ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಬಾಯ್ತೆರೆದು ನುಂಗುವ ಬೆಂಕಿ ನೀನು!

b-premalatha

ಡಾ. ಪ್ರೇಮಲತ ಬಿ.

ಬೆಂಕಿಗಾವ ಸಂಬಂಧಗಳೂ ಇಲ್ಲ….

ಅಂದದಿ ಉರಿವ ನಂದಾದೀಪವಲ್ಲ

ಬಾಯ್ತೆರೆದು ನುಂಗುವ ಬೆಂಕಿ ನೀನು!

ಒದ್ದೆಯಾಗದ ಕಾಗದದ ನೌಕೆಯನೇರಿ

ಅನುಚಿತವಾಗಿ ಸಾರಿದ್ದಾದರೂ ಏನು?

ಅವರ ತೀರದಾಸೆ,ಇವರ ನೋವಿನ ಹತಾಶೆ

ಹೊತ್ತು ಮಾಡುವೆಯೇನು ನೀರಲ್ಲಿ ಹೋಮ?

ಮುಟ್ಟಿದವರನೆಲ್ಲ ತಬ್ಬಿ ಸರಿಸಮನಾಗಿ

ಕಬಳಿಸಿ, ನಿಟ್ಟುಸಿರೇಕಿಟ್ಟೆ ಆಕಳಿಸಿ?

ತೀರದ ಕೆಂಪೊಡಲಿನ ದಾವಾಗ್ನಿ

ಎಲ್ಲರನು ಎಗ್ಗಿಲ್ಲದೆ ಸುಟ್ಟು

ಅ-ಪವಿತ್ರತೆಯ ಕರ್ಮಕಾಂಡವ ಹೊತ್ತು

ನಳನಳಿಸಿದ್ದು, ನಲುಗಿಸಿದ್ದು ಸಾಕು ನಿನಗಿನ್ನು!

 

ನೀರ ಮೇಲಿನ ನಡೆ ಇಂದು ನಿನ್ನ ಪಯಣ

ಊಳಿಡು, ಹೊರಹಾಕು ಆಕ್ರಂದನ

ಶಾಂತಸಾಗರದ ಅಗಾಧತೆಯಲಿ ಕ್ಷಣ

ಕ್ಷಣಕು ಬದಲಾಗುವ ನಿನ್ನ ಬಿಂಬವ ನೋಡಿಕೋ!

ಮತ್ತೆಲ್ಲಿಗೋ ಜಿಗಿದು ಅಡರಿಕೊಳ್ಳುವ

ಗಾಳಿಯಲ್ಲಿ ನಿನ್ನ ನೋವ ತೋಡಿಕೋ!

ತೀರದ ಆಸೆಯಲಿ ಕಂಡವರನೆಲ್ಲ ಕಾಮಿಸಿ

ತಿಂದು ತೇಗಿದ್ದು, ಕೊನೆಗೊಂದು

ಉರಿಯಾಗಿ ಚಿತೆಯ ಮೇಲೇರಿದ್ದು

ನೋಡಿ ಕ್ಷಿತಿಜದಲ್ಲಬ್ಬಿದೆ ರೇಗಿ ಕೆಂಪು ಕಿಚ್ಚು!

ಉರಿಯ ತಬ್ಬಿ ನೆರೆದು ನರಳಿದವರನ್ನೆಲ್ಲ

ಸುಟ್ಟ ಸಾಮರ್ಥ್ಯ ನೀರಾಗುವ ಹೊತ್ತಲ್ಲಿ ಕೂಡ

ಬೆಂಕಿಗಾವ ಸಂಬಂಧಗಳೂ ಇಲ್ಲ!!

‍ಲೇಖಕರು Admin

28 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading