
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.
ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.
ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ
ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.
ಏನೇನೋ ವಸ್ತುಗಳನ್ನು ಮಾರುವ ಅಂಗಡಿಯೊಂದಕ್ಕೆ ಒಬ್ಬ ಗ್ರಾಹಕ ಬಂದ. ಬಂದವನು ಅಂಗಡಿ ತುಂಬಾ ಕಣ್ಣಾಡಿಸುತ್ತಿದ್ದ.
‘ ಏನು ಬೇಕು ನಿಮಗೆ ? ‘ ಕೇಳಿದ ಅಂಗಡಿಯವ
‘ ನನಗೊಂದು ಚಾಕು ಬೇಕು ‘ ಹೇಳಿದ ಗ್ರಾಹಕ.
‘ ಓಹ್ ! ಅದಕ್ಕೇನು ಕೊಡೋಣ ಬಿಡಿ. ಹಾಗೆ ಹೇಳುವುದನ್ನು ಬಿಟ್ಟು ನೀವೇ ಅಂಗಡಿಯ ಮೂಲೆಮೂಲೆಗಳನ್ನು ಹಾಗೆ ಕಣ್ಣುಗಳಲ್ಲಿ ತಾಲಾಶ್ ಮಾಡುವುದು ಎಂದರೇನು ? ‘
‘ ಓಹ್ , ಕ್ಷಮಿಸಿ. ನಾನು ತೆಗೆದುಕೊಳ್ಳುವ ವಸ್ತುವಿನ ಬಗ್ಗೆ ಕೂಲಂಕುಷವಾಗಿ ನೋಡುವ ಹಕ್ಕೂ ನನಗಿಲ್ಲ ಅಂದಮೇಲೆ ನಿಮ್ಮ ಬಳಿ ನಾನು ವ್ಯವಹರಿಸಲಾರೆ’ ಎಂದು ಹೊರಡಲುನುವಾದ
‘ ಅಯ್ಯೋ, ತಮಾಷೆ ಮಾಡಿದೆ ಅಷ್ಟೆ. ನೀವು ಕೊಳ್ಳುವ ವಸ್ತುವಿನ ಮೇಲೆ ನಿಮಗಲ್ಲದೆ ಮತ್ಯಾರಿಗೆ ಹಕ್ಕು ಇರುತ್ತೆ ಹೇಳಿ ? ಇದಕ್ಕೆ ನೀವು ಅಷ್ಟೊಂದು ಸೀರಿಯಸ್ ಆಗ್ಬಾರ್ದು ಸರ್. ದಯವಿಟ್ಟು ಒಳಗೆ ಬನ್ನಿ ‘ ಎಂದು ಬೇಡಿಕೊಂಡ ಅಂಗಡಿಯವ.
ಹಿಂತಿರುಗಿ ಬಂದ ಗ್ರಾಹಕ ಅಂಗಡಿಯೊಳಗೆ ಹೋಗಿ ಎಲ್ಲಾ ವಸ್ತುಗಳನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ನೋಡತೊಡಗಿದ.
ಅಂಗಡಿಯವ ಮತ್ತೊಮ್ಮೆ ಕೇಳಿದ ;
‘ ನಿಮಗೆ ಬೇಕಾಗಿರುವುದು ಏನು ಸರ್ ?’
‘ ನನಗೊಂದು ಹರಿತವಾದ ಚಾಕು ಬೇಕು ‘
‘ ಸರಿ ಸರ್. ಇಲ್ಲಿವೆ ನೋಡಿ. ನಿಮಗೆ ಬೇಕಾಗಿರುವುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ’

ಸಾಕಷ್ಟು ಚಾಕುಗಳನ್ನು ಪರಿಶೀಲಿಸಿದ ಆತ, ಅವುಗಳಲ್ಲಿ ಒಂದನ್ನು ಎತ್ತಿಕೊಂಡು, ದಿಟ್ಟಿಸಿ ನೋಡಿ, ‘ ಇದನ್ನೇ ಕೊಡಿ’ ಎಂದು ದೃಢವಾಗಿ ಹೇಳಿದ.
ಪ್ಯಾಕ್ ಮಾಡಲು ಮುಂದಾದ ಅಂಗಡಿಯವ ಹೇಳಿದ ;
‘ ನಿಮಗೆ ತೊಂದರೆ ಇಲ್ಲ ಅಂದರೆ ನಿಮ್ಮನ್ನು ಒಂದು ವಿಷಯ ಕೇಳಬಹುದೆ ? ‘
‘ ಕೇಳಿ. ಆದರೆ ನಾನೇನು ಚೌಕಾಸಿ ಮನುಷ್ಯ ಅಲ್ಲ ಬಿಡಿ’ ಎಂದ.
‘ ಈ ಚಾಕುವನ್ನು ನೀವು ಏಕೆ ಕೊಳ್ಳುತ್ತಿದ್ದೀರಿ ?’
‘ ಅದನ್ನು ನಿಮಗೇಕೆ ಹೇಳಬೇಕು ? ‘
‘ ಹೇಳಬೇಕು. ಏಕೆಂದರೆ ನಾನು ಇದನ್ನು ನಿಮಗೆ ಮಾರುತ್ತಿದ್ದೇನೆ ‘
‘ ಅದಕ್ಕಾಗಿ ನಾನು ದುಡ್ಡು ಕೊಡುತ್ತೇನಲ್ಲ ‘
‘ ದುಡ್ಡು ಕೊಡುವುದು ಚಾಕುವಿಗೆ ಹೊರತು, ಅದನ್ನು ಕೊಳ್ಳುವ ಕಾರಣಕ್ಕಾಗಿ ಅಲ್ಲವಲ್ಲ ‘
‘ಅಂದರೆ ವಸ್ತುಗಳನ್ನು ಕೊಳ್ಳುವ ಕಾರಣವನ್ನು ನಿಮಗೆ ಗ್ರಾಹಕರು ಹೇಳಬೇಕೆ ? ‘
‘ಎಲ್ಲರೂ ಹೇಳಬೇಕಿಲ್ಲ. ನೀವು ಮಾತ್ರ ಹೇಳಬೇಕು’
‘ ಅದೇಕೆ ? ‘
‘ ನೀವು ಕೊಳ್ಳುತ್ತಿರುವುದು ಚಾಕುವನ್ನು ಸ್ವಾಮಿ. ಇದರ ಉದ್ದೇಶ ತಿಳಿಯದೆ ನಾನಾದರೂ ಹೇಗೆ ಕೊಡಲಿ ?’
‘ ಅಂದರೆ ನಿಮ್ಮ ಮಾತಿನ ಅರ್ಥವೇನು ? ‘
‘ಚಾಕುವನ್ನು ನೀವು ಏತಕ್ಕೆ ಬಳಸುತ್ತೀರಿ ಎಂಬುದನ್ನು ಹೇಳಿಬಿಡಿ. ನಾನು ಯಾವುದೇ ತಕರಾರು ಇಲ್ಲದೆ ಅದನ್ನು ನಿಮಗೆ ಮಾರುತ್ತೇನೆ ‘
‘ ನಿಮಗೆ ತಿಳಿದಿಲ್ಲವೆ ? ‘
‘ ಗೊತ್ತಿದೆ ‘
‘ ಹಾಗಾದರೆ ನೀವೇ ಹೇಳಿ. ನೀವು ಬಿಟ್ಟದ್ದನ್ನು ನಾನು ಸೇರಿಸುತ್ತೇನೆ ‘
‘ ಹೌದಾ? ಕೇಳಿ ಹಾಗಾದರೆ ಎಷ್ಟು ವರ್ಷಗಳಿಂದ ವ್ಯಾಪಾರ ಮಾಡಿರೋನು ನಾನು. ಚಾಕುವಿನ ಬಳಕೆ ಬಗ್ಗೆ ನನಗೆ ಗೊತ್ತಿಲ್ಲವೆ ? ‘ ಎಂದವನು ತನ್ನ ಪಟ್ಟಿಯನ್ನು ನೀಡ ತೊಡಗಿದ.
– ತರಕಾರಿಗಳನ್ನು ಹೆಚ್ಚಬಹುದು
– ಪ್ಯಾಕೆಟ್ ಗಳನ್ನು ಓಪನ್ ಮಾಡಲು
– ಹಣ್ಣುಗಳನ್ನು ಹೆಚ್ಚಲು
– ಪೇಪರ್ ಕಟ್ ಮಾಡಲು
– ಬ್ರೆಡ್ , ಫಪ್ಸ್ , ದಿಲ್ ಪಸಂದ್ ನಂಥ ಬೇಕರಿ ಪದಾರ್ಥಗಳನ್ನು ಕಟ್ ಮಾಡಲು.
– ಮಾಂಸವನ್ನು ಮೂಳೆಗಳಿಂದ ಬೇರ್ಪಡಿಸಲು
– ಚೀಸ್ ಕಟ್ ಮಾಡಲೆಂದೇ ವಿಶೇಷ ಚಾಕುಗಳಿವೆ
– ನಿಮಗೆ ಗೊತ್ತಾ ಈ ಟೋಮ್ಯಾಟೋ ಇದೆಯಲ್ಲ ಅದರ ಸ್ಕಿನ್ ತುಂಬಾ ಡೆಲಿಕೇಟ್ ಅಲ್ವಾ ಹಾಗಾಗಿ ಅದನ್ನ ಕಟ್ ಮಾಡೋಕೆ ಅಂತಾನೆ ವಿಶೇಷ ಚಾಕುಗಳಿವೆ. ಇನ್ನು ಆಹಾರವನ್ನು ಅಲಂಕಾರಿಕವಾದ ಶೇಪ್ ಗಳಿಗೆ ಕಟ್ ಮಾಡಲೆಂದೇ ಕೆಲವು ಚಾಕುಗಳಿವೆ. ಅವು ಆಯಾ ಆಹಾರದ ಶೇಪ್ ಗಳನ್ನು ಹೊಂದುವ ಬ್ಲೇಡ್ ಗಳನ್ನು ಹೊಂದಿರುತ್ತವೆ. ಅವನ್ನು ಡೆಕೊರೇಟಿವ್ ನೈಫ್ ಎನ್ನುತ್ತಾರೆ . ಆದರೆ ಇಲ್ಲೆಲ್ಲ ಅಂಥವು ಹೋಗಲ್ಲ ಸರ್. ನಾನು ಅದಕ್ಕೆ ಅವೆಲ್ಲ ತಂದಿಡೋಕೆ ಹೋಗಲ್ಲ.

ಇನ್ನೂ ಏನೋ ಹೇಳಬೇಕೆಂದು ಅವನು ತಡಕಾಡುತ್ತಿದ್ದ. ಅಷ್ಟರಲ್ಲಿ ಆ ಗ್ರಾಹಕ ಮುಂದುವರೆಸಿ ,
‘ ಪರವಾಗಿಲ್ಲ. ನೀವು ಮಾರುವ ವಸ್ತುವಿನ ಬಳಕೆಯ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿದ್ದೀರಿ ‘
‘ ಅಷ್ಟೂ ತಿಳಿಯದವನು ವ್ಯಾಪಾರಿ ಆಗಲಾರ ಸರ್ ‘
‘ ಹೌದು. ನೀವು ಒಳ್ಳೆಯ ಮನಸ್ಸಿನ ವ್ಯಾಪಾರಿ ‘
‘ ವ್ಯಾಪಾರಕ್ಕೆಂತ ಒಳ್ಳೆಯ ಮನಸ್ಸು ಸರ್ ? ಅದಕ್ಕೆ ಒಟ್ಟು ಮಾರುವ ಗುಣ ಇದ್ದರೆ ಸಾಕು ‘
‘ ಮಾರುವವನು ಮನುಷ್ಯನೇ ತಾನೆ ? ‘
‘ ಕೊಳ್ಳುವವನೂ ಮನುಷ್ಯನೇ ತಾನೆ ?’
‘ಅದಕ್ಕಾಗಿಯೇ ಕೊಳ್ಳಲು ಬಂದ ನಿಮಗೆ ಇಷ್ಟೆಲ್ಲ ವಿವರ ಹೇಳಬೇಕಾಯಿತು ಅಲ್ಲವೆ ಸರ್ ‘ ಎಂದ ಅಂಗಡಿಯವನ ಕೈಕುಲುಕಿ ಗ್ರಾಹಕ ಹೊರಟ…
ಹೊರಟವನು ತನ್ನ ಸ್ಕೂಟರ್ ಏರಿ ಅಂಗಡಿಯವನ ಕಡೆ ಒಂದು ಕಿರುನಗೆ ಬೀರುತ್ತ ;
‘ ಅಂದಹಾಗೆ ಚಾಕುವಿನಿಂದ ಒಬ್ಬನನ್ನು ಇರಿದು ಕೊಲ್ಲಲೂಬಹುದು ‘ ಎಂಬುದು ನಿಮಗೆ ತಿಳಿದಿಲ್ಲವೋ ಅಥವಾ ಬೇಕಂತಲೇ ನೀವು ಅದನ್ನು ಹೇಳಲಿಲ್ಲವೋ ? ‘
ಎಂದು ಹೇಳಿ ಅಂಗಡಿಯವನ ಉತ್ತರಕ್ಕೂ ಕಾಯದೆ ಸುರ್ರನೆ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಬಿರ್ರನೆ ಪರಾರಿಯಾದನು.
###
ಸದಾ ಚಟುವಟಿಕೆಯಿಂದಿದ್ದ ವ್ಯಕ್ತಿಯೋರ್ವ ಕಳೆದ ಆರು ತಿಂಗಳಿನಿಂದ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಿತು. ಯಾವುದೇ ಸಭೆ ಸಮಾರಂಭಗಳಿಲ್ಲ. ಖಾಸಗೀ ಕಾರ್ಯಕ್ರಮಗಳಿಲ್ಲ. ಒಂದು ಪ್ರವಾಸವಿಲ್ಲ. ಪ್ರಣಯಕ್ಕೂ ಪೂರ್ತಿ ಮನಸ್ಸಿಲ್ಲ. ವಿಹಾರವಿಲ್ಲ. ವಿರಸವೂ ಇಲ್ಲ . ಇಂಥ ಸಮಯದಲ್ಲಿ ಜಡ್ಡುಗಟ್ಟಿದ್ದ ಅವನ ಮನಸ್ಸಿಗೆ ಪೌಷ್ಠಿಕಾಂಶದಂತೆ ಒದಗಿಬಂದದ್ದು ಅವನು ಭಾಗವಹಿಸಬೇಕಾದ ಒಂದು ಸಣ್ಣ ಕಾರ್ಯಕ್ರಮ .
ಎಷ್ಟೋ ದಿನಗಳ ನಂತರ ಮನೆಯಿಂದ ಹೊರಗೆ ಹೊರಡಲು ಸಿಕ್ಕ ಅವಕಾಶದಿಂದಾಗಿ ಉತ್ತೇಜಿತನಾದ ಆತ ತನ್ನ ಕೋಣೆಯಲ್ಲಿದ್ದ ಬಟ್ಟೆಗಳಲ್ಲಿ ಯಾವುದನ್ನು ಹಾಕಿಕೊಳ್ಳುವುದೆಂದು ಆಯ್ಕೆಯ ಸಮಸ್ಯೆಯಲ್ಲಿರುವಾಗ ತಾನು ಹೆಚ್ಚಾಗಿ ಬಳಸುತ್ತಿದ್ದ ಒಂದು ಅಂಗಿಯನ್ನು ಎತ್ತಿಕೊಂಡ. ಆರು ತಿಂಗಳುಗಳಿಂದ ಬಾಹು ಬಂಧನಕ್ಕೊಳಗಾಗದಿದ್ದ ಆ ಅಂಗಿಯು ಅವನ ಸ್ಪರ್ಷಕ್ಕೆ ಹೆದರಿ, ಭಯಗೊಂಡು ಕೇಳಿತು :
‘ ನೀನಿನ್ನೂ ಬದುಕಿದ್ದೀಯಾ ? ‘
ಅವನು ಕಕ್ಕಾಬಿಕ್ಕಿಯಾದ.
‘ ನಾನೆಲ್ಲೋ ನೀನು ಬದುಕಿಲ್ಲ.ನೀನಿನ್ನು ನನ್ನನ್ನು ತೊಡುವುದಿಲ್ಲ. ನಾನು ಇದೇ ಹ್ಯಾಂಗರ್ ನಲ್ಲೇ ಹ್ಯಾಂಗ್ ಮಾಡ್ಕೊಳ್ಳೋದು ವಾಸಿನೇನೋ ಅನ್ಕೊತಿದ್ದೆ. ಅಷ್ಟರಲ್ಲಿ ಇವತ್ತು ನನ್ನ ತೊಡಲು ಮುಂದಾಗಿದ್ದೀಯ ‘ ಎಂದಿತು.

ಭಯಗೊಂಡ ಆತ, ಆ ಅಂಗಿಯನ್ನು ಹಾಗೇ ಹ್ಯಾಂಗರಿನಲ್ಲಿ ಇಟ್ಟ . ತಾನು ಹೋಗಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಮನೆಯಲ್ಲೇ ಉಳಿದ.
ಹೀಗೆ ಅನೇಕ ತಿಂಗಳುಗಳ ಕಾಲ ತಾನು ಬಳಸದಿದ್ದ ಕಾರಣಕ್ಕೆ ತನ್ನ ಅಂಗಿಯೇ ತಾನು ಬದುಕಿಲ್ಲ ಎಂದು ತಿಳಿದಿದೆ ಎಂದಾದರೆ ಹೊರ ಪ್ರಪಂಚಕ್ಕೆ ನಾನೆಷ್ಟು ಅನಗತ್ಯವಾಗಿರಬಹುದು, ಯಾರೊಬ್ಬರೂ ನಾನು ಎಲ್ಲಿಗಾದರೂ ಬರಲೇಬೇಕೆಂದು ಹಠ ಹಿಡಿದು ಕರೆಸಿಕೊಳ್ಳಲಿಲ್ಲ. ಈಗ ಯಾರೋ ಕರೆದರು ಎಂದು ನಾನೇಕೆ ಹೊರಡಬೇಕು ? ಇನ್ನು ನಾನು ಯಾವುದೋ ಒಂದು ಬಟ್ಟೆ ಹಾಕಿಕೊಂಡು ಹೊರಟು ನಿಂತಾಗ ಚಪ್ಪಲಿಗಳೂ ” ನೀನಿನ್ನೂ ಬದುಕಿದ್ದೀಯಾ ?” ಎಂದು ಕೇಳಿಬಿಟ್ಟರೆ ಏನು ಮಾಡಲಿ ಎಂದೆಲ್ಲ ಯೋಚಿಸಿ. ಹೊರಗೆ ಹೋಗದಿರಲು ನಿರ್ಧರಿಸಿದ.
ಹ್ಯಾಂಗರಿನಲ್ಲಿದ್ದ ಅಂಗಿಯೂ ಆತ ನಿಜಕ್ಕೂ ಬದುಕುಳಿದಿರಲಾರ ಎಂದು ಭಾವಿಸಿಕೊಂಡಿದೆಯೋ ಅಥವಾ ಆತನ ತೋಳುಗಳಲ್ಲಿ ಸೇರುವುದಕ್ಕಾಗಿ ಕಾಯುತ್ತಾ ಕೂತಿದೆಯೋ ಗೊತ್ತಿಲ್ಲ. ಆದರೆ ತಾನು ಹ್ಯಾಂಗರ್ ಗೆ ಹ್ಯಾಂಗ್ ಮಾಡಿಕೊಳ್ಳುವ ಹಾಗಿಲ್ಲ ಎಂಬುದಂತೂ ಆ ಶರ್ಟ್ ಗೆ ಮನವರಿಕೆಯಾಗಿರಬೇಕು.
‘ ಚಾಕು ವಿನಿಂದ ಇರಿದು ವ್ಯಕ್ತಿಯೋರ್ವನ ಕೊಲೆ ‘ ಎಂಬ ಸುದ್ದಿಯೇನಾದರೂ ಬಂದುಬಿಟ್ಟರೆ ಎಂಬ ಭಯದಿಂದ ಆ ಅಂಗಡಿಯವ ಪ್ರತಿನಿತ್ಯ ದಿನಪತ್ರಿಕೆಯ ಎಲ್ಲ ಪುಟಗಳನ್ನು ತಿರುವಿ ಹಾಕುತ್ತಾನೆ
ಇತ್ತ ಬದುಕಿರುವ ತನ್ನ ಒಡೆಯನ ಅಸ್ತಿತ್ವದ ಬಗ್ಗೆಯೇ ಸಂಶಯವಿಟ್ಟುಕೊಂಡು ಕಾದು ಕುಳಿತಿದೆ ಹ್ಯಾಂಗರಿನಲ್ಲಿನ ಆ ಶರ್ಟು…
ಆದರೆ ಚಾಕು ಮಾರಿದವನ ಆತಂಕ , ಆ ಶರ್ಟು ಮಾರಿದವನಿಗೆ ಇದ್ದಿರಲಿಕ್ಕಿಲ್ಲ …






0 Comments