ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಜನಕನಿಗೆ ಸಿಕ್ಕ ಜಾನಕಿಯಂತೆ

kusuma-patel

ಕುಸುಮಾ ಪಟೇಲ್ 

ನಾನು ಜನಕನಿಗೆ ಸಿಕ್ಕ ಜಾನಕಿಯಂತೆ
ಮುಖ ಮುಕ್ಕಾದರೇನು
ಮೈ ತುಕ್ಕು ಹಿಡಿದರೇನು
ದೇಹ ನಜ್ಜುಗುಜ್ಜಾದರೇನು
ನಾನು ನಾನೇ

ನಾನು ಎಕ್ಸಾಕ್ಟ
ಎಸ್ ಎಲ್ ಆರ್
ಕ್ಯಾಮರಾಗಳ ಪಿತಾಮಹ
ಹಿಂದಿನ ಛಾಯಾಗ್ರಾಹಿಯ
ಅಪರೂಪದ ಸಂಗಾತಿ

ಕೇಳಿರಬಹುದು ನೀವು
ಮಹಾಯುದ್ಧದ ಘನಘೋರಗಳನ್ನು
ನಾ ಹಿಡಿದಿಟ್ಟ ಸತ್ಯಗಳನ್ನು
ಇತಿಹಾಸದ ಪುಟಗಳಲ್ಲಿ ದಾಖಲಿಸಿದ
ಚಿತ್ರಗಳನ್ನು

ಇತಿಹಾಸ ದಾಖಲಿಸಿದ ನಾ
ನಿಮ್ಮ ಮುಂದೆ
ಈಗ ಇತಿಹಾಸವಾಗಿ

ಹುಟ್ಟಿದ್ದು ಜರ್ಮನಿಯ ಡ್ರೆಸ್ಡೆನ್ನಲ್ಲಿ
ಬದುಕಿದ್ದು
ಗಲಿವರನ ಕಾಲದಲ್ಲಿ
ಈಗ ಇದ್ದೇನೆ
ನಿಮ್ಮ ಮುಂದೆ
ಸಂಗ್ರಹಣೀಯ ಕ್ಯಾಮರಾವಾಗಿ

ಜೀವನ ಕ್ಯಾಮರಾದ ಹಾಗೆ
ಹಿಡಿದಿಡಬೇಕು ಮುಖ್ಯವಾದದ್ದನ್ನು
ಬದುಕಿನ ಇತಿಹಾಸವನ್ನು
ಅದಕೆ
ಈ ಎಲ್ಲವೂ ಮುಖ್ಯ
ಕಳೆದು ಹೋದದ್ದು, ಮತ್ತೆ ಬಾರದ್ದು
ಕಾಲ, ವಸ್ತು, ಜನ ಎಲ್ಲಾ

ಅದಕೇ ಈಗ
ಹಳೆಯದಕೆ ಹೊಸ ಬೇಡಿಕೆ
ಅಜ್ಜನ ಪಾಕೆಟ್ ವಾಚ್
ಅಜ್ಜಿಯ ಕುಟ್ಟಾಣಿ
ಅಪ್ಪಾಜಿಯ ಮುಗಟ
ಅಮ್ಮನ ಬೆಂಡೋಲೆ
ಮುತ್ತಜ್ಜನ ತಿಜೋರಿ
ಹಳೆಯ ಅಡ್ಡಣಿಗೆ, ಗಂಗಾಳ
ಹೀಗೆ- ಹಳತಾದಷ್ಟೂ ಹೆಚ್ಚುವ ಹಾಗೆ
ಹಳೆಯ ವೈನಿನ ಹಾಗೆ

ಈಗಿನ ಮಕ್ಕಳು
ನನ್ನ ಹಿಂದೆ ಮುಂದೆ ತಿರುಗಿಸಿ
ಮುಟ್ಟಿ
ಹೌ ನೈಸ್, ಹೌ ಕ್ಯೂಟ್
ಎಂದು ಸಂಭ್ರಮಿಸಿ
ಫೋಟೋ ಕ್ಲಿಕ್ಕಿಸಿದಾಗ
ಒಳಗೊಳಗೇ
ಸಣ್ಣ ಸಂಭ್ರಮ

ನಾ ಕಂಡ ಕ್ಯಾಮರಾ ಕಣ್ಣಲ್ಲೆ
ಈಗ ಚಿತ್ರವಾಗಿ ನಾನು !!
ನನ್ನ ನಾ ಕಂಡಂತೆ
ಮತ್ತೆ
ಹುಟ್ಟಿ ಬಂದಂತೆ.

‍ಲೇಖಕರು Admin

23 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading