ಸ್ಮೈಲ್ ಪ್ಲೀಜ್

ಲಕ್ಷ್ಮಣ್
ನಡು ಹಗಲಿಗೆ
ನಡು ಮುರಿದು ಬಿದ್ದ ಬೆಳಕಿಗೆ
ಬೆನ್ನು ಮಾಡಿ
ಕ್ಯಾಮೆರ ಹೆಗಲೇರಿಸಿಕೊಂಡ ಕೆವಿನ್
ಚಿತ್ರಗಳ ಬೇಟೆಗೆ ಹೊರಡುತ್ತಾನೆ
ಭೂಗೋಳದಂತಿರುವ ಬೊಕ್ಕ ತಲೆ
ಕಡ್ಡಿ ಕೈ ಕಾಲು
ಬೆನ್ನಿಗಂಟಿರುವ ಹೊಟ್ಟೆ ಏದುಸಿರು ಬಿಡುತ
ನೆಲಕಂಟಿಕೊಂಡೆ
ಹಸಿವಿನಿಂದ ನರಳಿ ನರಳಿ
ತೆವಳುತಿರುವ ಸೋಮಾಲಿಯಾದ ಹಸುಳೆಗಳ
ಬಳಿ ತೆರಳಿ ‘ಸ್ಮೈಲ್ ಪ್ಲೀಜ್, ಸ್ಮೈಲ್ ಪ್ಲೀಜ್’
ಎಂದು
ಕ್ಷಾಮದ ಬಿಳಿ ಹಲ್ಲು ನಗೆಗಳ ಚಿತ್ರ ಸೆರೆಹಿಡಿಯುತ್ತಾನೆ

ಇನ್ನೇನು ಸಾವು ಕಣ್ಣಾಲಿಗಳಲೇ
ತೇಲುತಿರುವ
ಹಸುಳೆಯ ಹಸಿ ಬಿಸಿ ಮಾಂಸ ತಿನ್ನಲು
ತುಸು ದೂರದಲ್ಲೇ ರಣ ಹದ್ದಿನ ಕಣ್ಣೂ
ಹೊಂಚು ಹಾಕಿದೆ ಏಕಕಾಲಕ್ಕೆ
ಸರಳುಗಳ ಹಿಂದಿನ
ಕೈದಿಯ ನೆರಳನು
ಸುಂದರಿಯ ನಡುವಿನ ಹಸಿ ಬಿಸಿ
ತೊಗಲ ಸವರಿ ಸೆರೆ ಹಿಡಿದ ಕ್ಯಾಮೆರಾದ
ಕಣ್ಣೇ
ಎಣ್ಣೆ ಕಾಣದ ಭೂಗೋಳದಂತ
ಬಕ ನೆತ್ತಿಯ ಸವರಿ
ಕ್ಷಿತಿಜಕ್ಕೆ ಹಾರಿದೆ.
ಅಪರೂಪದ ಪಟ ಸೆರೆ ಹಿಡಿದ
ಗೆದ್ದ ಖುಷಿಯಲ್ಲಿ ಬೀಗಿದವನು ಆ ದಿನ
ತುಸು ಹೆಚ್ಚೇ ಸಿಗರೇಟು ಉರಿಸಿದ
ಮುಂದೇನು?
ದಿನಗಳು ಸವೆಯುತಿವೆ
ಯುಗಗಳಂತೆ
ಯಾತನೆಗಳು ಪಾಳಿಯಲ್ಲಿ ಬರುತಿವೆ
ಹಗಲು ರಾತ್ರಿ
ಗಸ್ತಿಯಲಿ ನಿಂತ ದಫೇದಾರನು ನಿದ್ದೆಗೆ
ಜಾರಿದಂತೆ
ಅಥವ ನಟಿಸುತ್ತಾನೆ ಕಳ್ಳ ಬೆಕ್ಕಿನಂತೆ
ಸರಳುಗಳ ಹಿಂದಿನ
ನೆರಳು ಯಾವ ಕ್ಯಾಮರಾ ಕಣ್ಣಿಗೂ
ಸೆರೆಯಾಗುತಿಲ್ಲ
ತನ್ನ ನೆರಳಿಗೆ ತಾನೆ ಬೆಚ್ಚುತ
ಜೈಲು ಸರಳಿನ ಹಿಂದೆ
ತಾನೆ ಬಂಧಿಯಾಗುತ
ನಿಟ್ಟಿರಿಳುನಿಲಿ ಕ್ಷಾಮದ ಹಲ್ಲುಗಳು
ಇವನನ್ನೇ ಇಂಚಿಂಚಾಗಿ
ಇರಿದು ತಿಂದ ಪಾಪ ಪ್ರಜ್ಞೆಯ ದುಸ್ವಪ್ನಗಳು
—–
ಸೋಮಾಲಿಯದ ಭೀಕರ ಕ್ಷಾಮದ ಸಂದರ್ಭದಲ್ಲಿ ಛಾಯಾಗ್ರಾಹಕ ಕೆವಿನ ಕಾರ್ಟಿನನಿಗೆ, ಈಗಲೋ ಆಗಲೋ ಜೀವ ಹೋಗಬಹುದಾದ ಹಸುಳೆಯನ್ನು ತಿನ್ನಬಹುದೆಂಬ ಆಸೆಯಿಂದ ತುಸು ತೂರದಲ್ಲೇ ಹೊಂಚು ಹಾಕಿ ಕುಳಿತ ರಣಹದ್ದಿನ ಚಿತ್ರ ಸೆರೆಯಾಗುತ್ತದೆ.
ಈ ಚಿತ್ರ ಇಡೀ ವಿಶ್ವದ ಕರುಳನ್ನೆಕಿವುಚಿ ಹಾಕುತ್ತದೆ.
ಈ ಚಿತ್ರ ಕ್ಕೆ ಪುಲಿಟ್ಜರ್ ಪ್ರಶಸ್ತಿ ಯೂ ಸಿಗುತ್ತದೆ. ಆದರೆ ಆ ಹಸುಳೆಯನ್ನು ರಕ್ಷಿಸಲಾಗದ ಪಾಪ ಪ್ರಜ್ಞೆಯಲ್ಲಿ ನರಳಿ ಕೆವಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ..
ಮುಂದೆ ಮಗು ಬದುಕುಳಿಯಿತಾ?ಅಥವ ಯಾರೋ ಆಹಾರ ನೀಡಿ ಬದುಕುಳಿಸಿದರಾ?ಅಥವ ಈ ಚಿತ್ರ ಸೆರೆಯಾದ ಕೆಲವೇ ಗಳಿಗೆಯಲ್ಲಿ ಸತ್ತು ರಣಹದ್ದಿನ ಪಾಲಾಯಿತಾ?
ಕೆವಿನ್ ಏನೋ ಆತ್ಮಹ್ತತ್ಯೆ ಮಾಡಿಕೊಂಡ ಆದರೆ ಆ ಚಿತ್ರ ಸೆರೆ ಹಿಡಿದ ಕ್ಯಾಮೆರಾ ಏನಾಯಿತು ?
ಎಂಬ ಪ್ರಶ್ನೆ ನನ್ನನ್ನೂ ಕಾಡಿತು. ಆ ಕ್ಯಾಮೆರಾ ಇದೇ ಇರಬಹುದಾ





ಮಾರ್ಮಿಕ ನೆನಪು ಮರ್ಮಾಘಾತ ನೀಡುತ್ತದೆ.
ಅನುಪಮಾ ಪ್ರಸಾದ್.
ಬಹಳ ಚೆನ್ನಾಗಿದೆ ಕವನ