ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೈವಾರದಲ್ಲಿ ’ನೆಲ ಮುಗಿಲಿನ ನಡುವೆ’ ಪುಸ್ತಕ ಬಿಡುಗಡೆ

ಅಕ್ಕಿಮಂಗಲ ಮಂಜುನಾಥರವರ ಹೊಸ ಕವನ ಸಂಕಲನ “ನೆಲ ಮುಗಿಲಿನ ನಡುವೆ” ಇಂದು ಕೈವಾರಲ್ಲಿ ಬಿಡುಗಡೆಯಾಗುತ್ತಿದೆ

ಅವದಿಯ ಓದುಗರಿಗಾಗಿ ಈ ಸಂಕಲನದ ಎರಡು ಪದ್ಯಗಳು

ಕಿಡಿ
ತುಂಬು ಕತ್ತಲಿನ ನೀರವ ರಾತ್ರಿ
ಗಡ ಗಡ ನಡುಗುವ ಚಳಿಯಲ್ಲಿ
ಹೊಲಗಳ ನಡುವೆ ಅಬ್ಬರಿಸುತ್ತಿದೆ
ಬೆಂಕಿಯ ನಾಲಗೆ ಮೆದೆಗಳಲಿ
 
ದುಡಿದರೂ ಕೂಡ ಸಿಕ್ಕದೆ ಹೋಯಿತು
ತಮ್ಮ ಪಾಲಿನ ತುತ್ತು
ಆಣೆ ಬಡ್ಡಿ ಒಪ್ಪಿಸಬೇಕು
ಧನಿಕರ ಪಾಲಿಗೆ ಕತ್ತು
 
ಇಷ್ಟೂ ಕಾಳನು ಸುಟ್ಟಿದ್ದೆಲ್ಲಾ
ಕಿಚ್ಚಿನ ಕಿಡಿ ಒಂದೇ
ಇಂತಹ ಕಿಚ್ಚನು ಹಚ್ಚಿದ್ದೂ ಸಹ
ಇಂತದೆ ಅನ್ನವ ತಿಂದೇ
 
ಉತ್ತು ಬಿತ್ತಿ ಬೆಳೆಯಲು ಎಷ್ಟೋ
ಸುರಿಸಿದರೇನು ಬೆವರು?
ಅರಿಯದೆ ಹೋದರು ನಮ್ಮೊಡನಿದ್ದೂ
ಅನ್ನವ ತಿನ್ನುವ ಜನರು
 
ಮನಸಿನ ನಡುವೆ ಇಂತದೇ ಉರಿ
ಉರಿಯುತ್ತಿದೆ ಸದಾ
ಇದ ಅಳಿಸಿ ಹಸಿರಾಗಿಸುವ ಕಾಲ
ಮುಂದೆ ಬರಲಾರದಾ?
 
ಕುಂತಿ ಕರ್ಣ ಪ್ರಾಬ್ಲಂ ಇತ್ಯಾದಿ…..
ಪಂಚ ಇಂದ್ರಿಯ ಸಡಿಲವಾಯಿತು
ಋಷಿಯು ಮಾಡಿದ ಸನ್ನೆಗೆ
ಎಂಥ ಪ್ರಾಬ್ಲಂ ಬಂತು ಕುಂತಿಗೆ
ಕರ್ಣ ಹುಟ್ಟಿದ ಕನ್ನೆಗೆ
 
ಈ ಸಮಾಜದಿ ಮಾನವಿರುವುದೇ?
ಬಿಸುಟು ಬಿಟ್ಟಳು ನೀರಿಗೆ
ಕುಂತಿ ಗೆದ್ದಳೆ? ಮೇಲೆ ಎದ್ದಳು
ನಗುತ ನಡೆದಳೇ ಕೇರಿಗೆ?
 
ಪಾಂಡು ರಾಜನ ಪಟ್ಟದರಸಿ
ಶೀಲವಂತೆ ಸುಮಂಗಲೆ
ಮತ್ತೆ ಐದನು ಜಗಕೆ ಕೊಟ್ಟಳು
ಧರ್ಮ ಬೆಳೆಸಿದ ದೇವತೆ
 
ಹುಟ್ಟು ತಿಳಿಯದೆ ಅಸ್ತ ವ್ಯಸ್ತಕೆ
ಎಷ್ಟು ನೊಂದನೋ ಸೂತನು
ಕೀಳು ಜಾತಿಯ ಜರಿದು ಆಡಿದ
ಕುಟುಕು ನುಡಿಗವ ಸೋತನು
 
ಸಿಕ್ಕ ಆಸರೆ ಬಳಸಿಕೊಳ್ಳಲು
ಭುಜವ ಕೊಟ್ಟನು ಗೆಳೆಯಗೆ
ಮತ್ತೆ ತಪ್ಪದೆ ಮಾತು ಕೊಟ್ಟನು
ಸೆರಗು ಒಡ್ಡಿದ ತಾಯಿಗೆ
* * *
ಇಂದೂ ನಮ್ಮಲಿ ಕುಂತಿಯಂತೆ
ನಡೆವರೆಷ್ಟೋ ವ್ಯವಸ್ಥೆಗೆ
ಎಷ್ಟೋ ಕುಡಿಗಳು ಕರ್ಣನಂತೇ
ಸೋಲುತಿವೆ ಪಜೀತಿಗೆ
 

‍ಲೇಖಕರು G

11 January, 2015

2 Comments

  1. ಲಲಿತಾ ಸಿದ್ಧಬಸವಯ್ಯ

    ಎರಡೂ ಪದ್ಯ ಚೆನ್ನಾಗಿವೆ.

  2. ಸುಬ್ಬಣ್ಣ ಮತ್ತೀಹಳ್ಳಿ.

    ಮನಮುಟ್ಟುವ ಕವನಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading