ಗೋಪಾಲ ವಾಜಪೇಯಿ

”ಐದು ಹತ್ತು ಮಿನಟು ಕೂಡೂದಿದ್ರ ನೀವು ನಮ್ಮ ಮನೀಗೇ ಬರಬ್ಯಾಡ್ರಿ… ಹೌದು… ಹೀಂಗ್ ಬಂದು ಹಾಂಗ್ ಹೋಗಿಬಿಡತೀರೆಪಾ..” ಎಂದು ಹುಸಿಮುನಿಸು ತೋರಿಸುತ್ತಲೇ ಅವರು ನಮ್ಮನ್ನು ಒಳಗೆ ಕರೆಯುತ್ತಿದ್ದರು. ”ಮದಲ ಕೂಡ್ರಿ… ಕೂತು ಮಾತಾಡ್ರಿ…” ಅಂತ ಒತ್ತಾಯಿಸುತ್ತಿದ್ದರು ಅಕ್ಕ. ನಾವು ಕೂಡಲೇಬೇಕಾಗುತ್ತಿತ್ತು. ಆ ನಂತರ, ”ಕಿಟ್ಟಕ್ಕಾ, ನಮ್ಮ ವಾಜಪೇಯವರು ಬಂದಾರ… ಒಂದಿಷ್ಟು ಛಾ ಮಾಡು…” ಅಂತ ಹೇಳಿ ಮಾತಿಗೆ ಕೂಡುತ್ತಿದ್ದರು ಡಾ. ಶ್ರೀಮತಿ ಗಂಗೂಬಾಯಿ ಹಾನಗಲ್.
ಕಿಟ್ಟಕ್ಕ ಅಂದರೆ ಅವರ ಮಗಳು ಶ್ರೀಮತಿ ಕೃಷ್ಣಾ ಹಾನಗಲ್. ಅವರು ಮಾಡುತಿದ್ದ ‘ಒಂದಿಷ್ಟು ಛಾ’ ಇರುತ್ತಿತ್ತಲ್ಲ ಅದು ಕನಿಷ್ಠ ಪಕ್ಷ ನಾಲ್ಕು ಸಾರಿ ಕುಡಿಯುವಷ್ಟಿರುತ್ತಿತು. ಮತ್ತು ಆ ‘ಛಾ’ ಪೂರ್ತಿ ಮುಗಿಯುವ ತನಕ ನಾವು ಅಕ್ಕಾ ಅವರ ಜೊತೆ ಮಾತಾಡುತ್ತ ಕೂತಿರಬೇಕಾಗುತ್ತಿತ್ತು. ಅಂದರೆ ಒಂದು ಗಂಟೆ, ಎರಡು ಗಂಟೆ ಹೀಗೇ…
ಇದು ಅವರು ಹಚ್ಚಿಕೊಂಡ ಯಾರಿಗಾದರೂ ಆಗುತ್ತಿದ್ದ ಅನುಭವ.
ಅಕ್ಕ ಅಂದರೆ ಅಕ್ಕನೇ. ಆತ್ಮೀಯತೆಯ ಮೂರ್ತಿ. ಸೀದಾ ಸಾದಾ ಬದುಕಿನ ಮೇರು ವ್ಯಕ್ತಿತ್ವ. ಅವರನ್ನು ನೋಡಿದರೆ ತಾಯಿಯನ್ನೇ ನೋಡಿದಂತೆ. ಅಂಥ ಮಮತಾಮಯಿ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಅವರ ಮನೆಗೆ ತೀರ ಹತ್ತಿರದಲ್ಲೆ ನಾನು ಸರಿ ಸುಮಾರು 22 ವರ್ಷ ವಾಸಿಸಿದ್ದೆ. ಅವರ ಮನೆಗೆ ಬರುವ ಎಲ್ಲ ಸಂಗೀತ ದಿಗ್ಗಜರ ದರ್ಶನವೂ ನನಗೆ ಆಗುತ್ತಿತ್ತು.
ಇವತ್ತು ಡಾ. ಶ್ರೀಮತಿ ಗಂಗೂಬಾಯಿ ಹಾನಗಲ್. ಅವರ ಜನ್ಮದಿನ. ಅಕ್ಕ ಇದ್ದಿದ್ದರೆ ನೂರು ತುಂಬಿ ನೂರೊಂದನೆಯ ವರ್ಷದಲ್ಲಿ ಕಾಲಿರಿಸುತ್ತಿದ್ದರು.
ಅವರ ಅದ್ಭುತ ಚೇತನಕ್ಕೆ ನನ್ನ ಗೌರವಪೂರ್ವಕ ನಮನ..
ಹಿಂದೊಮ್ಮೆ ಬರೆದಿದ್ದು, ಇಂದೂ ಒಪ್ಪಿಸುತ್ತಿದ್ದೇನೆ…
ಸ್ವಸ್ತಿ ವಾಚನ
ಡಾ. ಶ್ರೀಮತಿ ಗಂಗೂಬಾಯಿ ಹಾನಗಲ್
ನಮ್ಮೆಲ್ಲರಿಗೂ ಮಾತೃಸ್ವರೂಪರಾಗಿರುವ ಡಾ. ಶ್ರೀಮತಿ ಗಂಗೂಬಾಯಿ ಹಾನಗಲ್ ಅವರೇ –
‘ಹಿಂದೂಸ್ತಾನಿ ಸಂಗೀತ ಲೋಕದ ಸಾಮ್ರಾಜ್ಞಿ’ಯಾದ ನೀವು ನೂರಕ್ಕೆ ನೂರು ಪರಿಶುದ್ಧ ಶಾಸ್ತ್ರೀಯ ಸಂಗೀತದ ಪಕ್ಷಪಾತಿ.
ಅದಕ್ಕೇ ನೀವು ‘ಸಂಗೀತ ಗಂಗಾವತಾರ’, ‘ಸ್ವರಶಿರೋಮಣಿ,’ ‘ಭಾರತೀಯ ಕಂಠ.’
ಹೀಗಾಗಿಯೇ, ಪಂ. ಓಂಕಾರನಾಥ ಠಾಕೂರರು ”ವಾಹವ್ವಾ ಬೇಟಿ !” ಎಂದು ತಲೆದೂಗಿದ್ದು ;
”ಬಹೋತ್ ಸುರೀಲಾ…” ಎಂದು ಕೆ. ಎಲ್. ಸೈಗಲ್ ನಿಮ್ಮನ್ನು ಪ್ರೋತ್ಸಾಹಿಸಿದ್ದು ;
ಅಲ್ಲಾ ರಕ್ಖಾ ಮತ್ತು ಅಹ್ಮದ್ ಜಾನ್ ತಿರಖ್ವಾರಂಥ ಘಟಾನುಘಟಿ ತಬಲಾಪಟುಗಳು ನಿಮಗೆ ಸಾಥ್ ನೀಡಿದ್ದು ;
ಪಂ. ರವಿಶಂಕರ್ ಅವರಂಥ ಮಹಾನ್ ಸಂಗೀತಪಟುಗಳನೇಕರು ನಿಮ್ಮನ್ನು ಅಭಿಮಾನದ ‘ಅಕ್ಕ’ನಾಗಿ ಕಂಡದ್ದು ; ಮತ್ತು
ಪಂ. ಜಸರಾಜ್ ಅಂಥವರ ದೃಷ್ಟಿಯಲ್ಲಿ ನೀವು ‘ಸಂಗೀತಲೋಕದ ಗುರುಮಾತೆ’ಯಾಗಿ ನಿಂತದ್ದು…
ನೀವು ಜನಿಸಿದ್ದು ಮಹಾಶಿವರಾತ್ರಿಯ ಪರ್ವಕಾಲದಲ್ಲಿ. 1913ರ ಮಾರ್ಚ್ 13ರಂದು. ಸಂಗೀತ-ಸಾಹಿತ್ಯ-ಸಂಸ್ಕೃತಿಗಳ ತೊಟ್ಟಿಲೆನಿಸಿದ ಧಾರವಾಡದಲ್ಲಿ.
ಕರ್ನಾಟಕ ಸಂಗೀತ ವಿದುಷಿ ನಿಮ್ಮ ತಾಯಿ ಅಂಬಾಬಾಯಿ. ಅವರ ಇಚ್ಚೆಯಂತೆ ಹಿಂದೂಸ್ತಾನಿ ಸಂಗೀತದತ್ತ ತಿರುಗಿದಿರಿ.
ಸಂಗೀತ ದಿಗ್ಗಜ ಅಬ್ದುಲ್ ಕರೀಂ ಖಾನ್ ಸಾಹೇಬರು ‘ಕಿರಾಣಾ ಘರಾಣೆ’ಯ ಪ್ರವೇಶಕ್ಕೆ ನಿಮಗೆ ಪ್ರೇರಣೆಯಾದರು.
ಅವರ ಶಿಷ್ಯ ಸವಾಯಿ ಗಂಧರ್ವರು ನಿಮ್ಮನ್ನು ಶಿಷ್ಯೆಯಾಗಿ ಸ್ವೀಕರಿಸಿ, ಮಗಳಂತೆ ನೋಡಿಕೊಂಡು ರಾಗಧಾರೆ ಎರೆದರು.
ಅಂಥ ಗುರುವಿನ ಸೇವೆಯನ್ನು ಕೊನೆತನಕ ಮಾಡಿ, ಅವರ ಅನುಗ್ರಹಕ್ಕೆ ಪಾತ್ರರಾದಿರಿ, ಗುರುಕಾರುಣ್ಯಭಾಜನರಾದಿರಿ.
ಇಂದು ನೀವು ಅವರ ‘ಆ’ ಗಾಯನ ಶೈಲಿಯ ಸುಪ್ರಸಿದ್ಧ ಜ್ಯೇಷ್ಠ ಗಾಯಕಿ ; ಸಂಗೀತಲೋಕದ ಪಾಲಿಗೆ ನೀವು ‘ನಾಡೋಜ’ರು.
ಧಾರವಾಡದ ರಾಷ್ಟ್ರೀಯ ವಿದ್ಯಾಲಯದಲ್ಲಿ 5ನೆಯ ಇಯತ್ತೆಯ ತನಕ ಓದಿದಿರಿ. ಅಲ್ಲಿ ನಿಮಗೆ ಬೇಂದ್ರೆ ಮತ್ತು ಶಂಬಾ ಅವರು ಗುರುಗಳು.
ಆದರೆ, ಓದು ನಿಲ್ಲಿಸಿ ಬದುಕಿಗೆ ತೊಡಗಬೇಕಾದ ಅನಿವಾರ್ಯತೆ ಬಂತಲ್ಲ, ಆಗ ಎದೆಗೆಡದೇ ನೀವು ಬದುಕನ್ನೇ ‘ಅನುಭವಶಾಲೆ’ಯನ್ನಾಗಿ ಮಾಡಿಕೊಂಡಿರಿ.
1924ರ ಬೆಳಗಾಂವಿ ಕಾಂಗ್ರೆಸ್ ಸಮ್ಮೇಳನದಲ್ಲಿ ಗಾಂಧೀಜಿ ಎದುರು ‘ಉದಯವಾಗಲಿ…’ ಹಾಡಿದಾಗ ನೀವಿನ್ನೂ 13ರ ಬಾಲಕಿ.
ಆ ನಂತರದ ವರ್ಷಗಳಲ್ಲಿ ನೀವು ‘ಚೆಲುವ ಕನ್ನಡ’ ನಾಡಿನ ಸಾಂಸ್ಕೃತಿಕ ರಾಯಭಾರಿಯಾದದ್ದು ಅದೆಷ್ಟು ಸಲವೋ.
ನಿಮ್ಮ ಗಾಯನ ಒಂದು ಭಾವಯಾನ. ಅದಕ್ಕೆ ಮತ-ಧರ್ಮ, ಭಾಷೆ-ಪ್ರದೇಶಗಳ ಮಿತಿಯಿಲ್ಲ.
ಅಮೇರಿಕ, ಫ್ರಾನ್ಸ್, ಜರ್ಮನಿ, ಪಾಕಿಸ್ತಾನ, ನೇಪಾಳ… ಎಲ್ಲಿ ಹೋದರೂ ನಿಮ್ಮ ಹಾಡಿಗೆ ತಲೆ ತೂಗಿದ್ದಾರೆ-ಬಾಗಿದ್ದಾರೆ ಜನ.
ಶಾಸ್ತ್ರೀಯ ಸಂಗೀತವೆಂದರೇನೇ ಹಾಗೆ. ಅದು ‘ಜಂಜಡ’ಗಳನ್ನೆಲ್ಲ ಮರೆಯಿಸಿ, ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುವಂಥದು.
ಅದಕ್ಕೇ, ನಿಮ್ಮ ಗಾಯನ ‘ಆಲಿಸು’ವುದೆಂದರೆ ‘ಪವಿತ್ರಸ್ನಾನ’ ಮಾಡಿದಂತೆ ಎಂದು ಭಾವಿಸಿದ ಗಾಯಕರೂ ಅಸಂಖ್ಯ.
ಗಾನ ರಸಿಕರ ಪಾಲಿಗಂತೂ ಹುಬ್ಬಳ್ಳಿಗೆ ಬರುವುದೆಂದರೆ ಅದು ‘ಸಂಗೀತ ಕಾಶಿ’ಯ ಯಾತ್ರೆ.
ಇಷ್ಟೆಲ್ಲ ಎತ್ತರಕ್ಕೆರಿದ್ದರೂ ‘ತುಳಸೀಕಟ್ಟಿ ಒಳಗಿನ ಅಡಕಿಬೆಟ್ಟ ನಾನು’ ಎಂಬ ವಿನಯವಂತಿಕೆ ನಿಮ್ಮದು.
ಸರಳ ಜೀವನ, ಉನ್ನತ ವಿಚಾರ, ಮಾನವೀಯತೆಯುಳ್ಳ ವ್ಯವಹಾರ, ನೇರ ನಡೆ-ನುಡಿ ನಿಮ್ಮ ವ್ಯಕ್ತಿತ್ವದ ಮುಖ್ಯಾಂಶಗಳು.
ಹರಟೆಗೆ ಕೂತರೆ ಸಾಕು, ಹೃದಯ ಬಿಚ್ಚಿಟ್ಟುಬಿಡುತ್ತೀರಿ. ಮುಚ್ಚುಮರೆಯಿಲ್ಲದ ಮಾತು, ನಿರ್ಮಲ ನಗೆ, ಔದಾರ್ಯಪೂರ್ಣ ಆದರಾತಿಥ್ಯ.
ಸಂಗೀತದ ಮಾತು ಬಂದರೆ ನೀವು ವಯಸ್ಸನ್ನೂ ಮರೆತುಬಿಡುತ್ತೀರಿ. ಇದಕ್ಕೆ ಸಾಕ್ಷಿ ನೀವು ಮೊನ್ನೆ ಮೊನ್ನೆ ಇಳಿವಯಸ್ಸನ್ನೂ ಮರೆತು ಬೆಳಗಾಂವಿಯಲ್ಲಿ
ನೀವು ನೀಡಿದ ಸಂಗೀತ ಕಚೇರಿ.
ನೀವು ದೇಶದ ಸ್ವಾತಂತ್ರ್ಯ ಚಳವಳಿಯನ್ನು ಕಂಡವರು. ನಾಡಿನ ಏಕೀಕರಣ ಆಂದೋಲನವನ್ನೂ ನೋಡಿದವರು.
ನಂತರದ ಕಾಲದಲ್ಲೂ ಎಂಥ ಸಂದರ್ಭದಲ್ಲೂ ಆತ್ಮಾಭಿಮಾನವನ್ನು ಬಿಟ್ಟುಕೊಡದೇ, ಶುದ್ಧತೆಯ ಪ್ರತೀಕವಾಗಿ ಬಾಳಿದವರು.
‘ಇವ ನಮ್ಮವ ಇವ ನಮ್ಮವ’ ಎಂದೇ ಎಲ್ಲರೊಂದಿಗೂ ಒಂದಾಗಿ ನಡೆದ ನೀವು, ನಾಡು-ನುಡಿ-ಸಂಸ್ಕೃತಿ ಮತ್ತು ಭಾವೈಕ್ಯಕ್ಕೆ ಕುತ್ತು ಬಂದಾಗ ಹೋರಾಡಿದವರು.
95ರ ಈ ಇಳಿವಯದಲ್ಲೂ ಕುಗ್ಗದ ನಿಮ್ಮ ಜೀವನೋತ್ಸಾಹ, ಸಂಗೀತವೆಂದರೆ ಪುಟಿದೇಳುವ ನಿಮ್ಮ ಹುಮ್ಮಸ್ಸು ಬಲು ವಿಸ್ಮಯಕಾರಿ.
ನೀವು ಹುಟ್ಟಿ, ಬೆಳೆದು, ಆಡಿ, ಹಾಡಲು ತೊಡಗಿದ ಧಾರವಾಡ ಶುಕ್ರವಾರ ಪೇಟೆಯ ಆ ಹಳೆಯ ಮನೆಯೀಗ ‘ಸಂಗೀತ ಶಾಲೆ’.
ಹುಬ್ಬಳ್ಳಿಯ ನಿಮ್ಮ ಮನೆ ‘ಗಂಗಾ ಲಹರಿ’ಯಂತೂ ‘ಸಂಗೀತ ಸಂಶೋಧನಾ ಶಾಲೆ’ ಮತ್ತು ‘ಸಂಗೀತ ಪರಿಕರ ಸಂಗ್ರಹಾಗಾರ’.
ಎಂಟು ದಶಕಗಳ ಕಾಲ ಎಡೆಬಿಡದೆ ಸಂಗೀತ ಸೇವೆಗೈಯುತ್ತ, ಪ್ರಪಂಚದಲ್ಲೆಲ್ಲ ನಾಡಿನ ಹೆಸರು ಹಬ್ಬಿಸಿದ ಅಚ್ಚ ಕನ್ನಡತಿ ನೀವು.
ಪ್ರಶಸ್ತಿಗಳತ್ತ ನೀವೆಂದೂ ಮುಖ ಮಾಡಿ ನಿಂತವರಲ್ಲ. ಅವೇ ಹೆಮ್ಮೆಯಿಂದ ನಿಮ್ಮನ್ನರಸಿ ಬಂದು, ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡವು.
ಈ ‘ವರ್ಷದ ಕನ್ನಡಿಗ ಪ್ರಶಸ್ತಿ’ ಕೂಡ ಹಾಗೆಯೆ. ಕನ್ನಡಿಗರೆಲ್ಲ ಅತ್ಯಭಿಮಾನದಿಂದ ನಿಮಗೆ ಈ ಪ್ರಶಸ್ತಿಯನ್ನು ನೀಡಿದ್ದಾರೆ.
ನಿಮ್ಮ ಸಂಗೀತಮಯ ಬದುಕಿನ ‘ಅಮೃತಮಹೋತ್ಸವ’ ಸಂದರ್ಭದಲ್ಲಿ ಸಮಸ್ತ ಕನ್ನಡಿಗರು ನಿಮಗೆ ಸಲ್ಲಿಸುತ್ತಿರುವ ಗೌರವ ಇದು.
ಒಪ್ಪಿಸಿಕೊಳ್ಳಿ.







ಟೈಪಿಸುವ ಅವಸರದಲ್ಲಿ ಒಂದು ತಪ್ಪು ಮಾಡಿದ್ದೇನೆ : ”ನೀವು ಜನಿಸಿದ್ದು ಮಹಾಶಿವರಾತ್ರಿಯ ಪರ್ವಕಾಲದಲ್ಲಿ. 1913ರ ಮಾರ್ಚ್ 13ರಂದು,” ಎಂದು ಇರುವುದನ್ನು ದಯವಿಟ್ಟು, ”……….1913ರ ಮಾರ್ಚ್ 5ರಂದು.” ಎಂದು ಓದಿಕೊಳ್ಳಿ.
ಒಂದು ಅತ್ಯುತ್ತಮ ಸಾದೃಶ್ಯ ಬರಹ. ಗಂಗೂಬಾಯಿ ಅವರು ಮತ್ತೆ ನೆನಪಾದರು. ನಾನು ಬಹಳ ಕಡೆ ಕೇಳಿರುವ ಓದಿರುವ ಅವರ ವ್ಯಕ್ತಿತ್ವ ಅನಾವರಣವನ್ನು ತಾವೂ ಗುರುತಿಸಿದ್ದೀರಿ: “ಹರಟೆಗೆ ಕೂತರೆ ಸಾಕು, ಹೃದಯ ಬಿಚ್ಚಿಟ್ಟುಬಿಡುತ್ತೀರಿ. ಮುಚ್ಚುಮರೆಯಿಲ್ಲದ ಮಾತು, ನಿರ್ಮಲ ನಗೆ, ಔದಾರ್ಯಪೂರ್ಣ ಆದರಾತಿಥ್ಯ.”