ಪ್ರಜ್ಞಾ ಮತ್ತೀಹಳ್ಳಿ
ಬೆಳಿಗ್ಗೆ ಎದ್ದು ಬ್ರಿಟೀಶ ಮ್ಯೂಸಿಯಂಗೆ ಹೋದೆ. ಸುತ್ತಲೂ ಬಹು ವಿಸ್ತಾರವಾದ ವಿಕ್ಟೋರಿಯಾ ಗಾರ್ಡನ್ ತುಂಬಾ ಸುಂದರವಾಗಿದೆ. ಆದರೆ ಪೂತರ್ಿ ತಿರುಗಾಡುವುದು ಅಸಾಧ್ಯ. ನಡುವೆ ಬ್ರಿಟೀಶ ವಾಸ್ತು ಶಿಲ್ಪದ ಬಿಳಿ ಬಣ್ಣದ ಕಟ್ಟಡ. ಗಾರ್ಡನ್ ಗೆ ಬೇರೆ ಮ್ಯೂಸಿಯಂಗೆ ಬೇರೆ ಪ್ರವೇಶ ಟಿಕೆಟುಗಳು. ಸ್ಥಳೀಯರು ಗಾರ್ಡನ್ ಟಿಕೇಟು ಪಡೆದು ದಿನಾಲು ವಾಕಿಂಗ್ ಮಾಡುತ್ತಾರಂತೆ. ಒಳಗೆ ಬೇರೆ ಬೇರೆ ಅಂತಸ್ತುಗಳಲ್ಲಿ ಭಾರತವನ್ನಾಳಿದ ಕರ್ಜನ್ನುಗಳು ವೈಸರಾಯಗಳು ಉಪಯೋಗಿಸುತ್ತಿದ್ದ ವಸ್ತುಗಳು ಬಟ್ಟೆ ಗೌನುಗಳು ಆಳೆತ್ತರದ ಫೋಟೊಗಳು ಓರಣವಾಗಿ ರಾರಾಜಿಸುತ್ತಿವೆ. ವಿಕ್ಟೋರಿಯಾ ರಾಣಿಯ ಬ್ರಹತ್ ಗಾತ್ರದ ಮೂತರ್ಿ ಮನೋಹರವಾಗಿದೆ. ಆದರೆ ಬ್ರೀಟೀಶ ಆಡಳಿತದ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮವನ್ನು ಎಳೆಎಳೆಯಾಗಿ ಓದಿದ ಮನಸುಗಳು ಅಲ್ಲಿ ಬಹಳ ಹೊತ್ತು ಖುಷಿಪಡುವುದಿಲ್ಲ. ಅಲ್ಲಿಂದ ಇಂಡಿಯನ್ ಮ್ಯೂಸಿಯಂ ಗೆ ಬಂದೆ. ಅದು ಒಂದು ರೀತಿ ಪೇಟೆ ಮಧ್ಯದಲ್ಲಿ ಇದ್ದ ಹಾಗಿದೆ. ಸುತ್ತಲೂ ದೊಡ್ಡ ದೊಡ್ಡ ಆಫೀಸುಗಳು ಸಕರ್ಾರಿ ಕಚೇರಿಗಳು ಬಹಳ ಹೆಸರುವಾಸಿಯಾದ ಈ ವಸ್ತು ಸಂಗ್ರಹಾಲಯವಾದರೋ ಬಹುಪುರಾತನವಾದ ಕಟ್ಟಡ. ಹತ್ತಡಿ ಅಗಲದ ದಪ್ಪ ದಪ್ಪ ಮರದ ಹಲಗೆ ಮೆಟ್ಟಿಲುಗಳ ಏಣಿಯೇ ಸರಿದ ಕಾಲದ ಕಥೆ ಹೇಳುತ್ತದೆ. ಒಂದೊದು ಮಹಡಿ ಒಂದೊಂದು ವಿಭಾಗಕ್ಕೆ ಮೀಸಲಾದ ಸಂಗ್ರಹಾಲಯ. ಇತಿಹಾಸ ವಿಭಾಗ ಹೊಕ್ಕರೆ ದೊಡ್ಡ ದೊಡ್ಡ ದೇವಾಲಯಗಳನ್ನೇ ಅನಾಮತ್ತಾಗಿ ಎತ್ತಿ ತಂದು ಜೋಡಿಸಿ ಇಟ್ಟಿದ್ದಾರೆ ಪ್ರತಿ ಹೆಜ್ಜೆ ಹೆಜ್ಜೆಗೂ ತುಂಬಿ ತುಳುಕುವ ಮಾಹಿತಿಯ ಮಹಾಪೂರ. ಒಂದು ಮಹಡಿಯಲ್ಲಿ ಪ್ರಾಣಿ ವಿಜ್ಞಾನದ ವಸ್ತುಗಳು. ಅಲ್ಲಂತೂ ಐವತ್ತಡಿ ಉದ್ದದ ತಿಮಿಂಗಲದ ಅಸ್ತಿಪಂಜರ ಬ್ರಹತ್ ಡೈನೊಸರದ ಅಸ್ತಿಪಂಜರ ಬೇರೆ ಬೇರೆ ಪ್ರಾಣಿಗಳ ದಂತ ಕಾಲು ಚರ್ಮ ಅಷ್ಟೇ ಅಲ್ಲದೇ ಕೆಡಬಾರದೆಂದು ಔಷಧಗಳಲ್ಲಿ ತೇಲಾಡಿಸುತ್ತಿರುವ ಸತ್ತ ಪ್ರಾಣಿಗಳ ಅಂಗಾಂಗಗಳು ಬ್ರೂಣಗಳು ಆಯಾ ವಿಷಯದಲ್ಲಿ ಅಧ್ಯಯನ ಮಾಡುವವರಿಗೆ ತುಂಬಾ ಉಪಯುಕ್ತವಾಗಿದೆ. ದೊಡ್ಡ ಗಾಜಿನ ಭರಣಿಯಲ್ಲಿ ತೇಲುವ ಮಾನವ ಶಿಶು ನನಗೆ ಭಯ ಹುಟ್ಟಿಸಿತು. ಭೂಗರ್ಭಶಾಸ್ತ್ರದ ಖನಿಜಗಳು ಉತ್ಖನನದ ಅವಶೇಷಗಳು ಸಸ್ಯಶಾಸ್ತ್ರದ ಬಗೆಬಗೆ ಪ್ರಭೇದಗಳು. ನೋಡಿದಷ್ಟೂ ಮುಗಿಯುವುದಿಲ್ಲ. ನನಗೆ ಅಕ್ಷರಶ: ನೋಡಿ ನೋಡಿ ಸುಸ್ತಾಯಿತು. ಪ್ರತಿಯೊಂದೂ ವಿಸ್ಮಯ ತರಿಸುವಷ್ಟು ಚೆನ್ನಾಗಿದೆ. ಆದರೆ ಪ್ರಪಂಚದ ಅಚ್ಚರಿಗಳನ್ನೆಲ್ಲ ಒಂದೇ ಕಡೆ ಗುಡ್ಡೆ ಹಾಕಿದರೆ ಮನಸಿಗೆ ಸಾಕು ಸಾಕು ಅನ್ನಿಸುತ್ತದೆ. ತಿಂದು ತಿಂದು ಹೊಟ್ಟೆಗೆ ಅಜೀರ್ಣವಾದ ಹಾಗೆ ನೋಡಿ ನೋಡಿ ಕಣ್ಣಿಗೆ ಅಜೀರ್ಣವಾಗುತ್ತದೆ.
ಹೇಳಿ ಕೇಳಿ ಸಕರ್ಾರಿ ಕಟ್ಟಡ ಅಲ್ಲಲ್ಲಿ ಅಲ್ಲಲ್ಲಿ ರಿಪೇರಿ ನಡೆಯುತ್ತಿತ್ತು ಮೂರು ತಾಸುಗಳಷ್ಟು ಕಳೆದು ಹೊರ ಬಂದಾಗ ಹೊರ ಪ್ರಪಂಚ ಅಪರಿಚಿತವಾಗಿ ಕಣ್ಣು ಕುಕ್ಕುತ್ತಿತ್ತು. ಇನ್ನೂ ಕೊಲ್ಕತ್ತೆಯ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿದ್ದವು ಆದರೆ ರಾತ್ರಿ ಟ್ರೇನು ಹಿಡಿಯಬೇಕಿತ್ತು ಮುಖ್ಯವಾಗಿ ಮನೆಯಲ್ಲಿ ಬಿಟ್ಟು ಬಂದ ಗಂಡ ಮಕ್ಕಳು ನೆಂಟರಿಗೆ ಕೊಲ್ಕತ್ತೆಯ ಶಾಪಿಂಗ್ ಆಗಬೇಕಿತ್ತು. ಚರ್ಮದ ವಸ್ತುಗಳು ಕೊಲ್ಕತ್ತೆಯ ವಿಶೇಷವೆಂದು ಹೇಳಿ ಕಳಿಸಿದ್ದರು. ಅವರಿವರನ್ನು ಕೇಳಿ ಆ ಅಂಗಡಿಗೆ ಹೋದೆ ಅದಂತೂ ಬ್ರಹತ್ ಮಳಿಗೆ ಒಂದೊಂದು ಮಹಡಿ ಒಂದೊಂದು ಬಗೆಯ ವಸ್ತುಗಳಿಗೆ ಮೀಸಲು ಬ್ಯಾಗು ಪಸರ್ು ಬೆಲ್ಟು ಚಪ್ಪಲು ದರ ಕೇಳಿದರೆ ಹ್ರದಯ ಬಡಿತ ನಿಲ್ಲುತ್ತದೆ. ಆದರೆ ಕೆಲವು ವೆರ್ಯಾಟಿಗಳು ವಿಶಿಷ್ಟವಾಗಿದ್ದು ಬೇರೆ ಕಡೆ ಸಿಗುವುದಿಲ್ಲ. ಅಲ್ಲಿ ಕೆಲವು ರಸ್ತೆಗಳ ಉದ್ದಕ್ಕೂ ಚರ್ಮದ ವಸ್ತುಗಳದೇ ಸಾಲು ಸಾಲು ಅಂಗಡಿಗಳು ಕಾಟನ್ ಸೀರೆಯ ಕೊ-ಆಪರೇಟಿವ್ ಅಂಗಡಿಗೂ ಹೋಗಿ ಖರೀದಿ ಮಾಡಿಯಾಯಿತು. ಅಲ್ಲಿ ದರ ಖಚಿತ ಚೌಕಾಶಿಗೆ ಅವಕಾಶವಿಲ್ಲ ಈಗ ನನ್ನ ಕೈ ಭಾರವಾದ ವಸ್ತುಗಳಿಂದ ತುಂಬಿಹೋಗಿತ್ತು ಬೆಂಗಾಲಿ ರಸಗುಲ್ಲಾ ಖರೀದಿ ಉಳಿದಿತ್ತು. ಅದಕ್ಕಾಗಿಯೇ ಪ್ರಸಿಧ್ಧವಾದ ಸಿಹಿತಿನಿಸಿನ ಅಂಗಡಿಗೆ ಹೋದೆ. ಆನ ತುಂಬಿ ತುಳುಕುತ್ತಿದ್ದರು ಅಲ್ಲಲ್ಲೇ ನಿಂತು ಕೂತು ಬಗೆಬಗೆ ತಿನಿಸು ತಿನ್ನುತ್ತಿದ್ದರು. ಎರಡುದಿನ ಟ್ರೇನಿನಲ್ಲಿ ಪ್ರಯಾಣ ಮಾಡಿದರೂ ಕೆಡದಿರುವಂತಹುದೇನೆಂದು ಕೇಳಿ ಖರೀದಿ ಮಾಡಿದೆ. ಒಯ್ಯಲು ಆಗುವುದಿಲ್ಲ ಅಂತ ಹೇಳಿದ್ದನ್ನು ತಿಂದೆ.
ರಾತ್ರಿಯಾಗಿಬಿಟ್ಟಿತ್ತು. ಟ್ಯಾಕ್ಸಿ ಮಾಡಿಕೊಂಡು ಸಾಮಾನು ಹೇರಿದರೆ ನನಗೇ ಕೂರಲು ಜಾಗ ಸಿಗಲಿಲ್ಲ. ಗೆಷ್ಟ ಹೌಸಿಗೆ ಬಂದು ಪ್ಯಾಕಿಂಗ್ ಮಾಡಿ ರೂಮಿಗೇ ಊಟ ತರಿಸಿಕೊಂಡೆ. ನನ್ನ ಟ್ರೇನು ರಾತ್ರಿ 11.55 ಅಂದರೆ ಮದ್ಯರಾತ್ರಿ ಹನ್ನೆರಡಕ್ಕೆ ಕೊಲ್ಕತ್ತೆ ಧಾರವಾಡದ ನಡುವೆ ಅದೊಂದೇ ರೈಲು. ನಾನು ಬರುವಾಗ ಬಂದಿದ್ದು ಅರ್ಧ ಗಂಟೆ ಬಿಟ್ಟು ಅದೇ ತಿರುಗಿ ಹೊರಡುತ್ತದೆ. ಶೊಂತನು ಸಾರು ಮೊದಲೇ ನನಗೆ ಎಚ್ಚರಿಕೆ ಕೊಟ್ಟಿದ್ದರು ರಾತ್ರಿ 9.30 ರೊಳಗೇ ರೂಮಿಂದ ಹೊರಟು ಬಿಡು ರೈಲು ನಿಲ್ದಾಣದಲ್ಲಿ ಕಾಯುತ್ತ ಕೂತುಕೊ ಅಂತ ಮತ್ತೆ ನಾನೆಲ್ಲಾದರೂ ಮದ್ಯರಾತ್ರಿ ಸ್ಟೇಶನ್ನಿಗೆ ಬಿಡಲು ಬಾ ಅಂತ ಗಂಟು ಬಿದ್ದರೆ ಪಾಪ ಆ ಬಡಪಾಯಿ ಏನು ಮಾಡಬೇಕು? ಪುಣ್ಯಕ್ಕೆ ನನ್ ಏಸಿ ರಿಸವರ್ೇಷನ್ ಕನಫರ್ಮ ಆಗಿತ್ತು. ಅದನ್ನು ಹೊಟೆಲ್ ರಿಸವರ್ೇಷನ್ ದವರು ನೋಡಿ ಹೇಳಿದರು ಶಾ0ತಿನಿಕೇತನದವರು ರವೀಂದ್ರರು ಬಿಡಿಸಿದ ಆರು ದೊಡ್ಡ ದೊಡ್ಡ ಚಿತ್ರಗಳನ್ನು ಕೊಟ್ಟಿದ್ದರು ನಾನು ಸಕತ್ತಾಗಿಯೇ ಖರೀದಿ ಮಾಡಿ ಲಗೇಜು ಹೆಚ್ಚಿಸಿಕೊಂಡಿದ್ದೆ. ಗೆಸ್ಟ ಹೌಸಿನ ಗೇಟಿನವರೆಗೂ ಬಾಯ್ ಗಳು ಬಂದು ಟ್ಯಾಕ್ಸಿ ಹತ್ತಿಸಿದರು ಅಲ್ಲಿಯವರೆಗೆ ಸಮಸ್ಯೆ ಆಗಲಿಲ್ಲ. ಆದರೆ ಟ್ಯಾಕ್ಸಿ ಹೊರಟ ಮೇಲೆ ಡ್ರ್ಯಾವರ್ ಯಾವ ಸ್ಟೇಶನ ಹೊಸದೋ ಹಳೆಯದೋ ಅಂತ ಕೇಳಿ ಬಿಟ್ಟ ನನಗೆ ಎರಡು ಇರುವುದೇ ಗೊತ್ತಿರಲಿಲ್ಲ ಗೋವಾ ಎಕ್ಸಪ್ರೆಸ ಎಲ್ಲಿ ಬರುತ್ತದೆ ಅಂತ ಅವನನ್ನೇ ಕೇಳಿದೆ ತನಗೆ ಅದೆಲ್ಲ ಗೊತ್ತಿಲ್ಲ ಮೀಟರ್ ಹಾಕಿದ್ದೇನೆ ಎಲ್ಲಿ ಹೇಳು ಬಿಡುತ್ತೇನೆ ಅಂದ ನನಗೆ ಸಾದಾ ಭೋಗಿಯ ಟಿಕೆಟು ಕ್ಯಾನ್ಸಲ ಮಾಡಿಸುವ ಕೆಲಸ ಬೇರೆ ಇತ್ತು ನಾನು ಬರುವ ಒಂದು ತಿಂಗಳು ಮೊದಲೇ ರಿಸರ್ವ ಮಾಡಿಸಲು ಹೋಗಿದ್ದರೂ ಏಸಿ ವೇಟಿಂಗ್ ಇತ್ತು ಹಾಗಾಗಿ ಬರುವ ಹೋಗುವ ಎರಡನ್ನೂ ಏಸಿ ಹಾಗೂ ಸಾದಾ ಹೀಗೆ ಎರಡೆರಡು ಟಿಕೇಟು ಕೊಂಡಿದ್ದೆ ಟಿಕೆಟು ರಿಸವರ್ೇಶನ ಮಾಡಿಸುವ ಜಾಗಕ್ಕೆ ಬಿಡು ಎಂದೆ ಅಲ್ಲಿಂದ ಪ್ಲಾಟಫಾರ್ಮ ತುಂಬಾ ದೂರವಾಗುತ್ತದೆ ಎಂದ ಎನಾದರಾಗಲಿ ಅಂತ ಇಳಿದೆ.
ಆ ರಿಸವರ್ೇಶನ್ ಕೌಂಟರ್ ಮಹಡಿ ಮೇಲೆ ಇತ್ತು ನನ್ನ ಲಗೇಜು ಮೂರು ಜನರಿಗಾಗುವಷ್ಟಿತ್ತು ಕೂಲಿ ಕರೆದೆ ಅಲ್ಲಿ ಊದ್ದವಾದ ಸರತಿಯ ಸಾಲು ಕೂಲಿಗೆ ಕಾಯಲು ಹೇಳಲಾಗುವುದಿಲ್ಲ. ಲಗೇಜು ಹಾಲಿನ ಮೂಲೆಯಲ್ಲಿ ಇಡಿಸಿದೆ. ನಾನು ಪಾಳಿಗೆ ನಿಂತೆ ನನ್ನ ಕಣ್ಣು ಲಗೇಜಿನ ಮೇಲೆ ನನ್ನ ಮುಂದೆ ನಿಂತವ ಒಂದೇ ಸೂಟುಕೇಸಿನವ ದುಡ್ಡು ತೆಗೆಯುವಾಗ ಸೂಟುಕೇಸನ್ನು ಎರಡೂ ಕಾಲಿನ ಮಧ್ಯೆ ಅವುಚಿ ಹಿಡಿದುಕೊಂಡಿದ್ದ ಕೇಳಿದವರಿಗೆ ಏ ಕೊಲ್ಕತ್ತಾ ಹೈ ಭಾಯಿ ಮುಜೆ ಮಾಲುಂ ಹೈ ಯಹಾಂ ಕಿ ಖತರಾ ಅಂದುಬಿಟ್ಟ. ನಾನು ನನ್ನ ಲಗೇಜಿನ ಆಸೆ ತೊರೆದೆ. ಪಳಿಯಲ್ಲಿ ಸರಿದು ಹೋಗುತ್ತಿರುವ ನಾನು ಮೂಲೆಯಲ್ಲಿ ಕೇಳುವರಿಲ್ಲದೇ ಕೂತ ನನ್ನ ಲಗೇಜು ಡವಡವಗುಡುವ ಎದೆ ಅಂತೂ ಟಿಕೆಟು ಕೆಲಸ ಮುಗಿಸಿ ಪ್ಲಾಟುಫಾಮರ್ು ಕೇಳಿದೆ ಮೆಟ್ಟಿಲಿಳಿದು ದೂರ ಹೋಗಿ ಅಲ್ಲೆಲ್ಲೋ ಇತ್ತು ಮಹಡಿ ಮೇಲೆ ಕೂಲಿಗಳು ಇರಲಿಲ್ಲ. ಇನ್ನೇನು ತಲೆ ಬಗಲು ಭುಜ ಎಲ್ಲೆಂದರಲ್ಲಿ ಬ್ಯಾಗು ಹೊತ್ತುಕೊಂಡೆ. ಹೊರುವ ಕೆಲಸ ಮುಗಿಯಿತು ಆದರೆ ಹೆಜ್ಜೆ ಕಿತ್ತು ಇಡಲು ಆಗಲಿಲ್ಲ ಜೋಲಿ ಹೋಗಿ ಬೀಳುವಂತೆ ಆಯಿತು ಈ ಸ್ಥಿತಿಯಲ್ಲೇ ಮೆಟ್ಟಿಲಿಳಿದು ಒಂದಿಷ್ಟು ದೂರ ಬಂದೆ ಪ್ಲಾಟುಫಾಮರ್ಿನ ಉದ್ದಕ್ಕೂ ಜನ ಮಲಗಿ ಬಿಟ್ಟಿದ್ದರು. ಯಾವಾವ ಊರಿಗೆ ಎಷ್ಟೆಟ್ಟು ಗಂಟೆಗೆ ಹೋಗುವವರೋ ಅಥವಾ ಮನೆಯೇ ಇಲ್ಲದೇ ದಿನಾಲೂ ಇಲ್ಲೇ ಮಲಗುವವರೋ ಗೊತ್ತಿಲ್ಲ.
ನನಗೆ ಬಿಜಾಪುರ ಬಸ್ಸು ನಿಲ್ದಾಣ ನೆನಪಾಯಿತು ಈಗ ಹದಿನೈದು ವರ್ಷಗಳ ಹಿಂದೆ ನಾನಲ್ಲಿ ನೌಕರಿ ಮಾಡುವಾಗ ಅಪರಾತ್ರಿ ಹೋಗಿ ಬಸ್ಸು ಇಳಿಯುತ್ತಿದ್ದೆ ಬಸ್ಸು ನಿಲ್ದಾಣದ ತುಂಬಾ ಹೆಂಗಸರು ಮಕ್ಕಳು ಅಡ್ಡಾದಿಡ್ಡಿ ಮಲಗಿರುತ್ತಿದ್ದರು ಆ ಮನುಷ್ಯವಾಸವೇ ನನ್ನ ಒಂಟಿತನಕ್ಕೆ ಧೈರ್ಯ ಕೊಡುತ್ತಿತ್ತು ಈಗಲೂ ಕಳ್ಳ ಕಾಕರಂತೆ ಕಾಣುತ್ತಿರುವ ಚಿಂದಿಬಟ್ಟೆಯ ಆಕಾರಗಳು ಒಂದು ನಮೂನಿ ಭಯವನ್ನು ಒಂದು ನಮೂನಿ ಧೈರ್ಯವನ್ನು ಏಕಕಾಲದಲ್ಲಿ ಕೊಡುತ್ತಿದ್ದವು ಆ ಊದ್ದನೆಯ ಪ್ಲಾಟುಫಾಮರ್ಿನ ತುದಿಗೆಲ್ಲೋ ನನ್ನ ರೈಲು ಬರುತಿತು.್ತ ನಿನ್ನ ಶಿಲುಬೆ ನೀನೇ ಹೊರು ಎಂಬ ಕ್ರಿಸ್ತನನ್ನು ನೆನೆಸಿಕೊಂಡು ತಯಾರಾದೆ ಆಗ ಹುಬ್ಲಿ ಜಾನೆಕಾ ಕ್ಯಾ ಎಂಬ ಮಾತು ಕೇಳಿತು ತಿರುಗಿ ನೋಡಿದೆ ಇಬ್ಬರು ಗಂಡಸರು ಹಾಂ ಎಂದೆ ಕನ್ನಡವಾಲೆ? ಎಂದರು ಹೌದು ಎಂದೆ ಪಟಪಟ ನನ್ನ ಸಕಲ ಸಾಮಾನು ಸರಂಜಾಮುಗಳನ್ನು ತಮ್ಮ ತಲೆ ಭುಜಗಳ ಮೇಲೆ ಹೊತ್ತು ಹೊರಟೇ ಬಿಟ್ಟರು ನಾನು ಶಬ್ದಶ: ಹಗುರಾಗಿದ್ದೆ. ನನ್ನ ವ್ಯಾನಿಟಿ ಬ್ಯಾಗೋಂದೇ ನನಗೆ ಉಳಿದ ಭಾರ. ಅವರು ಹುಬ್ಬಳ್ಳಿಯ ವ್ಯಾಪಾರಸ್ತರು ಹದಿನೈದು ದಿನ ಬಿಟ್ಟು ಬರಲಿದ್ದ ರಾಖಿ ಖರೀದಿಗೆ ದೂರದ ಕೊಲ್ಕತ್ತೆಗೆ ಬಂದಿದ್ದರು ಅವರ ದೊಡ್ಡ ಲಗೇಜು ಪಾರ್ಸಲ್ ಮಾಡಿಸಿ ಹಾಕಿದ್ದರು ತಾವು ಇಬ್ಬರು ಗಂಡಸರು ಬಂದೇ ಒದ್ದಾಡುತ್ತಿದ್ದೇವೆ ನೀವು ಹೇಗೆ ನಿಭಾಯಿಸಿದಿರಿ ಅಂದರು ನನಗೆ ಹೊರಟಾಗಿನಿಂದ ಈ ಪ್ರಶ್ನೆ ಕೇಳಿ ಕೇಳಿ ಅದು ಮೆಚ್ಚುಗೆಯೋ ಛೀಮಾರಿಯೋ ಎಚ್ಚರಿಕೆಯೋ ಆಕ್ಷೇಪಣೆಯೋ ತಿಳಿಯದ ಹಾಗೆ ಆಗಿಬಿಟ್ಟಿತ್ತು ನನ್ನ ಮಟ್ಟಿಗೆ ಇದು ಅನಿವಾರ್ಯ ಅಪ್ಪ ಅಮ್ಮ ಗಂಡ ಎಲ್ಲರೂ ಕಾರ್ಯ ತತ್ಪರರು ಸಾಹಿತ್ಯ ರಂಗಭೂಮಿ ಇವೆಲ್ಲ ನನ್ನ ಗಂಡನ ಮಟ್ಟಿಗೆ ಕೆಲಸಗೇಡಿಗಳ ಕಾರುಬಾರು ಆದರೆ ಅವನೆಷ್ಟು ಒಳ್ಳೆಯ ಮನುಷ್ಯನೆಂದರೆ ತನಗೆ ಜೋತು ಬೀಳದೇ ನೀನು ಏನಾದರೂ ಮಾಡಿಕೊ ಎನ್ನುತ್ತಾನೆ ಅಷ್ಟಾದರೂ ಅವಕಾಶವಿದೆಯಲ್ಲ ಅದನ್ನೂ ಬಿಟ್ಟುಕೊಂಡರೆ ಈ ಜೀವನದಲ್ಲಿ ನೌಕರಿ ಊಟ ಬಿಟ್ಟು ಏನೂ ಮಾಡಲು ಸಾಧ್ಯವಾಗುವುದಿಲ್ಲ ಅಪಾಯಗಳು ಎಲ್ಲಾ ಕಡೆ ಇವೆ ಬೆಳಿಗ್ಗೆ ವಾಕಿಂಗು ಹೋದ ಹೆಂಗಸರನ್ನು ಮಾಂಗಲ್ಯದ ಆಸೆಗಾಗಿ ಕೊಲ್ಲುವುದಿಲ್ಲವೇ?
ನೂರರಲ್ಲಿ ಹತ್ತು ಜನ ಕ್ರಿಮಿನಲ್ ಗಳು ಅಂತ ಅಂದುಕೊಂಡರೂ ತೊಂಬತ್ತು ಜನರ ಮೇಲೆ ಭರವಸೆಯಿಟ್ಟು ಬದುಕಬೇಕು ಎನ್ನವ ಸಕಾರಾತ್ಮಕ ನಿಲುವಿನವಳು ನಾನು. ನನ್ನ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವಕಾಶ ಸಿಕ್ಕಾಗ ಒಬ್ಬೊಬ್ಬಳೇ ಬೇರೆ ಬೇರೆ ರಾಜ್ಯ ಸುತ್ತಿದ್ದೇನೆ ಬಹುತೇಕ ಬಸ್ಸು ರೈಲುಗಳಲ್ಲಿ ಜನಸಾಮಾನ್ಯರ ಜೊತೆ ಓಡಾಡಿದ್ದೇನೆ. ಅಲ್ಲಿನ ಬದುಕನ್ನು ಸಾಧ್ಯವಾದಷ್ಟು ಹತ್ತಿರದಿಂದ ನೋಡಬೇಕೆಂದು ಟ್ಯಾಕ್ಸಿಗಳಲ್ಲೂ ಓಡಾಡಿಲ್ಲ. ಸಾಕಷ್ಟು ಸಲ ಭಯವಾಗಿದೆ. ಅಪಾಯವಾಗಿಲ್ಲ. ಕಾಪಾಡಿದ್ದು ದೇವರಲ್ಲ. ನಮ್ಮಂತೆಯೇ ಎಲ್ಲ ಊರುಗಳಲ್ಲೂ ಇರುವ ಶ್ರೀ ಸಾಮಾನ್ಯ ಜನ. ಭಾಷೆ ಬಣ್ಣ ಜಾತಿ ಗಡಿಗಳನ್ನು ಮೀರಿ ನಮ್ಮಗಳ ನಡುವೆ ಇನ್ನೂ ಉಳಿದಿರುವ ಮಾನವೀಯತೆ ಒಸರುವ ಮನ. ಅದೇ ಜನಗಣಮನ ಕವಿ ರವೀಂದ್ರರ ಭಾಗ್ಯ ವಿಧಾತ ಎನ್ನುವ ಜೀವಾತ್ಮ.
ಹನ್ನೆರಡಕ್ಕೆ ರೈಲು ಬಂದ ಕೂಡಲೇ ಆ ಅಣ್ಣಗಳೇ ನನ್ನ ಏಸಿ ಭೋಗಿ ಹುಡುಕಿ ಲಗೇಜು ಇಟ್ಟುಕೊಟ್ಟು ತಮ್ಮ ಸಾದಾ ಭೋಗಿಗೆ ಹೋದರು ಹುಬ್ಬಳ್ಳಿ ತನಕ ರೈಲು ನಿಂತಾಗಲೆಲ್ಲ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು ಏಸಿಯಾದ ಕಾರಣ ಜನದಟ್ಟಣೆ ಇರಲಿಲ್ಲ ಸ್ವಚ್ಚತೆಯೂ ಇತ್ತು. ಆದರೆ ನಿದ್ದೆ ಸುಳಿಯದಿರುವಷ್ಟು ವಂಗಸುಂದರಿ ಮನಸ್ಸನ್ನು ಆಕ್ರಮಿಸಿಕೊಂಡಿದ್ದಳು ಕೊಲ್ಕತ್ತೆಯ ತುಂಬಾ ಕಾಣುತ್ತಿದ್ದ ದೊಡ್ಡ ದೊಡ್ಡ ಬ್ರಿಟೀಶ ಕಾಲದ ಹಳೆಯ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದ್ದರೂ ಅದರಲ್ಲಿನ ಇಕ್ಕಟ್ಟಿನ ಮನೆಗಳಲ್ಲಿ ವಾಸಿಸುತ್ತಿರುವ ಜನರು ಬಾಲ್ಕನಿಗಳಲ್ಲಿ ಒಣ ಹಾಕಿದ ಬಟ್ಟೆ ರಾಶಿ ಪುಟ್ಟ ತುಳಸಿ ಕುಂಡ ಬಾಟಲಿಯಿಂದ ಹೊರಬಿದ್ದು ಸರಸರ ಮಾಡು ತಬ್ಬಿಕೊಂಡ ಮನಿಪ್ಲಾಂಟುಗಳ ಮೂಲಕ ತೆರೆದು ಬಿದ್ದ ಅವರ ಬದುಕು. ಕೆಲವು ನಿರ್ಜನ ಕಟ್ಟಡಗಳಲ್ಲಿ ಫಡಫಡ ರೆಕ್ಕೆ ಬಡಿಯುತ್ತ ನಿಗೂಢ ಮೌನಕ್ಕೆ ಕಾವು ಕೊಡುತ್ತಿರುವ ಪಾರಿವಾಳ ಸಂಕುಲ ರೂಮಿನ ಕಿಡಕಿ ಹೊರಗೆ ಇಟ್ಟಿದ್ದ ಏಸಿ ಯಂತ್ರದ ಮೇಲೆ ಒಣ ಹುಲ್ಲು ಒಗೆಯುತ್ತ ಗೂಡಿನ ಹುನ್ನಾರಲ್ಲಿದ್ದ ಗುಬ್ಬಕ್ಕ ಕಡುಕಪ್ಪು ಹೂಗ್ಲಿಯಲ್ಲಿ ಕೆಂಪು ಚೌಕಳಿ ಟವೆಲ್ಲುಟ್ಟು ದುಡುಂ ಹಾರುವ ಚಿಲ್ಟಾರಿ ಹೌರಾ ಬ್ರಿಜ್ಜಿನ ಕಮಾನುಗಳ ನಡುವೆ ಸಳಸಳ ಬೆವರುತ್ತ ಬಸ್ಸು ನಡೆಸುವ ಕರಿ ಬೆನ್ನಿನ ಡ್ರೈವರ್ ದೊಡ್ಡ ಕಣ್ಣಿನ ಕಾಳಿಗೆ ನಮಸ್ಕರಿಸುವ ಕೆಂಪುತಾವರೆ ಮೊಗ್ಗಂತ ವಂಗ ತರುಣಿ ಒಂದೇ ಎರಡೇ ನನ್ನ ಮನದ ಗೋಡೆಯ ತುಂಬಾ ಬೆಂಗಾಲಿ ಹಸೆ ಚಿತ್ತಾರ. ಕವಿತೆ ಬರೆದೆ. ಕತೆ ಬರೆದೆ. ಈಗ ಲೇಖನ ಬರೆದೆ ಆದರೂ ಒಳಗಿಳಿದ ಕೊಲ್ಕತ್ತೆಯ ಚಿತ್ರಗಳಿಂದ ಮುಕ್ತಿಯಿಲ್ಲ. ಬಸ್ಸು ಕಾರಿನ ನಡುವೆಯೇ ಧುತ್ತನೆ ತೆವಳುವ ಮಗುವಿನಂತೆ ಬಂದುಬಿಡುವ ಟ್ರಾಂ ಎಂಬ ರಸ್ತೆೆರೈಲು ಆಕಾಶದಿಂದ ಯಾರೋ ಇಳಿಬಿಟ್ಟ ಹಾಗೆ ಕಾಣುವ ಕಮಾನುಗಳ ಹೌರಾ ಬ್ರಿಜ್ಜು ಎಲ್ಲವೂ ಜ್ಞಾಪಕ ಚಿತ್ರಶಾಲೆಯ ಶಾಶ್ವತ ಭಿತ್ತಿಗಳು ಮೊನ್ನೆ ಮಳೆಗಾಲದ ಮದ್ಯಾನ್ಹ ಠಾಕೂರಬರಿಯ ಕಟ್ಟಿಗೆ ಏಣಿಯಿಂದ ಇಳಿದಿಳಿದು ಬರುವ ಕೆಂಪು ಪುಗ್ಗಿತೋಳಿನ ಕುಪ್ಪುಸ ಧರಿಸಿದ ರವೀಂದ್ರರ ಅತ್ತಿಗೆ ನೆನಪಾದಳು ಬಸ್ಸಿನ ಸೀಟಿನ ಮೇಲಿನ ತಲೆಗೆ ಬಡಿಯುತ್ತಿದ್ದ ಮಲ್ಲಿಗೆ ಮೊಗ್ಗಿನ ಮಾಲೆಯ ಘಾಟು ವಾಸನೆ ತೇಲಿ ಬಂತು ಹೀಗೆ ಇದು ಮುಗಿಯುವುದಲ್ಲ ಬಿಡಿ ಒಮ್ಮೆ ಎದೆಗಿಳಿಸಿಕೊಂಡರೆ ಯಾವುದೇ ಊರು ಜನ ಜಾಗ ನಮ್ಮೊಳಗೆ ಖಾಯಂ ಇರುತ್ತಾರೆ. ನಮ್ಮೊಳಗೇ ಒಂದು ಊರು…ದೇಶ…



0 Comments