ಮಾನವ ಸಂಪನ್ಮೂಲ ಎಂಬುದು ನಿಭಾಯಿಸಬೇಕಾಗಿರುವ ಕಮಾಡಿಟಿ ಎಂದು “ಮೇನೇಜುಮೆಂಟು ತಜ್ಞರು” ನಿರ್ಧರಿಸಿದ ಬಳಿಕ ಆಗಿರುವ ಅಕಡೆಮಿಕ್ – ವೃತ್ತಿಪರ ಅವಾಂತರಗಳು ಒಂದೇ ಎರಡೇ?
ಈ ಅವಾಂತರಗಳ ಕಿರೀಟದ ಮುಕುಟಮಣಿ ಎಂದರೆ ಈಗೀಗ ಪತ್ರಕರ್ತರನ್ನು ಆ ಪತ್ರಿಕೆಗಳ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗ ಆರಿಸುವುದು ಮತ್ತು ಅವರ ಕಾರ್ಯವೈಖರಿಯನ್ನು ವರ್ಷಕ್ಕೊಮ್ಮೆ ತಪಾಸಣೆ ಮಾಡುವುದು! ಹಾಗಾಗಿ ಎಂತೆಂತಹ ಪತ್ರಕರ್ತರೆಲ್ಲ ಸುದ್ದಿಕೋಣೆಗಳನ್ನು ಸೇರಿದ್ದಾರೆಂಬುದನ್ನು ನಾವೀಗ ಕಂಡು-ಓದಿ-ಕೇಳಿ-ನೋಡಿ ಆನಂದಿಸತೊಡಗಿದ್ದೇವೆ.
ಈ ಮಾನವ ಸಂಪನ್ಮೂಲಗಳ ನಿಭಾವಣೆಯ ಹೆಸರಲ್ಲಿ ನಡೆಯುವ ವಾರ್ಷಿಕ ಅಪ್ರೈಸಲ್ ಗಳು ಎಂಬ ನಾಟಕಗಳ ಫಲವಾಗಿ ಒಂದು ಸಂಸ್ಥೆಯ ಏಳಿಗೆಗೆ ಶ್ರದ್ಧೆಯಿಂದ ದುಡಿಯುವ ಕಾರ್ಮಿಕ ಬಲ ಈವತ್ತು ಆ ಸಂಸ್ಥೆಗೆ ಕೇವಲ “ಕಾಸ್ಟ್ ಟು ಕಂಪನಿ” ಆಗಿಬಿಟ್ಟಿದೆ. ಇದೇ ಜಾಡಿನಲ್ಲಿ ವಿಸ್ತಾರಗೊಳ್ಳುತ್ತಿರುವ ಮಾನವ ಸಂಪನ್ಮೂಲದ “ ಅಭಿವೃದ್ಧಿ” ಮತ್ತದರ ಪರಿಣಾಮವಾಗಿ ಮೂರು ವೃತ್ತಿಪರ ರಂಗಗಳಲ್ಲಿ “ಕ್ರೆಡಿಟ್ಟು”ಗಳಿಗಾಗಿ ನಡೆದಿರುವ ಪರದಾಟಗಳ ಸಣ್ಣ ಇಣುಕುನೋಟ ಇದು.
ವೈದ್ಯಕೀಯ
ಮೊನ್ನೆ ಕರ್ನಾಟಕ ವಿಧಾನಮಂಡಳವು ವೈದ್ಯರಿಗೆ ತಮ್ಮ ನೋಂದಣಿ ನವೀಕರಿಸಿಕೊಳ್ಳಲು ಕ್ರೆಡಿಟ್ ಆಧರಿತ ವ್ಯವಸ್ಥೆಯೊಂದನ್ನು ತರಲು ನಿರ್ಧರಿಸಿದೆ. ರಾಜ್ಯದಲ್ಲಿರುವ 1.16 ಲಕ್ಷ ವೈದ್ಯರು ಇನ್ನುಮುಂದೆ 5 ವರ್ಷಗಳಿಗೊಮ್ಮೆ ತಾವು ವರ್ಷಕ್ಕೆ ಕೆಲವು ಸೆಮಿನಾರುಗಳಲ್ಲಿ ಪಾಲ್ಗೊಂಡದ್ದಕ್ಕೆ, ಪ್ರತಿವರ್ಷ 30 ಕ್ರೆಡಿಟಂಕಗಳನ್ನುಗಳಿಸಿದ್ದಕ್ಕೆ ಸಾಕ್ಷಿ ತೋರಿಸಿ ತಮ್ಮ ವ್ರತ್ತಿಯನ್ನು ನವೀಕರಿಸಿಕೊಳ್ಳಬೇಕಿದೆ.
ಮುಂದುವರಿದ ದೇಶಗಳಲ್ಲಿ ಪ್ರತೀ ಸಾವಿರ ಜನಸಂಖ್ಯೆಗೆ 3-4ವೈದ್ಯರಿದ್ದರೆ ಭಾರತದಲ್ಲಿ ಅಂದಾಜು ಈ ಪ್ರಮಾಣ ಅಂದಾಜು ಬರೀ 1.25; ಅದೂ ನಗರ ಕೇಂದ್ರಿತ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ 600 ಮಂದಿಗೆ ಕನಿಷ್ಟ ಒಬ್ಬ ವೈದ್ಯರ ಆವಶ್ಯಕತೆಯನ್ನು ಪ್ರತಿಪಾದಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಬೇಕಿರುವ ವೈದ್ಯರು ಕ್ರೆಡಿಟ್ಟು ಸಂಗ್ರಹಕ್ಕಾಗಿ ಆಸ್ಪತ್ರೆ/ಕ್ಲಿನಿಕ್ ಬಿಟ್ಟು ತಿರುಗಾಡಬೇಕಾಗುವುದು ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡಲಿದೆ. ಈ ನಿಯಮದ ವಿರುದ್ಧ ವೈದ್ಯರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ.
ವಕೀಲರು
ಬಾರ್ ಕೌನ್ಸಿಲ್ ಆಫ್ ಇಂಡಿಯಾವು ‘ಸರ್ಟಿಫಿಕೇಟ್ ಅಂಡ್ ಪ್ಲೇಸ್ ಆಫ್ ಪ್ರಾಕ್ಟೀಸ್ ವೆರಿಫಿಕೇಶನ್’ ನಿಯಮದಡಿ ಖೊಟ್ಟಿ ವಕೀಲರನ್ನು ಗುರುತಿಸುವ ಹೆಸರಿನಲ್ಲಿ ವಕೀಲರ ನೋಂದಣಿ – ನವೀಕರಣ ಪ್ರಕ್ರಿಯೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇದೂ ಕೂಡ ವಕೀಲರ ಸಮುದಾಯದಿಂದ ತೀವ್ರ ವಿರೋಧವನ್ನೆದುರಿಸಿ ಸುಪ್ರೀಂ ನ್ಯಾಯಾಲಯದ ಮುಂದಿದೆ. ರಾಜ್ಯದಲ್ಲಿ ಅಂದಾಜು 85,000 ವಕೀಲರಿದ್ದಾರೆ.
ಕಾಲೇಜು ಶಿಕ್ಷಕರು
ಕಾಲೇಜುಗಳು ಯುಜಿಸಿ ಮೇಲ್ವಿಚಾರಣೆಗೆ ಬಂದ ಬಳಿಕ ಕಾಲೇಜಿನ ಮ್ಯಾನೇಜುಮೆಂಟುಗಳು ಮತ್ತು ಶಿಕ್ಷಕ ಸಮುದಾಯ ತಮ್ಮ ನೇಮಕಾತಿ, ಪ್ರಮೋಷನ್ ಮತ್ತಿತರ ವೃತ್ತಿಪರ ಬೆಳವಣಿಗೆಗಳಿಗಾಗಿ ಕ್ರೆಡಿಟ್ಟುಗಳ ಬೆನ್ನು ಹತ್ತತೊಡಗಿದ್ದಾರೆ. ಅದರ ಫಲವಾಗಿ ಪ್ರತಿಯೊಂದು ಕಾಲೇಜಿನಲ್ಲಿ ವರ್ಷಕ್ಕೊಂದಿಷ್ಟು ರಾಷ್ಟ್ರೀಯ– ಅಂತಾರಾಷ್ಟ್ರೀಯ ಸೆಮಿನಾರುಗಳು ಕಡ್ಡಾಯವೆಂಬಂತೆ ನಡೆಯತೊಡಗಿವೆ.
ಇದೊಂದು ದಂಧೆ
ಆಧುನಿಕ ಮ್ಯಾನೇಜ್ ಮೆಂಟ್ ತಂತ್ರಗಳನ್ನು ಆಧರಿಸಿದ ಆಡಳಿತ ವ್ಯವಸ್ಥೆ ಬಂದಮೇಲೆ, ಆಡಳಿತದ ಗುಣಮಟ್ಟ ಎಲ್ಲಿಗೆ ತಲುಪಿದೆ ಎಂಬುದಕ್ಕೆ ಯಾವುದೇ ಕನ್ನಡಿ ಅಗತ್ಯವಿಲ್ಲ. ಆದರೆ, ಅವರು ಹುಟ್ಟುಹಾಕಿರುವ “ವೃತ್ತಿಪರರ ನಿರಂತರ ಶಿಕ್ಷಣ” ಯೋಜನೆ ಮಾತ್ರ ಬೃಹತ್ ದಂಧೆಯಾಗಿ ಬೆಳೆಯುತ್ತಿದೆ. ನಿಜಕ್ಕೆಂದರೆ, ಈ ದಂಧೆಯಲ್ಲಿ ಕಾಸು ಮಾಡುತ್ತಿರುವವರೂ ಈ “ಮೆನೇಜುಮೆಂಟು” ತಜ್ಞರೇ! ಕಾಗದ-ದಾಖಲೆಗಳಲ್ಲಿ ಭರ್ಜರಿ ಆಗಿ ಕಾಣಿಸುವ ಈ ಯೋಚನೆಗಳು ಮತ್ತು ಯೋಜನೆಗಳ ಒಳಹೂರಣ ತಿಳಿಯಬೇಕಿದ್ದರೆ ಅದನ್ನು ಸಮೀಪದಿಂದ ನೋಡಬೇಕು.
ನಿಮಗೆ ಸಾಧ್ಯವಿದ್ದರೆ, ನಿಮ್ಮ ಊರಿನ ಕಾಲೇಜಿನಲ್ಲಿ ಸದ್ಯದಲ್ಲೇ ನಡೆಯಲಿರುವ ಯಾವುದಾದರೊಂದು “ ಅಂತಾರಾಷ್ಟ್ರೀಯ ಮಟ್ಟದ ಸೆಮಿನಾರ್” ಒಂದಕ್ಕೆ ಅಥವಾ ಸಮೀಪದ ವೈದ್ಯರ ಸಂಘವೋ- ವೈದ್ಯಕೀಯ ಕಾಲೇಜೋ ನಡೆಸುತ್ತಿರುವ CME ಸೆಮಿನಾರಿಗೋ ಹೋಗಿ ನೋಡಿ. ನೂರಕ್ಕೆ ಎಲ್ಲೋ ಒಂದೆರಡು ಮಂದಿ ವೈಯಕ್ತಿಕವಾಗಿ ಆಸಕ್ತಿ ಇರುವವರು ನಿರ್ವಹಿಸುವಲ್ಲಿ ಅರ್ಥಪೂರ್ಣವಾಗಿ ನಡೆಯುವ ಈ ಸೆಮಿನಾರುಗಳು ಉಳಿದಂತೆ ಬರೀ “ಕ್ರೆಡಿಟ್ ಸರ್ಟಿಫಿಕೇಟು ಗಳಿಸುವ ದಂಧೆ” ಗಳಾಗಿರುತ್ತವೆ.
ಸಣ್ಣದೊಂದು ತಮಾಷೆ ಹೇಳುತ್ತೇನೆ. ನಾನೂ ಕಳೆದ 8 ವರ್ಷಗಳಿಂದ ISO 9001 ಸರ್ಟಿಫಿಕೇಟ್ ಇರುವ ಸಣ್ಣ ಕಂಪನಿಯೊಂದನ್ನು ನಡೆಸುತ್ತಿದ್ದೇನೆ. ವಸ್ತುಶಃ ಆ ನಿಯಮಗಳನ್ನು ಪಾಲಿಸುವುದರಿಂದಾಗುವ ಲಾಭವನ್ನೂ ಕಣ್ಣಾರೆ ಕಂಡಿದ್ದೇನೆ.
ಆದರೆ ಇಂದು ನೂರಕ್ಕೆ 99.5 ಈ ರೀತಿಯ ಸರ್ಟಿಫೈಡ್ ಕಂಪನಿಗಳು ವರ್ಷಪೂರ್ತಿ ಅಸ್ತವ್ಯಸ್ತವಾಗಿ ವ್ಯವಹರಿಸಿ, ವರ್ಷಾಂತ್ಯದ ಬಾಹ್ಯ ಆಡಿಟ್ ವೇಳೆಗೆ, ಹೊರಗೆ ಅದಕ್ಕೆಂದೇ ಅಂಗಡಿ ತೆರೆದು ಲಭ್ಯರಿರುವ “ ಕನ್ಸಲ್ಟೆಂಟ್” ಗಳಿಗೆ ದುಡ್ಡು ಎಸೆದು ತಮ್ಮ ದಾಖಲೆಗಳನ್ನು ಕೊನೆಯ ಕ್ಷಣದಲ್ಲಿ ಸರಿಪಡಿಸಿಕೊಳ್ಳುತ್ತಾರೆ ಮತ್ತು ಸರ್ಟಿಫಿಕೇಟು ನವೀಕರಿಸಿಕೊಳ್ಳುತ್ತಾರೆ.
ಈ ಸರ್ಟಿಫಿಕೇಟಿನಿಂದ ಅವರಿಗೆ ಸಬ್ಸಿಡಿ ಲಾಭ, ಸರಕಾರಿ ಸವಲತ್ತು ಇತ್ಯಾದಿಗಳಿವೆ. ಇದು ಹೇಗೆ ಸಾಧ್ಯ ಎಂದರೆ ಆ ಆಡಿಟ್ ನಲ್ಲಿ ಕೇಳುವುದು ಬರೀ: ಡಾಕ್ಯುಮೆಂಟೇಷನ್, ಡಾಕ್ಯುಮೆಂಟೇಷನ್ ಮತ್ತು ಡಾಕ್ಯುಮೆಂಟೇಷನ್!





ಸರಿಯಾಗಿ ಹೇಳಿದಿರಿ ಸರ್, ನಾನು ನೋಡಿದ ಕಂಪನಿಯಲ್ಲಿ ಎಲ್ಲವೂ ನಿಲ್ಲುವುದು ಬರೀ ಡಾಕ್ಯುಮೆಂಟೇಶನಲ್ಲಿ. ಸರಕಾರಕ್ಕಾಗಲಿ, ಮ್ಯಾನೇಜಮೆಂಟಿಗಾಗಲಿ ಬೇಕಿರುವುದು ಬರಿ ಸಾಕ್ಷಿ. ಬೇರೆ ಬಿಡಿ ನ್ಯಾಯಾಲಯವು ಕೇಳುವುದು ಕೇವಲ ಸಾಕ್ಷಿ . ಕಾರ್ಖಾನೆಯಲ್ಲಿ ಪರಿಸರ ಮಾಲಿನ್ಯದ ಸರ್ಟಿಫಿಕೇಟ್ ಕೂಡಾ ದುಡ್ಡು ತಿಂದೇ ಸಿಕ್ಕುವುದು. ಇಂದಿನ ಎಲ್ಲಾ ರಂಗದಲ್ಲೂ ಬರಿ ಸಾಕ್ಷಿ ಬೇಕಿದ್ದರಿಂದ ಎಲ್ಲರೂ ಈ ಸಾಕ್ಷಿ ಗಳಿಸುವುದರಲ್ಲೇ ಇದ್ದಾರೆ. ಪೇಪರ್ ಸಾಕ್ಷಿ ಯ ಜೊತೆಗೆ ಸಾಕ್ಷಿ ಇಲ್ಲದೆ ನಂಬಿಕೆಗೂ, ಹಳೆಯ ಅನುಭವಕ್ಕೂ ಬೆಲೆ ಕೊಟ್ಟರೆ ಬದಲಾವಣೆ ಸಾಧ್ಯವಾಗಬಹುದು.