣ ಬಂಧಿಸುವಂತೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಶಿಕ್ಷಕ ಯಶೋಧರ ನಾಯಕ್ ನಿಜಕ್ಕೂ ಬಲಿಪಶು, ತನ್ನದಲ್ಲದ ತಪ್ಪಿಗೆ ಅಮಾನತುಗೊಂಡಿದ್ದಾರೆ. ಯಶೋಧರ್ ನಾಯಕ್ ಮಾಡಿದ ತಪ್ಪೇನು..? ಆದರೆಈ ಪ್ರಕರಣಕ್ಕೂ ಇಲ್ಲಿನ ದಲಿತ ಮುಖಂಡರಿಗೂ ಸಂಬಂಧವೇ ಇಲ್ಲ. ಆದರೆ ಕ್ಷೌರ ನೆಪ ಅಷ್ಟೆ. ಕ್ಷೌರದ ನೆಪ ಒಡ್ಡಿ ದೇವಸ್ಥಾನಕ್ಕೆ ಪ್ರವೇಶಿಸಿದ ಸಿಟ್ಟನ್ನು ಈ ಮೂಲಕ ತೀರಿಸಿಕೊಂಡಿದ್ದು ತಪ್ಪು.  ಹಾಗೊಂದು ವೇಳೆ ತಪ್ಪಾಗಿದ್ದರೆ  ಮುತ್ತುರಾಜ್ ಮೇಲೆ ದೂರು ನೀಡಬಹುದಿತ್ತು ಆದರೆ ಅಮಾಯಕ ದಲಿತರ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸಿದ್ದು ದುರಂತ.  ಅವರ ಮೇಲೆ ಬಿದ್ದ ಕೇಸುಗಳು ಕೂಡ ಸಂಬಂಧವೇ ಇಲ್ಲದಂತಹವು.

143-ಕಾನೂನು ಬಾಹಿರವಾಗಿ ಅಕ್ರಮ ಕೂಟ 149- ಡೇಂಡರಸ್ ವೆಪನ್ ಉಪಯೋಗ,   341- ಅಕ್ರಮವಾಗಿ ಬಂಧಿಸಿರುವುದು, 365-ಚಪ್ಪಲಿಯಲ್ಲಿ ಹೊಡೆಯುವುದು,  354-ಮಹಿಳೆಯರನ್ನು ಸಾರ್ವಜನಿಕವಾಗಿ ಮಾನಭಂಗಕ್ಕೆ ಯತ್ನ,  295 ಎ- ಆಚರಣೆಗೆ ವಿರುದ್ಧವಾಗಿ ನಡೆಸುವಂತದ್ದು, ಈ ಕೇಸುಗಳನ್ನು  ಮಲ್ಲೇಶ, ಮಹೇಶ ರವಿ ರಂಗಸ್ವಾಮಿ ಸೀನ, ಭಾಗ್ಯ, ಲತಾ, ಲಲಿತಾ, ತಿಮ್ಮಮ್ಮ ಅಕ್ಕಮ್ಮ, ಸುವರ್ಣ ಚಾನೆಲ್, ವಿಜಯಾ ಮುತ್ತುರಾಜ್ ಶಿವ ಕುಮಾರ್, ದೇವರಾಜಯ್ಯ, ಆನಂದ ನಂಜಾಪುರ ಭೈರೇಶ ರಾಜಗೆರೆ ಪರಮೇಶ, ದೇವರಾಜಯ್ಯ ಎಂಬುವರ ಮೇಲೆ ಕೇಸು ದಾಖಲಿಸಲಾಗಿದ್ದು ಇವೆಲ್ಲವೂ ಸುಳ್ಳು ಕೇಸುಗಳು     ವಿಪರ್ಯಾಸ ಎಂದರೆ ಕೇಸು ಹಾಕಿಸಿಕೊಂಡಿ ರುವರೆಲ್ಲ ಅಂದು ಹಾಸನದಲ್ಲಿದ್ದರು. ಹಾಸನಕ್ಕೆ ಬಂದಿದ್ದ ಎಸ್ಎಸ್ಎಸ್ಟಿ ಆಯೋಗದ ಅಧ್ಯಕ್ಷರ ಕಾರ್ಯಕ್ರಮದಲಿದ್ದರು. ಈ ಬಗ್ಗೆ ಅವರು ಸಹಿ ಮಾಡಿರುವ ದಾಖಲೆಗಳಿವೆ.  ಇದಕ್ಕೆ ಸಾಕ್ಷಿಯಾಗಿ ಜಿಲ್ಲಾಧಿಕಾರಿ. ಪೊಲೀಸ್ ವರಿಷ್ಠಾಧಿಕಾರಿ ಕೂಡ ಸಭೆಯಲಿದ್ದರು. ಆದರೂ ಆಮಾಯಕರ ಮೇಲೆ ಕೇಸು ಹಾಕಿದ್ದು ಎಷ್ಟು ಸರಿ..?

ದಲಿತರೇ ಬಟ್ಟೆ ಹರಿದು ಎಳೆದಾಡಿದರು:

ಇದಾದ ನಂತರ ಮಾರನೇ ದಿನ ಗ್ರಾಮದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಸಭೆಗೆ ಆರೋಪಿಯಾಗಿದ್ದ ಭಾಗ್ಯ ಎಂಬ ಮಹಿಳೆ ಕೂಡ ಬಂದಿದ್ದು ಪ್ರಕರಣವನ್ನು ದಿಕ್ಕು ತಪ್ಪಿಸಿತು. ಪೋಲಿಸರು ಇದ್ದ ಸಭೆಗೆ ಭಾಗ್ಯ ಬಂದಿದ್ದರಿಂದ ಘಟನೆಗೆ ಈ ಮಹಿಳೆಯೇ ಕಾರಣ ಎಂದು ಇಲ್ಲಿನ ದಲಿತ ಮಹಿಳೆಯರು ಭಾಗ್ಯಳ ಮೇಲೆ ಎಗರಿ ಬಿದ್ದರು.  ಆರೋಪಿ ಸ್ಥಾನದಲಿದ್ದ ಭಾಗ್ಯ ಅಲ್ಲಿಗೆ ಬರಬಾರದಿತ್ತು ಆದರೆ ಯಾಕೆ ಬಂದಳು, ಇದರ ಹಿಂದೆ ಇದ್ದವರು ಯಾರು ಎಂಬುದು ತನಿಖೆ ಆಗಬೇಕಿದೆ. ಆದರೆ ಭಾಗ್ಯಳನ್ನು ನಡೆಸಿಕೊಂಡ ಪರಿ ಅಮಾನವೀಯವಾದ್ದು ಪೊಲೀಸರು ಇರದಿದ್ದರೆ ಭಾಗ್ಯಳನ್ನು ಬೆತ್ತಲೆ ಮೆರವಣಿಗೆ ಮಾಡುತ್ತಿದ್ದಂತೂ ಸತ್ಯ. ಆದರೆ ದಲಿತ ಮಹಿಳೆಯರೇ ಹೀಗೆ ನಡೆದುಕೊಂಡಿದ್ದು ನಿಜಕ್ಕೂ ಅಮಾನವೀಯ ಇದಕ್ಕೆ ಕೆಲ ಸವರ್ಣೀಯರು ಕೈ ಜೋಡಿಸಿದರು. ಆದರೆ ಇದಕ್ಕೆ ಪ್ರಚೋದಿಸಿದವರ ಬಗ್ಗೆ ತನಿಖೆ ನಡೆಯಬೇಕಿದೆ. ಇದಾದ ನಂತರ ಇಡೀ ಪ್ರಕರಣವನ್ನು ಪೊಲೀಸರು ನಿಭಾಯಿಸಿದ ಬಗ್ಗೆ ಮೆಚ್ಚಲೇಬೇಕು. ಘಟನೆ ನಂತರ  ಜಿಲ್ಲೆಯಾದ್ಯಂತ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ಎಂದು ಸುದ್ದಿ ಹಬ್ಬಿಸಲಾಯಿತು ಆದರೆ ಖುದ್ದು ಹಳೇಬೀಡಿಗೆ ಹೋಗಿ ಕುಳಿತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್  ಘಟನೆಯ ಸಂಪೂರ್ಣ ವೀಡೀಯೋ ವನ್ನು ಪರಿಶಳೀಲಿಸಿ ಅದನ್ನು ದಲಿತ ಮುಖಂಡರಿಗೆ ಖುದ್ದು ತೋರಿಸಿ ಮುಂದೆ ಏನಾಗಬೇಕು ನೀವೇ ಹೇಳಿ ಎಂದು ಅವರಿಗೆ ಬಿಟ್ಟು ಶಾಂತಿಗೆ ಪ್ರಯತ್ನ ನಡೆಸಿದರು. ಪರಿಣಾಮ ಪ್ರಚೋದನೆ ನೀಡದ ಸವರ್ಣೀಯರ ಮೇಲೆ ದೂರು ದಾಖಲಿಸಲಾಗಿದೆ. ಇದರಾಚೆ ನೋಡಿದರೆ ಇಲ್ಲಿ ದಲಿತರು ಅಕ್ಷರಶಃ ಬಲಿಪಶುಗಳು ಎಂದೇ ಹೇಳಬಹುದು.

ಇಲ್ಲಿ ದಲಿತರು ಅಲ್ಪಸಂಖ್ಯಾತರಿರಬಹುದು ಆದರೆ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಪರಸ್ಪರ ಅವಲಂಭಿತರಾಗಿದ್ದಾರೆ. ಹೀಗಿರುವಾಗ 21  ನೇ ಶತಮಾನದ ಹೊಸ್ತಿಲಲ್ಲಿ ಇರುವಾಗಲೂ ಇಷ್ಟೆಲ್ಲಾ ನಾಗರೀಕತೆ ಬೆಳೆದಿದ್ದರೂ ಕಾನೂನುಗಳು ಇದ್ದರೂ ತಕೆ ಕೂದಲು ಕಟ್ ಮಾಡದಿರುವ, ಹೋಟೆಲ್ಗೆ ಸೇರಿಸದಿರುವ, ದೇವಸ್ಥಾನಕ್ಕೆ ಸೇರಿಸದಿರುವುದು ಎಷ್ಟು ಸರಿ… ಮನಸ್ಸು ಮಾಡಿದ್ದರೆ ಘಟನೆ ಆರಂಭದಲ್ಲೇ ಎಲ್ಲರನ್ನೂ ಕರೆದು  ಹೋಟೆಲ್  ಬನ್ನಿ, ಕಟ್ಟಿಂಗ್ ಮಾಡಿಸಿಕೊಳ್ಳಿ.. ದೇವಸ್ಥಾನಕ್ಕೂ ಬನ್ನಿ ಒಟ್ಟಿಗೆ ಬಾಳೋಣ ಎಂದು ಸಮಸ್ಯೆ ಬಗೆಹರಿಸಬಹುದಿತ್ತು ಆದರೆ ಯಾರೊಬ್ಬರೂ ಆಕೆಲಸಕ್ಕೆ ಮುಂದಾಗಲಿಲ್ಲ… ಕೆಲವರು ಹೇಳಬಹುದು ದೇವಸ್ಥಾನಕ್ಕೆ ನುಗ್ಗಿಸಿ ಶಾಂತಿ ಕದಡಿದರು ಎಂದು. ಶಾಂತಿ ಸ್ಥಾಪಿಸುವ ಎಲ್ಲಾ ಅವಕಾಶಗಳಿದ್ದರೂ ಗ್ರಾಮದ ನಾಯಕರು ಬಳಸಿಕೊಳ್ಳಲಿಲ್ಲ. ಹಾಗೆ ಬಳಸಿಕೊಂಡಿದ್ದರೆ ಗಂಗೂರಿನಲ್ಲಿ ಈ ಜಾತಿ ದ್ವೇಷ ಉರಿಯುತ್ತಿರಲಿಲ್ಲ… ಘಟನೆ ನಂತರವೂ ಇಲ್ಲಿನ ದಲಿತರು ನಮಗೆ ದೇವರು ಬೇಕು , ಸವರ್ಣೀಯರು ಬೇಕು ಎಂದು ಹೇಳುತ್ತಾರೆ ಎಂದರೆ ಅದು ಅಲ್ಲಿಯ ಜನರೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ. ಇಷ್ಟಾದರೂ ಗ್ರಾಮದಲ್ಲಿ ಶಾಂತಿ ನೆಲೆಸಬೇಕು ಎಂದರೆ ಎರಡೂ ಕಡೆಯಿಂದ ಮುಕ್ತ ಮನಸ್ಸುಗಳು ಕುಳಿತು ಮಾತನಾಡಬೇಕು. ಅಸ್ಪೃಶ್ಯತೆ ಈ ಸಮಾಜದ ಪಿಡುಗು ಇಲ್ಲಿನ ದಲಿತರಿಗೂ ಮನಸ್ಸಿದೆ. ತಾವೂ ಎಲ್ಲರಂತೆ ಬದುಕಬೇಕೆಂಬ ಸ್ವಾಭಿಮಾನ ಇದೆ. ಸವರ್ಣೀಯರು ಅದಕ್ಕೆ ಅವಕಾಶ ಮಾಡಿಕೊಡಬೇಕು. ಪರಸ್ಪರ ಆರೋಪ , ಪ್ರತ್ಯಾರೋಪಗಳಿಂದ ಯಾವುದೂ ಸಾಧ್ಯವಿಲ್ಲ. ಇಷ್ಟಾದರೆ ಎಲ್ಲವೂ ಸುಗಮ. ಈ ನಿಟ್ಟಿನಲ್ಲಿ ಎಲ್ಲವೂ ಮನಸ್ಸುಗಳು ಒಂದಾಗಲಿ.. ಅಸ್ಪೃಶ್ಯತೆ ಆಚರಣೆ ತೊಲಗಲಿ ಎಂಬುದೇ ಎಲ್ಲರ ಆಶಯ..

‍ಲೇಖಕರು avadhi

19 February, 2014

3 Comments

  1. h a patil

    – ಇದೊಂದು ಮನ ಕಲಕುವ ಘಟನೆ ಇಂತಹವು ಭವಿಷ್ಯದಲ್ಲಿ ನಡೆಯಬಾರದು, ಎಲ್ಲರೂ ಮುಕ್ತವಾಗಿ ಕಲೆತು ತಮ್ಮ ತಮ್ಮ ಇಗೋಗಳನ್ನು ಬದಿಗಿಟ್ಟು ಮಾನವೀಯವಾಗಿ ಯೋಚಿಸಬೇಕಾದಂತಹವು.

  2. Ananda Prasad

    ಗಂಗೂರಿನ ಜಾತಿ ದ್ವೇಷದ ಘಟನೆಗಳಲ್ಲಿ ಎದ್ದು ಕಾಣುವುದು ಸವರ್ಣೀಯರ ಅಥವಾ ಮೇಲ್ವರ್ಗದ ಜಾತಿಗಳ ಸಂವಿಧಾನವಿರೋಧಿ ಹಾಗೂ ಕಾನೂನುಬಾಹಿರ ಅಸ್ಪ್ರುಶ್ಯತೆಯ ಆಚರಣೆ. ಅಂದರೆ ಇಲ್ಲಿ ತಪ್ಪು ನಡೆದಿರುವುದು ಸವರ್ಣೀಯರ ಅಮಾನವೀಯ ನಡವಳಿಕೆಗಳಿಂದ. ಇವರಿಗೆ ನಾಗರಿಕತೆಯ, ಸಂವಿಧಾನದ ಹಾಗೂ ಕಾನೂನಿನ ಪಾಠವನ್ನು ಮೊದಲು ಕಲಿಸಬೇಕಾಗಿದೆ. ಇಲ್ಲಿ ದಲಿತರ ಯಾವುದೇ ತಪ್ಪು ಕೂಡ ಕಂಡುಬರುತ್ತಿಲ್ಲ, ಆದರೂ ಅವರ ಮೇಲೆ ಕೇಸು ಹಾಕಿ ಬಂಧಿಸುತ್ತಾರೆ ಎಂದರೆ ನಮ್ಮ ದೇಶದಲ್ಲಿ ಕಾನೂನು, ಸಂವಿಧಾನಕ್ಕಿಂತ ಪಾಳೇಗಾರಿ ನೀತಿಗಳು ಮೇಲುಗೈ ಪಡೆದಿವೆ ಎಂಬುದರ ಸಂಕೇತ. ಗಂಗೂರಿಗೆ ಭಾರತದ ಸಂವಿಧಾನ ಹಾಗೂ ಕಾನೂನು ಅನ್ವಯ ಆಗುವುದಿಲ್ಲವೇ ಎಂದು ದಲಿತರನ್ನು ಬಂಧಿಸಿದ ಅಧಿಕಾರಿಗಳನ್ನು ರಾಜ್ಯದ ಜನ ಕೇಳಬೇಕಾಗಿದೆ.

  3. Anonymous

    ಪ್ರೀತಿ ಶಾಂತಿಯಿಂದ ಜನರ ಮನವೊಲಿಸಿ ಮಾಡಬಹುದಿದ್ದ ಕೆಲಸವನ್ನು ಮಹಾನ್ ಕ್ರಾಂತಿಯ ರೀತಿಯಲ್ಲಿ ಆಕ್ರೋಶದಿಂದ ಮಾಡಹೊರಟು ಅನವಶ್ಯಕ ಅಶಾಂತಿಗೆ ಕಾರಣವಾಗಿದೆಯೆನಿಸುತ್ತದೆ. ಮುಖ್ಯಶಿಕ್ಷಕರ ತಪ್ಪೇನೆಂದರೆ, ಮಕ್ಕಳನ್ನು ಕ್ಷೌರಕ್ಕೆ ಕಳಿಸಿದ್ದು. ಶಾಲೆಗೆ ಅದರದ್ದೇ ಆದ ನೀತಿ ನಿಯಮಗಳಿರುತ್ತವೆ. ಜೊತೆಗೆ ಮುತ್ತುರಾಜ್ ಇಲ್ಲಿ ಪ್ರಮುಖ ಆರೋಪಿಯಾಗಬೇಕಿತ್ತು. ಅವರಿಗೆ ಕಟಿಂಗ್ ಮಾಡಲೇಬೇಕೆಂದಿದ್ದರೆ ದೊಡ್ಡವರಿಗೆ ಮಾಡಬೇಕಿತ್ತು. ಮುಗ್ಧ ಮಕ್ಕಳಿಗೆ ಮಾಡುವ ಅವಶ್ಯಕತೆ ಏನಿತ್ತು? ಅನವಶ್ಯಕ ಹಸ್ತಕ್ಷೇಪ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆಯೆನಿಸುತ್ತದೆ.ಈ ರಾದ್ಧಾಂತದಲ್ಲಿ ಅನೇಕ ಮಹಿಳೆಯರೂ ಜೈಲಿಗೆ ಹೋಗಿರುವರೆಂದು ಕೇಳಿದೆ.. ಪುರುಷರು ತಮ್ಮ ಪ್ರತಿಷ್ಠೆಗಾಗಿ ಮಾಡಿಕೊಳ್ಳುವ ಇಂತಹ ಕಿತ್ತಾಟ ರಾದ್ಧಾಂತಗಳಲ್ಲಿ ಮಹಿಳೆಯರು ಮಕ್ಕಳು ಬಲಿಪಶುಗಳಾಗುತ್ತಾರೆ! ಅದಕ್ಕೆ ಶಿಕ್ಷೆ ಯಾರಿಗೆ ಕೊಡುವುದು? ವಿವೇಚನೆ ಸಮಾಧಾನಗಳನ್ನಿಟ್ಟುಕೊಳ್ಳದೇ ದುಡುಕಿ ಅನಾಹುತಗಳನ್ನು ಸೃಷ್ಟಿಸಿದರೆ ಎಂದಿಗೂ ಮಾಯದ ಗಾಯಗಳು ಮಾತ್ರ ಉಳಿದುಕೊಂಡುಬಿಡುತ್ತದೆ.
    -ಅನು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading