ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಮುಂದಿನ ದೀವಳಿಗೆಗಾದರೂ..

ಸ್ಮಶಾನ ಶಿವ 

lakshman-370x315

ಲಕ್ಷ್ಮಣ್

ಶಿವಕಾಶಿಯ ಪಟಾಕಿ ಮಳಿಗೆಯ ಪೋರ
ದೀಪಾವಳಿಯ ದಾಸ್ತಾನು ಖಾಲಿಯಾದ
ಮಾರನೆಯ ದಿನ ಮೈ ಗಂಟಿದ ಗಂಧಕದ
ಘಮ ತೊಳೆಯಲು ನದಿ ನೀರಿಗಿಳಿಯುತ್ತಾನೆ

ಕಪ್ಪು ಬೂದು ಬಣ್ಣದ ಗಂಧಕ
ಮೈಗೆ, ಕೈಗೆ, ಮೂಗಿಗೆ ,ಮುಸುಡಿಗೆ, ಮೆತ್ತಿಕೊಂಡು ಹೊಳೆಗೆ ಈಜು ಹೊಡೆಯಲು ನಡೆದು ಹೋಗುತಿದ್ದರೆ
ಈಗ ತಾನೇ ತಪಸ್ಸಿನಿಂದೆದ್ದು ಬಂದ
ಹಗಲು ವೇಷದ
ಸ್ಮಶಾನ ಶಿವನಂತೆ ಕಾಣುತ್ತಾನೆ
click-aytu-kavite7ಬೀಡಿ ಸೇದಲೆಂದು ಅಕಸ್ಮಾತ್
ಇವನ ಪಕ್ಕಯಾರಾದರೂ ಬೆಂಕಿ ಕಡ್ಡಿ ಗೀರಿದರೆ
ಇವನೇ ಅರೆಗಳಿಗೆಯಲ್ಲಿ
ಮಾನವ ಬಾಂಬಿನಂತೆ ಢಮಾರ್!! ಆಗಬಹುದು

ಎಷ್ಟು ಮುಳುಗುಹಾಕಿ ಮಿಂದರೂ
ನಿನ್ನೆರಾತ್ರಿ
ಊರೆಲ್ಲ ಬೆಳಗಿದ ಕಾರ್ತೀಕದ ದೀಪದ ಸೊಡರು
ಕಣ್ಣಿಂದ ಕರಗುತಿಲ್ಲ
ಬರೀ ಬೆಳಕೇ?
ಕಣ್ಣೇ ಕಾಣದಂತ ಪ್ಲಢ್ ಲೈಟಿನಂತಹ
ಬೆಂಕಿ
ಬಾಣ,ಬಿರುಸು,ಮುತಾಪು,ಸುರ ಸುರ ಬತ್ತಿ
ಭೂ ಚಕ್ರ ಅಟಂ ಬಾಂಬು .
ಸಾಲು ಸಾಲು ದೀಪ ಹಾಡು ಹಸೆ
ಹೊಚ್ಚ ಹೊಸ ಬಟ್ಟೆ ಪಚ್ಚೆ ಕರ್ಪೂರ
ಲಕ್ಷ್ಮಿ ಪೂಜೆಯ ಪ್ರಸಾದ
ಮಿಕ್ಕಿ ಉಳಿದಿದ್ದರೆ ಇವನ ಪಾಲಿಗೂ ಆದೀತು
ಆ ದಿನದ ಹಬ್ಬದೂಟ.

ಊರೆಲ್ಲ ಹಾಡಿ ಕುಣಿದು ದಣಿದು
ನಶೆಯಲ್ಲಿ ಮಲಗಿದಾಗ ಪಾಟೀ ಚೀಲವ ಹಾಕುವ ಬಗಲಿಗೆ
ಚಿಂದಿ ಆಯುವ ಚೀಲ ಏರಿಸಿಕೊಂಡು ತನ್ನ
ದೈವವ ಹುಡುಕುತ ಅಲೆಯುವ
ಯಾರೋ ಬಿಸಾಕಿದ ಹಳೆಯ ಟೆಲಿಫೋನ್ ಡೈರಿಯಲಿ ದೇವರ ವಿಳಾಸ ಹುಡುಕವ.

ಬಸಿರು ಬಾಣಂತಿಯ
ಹಸಿ ಗೂಸಿನ ನೆತ್ತಿಗಿಲ್ಲದ ಎಣ್ಣೆ
-ಯ
ಸಾಲು ಸಾಲು ದೀಪಗಳು ಆ ಬದಿಯ
ಕಂಪೌಂಡಿನೊಳಗಡೆ ತಣ್ಣಗೆ ಉರಿಯುತಿವೆ.

ಹರಿವ ನದಿಗಾದರೂ ಗೊತ್ತುಂಟೆ
ಹರಿಯ ವಿಳಾಸ
ಖಾಲೀ ಹಾಳೆಯ ಮೇಲೆ
ದೇವರ ಚಿತ್ರವ ಬರೆದು ಹೀಗೆ ನಟ್ಟುನಡುನೀರಿನ
ಮೇಲೆ
ಕಾಗದದ ದೋಣಿಯ ಮಾಡಿ ತೇಲಿ ಬಿಟ್ಟಿರುವನು
ಮುಂದಿನ ದೀವಳಿಗೆಗಾದರೂ ದೇವರು
ಈ ಮಾರ್ಗ ವಾಗಿ ಬಂದೇ ಬರಬಹುದು.

‍ಲೇಖಕರು Admin

29 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading